ಬುಧವಾರ, 22 ಅಕ್ಟೋಬರ್ 2025
×
ADVERTISEMENT
ಆಳ–ಅಗಲ | ಬಿಹಾರ ಚುನಾವಣೆ: ಮೈತ್ರಿ ರಾಜಕಾರಣದ ದಿಕ್ಸೂಚಿ?
ಆಳ–ಅಗಲ | ಬಿಹಾರ ಚುನಾವಣೆ: ಮೈತ್ರಿ ರಾಜಕಾರಣದ ದಿಕ್ಸೂಚಿ?
ಫಾಲೋ ಮಾಡಿ
Published 21 ಅಕ್ಟೋಬರ್ 2025, 23:30 IST
Last Updated 21 ಅಕ್ಟೋಬರ್ 2025, 23:30 IST
Comments
ಜನಸಂಖ್ಯೆಯ ದೃಷ್ಟಿಯಿಂದ ಮತ್ತು ರಾಜಕೀಯ ಪ್ರಾಬಲ್ಯದ ದೃಷ್ಟಿಯಿಂದ ಮಹತ್ವ ಪಡೆದಿರುವ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ಅಧಿಕಾರ ಹಿಡಿಯಲು ಎನ್‌ಡಿಎ ಮತ್ತು ‘ಇಂಡಿಯಾ’ ಕೂಟಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಎನ್‌ಡಿಎ ಕೂಟದಲ್ಲಿ ಬಿಜೆಪಿ ಮತ್ತು ಜೆಡಿಯು ಸಮಾನ ಸಂಖ್ಯೆಯ ಕ್ಷೇತ್ರಗಳಲ್ಲಿ ಕಣಕ್ಕಿಳಿದಿವೆ. ನಿತೀಶ್‌ಕುಮಾರ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಬಿಜೆಪಿ ಲೆಕ್ಕಾಚಾರದಿಂದ ಅಡಿ ಇಡುತ್ತಿದೆ. ‘ಇಂಡಿಯಾ’ದಲ್ಲಿ ಆರ್‌ಜೆಡಿ ಪ್ರಮುಖ ಪಕ್ಷವಾಗಿದೆ. ಮಿತ್ರಪಕ್ಷಗಳ ನಡುವಿನ ಹೊಂದಾಣಿಕೆ ಮತ್ತು ಸ್ಥಾನಹಂಚಿಕೆಯ ಕಸರತ್ತು ‘ಇಂಡಿಯಾ’ ಕೂಟಕ್ಕೆ ತೊಡಕಾಗಬಹುದು ಎನ್ನಲಾಗುತ್ತಿದೆ
ಮುಖ್ಯಮಂತ್ರಿ ಯಾರು?:
ತಮ್ಮ ಮೈತ್ರಿಕೂಟ ಗೆದ್ದರೆ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವ ವಿಚಾರವು ಚುನಾವಣಾಪೂರ್ವದಲ್ಲೇ ಎನ್‌ಡಿಎಗೆ ತೊಡಕಾಗಿದೆ. ಸುಮಾರು 19 ವರ್ಷ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿರುವ ನಿತೀಶ್ ಅವರಿಗೆ ವಯಸ್ಸಾಗಿದೆ. ಆದರೆ, ಅವರ ರಾಜಕೀಯ ಮಹತ್ವಾಕಾಂಕ್ಷೆ ಕಡಿಮೆಯಾಗಿಲ್ಲ. ನಿತೀಶ್ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಗೆದ್ದ ನಂತರ ಮಿತ್ರಪಕ್ಷಗಳು ತೀರ್ಮಾನಿಸುತ್ತವೆ ಎಂದು ಅಮಿತ್ ಶಾ ಹೇಳಿರುವುದು ನಿತೀಶ್ ಅವರ ಆಸೆ ಈಡೇರುವುದು ಅಷ್ಟು ಸುಲಭವಿಲ್ಲ ಎನ್ನುವುದನ್ನು ತೋರಿಸುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಅವರು ಎದುರಿಸುತ್ತಿದ್ದಾರೆ. ಆದರೆ, ಬಿಹಾರದಲ್ಲಿ ಜಾತಿ ಗಣತಿ ನಡೆಸಿರುವ, ಅದಕ್ಕೂ ಹಿಂದೆಯೇ ಅತಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಿರುವ ನಿತೀಶ್ ಅವರು ಅತಿ ಹಿಂದುಳಿದ ಜಾತಿಗಳಲ್ಲಿ ಜನಪ್ರಿಯತೆಯನ್ನು ‍ಪಡೆದಿದ್ದಾರೆ. 2013ರಿಂದ ನಾಲ್ಕು ಬಾರಿ ಮಿತ್ರಕೂಟಗಳನ್ನು ಬದಲಿಸಿರುವ ನಿತೀಶ್ ಅವರನ್ನು ನಿಭಾಯಿಸುವುದು ಬಿಜೆಪಿಗೆ ಸವಾಲಾಗಿದೆ.
‘ಇಂಡಿಯಾ’ದಲ್ಲಿ ಹಲವು ಸಮಸ್ಯೆ:
ಇಂಡಿಯಾ ಕೂಟದಲ್ಲಿ ಪ್ರಬಲ ಪಕ್ಷವಾಗಿರುವ ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ 143 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಳೆದ ಬಾರಿಯ ಕಳ‍ಪೆ ಸಾಧನೆ ನಡುವೆಯೂ ಕಾಂಗ್ರೆಸ್‌ಗೆ 61 ಸ್ಥಾನಗಳನ್ನು ಬಿಟ್ಟುಕೊಡಲಾಗಿದೆ. ಸಿಪಿಐ ಎಂಎಲ್, ಸಿಪಿಎಂ, ಸಿಪಿಐ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಕಳೆದ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿದ್ದ ವಿಕಾಸಶೀಲ ಇನ್‌ಸಾನ್ ಪಾರ್ಟಿ (ವಿಐಪಿ) 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ, ಸ್ಥಾನ ಹೊಂದಾಣಿಕೆಯಲ್ಲಿ ಇಂಡಿಯಾ ಕೂಟವು ಎಡವಿದ್ದು, ಕೆಲವು ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳೇ ಪರಸ್ಪರರ ವಿರುದ್ಧ ಸ್ಪರ್ಧಿಸಿವೆ. ಇದರಿಂದ ಆರ್‌ಜೆಡಿ ಮತ್ತು ಎಡಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿ ನಡೆಸುವಂತಾಗಿದೆ. ಕಳೆದ ಚುನಾವಣೆಯಲ್ಲಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಐದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಎಐಎಂಐಎಂ (ನಂತರ ನಾಲ್ವರು ಆರ್‌ಜೆಡಿ ಸೇರಿದ್ದರು) ಈ ಬಾರಿ ಇಂಡಿಯಾ ಕೂಟದ ಭಾಗವಾಗಲು ಪ್ರಯತ್ನಿಸಿತ್ತು. ಆದರೆ, ಅದು ಸಾಧ್ಯವಾಗದೇ ಸ್ವತಂತ್ರವಾಗಿ 25 ಕ್ಷೇತ್ರಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ. ಅಭ್ಯರ್ಥಿಗಳ ಪೈಕಿ ಇಬ್ಬರು ಹಿಂದೂಗಳು ಎಂಬುದು ಗಮನಾರ್ಹ.
ಎಸ್‌ಐಆರ್‌, ಮತಕಳವು ವಿವಾದ
ಚುನಾವಣೆ ದಿನಾಂಕ ಘೋಷಣೆಯಾಗುವುದಕ್ಕೂ ಮೊದಲು ಚುನಾವಣಾ ಆಯೋಗವು ಬಿಹಾರದಲ್ಲಿ ಕೈಗೊಂಡ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ವಿವಾದ ಹುಟ್ಟುಹಾಕಿತ್ತು. ಇದರ ಜೊತೆಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಾಡಿದ್ದ ಮತ ಕಳವು ಆರೋಪ ಕೂಡ ತೀವ್ರ ಚರ್ಚೆಗೆ ಕಾರಣವಾಗಿತ್ತು. ಎಸ್‌ಐಆರ್‌ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ. ಚುನಾವಣೆಯ ಬಿಸಿಯ ನಡುವೆ ಮತ ಕಳವು ವಿಷಯ ಹೆಚ್ಚು ಚರ್ಚೆಗೆ ಬರುತ್ತಿಲ್ಲ. ಈ ಎರಡು ವಿಚಾರಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT