ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ – Shakti Scheme | ಉಚಿತ ಟಿಕೆಟ್‌: ಸ್ತ್ರೀಗೆ ಶಕ್ತಿ
ಆಳ ಅಗಲ – Shakti Scheme | ಉಚಿತ ಟಿಕೆಟ್‌: ಸ್ತ್ರೀಗೆ ಶಕ್ತಿ
Published 25 ಜೂನ್ 2023, 23:30 IST
Last Updated 25 ಜೂನ್ 2023, 23:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು ‘ಶಕ್ತಿ’ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಬಳಿಕ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಅಪಹಾಸ್ಯಕ್ಕೆ ಗುರಿ ಮಾಡುವ ವರದಿಗಳು, ಮೀಮ್ಸ್‌ಗಳು ದೊಡ್ಡಸಂಖ್ಯೆಯಲ್ಲಿ ಹರಿದಾಡುತ್ತಿವೆ. ಮಾಧ್ಯಮಗಳು ಇಂಥ ಸುದ್ದಿಗಳಿಗೆ ನೀಡುವ ತಲೆಬರಹ, ಸುದ್ದಿಯ ಆಶಯ ಎಲ್ಲವೂ ಮಹಿಳೆಯರನ್ನು ಅಪಹ್ಯಾಸ ಮಾಡುವಂತಿವೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ

‘ಬಡವರಿಗೆ ಊಟ ಕೊಡುತ್ತಾರೆ, ಬಡವರ ಬಸ್‌ ಚಾರ್ಚ್‌ ಕಮ್ಮಿ ಮಾಡಿದರು, ಕೂಲಿನಾಲಿ ಮಾಡುವ ಹೆಣ್ಣುಮಕ್ಕಳಿಗೆ ನಾಲ್ಕು ಕಾಸು ಕೊಡುತ್ತಾರೆ ಎಂದರೆ ಏನ್‌ ಸರ್‌ ಇಷ್ಟು ಬೊಬ್ಬೆ ಹೊಡೀತಾರೆ, ಅವಮಾನ ಮಾಡ್ತಾರೆ. ಬಸ್‌ ಚಾರ್ಚ್‌ದು ಕಾಸು ಉಳಿದರೆ ನಾವು ಏನು ಮಾಡ್ತೀವಿ ಸರ್‌, ಸಾಯಂಕಾಲ ಹೋಗುವಾಗ ಸೊಪ್ಪೋ, ಬೇಳೆಯೋ, ಅಡುಗೆ ಎಣ್ಣೆನೋ ತಕೊಂಡು ಹೋಗ್ತೀವಿ. ನಾವೇನಾದ್ರು ಬಾರ್‌ಗೆ ಹೋಗಿ ಸಾರಾಯಿ ಕುಡೀತೀವಾ? ನಾವು ಹಣೆನಲ್ಲಿ ಇಟ್ಟುಕೊಳ್ಳೊ ಬೊಟ್ಟಿಂದ ನಮ್ಮ ಅಮ್ಮನೊ, ಅಜ್ಜಿನೊ ಹಾಕೊ ಕಡ್ಡಿಪುಡಿವರೆಗೂ ನಾವು ಕೊಡುವ ತೆರಿಗೆ ಹಣವನ್ನೇ ಅಲ್ಲವೇ ನಮಗೆ ಕೊಡುತ್ತಿರುವುದು. ದೊಡ್ಡ ದೊಡ್ಡ ಶ್ರೀಮಂತರು ಭಾರತ ಬಿಟ್ಟು ಹೋದಾಗ ಯಾಕೆ ಯಾರು ಹೀಗೆ ಮಾತನಾಡಲಿಲ್ಲ?’

ರಾಜ್ಯ ಸರ್ಕಾರದ ಶಕ್ತಿ ಯೋಜನೆ ಬಗ್ಗೆ ಸುದ್ದಿವಾಹಿನಿಯ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ ಕೋಲಾರದ ಮಹಿಳೆಯೊಬ್ಬರು ಪ್ರತಿಕ್ರಿಯೆ ನೀಡಿದ ಬಗೆ ಇದು.

ಜಗತ್ತಿನ ಪ್ರತಿಷ್ಠಿತ ಹಲವು ವಿಶ್ವವಿದ್ಯಾಲಯಗಳು, ವಿಶ್ವ ಬ್ಯಾಂಕ್‌ ಸೇರಿದಂತೆ ಹಲವಾರು ಸಂಸ್ಥೆಗಳು ‘ಸಾರ್ವಜನಿಕ ಸಾರಿಗೆ ಮತ್ತು ಬಡತನ’ ಎನ್ನುವ ವಿಷಯದ ಕುರಿತು ಹಲವು ಸಂಶೋಧನೆ, ಪ್ರಬಂಧ ಲೇಖನಗಳನ್ನು ಪ್ರಕಟಿಸಿವೆ. ಸಾರ್ವಜನಿಕ ಸಾರಿಗೆಯ ಲಭ್ಯತೆ ಮತ್ತು ಅವುಗಳ ಕಡಿಮೆ ಪ್ರಯಾಣ ದರಗಳು ಹೇಗೆ ದೇಶಗಳ ಆರ್ಥಿಕತೆಗೆ ವೇಗ ನೀಡುತ್ತವೆ ಎನ್ನುವ ಕುರಿತು ಹಲವು ಆಯಾಮಗಳಲ್ಲಿ ಚರ್ಚೆ ನಡೆಸಿವೆ. ಜೊತೆಗೆ, ಇಂಥ ಕ್ರಮಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಬಲ್ಲವು ಎಂದು ವಿಶ್ವ ಬ್ಯಾಂಕ್‌ ತನ್ನ ಸಂಶೋಧನಾ ವರದಿಯೊಂದರಲ್ಲಿ ಹೇಳಿದೆ.

ದುಡಿಮೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಏರಿಕೆ

ದೇಶದ ಬೇರೆಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಲಿಸಿದರೆ, ದುಡಿಮೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವು ದೆಹಲಿಯಲ್ಲೇ ಕಡಿಮೆ. 2018–19ನೇ ಸಾಲಿನಲ್ಲಿ ದೆಹಲಿಯಲ್ಲಿನ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರಲ್ಲಿ ದುಡಿಮೆಯಲ್ಲಿ ಭಾಗಿಯಾಗುತ್ತಿದ್ದವರ ಪ್ರಮಾಣ ಶೇ 11ರಷ್ಟು ಮಾತ್ರ.  ದೆಹಲಿಯಂತಹ ಮಹಾನಗರದಲ್ಲಿ ಕೆಲಸಕ್ಕಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣ ಮಾಡುವುದು ದುಬಾರಿ. ಪ್ರಯಾಣದ ವೆಚ್ಚವನ್ನು ಭರಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೇ ದೆಹಲಿಯ ಕಾರ್ಮಿಕ ವರ್ಗದ ಮಹಿಳೆಯರು ಕೆಲಸವನ್ನೇ ತ್ಯಜಿಸಿದ್ದಾರೆ ಎಂದು ಹಲವು ಅಧ್ಯಯನ ವರದಿಗಳು ವಿಶ್ಲೇಷಿಸಿವೆ.

ದೆಹಲಿಯಲ್ಲಿ ‘ಪಿಂಕ್‌ ಸ್ಲಿಪ್‌’ ಯೋಜನೆಯು ಜಾರಿಗೆ ಬಂದ ನಂತರ ದುಡಿಮೆಯಲ್ಲಿ ಮಹಿಳೆಯ ಭಾಗವಹಿಸುವಿಕೆ ಏರಿಕೆಯಾಗಿದೆ. 2018–19ರಲ್ಲಿ ಶೇ 11ರಷ್ಟು ಮಹಿಳೆಯರಷ್ಟೇ ದುಡಿಮೆಯಲ್ಲಿ ಭಾಗವಹಿಸುತ್ತಿದ್ದರು, 2019–20ರಲ್ಲಿ ಈ ಪ್ರಮಾಣ ಶೇ 14.5ಕ್ಕೆ ಏರಿಕೆಯಾಗಿದೆ. ಉಚಿತ ಬಸ್‌ ಪ್ರಯಾಣದ ಸವಲತ್ತಿನ ಕಾರಣದಿಂದಲೇ ಮಹಿಳೆಯರು ದುಡಿಮೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಕ್ಲೀನ್‌ಫ್ಯುಯೆಲ್ಸ್‌ನ  ‘ಪಿಂಕ್‌ ಸ್ಲಿಪ್‌ ಸ್ಕೀಂ: ಎ ಕೇಸ್‌ ಸ್ಟಡಿ’ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಆಳ ಅಗಲ – Shakti Scheme | ಉಚಿತ ಟಿಕೆಟ್‌: ಸ್ತ್ರೀಗೆ ಶಕ್ತಿ

ಹೊಸ ಆಲೋಚನೆಯೇನಲ್ಲ

ಉಚಿತ ಟಿಕೆಟ್‌ ಎನ್ನುವ ಪರಿಕ್ಪನೆಯು ಈ ಜಗತ್ತಿಗೆ ಹೊಸ ವಿಷಯವೇನಲ್ಲ. ಜಗತ್ತಿನ ನೂರಾರು ನಗರಗಳಲ್ಲಿ, ಹಲವು ದೇಶಗಳಲ್ಲಿ ಉಚಿತ ಟಿಕೆಟ್‌ ಯೋಜನೆಯು ಜಾರಿಯಲ್ಲಿದೆ. ಇಲ್ಲೆಲ್ಲಾ ದೇಶದ ಎಲ್ಲ ನಾಗರಿಕರಿಗೂ ಪ್ರಯಾಣವನ್ನು ಉಚಿತ ಮಾಡಲಾಗಿದೆ. 1960ರಲ್ಲಿಯೇ ನ್ಯೂಯಾರ್ಕ್‌ನಲ್ಲಿ ಉಚಿತ ಟಿಕೆಟ್‌ ನೀಡುವ ಕುರಿತು ಚರ್ಚೆ ಆರಂಭವಾಗಿತ್ತು. ಆದರೆ, ಬೇರೆ ಬೇರೆ ಕಾರಣಗಳಿಗೆ ಇದರ ಅನುಷ್ಠಾನ ಆಗ ಸಾಧ್ಯವಾಲಿಲ್ಲ.

ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ ನೀಡಲು ಎರಡು ಮುಖ್ಯ ಕಾರಣಗಳಿವೆ. ಒಂದು ವಾಯುಮಾಲಿನ್ಯ ತಡೆಗಟ್ಟುವುದು. ಮತ್ತೊಂದು ಬಡತನ ನಿರ್ಮೂಲನೆ; ಆ ಮೂಲಕ ಆರ್ಥಿಕ ಅಭಿವೃದ್ಧಿ ಅಥವಾ ಇವನ್ನು ಕಲ್ಯಾಣ ಕಾರ್ಯಕ್ರಮಗಳು ಎಂದೂ ಕರೆಯಬಹುದು. ಇಂಥ ಹಲವು ಯೋಜನೆಗಳಿಗೆ ನೇರ ಮತ್ತು ಪರೋಕ್ಷ ಪರಿಣಾಮಗಳಿರುತ್ತವೆ.

ದಕ್ಷಿಣ ಏಷ್ಯಾ ದೇಶಗಳು, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಬಡ ಕುಟುಂಬವೊಂದು ತನ್ನ ತಿಂಗಳಿನ ಆದಾಯದಲ್ಲಿ ಶೇ 10ರಿಂದ 20ರಷ್ಟು ಹಣವನ್ನು ಸಾರಿಗೆಗಾಗಿಯೇ ಮೀಸಲಿಡುತ್ತದೆ ಎಂದು ವಿಶ್ವ ಬ್ಯಾಂಕ್‌ ತನ್ನ ಸಂಶೋಧನಾ ವರದಿಯೊಂದರಲ್ಲಿ ಹೇಳಿದೆ. ಬಡತನದ ಕಾರಣಕ್ಕಾಗಿ ಬಸ್‌ ಪ್ರಯಾಣ ವೆಚ್ಚ ಭರಿಸಲಾಗದೇ ಇಂಥ ಕುಟುಂಬಗಳಿಗೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ, ಉದ್ಯೋಗ ಲಭ್ಯತೆಯು ಮರೀಚಿಕೆಯಾಗಿದೆ. ಆದರೆ, ಉತ್ತಮ ಸಾರ್ವಜನಿಕ ಸಾರಿಗೆ ಲಭ್ಯತೆ ಮತ್ತು ಕಡಿಮೆ ದರದಲ್ಲಿ ಸಿಗುವ ಪ್ರಯಾಣದಿಂದ ಶಿಕ್ಷಣ, ಆರೋಗ್ಯದಂಥ ಹಕ್ಕಗಳು ಬಡವರಿಗೆ ದೊರಕುವಂತಾಗುತ್ತದೆ ಎನ್ನುತ್ತದೆ ವಿಶ್ವ ಬ್ಯಾಂಕ್‌. ಶಾಲೆಯೊಂದು ಮನೆಯಿಂದ ದೂರ ಇದೆ ಎನ್ನವ ಕಾರಣಕ್ಕೆ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಇಂಥ ಹಲವು ಘಟನೆಗಳು ರಾಜ್ಯದಲ್ಲೂ ವರದಿಯಾಗಿವೆ.

ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ದರವು ಕೈಗೆಟುಕದ ಕಾರಣಕ್ಕಾಗಿ ಬಡವರು ಬಹುತೇಕ ನಡೆದುಕೊಂಡೇ, ಇಲ್ಲವೇ ಸೈಕಲ್‌ಗಳಲ್ಲಿ ಓಡಾಡುತ್ತಾರೆ. ಹೀಗೆ ಕಿ.ಮೀ ಗಟ್ಟಲೆ ದೂರದ ಉದ್ಯೋಗ ಸ್ಥಳಗಳಿಗೆ ನಡೆದುಕೊಂಡೇ ಹೋಗುವುದು ಅವರ ಉತ್ಪಾದಕತೆಯನ್ನು ಕುಗ್ಗಿಸುತ್ತದೆ. ಜೊತೆಗೆ, ನಡೆದು ಹೋಗುವುದಕ್ಕೇ ಹೆಚ್ಚು ಸಮಯ ಮೀಸಲಾದರೆ, ದುಡಿಮೆಯ ಅವಧಿ ಕಡಿಮೆಯಾಗುತ್ತದೆ.

ಸಾರ್ವಜನಿಕ ಸಾರಿಗೆಯನ್ನು ಉಚಿತ ಮಾಡಿದರೆ, ಬಡ ಕುಟುಂಬವೊಂದು ಉಳಿಸುವ ಹಣ ಎಷ್ಟು, ಆ ಹಣವನ್ನು ಅವರು ಹೇಗೆ ಬಳಸುತ್ತಾರೆ, ಪದೇ ಪದೇ ಪ್ರಯಾಣ ಮಾಡುತ್ತಾರಾ, ಎಲ್ಲಿಗೆ ಪ್ರಯಾಣ ಮಾಡುತ್ತಾರೆ ಎಂಬಂಥ ಹಲವು ಪರೋಕ್ಷ ಪರಿಣಾಮಗಳ ಬಗ್ಗೆ ವಿಶ್ವ ಬ್ಯಾಂಕ್‌ನ ಸಂಶೋಧನಾ ವರದಿಗಳಲ್ಲಿ ಚರ್ಚೆ ಮಾಡಲಾಗಿದೆ.

ಐಟಿ ಸೆಲ್‌ಗಳು ಮತ್ತು ಪುರುಷರ ಅಭದ್ರತೆ

ಉಚಿತ ಪ್ರಯಾಣದ ಯೋಜನೆಯ ಫಲಾನುಭವಿ ಯಾದ ಮಹಿಳೆಯರನ್ನು ಅಪಹಾಸ್ಯ ಮಾಡುತ್ತಾರೆ ಎಂಬ ಆರೋಪದ ಬಗ್ಗೆ ಕವಯತ್ರಿ ಪ್ರತಿಭಾ ನಂದಕುಮಾರ್‌ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

ಪ್ರತಿಭಾ ನಂದಕುಮಾರ್‌
ಪ್ರತಿಭಾ ನಂದಕುಮಾರ್‌

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಆಕೆಯನ್ನು ಅಸಹ್ಯಕರವಾಗಿ ಚಿತ್ರಿಸುವ, ಅಶ್ಲೀಲವಾಗಿ ಟೀಕಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇಂಥ ಆಲೋಚನೆಗಳು ಹುಟ್ಟಿರುವುದು ಪುರುಷ ಪ್ರಧಾನ ಮನಃಸ್ಥಿತಿಯ ಕಾರಣಕ್ಕಾಗಿ ಅಲ್ಲ. ಇಂಥ ಸಂಕಥನಗಳು ನಡೆಯುತ್ತಿರುವುದು ರಾಜಕೀಯದ ಕಾರಣಕ್ಕಾಗಿ. ಪಕ್ಷವೊಂದರ ಐಟಿ ಸೆಲ್‌ಗಳು ಓವರ್‌ ಟೈಮ್‌ ಕೆಲಸ ಮಾಡುತ್ತಿರುವುದಕ್ಕೇ ಇಂಥ ಸಂಕಥನಗಳು ಹುಟ್ಟಿಕೊಂಡಿವೆ. ಇವರು ಮೀಮ್ಸ್‌ಗಳನ್ನು ತಯಾರು ಮಾಡುತ್ತಿದ್ದಾರೆ. ಇವರಿಗೆ ಹತ್ತಿರ ಇರುವ ಮಾಧ್ಯಮಗಳು ಇಂಥದನ್ನು ಸುದ್ದಿ ಮಾಡುತ್ತಿದ್ದಾವೆ ಅಷ್ಟೆ. 

ಮಹಿಳೆಯರ ಬಗೆಗಿನ ಇಂಥ ಆಲೋಚನೆಗಳು ಕಳೆದ 10 ವರ್ಷಗಳಲ್ಲಿ ಹುಟ್ಟಿಕೊಂಡಂಥವು. ಶೈಕ್ಷಣಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಮಹಿಳೆಮುನ್ನಡೆದಿದ್ದಾಳೆ ಎಂದಾದರೆ, ಅದರಲ್ಲಿ ಸುಮಾರು 50 ವರ್ಷಗಳ ಪ್ರಯತ್ನವಿದೆ. ಆದರೆ, ಕಳೆದ 10 ವರ್ಷಗಳಲ್ಲಿ ಮಹಿಳೆಯರನ್ನು ಸುಮಾರು ಒಂದು ಸಾವಿರ ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ.

ಮಹಿಳೆಯರಿಗಾಗಿಯೇ ಈ ಹಿಂದೆಯೂ ಅನೇಕ ಯೋಜನೆಗಳನ್ನು ತರಲಾಗಿದೆ. ಆಗ ಆ ಬಗ್ಗೆ ಯಾರೂ ತಕರಾರು ಎತ್ತುತ್ತಿರಲಿಲ್ಲ; ಅಪಹಾಸ್ಯ ಮಾಡುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರದ ‘ಸಾಂಸ್ಕೃತಿಕ’ ರಾಜಕಾರಣದ ಕಾರಣಕ್ಕಾಗಿ ಸಾಮಾನ್ಯರಿಗೆ ಮಹಿಳಾ ಸ್ವಾತಂತ್ರ್ಯ, ಸಮಾನತೆಯ ವಿಷಯಗಳನ್ನು ಹೇಗೆ ಗ್ರಹಿಸಬೇಕು ಎನ್ನುವ ಕುರಿತು ಗೊಂದಲ ಸೃಷ್ಟಿಯಾಗಿದೆ.

ಇತ್ತೀಚೆಗೆ ಒಬ್ಬ ಯುವಕ ಶಕ್ತಿ ಯೋಜನೆಯ ಬಗ್ಗೆ ವಾಹಿನಿಯೊಂದಕ್ಕೆ ನೀಡಿದ ಹೇಳಿಕೆ ಹೀಗಿದೆ: ‘ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದರೆ, ಮನೆಯಲ್ಲಿ ಅಡುಗೆ ಮಾಡುವವರು ಯಾರು?’ ಎಂಬುದು ಆತನ ಆತಂಕ. ಎಲ್ಲಿ ತನ್ನ ಆರಾಮಿಗೆ ಧಕ್ಕೆ ಬರುತ್ತದೆಯೊ ಎನ್ನುವ ಅಭದ್ರತೆ ಈಗೀಗೆ ಬಂದದ್ದು. ದೆಹಲಿ, ತಮಿಳುನಾಡು, ಪಂಜಾಬ್‌ನಲ್ಲಿ ಈಗಾಗಲೇ ಇಂತಹ ಯೋಜನೆ ಜಾರಿಯಲ್ಲಿದೆ. ಆಗೆಲ್ಲಾ ಸೃಷ್ಟಿಯಾಗದ ಇಂಥ ಮೀಮ್ಸ್‌ಗಳು ಈಗ ಯಾಕೆ ಸೃಷ್ಟಿಯಾದವು. ಇದು ರಾಜಕೀಯ ಪ್ರೇರಿತವಲ್ಲದೆ ಮತ್ತೇನು?

ಈಗ ನೋಡಿ, ಮೊದಲು ಮಾದೇಶ್ವರ ಬೆಟ್ಟಕ್ಕೆ ಹೋಗೋಕೆ ಮಹಿಳೆಯರು ವರ್ಷವಿಡೀ ದುಡಿದು ಹಣ ಕೂಡಿಡುತ್ತಿದ್ದರು. ಕುಟುಂಬದ ವಾರ್ಷಿಕ ಪ್ರವಾಸ ಎಂಬಂತೆ ಮಾದೇಶ್ವರ ಬೆಟ್ಟಕ್ಕೆ ಹೋಗಿಬರುತ್ತಿದ್ದರು. ಅವರಿಗೆ ಈಗ ಉಚಿತ ಪ್ರಯಾಣ ಸಿಕ್ಕಿದೆ, ಅವರು ಹೋಗಿ ಬಂದರು ಅಷ್ಟೆ. ತೀರ್ಥಕ್ಷೇತ್ರಗಳಿಗೆ ಹೋಗುವ ಮಹಿಳೆಯ ಬಗ್ಗೆ ಇಷ್ಟೊಂದು ಅಪಹಾಸ್ಯವೇಕೆ?

ಕೊನೇ ಮಾತು, ಬಿಜೆಪಿ ಅವರು ದುರ್ಗಾ ಸೇನೆ ಎಂದು ಮಾಡಿಕೊಂಡಿದ್ದಾರೆ. ಕುತೂಹಲವಾಗಿ, ಈ ಸೇನೆ ಏನು ಮಾಡುತ್ತದೆ ಎಂದು ವಿಚಾರಿಸಿದೆ. ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಓದೋದು ಈ ಸೇನೆಯ ಮುಖ್ಯ ಕೆಲಸ. ಈ ಹೆಣ್ಣುಮಕ್ಕಳಿಗೆ ಪಕ್ಷದವರು ತಿಂಗಳಿಗೆ ಒಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಉಚಿತ ಬಸ್‌ ನೀಡಿ, ಮಂತ್ರಾಲಯ, ಕುಕ್ಕೆ ಸುಬ್ರಮಣ್ಯ ಮತ್ತು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುತ್ತಾರೆ. ಚುನಾವಣೆ ಸಂದರ್ಭದಲ್ಲೂ ಈ ರೀತಿ ಮಾಡಲಾಗಿದೆ. ಹೀಗಿರುವಾಗ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ನೀಡಿದರೆ ಯಾಕೆ ಇವರು ಹೀಗಳೆಯುತ್ತಾರೆ ಎಂದು ತಿಳಿಯುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT