ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಮನದ ಮಾತಿಗೆ 100ರ ಸಂಭ್ರಮ

Published 27 ಏಪ್ರಿಲ್ 2023, 20:35 IST
Last Updated 27 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ಮಾತನಾಡುವ ‘ಮನದ ಮಾತು (ಮನ್‌ ಕಿ ಬಾತ್‌)’ ಕಾರ್ಯಕ್ರಮವು ಮುಂದಿನ ವಾರ 100ನೇ ಕಂತನ್ನು ಪೂರೈಸಲಿದೆ. ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ತಿಂಗಳ ನಂತರ 2014ರ ಅಕ್ಟೋಬರ್ 3ರಂದು ಮನದ ಮಾತು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ದೇಶದ ಜನರೊಂದಿಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಳ್ಳಲು, ದೇಶದ ಜನರ ಮಾತನ್ನು ಆಡಲು ಈ ರೇಡಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ‍ಮೋದಿ ಅವರು ಹೇಳಿದ್ದರು. ಅಂದಿನಿಂದ ಈವರೆಗೆ ತಿಂಗಳಿಗೆ ಒಮ್ಮೆ ಮೋದಿ ಅವರು, ಮನದ ಮಾತು ಕಾರ್ಯಕ್ರಮದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಯಯೇ ಇದ್ದಾರೆ. ತಮ್ಮ ಅನಿಸಿಕೆಗಳು, ಅಭಿಪ್ರಾಯಗಳು, ಹೊಸ ವಿಚಾರಗಳು, ತಮ್ಮ ಸರ್ಕಾರದ ಕೆಲವು ನಿರ್ಧಾರ ಮತ್ತು ಆಡಳಿತಾತ್ಮಕ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಮೋದಿ ಅವರು ಟ್ವಿಟರ್ ಅನ್ನು ಬಳಸಿಕೊಳ್ಳುತ್ತಾರೆ. ಪ್ರಧಾನಿ ಮೋದಿ ಅವರ ವೈಯಕ್ತಿಕ ಟ್ವಿಟರ್‌ ಮತ್ತು ಯೂಟ್ಯೂಬ್‌ ಖಾತೆ, ಪ್ರಧಾನಿ ಕಾರ್ಯಾಲಯದ ಅಧಿಕೃತ ಟ್ವಿಟರ್ ಮತ್ತು ಯೂಟ್ಯೂಬ್‌ ಖಾತೆಗಳಲ್ಲಿ ಈ ವಿಷಯಗಳು ಪ್ರಕಟವಾಗುತ್ತವೆ. ಮೋದಿ ಅವರು ಪ್ರಧಾನಿ ಆಗುವ ಮುನ್ನವೇ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹೆಚ್ಚು ಜನಪ್ರಿಯರಾಗಿದ್ದರು. ಸಾಮಾಜಿಕ ಜಾಲತಾಣಗಳನ್ನು ಭಾರತದ ರಾಜಕಾರಣಿಗಳ ಪೈಕಿ ಹೆಚ್ಚು ಬಳಸಿಕೊಂಡವರು ಮೋದಿ ಅವರು.  ಹೀಗಿದ್ದೂ ಮೋದಿ ಅವರು, ತಮ್ಮ ಮನದ ಮಾತನ್ನು ಆಡಲು ‘ಮನದ ಮಾತು’ ಎಂಬ ತಿಂಗಳ ರೇಡಿಯೊ ಕಾರ್ಯಕ್ರಮವನ್ನು ಆರಂಭಿಸಿದ್ದರು.

ಪ್ರಸಾರ ಭಾರತಿಯ ರೇಡಿಯೊ ವಾಹಿನಿಗಳಲ್ಲಿ, ದೂರದರ್ಶನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ಖಾಸಗಿ ಎಫ್.ಎಂ ವಾಹಿನಿಗಳೂ ಪ್ರಸಾರ ಮಾಡುತ್ತವೆ. ಮೋದಿ ಮತ್ತು ಪ್ರಧಾನಿ ಕಾರ್ಯಾಲಯದ ಯೂಟ್ಯೂಬ್‌ ವಾಹಿನಿಗಳಲ್ಲೂ ಇದು ಪ್ರಸಾರವಾಗುತ್ತದೆ.

ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲೇ ತಮ್ಮ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು, ಅಭಿಯಾನಗಳನ್ನು ಘೋಷಿಸಿದ್ದರು. ‘ಸ್ವಚ್ಛ ಭಾರತ ಅಭಿಯಾನ’, ‘ಬೇಟಿ ಬಚಾವೊ, ಬೇಟಿ ಪಢಾವೊ (ಮಗಳನ್ನು ಉಳಿಸಿ, ಮಗಳನ್ನು ಓದಿಸಿ)’, ‘ನಮಾಮಿ ಗಂಗಾ’, ‘ವಿಶ್ವ ಯೋಗ ದಿನ’ ಮೊದಲಾದ ಕಾರ್ಯಕ್ರಮಗಳು ಮೊದಲು ಘೋಷಣೆಯಾಗಿದ್ದು ಮೋದಿ ಅವರ ಮನದ ಮಾತು ರೇಡಿಯೊ ಕಾರ್ಯಕ್ರಮದಲ್ಲಿಯೇ. ಆರಂಭದ ದಿನಗಳಲ್ಲಿ ಮೋದಿ ಅವರು ಮನದ ಮಾತು ಕಾರ್ಯಕ್ರಮಕ್ಕೆ ತಾವೇ ವಿಷಯ ಆಯ್ಕೆ ಮಾಡಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಸಾರ್ವಜನಿಕರಿಂದ ವಿಷಯಗಳನ್ನು ಆಹ್ವಾನಿಸಲು ಆರಂಭಿಸಿದರು. ಈಗ 100ನೇ ಕಂತಿಗೂ ಸಾರ್ವಜನಿಕರಿಂದ ವಿಷಯಗಳನ್ನು ಕೇಳಿದ್ದಾರೆ.

ಆಧಾರ:www.mygov.in/campaigns/, ಪ್ರಧಾನಿ ಮೋದಿ ಅವರ ಟ್ವೀಟ್‌ಗಳು, ಪ್ರಧಾನಿ ಕಾರ್ಯಾಲಯದ ಟ್ವೀಟ್‌ಗಳು, ಪಿಟಿಐ

‘ಮೋದಿ ಮನದ ಮಾತುಗಳು’

ಮನದ ಮಾತು ಕಾರ್ಯಕ್ರಮದಲ್ಲಿ ಮೋದಿ ಅವರು ತಮ್ಮ ಮನದ ಮಾತುಗಳನ್ನು ಆಡುತ್ತಾರೆಯೇ ಹೊರತು ದೇಶವಾಸಿಗಳ ಮನದ ಮಾತನ್ನಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆ. ಇದಲ್ಲದೆ ಈ ಕಾರ್ಯಕ್ರಮದ ಬಗ್ಗೆ ಇನ್ನೂ ಹಲವು ಟೀಕೆಗಳಿವೆ. ಇದು ಏಕಮುಖದ ಮಾತಿನ ಕಾರ್ಯಕ್ರಮ. ಮೋದಿ ಅವರು ತಾವು ಮಾತನಾಡಲಷ್ಟೇ ಬಯಸುತ್ತಾರೆ ದೇಶವಾಸಿಗಳ ಮಾತನ್ನು ಕೇಳಿಸಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಮನದ ಮಾತು ಕಾರ್ಯಕ್ರಮಕ್ಕೆ ರೇಡಿಯೊವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಈ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷಗಳು ಮುಂದಿಡುವ ಮತ್ತೊಂದು ಟೀಕೆ. ಈ ಕಾರ್ಯಕ್ರಮದಲ್ಲಿ ಮೋದಿ ಅವರು ದೇಶದ ಯಾವುದೋ ಮೂಲೆಯಲ್ಲಿರುವ ಸಾಮಾನ್ಯ ವ್ಯಕ್ತಿಗಳು ಅವರ ಸಾಧನೆಗಳನ್ನು ಆಗಾಗ್ಗೆ ಪ್ರಸ್ತಾಪಿಸಿದ್ದಾರೆ. ಸಾಮಾನ್ಯ ವ್ಯಕ್ತಿಗಳ ವಿಚಾರ ಪ್ರಸ್ತಾವಕ್ಕೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ಟೀಕೆ ವ್ಯಕ್ತವಾಗುತ್ತದೆ. ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುತ್ತದೆಯೋ ಆ ರಾಜ್ಯದ ವ್ಯಕ್ತಿಗಳ ಬಗ್ಗೆ ಮೋದಿ ಮಾತನಾಡುತ್ತಾರೆ. ಆ ಮೂಲಕ ಪ್ರಚಾರ ಪಡೆಯುತ್ತಾರೆ ಎಂಬುದು ಈ ಕಾರ್ಯಕ್ರಮದ ಬಗ್ಗೆ ಇರುವ ಇನ್ನೊಂದು ಟೀಕೆ.

ಪ್ರತಿಕ್ರಿಯೆ ಟೀಕೆಗೆ ಅವಕಾಶವಿಲ್ಲ’

ಮನದ ಮಾತು ಕಾರ್ಯಕ್ರಮದ ಧ್ವನಿಮುದ್ರಿತ ಆವೃತ್ತಿಯನ್ನು ಮೋದಿ ಅವರ ವೈಯಕ್ತಿಕ ಯೂಟ್ಯೂಬ್‌ ಖಾತೆ ಬಿಜೆಪಿಯ ಯೂಟ್ಯೂಬ್‌ ಖಾತೆ ಮತ್ತು ಪ್ರಧಾನಿ ಕಾರ್ಯಾಲಯದ ಯೂಟ್ಯೂಬ್‌ ಖಾತೆಯಲ್ಲೂ ಪ್ರಸಾರ ಮಾಡಲಾಗುತ್ತದೆ. ಆರಂಭದ ದಿನಗಳಲ್ಲಿ ಈ ಯೂಟ್ಯೂಬ್‌ ವಾಹಿನಿಗಳಲ್ಲಿ ಪ್ರತಿಕ್ರಿಯೆ ನೀಡಲು ಲೈಕ್‌ ಮತ್ತು ಡಿಸ್‌ಲೈಕ್‌ ನೀಡಲು ಅವಕಾಶ ನೀಡಲಾಗಿತ್ತು. 2020ರಲ್ಲಿ ಡಿಸ್‌ಲೈಕ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದವು. ಆಗ ಆ ವಿಡಿಯೊಗಳಿಗೆ ಪ್ರತಿಕ್ರಿಯೆ ನೀಡುವ ಲೈಕ್‌ ಅಥವಾ ಡಿಸ್‌ಲೈಕ್‌ ಒತ್ತುವ ಆಯ್ಕೆಯನ್ನು ತೆಗೆದುಹಾಕಲಾಯಿತು. 2020ರ ಸೆಪ್ಟೆಂಬರ್ 17ರಂದು ಮೋದಿ ಅವರ ಜನ್ಮದಿನಾಚರಣೆಯನ್ನು ದೇಶದ ನಿರುದ್ಯೋಗಿ ಯುವಕರು ‘ನಿರುದ್ಯೋಗ ದಿನಾಚರಣೆ’ಯನ್ನು ಆಚರಿಸಿದ್ದರು. ಅದೇ ಸಂದರ್ಭದಲ್ಲಿ ಸರ್ಕಾರ ಮತ್ತು ಮೋದಿ ಅವರ ಅಧಿಕೃತ ಯೂಟ್ಯೂಬ್‌ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಮನದ ಮಾತು ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಟೀಕೆ ವ್ಯಕ್ತವಾಗಿತ್ತು. ಹಲವರು ‘ನಿಮ್ಮ ಮಾತು ನಿಲ್ಲಿಸಿ ನಮ್ಮ ಮಾತು ಕೇಳಿಸಿಕೊಳ್ಳಿ. ನಮಗೆ ಉದ್ಯೋಗ ನೀಡಿ’ ಎಂದು ಆಗ್ರಹಿಸಿದ್ದರು. ಬಿಜೆಪಿಯ ಅಧಿಕೃತ ಯೂಟ್ಯೂಬ್‌ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾರ್ಯಕ್ರಮಕ್ಕೆ ಕೆಲವೇ ನಿಮಿಷಗಳಲ್ಲಿ 4.7 ಲಕ್ಷ ಡಿಸ್‌ಲೈಕ್‌ಗಳು ಬಂದಿದ್ದವು. ಕೆಲವೇ ಗಂಟೆಗಳಲ್ಲಿ ಆ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಪ್ರತಿಕ್ರಿಯೆ ನೀಡುವ ಲೈಕ್‌ ಅಥವಾ ಡಿಸ್‌ಲೈಕ್‌ ವ್ಯಕ್ತಪಡಿಸುವ ಆಯ್ಕೆಯನ್ನು ತೆಗೆದುಹಾಕಲಾಯಿತು. ಆ ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲಾ ಪ್ರತಿಕ್ರಿಯೆಗಳನ್ನು ಅಳಿಸಿಹಾಕಲಾಯಿತು. ಇದನ್ನೂ ವಿರೋಧ ಪಕ್ಷಗಳು ಟೀಕಿಸಿದವು. ದೇಶದ ಜನರ ಮನದ ಮಾತನ್ನು ಕೇಳಿಸಿಕೊಳ್ಳಲು ಮೋದಿ ಬಯಸುವುದಿಲ್ಲ ಎಂಬುದನ್ನು ಇದು ಸೂಚಿಸಿತ್ತದೆ ಎಂದು ವಿರೋಧ ಪಕ್ಷಗಳು ಹೇಳಿದ್ದವು.

ಮನದ ಮಾತು@100: ಸಿದ್ಧತೆ ಜೋರು

ಮೋದಿ ಅವರ ‘ಮನದ ಮಾತು’ ಕಾರ್ಯಕ್ರಮವು 100ನೇ ಕಂತಿನ ಮೈಲಿಗಲ್ಲು ತಲುಪುತ್ತಿದ್ದು ಇದನ್ನು ದೊಡ್ಡ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ನಡೆಯುತ್ತಿವೆ. ನೂರನೇ ಸಂಚಿಕೆಯನ್ನು ಸ್ಮರಣೀಯಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರದ ಜೊತೆಗೆ ಬಿಜೆಪಿ ಸಹ ಬಿರುಸಿನ ತಯಾರಿಯಲ್ಲಿ ತೊಡಗಿದೆ. 100ನೇ ಕಂತಿನ ಕಾರ್ಯಕ್ರಮವನ್ನು ಹೇಗೆ ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸಬಹುದು ಎಂದು ಸರ್ಕಾರವು ಜನರಿಂದ ಸಲಹೆಗಳನ್ನು ಆಹ್ವಾನಿಸಿತ್ತು. ಜನರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಸಲಹೆಗಳ ಆಧಾರದ ಮೇಲೆ ಇದೇ ಏಪ್ರಿಲ್ 30ರಂದು ದೇಶದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  100ನೇ ಸಂಚಿಕೆಯ ನೆನಪಿಗಾಗಿ ₹100 ಮುಖಬೆಲೆಯ ನಾಣ್ಯ ಹಾಗೂ ಅಂಚೆಚೀಟಿಯನ್ನು ಕೇಂದ್ರ ಸರ್ಕಾರ ಹೊರತಂದಿದೆ. ವಿವಿಧ ವಲಯದ ಗಣ್ಯರ ಜೊತೆ ನಡೆದ ಮನದ  ಮಾತು ಕುರಿತ ಸಂವಾದ ಸಭೆಯಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು ನಾಣ್ಯ ಹಾಗೂ ಅಂಚೆಚೀಟಿಯನ್ನು ಬಿಡುಗಡೆ ಮಾಡಿದರು. ನಾಲ್ಕು ಬಗೆಯ ಲೋಹಗಳಿಂದ ಮಾಡಲಾದ ₹100 ನಾಣ್ಯದ ಮೇಲೆ ಮನದ ಮಾತು 100ನೇ ಕಂತು ಎಂದು ಬರೆಯಲಾಗಿದೆ. ಈ ನಾಣ್ಯವು ಸಾಮಾನ್ಯ ನಾಣ್ಯಗಳಂತೆ ಚಲಾವಣೆಯಲ್ಲಿ ಇರುವುದಿಲ್ಲ. ಸಾಮಾನ್ಯ ನಾಣ್ಯಗಳಿಗಿಂತ ಇದಕ್ಕೆ ಹೆಚ್ಚಿನ ಬೆಲೆ ಇರಲಿದ್ದು ಆರ್‌ಬಿಐ ದರ ನಿಗದಿ ಮಾಡಲಿದೆ. ಖರೀದಿಸಲು ಜನರಿಗೆ ಅವಕಾಶವಿದೆ. ನೂರನೇ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದಾರೆ. ಇದರಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಕರೆ ನೀಡಿದ್ದರು.  ನೂರನೇ ಕಂತನ್ನು ಹೆಚ್ಚು ಜನರಿಗೆ ತಲುಪಿಸಲು ಬಿಜೆಪಿ ಮುಂದಾಗಿದೆ. ಕಾರ್ಯಕ್ರಮವನ್ನು ಈ ಬಾರಿ ವಿಶ್ವದ ಹಲವು ದೇಶಗಳಲ್ಲಿ ಪ್ರಸಾರ ಮಾಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ವಿಶ್ವನಾಯಕರಾಗಿ ಗುರುತಿಸಿಕೊಂಡಿದ್ದು ಅವರ ಸ್ಫೂರ್ತಿದಾಯಕ ಮಾತುಗಳನ್ನು ಇಡೀ ಜಗತ್ತಿಗೆ ಕೇಳಿಸಲಿದ್ದೇವೆ ಎಂದು ಬಿಜೆಪಿ ಹೇಳಿದೆ. ಅಲ್ಲದೆ ದೇಶದ 1 ಲಕ್ಷಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರಧಾನಿ ಮನದ ಮಾತುಗಳನ್ನು ಜನರಿಗೆ ಕೇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಹುತೇಕ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು ಇಲ್ಲಿ ಬಾನುಲಿ ಕಾರ್ಯಕ್ರಮ ಪ್ರಸಾರಕ್ಕೆ ಏರ್ಪಾಡು ಮಾಡಲಾಗುತ್ತಿದೆ. ಪ್ರತೀ ಲೋಕಸಭಾ ಕ್ಷೇತ್ರಗಳಲ್ಲಿ 100ನೇ ಕಂತಿನ ಮನದ ಮಾತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತೀ ಕ್ಷೇತ್ರದಲ್ಲಿ 100 ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಪ್ರತೀ ಕಾರ್ಯಕ್ರಮದಲ್ಲಿ 100 ಜನರು ಭಾಗವಹಿಸುವಂತೆ ಕಾರ್ಯಕ್ರಮವನ್ನು ವಿನ್ಯಾಸ ಮಾಡಲಾಗಿದೆ. ವೈದ್ಯರು ಶಿಕ್ಷಕರು ಸೇರಿದಂತೆ ಎಲ್ಲ ವಲಯಗಳ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಲೋಕಸಭಾ ಸದಸ್ಯರು ರಾಜ್ಯಸಭಾ ಸದಸ್ಯರು ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಕೇಂದ್ರ ಸಚಿವರಾದ ಅಮಿತ್ ಶಾ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ತಮ್ಮ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಈವರೆಗೆ ಪ್ರಸ್ತಾಪಿಸಿರುವ ಎಲೆಮರೆಯ ಕಾಯಿಯಂತಿರುವ ಸಾಧಕರನ್ನು ಸ್ಮರಿಸುವುದು ಹಾಗೂ ಅವರನ್ನು ಗೌರವಿಸುವುದು ಈ ಕಾರ್ಯಕ್ರಮದ ಕಾರ್ಯಕ್ರಮ ಪಟ್ಟಿಯಲ್ಲಿದೆ. ಆಯಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಇಂತಹ ಸಾಧಕರನ್ನು ಕಾರ್ಯಕ್ರಮದ ದಿನ ಸನ್ಮಾನಿಸಲಾಗುವುದು. ಜೊತೆಗೆ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದವರನ್ನೂ ಇದೇ ವೇಳೆ ಸನ್ಮಾನಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ತಲುಪಿಸುವ ಯತ್ನಗಳು ನಡೆಯುತ್ತಿವೆ. ದೇಶದ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 100ನೇ ಕಂತಿನ ಕಾರ್ಯಕ್ರಮದ ಮಾಹಿತಿ ನೀಡುವ ಬ್ಯಾನರ್ ಅಳವಡಿಸಲು ಸೂಚಿಸಲಾಗಿದೆ. 

ಸ್ತ್ರೀ ಶಕ್ತಿಗೆ ಸ್ಫೂರ್ತಿ

ದೇಶದ ಸಾಮಾನ್ಯ ಜನರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವ ಪ್ರಸಾರ ಕಾರ್ಯಕ್ರಮ ‘ಮನದ ಮಾತು’. ವಿವಿಧ ವಿಷಯಗಳು ಮತ್ತು ಜ್ವಲಂತ ಸಮಸ್ಯೆಗಳ ಬಗ್ಗೆ ಮೋದಿ ಅವರು ಜನರೊಂದಿಗೆ ಮಾತನಾಡುತ್ತಾರೆ. ಕೇಳದ ಕಾಣದ ಆದರೆ ದೊಡ್ಡ ರೀತಿಯಲ್ಲಿ ಕೆಲಸ ಮಾಡಿದ ನಿಜವಾದ ಹೀರೋಗಳನ್ನು ಗುರುತಿಸಿದ್ದಾರೆ. ಉತ್ತಮ ನಾಯಕರಾದವರು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಸತತವಾಗಿ ಮಾತನಾಡಿದಾಗ ಜನರು ಅದನ್ನು ಆಲಿಸುತ್ತಾರೆ ನಂಬುತ್ತಾರೆ ಮತ್ತು ಆ ಮಾತುಗಳನ್ನು ಅನುಸರಿಸುತ್ತಾರೆ. ವಿಶೇಷವಾಗಿ ಅವರ ಮಾತುಕತೆ ಮತ್ತು ಯೋಜನೆಗಳಿಂದ ಬಹಳಷ್ಟು ಪ್ರಯೋಜನ ಪಡೆದ ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಬಹಳ ಸಾಧನೆ ಮಾಡಿದ್ದಾರೆ. ಮಹಿಳೆಯರು ಅಸಾಧಾರಣ ಕೆಲಸ ಮಾಡಿದಾಗ ಅವರನ್ನು ಕರೆದು ಪ್ರಶಂಸಿಸಲಾಗುತ್ತದೆ. ಆಗ ರಾಷ್ಟ್ರವು ಅವರನ್ನು ಸ್ವೀಕರಿಸುತ್ತದೆ; ಅವರು ಅನೇಕ ಯುವ ಜನರಿಗೆ ಮಾದರಿಯಾಗುತ್ತಾರೆ. ಆದ್ದರಿಂದ ಹೆಣ್ಣು ಮಕ್ಕಳು ಇದೀಗ ಬಹುದೊಡ್ಡ ಕನಸು ಕಾಣುತ್ತಿದ್ದಾರೆ.  ಸುಧಾಮೂರ್ತಿ ಶಿಕ್ಷಣ ತಜ್ಞೆ ಲೇಖಕಿ ಮತ್ತು ದಾನಿ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT