ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ವಿದೇಶದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌; ಭಾರತೀಯರ ಸಂಖ್ಯೆ ಕಡಿಮೆ

Published 30 ನವೆಂಬರ್ 2023, 20:24 IST
Last Updated 30 ನವೆಂಬರ್ 2023, 20:24 IST
ಅಕ್ಷರ ಗಾತ್ರ

‘ದೇಶದ ಕೆಲವು ದೊಡ್ಡ ಕುಟುಂಬಗಳು ವಿದೇಶಗಳಲ್ಲಿ ಮದುವೆಯಾಗುತ್ತವೆ ಎಂಬುದು ಬೇಸರದ ಸಂಗತಿ. ಅಂತಹ ಮದುವೆಯ ಅಗತ್ಯವಿದೆಯೇ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇಂತಹ ಮದುವೆಗಳ ಪರ–ವಿರೋಧದ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ವಿದೇಶಗಳಲ್ಲಿ ಮದುವೆಯಾಗುವ ಭಾರತೀಯ ಜೋಡಿಗಳ ಸಂಖ್ಯೆ ಕಡಿಮೆ ಎಂದು ಮದುವೆ ಉದ್ಯಮ ವಲಯವು ಹೇಳಿದೆ.

ಮದುವೆಯ ಪರಿಕಲ್ಪನೆಗಳು ಕಾಲಕಾಲಕ್ಕೆ ಬದಲಾಗಿವೆ. ಈ ಹಿಂದೆ ಮದುವೆ ಎನ್ನುವುದು ಎಷ್ಟು ಕೌಟುಂಬಿಕವೊ, ಅಷ್ಟೇ ಸಾಮಾಜಿಕ ಕೂಡ ಆಗಿತ್ತು. ಒಂದು ಊರಿನಲ್ಲಿ ಒಂದು ಮದುವೆ ಇದೆ ಎಂದಾದರೆ, ಊರಿಗೆ ಊರೇ ಸೇರಿಕೊಂಡು ಮದುವೆಯ ತಯಾರಿಯಲ್ಲಿ ತೊಡಗಿಕೊಳ್ಳುತ್ತಿತ್ತು. ಕಾಲಾಂತರದಲ್ಲಿ, ಮದುವೆಯು ಊರಿನ ಮನೆಯಿಂದ ಕಲ್ಯಾಣಮಂಟಪದ ಕಡೆಗೆ ಹೊರಳಿತು. ಈಗ ಅದು ಡೆಸ್ಟಿನೇಷನ್‌ ವೆಡ್ಡಿಂಗ್‌ ರೂಪ ಪಡೆದಿದೆ. ಮನೆಯಿಂದ ಹೊರಗೆ, ಅಲ್ಲಿಂದ ಕಲ್ಯಾಣ ಮಂಟಪಕ್ಕೆ, ಈಗ ರಾಜ್ಯದಿಂದ ಮತ್ತು ದೇಶದಿಂದ ಹೊರಗೆ ಮದುವೆಯಾಗುವ ಪ್ರವೃತ್ತಿ ಆರಂಭವಾಗಿದೆ.

ವಿದೇಶಗಳಲ್ಲಿ ಮದುವೆಯಾಗುವ ಭಾರತೀಯ ಜೋಡಿಗಳ ಸಂಖ್ಯೆ ಭಾರಿ ಸುದ್ದಿಯಾಗುತ್ತದೆ. ಆದರೆ ಭಾರತದಲ್ಲೇ ‘ಡೆಸ್ಟಿನೇಷನ್‌ ವೆಡ್ಡಿಂಗ್‌’ ಮಾಡಿಕೊಳ್ಳಬಯಸುವವರ ಸಂಖ್ಯೆ ದೊಡ್ಡದಿದೇ ಇದೆ. ಇದು ದೇಶದಲ್ಲಿ ದೊಡ್ಡ ಉದ್ಯಮವಾಗಿ ಬೆಳೆದಿದೆ.

ಇತ್ತೀಚೆಗೆ, ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನ್ನಾಡಿದ್ದರು. ಆ ಬಳಿಕ ಸಾಮಾಜಿಕ ಜಾಲತಾಣಗಳಲ್ಲೂ ಪರ ವಿರೋಧದ ಚರ್ಚೆ ನಡೆಯಿತು. ದೇಶದಲ್ಲಿಯೇ ಮದುವೆ ಆಗುವುದರಿಂದ ದೇಶದ ಆರ್ಥಿಕತೆಯನ್ನು ಕಟ್ಟಿದಂತಾಗುತ್ತದೆ ಎಂಬಂತೆಲ್ಲಾ ಅಭಿಪ್ರಾಯಗಳು, ಸಲಹೆಗಳು, ದೇಶದ ಕುರಿತ ಒಲವುಗಳು ವ್ಯಕ್ತವಾದವು. ಆದರೆ, ಮದುವೆ ಉದ್ಯಮದಲ್ಲಿಯೇ ತೊಡಗಿಸಿಕೊಂಡಿರುವ ಕೆಲವು ಉದ್ಯಮಿಗಳು ಈ ಎಲ್ಲದಕ್ಕಿಂತ ಭಿನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ದೇಶದ ಜನರು ಡೆಸ್ಟಿನೇಷನ್‌ ವೆಡ್ಡಿಂಗ್‌ ಕಡೆಗೆ ಒಲವು ಹೆಚ್ಚಿಸಿಕೊಂಡಿದ್ದಾರೆ ನಿಜ. ಆದರೆ, ದೇಶದ ಜನರ ಡೆಸ್ಟಿನೇಷನ್‌ ದೇಶವೇ ಆಗಿದೆ ಹೊರತು ವಿದೇಶವಲ್ಲ. ಎಲ್ಲೋ ಬೆರಳೆಣಿಕೆಯಷ್ಟು ಶ್ರೀಮಂತರು ಮಾತ್ರವೇ ವಿದೇಶಗಳಲ್ಲಿ ಮದುವೆ ಆಯೋಜಿಸಲು ಬಯಸುತ್ತಿದ್ದಾರೆ’ ಎನ್ನುವುದು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಗಳ ವಾದ. ‘ಭಾರತದಲ್ಲಿಯೇ ಇರುವ ರಮಣೀಯ ಸ್ಥಳಗಳಲ್ಲಿ, ಐತಿಹಾಸಿಕ ಮಹತ್ವವಿರುವ ಜಾಗಗಳಲ್ಲಿ ತಮ್ಮ ಮದುವೆಯ ಸಂಭ್ರಮವನ್ನು ಆಚರಿಸಿಕೊಳ್ಳಲು ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ’ ಎನ್ನುತ್ತಿವೆ ಕಂಪನಿಗಳು.

ಸಿನಿ ತಾರೆಯರ ಅದ್ದೂರಿ ಮದುವೆಗಳು ಡೆಸ್ಟಿನೇಷನ್‌ ವೆಡ್ಡಿಂಗ್‌ ಪರಿಕಲ್ಪನೆಯನ್ನು ವಿಸ್ತರಿಸಿತು. ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ–ರಣವೀರ್ ಸಿಂಗ್‌ ಅವರ ಮದುವೆ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರ ಮದುವೆಯು ವಿದೇಶದ ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಪ್ರೇರಣೆ ನೀಡಿದವು. ಹೀಗಿದ್ದೂ ಭಾರತೀಯ ಸಿರಿವಂತರು ಈ ರೀತಿಯ ವಿದೇಶಿ ಮದುವೆಯ ಮೊರೆ ಹೋಗಿದ್ದು ಕಡಿಮೆ ಎನ್ನುತ್ತವೆ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಗಳು.

ದೇಶದೊಳಗೇ ಡೆಸ್ಟಿನೇಷನ್‌ ವೆಡ್ಡಿಂಗ್‌ ಜನಪ್ರಿಯತೆ ಪಡೆಯುತ್ತಿದೆ. ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕದ ಗಾಯಕ ನಿಕ್‌ ಜೋನಸ್‌ ಅವರ ವಿವಾಹ, ಬಾಲಿವುಡ್‌ ನಟಿ ಕತ್ರಿಕಾ ಕೈಫ್‌ ಹಾಗೂ ನಟ ವಿಕಿ ಕೌಶಲ್‌, ನಟಿ ಕಿಯಾರಾ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್‌ ಮಲ್ಹೋತ್ರಾ ಅವರ ವಿವಾಹಗಳು ದೇಶೀಯ ಡೆಸ್ಟಿನೇಷನ್‌ ವೆಡ್ಡಿಂಗ್‌ ಟ್ರೆಂಡ್‌ ಅನ್ನು ಉತ್ತೇಜಿಸಿದವು ಎಂಬುದನ್ನು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಉದ್ಯಮಿಗಳು ಹೇಳದೇ ಇರುವುದಿಲ್ಲ.

‘ರಾಜಸ್ಥಾನ, ಗೋವಾ, ಮಹಾಬಲಿಪುರ, ಕೇರಳ, ಮುಂಬೈನ ಸುತ್ತಮುತ್ತಲ ಜಾಗಗಳು, ದೆಹಲಿ –ಇವು ದೇಶದ ಜನರ ನೆಚ್ಚಿನ ತಾಣಗಳು. ಇಲ್ಲಿಯೇ ಹೆಚ್ಚಿನ ಸಂಖ್ಯೆಯ ಮದುವೆಗಳು ನಡೆಯುತ್ತವೆ. ಭಾರತದ ಅತೀ ಶ್ರೀಮಂತದಲ್ಲಿ ಶೇ 10ರಷ್ಟು ಮಂದಿ ಮಾತ್ರವೇ ಡೆಸ್ಟಿನೇಷನ್‌ ವೆಡ್ಡಿಂಗ್‌ ಬಗ್ಗೆ ಒಲವು ಹೊಂದಿದ್ದಾರೆ. ಇವರಲ್ಲಿ ಶೇ 10–15ರಷ್ಟು ಮಂದಿ ಮಾತ್ರವೇ ಅಂತರರಾಷ್ಟ್ರೀಯ ಮಟ್ಟದ ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಆಸಕ್ತಿ ತೋರುತ್ತಾರೆ’ ಎನ್ನುವುದು ‘ವೆಡ್ಡಿಂಗ್‌ ಸೂತ್ರ.ಕಾಮ್‌’ನ ಸಿಇಒ ಪಾರ್ಥಿಬ್‌ ತ್ಯಾಗರಾಜನ್‌ ಅವರ ಅಂಕಿತ.

‘ವಿದೇಶಗಳಲ್ಲಿ ವರ್ಷಕ್ಕೆ ಸುಮಾರು 5 ಸಾವಿರ ಡೆಸ್ಟಿನೇಷನ್‌ ವೆಡ್ಡಿಂಗ್‌ಗಳು ನಡೆಯಬಹುದು ಎಂಬುದು ನನ್ನ ಅಂದಾಜು. ಇವುಗಳ ಖರ್ಚು ಸುಮಾರು ₹50,000 ಕೋಟಿಯಷ್ಟು. ಆದರೆ, ದೇಶದಲ್ಲಿಯೇ ನಡೆಯುವ ವಿವಾಹಗಳ ಖರ್ಷನ್ನು ಲೆಕ್ಕ ಹಾಕಿದರೆ, ವಿದೇಶಗಳಲ್ಲಿ ನಡೆಯುವ ವಿವಾಹದ ಖರ್ಚು ತೀರಾ ಕಡಿಮೆ’ ಎನ್ನುವುದು ಕಾನ್‌ಫಿಡರೇಷನ್‌ ಆಫ್‌ ಆಲ್‌ ಇಂಡಿಯಾ ಟ್ರೇಡರ್ಸ್‌ನ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಡೇವಾಲಾ ಅವರ ನೇರ ಮಾತು.

ಡೆಸ್ಟಿನೇಷನ್‌ ವೆಡ್ಡಿಂಗ್‌ ಅಂದರೇನು?
ಮಧುಮಗಳಿಗೂ ಮಧುಮಗನಿಗೂ ಸಂಬಂಧಿಸದ, ಬೇರೆಯದೇ ಊರಿನಲ್ಲಿ ಅಥವಾ ಸ್ಥಳದಲ್ಲಿ ಮಾಡಿಕೊಳ್ಳುವ ಮದುವೆಯನ್ನು ಡೆಸ್ಟಿನೇಷನ್‌ ವೆಡ್ಡಿಂಗ್‌ ಎನ್ನಲಾಗುತ್ತದೆ. ಐತಿಹಾಸಿಕ ಮಹತ್ವ ಇರುವ, ರಮ್ಯವಾದ ತಾಣಗಳಲ್ಲಿ, ಕಡಲ ಕಿನಾರೆಯಲ್ಲಿ, ಐಷಾರಾಮಿ ಹೋಟೆಲ್‌ಗಳನ್ನು ಮದುವೆಯ ಡೆಸ್ಟಿನೇಷನ್‌ಗಳನ್ನಾಗಿ ಮಾಡಿಕೊಳ್ಳಲಾಗುತ್ತದೆ. ಇವು ದೇಶದ ಒಳಗಿನ ಸ್ಥಳಗಳೂ ಆಗಿರಬಹುದು, ವಿದೇಶದ ಸ್ಥಳಗಳೂ ಆಗಿರಬಹುದು.

ದೇಶದಲ್ಲಿ ನಡೆಯುವ ಮದುವೆಗಳದ್ದು ಬಹುದೊಡ್ಡ ಆರ್ಥಿಕತೆ

ನವೆಂಬರ್ 4ರಿಂದ ಡಿಸೆಂಬರ್ 15ರವರೆಗೆ ದೇಶದಲ್ಲಿ 38 ಲಕ್ಷಕ್ಕೂ ಹೆಚ್ಚು ಮದುವೆಗಳು ನಡೆಯುತ್ತವೆ ಎಂದು ಸಿಎಐಟಿ ಅಂದಾಜಿಸಿದೆ. 8 ಕೋಟಿಗೂ ಹೆಚ್ಚು ವರ್ತಕರ ಸದಸ್ಯತ್ವ ಹೊಂದಿರುವ 40 ಸಂಘಟನೆಗಳ ಒಕ್ಕೂಟವಾದ ಸಿಎಐಟಿ ಪ್ರತಿ ವರ್ಷ ಇಂತಹ ಅಂದಾಜು ವರದಿಯನ್ನು ಬಿಡುಗಡೆ ಮಾಡುತ್ತದೆ. ಇದೇ ಅಕ್ಟೋಬರ್ 17ರಂದು ಸಿಎಐಟಿ ಅಂತಹ ವರದಿ ಬಿಡುಗಡೆ ಮಾಡಿತ್ತು. ಈ ಮದುವೆ ಋತುವಿನಲ್ಲಿ ₹4.75 ಲಕ್ಷ ಕೋಟಿಯಷ್ಟು ವಹಿವಾಟು ನಡೆಯಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದು ಇದನ್ನೇ.

2022ರಲ್ಲಿ ಈ ಋತುವಿನಲ್ಲಿ ದೇಶದಾದ್ಯಂತ 32 ಲಕ್ಷದಷ್ಟು ಮದುವೆಗಳು ನಡೆದಿದ್ದವು. ಆಗ ಒಟ್ಟು ₹3.75 ಲಕ್ಷ ಕೋಟಿಯಷ್ಟು ವಹಿವಾಟು ನಡೆದಿತ್ತು. ಈ ಭಾರಿ ಮದುವೆಗಳ ಸಂಖ್ಯೆ ಮತ್ತು ವಹಿವಾಟಿನ ಗಾತ್ರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಸಿಎಐಟಿ ಅಂದಾಜಿಸಿದೆ. ಇಷ್ಟು ದೊಡ್ಡ ಮೊತ್ತದ ವಹಿವಾಟು ನಡೆಯುವುದರಿಂದ, ಆರ್ಥಿಕತೆಗೂ ಉತ್ತೇಜನ ದೊರೆಯುತ್ತದೆ. ಆದರೆ, ಈ ಮದುವೆಗಳಲ್ಲಿ ಜನರು ದೇಶೀಯ ಉತ್ಪನ್ನಗಳು ಮತ್ತು ಸರಕುಗಳನ್ನು ಬಳಸಬೇಕು ಎಂದು ಸಿಎಐಟಿ ಕರೆ ನೀಡಿತ್ತು.

ಮೋದಿ ಹೇಳಿದ್ದು...

‘ಈ ಋತುವಿನಲ್ಲಿ ಮದುವೆಗಳಿಂದಲೇ ₹5 ಲಕ್ಷ ಕೋಟಿಯಷ್ಟು ವಹಿವಾಟು ನಡೆಯುತ್ತದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ. ಮದುವೆಗಳಲ್ಲಿ ದೇಶಿಯ ವಸ್ತುಗಳನ್ನೇ ಬಳಸಿದರೆ, ಅದು ದೇಶದ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಈ ಸಂದರ್ಭದಲ್ಲಿ ಇನ್ನೊಂದು ಮಾತು ಹೇಳಲು ಬಯಸುತ್ತೇನೆ. ದೇಶದ ಕೆಲವು ಅತ್ಯಂತ ದೊಡ್ಡ ಕುಟುಂಬಗಳು ವಿದೇಶಗಳಲ್ಲಿ ಮದುವೆ ಮಾಡುತ್ತಿವೆ. ನಿಜಕ್ಕೂ ವಿದೇಶಗಳಲ್ಲಿ ಮದುವೆ ಮಾಡಿಕೊಳ್ಳುವ ಅಗತ್ಯವಿದೆಯೇ?’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮನದ ಮಾತು ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದರು.

‘ನನ್ನ ಈ ಬೇಸರ ಆ ಕೆಲವೇ ಕೆಲವು ದೊಡ್ಡ ಕುಟುಂಬಗಳಿಗೂ ಗೊತ್ತಾಗಲಿ’ ಎಂದು ಮೋದಿ ಅವರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT