ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಹವಾಮಾನ ಇಲಾಖೆಗೆ 150 ವರ್ಷ

Published 15 ಜನವರಿ 2024, 19:04 IST
Last Updated 15 ಜನವರಿ 2024, 19:04 IST
ಅಕ್ಷರ ಗಾತ್ರ

ಹವಾಮಾನ ಮುನ್ಸೂಚನೆಯನ್ನು ನೀಡುತ್ತಾ, ಹವಾಮಾನ ಸಂಶೋಧನೆಯಲ್ಲಿ ಮುಂದಡಿ ಇಡುತ್ತಾ ಬಂದಿರುವ ಭಾರತೀಯ ಹವಾಮಾನ ಇಲಾಖೆಯು ಜನರ ಜೀವವನ್ನು ಉಳಿಸುವ ಸಾಧನದಂತೆ ಕೆಲಸ ಮಾಡುತ್ತಲೇ ಬಂದಿದೆ... ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಸೋಮವಾರ ಹಂಚಿಕೊಂಡಿರುವ ಪೋಸ್ಟ್‌ ಇದು.

1875ರಲ್ಲಿ ಕೋಲ್ಕತ್ತಾದಲ್ಲಿ ಆರಂಭವಾದ ಇಲಾಖೆಯು 149 ವರ್ಷಗಳಿಂದಲೂ ಭಾರತೀಯರ ಜೀವ–ಜೀವನೋಪಾಯವನ್ನು ಕಾಪಾಡುವ ಕೆಲಸದಲ್ಲಿ ನಿರತವಾಗಿದೆ. ಚಂಡಮಾರುತ, ಬರ, ಪ್ರವಾಹ, ಮಳೆ ಯಾವಾಗ, ಎಷ್ಟು ಪ್ರಮಾಣದಲ್ಲಿ ಬರುತ್ತದೆ, ಬಿಸಿಗಾಳಿ ಬೀಸುವ ಮುನ್ಸೂಚನೆ, ರೈತರು ಯಾವಾಗ ಬಿತ್ತಬೇಕು, ಬೆಳೆ ಯಾವಾಗ ಕಟಾವು ಮಾಡಬೇಕು... ಹೀಗೆ ಜನರ ಜೀವನವನ್ನು ನೇರವಾಗಿ ಪ್ರಭಾವಿಸಬಲ್ಲ ಎಲ್ಲ ವಿಚಾರಗಳ ಮಾಹಿತಿಯನ್ನು ಇಲಾಖೆಯು ಮುಂಚಿತವಾಗಿ ಜನರಿಗೆ ನೀಡುತ್ತದೆ. ಇಂಥ ಇಲಾಖೆಯು ಈಗ 150ನೇ ವರ್ಷದ ಸಂಭ್ರಮದಲ್ಲಿದೆ.

1970ರಲ್ಲಿ ಅಪ್ಪಳಿಸಿದ ಭೊಲಾ ಚಂಡಮಾರುತವು ಬಾಂಗ್ಲಾದೇಶದ ಸುಮಾರು 3 ಲಕ್ಷ ಜೀವವನ್ನು ತನ್ನ ಸೆಳೆತಕ್ಕೆ ತೆಗೆದುಕೊಂಡಿತ್ತು. ಇದೇ ವರ್ಷ ಆಂಧ್ರಪ್ರದೇಶದಲ್ಲಿ ಸುಮಾರು 10 ಸಾವಿರ ಜನರು  ಹಾಗೂ 1971ರಲ್ಲಿ ಒಡಿಶಾದಲ್ಲಿ 10 ಸಾವಿರ ಮಂದಿ ಮೃತಪಟ್ಟಿದ್ದರು. ಈ ಅವಗಢಗಳ ಬಳಿಕವೇ ಚಂಡಮಾರುತ ಪತ್ತೆ ಹಚ್ಚುವ, ತ್ವರಿತವಾಗಿ ಎಚ್ಚರಿಕೆ ಸಂದೇಶ ನೀಡುವ ಕಾರ್ಯಕ್ಕೆ ಚಾಲನೆ ದೊರೆಯಿತು. ಅಲ್ಲಿಂದ ಇಲ್ಲಿಯವರೆಗೆ ತಾಂತ್ರಿಕ ಅಭಿವೃದ್ಧಿಯೊಂದಿಗೆ ಇಲಾಖೆಯು ಪ್ರತಿ ವರ್ಷವೂ ಚಂಡಮಾರುತದ ನಿಖರ ಮುನ್ಸೂಚನೆಯನ್ನು ನೀಡುತ್ತ ಜನರ ಜೀವವನ್ನು ಉಳಿಸುತ್ತಿದೆ.

2013ರಲ್ಲಿ ಒಡಿಶಾಗೆ ಫೈಲಿನ್‌ ಚಂಡಮಾರುತವು ಬಂದಪ್ಪಳಿಸಿತ್ತು. ಅಂದಿಗೆ 14 ವರ್ಷಗಳಲ್ಲೇ ಇಂಥ ಚಂಡಮಾರುತವು ಎಂದಿಗೂ ಬಂದಿರಲಿಲ್ಲ. ಸುಮಾರು 10 ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು. ಈ ಚಂಡಮಾರುತದ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಅತ್ಯಂತ ನಿಖರವಾದ ಮುನ್ಸೂಚನೆ ನೀಡಿತ್ತು. ಈ ಚಂಡಮಾರುತ ಮುನ್ಸೂಚನೆಯನ್ನು ಬೇರೆ ಯಾವ ದೇಶಕ್ಕಿಂತಲೂ ಭಾರತವೇ ಹೆಚ್ಚು ನಿಖರವಾಗಿ ಹೇಳಿತ್ತು. ಇದರಿಂದಾಗಿ ಇಲಾಖೆಯು ವಿಶ್ವದಾದ್ಯಂತ ಪ್ರಸಿದ್ಧಿ ಗಳಿಸಿತು.

ಆಧುನೀಕರಣ ಪ್ರಕ್ರಿಯೆ: ಮುನ್ಸೂಚನೆಗಳನ್ನು ನೀಡಲು ಮಾಹಿತಿ ಸಂಗ್ರಹ ಅಗತ್ಯ. ಈ ಮಾಹಿತಿ ಸಂಗ್ರಹ ಪ್ರಕ್ರಿಯೆಯು ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ಆಧುನೀಕರಣಗೊಳ್ಳುತ್ತಾ ಸಾಗಿದೆ. ಇದೇ ಹಂತದಲ್ಲಿ, ಜನರಿಗೆ ಮಾಹಿತಿ ನೀಡುವ ಪ್ರಕ್ರಿಯೆಯೂ ಆಧುನಿಕಗೊಳ್ಳುತ್ತಾ ಸಾಗಿದೆ. 

1982ರಲ್ಲಿ ಇಸ್ರೊ ಉಡಾವಣೆ ಮಾಡಿದ ಇನ್‌ಸ್ಯಾಟ್‌ ಹೆಸರಿನ ಸರಣಿ ಉಪಗ್ರಹಗಳು ದೇಶದ ಸಂವಹನ ಕ್ಷೇತ್ರವನ್ನು ಬಲಗೊಳಿಸಿದವು. ಇದು ಹವಾಮಾನ ಇಲಾಖೆಯ ಕಾರ್ಯದಲ್ಲಿಯೂ ಮುಖ್ಯ ಪಾತ್ರವಹಿಸಿತು. ಭೂಮಿಯ ವಾತಾವರಣ ಅಧ್ಯಯನಕ್ಕೆ ಈ ಸರಣಿ ಉಪಗ್ರಹಗಳು ಮಹತ್ವದ ಪಾತ್ರವಹಿಸಿದವು. ಹವಾಮಾನ ಮುನ್ಸೂಚನೆ ನೀಡಲು ಸಹಕಾರಿಯಾಗಲೆಂದೇ ಕಲ್ಪನಾ ಉಪಗ್ರಹವನ್ನು ಇಸ್ರೊ 2002ರಲ್ಲಿ ಉಡಾವಣೆ ಮಾಡಿತು. ಹೀಗೆ ತಂತ್ರಜ್ಞಾನ, ವಿಜ್ಞಾನ ಅಭಿವೃದ್ಧಿಗೊಳ್ಳುತ್ತಾ ಹವಾಮಾನ ಇಲಾಖೆಯು ಜನರ ಜೀವವನ್ನು ಉಳಿಸುವ, ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಹವಾಮಾನ ಮುನ್ಸೂಚನೆಯನ್ನು ನೀಡುತ್ತಿದೆ.

ಕಡಿಮೆ ಅನುದಾನ

ಭಾರತೀಯ ಹವಾಮಾನ ಇಲಾಖೆಯು 150ನೇ ವರ್ಷಕ್ಕೆ ಕಾಲಿಟ್ಟಿದೆ ನಿಜ. ಮಹತ್ವದ ಕೆಲಸಗಳನ್ನು ಮಾಡುತ್ತಿದೆ. ಹಾಗಿದ್ದರೂ ಇಲಾಖೆಯು ಕೇಳಿದಷ್ಟು ಅನುದಾನವನ್ನು ಕೇಂದ್ರ ಸರ್ಕಾರವು ನೀಡು‌ತ್ತಿಲ್ಲ. ಕಳೆದ 10 ವರ್ಷಗಳಲ್ಲಿ ಇಲಾಖೆ ಕೇಳಿದ್ದಕ್ಕಿಂತ ಕಡಿಮೆ ಮೊತ್ತವನ್ನೇ ಸರ್ಕಾರ ಬಿಡುಗಡೆ ಮಾಡಿದೆ.

ಹವಾಮಾನ ಇಲಾಖೆಯು ಕೇಳುವ ಅನುದಾನದ ಮೊತ್ತಕ್ಕೂ ಸರ್ಕಾರವು ಬಜೆಟ್‌ನಲ್ಲಿ ಈ ಇಲಾಖೆಗೆ ಅನುದಾನವನ್ನು ಮೀಸಲಿಡುವುದಕ್ಕೂ, ಕೊನೆಯಲ್ಲಿ ಸರ್ಕಾರವು ಈ ಇಲಾಖೆಗೆ ಹಣವನ್ನು ಬಿಡುಗಡೆ ಮಾಡುವುದಕ್ಕೂ ದೊಡ್ಡ ಪ್ರಮಾಣದ ವ್ಯತ್ಯಾಸ ಕಂಡುಬರುತ್ತಿದೆ.

2014–15ನೇ ಆರ್ಥಿಕ ವರ್ಷದಲ್ಲಿ ಮಾತ್ರವೇ ಇಲಾಖೆ ಕೇಳಿದಷ್ಟು ಮೊತ್ತದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಆ ನಂತರದ ವರ್ಷಗಳಲ್ಲಿ ಇಲಾಖೆ ಕೇಳಿರುವುದರಲ್ಲಿ ಅರ್ಧಕ್ಕಿಂತಲೂ ಕಡಿಮೆ ಮೊತ್ತದ ಹಣವನ್ನು ಬಿಡುಗಡೆ ಮಾಡಲಾಗಿದೆ. 2017–18ನೇ ಆರ್ಥಿಕ ವರ್ಷದಲ್ಲಂತೂ ಇಲಾಖೆ ಕೇಳಿದ್ದರಲ್ಲಿ ಶೇ 62.08ರಷ್ಟು ಕಡಿಮೆ ಮೊತ್ತದ ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. 

ಇಲಾಖೆಯ ಕಿರು ಹಿನ್ನೋಟ

* 1877: ಕೋಲ್ಕತ್ತಾದ ಅಲಿಪುರದಲ್ಲಿ ಭೂಕಂಪ ಅಧ್ಯಯನಕ್ಕಾಗಿ ಮೊದಲ ವೀಕ್ಷಣಾಲಯವನ್ನು ಸ್ಥಾಪಿಸಲಾಯಿತು. ಆ ಮೂಲಕ ಭೂಕಂಪ ಅಧ್ಯಯನ ಚಟುವಟಿಕೆಗಳು ಆರಂಭವಾದವು

* 1886: ಬಂದರು ಮೂಲಕ ಎಚ್ಚರಿಕೆ ಸಂದೇಶ ರವಾನೆ ವ್ಯವಸ್ಥೆಯನ್ನು ದೇಶದಾದ್ಯಂತದ ಬಂದರುಗಳಿಗೆ ವಿಸ್ತರಿಸಲಾಯಿತು. 1865ರಿಂದ ಕೋಲ್ಕತ್ತಾ ಬಂದರಿನಿಂದ ಮಾತ್ರವೇ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿತ್ತು

*1890: ಮಳೆ ನೋಂದಣಿ ಪ್ರಾಧಿಕಾರ ಸ್ಥಾಪನೆ. ಜೊತೆಗೆ, ದೇಶದಾದ್ಯಂತ ಒಂದೇ ರೀತಿಯ ಮಳೆ ಮಾಪಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಯಿತು

*192 1: ಶಿಮ್ಲಾದಿಂದ ಮೊದಲ ಬಾರಿಗೆ ವಾಯುಯಾನ ಮುನ್ಸೂಚನೆ ನೀಡಲಾಯಿತು

* 1912: ರೇಡಿಯೊ ತಂತ್ರಜ್ಞಾನವನ್ನು ಬಳಸಿ ಹಡಗುಗಳ ಮೂಲಕ ದೇಶದ ವಿವಿಧ ಭಾಗಗಳ ಮಾಹಿತಿಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಹೀಗೆ ಪಡೆದುಕೊಂಡ ಮಾಹಿತಿಯನ್ನು ಒಗ್ಗೂಡಿಸಿ, ತಕ್ಕ ಎಚ್ಚರಿಕೆ ಸಂದೇಶವನ್ನು ಕರಾಚಿ ಮತ್ತು ಮುಂಬೈನ ಕರಾವಳಿ ರೇಡಿಯೊ ಕೇಂದ್ರಗಳ ಮೂಲಕ ಪ್ರಚಾರ ಮಾಡಲಾಯಿತು

* 1929: ತಂತುರಹಿತ ಹವಾಮಾನ ಮುನ್ಸೂಚನೆ ಸಂದೇಶಗಳ ರವಾನೆ ಆರಂಭವಾಯಿತು

1936: ಆಲ್‌ ಇಂಡಿಯಾ ರೇಡಿಯೊ ಮೂಲಕ
ಪ್ರಥಮ ಬಾರಿಗೆ ಹವಾಮಾನ ಮುನ್ಸೂಚನೆ ವಾರ್ತೆಯನ್ನು ನೀಡಲು ಆರಂಭಿಸಲಾಯಿತು

* 1945: ಪ್ರಾದೇಶಿಕ ಹವಾಮಾನ ಇಲಾಖೆ ಕೇಂದ್ರಗಳ ಮೂಲಕ ಮೊದಲ ಬಾರಿಗೆ ರೈತರಿಗಾಗಿಯೇ ಹವಾಮಾನ ಮುನ್ಸೂಚನೆಯನ್ನು ನೀಡಲಾಯಿತು

* 1963: ಅಮೆರಿಕದ ಉಪಗ್ರಹಗಳ ಮೂಲಕ ಚಿತ್ರಗಳನ್ನು ಪಡೆದುಕೊಂಡು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆಗಳನ್ನು ನೀಡಲು ಶುರುಮಾಡಿತು. ಇದೇ ವರ್ಷದಲ್ಲಿ ಪ್ರವಾಹದ ಮುನ್ನೂಚನೆ ಪಡೆದುಕೊಳ್ಳಲು ಚಂಡಮಾರುತ ವಿಶ್ಲೇಷಣಾ ಘಟಕ ಸ್ಥಾಪನೆಯಾಯಿತು

* 1970: ಚಂಡಮಾರುತ ಪತ್ತೆ ರೇಡಾರ್‌ ಅನ್ನು ವಿಶಾಕಪಟ್ಟಣದಲ್ಲಿ ಸ್ಥಾಪಿಸಲಾಯಿತು

* 1972: ಚಂಡಮಾರುತ ಎಚ್ಚರಿಕೆ ಸಂಶೋಧನೆ
ಕೇಂದ್ರದ ಸ್ಥಾಪನೆ

* 1989: ಪ್ರವಾಹ, ಬರ, ಮಳೆ ಸೇರಿದಂತೆ ವಿವಿಧ ಹವಾಮಾನ ಸಂಬಂಧಿತ ಮುನ್ಸೂಚನೆಗಳನ್ನು ನೀಡುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಮಳೆ ಕುರಿತ ಮುನ್ನೂಚನೆ ನೀಡುವ ಕಾರ್ಯವನ್ನು ಆರಂಭಿಸಲಾಯಿತು

* 2000: ವಿಸ್ಯಾಟ್‌ ದತ್ತಾಂಶ ವಿನಿಮಯ ಕೇಂದ್ರ ವ್ಯವಸ್ಥೆಯ ಮೂಲಕ ಸಂವಹನ ಆರಂಭಿಸಲಾಯಿತು


ಇಲಾಖೆಯ ಹೆಚ್ಚುಗಾರಿಕೆ

* ಇನ್‌ಸ್ಯಾಟ್‌ ಉಪಗ್ರಹವು 3ಡಿ ಹಾಗೂ 3ಡಿಆರ್‌ ರೂಪದ ಚಿತ್ರಗಳನ್ನು ಪತ್ರಿ 15 ನಿಮಿಷಗಳಿಗೊಮ್ಮೆ ನೀಡುತ್ತಿದೆ

* ಉಪಗ್ರಹದಿಂದ ಪಡೆದುಕೊಂಡ ಮಾಹಿತಿಗಳನ್ನು ವಿಶ್ಲೇಷಿಸಿ, ಪ್ರತಿಕೂಲ ಹವಾಮಾನ ಕುರಿತು ತ್ವರಿತವಾಗಿ ಮುನ್ನೆಚ್ಚರಿಕೆ ನೀಡುವ ಸಾಮರ್ಥ್ಯ

* ಚಂಡಮಾರುತದ ಸ್ವರೂಪವನ್ನು ಪ್ರತಿ ಆರು ನಿಮಿಷದಲ್ಲಿ ತಿಳಿದುಕೊಳ್ಳುವ ಕಾರ್ಯವನ್ನು ಇಲಾಖೆಯು ಮಾಡುತ್ತಿದೆ 

l ಎಲ್ಲ ರೀತಿಯ ಪ್ರತಿಕೂಲ ಹವಾಮಾನವನ್ನು ಹೆಚ್ಚು ನಿಖರವಾಗಿ ಪತ್ತೆಹಚ್ಚುವ ಸಾಮರ್ಥ್ಯವು ಅಧಿಕಗೊಂಡಿದೆ. 2014ಕ್ಕೆ ಹೋಲಿಸಿದರೆ, ಈ ಸಾಮರ್ಥ್ಯ
ಶೇ 50ರಷ್ಟು ಹೆಚ್ಚಾಗಿದೆ

* ಚಂಡಮಾರುತವು ಯಾವ ಪ್ರದೇಶಕ್ಕೆ ಬಂದು ಅಪ್ಪಳಿಸಲಿದೆ ಎನ್ನುವ ನಿಖರ ಮುನ್ಸೂಚನೆಯನ್ನು ಇಲಾಖೆ ನೀಡುತ್ತಿದೆ. ಹೆಚ್ಚಿನ ಪ್ರಕರಣಗಳಲ್ಲಿ ಈ ಮುನ್ಸೂಚನೆಯ ಮಾಹಿತಿಯು ತಪ್ಪಾಗಿಲ್ಲ

* ಮಳೆ ಮುನ್ಸೂಚನೆಯನ್ನು 24 ಗಂಟೆಗಳ ಮೊದಲು ನೀಡಲಾಗುತ್ತಿದೆ. ಮುನ್ಸೂಚನೆಯ ನಿಖರತೆಯು ಶೇ 80ರಷ್ಟಿದೆ

* 2023ರಲ್ಲಿ ಬಿಸಿಗಾಳಿ ನಿರ್ವಹಣಾ ಯೋಜನೆಯು ಜಾರಿಯಾಯಿತು.
ಈ ಯೋಜನೆ ಅಡಿಯಲ್ಲಿ ಇಲಾಖೆಯು ಆರೋಗ್ಯ ಕ್ಷೇತ್ರಕ್ಕೂ ಸಹಾಯ ಮಾಡಲು ಆರಂಭಿಸಿತು. ಬಿಸಿಗಾಳಿ ಕುರಿತು ಮುನ್ಸೂಚನೆಯನ್ನು ಇಲಾಖೆಯು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲು ಪ್ರಾರಂಭಿಸಿತು. ಮಲೇರಿಯಾ ಹಾಗೂ ಡೆಂಘಿ ಕಾಯಿಲೆಗಳ ಬಗ್ಗೆಯೂ ಇಲಾಖೆಯು
ಮಾರ್ಗದರ್ಶನಗಳನ್ನು ನೀಡುತ್ತಿದೆ

* ಗ್ರಾಮ ಮಟ್ಟದಲ್ಲಿಯೂ ಹವಾಮಾನ ಮುನ್ಸೂಚನೆಗಳನ್ನು ನೀಡುವ ಯೋಜನೆ ‘ಮೌಸಂ ಗ್ರಾಮ್‌’ ಅನ್ನು ಇಲಾಖೆ ಆರಂಭಿಸಿದೆ

ಆಧಾರ: ಭಾರತೀಯ ಹವಾಮಾನ ಇಲಾಖೆಯ ವರದಿಗಳು, ಪಿಟಿಐ, ವಿವಿಧ ವರ್ಷಗಳ ಬಜೆಟ್‌ ವರದಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT