ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಚುನಾವಣಾ ಆಯುಕ್ತರ ನೇಮಕಾತಿಗೆ ಮಸೂದೆ: ಕೇಂದ್ರಕ್ಕೇ ಪರಮಾಧಿಕಾರ
ಆಳ–ಅಗಲ | ಚುನಾವಣಾ ಆಯುಕ್ತರ ನೇಮಕಾತಿಗೆ ಮಸೂದೆ: ಕೇಂದ್ರಕ್ಕೇ ಪರಮಾಧಿಕಾರ
Published 10 ಆಗಸ್ಟ್ 2023, 23:30 IST
Last Updated 10 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿಗೆ ಕಾನೂನಿನ ಚೌಕಟ್ಟು ರೂಪಿಸಲು ಮುಂದಾಗಿರುವ ಕೇಂದ್ರ ಸರ್ಕಾರವು, ಹೊಸದಾಗಿ ಮಸೂದೆಯೊಂದನ್ನು ಸಿದ್ಧಪಡಿಸಿದೆ. ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಕೇಂದ್ರ ಸರ್ಕಾರಕ್ಕೇ ಪರಮಾಧಿಕಾರ ನೀಡುವ ರೀತಿಯಲ್ಲಿ ಈ ಮಸೂದೆ ಇದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರು (ನೇಮಕಾತಿ, ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಮಸೂದೆ–2023 ಅನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಭಾರತ ಸಂವಿಧಾನದ 324ನೇ ವಿಧಿ ಮತ್ತು ಉಪವಿಧಿಗಳ ಅಡಿಯಲ್ಲಿ ಚುನಾವಣಾ ಆಯೋಗದ ರಚನೆ, ಚುನಾವಣಾ ಆಯುಕ್ತರ ನೇಮಕಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಆಯುಕ್ತರ ನೇಮಕಕ್ಕಾಗಿ ಈವರೆಗೆ ಯಾವುದೇ ಕಾನೂನು–ನಿಯಮಗಳನ್ನು ರೂಪಿಸಿಲ್ಲ. 1991ರ ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಕರ್ತವ್ಯದ ನಿಬಂಧನೆಗಳು ಮತ್ತು ಅಧಿಕಾರಾವಧಿ) ಕಾಯ್ದೆಯ ಅಡಿಯಲ್ಲಿ ಜ್ಯೇಷ್ಠತೆ ಆಧಾರದಲ್ಲಿ ಚುನಾವಣಾ ಆಯುಕ್ತರನ್ನು ನೇಮಕ ಮಾಡಲಾಗುತ್ತಿತ್ತು. ಆ ಕಾಯ್ದೆಯು ಕರ್ತವ್ಯದ ನಿಬಂಧನೆಗಳನ್ನು ವಿವರಿಸುತ್ತದೆಯೇ ಹೊರತು, ನೇಮಕಾತಿ ಹೇಗೆ ನಡೆಯಬೇಕು ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ.

ಚುನಾವಣಾ ಆಯುಕ್ತರನ್ನು ಹೇಗೆ ನೇಮಕ ಮಾಡಬೇಕು ಎಂಬುದನ್ನು ವಿವರಿಸುವ ಯಾವುದೇ ಸ್ಥಾಪಿತ ಕಾನೂನು ಇಲ್ಲದಿದ್ದ ಕಾರಣ, ನೇಮಕಾತಿಗಳ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿತ್ತು. ಈ ಕಾರಣದಿಂದಲೇ 2022ರ ನವೆಂಬರ್‌ನಲ್ಲಿ ಅರುಣ್‌ ಗೋಯಲ್ ಅವರನ್ನು ಚುನಾವಣಾ ಆಯುಕ್ತರಾಗಿ ನೇಮಕ ಮಾಡಿದಾಗ, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ‘ಈ ಸಂಬಂಧ ಕಾನೂನು ರಚನೆಯಾಗುವವರೆಗೂ ಆಯ್ಕೆ ಸಮಿತಿಯು ಅಸ್ತಿತ್ವದಲ್ಲಿ ಇರಲಿದೆ ಮತ್ತು ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇರಬೇಕು ಎಂದು ಹೇಳಿತ್ತು. ಆ ಆದೇಶ ಹೊರಬಿದ್ದ ಹಲವು ತಿಂಗಳ ನಂತರ ಕೇಂದ್ರ ಸರ್ಕಾರವು ಈ ಮಸೂದೆಯನ್ನು ರೂಪಿಸಿದೆ. ಆದರೆ, ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟಿದೆ. ಬದಲಿಗೆ ಆ ಸ್ಥಾನಕ್ಕೆ ಸಚಿವರೊಬ್ಬರನ್ನು ಪ್ರಧಾನಿ ಶಿಫಾರಸು ಮಾಡಬಹುದು ಎಂದು ಸೇರಿಸಲಾಗಿದೆ. ಮಸೂದೆಯಲ್ಲಿ ಇರುವ ಹಲವು ಸೆಕ್ಷನ್‌ಗಳು ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರಗಳನ್ನು ನೀಡುತ್ತವೆ.

ಮುಖ್ಯ ನ್ಯಾಯಮೂರ್ತಿಗೆ ಕೊಕ್‌, ಪ್ರಧಾನಿಗೆ ಹೆಚ್ಚಿನ ಅಧಿಕಾರ

l ಈ ಸಮಿತಿಯು ಬಹುಮತದ ಆಧಾರದಲ್ಲಿ ಶಿಫಾರಸು ಮಾಡುತ್ತದೆ. ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಆಯ್ಕೆ ಸಮಿತಿಯಲ್ಲಿ ಸರ್ಕಾರದ ಪರವಾಗಿ ಪ್ರಧಾನಿ, ವಿರೋಧ ಪಕ್ಷಗಳ ಪರವಾಗಿ ವಿರೋಧ ಪಕ್ಷಗಳ ನಾಯಕ ಇರುತ್ತಿದ್ದರು. ಆಡಳಿತ ಮತ್ತು ವಿರೋಧ ಪಕ್ಷ ಎರಡಕ್ಕೂ ಸೇರದ ಮುಖ್ಯ ನ್ಯಾಯಮೂರ್ತಿಯೂ ಸಮಿತಿಯಲ್ಲಿ ಇರುತ್ತಿದ್ದರು. ಹೀಗಾಗಿ ಸಮಿತಿಯ ಶಿಫಾರಸು ಪಕ್ಷಾತೀತವಾಗುವ ಸಾಧ್ಯತೆ ಇತ್ತು

l ಈಗ ಸರ್ಕಾರ ತರಲು ಹೊರಟಿರುವ ಕಾನೂನಿನ ಪ್ರಕಾರ ಸಮಿತಿಯಲ್ಲಿ ಸರ್ಕಾರದ ಪರವಾಗಿ ಇಬ್ಬರು ಸದಸ್ಯರು ಇರಲು ಅವಕಾಶವಿದೆ. ವಿರೋಧ ಪಕ್ಷದ ಪರವಾಗಿ ಒಬ್ಬರಷ್ಟೇ ಇದ್ದು, ಸಮಿತಿಯ ನಿರ್ಧಾರವು ಸರ್ಕಾರದ ಪರವಾಗಿಯೇ ಆಗುವ ಸಾಧ್ಯತೆ ಹೆಚ್ಚು. ವಿರೋಧ ಪಕ್ಷದ ನಾಯಕನ ಅಭಿಪ್ರಾಯಕ್ಕೆ ಮನ್ನಣೆ ದೊರೆಯದೇ ಹೋಗುತ್ತದೆ

ಶೋಧ ಸಮಿತಿಯ ಶಿಫಾರಸು ತಿರಸ್ಕರಿಸುವ ಅಧಿಕಾರ ಆಯ್ಕೆ ಸಮಿತಿಗೆ

ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಗಾಗಿ ಐವರನ್ನು ಶಿಫಾರಸು ಮಾಡುವ ಅಧಿಕಾರವನ್ನು ಶೋಧ ಸಮಿತಿಗೆ ಈ ಮಸೂದೆ ನೀಡುತ್ತದೆ. ಮಸೂದೆಯ 6ನೇ ಸೆಕ್ಷನ್‌ನಲ್ಲಿ ಈ ಅಧಿಕಾರಗಳನ್ನು ವಿವರಿಸಲಾಗಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಇದಾಗಿದ್ದು, ಭಾರತ ಸರ್ಕಾರದ ಕಾರ್ಯದರ್ಶಿ ರ‍್ಯಾಂಕ್‌ನ ಇಬ್ಬರು ಅಧಿಕಾರಿಗಳು ಈ ಸಮಿತಿಯ ಸದ್ಯಸರಾಗಿರುತ್ತಾರೆ. 

ಚುನಾವಣಾ ಕರ್ತವ್ಯಗಳ ಬಗ್ಗೆ ಮತ್ತು ಚುನಾವಣೆಗಳನ್ನು ಆಯೋಜಿಸುವ ಬಗ್ಗೆ ಅರಿವು ಮತ್ತು ಅನುಭವ ಇರುವ ಐವರು ನಿವೃತ್ತ ಅಧಿಕಾರಿಗಳನ್ನು ಈ ಶೋಧ ಸಮಿತಿಯು ಶಿಫಾರಸು ಮಾಡುತ್ತದೆ. ಶೋಧ ಸಮಿತಿಯು ಶಿಫಾರಸು ಮಾಡಿದ ಹೆಸರುಗಳನ್ನು ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಪರಿಶೀಲಿಸುತ್ತದೆ. ಆ ಹೆಸರುಗಳಲ್ಲಿ ಸೂಕ್ತ ಎನಿಸಿದವರನ್ನು ಸಮಿತಿಯು ಆಯ್ಕೆ ಮಾಡುತ್ತದೆ.

ಆದರೆ, ಶೋಧ ಸಮಿತಿಗಿಂತಲೂ ಹೆಚ್ಚಿನ ಅಧಿಕಾರವನ್ನು ಈ ಮಸೂದೆಯ 8(2)ನೇ ಸೆಕ್ಷನ್‌ ಆಯ್ಕೆ ಸಮಿತಿಗೆ ನೀಡುತ್ತದೆ. ಶೋಧ ಸಮಿತಿ ಶಿಫಾರಸು ಮಾಡಿದ ವ್ಯಕ್ತಿಗಳನ್ನು ತಿರಸ್ಕರಿಸಿ, ಬೇರೆ ಯಾವುದೇ ವ್ಯಕ್ತಿಯನ್ನು ಚುನಾವಣಾ ಆಯುಕ್ತ ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿ ಎಂದು ಶಿಫಾರಸು ಮಾಡಬಹುದಾಗಿದೆ. ಶೋಧ ಸಮಿತಿಯ ಎಲ್ಲಾ ಅಧಿಕಾರ, ಶ್ರಮ ಮತ್ತು ಶಿಫಾರಸ್ಸಿಗೆ ಯಾವುದೇ ಮಾನ್ಯತೆ ಇಲ್ಲದಂತೆ ಮಾಡುವ ಅಧಿಕಾರವನ್ನು ಈ ಸೆಕ್ಷನ್‌, ಆಯ್ಕೆ ಸಮಿತಿಗೆ ನೀಡುತ್ತದೆ.

ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರ ಹುದ್ದೆಗೆ ಅರ್ಹತೆಗಳೇನು, ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆ ಏನು ಎಂಬುದನ್ನು ಈ ಮಸೂದೆಯಲ್ಲಿ ಸ್ಪಷ್ಟಪಡಿಸಿಲ್ಲ. ಬದಲಿಗೆ ‘ಇಂತಹ ಪ್ರಕ್ರಿಯೆಗಳನ್ನು ಆಯ್ಕೆ ಸಮಿತಿಯೇ ರೂಪಿಸಿಕೊಳ್ಳಬಹುದು’ ಎಂದು ಮಸೂದೆಯ 8(1)ನೇ ಸೆಕ್ಷನ್‌ನಲ್ಲಿ ಹೇಳಲಾಗಿದೆ. ಇದು ಸಹ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡುತ್ತದೆ.

ಪ್ರಧಾನಿ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಆಯುಕ್ತ ಬೇಕು

‘ಚುನಾವಣೆಯ ಪರಿಶುದ್ಧತೆ’ಯನ್ನು ಕಾಪಾಡಿಕೊಳ್ಳುವ ಸಲುವಾಗಿ, ಮುಖ್ಯ ಚುನಾವಣಾ ಆಯುಕ್ತರ ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸಮಿತಿ ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 2ರಂದು ತೀರ್ಪು ನೀಡಿತ್ತು. ನ್ಯಾಯಾಮೂರ್ತಿ ಕೆ.ಎಂ. ಜೋಸೆಫ್‌ ನೇತೃತ್ವದ ಐವರು ನ್ಯಾಯಾಮೂರ್ತಿಗಳ ಸಂವಿಧಾನ ಪೀಠ ಇಂಥ ದೂರಗಾಮಿ ಪರಿಣಾಮ ಹೊಂದಿರುವ ತೀರ್ಪು ನೀಡಿತ್ತು. 

‘ಚುನಾವಣೆಯಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ, ಅದು ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಡುತ್ತದೆ. ಹಲವು ವರ್ಷಗಳಿಂದ ಚುನಾವಣಾ ಪ್ರಕ್ರಿಯೆಯು ನಿರಂತರವಾಗಿ ದುರುಪಯೋಗ ಆಗುತ್ತಿತ್ತು, ಇದು ಪ್ರಜಾಪ್ರಭುತ್ವವನ್ನು ಸಮಾಧಿಯತ್ತ ಸಾಗಿಸುವ ದಾರಿಯಾಗಿದೆ’ ಎಂದೂ ಹೇಳಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಸಂವಿಧಾನ ಪೀಠವು ಹೇಳಿದ್ದ ಮಾತುಗಳಿವು...

l ಪ್ರಧಾನಿ ವಿರುದ್ಧ ದೂರು ಬಂದರೆ, ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತಹ ಮುಖ್ಯ ಚುನಾವಣಾ ಆಯುಕ್ತರ ಅಗತ್ಯವಿದೆ

l ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ಈಗ ಇರುವ ವ್ಯವಸ್ಥೆ ಅಡಿಯಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ‘ಹೌದಪ್ಪ’ ಅಧಿಕಾರಿಗಳನ್ನೇ ಆಯುಕ್ತರಾಗಿ ನೇಮಕ ಮಾಡುತ್ತವೆ. ಅಂತಹವರು ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆಯೇ? ಹೀಗಾಗಿ ಪ್ರಬಲ ಚುನಾವಣಾ ಆಯುಕ್ತರ ಅಗತ್ಯವಿದೆ

l ಪಕ್ಷಗಳು ಅವುಗಳ ಅಭ್ಯರ್ಥಿಗಳು ಮತ್ತು ಬಹುಮಟ್ಟಿಗೆ ಪ್ರಜಾಪ್ರಭುತ್ವದ ವಿಧಿಯು ಚುನಾವಣಾ ಆಯೋಗದ ಕೈಯಲ್ಲಿಯೇ ಇದೆ. ಆಯೋಗಕ್ಕೆ ನೆರವಾಗಲು ಹಲವು ಅಧಿಕಾರಿಗಳು ಇರಬಹುದು. ಆದರೆ, ಮುಖ್ಯವಾದ ನಿರ್ಧಾರಗಳನ್ನು ಆಯೋಗದ ಮುಖ್ಯಸ್ಥನ ಸ್ಥಾನದಲ್ಲಿ ಇರುವವರೇ ತೆಗೆದುಕೊಳ್ಳುತ್ತಾರೆ. ನಿರ್ಧಾರಗಳ ಹೊಣೆಗಾರಿಕೆಯು ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರದ್ದೇ ಆಗಿರುತ್ತದೆ

l ಕಾರ್ಯಾಂಗದ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಆಯೋಗವು ಮಣಿಯದೆಯೇ ಕೆಲಸ ಮಾಡಬೇಕು. ಪ್ರಜಾಪ್ರಭುತ್ವದ ನೆಲೆಗಟ್ಟೇ ಅಗಿರುವ ಚುನಾವಣೆಯನ್ನು ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸದೇ ಇದ್ದರೆ ಕಾನೂನುಸಮ್ಮತ ಆಳ್ವಿಕೆಯೇ ಸಾಧ್ಯವಾಗುವುದಿಲ್ಲ

l 2004ರ ನಂತರ ಯಾವ ಮುಖ್ಯ ಚುನಾವಣಾ ಆಯುಕ್ತರೂ ಆರು ವರ್ಷಗಳ ಪೂರ್ಣ ಅವಧಿಯವರೆಗೆ ಅಧಿಕಾರದಲ್ಲಿ ಇರಲಿಲ್ಲ. ಯುಪಿಎ ಅಧಿಕಾರದ 10 ವರ್ಷಗಳ ಅವಧಿಯಲ್ಲಿ ಆರು ಮಂದಿ ಮುಖ್ಯ ಚುನಾವಣಾ ಆಯುಕ್ತರು ಬದಲಾಗಿದ್ದಾರೆ. ಎನ್‌ಡಿಎ ಅವಧಿಯ ಎಂಟು ವರ್ಷಗಳಲ್ಲಿ ಎಂಟು ಮಂದಿ ಬದಲಾಗಿದ್ದಾರೆ

l ಅಧಿಕಾರದಲ್ಲಿರುವ ಎಲ್ಲಾ ಪಕ್ಷಗಳೂ ನಿವೃತ್ತಿ ಅಂಚಿನಲ್ಲಿರುವ, ಹೆಚ್ಚು ಅಧಿಕಾರದ ಅವಧಿ ದೊರೆಯದೇ ಇರುವವರನ್ನೇ ಈ ಹುದ್ದೆಗೆ ನೇಮಕ ಮಾಡಿವೆ

l ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್‌.ಶೇಷನ್‌ (1990ರ ಡಿಸೆಂಬರ್‌ನಿಂದ 1996ರ ಡಿಸೆಂಬರ್‌ವರೆಗೆ ಈ ಹುದ್ದೆಯಲ್ಲಿದ್ದರು) ಅವರಂತಹ ಪ್ರಬಲ ವ್ಯಕ್ತಿ ಈ ಹುದ್ದೆಗೆ ಬರಬೇಕು. ಸಮರ್ಥರ ಜತೆಗೆ ಪ್ರಬಲ ವ್ಯಕ್ತಿತ್ವ ಇರುವವರು ಮುಖ್ಯ ಚುನಾವಣಾ ಆಯುಕ್ತರಾಗುವ ಅಗತ್ಯವಿದೆ

l ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗುವವರು ರಾಜಕೀಯ ಪ್ರಭಾವಗಳಿಂದ ಹೊರತಾಗಿರಬೇಕು ಮತ್ತು ಸ್ವತಂತ್ರವಾಗಿರಬೇಕು. ಪ್ರಧಾನಿ ವಿರುದ್ಧ ಆರೋಪಗಳು ಬಂದರೆ, ಆಯೋಗವು ಕ್ರಮ ತೆಗೆದುಕೊಳ್ಳುವಂತಿರಬೇಕು. ಆದರೆ ಆಯೋಗವು ಯಾವುದೇ ಕ್ರಮ ತೆಗೆದುಕೊಳ್ಳದ ದುರ್ಬಲ ಸಂಸ್ಥೆಯಂತಿದೆ

‘ಆಯುಕ್ತರ ನೇಮಕ: ಯಾಕಿಷ್ಟು ಆತುರ?’

1985 ಬ್ಯಾಚ್‌ನ ಐಎಎಸ್‌ ಅಧಿಕಾರಿ ಅರುಣ್‌ ಗೋಯಲ್‌ ಅವರು 2022ರ ನವೆಂಬರ್‌ 18ರಂದು ಸ್ವಯಂ ನಿವೃತ್ತಿ ಪಡೆದಿದ್ದರು. ಮರು ದಿನವೇ
(ನ. 19) ಅರುಣ್‌ ಅವರು ಚನಾವಣಾ ಆಯುಕ್ತರಾಗಿ ನೇಮಕಗೊಳ್ಳುತ್ತಾರೆ. ಈ ಬಗ್ಗೆ ಅಂದು ನಡೆದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ತೀಕ್ಷ್ಮ ಪ್ರಶ್ನೆಗಳನ್ನು ಕೇಳಿತ್ತು.

‘24 ಗಂಟೆಗಳ ಒಳಗೆ ಮಿಂಚಿನ ವೇಗದಲ್ಲಿ ಕಡತಗಳು ವಿಲೇವಾರಿಯಾಗಿವೆ. ಮೇ ತಿಂಗಳಿನಿಂದಲೂ ಚುನಾವಣಾ ಆಯುಕ್ತರ ಹುದ್ದೆಯು ಖಾಲಿ ಇತ್ತು. ಸೂಪರ್‌ಫಾಸ್ಟ್‌ ರೀತಿಯಲ್ಲಿ, ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೆಲ್ಲಾ ಪ್ರಕ್ರಿಯೆ ನಡೆಸಲು ಕೇಂದ್ರ ಸರ್ಕಾರಕ್ಕೆ ಯಾವ ಕಾರಣ ಇತ್ತು’ ಎಂದು ಕೇಳಿತ್ತು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರ ಕಾರ್ಯಾವಧಿಯು 2025ರ ಫೆಬ್ರುವರಿಯಲ್ಲಿ ಮುಗಿಯಲಿದೆ. ರಾಜೀವ್‌ ಕುಮಾರ್‌ ನಂತರ ಅರುಣ್‌ ಗೋಯಲ್‌ ಅವರು ಮುಖ್ಯ ಚುನಾವಣಾ ಆಯುಕ್ತರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT