ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಲಸಿಕೆ ಪೋಲಾಗುವುದಕ್ಕೆ ಕಡಿವಾಣ ಬೇಕು

Last Updated 25 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಲಸಿಕೆ ಪೋಲು ಎಂದರೇನು?

ಯಾವುದೇ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ, ಲಸಿಕೆ ನೀಡುವಲ್ಲಿ ಹಲವು ಡೋಸ್‌ಗಳು ಪೋಲಾಗುತ್ತವೆ. ಲಸಿಕಾ ಕೇಂದ್ರಗಳಿಗೆ ಪೂರೈಕೆಯಾದ ಡೋಸ್‌ಗಳು ಮತ್ತು ಜನರಿಗೆ ನೀಡಲಾದ ಡೋಸ್‌ಗಳ ನಡುವಣ ವ್ಯತ್ಯಾಸವೇ ವ್ಯಾಕ್ಸಿನ್ ವೇಸ್ಟೆಜ್‌ ಅಥವಾ ಲಸಿಕೆ ಪೋಲು. ಕೋವಿಡ್‌-19 ಲಸಿಕೆ ಕಾರ್ಯಕ್ರಮದಲ್ಲಿ ವಿಪರೀತ ಪ್ರಮಾಣದಲ್ಲಿ ಲಸಿಕೆ ಪೋಲಾಗುತ್ತಿದೆ.

ಯಾವುದೇ ಲಸಿಕೆ ಕಾರ್ಯಕ್ರಮದಲ್ಲೂ ಅಗತ್ಯವಿರುವಷ್ಟು ಡೋಸ್‌ಗಳಿಗಿಂತ, ಹೆಚ್ಚು ಡೋಸ್‌ಗಳನ್ನು ಒದಗಿಸಲಾಗುತ್ತದೆ. ಡೋಸ್‌ಗಳು ವ್ಯರ್ಥವಾದರೆ, ಅಗತ್ಯವಿರುವಷ್ಟು ಮಂದಿಗೆ ಲಸಿಕೆ ನೀಡಲು ಸಾಧ್ಯವಾಗುವುದಿಲ್ಲ. ಹೀಗೆ ಪೋಲಾಗುವ ಡೋಸ್‌ ಪ್ರಮಾಣವನ್ನು ಮೊದಲೇ ಅಂದಾಜು ಮಾಡಲಾಗುತ್ತದೆ. ಇದನ್ನು ಲಸಿಕೆ ಪೋಲು ಅಂದಾಜು ಎಂದು ಕರೆಯಲಾಗುತ್ತದೆ. ಈ ಅಂದಾಜಿನಷ್ಟು ಡೋಸ್‌ಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ. ಎಲ್ಲಾ ಲಸಿಕೆ ಕಾರ್ಯಕ್ರಮದಲ್ಲಿ ಇದು ಸಾಮಾನ್ಯ. ಆದರೆ, ಈ ಅಂದಾಜನ್ನೂ ಮೀರಿ ಹೆಚ್ಚುವರಿ ಡೋಸ್‌ಗಳು ಪೋಲಾದರೆ ಅದು ಕಳವಳಕಾರಿ ವಿಷಯ. ಇದರಿಂದ ಹಣ, ಮಾನವ ಶ್ರಮ, ಸಮಯ ವ್ಯರ್ಥವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಲಸಿಕೆ ಕಾರ್ಯಕ್ರಮವು ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನಕ್ಕೆ ಬರುವುದಿಲ್ಲ.

23 ಲಕ್ಷ ಡೋಸ್‌ ಪೋಲು

ಭಾರತದಲ್ಲಿ ಕೋವಿಡ್‌-19 ತಡೆಗಟ್ಟಲು ಅತ್ಯಂತ ದೊಡ್ಡಮಟ್ಟದ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ 10 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದೆ.ಈವರೆಗೆ ಪ್ರತಿದಿನ ಲಸಿಕೆ ಹಾಕಿಕೊಳ್ಳುತ್ತಿರುವವರ ಸರಾಸರಿ ಸಂಖ್ಯೆ 5.4 ಲಕ್ಷವಿದೆ. ದೊಡ್ಡ ಲಸಿಕೆ ಕಾರ್ಯಕ್ರಮವಾದ ಕಾರಣ ಪೋಲಾದ ಲಸಿಕೆಗಳ ಪ್ರಮಾಣವೂ ಹೆಚ್ಚು. ಅಗತ್ಯವಿರುವಷ್ಟು ಲಸಿಕೆಗಳನ್ನು ಲಸಿಕಾ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಮಾರ್ಚ್‌ ಮೂರನೇ ವಾರದವರೆಗೆ ದೇಶದ ಎಲ್ಲಾ ರಾಜ್ಯಗಳಿಗೆ 7 ಕೋಟಿ ಡೋಸ್‌ ಲಸಿಕೆಗಳನ್ನು ಪೂರೈಕೆ ಮಾಡಲಾಗಿದೆ. ಇದರಲ್ಲಿ 23 ಲಕ್ಷ ಡೋಸ್‌ಗಳಷ್ಟು ಲಸಿಕೆ ಪೋಲಾಗಿವೆ.

ನೋಂದಣಿ ಮಾಡಿಕೊಂಡವರಲ್ಲಿ ಶೇ 40ರಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿಲ್ಲ. ಈ ಕಾರಣದಿಂದಲೇ ಕೋವಿಡ್ ಲಸಿಕೆಗಳು ಪೋಲಾಗುತ್ತಿವೆ. ಈಗ ಭಾರತದಲ್ಲಿ ವ್ಯರ್ಥ ಲಸಿಕೆಯ ಪ್ರಮಾಣವು ಸ್ವೀಕಾರಾರ್ಹ ಮಟ್ಟಕ್ಕಿಂತ ಹೆಚ್ಚು ಇದೆ. ಹೀಗಾಗಿಯೇ ಈ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಈಚೆಗಷ್ಟೇ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಪೋಲಾಗುತ್ತಿರುವ ಲಸಿಕೆಗಳ ಪ್ರಮಾಣವನ್ನು ಕಡಿಮೆ ಮಾಡಿ ಎಂದು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮೋದಿ ಅವರು ಕರೆ ನೀಡಿದ್ದರು.

ದೇಶದ ಕೆಲವು ರಾಜ್ಯಗಳಲ್ಲಿ ಲಸಿಕೆ ಪೋಲಿನ ಪ್ರಮಾಣವು, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇದೆ. ಹೀಗಾಗಿ, ತಜ್ಞರ ಶಿಫಾರಸಿನಂತೆ ಲಸಿಕೆ ಕಾರ್ಯಕ್ರಮದಲ್ಲಿ ತುಸು ಬದಲಾವಣೆಯಾಗಿದೆ.

ಕೆಲವೇ ರಾಜ್ಯಗಳಲ್ಲಿ ಪೋಲು ಪ್ರಮಾಣ ಅಧಿಕ

ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಲಸಿಕೆಗಳ ಪೋಲಿನ ಪ್ರಮಾಣ ಹೆಚ್ಚು. ಅತಿಹೆಚ್ಚು ಲಸಿಕೆ ಪೋಲು ಪ್ರಮಾಣ ಇರುವ ರಾಜ್ಯಗಳಲ್ಲಿ ಪಟ್ಟಿಯಲ್ಲಿ ಕರ್ನಾಟಕವು ನಾಲ್ಕನೇ ಸ್ಥಾನದಲ್ಲಿ ಇದೆ. ಈ ರಾಜ್ಯಗಳಲ್ಲಿ ಲಸಿಕೆ ಪೋಲಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು. ಈ ಎಲ್ಲಾ ರಾಜ್ಯಗಳು ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಾಗಿವೆ.

ಈ ರಾಜ್ಯಗಳಲ್ಲಿ ಲಸಿಕೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುತ್ತಿಲ್ಲ ಎಂದು ಐಸಿಎಂಆರ್‌ನ ಅಧ್ಯಯನ ವರದಿಗಳು ಹೇಳಿವೆ. ಪ್ರತಿ ಬಾಟಲಿಯಲ್ಲಿ ಇರುವ ಡೋಸ್‌ಗಳನ್ನು ನೀಡಬಹುದಾದಷ್ಟು ಜನರು ಬರುವುದನ್ನು ಕಾಯದೆಯೇ ಲಸಿಕೆ ಹಾಕಲಾಗುತ್ತಿದೆ. ಬಾಟಲಿಯಲ್ಲಿ ಉಳಿದ ಡೋಸ್‌ಗಳನ್ನು ನಿಗದಿತ ಅವಧಿಯೊಳಗೆ ಬಳಸಲಾಗುತ್ತಿಲ್ಲ. ಇದರಿಂದ ಡೋಸ್‌ಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಪ್ರತಿ ಬಾಟಲಿಯಲ್ಲಿ ಒಂದರಿಂದ ಒಂದೂವರೆ ಡೋಸ್‌ನಷ್ಟು ಲಸಿಕೆ ಪೋಲಾಗುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯ ಗುರಿ ಮುಟ್ಟುವ ಸಲುವಾಗಿ ಈ ರಾಜ್ಯಗಳಲ್ಲಿ, ಕೇಂದ್ರಗಳಿಗೆ ಬಂದವರಿಗೆಲ್ಲಾ ಲಸಿಕೆ ನೀಡಲಾಗಿದೆ. ಹೀಗೆ ತರಾತುರಿಯಲ್ಲಿ ಲಸಿಕೆ ನೀಡಿದ್ದರಿಂದ ಪ್ರತಿ ಬಾಟಲಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗಿಲ್ಲ. ಮೂರು ತಿಂಗಳಲ್ಲಿ 30 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡುವ ಗುರಿ ಇತ್ತು. ಈ ಅವಧಿಯಲ್ಲಿ 60 ಕೋಟಿಗೂ ಹೆಚ್ಚು ಡೋಸ್‌ಗಳ ಅವಶ್ಯಕತೆ ಇತ್ತು. ಅದಕ್ಕೆ ಅನುಗುಣವಾಗಿ ಪ್ರತಿ ಲಸಿಕಾ ಕೇಂದ್ರಕ್ಕೆ ಅಗತ್ಯವಿದ್ದಷ್ಟು ಲಸಿಕೆಗಳನ್ನು ಪೂರೈಸಲಾಗಿದೆ. ಆದರೆ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಬಾರದ ಕಾರಣ ಲಸಿಕೆಗಳನ್ನು ಬಳಸಲು ಸಾಧ್ಯವಾಗಿಲ್ಲ. ಈ ಲಸಿಕೆಗಳ ಅವಧಿ ಮುಗಿದ ಕಾರಣ, ಅವನ್ನು ಬಿಸಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಲಸಿಕೆ ಪೋಲಾಗುವುದು ಹೇಗೆ?

ಎರಡು ರೀತಿಯಲ್ಲಿ ಲಸಿಕೆ ಪೋಲಾಗುತ್ತದೆ.

1 ತೆರೆಯದಬಾಟಲಿಯ ಲಸಿಕೆಯು ಪೋಲಾಗಲು ಹಲವು ಕಾರಣಗಳಿವೆ. ಲಸಿಕೆಯು ಎಕ್ಸ್‌ಪೈರಿ (ಮುಕ್ತಾಯ ದಿನ) ಆಗಿದ್ದರೆ; ಲಸಿಕೆಯು ಶಾಖಕ್ಕೆ ಒಡ್ಡಿಕೊಂಡಿದ್ದರೆ; ಲಸಿಕೆ ಹೆಪ್ಪುಗಟ್ಟಿದ್ದರೆ; ಲಸಿಕೆಯ ಬಾಟಲಿ ಒಡೆದಿದ್ದರೆ; ಲಸಿಕೆಯು ಕಳ್ಳತನವಾಗಿದ್ದರೆ ಲಸಿಕೆಯು ಪೋಲಾಗುತ್ತದೆ.

2 ಬಾಟಲಿ ಮುಚ್ಚಳ ತೆರೆದ ಲಸಿಕೆಯು ಪೋಲಾಗಲೂ ಕಾರಣಗಳಿವೆ. ಲಸಿಕೆ ನೀಡುವ ಅಂದಿನ ಅವಧಿಯು (ಸೆಷನ್) ಕೊನೆಯಾಗಿದ್ದಲ್ಲಿ; ಬಾಟಲಿಯಿಂದ ಪೂರ್ಣ ಪ್ರಮಾಣದ ಡೋಸ್‌ ಅನ್ನು ತೆಗೆಯಲು ಸಾಧ್ಯವಾಗದಿದ್ದಲ್ಲಿ; ತೆರೆದ ಬಾಟಲುಗಳುನೀರಿನಲ್ಲಿ ಮುಳುಗಿದಾಗ; ಲಸಿಕೆಯು ಕಲಬೆರಕೆ ಆಗಿದೆ ಎಂಬ ಶಂಕೆ ಉಂಟಾದಲ್ಲಿ; ಲಸಿಕೆ ನೀಡುವ ಪ್ರಕ್ರಿಯೆಯಲ್ಲಿನ ಲೋಪಗಳಿಂದ ಲಸಿಕೆಯು ಪೋಲಾಗುವ ಸಾಧ್ಯತೆಯಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT