ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲಿದ್ದಲು ಗಣಿ ವಿದೇಶಿ ಕಂಪನಿಗಳಿಗೆ ಮಣೆ

Last Updated 14 ಮಾರ್ಚ್ 2020, 1:43 IST
ಅಕ್ಷರ ಗಾತ್ರ
ADVERTISEMENT
""
""
""
""

ಮುಂದಿನ 4ರಿಂದ 5 ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು ಎಂಬ ಗುರಿಯನ್ನು ಭಾರತ ಹಾಕಿಕೊಂಡಿದೆ. ಅದಕ್ಕಾಗಿ ಕಲ್ಲಿದ್ದಲು ಗಣಿಗಾರಿಕಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ತೀರ್ಮಾನಿಸಿದೆ. ವಿದೇಶಿ ಕಂಪನಿಗಳಿಗೂ ಗಣಿ ಗುತ್ತಿಗೆ ನೀಡಲು ಸರ್ಕಾರ ಮುಂದಾಗಿದ್ದು ಇನ್ನು 4–5 ತಿಂಗಳಲ್ಲಿ ಮೊದಲ ಗಣಿ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ಕಲ್ಲಿದ್ದಲು ಆಧರಿತ ವಿದ್ಯುತ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕು ಎಂದು ವಿವಿಧ ರಾಷ್ಟ್ರಗಳು ನಿರ್ಧರಿಸಿದ್ದರೂ ಭಾರತಕ್ಕೆ ಸದ್ಯಕ್ಕೆ ಇದು ಅನಿವಾರ್ಯವಾಗಿದೆ

***

ಇನ್ನೂ 4–5 ದಶಕ ಬೇಕು
ಭಾರತದಲ್ಲಿ ಕಲ್ಲಿದ್ದಲು ಬಹುಪಾಲು ಬಳಕೆಯಾಗುವುದು ವಿದ್ಯುತ್‌ ಉತ್ಪಾದನೆಗೆ. ದೇಶದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯಲ್ಲಿ ಶೇ 65ಕ್ಕೂ ಹೆಚ್ಚು ಪಾಲು ಉಷ್ಣ ವಿದ್ಯುತ್‌ನದ್ದಾಗಿದೆ. ಡೀಸೆಲ್‌, ಗ್ಯಾಸ್‌ ಘಟಕಗಳು ಇದ್ದರೂ ಅವುಗಳ ಸಂಖ್ಯೆ ಕಡಿಮೆ. ಹೆಚ್ಚಿನ ಉಷ್ಣ ವಿದ್ಯುತ್‌ ಘಟಕಗಳಲ್ಲಿ ಬಳಕೆಯಾಗುವುದು ಕಲ್ಲಿದ್ದಲೇ.

ಜಾಗತಿಕ ತಾಪಮಾನವನ್ನು ಕಡಿಮೆ ಮಾಡಲು, ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಪ್ಯಾರಿಸ್‌ ಒಪ್ಪಂದವು ಒತ್ತಿಹೇಳಿದೆ. ಭಾರತವೂ ಈ ಒಪ್ಪಂದಕ್ಕೆ ಸಹಿ ಮಾಡಿದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖವೂ ಆಗಿವೆ. ಸೌರ ವಿದ್ಯುತ್‌ ಸೇರಿದಂತೆ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯಲ್ಲಿ ಭಾರತವು ತಾನೇ ಹಾಕಿಕೊಂಡ ಗುರಿಯನ್ನು ಮೀರಿ ಸಾಧನೆ ಮಾಡಿದೆ. ಆದರೆ ಒಟ್ಟಾರೆ ಬೇಡಿಕೆಗೆ ಹೋಲಿಸಿದರೆ ನವೀಕರಿಸಬಹುದಾದ ವಿದ್ಯುತ್‌ ಉತ್ಪಾದನೆಯ ಪ್ರಮಾಣ ಕಡಿಮೆಯೇ. ಆದ್ದರಿಂದ ಇನ್ನೂ ಮೂರರಿಂದ ನಾಲ್ಕು ದಶಕಗಳ ಮಟ್ಟಿಗಾದರೂ ಭಾರತವು ವಿದ್ಯುತ್‌ ಉತ್ಪಾದನೆಗಾಗಿ ಕಲ್ಲಿದ್ದಲನ್ನು ಅವಲಂಬಿಸುವುದು ಅನಿವಾರ್ಯ.

ಉತ್ಪಾದನೆ– ಬೇಡಿಕೆ
ಭಾರತದಲ್ಲಿ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಕೋಲ್‌ ಇಂಡಿಯಾ ಲಿಮಿಟೆಡ್‌ (ಸಿಐಎಲ್‌) ಸಂಸ್ಥೆಯ ಏಕಸ್ವಾಮ್ಯವಿದೆ. ಇದು ಜಗತ್ತಿನಲ್ಲೇ ಅತಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಕಂಪನಿ ಎನಿಸಿಕೊಂಡಿದೆ. ಕಳೆದ ವರ್ಷ ಸಿಐಎಲ್‌ 60 ಕೋಟಿ ಟನ್‌ ಕಲ್ಲಿದ್ದಲನ್ನು ಉತ್ಪಾದಿಸಿದೆ. ಹೀಗಿದ್ದರೂ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆ ಮಾಡಲು ಈ ಸಂಸ್ಥೆಗೆ ಸಾಧ್ಯವಾಗಲಿಲ್ಲ.

ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆ ಹೆಚ್ಚಾಗಿದೆ. ಇದಕ್ಕೆ ಜಾಗತಿಕ ಮಟ್ಟದಲ್ಲಿ ಶ್ಲಾಘನೆಯೂ ಬಂದಿದೆ. ದೇಶದ ವಿವಿಧ ಭಾಗಗಳಲ್ಲಿ ಈ ಬಾರಿ ಉತ್ತಮ ಮಳೆಯಾಗಿರುವುದರಿಂದ ಜಲವಿದ್ಯುತ್‌ ಉತ್ಪಾದನೆಯ ಪ್ರಮಾಣವು ಹೆಚ್ಚಾಗಿದೆ. ಆದರೆ ಇದು ಒಟ್ಟಾರೆ ಬೇಡಿಕೆಯ ಅರ್ಧದಷ್ಟನ್ನೂ ಪೂರೈಸುವುದಿಲ್ಲ. ಆದ್ದರಿಂದ ಉಷ್ಣವಿದ್ಯುತ್‌ ಸ್ಥಾವರಗಳನ್ನು ಪೂರ್ಣ ಪ್ರಮಾಣದಲ್ಲಿ ಸ್ಥಗಿತಗೊಳಿಸಬೇಕಾದರೆ ಇನ್ನೂ ಹಲವು ದಶಕಗಳೇ ಬೇಕಾಗಬಹುದು. 2025–26ರ ವೇಳೆಗೆ ವಿದ್ಯುತ್‌ ಉತ್ಪಾದನೆಗಾಗಿ ವಾರ್ಷಿಕ ಸುಮಾರು 100 ಕೋಟಿ ಟನ್‌ನಷ್ಟು ಕಲ್ಲಿದ್ದಲು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕಲ್ಲಿದ್ದಲು ಗಣಿಗಾರಿಕೆಯನ್ನು ವಿದೇಶಿ ಕಂಪನಿಗಳಿಗೂ ತೆರೆಯುವ ನಿರ್ಧಾರದ ಹಿಂದೆ ಇದೂ ಕೆಲಸ ಮಾಡಿದೆ.

ಕರ್ನಾಟಕ: ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ
ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನಮ್ಮ ಬೇಡಿಕೆಗೂ, ವಿದ್ಯುತ್ ಉತ್ಪಾದನೆಗೂ ನಡುವೆ ಸಾಕಷ್ಟು ಅಂತರವಿದೆ. ಇದರಿಂದಾಗಿ ಪ್ರತಿ ವರ್ಷ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಇದು ಕೃಷಿ ಮತ್ತು ತಯಾರಿಕಾ ವಲಯದ ಮೇಲೆ ಪರಿಣಾಮ ಬೀರುತ್ತಿದೆ.

ಕರ್ನಾಟಕದಲ್ಲಿ 25 ಮೆಗಾವಾಟ್‌ಗೂ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡುವ ಕಲ್ಲಿದ್ದಲು ಆಧರಿತ ಏಳು ಘಟಕಗಳಿವೆ. ಅವುಗಳೆಂದರೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್), ಬಳ್ಳಾರಿ (ಬಿಟಿಪಿಎಸ್‌), ಕೂಡಗಿ (ಎಸ್‌ಟಿಪಿಪಿ), ತೋರಣಗಲ್ಲು (ಟಿಪಿಎಸ್–ಎಸ್‌ಬಿಯು 1), ತೋರಣಗಲ್ಲು (ಟಿಪಿಎಸ್ ಎಸ್‌ಬಿಯು 2), ಉಡುಪಿ (ಟಿಪಿಪಿ), ಯರಮರಸ್ (ಟಿಪಿಪಿ). ಅನೇಕ ಸಂದರ್ಭದಲ್ಲಿ ಕಲ್ಲಿದ್ದಲು ಪೂರೈಕೆ ಕೊರತೆಯಿಂದ ಈ ಘಟಕಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ.

ಸಿಐಎಲ್‌ಗೆ ಅಪಾಯ?
ಕಲ್ಲಿದ್ದಲು ಗಣಿಗಾರಿಕಾ ಕ್ಷೇತ್ರಕ್ಕೆ ವಿದೇಶಿ ಕಂಪನಿಗಳು ಬಂದರೆ ಸಿಐಎಲ್‌ಗೆ ಸಂಕಷ್ಟ ಎದುರಾಗಬಹುದು, ಟೆಲಿಕಾಂ ಕ್ಷೇತ್ರದ ಬಿಎಸ್‌ಎನ್‌ಎಲ್‌ಗೆ ಆದ ಸ್ಥಿತಿಯೇ ಸಿಐಎಲ್‌ಗೆ ಬರಬಹುದು ಎಂಬ ಭೀತಿಯೂ ವ್ಯಕ್ತವಾಗಿದೆ.

ಆದರೆ ಇದನ್ನು ಕೇಂದ್ರದ ಗಣಿ ಸಚಿವಾಲಯವು ಅಲ್ಲಗಳೆದಿದೆ. ‘ಮೊದಲನೆಯದಾಗಿ ನಮಗೆ ಕನಿಷ್ಠ ಇನ್ನೂ ನಾಲ್ಕು ದಶಕಗಳಷ್ಟು ಕಾಲ ಕಲ್ಲಿದ್ದಲಿನ ಅಗತ್ಯ ಇರುತ್ತದೆ, ಸಿಐಎಲ್‌ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಕಲ್ಲಿದ್ದಲು ಉತ್ಪಾದಿಸುವುದರಿಂದ ಖರೀದಿಸುವವರು ಈ ಸಂಸ್ಥೆಯಿಂದಲೆ ಖರೀದಿಸುತ್ತಾರೆ. ಆದ್ದರಿಂದ ಸಿಐಎಲ್‌ಗೆ ಯಾವುದೇ ಅಪಾಯ ಬರಲಾರದು’ ಎಂದು ಇಲಾಖೆಯ ಅಧಿಕಾರಿಗಳು ವಾದಿಸುತ್ತಾರೆ.

ಸದ್ದು ಮಾಡಿದ್ದ ಹಗರಣ
2004 ರಿಂದ 2009ರ ಅವಧಿಯಲ್ಲಿ ನಡೆದ ಕಲ್ಲಿದ್ದಲು ಗಣಿ ಹಂಚಿಕೆ ಹಗರಣವು ದೇಶದಲ್ಲಿ ಭಾರಿ ಸದ್ದು ಮಾಡಿತ್ತು. ಯುಪಿಎ ಸರ್ಕಾರದ ಪತನದಲ್ಲಿ ಈ ಹಗರಣದ ಪಾಲೂ ಇದೆ ಎಂದು ವಿಶ್ಲೇಷಿಸಲಾಗಿದೆ.

‘ಈ ಅವಧಿಯಲ್ಲಿ ಸರ್ಕಾರವು ಹರಾಜು ನಡೆಸದೆಯೇ 194 ನಿಕ್ಷೇಪಗಳನ್ನು ಖಾಸಗಿಯವರಿಗೆ ಹಂಚಿದೆ, ಇದರಿಂದ ಸರ್ಕಾರಕ್ಕೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟವಾಗಿದೆ’ ಎಂದು 2012ರಲ್ಲಿ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಯಿತು. ದೇಶದ ಅತಿ ದೊಡ್ಡ ಹಗರಣ ಇದು ಎಂದು ಬಿಂಬಿತವಾಯಿತು. ಮಾಧ್ಯಮಗಳು ಇದನ್ನು ‘ಕೋಲ್‌ಗೇಟ್‌ ಹಗರಣ’ ಎಂದು ಬಣ್ಣಿಸಿದವು.

ಹಗರಣದಿಂದಾಗಿ ಸರ್ಕಾರಕ್ಕೆ ₹ 10.60 ಲಕ್ಷ ಕೋಟಿಯ ನಷ್ಟ ಸಂಭವಿಸಿರಬಹುದು ಎಂದು ಸಿಎಜಿ ಆರಂಭದಲ್ಲಿ ಅಂದಾಜಿಸಿತ್ತು. ಆದರೆ ಸಂಸತ್ತಿನಲ್ಲಿ ಮಂಡಿಸಲಾದ ಅಂತಿಮ ವರದಿಯ ಪ್ರಕಾರ ನಷ್ಟದ ಒಟ್ಟು ಮೊತ್ತ ₹1.86 ಲಕ್ಷ ಕೋಟಿಯಾಗಿತ್ತು.

ಸಂಪನ್ಮೂಲ ಇದ್ದರೂ ಆಮದು
ಅತಿ ಹೆಚ್ಚು ಕಲ್ಲಿದ್ದಲು ಸಂಪನ್ಮೂಲ ಇರುವ ರಾಷ್ಟ್ರಗಳಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ. ಬೇಕಾದಷ್ಟು ಸಂಪನ್ಮೂಲ ಇದ್ದರೂ ಭಾರತವು ಹಲವು ವರ್ಷಗಳಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತಿದೆ.

ಕಳೆದ ವರ್ಷ ಭಾರತವು 2.35 ಕೋಟಿ ಟನ್‌ ಕಲ್ಲಿದ್ದಲು ಆಮದು ಮಾಡಿದೆ. ಇದಕ್ಕಾಗಿ ₹ 1.71 ಲಕ್ಷ ಕೋಟಿ ವೆಚ್ಚ ಮಾಡಿದೆ. ಕಲ್ಲಿದ್ದಲು ಗಣಿಗಾರಿಕೆ ಕ್ಷೇತ್ರದಲ್ಲಿರುವ ಏಕಸ್ವಾಮ್ಯ ಹಾಗೂ ಕಟ್ಟುನಿಟ್ಟಿನ ನಿಯಮಾವಳಿಗಳಿಂದಾಗಿ ಈ ಸ್ಥಿತಿ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ. ಆ ಕಾರಣಕ್ಕೇ ಈಗ ನಿಯಮಗಳನ್ನು ಬದಲಿಸಿ, ಖಾಸಗಿ ಕಂಪನಿಗಳಿಗೂ ಗಣಿಗಾರಿಕಾ ಕ್ಷೇತ್ರವನ್ನು ತೆರೆಯಲು ಸರ್ಕಾರ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT