ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ: ಜೀವ ಭಯದಲ್ಲಿ ಕಾಶ್ಮೀರಿ ಪಂಡಿತರು

Last Updated 7 ಜೂನ್ 2022, 4:38 IST
ಅಕ್ಷರ ಗಾತ್ರ

ಕಾಶ್ಮೀರಿ ಪಂಡಿತರು ಮತ್ತು ಡೋಗ್ರಾ ಸಮುದಾಯದ ಜನರು ಸೋಮವಾರವೂ ಪ್ರತಿಭಟನೆ ಮುಂದುವರಿಸಿದ್ದಾರೆ. ಸತತ ಆರನೇ ದಿನ ಪ್ರತಿಭಟನೆ ನಡೆದಿದೆ. ಈ ಎರಡೂ ಸಮುದಾಯಗಳ ಸುಮಾರು ಆರು ಸಾವಿರದಷ್ಟಿರುವ ಸರ್ಕಾರಿ ನೌಕರರನ್ನು ಕಾಶ್ಮೀರ ಕಣಿವೆಯಿಂದ ಹೊರಗೆ ವರ್ಗಾಯಿಸಬೇಕು ಎಂಬುದು ಅವರ ಬೇಡಿಕೆ. ಆದರೆ, ಜಮ್ಮು–ಕಾಶ್ಮೀರ ಆಡಳಿತವು ಈ ಬೇಡಿಕೆ ಈಡೇರಿಕೆಗೆ ಸಿದ್ಧವಿಲ್ಲ. ಪಂಡಿತರು ಮತ್ತು ಡೋಗ್ರಾ ಸಮುದಾಯದ ಜನರಿಗೆ ಭದ್ರತೆ ಒದಗಿಸಲಾಗುವುದು ಮತ್ತು ಅವರನ್ನು ಕಣಿವೆಯೊಳಗಿನ ಸುರಕ್ಷಿತ ಸ್ಥಳಗಳಿಗೆ ವರ್ಗ ಮಾಡಲಾಗುವುದು ಎಂದು ಸರ್ಕಾರವು ಹೇಳಿದೆ.

ಪಂಡಿತರನ್ನು ಮತ್ತು ಹಿಂದೂಗಳನ್ನು ಗುರುತಿಸಿ ಹತ್ಯೆ ಮಾಡುವ ಭಯೋತ್ಪಾದಕರ ದುಷ್ಕೃತ್ಯ ಆರಂಭವಾದದ್ದು 2021ರ ಫೆಬ್ರುವರಿಯಲ್ಲಿ. ಕೃಷ್ಣ ಢಾಬಾದ ಮಾಲೀಕನನ್ನು 2021ರ ಫೆಬ್ರುವರಿಯಲ್ಲಿ ಶ್ರೀನಗರದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಶ್ರೀನಗರದ ಪ್ರಸಿದ್ಧ ಔಷಧ ಅಂಗಡಿ ಮಾಲೀಕ ಬಿ.ಎಲ್‌. ಬಿಂದ್ರೂ ಅವರನ್ನು 2021ರ ಅಕ್ಟೋಬರ್‌ 5ರಂದು ಅವರ ಅಂಗಡಿಯಲ್ಲಿಯೇ ಹತ್ಯೆ ಮಾಡಲಾಯಿತು. ಇದು ನಾಗರಿಕ ಸಮಾಜ ಮತ್ತು ರಾಜಕೀಯ ಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. 2021ರಿಂದ ಈವರೆಗೆ 17 ಜನರನ್ನು ಹೀಗೆ ಗುರುತಿಸಿ ಕೊಲ್ಲಲಾಗಿದೆ. 2022ರ ಮೇ ತಿಂಗಳ ನಂತರ ಇಂತಹ ಹತ್ಯೆ ತೀವ್ರತೆ ಪಡೆದುಕೊಂಡಿದೆ.

ತಹಶೀಲ್ದಾರ್ ಕಚೇರಿಯಲ್ಲಿ ಕ್ಲರ್ಕ್‌ ಆಗಿದ್ದ ರಾಹುಲ್ ಭಟ್‌ ಅವರನ್ನು ಇದೇ ಮೇ 12ರಂದು ಕಚೇರಿಯಲ್ಲಿಯೇ ಗುಂಡಿಟ್ಟು ಹತ್ಯೆ ಮಾಡಲಾಯಿತು. ಅದಾದ ಬಳಿಕ ಎರಡೂ ಸಮುದಾಯಗಳ ಜನರು ಭೀತರಾಗಿದ್ದಾರೆ. ಕಣಿವೆಯಿಂದ ಹೊರಗೆ ವರ್ಗಾಯಿಸುವಂತೆ ಪಟ್ಟು ಹಿಡಿದಿದ್ದಾರೆ. 1990ರ ನರಮೇಧದ ನೆನಪು ಅವರನ್ನು ಕಾಡ ತೊಡಗಿದೆ. ಮತ್ತೊಂದು ವಲಸೆ ಸನ್ನಿಹಿತ ಎಂಬ ಭಾವನೆ ಅವರಲ್ಲಿ ಮೂಡಿದೆ.

ಇದೇ ಮಾರ್ಚ್‌ನಲ್ಲಿ ಬಿಡುಗಡೆಯಾದ ‘ದಿ ಕಾಶ್ಮೀರ್‌ ಫೈಲ್ಸ್‌’ ಎಂಬ ಸಿನಿಮಾ, ಪಂಡಿತರ ಹತ್ಯೆ ಪ್ರಕರಣಗಳು ತೀವ್ರವಾಗಿ ಹೆಚ್ಚಲು ಒಂದು ಕಾರಣ ಎಂಬ ವಾದವೂ ಇದೆ. ‘ಈ ಸಿನಿಮಾವು ನಮ್ಮ ಮೇಲಿನ ದಾಳಿ ಅಪಾಯವನ್ನು ಹೆಚ್ಚಿಸಿತು’ ಎಂದು ಕಾಶ್ಮೀರಿ ಪಂಡಿತ್‌ ಸಂಘರ್ಷ ಸಮಿತಿಯ ಅಧ್ಯಕ್ಷ ಸಂಜಯ ಟಿಕೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಿಜೆಪಿ ಆಳ್ವಿಕೆ ಇರುವ ಹಲವು ರಾಜ್ಯಗಳಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಬಿಜೆಪಿ ಮತ್ತು ಅದಕ್ಕೆ ಸಂಬಂಧಿಸಿದ ಸಂಘಟನೆಗಳು ಹಲವೆಡೆ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದವು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಿತ್ರತಂಡವನ್ನು ಭೇಟಿಯಾಗಿ, ತಂಡದ ಪ್ರಯತ್ನವನ್ನು ಶ್ಲಾಘಿಸಿದ್ದರು.

‘ಸದ್ಯದ ಸ್ಥಿತಿಯಲ್ಲಿ ನನಗೆ ಯಾವುದೇ ಆಶಾಕಿರಣ ಕಾಣಿಸುತ್ತಿಲ್ಲ. ಸೇನೆ, ಪೊಲೀಸ್ ಪಡೆಗೆ ಸಿನಿಮಾವನ್ನು ತೋರಿಸಲಾಗಿದೆ... 16–25 ವರ್ಷ ವಯೋಮಾನದವರಿಗೆ ಸಿನಿಮಾ ತೋರಿಸಿದರೆ ಅದು ನಿಜ ಎಂದು ಅವರು ನಂಬುತ್ತಾರೆ. ಚಿತ್ರಮಂದಿರಗಳಲ್ಲಿ ‘ಜೈ ಶ್ರೀರಾಂ’ ಎಂಬ ಘೋಷಣೆ ಕೂಗಿದ್ದು ಏಕೆ? ಹಾನಿ ಈಗಾಗಲೇ ಆಗಿದೆ. ಧ್ರುವೀಕರಣ ನಡೆದಿದೆ. ವಿರುದ್ಧದ ಪ್ರತಿಕ್ರಿಯೆ ಕಾಶ್ಮೀರದಲ್ಲಿ ಮಾತ್ರ ವ್ಯಕ್ತವಾಗುತ್ತದೆ’ ಎಂದು ಟಿಕೂ ಹೇಳಿದ್ದಾರೆ.

‘1990ರಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಸಹಾನುಭೂತಿ ಇತ್ತು. ಸಂಘರ್ಷದ ದಿನಗಳಲ್ಲಿ ಬೆಳೆದ ಹುಡುಗರು ತಮ್ಮ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಈಗ ಕಾಶ್ಮೀರಿ ಪಂಡಿತರಿಗೆ ಏನಾದರೂ ಆದರೆ ತಾವೇನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಕಾಶ್ಮೀರದ ಜನರು ನನಗೆ ಹೇಳಿದ್ದಾರೆ’ ಎಂದು ಸಿಟಿಜನ್ಸ್ ಫಾರ್‌ ಜಸ್ಟಿಸ್‌ ಎಂಡ್‌ ಪೀಸ್‌ (ಸಿಜೆಪಿ) ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ ಟಿಕೂ ಹೇಳಿದ್ದಾರೆ.

1990ರ ಕರಾಳ ನೆನಪು
ಮೂರು ದಶಕಗಳ ಹಿಂದೆ ಅಂದರೆ,1990ರ ಜನವರಿ 19ರಂದು ಕಾಶ್ಮೀರದ ಇತಿಹಾಸದಲ್ಲಿ ಕರಾಳ ಘಟನೆ ನಡೆದಿತ್ತು. ಹಿಂಸಾಚಾರದಿಂದ ಕಾಶ್ಮೀರದ ಪಂಡಿತರು ಕಣಿವೆಯನ್ನು ರಾತ್ರೋರಾತ್ರಿ ತೊರೆದಿದ್ದರು. ಈ ಸಾಮೂಹಿಕ ವಲಸೆಯ ಹಿಂದೆ ಹತ್ತಾರು ಕಾರಣಗಳಿದ್ದವು.

ಕಾಶ್ಮೀರದ ರಾಜಕಾರಣಿ ಶೇಕ್ ಅಬ್ದುಲ್ಲಾ ಹಾಗೂ ಪ್ರಧಾನಿ ಇಂದಿರಾ ಗಾಂಧಿ ಅವರ ನಡುವೆ1975ರಲ್ಲಿ ಒಪ್ಪಂದ ಏರ್ಪಟ್ಟು, ಶೇಕ್ ಅವರು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಇದಾದ ಎರಡು ವರ್ಷಗಳಲ್ಲಿ, ಅಮಾನುಲ್ಲಾ ಖಾನ್ ಹಾಗೂ ಮೊಹಮ್ಮದ್ ಮಕ್ಬೂಲ್ ಭಟ್ ಎಂಬುವರು ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್ (ಜೆಕೆಎಲ್‌ಎಫ್) ಹುಟ್ಟುಹಾಕಿದರು. ಕಾಶ್ಮೀರವನ್ನು ಸ್ವತಂತ್ರಗೊಳಿಸುವುದು ಈ ಸಂಘಟನೆಯ ಉದ್ದೇಶವಾಗಿತ್ತು.

1984ರಲ್ಲಿ ಮಕ್ಬೂಲ್ ಭಟ್ ಹತ್ಯೆಯ ಬಳಿಕ ರಾಜ್ಯದಲ್ಲಿ ಪ್ರತ್ಯೇಕತೆಗೆ ಆಗ್ರಹಿಸಿ ಹಿಂಸಾಚಾರ ಆರಂಭವಾದವು. 1986ರಲ್ಲಿ ಬಾಬರಿ ಮಸೀದಿ–ರಾಮಜನ್ಮಭೂಮಿ ದೇವಸ್ಥಾನಕ್ಕೆ ಹಿಂದೂಗಳ ಪ್ರವೇಶಕ್ಕೆ ರಾಜೀವ್ ಗಾಂಧಿ ಸರ್ಕಾರ ಅನುಮತಿ ನೀಡಿತು. ಈ ಆದೇಶದ ಪರಿಣಾಮ ಕಾಶ್ಮೀರದಲ್ಲಿ ಕಾಣಿಸಿತು. ಕಣಿವೆಯ ಹಿಂದೂಗಳ ಮನೆಗಳ ಮೇಲೆ ದಾಳಿ ನಡೆದವು.

1989ರಲ್ಲಿ ಪಾಕಿಸ್ತಾನ ಪರ, ಐಎಸ್‌ಐ ಬೆಂಬಲಿತ ಹಿಜ್ಬುಲ್ ಮುಜಾಹಿದೀನ್ ಸಂಘಟನೆ ತಲೆಎತ್ತಿತು. ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಿಗೆ ಇದು ತಳಹದಿ ಹಾಕಿತು. ಪ್ರತ್ಯೇಕ ಕಾಶ್ಮೀರ ಎಂಬ ಧ್ಯೇಯದೊಂದಿಗೆ ಯುವಕರನ್ನು ಬಳಸಿಕೊಂಡು ಕೋಮು ಹಿಂಸಾಚಾರ ಹಾಗೂ ಜಿಹಾದ್‌ಗೆ ಕರೆ ಕೊಟ್ಟಿತು. ಬಿಜೆಪಿ ಮುಖಂಡ ಟೀಕಾ ಲಾಲ್‌ ತಪ್ಲೂ ಎಂಬುವರ ಕೊಲೆಯೊಂದಿಗೆ ರಾಜ್ಯದಲ್ಲಿಕಾಶ್ಮೀರಿ ಪಂಡಿತರ ಹತ್ಯೆಗಳು ಆರಂಭವಾದವು. ಹಾಗೆಯೇ ಕಾಶ್ಮೀರದ ಮುಸ್ಲಿಮರು, ನ್ಯಾಷನಲ್ ಕಾನ್ಫರೆನ್ಸ್ ಮುಖಂಡರು, ಸರ್ಕಾರಿ ಅಧಿಕಾರಿಗಳೂ ಭಯೋತ್ಪಾದಕರ ಗುರಿಯಾದರು.

ಫಾರೂಕ್ ಅಬ್ದುಲ್ಲಾ ಅವರ ರಾಜೀನಾಮೆ ಯಿಂದಾಗಿ, 1990ರ ಜನವರಿ 19ರಂದು ರಾಜ್ಯಪಾಲ ಜಗಮೋಹನ್ ಅವರ ಆಡಳಿತ ಶುರುವಾಯಿತು. ಅದೇ ರಾತ್ರಿ ಹಿಂದೂಗಳ ಮನೆಗಳ ಮೇಲೆ ಭಯೋತ್ಪಾದಕರ ದಾಳಿ ನಡೆಯಿತು. ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಮಹಿಳೆಯರ ಮೇಲೆ ದೌರ್ಜನ್ಯ ನಡೆಯಿತು. ಜನವರಿ 20ರ ಬೆಳಿಗ್ಗೆ ಹೊತ್ತಿಗೆ, ಜೀವ ಉಳಿಸಿಕೊಂಡ ಕಾಶ್ಮೀರಿ ಪಂಡಿತರು ಕಣಿವೆಯಿಂದ ಪಲಾಯನ ಮಾಡಿದರು. ಕಾಶ್ಮೀರ ಸಂಘರ್ಷ ಸಮಿತಿ ಪ್ರಕಾರ, ಅಂದು ಸುಮಾರು 75 ಸಾವಿರ ಪಂಡಿತರು ಕಣಿವೆ ತೊರೆದರು. 650 ಪಂಡಿತರ ಹತ್ಯೆಯಾಯಿತು. ನಂತರದ ದಿನಗಳಲ್ಲೂ ವಲಸೆ ಮುಂದುವರಿಯಿತು.

ಪಂಡಿತರ ಹತ್ಯೆ, ವಲಸೆ: ಯಾವುದು ಸರಿ?: ಇತ್ತೀಚೆಗೆ ತೆರೆಕಂಡ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ 1990ರ ಜನವರಿ 19ರಂದು ಕಾಶ್ಮೀರ ಪಂಡಿತರ ಮೇಲೆ ನಡೆದ ಹಿಂಸಾಚಾರವನ್ನು ಚಿತ್ರಿಸಲಾಗಿದೆ. ‘ಈ ಹಿಂಸಾಚಾರದಿಂದಾಗಿ 5 ಲಕ್ಷ ಪಂಡಿತರು ಕಾಶ್ಮೀರದಿಂದ ಪಲಾಯನ ಮಾಡಿದರು. 4 ಸಾವಿರ ಪಂಡಿತರು ಹತ್ಯೆಗೀಡಾದರು’ ಎಂದು ಸಿನಿಮಾದಲ್ಲಿ ವಿವರಿಸಲಾಗಿದೆ. ಕೇಂದ್ರ ಸರ್ಕಾರದ ‘ಜಮ್ಮು ಕಾಶ್ಮೀರ ವಲಸಿಗರ ಪುನರ್ವಸತಿ’ ಕುರಿತ ವೆಬ್‌ಸೈಟ್‌ನಲ್ಲಿ 1.35 ಲಕ್ಷಹಿಂದೂಗಳು ಪಲಾಯನ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಯುಪಿಎ ಅವಧಿಯಲ್ಲಿ ಪುನರ್ವಸತಿ
1990ರಲ್ಲಿ ಕಾಶ್ಮೀರ ಕಣಿವೆ ತೊರೆದಿದ್ದ ಕಾಶ್ಮೀರಿ ಪಂಡಿತ ಕುಟುಂಬಗಳಿಗೆ ಜಮ್ಮುವಿನಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸ ಆ ದಶಕದಲ್ಲೇ ನಡೆದಿತ್ತು. ಆದರೆ, ಕಾಶ್ಮೀರ ಕಣಿವೆಯಲ್ಲೇ ಪುನರ್ವಸತಿ ಕಲ್ಪಿಸುವ ಕೆಲಸ ನಡೆದದ್ದು ಯುಪಿಎ–1 ಸರ್ಕಾರದ ಅವಧಿಯಲ್ಲಿ. 2004ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದ ನಂತರ, ಈ ವಸತಿ ಶಿಬಿರಗಳ ಮೂಲಸೌಕರ್ಯವನ್ನು ಹೆಚ್ಚಿಸಲಾಯಿತು. 2004ರ ನವೆಂಬರ್‌ನಲ್ಲಿ ಅಂದಿನ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಜಮ್ಮುವಿನಲ್ಲಿ ಇದ್ದ ಇಂತಹ ಒಂದು ಶಿಬಿರಕ್ಕೆ ಭೇಟಿ ನೀಡಿದ್ದರು. ಅಂದಿನ ಪ್ರಧಾನಿ ಕಚೇರಿಯ ಉನ್ನತಾಧಿಕಾರಿಗಳ ತಂಡ ಸಹ ಭೇಟಿ ನೀಡಿ, ಮೂಲಸೌಕರ್ಯ ಅಭಿವೃದ್ಧಿಗೆ ಶಿಫಾರಸು ಮಾಡಿತ್ತು.

ಜಮ್ಮುವಿನಲ್ಲಿ ಕಾಶ್ಮೀರಿ ವಲಸಿಗ ಹಿಂದೂ ಕುಟುಂಬಗಳಿಗಾಗಿ5,248 ಫ್ಲ್ಯಾಟ್‌ಗಳನ್ನು ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು.2005ರ ಸೆಪ್ಟೆಂಬರ್‌ನಲ್ಲಿ ಮೊದಲ ಹಂತದಲ್ಲಿ 1,024 ಫ್ಲ್ಯಾಟ್‌ಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಶ್ಮೀರ ಕಣಿವೆಯ ಮುಥಿ, ಪುರ್ಖೂ ಮತ್ತು ನಗರೋಟಾದಲ್ಲಿನ ಶಿಬಿರಗಳಲ್ಲಿ ಈ ಫ್ಲ್ಯಾಟ್‌ಗಳ ನಿರ್ಮಾಣ ನಡೆಸಲಾಗಿತ್ತು. 2007ರಲ್ಲಿ ನಗರೋಟಾ ಶಿಬಿರದಲ್ಲಿ ಎರಡನೇ ಹಂತದಲ್ಲಿ 4,224 ಫ್ಲ್ಯಾಟ್‌ಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು.

ಈ ಯೋಜನೆಗಳ ಕಾಮಗಾರಿಗಳು ನಡೆಯುತ್ತಿದ್ದ ಸಂದರ್ಭದಲ್ಲೇ 2008ರಲ್ಲಿ ಕೇಂದ್ರ ಸರ್ಕಾರವು, ಕಾಶ್ಮೀರಿ ಪಂಡಿತರಿಗೆ ಕಣಿವೆಯಲ್ಲೇ ಪುನರ್ವಸತಿ ಕಲ್ಪಿಸಲು ಕ್ರಮ ತೆಗೆದುಕೊಂಡಿತು. ಇದಕ್ಕಾಗಿ ‘ಪ್ರಧಾನ ಮಂತ್ರಿಗಳ ಪುನರ್ವಸತಿ ಕಾರ್ಯಕ್ರಮ–2008’ ಆರಂಭಿಸಲಾಯಿತು. ಈ ಕಾರ್ಯಕ್ರಮದ ಅಡಿಯಲ್ಲಿ, ವಲಸಿಗ ಕಾಶ್ಮೀರಿ ಪಂಡಿತ ಕುಟುಂಬದ ಒಟ್ಟು 6,000 ಜನರಿಗೆ ಕಾಶ್ಮೀರ ಕಣಿವೆಯಲ್ಲಿ ಸರ್ಕಾರಿ ನೌಕರಿ ಮತ್ತು ವಸತಿ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಯಿತು. ಈ ಯೋಜನೆ ಅಡಿ ಕಾಶ್ಮೀರ ಕಣಿವೆಯ ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ಶಾಲೆಗಳು, ವಿವಿಧ ಇಲಾಖೆಗಳು ಮತ್ತು ಬ್ಯಾಂಕ್‌ಗಳಲ್ಲಿ ಉದ್ಯೋಗ ನೀಡಲಾಯಿತು. ಇದರ ಜತೆಯಲ್ಲಿ ಶಿಬಿರಗಳನ್ನು ನಿರ್ಮಿಸಿ, ಆ ಉದ್ಯೋಗಿಗಳ ಕುಟುಂಬಕ್ಕೆ ವಸತಿ ಕಲ್ಪಿಸಲಾಯಿತು. ಈ ಉದ್ಯೋಗಿಗಳ ವೇತನ ಮತ್ತು ವಿವಿಧ ಭತ್ಯೆಗಳನ್ನು ಅಂದಿನಿಂದ ಕೇಂದ್ರ ಸರ್ಕಾರವೇ ಭರಿಸುತ್ತಾ ಬಂದಿದೆ.

ಎನ್‌ಡಿಎ ಅವಧಿ: ಪ್ರತ್ಯೇಕ ಕಾರ್ಯಕ್ರಮವಿಲ್ಲ
2008ರ ಯೋಜನೆ ಅಡಿ ಕಾಶ್ಮೀರದಲ್ಲಿ ಪುನರ್ವಸತಿ ಪಡೆದವರನ್ನು, ‘ಪಿಎಂ ಪ್ಯಾಕೇಜ್‌ ನೌಕರರು’ ಎಂದು ಕರೆಯಲಾಗುತ್ತದೆ. 2008ರ ನಂತರ ಹಲವು ವರ್ಷಗಳವರೆಗೆ ಮತ್ತೆ ಇಂತಹ ಯೋಜನೆ ಜಾರಿಗೆ ಬರುವುದಿಲ್ಲ. ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು 2014ರಲ್ಲಿ ಮತ್ತೆ ನೇಮಕಾತಿ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ನೇಮಕಾತಿಯ ಮೂಲಕ ಮತ್ತೆ 3,000 ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿತ್ತು.

ಆಗ ಕೇಂದ್ರದ ಎನ್‌ಡಿಎ ಸರ್ಕಾರವು ‘ಪ್ರಧಾನ ಮಂತ್ರಿಗಳ ಅಭಿವೃದ್ಧಿ ಪ್ಯಾಕೇಜ್‌–2015’ ಕಾರ್ಯಕ್ರಮವನ್ನು ಜಾರಿಗೆ ತಂದಿತು. ಈ ಯೋಜನೆ ಅಡಿ 3,000 ಜನರಿಗೆ ಉದ್ಯೋಗ ಕಲ್ಪಿಸಲು ಸಿದ್ಧತೆ ನಡೆಸಲಾಯಿತು. ಇದಕ್ಕಾಗಿ ₹2,000 ಕೋಟಿಯ ಪ್ಯಾಕೇಜ್‌ ಘೋಷಿಸಲಾಯಿತು. ಆದರೆ, 1947ರ ಪಾಕ್‌ ಅತಿಕ್ರಮಣದ ಸಂದರ್ಭದಲ್ಲಿ, 1965 ಮತ್ತು 1971ರ ಯುದ್ಧದ ಸಂದರ್ಭದಲ್ಲಿ ನಿರಾಶ್ರಿತರಾದವರಿಗೆ ಪುನರ್ವಸತಿ ಘೋಷಿಸಲಾಯಿತು.ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯ ಆಕ್ಷೇಪದ ನಂತರ, ವಲಸಿಗರಲ್ಲದ ಕಾಶ್ಮೀರಿ ಹಿಂದೂಗಳೂ ಈ ಯೋಜನೆ ಅಡಿ ಸೌಲಭ್ಯ ಪಡೆಯಬಹುದು ಎಂದು 2016ರ ಅಕ್ಟೋಬರ್ 3ರಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿತು. 1990ರಲ್ಲಿ ಕಾಶ್ಮೀರ ತೊರೆದ ಕಾಶ್ಮೀರಿ ಪಂಡಿತರಿಗೆ ಈ ಯೋಜನೆ ಅಡಿ ಯಾವುದೇ ಪ್ರತ್ಯೇಕ ಕಾರ್ಯಕ್ರಮ ಘೋಷಿಸಿಲ್ಲ.

ಈ ಕಾರ್ಯಕ್ರಮದ ಪ್ರಗತಿ ಏನಾಗಿದೆ ಎಂದು ರಾಜ್ಯಸಭೆಯಲ್ಲಿ ಈಚೆಗೆ ಪ್ರಶ್ನೆ ಕೇಳಲಾಗಿತ್ತು. ‘ಸರ್ಕಾರವು 3,000 ಕಾಶ್ಮೀರಿ ವಲಸಿಗರಿಗೆ ಈ ಯೋಜನೆ ಅಡಿ ಉದ್ಯೋಗ ನೀಡಿದೆ. ಜತೆಗೆ ಈ ಕಾಶ್ಮೀರಿ ವಲಸಿಗ ನೌಕರರಿಗಾಗಿ 6,000 ವಸತಿಗಳನ್ನು ನಿರ್ಮಿಸುವ ಕಾಮಗಾರಿ ಆರಂಭಿಸಲಾಗಿದೆ’ ಎಂದು ಕೇಂದ್ರ ಗೃಹ ಸಚಿವಾಲಯವು 2022ರ ಫೆಬ್ರುವರಿ 9ರಂದು ರಾಜ್ಯಸಭೆಯಲ್ಲಿ ಉತ್ತರ ನೀಡಿದೆ.ಆದರೆ, ಹೀಗೆ ಉದ್ಯೋಗ ಪಡೆದುಕೊಂಡರವಲ್ಲಿ 1990ರಲ್ಲಿ ಕಾಶ್ಮೀರ ತೊರೆದಿದ್ದ ವಲಸಿಗರೆಷ್ಟು ಎಂಬುದರ ಮಾಹಿತಿಯನ್ನು ಕೇಂದ್ರ ಸರ್ಕಾರ ನೀಡಿಲ್ಲ. 2015ರಲ್ಲಿ ಆರಂಭವಾದ ಈ ಯೋಜನೆ ಅಡಿ ಕೇವಲ ₹754 ಕೋಟಿಯನ್ನಷ್ಟೇ ಬಿಡುಗಡೆ ಮಾಡಲಾಗಿದೆ. ಕಾರ್ಯಕ್ರಮ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ.

ಈ ಎರಡೂ ಕಾರ್ಯಕ್ರಮಗಳ ಅಡಿ ನೇಮಕವಾದ 1,321 ಮಂದಿಗೆ ಕಾಶ್ಮೀರ ಕಣಿವೆಯಲ್ಲಿ ಇನ್ನೂ ವಸತಿ ಸೌಲಭ್ಯ ದೊರೆತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT