ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಇದಪ್ಪ ಅಪರಾಧ ತಡೆಮಾಸಾಚರಣೆ!

ಪೊಲೀಸರ ಕೈಚಳಕವಲ್ಲ; ಕೊರೊನಾ ಭೀತಿಯ ಮ್ಯಾಜಿಕ್‌
Last Updated 14 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಪೊಲೀಸರು ಪ್ರತಿವರ್ಷ ಅಪರಾಧ ತಡೆ ಮಾಸಾಚರಣೆ ನಡೆಸುತ್ತಾರೆ. ಆ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಯತ್ನಿಸುತ್ತಾರೆ. ಆಗಾಗ ರೌಡಿಗಳ ಪರೇಡ್‌ ಮಾಡಿಸುವ ಮೂಲಕ ದುಂಡಾವರ್ತನೆ ತೋರದಂತೆ ಎಚ್ಚರಿಕೆಯನ್ನೂಕೊಡುತ್ತಾರೆ. ಆದರೆ, ಅಪರಾಧ ಕೃತ್ಯಗಳು ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಿರುವುದು ನಿಂತಿಲ್ಲ. ಯಾವಾಗ ಕೊರೊನಾ ಸೋಂಕಿನಿಂದ ಲಾಕ್‌ಡೌನ್‌ ಘೋಷಣೆ ಆಯಿತು ನೋಡಿ, ಅಪರಾಧ ಕೃತ್ಯಗಳ ಪ್ರಮಾಣ, ಚಳಿಗಾಲದ ತಾಪಮಾನದಂತೆ ಸರ‍್ರನೆ ಇಳಿದುಬಿಟ್ಟಿದೆ.

ಹೌದು, ರಾಜ್ಯದಲ್ಲಿ ಹೆಚ್ಚುತ್ತಿದ್ದ ಕೊಲೆ, ಅತ್ಯಾಚಾರ ಮೊದಲಾದ ಅಪರಾಧ ಕೃತ್ಯಗಳಿಗೂ ಕೊರೊನಾ ಸೋಂಕು ಲಗಾಮು ಹಾಕಿದೆ.

ಅಪರಾಧನಗರ ಎಂಬ ಕುಖ್ಯಾತಿ ಹೊಂದಿರುವ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿರುವುದು ಪೊಲೀಸ್ ಇಲಾಖೆಯ ಅಂಕಿ–ಸಂಖ್ಯೆಯಿಂದ ತಿಳಿಯುತ್ತದೆ.

‘ಇಲಾಖೆಯಲ್ಲಿ 35 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಅಪರಾಧ ಕೃತ್ಯಗಳ ಇಳಿಕೆಗೆ ನಾನಾ ಕಸರತ್ತು ನಡೆಸಿದರೂ ಪ್ರಯೋಜನ ಆಗಿರಲಿಲ್ಲ. ಅಪರಾಧಗಳ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಇಳಿಕೆಯಾಗಿದ್ದನ್ನು ಹಿಂದೆಂದೂ ಕಂಡಿರಲಿಲ್ಲ. ಇದೀಗ ಕೊರೊನಾ ಕರಾಮತ್ತು ಮಾಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳಲ್ಲಿಸಂತ್ರಸ್ತರನ್ನು ಮುಟ್ಟಿಯೇ ಆರೋಪಿಗಳು ಕೃತ್ಯ ಎಸಗುತ್ತಾರೆ. ಹೀಗಾಗಿ ಅವರಿಗೂ ಈಗ ಸೋಂಕಿನ ಭೀತಿ ಕಾಡಿರಬಹುದು. ಅಲ್ಲದೆ, ಗಸ್ತಿನ ಪ್ರಮಾಣ ಮಾಮೂಲಿ ದಿನಗಳಿಗಿಂತ ಹೆಚ್ಚಿದೆ. ಶೇ 50ರಷ್ಟು ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಅಪರಾಧಿಗಳು ಇಂತಹ ಸನ್ನಿವೇಶದಲ್ಲಿ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಆ ಭಯವೂ ಕಾಡಿರಬೇಕು’ ಎಂದು ಅವರು
ವಿಶ್ಲೇಷಿಸುತ್ತಾರೆ.

ಜನವರಿ ಹಾಗೂ ಫೆಬ್ರುವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಿವೆ. ಏಪ್ರಿಲ್‌ನ ಮೊದಲರ್ಧ ತಿಂಗಳಿನಲ್ಲೇ ಅಪರಾಧ ಕೃತ್ಯಗಳು ತೀರಾ ಕಡಿಮೆಯಾಗಿವೆ.

ಪೊಲೀಸರು ಲಾಕ್‌ಡೌನ್‌ ಕರ್ತವ್ಯದಲ್ಲಿ ಇರುವುದರಿಂದ ಠಾಣೆಗೆ ಬರುವವರನ್ನು ದೂರು ಪಡೆಯದೇ ವಾಪಸು ಕಳುಹಿಸುತ್ತಿದ್ದಾರೆ. ಇದರಿಂದಲೂ ಅಪರಾಧಗಳ ದಾಖಲಾತಿ ಪ್ರಮಾಣದಲ್ಲಿ ಸ್ವಲ್ಪ ಪ್ರಮಾಣ ತಗ್ಗಿರುವುದು ನಿಜ ಎಂಬ ಮಾತೂ ಕೇಳಿ ಬರುತ್ತಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಸರ್ಕಾರ ಯತ್ನಿಸುತ್ತಿದ್ದು, ಸೋಂಕು ಹರಡುವಿಕೆ ತಡೆ ಕಾಯ್ದೆ ಅನ್ವಯ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ವೈರಾಣು ತಗುಲಿದ ಹಾಗೂ ಹೋಮ್‌ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಮನೆಯಿಂದ ಹೊರಗೆ ಬಂದು ನಿಯಮ ಉಲ್ಲಂಘಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುವ ಇಂಥವರ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.

ಬಹುತೇಕ ಕಡೆಗಳಲ್ಲಿ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆ ಆಗುತ್ತಿಲ್ಲ. ಅಲ್ಲೆಲ್ಲ ತಪ್ಪಿತಸ್ಥರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ. ಲಾಕ್‌ಡೌನ್ ವೇಳೆಯಲ್ಲೇ ಇಂಥ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.

ಸಂಕಷ್ಟದಲ್ಲಿ ವ್ಯಸನಿಗಳು

ಪಂಜಾಬ್‌ನ 250ಕ್ಕೂ ಹೆಚ್ಚು ವ್ಯಸನಮುಕ್ತಿ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಮಾರು 3.6 ಲಕ್ಷ ಮಾದಕದ್ರವ್ಯ ವ್ಯಸನಿಗಳು ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಇಂಥವರು ಪ್ರತಿನಿತ್ಯ ವ್ಯಸನಮುಕ್ತಿ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆಯಬೇಕು. ಆದರೆ, ಜನರ ಓಡಾಟಕ್ಕೆ ನಿರ್ಬಂಧ ವಿಧಿಸಿರುವುದರಿಂದ ಮತ್ತು ಕೇಂದ್ರಗಳು ಪ್ರತಿನಿತ್ಯ ಬೆಳಿಗ್ಗೆ ಕೆಲವು ಗಂಟೆಗಳವರೆಗೆ ಮಾತ್ರ ತೆರೆದಿರುವುದರಿಂದ ಕೇಂದ್ರಕ್ಕೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವೈದ್ಯರು.

ಗಾಂಜಾದಂತಹ ಮಾದಕದ್ರವ್ಯದ ವ್ಯಸನಕ್ಕೆ ಒಳಗಾದವರಿಗೆ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಉಂಟುಮಾಡದ ಆದರೆ, ಮನಸ್ಸಿನಲ್ಲಿ ಮಾದಕವಸ್ತುವಿನದ್ದೇ ಪರಿಣಾಮ ಉಂಟುಮಾಡುವಂತಹ ಔಷಧವನ್ನು ಕೊಟ್ಟು ಹಂತಹಂತವಾಗಿ ವ್ಯಸನದಿಂದ ಮುಕ್ತಗೊಳಿಸಲಾಗುತ್ತದೆ. ವ್ಯಸನಿಗಳು ಪ್ರತಿನಿತ್ಯ ಬಂದು ಔಷಧದ ಡೋಸ್‌ ಪಡೆಯಬೇಕು. ಆದರೆ, ಲಾಕ್‌ಡೌನ್‌ ಅವರಿಗೆ ಸಂಕಷ್ಟ ತಂದಿಟ್ಟಿದೆ.

ದೇಶದಲ್ಲೂ ಶೇ 50ರಷ್ಟು ಕುಸಿತ

ಲಾಕ್‌ಡೌನ್‌ನಿಂದ ದೇಶದಾದ್ಯಂತ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ.

* ದೆಹಲಿಯಲ್ಲಿ 2019ರ ಮೊದಲ ಮೂರು ತಿಂಗಳಲ್ಲಿ 3,416 ಅಪರಾಧ ಪ್ರಕರಣಗಳು ನಡೆದಿದ್ದರೆ, ಈ ವರ್ಷ 1,890 ಪ್ರಕರಣಗಳು ಮಾತ್ರ ದಾಖಲಾಗಿವೆ

* ದೆಹಲಿಯಲ್ಲಿ ಕಳೆದ ವರ್ಷದ ಮೊದಲ ಮೂರು ತಿಂಗಳಲ್ಲಿ ಲೈಂಗಿಕ ದೌರ್ಜನ್ಯದ 144 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಅವುಗಳ ಸಂಖ್ಯೆ 72ಕ್ಕೆ ಇಳಿದಿದೆ

* ‘ಕೊಲೆ, ಹಲ್ಲೆ, ಅಪಹರಣ ಮುಂತಾಗಿ ಪ್ರತಿದಿನ 50ರಿಂದ 55 ಅಪರಾಧ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ಅವುಗಳ ಸಂಖ್ಯೆ 5–6ಕ್ಕೆ ಇಳಿದಿದೆ.ಸೈಬರ್‌ ಅಪರಾಧಗಳ ಪ್ರಮಾಣವೂ ತಗ್ಗಿದೆ. ಮಾದಕ ವಸ್ತುಗಳ ಸಾಗಾಣಿಕೆ ಪ್ರಕರಣ ಇತ್ತೀಚೆಗೆ ಒಂದೂ ದಾಖಲಾಗಿಲ್ಲ’ ಎಂದು ಆಂಧ್ರದ ಪೊಲೀಸರು ಹೇಳುತ್ತಾರೆ

* ಕೋಲ್ಕತ್ತದಲ್ಲೂ ಅಪರಾಧ ಪ್ರಕರಣಗಳ ಸಂಖ್ಯೆಶೇ 50ರಷ್ಟು ಕಡಿಮೆಯಾಗಿವೆ

* ಕೇರಳದಲ್ಲಿ ಅನೇಕ ಅಕ್ರಮ ವ್ಯವಹಾರಗಳಿಗೆ ತಡೆ ಬಿದ್ದಿದೆ. ಆದರೆ, ತಲಾ ₹1,000 ಪಡೆದು, ಜನರನ್ನು ರಾಜ್ಯದ ಗಡಿದಾಟಿಸಿ ಒಳಮಾರ್ಗಗಳ ಮೂಲಕ ಪಕ್ಕದ ರಾಜ್ಯಕ್ಕೆ ಕಳುಹಿಸುವ ದಂಧೆಯನ್ನು ಕೆಲವರು ಆರಂಭಿಸಿದ್ದಾರೆ ಎನ್ನುತ್ತಾರೆ ಪೊಲೀಸರು

* ಹಾಲಿನ ಕ್ಯಾನ್‌ನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ಉತ್ತರ ಪ್ರದೇಶದ ಪೊಲೀಸರು ಈಚೆಗೆ ಬಂಧಿಸಿದ್ದು, ಹೊಸ ಸ್ವರೂಪದ ಅಪರಾಧ ಪ್ರಕರಣಗಳು ಈಗ ವರದಿಯಾಗುತ್ತಿವೆ

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆ

ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ ಎಂದು ಔಟ್‌ಲುಕ್ ಇಂಡಿಯಾ ನಿಯತಕಾಲಿಕ ವರದಿ ಮಾಡಿದೆ. ಮಾರ್ಚ್‌ 1ರಿಂದ 8ರ ನಡುವೆ ದೇಶದಲ್ಲಿ 116 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಆದರೆ, ಮಾರ್ಚ್‌ 23ರಿಂದ ಏಪ್ರಿಲ್ 1ರ ನಡುವೆ 257 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಲ್ಲಿ ಮಾಹಿತಿ ನೀಡಲಾಗಿದೆ. ‘ಈ ಅವಧಿಯಲ್ಲಿ ಇನ್ನೂ ಹೆಚ್ಚಿನ ಪ್ರಕರಣಗಳು ನಡೆದಿರುತ್ತವೆ. ಆದರೆ, ಅವು ದಾಖಲಾಗುವುದಿಲ್ಲ’ ಎಂದು ಆಯೋಗವು ಕಳವಳ ವ್ಯಕ್ತಪಡಿಸಿದೆ ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ದೌರ್ಜನ್ಯ ಎಸಗುವ ಕುಟುಂಬದ ವ್ಯಕ್ತಿ ಹಾಗೂ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆ ದಿನದ 24 ಗಂಟೆಗಳ ಕಾಲವೂ ಮನೆಯೊಳಗೆ ಬಂದಿಯಾಗಿರಬೇಕಾದ ಕಾರಣ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿಲ್ಲ. ಯಾರ ವಿರುದ್ಧ ದೂರು ನೀಡುತ್ತೇವೋ ಅದೇ ವ್ಯಕ್ತಿಯ ಜತೆ ಮುಂದೆಯೂ ಬದುಕಬೇಕಲ್ಲ ಎಂದು ಬಹುತೇಕ ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹೇಳುತ್ತಾರೆ.

ಮಾದಕವ್ಯಸನಿಗಳು, ಮದ್ಯವ್ಯಸನಿಗಳು ತಮಗೆ ಬೇಕಾದ ಮಾದಕ ಪದಾರ್ಥ ಹಾಗೂ ಮದ್ಯ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು, ಅದು ದೌರ್ಜನ್ಯದ ರೂಪದಲ್ಲಿಹೊರಹೊಮ್ಮುತ್ತಿದೆ ಎಂದು ಅವರು ವಿವರಿಸುತ್ತಾರೆ. ಜಗತ್ತಿನ ವಿವಿಧ ದೇಶಗಳಲ್ಲೂ ಕೌಟುಂಬಿಕ ದೌರ್ಜನ್ಯದ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಿರುವ ಕುರಿತು ವರದಿಗಳಿವೆ. ಬ್ರೆಜಿಲ್‌ನಿಂದ ಜರ್ಮನಿವರೆಗೆ, ಇಟಲಿಯಿಂದ ಚೀನಾವರೆಗೆ ಎಲ್ಲೆಲ್ಲೂ ಮಕ್ಕಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದೌರ್ಜನ್ಯದಿಂದ ಪಾರಾಗಲು ಅವರಿಗೆ ದಾರಿಯೇ ಇಲ್ಲವಾಗಿದೆ ಎಂದು ಸ್ವಯಂಸೇವಕರು ವಿಷಾದದಿಂದ ಹೇಳುತ್ತಾರೆ.

ಹಲವು ದೇಶಗಳು ನಿರಾಳ

* ಬ್ರೆಜಿಲ್‌ನಲ್ಲಿ ಗಡಿಗಳನ್ನು ಕಳೆದೊಂದು ತಿಂಗಳಿನಿಂದ ಬಂದ್ ಮಾಡಿದ ಪರಿಣಾಮ, ಮಾದಕ ವಸ್ತು ಕಳ್ಳಸಾಗಣೆ ಬಹುತೇಕ ನಿಂತು ಹೋಗಿದೆ. ಇದಕ್ಕೆ ಪರ್ಯಾಯ ಕಂಡುಕೊಂಡಿರುವ ಖದೀಮರು ಎಟಿಎಂ ಯಂತ್ರ ಕಳ್ಳತನ, ದರೋಡೆಯಂತಹ ಕೃತ್ಯಗಳ ಮೊರೆ ಹೋಗಿದ್ದಾರೆ

* ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಅಪರಾಧ ಪ್ರಕರಣಗಳು ಶೇ 20ರಷ್ಟು ಇಳಿಕೆಯಾಗಿವೆ. ಇದೇ ವೇಳೆ ಕೌಟುಂಬಿಕ ದೌರ್ಜನ್ಯ ಸಂಬಂಧ ಸಹಾಯವಾಣಿಗೆ ಬರುತ್ತಿರುವ ಕರೆಗಳ ಪ್ರಮಾಣ ಶೇ 25ರಷ್ಟು ಏರಿಕೆಯಾಗಿದೆ

* ಅಮೆರಿಕದ ಷಿಕಾಗೊದಲ್ಲಿ ಮಾದಕವಸ್ತು ಸಂಬಂಧಿ ಬಂಧನ ಪ್ರಕರಣಗಳಲ್ಲಿ ಶೇ 43ರಷ್ಟು ಇಳಿಕೆಯಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಮಾರ್ಚ್ 15ರ ಬಳಿಕ ಶೇ 30ರಷ್ಟು ಪ್ರಕರಣಗಳು ಕಡಿಮೆಯಾಗಿವೆ

* ದಕ್ಷಿಣ ಆಫ್ರಿಕಾದಲ್ಲಿ ಅಪರಾಧ ಪ್ರಮಾಣ ತಗ್ಗಿದೆ. ಕೊಲೆ ಪ್ರಕರಣಗಳು 94ಕ್ಕೆ ಇಳಿಕೆ ಕಂಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 326 ಕೊಲೆ ಪ್ರಕರಣ ವರದಿಯಾಗಿದ್ದವು. ಅತ್ಯಾಚಾರ ಪ್ರಕರಣಗಳು 699ರಿಂದ 101ಕ್ಕೆ ಕುಸಿದಿದ್ದರೆ, ದೈಹಿಕ ಹಲ್ಲೆ ಘಟನೆಗಳು 2,673ರಿಂದ 456ಕ್ಕೆ ಇಳಿಕೆಯಾಗಿವೆ

* ಫಿಲಿಪ್ಪೀನ್ಸ್‌ನಲ್ಲಿ ಅಪರಾಧಗಳ ಪ್ರಮಾಣ ಶೇ 55ರಷ್ಟು ಕಡಿಮೆಯಾಗಿವೆ. ಫೆಬ್ರುವರಿ 22ರಿಂದ ಮಾರ್ಚ್ 16ರವರೆಗೆ ನಡೆದ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ, ಮಾರ್ಚ್ 17ರಿಂದ ಏಪ್ರಿಲ್ 9ರ ಅವಧಿಯಲ್ಲಿ ಅಪರಾಧಗಳು ಅರ್ಧಕ್ಕಿಂತ ಹೆಚ್ಚು ತಗ್ಗಿವೆ. 3,361ರಷ್ಟಿದ್ದ ಪ್ರಕರಣಗಳು 1,509ಕ್ಕೆ ಇಳಿದಿವೆ

* ಅರ್ಜೆಂಟೀನಾದಲ್ಲಿ ಜನರು ಮನೆಯಲ್ಲೇ ಇರುವಂತೆ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ ಕಾರಣ, ಅಪರಾಧ ಘಟನೆಗಳು ಶೇ 90ರಷ್ಟು ಕುಸಿದಿವೆ. ರಾಜಧಾನಿಯಲ್ಲಿ ದಿನಕ್ಕೆ 225ರಷ್ಟಿದ್ದ ಪ್ರಕರಣಗಳು 30ಕ್ಕೆ ಇಳಿದಿವೆ

ಪೂರಕ ಮಾಹಿತಿ: ಸಂತೋಷ್‌ ಜಿಗಳಿಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT