ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ | ಆಂಧ್ರ ರಾಜಕೀಯ ಲೆಕ್ಕಾಚಾರ ಬದಲು
ಆಳ ಅಗಲ | ಆಂಧ್ರ ರಾಜಕೀಯ ಲೆಕ್ಕಾಚಾರ ಬದಲು
Published 13 ಮಾರ್ಚ್ 2024, 0:06 IST
Last Updated 13 ಮಾರ್ಚ್ 2024, 0:06 IST
ಅಕ್ಷರ ಗಾತ್ರ

ಅವಿಭಜಿತ ಆಂಧ್ರ ಪ್ರದೇಶದ ರಾಜಕಾರಣದ ಲೆಕ್ಕಾಚಾರಗಳೇ ಬೇರೆ. ಈಗಿನ ಆಂಧ್ರ ಪ್ರದೇಶದ ಲೆಕ್ಕಾಚಾರಗಳೇ ಬೇರೆ. ಆಂಧ್ರ ಪ್ರದೇಶದ ಜನರು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳನ್ನು ದೂರ ಇಟ್ಟಿದ್ದಾರೆ. ಆಂಧ್ರದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ರಾಜ್ಯವನ್ನು ವಿಭಜಿಸಿ ತೆಲಂಗಾಣವನ್ನು ರೂಪಿಸಲಾಗಿದೆ ಎಂದು ಕಾಂಗ್ರೆಸ್‌ನೊಂದಿಗೆ ಜನರಿಗೆ ಮುನಿಸು; ರಾಜ್ಯಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಲಿಲ್ಲ ಎನ್ನುವ ಕಾರಣಕ್ಕೆ ಬಿಜೆಪಿಯೊಂದಿಗೂ ಮುನಿಸು. ಈಗಿನ ರಾಜ್ಯದ ರಾಜಕಾರಣದಲ್ಲಿ ಎಲ್ಲಿಯೂ ರಾಷ್ಟ್ರೀಯ ಪಕ್ಷಗಳು ಜನರ ಲೆಕ್ಕಾಚಾರದಲ್ಲಿ ಇಲ್ಲವೇ ಇಲ್ಲ. ಆದರೆ, ರಾಜ್ಯದ ಪ್ರಾದೇಶಿಕ ಪಕ್ಷಗಳು ಮಾತ್ರ ಬಿಜೆಪಿಯೊಂದಿಗಿನ ಮೈತ್ರಿಗೆ, ಸ್ನೇಹಕ್ಕೆ ಹಾತೊರೆಯುತ್ತಿವೆ.

ಬಿಜೆಪಿಗೆ ರಾಜ್ಯದಲ್ಲಿ ಸ್ವತಂತ್ರ ಅಸ್ತಿತ್ವ ಇಲ್ಲ. ಆದ್ದರಿಂದಲೇ ಬಿಜೆಪಿಗೆ ಅಸ್ತಿತ್ವ ಕಂಡುಕೊಳ್ಳುವ ತವಕ.  ಕಾಂಗ್ರೆಸ್‌ನ ಅಸ್ತಿತ್ವ ಕುಸಿದು ಬಿದ್ದಿದೆ. ಆದ್ದರಿಂದಲೇ ಕಾಂಗ್ರೆಸ್‌ಗೆ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳುವ ಹಂಬಲ. 

ಬಿಜೆಪಿಗೆ, ತನ್ನ ಅಸ್ತಿತ್ವ ಕಂಡುಕೊಳ್ಳಲು ಪ್ರಾದೇಶಿಕ ಪಕ್ಷಗಳ ಸಹಾಯ ಬೇಕೇಬೇಕು. ಇದೇ ಕಾರಣಕ್ಕೆ ಒಮ್ಮೆ ತೆಲಗುದೇಶಂ (ಟಿಡಿಪಿ) ಪಕ್ಷದೊಂದಿಗೆ, ಇನ್ನೊಮ್ಮೆ ಈಗ ಆಡಳಿತದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದೆ. ಇಷ್ಟಾದರೂ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವ ಕಂಡುಕೊಂಡಿಲ್ಲ.

ಬದಲಾದ ಮೈತ್ರಿ ಲೆಕ್ಕಾಚಾರ: ಯಾವುದೇ ಪ್ರಾದೇಶಿಕ ಪಕ್ಷಕ್ಕೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದೊಂದಿಗೆ ಸ್ನೇಹ ಸಂಬಂಧ ಇರಿಸಿಕೊಳ್ಳುವುದು ಹೆಚ್ಚು ಲಾಭದಾಯಕವಾಗಿರುತ್ತದೆ. ಇದೇ ಕಾರಣಕ್ಕೆ ಟಿಡಿಪಿಯಾಗಲಿ, ವೈಎಸ್‌ಆರ್‌ ಕಾಂಗ್ರೆಸ್‌ ಆಗಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದೊಂದಿಗೆ ಸ್ನೇಹದಲ್ಲಿಯೇ ಇವೆ.

‘ರಾಜಕೀಯ ಲಾಭಕ್ಕಾಗಿ ಇಲ್ಲಿನ ಪ್ರಾದೇಶಿಕ ಪಕ್ಷಗಳು ಬಿಜೆಪಿಯೊಂದಿಗೆ ಮೈತ್ರಿಗೆ ಹವಣಿಸುತ್ತಿಲ್ಲ. ಬದಲಿಗೆ ಆ ಪಕ್ಷಗಳ ನಾಯಕರ ವೈಯಕ್ತಿಕ ಕಾರಣಕ್ಕಾಗಿ ಬಿಜೆಪಿಯೊಂದಿಗಿನ ಮೈತ್ರಿ ಬೇಕಾಗಿದೆ’ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಚಂದ್ರಬಾಬು ನಾಯ್ದು ಅವರ ಮೇಲೆ ಹಲವು ಪ್ರಕರಣಗಳಿವೆ. ವೈ.ಎಸ್. ಜಗನ್‌ಮೋಹನ್‌ ರೆಡ್ಡಿ ಅವರ ಮೇಲೆ ಕೂಡ ಹಣ ಅಕ್ರಮ ವರ್ಗಾವಣೆ ಸೇರಿದಂತೆ ಹಲವು ಪ್ರಕರಣಗಳಿವೆ. ಈ ಪ್ರಕರಣಗಳ ತನಿಖೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಜಗನ್‌ ಹಾಗೂ ನಾಯ್ಡು ಅವರು ಅವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುತ್ತಾರೆ ವಿಶ್ಲೇಷಕರು.

ಇನ್ನು ಬಿಜೆಪಿಗೆ ಸಹ ಈ ಪ್ರಾದೇಶಿಕ ಪಕ್ಷಗಳೊಂದಿಗೆ ಸ್ನೇಹ ಸಂಬಂಧದಲ್ಲಿರುವುದು ರಾಜಕೀಯವಾಗಿ ಲಾಭದಾಯಕವಾದುದೇ. ಪ್ರಾದೇಶಿಕ ಪಕ್ಷಗಳ ಹೆಸರಲ್ಲಿ ಕೆಲವು ಸ್ಥಾನ ಗೆಲ್ಲುವ ಅನಿವಾರ್ಯ ಬಿಜೆಪಿಗೆ. ಇದೇ ಕಾರಣಕ್ಕೆ ಟಿಡಿಪಿ ಹೆಸರನ್ನು ಬಳಸಿಕೊಂಡು ಕೆಲವು ಸ್ಥಾನಗಳನ್ನಾದರೂ ಗೆಲ್ಲುವ ವಿಶ್ವಾಸಲ್ಲಿ ಬಿಜೆಪಿ ಇದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.

2014ರಿಂದ 2018ವರೆಗೆ ಟಿಡಿಪಿ ನೇತೃತ್ವದ ಸರ್ಕಾರದಲ್ಲಿ ಬಿಜೆಪಿಯೂ ಭಾಗವಾಗಿತ್ತು. ಆದರೆ, ಆಂಧ್ರ ಪ್ರದೇಶಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡಲಿಲ್ಲ ಎನ್ನುವ ಕಾರಣಕ್ಕೆ ಚಂದ್ರಬಾಬು ನಾಯ್ಡು ಅವರು ಎನ್‌ಡಿಯಿಂದ ಹೊರಬಂದಿದ್ದರು. ಟಿಡಿಪಿ ಹಾಗೂ ಬಿಜೆಪಿಯು ಮೈತ್ರಿಯಲ್ಲಿದ್ದ ಕಾಲದಲ್ಲಿ ಬಿಜೆಪಿಗೆ ಲಾಭವೇ ಆಗಿತ್ತು. ಮೈತ್ರಿಯಿಂದ ಹೊರಬಂದ ಮೇಲೆ ಬಿಜೆಪಿಗೆ ಹೊಡೆತವೇ ಬಿದ್ದಿದೆ. 2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಶೇ 2.20ರಷ್ಟು ಮತ ಪಡೆದುಕೊಂಡಿತ್ತು. 2019ರ ವಿಧಾನಸಭಾ ಚುನಾವಣೆ ಹೊತ್ತಿಗೆ ಈ ಪ್ರಮಾಣ ಶೇ 0.84ರಷ್ಟಕ್ಕೆ ಇಳಿಯಿತು.

ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಬಿಜೆಪಿಯು ಮೈತ್ರಿ ಮಾಡಿಕೊಂಡಿಲ್ಲ. ಆದರೆ, ಜಗನ್‌ ಮಾತ್ರ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವು ಭಾರಿ ಗೆಲುವು ಸಾಧಿಸಿತ್ತು. ಆದರೆ, 2024ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಸೋಲುವ ಭೀತಿ ಎದುರಿಸುತ್ತಿದೆ ಹಾಗೂ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯು ಜಗನ್‌ ಅವರನ್ನು ದೂರಮಾಡಿದೆ ಎನ್ನಲಾಗುತ್ತಿದೆ.

ಆಂಧ್ರದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗಷ್ಟೇ ಭೇಟಿಯಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಬಿಜೆಪಿಯು ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು

ಆಂಧ್ರದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗಷ್ಟೇ ಭೇಟಿಯಾಗಿದ್ದರು. ಇದಾದ ಕೆಲ ದಿನಗಳ ಬಳಿಕ ಬಿಜೆಪಿಯು ಟಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು

–ಪಿಟಿಐ ಚಿತ್ರ

ಕಾಂಗ್ರೆಸ್‌ಗೆ ಶರ್ಮಿಳಾ ಆಸರೆ

ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳಲು, ಹೊಸ ಹೊಸ ಲೆಕ್ಕಾಚಾರಗಳೊಂದಿಗೆ ಚುನಾವಣೆಗೆ ಸಿದ್ಧವಾಗಿದೆ. ಅಣ್ಣ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿಯೊಂದಿಗೆ ಮುನಿಸಿಕೊಂಡು ತೆಲಂಗಾಣಕ್ಕೆ ಹೋಗಿ ಪಕ್ಷ ಕಟ್ಟಿದ್ದ ವೈ.ಎಸ್‌. ಶರ್ಮಿಳಾ ಅವರನ್ನು ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ತೆಲಂಗಾಣದ ರಾಜಕೀಯದಿಂದ ಬಿಡಿಸಿ, ಆಂಧ್ರದ ರಾಜಕಾರಣಕ್ಕೆ ಶರ್ಮಿಳಾ ಅವರನ್ನು ಎಳೆದುತಂದಿದೆ.

ಬಿಆರ್‌ಎಸ್‌ ಪಕ್ಷದ ವಿರುದ್ಧ, ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರ ಆಡಳಿತದ ವಿರುದ್ಧ ಶರ್ಮಿಳಾ ಅವರು ಬೀದಿಗಿಳಿದಿದ್ದರು. ಪಾದಯಾತ್ರೆಗಳನ್ನು ಕೈಗೊಂಡು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಈಗ ಕಾಂಗ್ರೆಸ್‌ನ ಆಂಧ್ರ ಪ್ರದೇಶದ ಘಟಕದ ಅಧ್ಯಕ್ಷೆಯಾಗಿ ಜಗನ್‌ ಅವರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಪ್ರತಿಭಟನೆಯಲ್ಲಿ ಹೆಚ್ಚು ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಅಧ್ಯಕ್ಷೆಯಾದ ಬಳಿಕ, ರಾಜ್ಯವನ್ನೆಲ್ಲಾ ಸುತ್ತಾಡಿದ್ದಾರೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಶರ್ಮಿಳಾ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಈಗಾಗಲೇ ಹೇಳಿದ್ದಾರೆ.

‘ವೈ.ಎಸ್‌’ ಎಂಬ ಕುಟುಂಬದ ಹೆಸರು ಬಳಸಿಕೊಂಡು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನವನ್ನು ಶರ್ಮಿಳಾ ನಡೆಸುತ್ತಿದ್ದಾರೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಆರೋಪಿಸಿದೆ. ಅದೇನೆ ಇದ್ದರೂ, ಅವಿಭಜಿತ ಆಂಧ್ರ ಪ್ರದೇಶದ ಜನಪ್ರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ದಿವಂಗತ ರಾಜಶೇಖರ ರೆಡ್ಡಿ ಅವರ ಮಗಳು ಶರ್ಮಿಳಾ ಅವರನ್ನು ಬಳಸಿಕೊಂಡು ಕಾಂಗ್ರೆಸ್‌ ಪಕ್ಷವು ಆಂಧ್ರ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ಮರಳಿ ಪಡೆದುಕೊಳ್ಳುವ ಯತ್ನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT