ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ಆಳ–ಅಗಲ | ಇರಾನ್‌ ಅಧ್ಯಕ್ಷರ ಸಾವಿನ ಸುಳಿ!
ಆಳ–ಅಗಲ | ಇರಾನ್‌ ಅಧ್ಯಕ್ಷರ ಸಾವಿನ ಸುಳಿ!
Published 20 ಮೇ 2024, 22:30 IST
Last Updated 20 ಮೇ 2024, 22:30 IST
ಅಕ್ಷರ ಗಾತ್ರ

ಇರಾನ್‌ನಲ್ಲಿ ಪರಮೋಚ್ಚ ನಾಯಕ ಅಯಾತ್‌–ಉಲ್ಲಾ–ಅಲ್‌–ಖಮೇನಿ ನಂತರ ಅತಿಹೆಚ್ಚು ಅಧಿಕಾರ ಇರುವುದು ಅಧ್ಯಕ್ಷರಿಗೆ. ಇರಾನ್‌ನ ರಾಜಕಾರಣದ ಬಗ್ಗೆ ಒಂದು ಮಾತಿದೆ: ‘ಎಲ್ಲಾ ವಿಚಾರದಲ್ಲೂ ಪರಮೋಚ್ಚ ನಾಯಕನದ್ದೇ ಅಂತಿಮ ನಿರ್ಧಾರ. ಆತ ಹೇಳಿದ್ದನ್ನು ಅಥವಾ ಆದೇಶಿಸಿದ್ದನ್ನು ಕಾರ್ಯರೂಪಕ್ಕೆ ತರುವ ಕೆಲಸ ಅಧ್ಯಕ್ಷನದು. ಅಧ್ಯಕ್ಷ ಹುದ್ದೆಯಲ್ಲಿ ಕೂತ ವ್ಯಕ್ತಿಯ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಎಷ್ಟಿದೆ ಎಂಬುದರ ಆಧಾರದ ಮೇಲೆ ಆತ ಪರಮೋಚ್ಚ ನಾಯಕನ ನೀತಿರೂಪಣೆಯನ್ನು ಪ್ರಭಾವಿಸಬಹುದು’. ಹಾಗೆ ಪ್ರಭಾವಿಸುವ ಶಕ್ತಿ ಹೊಂದಿದ್ದ ಅಧ್ಯಕ್ಷ ಅಯಾತ್‌–ಉಲ್ಲಾ ಇ್ರಬಾಹಿಂ ರೈಸಿ ಭಾನುವಾರದ ಹೆಲಿಕಾಪ್ಟರ್‌ ಅವಘಡದಲ್ಲಿ ಮೃತಪಟ್ಟಿದ್ದಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿನ ಮೈತ್ರಿಕೂಟಗಳು ಮತ್ತು ಬಂಡುಕೋರರ ಆಗುಹೋಗುಗಳನ್ನು ನಿಯಂತ್ರಿಸುತ್ತಿದ್ದ ರೈಸಿ ಅವರು ಇಲ್ಲವಾಗಿರುವುದು ಈಗ ಅಲ್ಲಿನ ಭೌಗೋಳಿಕ ರಾಜಕಾರಣದ ದಿಕ್ಕನ್ನು ಬದಲಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಸ್ರೇಲ್‌ ಮತ್ತು ಪ್ಯಾಲೆಸ್ಟೀನ್‌ ಜನರ ಸಂಘರ್ಷ ಹಾಗೂ ಯುದ್ಧದಲ್ಲಿ ಇರಾನ್‌ ಸದಾ ಪ್ಯಾಲೆಸ್ಟೀನ್‌ ಜನರ ಪರವಾಗಿ ನಿಂತಿದೆ. ಪ್ಯಾಲೆಸ್ಟೀನ್‌ ಜನರ ಪರವಾಗಿ ಶಸ್ತ್ರಾಸ್ತ್ರ ಸಂಘರ್ಷ ನಡೆಸುತ್ತಿರುವ ಹಮಾಸ್ ಬಂಡುಕೋರರಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಹಣಕಾಸು ನೆರವು ನೀಡುತ್ತಿರುವುದು ಇರಾನ್‌ ಎಂಬುದು ಇಸ್ರೇಲ್‌ನ ಆರೋಪ. ಇರಾನ್‌ ಮೇಲೆ ಇರುವ ಆರ್ಥಿಕ ದಿಗ್ಬಂಧನದ ಹೊರತಾಗಿಯೂ ಹಮಾಸ್‌, ಶಿಯಾ ಹೂಥಿ ಬಂಡುಕೋರರಿಗೆ ಇಂತಹ ನೆರವು ಒದಗಿಸಲು ಸಾಧ್ಯವಾಗಿದ್ದದ್ದು ಇಬ್ರಾಹಿಂ ರೈಸಿ ಕಾರಣಕ್ಕೆ ಎಂಬುದನ್ನು ಜಾಗತಿಕ ರಾಜಕೀಯ ತಜ್ಞರು ಒಪ್ಪಿಕೊಳ್ಳುತ್ತಾರೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಶಿಯಾ ಮುಸ್ಲಿಮರ ಹಕ್ಕುಗಳ ರಕ್ಷಣೆಯಲ್ಲಿ ಇರಾನ್‌ ಸದಾ ಮುಂದಿರುತ್ತದೆ. ಇದು ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ನಿಲುವಾದರೂ, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದ್ದು ರೈಸಿ.

ಗಾಜಾ ಪಟ್ಟಿಯ ಮೇಲೆ ಇಸ್ರೇಲ್‌ ದಾಳಿ ಮುಂದುವರಿಸಿದಂತೆ, ಇಸ್ರೇಲ್‌ ಮತ್ತು ಅದರ ಮಿತ್ರ ರಾಷ್ಟ್ರಗಳ ಹಡಗುಗಳ ಮೇಲೆ ಯೆಮನ್‌ನ ಶಿಯಾ ಹೂಥಿ ಬಂಡುಕೋರರು ದಾಳಿ ನಡೆಸುತ್ತಲೇ ಇದ್ದರು. ಜಗತ್ತಿನ ಅತಿಹೆಚ್ಚು ವಾಣಿಜ್ಯ ಹಡಗುಗಳು ಸಂಚರಿಸುವ ಕೆಂಪು ಸಮುದ್ರ ಮಾರ್ಗದ ಹೊರ್ಮುಜ್‌ ಕೊಲ್ಲಿಯಲ್ಲಿ ನಿಂತು ನಡೆಸುತ್ತಿದ್ದ ಈ ದಾಳಿಯಿಂದ ಜಾಗತಿಕ ವಾಣಿಜ್ಯ ವಹಿವಾಟಿಗೆ ಭಾರಿ ಹೊಡೆತ ಬಿದ್ದಿತ್ತು. ಹೂಥಿ ಬಂಡುಕೋರರು ದಾಳಿ ನಡೆಸಲು ಅಗತ್ಯವಿದ್ದ ಶಸ್ತ್ರಾಸ್ತ್ರ ಮತ್ತು ಹಣಕಾಸು ನೆರವು ಒದಗಿಸುತ್ತಿದ್ದದ್ದು ಇರಾನ್‌. ಹಮಾಸ್‌ ಮತ್ತು ಹೂಥಿ ಮಾತ್ರವಲ್ಲ, ಮಧ್ಯಪ್ರಾಚ್ಯದ ಇತರ ಮುಸ್ಲಿಂ ರಾಷ್ಟ್ರಗಳಾದ ಸಿರಿಯಾ ಮತ್ತು ಲೆಬನಾನ್‌ನಲ್ಲಿ ಕ್ರಮವಾಗಿ ಶಿಯಾ ಬಂಡುಕೋರರು ಮತ್ತು ಹಿಜ್ಬುಲ್ಲಾ ಬಂಡುಕೋರರಿಗೂ ಇರಾನ್‌ ನೆರವು ನೀಡುತ್ತಿದೆ ಎಂದು ಅಮೆರಿಕ ಮತ್ತು ಇಸ್ರೇಲ್‌ನ ಗೂಢಚಾರ ಸಂಸ್ಥೆಗಳು ಹೇಳಿದ್ದವು.

ಒಂದೆಡೆ ಸುನ್ನಿ ಮುಸ್ಲಿಮರ ಪ್ರಾಬಲ್ಯವನ್ನು ತೊಡೆದುಹಾಕುವುದು ಇನ್ನೊಂದೆಡೆ, ಇಸ್ರೇಲ್‌ ಪ್ರಬಲವಾಗುವುದನ್ನು ತಡೆಯುವ ತಂತ್ರದ ಭಾಗವಾಗಿ ಇರಾನ್‌ ಇಂತಹ ನೆರವು ನೀಡುತ್ತಿತ್ತು. ಹೀಗಾಗಿಯೇ ಇಸ್ರೇಲ್‌ ಸುತ್ತಲಿನ ಮುಸ್ಲಿಂ ದೇಶಗಳಲ್ಲಿ ಶಿಯಾ ಬಂಡುಕೋರರನ್ನು ಇರಾನ್‌ ಸಲಹುತ್ತಿತ್ತು. ಆ ಎಲ್ಲಾ ಕಾರ್ಯತಂತ್ರಗಳನ್ನು ಇರಾನ್‌ನ ರೆವಲ್ಯೂಷನರಿ ಗಾರ್ಡ್‌ ಫೋರ್ಸ್‌ (ಆರ್‌ಜಿಎಫ್‌) ಮೂಲಕ ನಿರ್ವಹಿಸಲಾಗುತ್ತಿತ್ತು. ಆ ಎಲ್ಲದರ ಅಂತಿಮ ಹೊಣೆ ರೈಸಿಯದ್ದಾಗಿತ್ತು. ಇವಲ್ಲದೇ ಮಧ್ಯಪ್ರಾಚ್ಯದ ಮುಸ್ಲಿಂ ದೇಶಗಳನ್ನು ಪ್ಯಾಲೆಸ್ಟೀನ್‌ ಜನರ ಪರವಾಗಿ ಒಗ್ಗೂಡಿಸುವಲ್ಲಿ ಇರಾನ್‌ ಅರ್ಥಾತ್ ರೈಸಿ ಮಹತ್ವದ ಪಾತ್ರ ವಹಿಸಿದ್ದರು. ಈ ದೇಶಗಳ ಒತ್ತಡದ ನಂತರವೇ ಇಸ್ರೇಲ್‌ನ ದಾಳಿಯ ಬಗ್ಗೆ ಐರೋಪ್ಯ ದೇಶಗಳು ಮತ್ತು ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು. ಈಗ ರೈಸಿಯ ಸಾವಿನ ನಂತರ ಇರಾನ್‌ನ ಈ ಎಲ್ಲಾ ಕಾರ್ಯತಂತ್ರಕ್ಕೆ ಭಾರಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರತಿಕೂಲ ವಾತಾವರಣದ ಕಾರಣದಿಂದ ಹೆಲಿಕಾಪ್ಟರ್‌ ಪತನವಾಗಿದೆ ಎಂದು ಇರಾನ್‌ ಸರ್ಕಾರ ಹೇಳಿದೆ. ಆದರೆ ಹೆಲಿಕಾಪ್ಟರ್‌  ಹೊಡೆದುರುಳಿಸಿರುವ ಸಾಧ್ಯತೆಯೂ ಇದೆ ಮತ್ತು ಇದರ ಹಿಂದೆ ಇಸ್ರೇಲ್‌ ಇರಬಹುದು ಎಂದೂ ಚರ್ಚೆಯಾಗುತ್ತಿದೆ.

ಪ್ಯಾಲೆಸ್ಟೀನ್‌ನ ಜನರ ಮೇಲೆ ಇಸ್ರೇಲ್‌ನ ದಾಳಿಗೆ ಇರಾನ್‌ ನೇರವಾಗಿ ಪ್ರತಿದಾಳಿ ನಡೆಸಿರಲಿಲ್ಲ. ಬಂಡುಕೋರ ಗುಂಪುಗಳ ಮೂಲಕವೇ ದಾಳಿ ನಡೆಸುತ್ತಿತ್ತು. ಈ ಎರಡೂ ದೇಶಗಳ ಮಧ್ಯೆ ಸಂಘರ್ಷವು ತೆರೆಮರೆಯಲ್ಲೇ ನಡೆಯುತ್ತಿತ್ತು. ಆದರೆ ಇದೇ ಏಪ್ರಿಲ್‌ 1ರಂದು ಇಸ್ರೇಲ್‌ನ ಪಡೆ, ಸಿರಿಯಾದ ಡಮಾಸ್ಕಸ್‌ನ ದಕ್ಷಿಣದಲ್ಲಿದ್ದ ಇರಾನ್‌ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಿತ್ತು. ಆ ದಾಳಿಯಲ್ಲಿ ಇರಾನ್‌ ಸೇನಾ ಕಮಾಂಡರ್‌, ಪ್ರಮುಖ ಸೇನಾಧಿಕಾರಿಗಳು ಸೇರಿ ಏಳು ಜನರು ಮೃತಪಟ್ಟಿದ್ದರು. ಆ ದಾಳಿಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಖಮೇನಿ ಅಂದೇ ಘೋಷಿಸಿದ್ದರು. ಅದರ ಭಾಗವಾಗಿಯೇ ಏಪ್ರಿಲ್‌ 6ರಂದು ಇರಾನ್‌, ಇಸ್ರೇಲ್‌ ಮೇಲೆ ದಾಳಿ ನಡೆಸಿತ್ತು. ಆ ದಾಳಿಯನ್ನು ಇಸ್ರೇಲ್‌ ವಿಫಲಗೊಳಿಸಿದ್ದರೂ, ಪ್ರತಿದಾಳಿಯ ಎಚ್ಚರಿಕೆ ನೀಡಿತ್ತು. ಆನಂತರದ ತಿಂಗಳೊಪ್ಪತ್ತಿನಲ್ಲಿ ಇರಾನ್‌ನ ಅಧ್ಯಕ್ಷ ರೈಸಿ ಪಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನವಾಗಿ ಅವರು ಮೃತಪಟ್ಟಿದ್ದಾರೆ. ‘ನಾವು ಏನನ್ನೂ ಮಾಡಿಲ್ಲ’ ಎಂದು ಹೇಳಿರುವ ಇಸ್ರೇಲ್‌ ವಾತಾವರಣವನ್ನು ತಿಳಿಗೊಳಿಸಲು ಯತ್ನಿಸುತ್ತಿದೆ. ಇರಾನ್‌ ಸಹ ಈ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ.

ಇದು ಒಂದು ಅಪಘಾತವಷ್ಟೇ ಎಂದು ಇರಾನ್‌ ಹೇಳಿದರೂ, ಇದರಲ್ಲಿ ತನ್ನದೇನೂ ಪಾತ್ರವಿಲ್ಲ ಎಂದು ಇಸ್ರೇಲ್‌ ಹೇಳುತ್ತಿದ್ದರೂ ಜಾಗತಿಕ ಸುದ್ದಿ ಮಾಧ್ಯಮಗಳು ಇಸ್ರೇಲ್‌ನತ್ತಲೇ ಬೊಟ್ಟು ಮಾಡಿ ವಿಶ್ಲೇಷಣೆ ಪ್ರಕಟಿಸುತ್ತಿವೆ. ಅಂತಹ ವಿಶ್ಲೇಷಣೆ ಮಾಡಲು ಕಾರಣಗಳನ್ನೂ ಅವು ಪಟ್ಟಿ ಮಾಡುತ್ತಿವೆ.

ರೈಸಿ ಅವರು ಭಾನುವಾರ ಇರಾನ್‌ನ ಉತ್ತರ ದಿಕ್ಕಿನಲ್ಲಿರುವ ಅಜರ್‌ಬೈಜಾನ್‌ನ ಗಡಿಗೆ ಹೋಗಿದ್ದರು. ಅಲ್ಲಿ ಎರಡೂ ದೇಶಗಳ ಗಡಿಯಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟೆಯನ್ನು ಉದ್ಘಾಟಿಸಿ ಅವರು ವಾಪಸಾಗುತ್ತಿದ್ದರು. ಹೀಗೆ ವಾಪಸಾಗುವ ವೇಳೆ ಅವಘಡ ಸಂಭವಿಸಿದೆ. ಆದರೆ ಎಲ್ಲರೂ ಬೊಟ್ಟು ಮಾಡಿ ಹೇಳುತ್ತಿರುವುದು ಅಜರ್‌ಬೈಜಾನ್‌ನಲ್ಲಿ ಇರುವ ಇಸ್ರೇಲ್‌ನ ರಹಸ್ಯ ವಾಯುನೆಲೆಯ ಬಗ್ಗೆ. ಅಜರ್‌ಬೈಜಾನ್‌ನಲ್ಲಿ ಇರುವ ಸೇನಾನೆಲೆಯ ನಿರ್ವಹಣೆಯ ಹೊಣೆಯನ್ನು ಇಸ್ರೇಲ್‌ ಹೊತ್ತುಕೊಂಡಿದೆ. ಇಸ್ರೇಲ್‌ನ ರಹಸ್ಯ ಕಾರ್ಯಾಚರಣಾ ಪಡೆ ‘ಮೊಸ್ಸಾದ್‌’ನ ಒಂದು ನೆಲೆಯಾಗಿ ಇದು ಬಳಕೆಯಾಗುತ್ತಿದೆ. ಈ ಬೆಳವಣಿಗೆ ಸರಿಯಲ್ಲ ಎಂದು 2012ರಲ್ಲಿ ಅಮೆರಿಕದ ವಿದೇಶಾಂಗ ಸಚಿವಾಲಯ ಇಸ್ರೇಲ್‌ಗೆ ಎಚ್ಚರಿಕೆ ನೀಡಿತ್ತು.

ಈ ವಾಯುನೆಲೆ ಈಗಲೂ ಕಾರ್ಯಾಚರಣೆಯಲ್ಲಿದೆ ಎನ್ನಲಾಗಿದೆ. ಭಾನುವಾರ ರೈಸಿ ಅವರ ಹೆಲಿಕಾಪ್ಟರ್‌ ಪತನವಾದ ಸ್ಥಳದಿಂದ ಈ ವಾಯುನೆಲೆಗೆ ಇರುವ ಅಂತರ 330 ಕಿ.ಮೀ. ಮಾತ್ರ. ಹೀಗಾಗಿ ಈ ಘಟನೆಯಲ್ಲಿ ಇಸ್ರೇಲ್‌ನ ಕೈವಾಡವನ್ನು ತಳ್ಳಿಹಾಕಲಾಗದು ಎಂದು ವಿಶ್ಲೇಷಿಸಲಾಗುತ್ತಿದೆ.

ಭಾನುವಾರದ ಘಟನೆಯ ಸಲುವಾಗಿ ಇಸ್ರೇಲ್‌ನತ್ತ ಬೊಟ್ಟು ಮಾಡಲು ಇದೊಂದೇ ಕಾರಣವಲ್ಲ. ಇಸ್ರೇಲ್‌ನ ಮೊಸ್ಸಾದ್‌ ರಹಸ್ಯ ಪಡೆ ಈ ಹಿಂದೆ ಇರಾನ್‌ನ ನೆಲದಲ್ಲೇ ಕಾರ್ಯಾಚರಣೆ ನಡೆಸಿ ಸೇನಾಧಿಕಾರಿಗಳನ್ನು, ಪರಮಾಣು ವಿಜ್ಞಾನಿಗಳನ್ನು ಹತ್ಯೆ ಮಾಡಿದೆ. 2020ರಲ್ಲಿ ಇರಾನ್‌ ನೆಲದಲ್ಲೇ ಅಂತಹ ಕಾರ್ಯಾಚರಣೆ ನಡೆಸಿದ್ದ ಇಸ್ರೇಲ್‌, ಇರಾನ್‌ನ ಪರಮಾಣು ವಿಜ್ಞಾನಿ ಮೊಹಸೀನ್‌ ಫಕ್ರಿಝಡೇಃ ಅವರನ್ನು ಕೊಂದಿತ್ತು. 1,300 ಕಿ.ಮೀ. ದೂರದಲ್ಲಿ ಕೂತು ರೋಬೊ ಮೂಲಕ ದಾಳಿ ನಡೆಸಿ ವಿಜ್ಞಾನಿಯನ್ನು ಕೊಲ್ಲಲಾಗಿತ್ತು. 2007ರಿಂದ ಈವರೆಗೆ ಈ ರೀತಿ ಐವರು ವಿಜ್ಞಾನಿಗಳನ್ನು ಕೊಲ್ಲಲಾಗಿದೆ ಎಂದು 2021ರಲ್ಲಿ ನ್ಯೂಯಾರ್ಕ್‌ ಟೈಮ್ಸ್‌ ವಿಸ್ತೃತ ವರದಿ ಪ್ರಕಟಿಸಿತ್ತು.

‘ಟೆಹ್ರಾನ್‌ನ ಕಟುಕ’

ಇಬ್ರಾಹಿಂ ರೈಸಿ ಒಬ್ಬ ಕಡು ಮೂಲಭೂತವಾದಿ. ‘ಟೆಹ್ರಾನ್‌ನ ಕಟುಕ’ ಹಾಗೂ ‘ಕಠಿಣ ವ್ಯಕ್ತಿ’ ಎಂಬವು ಅವರಿಗಿದ್ದ ಬಿರುದುಗಳು. 1988ರಲ್ಲಿ ಅಂದಿನ ಪರಮೋಚ್ಚ ನಾಯಕ ಅಯಾತ್‌–ಉಲ್ಲಾ ರೋಹ್‌–ಉಲ್ಲಾ ಖಮೇನಿ ಅವರು ರಚಿಸಿದ್ದ, ‘ಮರಣದಂಡನಾ ಜಾರಿ ಸಮಿತಿ’ಯ ಸದಸ್ಯರಾಗಿದ್ದರು. ಆಗ ಅವರಿಗೆ 28 ವಯಸ್ಸು. ಐದನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ ರೈಸಿ, ಹಂತ ಹಂತವಾಗಿ ಇರಾನ್‌ನ ಅಧ್ಯಕ್ಷ ಗಾದಿಗೆ ಏರಿದ್ದವರು.

ಇರಾನ್‌ನ ಈಗಿನ ಪರಮೋಚ್ಚ ನಾಯಕ ಖಮೇನಿ ಅವರ ನಂತರ, ಆ ಸ್ಥಾನಕ್ಕೇರುವ ಎಲ್ಲ ‘ಅರ್ಹತೆ’ಯನ್ನು ರೈಸಿ ಹೊಂದಿದ್ದರು. ದೇಶದ ಅಧ್ಯಕ್ಷನನ್ನು ‘ಕಟುಕ’ ಎಂದು ಕರೆದರೂ, ಈ ಬಗ್ಗೆ ರೈಸಿ ಅವರು ತಲೆಕೆಡಿಸಿಕೊಂಡಿರಲಿಲ್ಲ. ಅವರ ಕಾರ್ಯದ ಬಗ್ಗೆ ಅವರಿಗೆ ಹೆಮ್ಮೆಯೇ ಇದ್ದಿತ್ತು.

ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಅಪಘಾತಕ್ಕೀಡಾಗಿದೆ, ಅವರು ಬದುಕುಳಿದಿರುವುದು ಅನುಮಾನ ಎಂಬ ಸುದ್ದಿಯು ಹರಿದಾಡ ತೊಡಗಿದ್ದಾಗ, ಇರಾನ್‌ನ ದೊಡ್ಡ ಸಂಖ್ಯೆಯ ಜನರು ಸಂಭ್ರಮಾಚರಣೆ ನಡೆಸಿದ್ದರು. ಇದರ ದೃಶ್ಯಗಳು, ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರೈಸಿ ಅವರ ಸಾವಿನ ಸುದ್ದಿ ಹೊರಬಂದಾಗ, ಜನರು ಸಂಭ್ರಮಾಚರಣೆ ಮಾಡಬಾರದು ಎನ್ನುವ ಕಾರಣಕ್ಕೆ ರೈಸಿ ಅವರೇ ಪೋಷಿಸಿದ್ದ ರೆವಲ್ಯೂಷನರಿ ಗಾರ್ಡ್ಸ್‌ ಸಿಬ್ಬಂದಿಯನ್ನು ಬೀದಿ ಬೀದಿಗಳಲ್ಲಿ ನಿಯೋಜಿಸಲಾಗಿದೆ ಎಂಬಂಥ ವಿಡಿಯೊಗಳು ಹರಿದಾಡುತ್ತಿವೆ. ಜನರ ಈ ಎಲ್ಲ ಪ್ರತಿಕ್ರಿಯೆಗಳಿಗೆ ರೈಸಿ ಅವರು ಅನುಸರಿಸಿದ, ಬದುಕಿದ ರೀತಿಯೇ ಕಾರಣ.

1979ರ ನಂತರ ಇರಾನ್‌ನಲ್ಲಿ ಇಸ್ಲಾಮಿಕ್‌ ಕ್ರಾಂತಿ ನಡೆಯುತ್ತದೆ. ಒಂದು ಕಾಲಕ್ಕೆ ಆಧುನಿಕ ಆಲೋಚನೆಗಳೊಂದಿಗೆ ಮುನ್ನೆಡೆಯುತ್ತಿದ್ದ ದೇಶವು, ಇಸ್ಲಾಮಿಕ್‌ ಕ್ರಾಂತಿಯ ನಂತರ ಕಟ್ಟಾ ಸಂಪ್ರದಾಯವಾದಕ್ಕೆ ಹೊರಳಿತು. 1960ರಲ್ಲಿ ರೈಸಿ ಅವರು ಜನಿಸಿದರು. ಇಸ್ಲಾಮಿಕ್‌ ಕ್ರಾಂತಿಯ ಪ್ರಭಾವದಲ್ಲಿ ಬೆಳೆದ ರೈಸಿ ಅವರು ಮೂಲಭೂತವಾದಕ್ಕೆ ವಾಲಿಕೊಂಡರು. ತಮ್ಮ 20ನೇ ವಯಸ್ಸಿನಲ್ಲಿ ಅವರು ಸರ್ಕಾರಿ ವಕೀಲರಾದರು. ಮುಂದೆ 2019ರಲ್ಲಿ ಅವರನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯಸ್ಥರನ್ನಾಗಿಯೂ ಮಾಡಲಾಗುತ್ತದೆ.

ಇರಾನ್‌ ಹಾಗೂ ಇರಾಕ್‌ ನಡುವಿನ ಎಂಟು ವರ್ಷಗಳ ಸುದೀರ್ಘ ಯುದ್ಧವು ಇನ್ನೇನು ಮುಗಿಯುವ ಹಂತದಲ್ಲಿತ್ತು. ಅಷ್ಟು ವರ್ಷಗಳಲ್ಲಾಗಲೇ ಸಾವಿರಾರು ರಾಜಕೀಯ ಎದುರಾಳಿಗಳನ್ನು ಬಂಧಿಸಲಾಗಿತ್ತು ಮತ್ತು ಮರಣದಂಡನೆಯನ್ನು ನೀಡಲಾಗಿತ್ತು. ಆದರೆ, 1988ರಲ್ಲಿ ದೊಡ್ಡ ಸಂಖ್ಯೆಯ ರಾಜಕೀಯ ಕೈದಿಗಳನ್ನು ಹತ್ಯೆ ಮಾಡಲಾಯಿತು. ಇದಕ್ಕಾಗಿಯೇ ಖಮೇನಿ ಅವರು ‘ಮರಣದಂಡನೆ ಜಾರಿ ಸಮಿತಿ’ಯನ್ನು ರಚಿಸಿದ್ದು ಮತ್ತು ರೈಸಿ ಅವರನ್ನು ಇದರ ಸದಸ್ಯರನ್ನಾಗಿಸಿದ್ದು. ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ಪ್ರಕಾರ, ಇರಾನ್‌ನಲ್ಲಿ ಸುಮಾರು 5,000 ರಾಜಕೀಯ ಕೈದಿಗಳನ್ನು ಹತ್ಯೆ ಮಾಡಲಾಗಿದೆ. ಐದು ನಿಮಿಷ ವಿಚಾರಣೆ ನಡೆಸಿ ಮರಣದಂಡನೆಯ ಶಿಕ್ಷೆ ನೀಡಲಾಗುತ್ತಿತ್ತು. ರೈಸಿ ಅವರು ಸರ್ಕಾರಿ ವಕೀಲರಾಗಿದ್ದರು. ಮರಣದಂಡನೆ ಜಾರಿಯ ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಇದೇ ಕಾರಣಕ್ಕೆ, ರೈಸಿ ಅವರ ಮೇಲೆ ಅಮೆರಿಕವು ದಿಗ್ಭಂದನ ಹೇರಿತ್ತು.

ಸ್ಪರ್ಧೆಯೇ ಇಲ್ಲದೆ ಗೆದ್ದರು:
2021ರಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದರು. ವಿರೋಧಿಗಳ ನಾಮಪತ್ರಗಳನ್ನೇ ರದ್ದು ಮಾಡಿಸಿದರು. ದೇಶದ ಇತಿಹಾಸದಲ್ಲೇ ಕಡಿಮೆ ಮತದಾನ ಆ ವರ್ಷ ನಡೆದಿತ್ತು. ಒಟ್ಟು ಮತದಾರರಲ್ಲಿ ಮತದಾನ ಮಾಡಿದ್ದು ಶೇ 48ರಷ್ಟು ಮಂದಿ ಮಾತ್ರ.

ಅಧ್ಯಕ್ಷರಾದ ಬಳಿಕ ಪತ್ರಕರ್ತರು ರೈಸಿ ಅವರಲ್ಲಿ 1988ರ ಹತ್ಯಾಕಾಂಡದ ಕುರಿತು ಪ್ರಶ್ನೆ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಒಬ್ಬ ನ್ಯಾಯಾಧೀಶ, ಒಬ್ಬ ವಕೀಲನು ದೇಶದ ಜನರ ಭದ್ರತೆಯ ಪರ ವಾದಿಸಿದರೆ, ಆತನನ್ನು ಹೊಗಳಬೇಕು. ಯಾವೆಲ್ಲಾ ಸ್ಥಾನಗಳನ್ನು ನಾನು ನಿಭಾಯಿಸಿದ್ದೇನೊ ಎಲ್ಲದರಲ್ಲಿಯೂ ನಾನು ಮಾನವಹಕ್ಕುಗಳ ಕುರಿತು ವಾದಿಸಿದ್ದೇನೆ ಎಂಬ ಹೆಮ್ಮೆ ಇದೆ’ ಎಂದಿದ್ದರು.

ಹಿಜಾಬ್‌ ಹೋರಾಟ:
ಹಿಜಾಬ್‌ ಧರಿಸುವುದು ಕಡ್ಡಾಯ ಮಾಡಿ, 2022ರಲ್ಲಿ ರೈಸಿ ಅವರು ಕಾನೂನು ಮಾಡುತ್ತಾರೆ. ಇದು ದೇಶದಲ್ಲಿ ದೊಡ್ಡ ಹೋರಾಟವನ್ನೇ ಹುಟ್ಟು ಹಾಕಿತು. ಮಾಸಾ ಅಮೀನಿ ಎಂಬ ಯುವತಿಯು ಪೊಲೀಸರ ಕಸ್ಟಡಿಯಲ್ಲಿ ಮೃತಪಟ್ಟರು. ಸುಮಾರು ಒಂದು ವರ್ಷ ನಡೆದ ಹೋರಾಟದಲ್ಲಿ ಸುಮಾರು 500 ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಹೋರಾಟದಲ್ಲಿ ಮುಖ್ಯಪಾತ್ರ ವಹಿಸಿದ್ದವರು, ಹೋರಾಟದಲ್ಲಿ ತೊಡಗಿಕೊಂಡವರನ್ನು ಇರಾನ್‌ನಲ್ಲಿ ಗಲ್ಲಿಗೇರಿಸಲಾಗಿದೆ ಎನ್ನುತ್ತವೆ ಹಲವು ಮಾನವಹಕ್ಕು ಹೋರಾಟ ಸಂಸ್ಥೆಗಳು.

‘ರೈಸಿ ಅವರು, ಸರ್ಕಾರದ ನೀತಿಗಳನ್ನು ವಿಮರ್ಶಿಸುವವರನ್ನು ಜೈಲಿಗೆ ತಳ್ಳುವುದು, ಚಿತ್ರಹಿಂಸೆ ನೀಡುವುದು ಮತ್ತು ಜನರನ್ನು ಕೊಲ್ಲುವುದರ ವ್ಯವಸ್ಥೆಯ ದೊಡ್ಡ ಸ್ತಂಭವಾಗಿದ್ದರು’ ಎನ್ನುತ್ತಾರೆ ಇರಾನ್‌ ಮಾನವ ಹಕ್ಕುಗಳ ಎನ್‌ಜಿಒವೊಂದರ ಕಾರ್ಯನಿರ್ವಹಣಾ ನಿರ್ದೇಶಕ ಹಾದಿ ಘಮೇನಿ. ಇಸ್ರೇಲ್‌–ಹಮಾಸ್‌ ಯುದ್ಧ ನಡೆಯುತ್ತಿದೆ. ಇಸ್ರೇಲ್‌ ಯುದ್ಧ ನಿಲ್ಲಿಸುತ್ತಿಲ್ಲ. ಇರಾನ್‌ನ ರಾಯಭಾರ ಕಚೇರಿಯ ಮೇಲೂ ಇಸ್ರೇಲ್‌ ದಾಳಿ ನಡೆಸುತ್ತದೆ. ಇದಕ್ಕೆ ಪ್ರತಿಯಾಗಿ ಇರಾನ್‌ ಕಳೆದ ಏಪ್ರಿಲ್‌ನಲ್ಲಿ ಇಸ್ರೇಲ್‌ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ರೈಸಿ, ‘ಇಸ್ರೇಲ್‌ ಏನಾದರೂ ಪ್ರತೀಕಾರಕ್ಕೆ ಮುಂದಾದರೆ, ಯಹೂದಿಗಳು ನಾಶವಾಗುವಂತೆ ಮಾಡಬೇಕಾಗುತ್ತದೆ’ ಎಂದಿದ್ದರು. ಈಗ ಅವರು ಹೆಲಿಕಾಪ್ಟರ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಭಾರತವು ಒಂದು ದಿನದ ಶೋಕಾಚರಣೆ ನಡೆಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT