ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಸಮುದ್ರದಾಳಕ್ಕೆ ಇಳಿದ ‘ಟೈಟನ್‌’ ಇರುವುದೆಲ್ಲಿ?

Published 22 ಜೂನ್ 2023, 23:31 IST
Last Updated 22 ಜೂನ್ 2023, 23:31 IST
ಅಕ್ಷರ ಗಾತ್ರ

–ಜಯಸಿಂಹ. ಆರ್

‘ನಮಗೆ ಸಮುದ್ರದ ತಳದ ಬಗ್ಗೆ ಗೊತ್ತಿರುವುದಕ್ಕಿಂತ, ಚಂದ್ರನ ಮೇಲ್ಮೈ ಬಗ್ಗೆ ಹೆಚ್ಚು ತಿಳಿದಿದೆ. ಏಕೆಂದರೆ, ಸಮುದ್ರದ ತಳವನ್ನು ನಾವಿನ್ನೂ ಇಡಿಯಾಗಿ ನೋಡಿಯೇ ಇಲ್ಲ’- ಬ್ರಿಟನ್‌ನ ಕೀಲ್‌ ವಿಶ್ವವಿದ್ಯಾಲಯದ ಭೂಗೋಳ ವಿಜ್ಞಾನಿ ಜೇಮ್‌ ಪ್ರಿಂಗ್ಲೆ ಅವರ ಮಾತಿದು. ಚಂದ್ರನ ಮೇಲ್ಮೈಗೆ ಮಾನವನನ್ನು ಕಳುಹಿಸುವ ತಂತ್ರಜ್ಞಾನ ಮತ್ತು ಸವಲತ್ತುಗಳು ಬಳಕೆಗೆ ಬಂದು ನಾಲ್ಕಾರು ದಶಕಗಳೇ ಕಳೆದಿವೆ. ಆದರೆ, ಸಮುದ್ರದ ಅತ್ಯಂತ ಆಳಕ್ಕೆ ಮಾನವನನ್ನು ಕರೆದೊಯ್ದು, ವಾಪಸ್‌ ಕರೆತರಬಲ್ಲ ಸಾಧನಗಳನ್ನು ಈವರೆಗೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಅತ್ಯಂತ ತಳದವರೆಗೆ ಅಲ್ಲದಿದ್ದರೂ, ನಾಲ್ಕು ಕಿ.ಮೀ.ನಷ್ಟು ಆಳಕ್ಕೆ ಕರೆದೊಯ್ಯಬಲ್ಲ ಕೆಲವೇ ನೌಕೆಗಳು ಜಗತ್ತಿನಲ್ಲಿವೆ. ಅಂತಹ ನೌಕೆಯೊಂದರ ಒಳಗೆ ಕೂತು, ಸಮುದ್ರದಾಳದಲ್ಲಿ ಬಿದ್ದಿರುವ ಟೈಟಾನಿಕ್‌ ಹಡಗಿನ ಅವಶೇಷಗಳನ್ನು ನೋಡುವ ಸಾಹಸಕ್ಕೆ ಕೆಲವು ಮಂದಿ ಈಚೆಗೆ ಮುಂದಾಗಿದ್ದರು. ಅವರನ್ನು ಹೊತ್ತಿದ್ದ ಆ ನೌಕೆಯೇ ಈಗ ನಾಪತ್ತೆಯಾಗಿದೆ.

ಭೂಮಿಯ ಮುಕ್ಕಾಲುಪಾಲು ಪ್ರದೇಶವನ್ನು ಆವರಿಸಿರುವ ಸಮುದ್ರ ತನ್ನ ಒಡಲೊಳಗೆ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದೆ. ಈ ಕಾರಣದಿಂದಲೇ, ಆಳ ಸಮುದ್ರದ ಸಂಶೋಧನೆ, ಸರ್ವೇಕ್ಷಣೆ ಮತ್ತು ಪ್ರವಾಸಕ್ಕೆ ಎಲ್ಲಿಲ್ಲದ ಬೇಡಿಕೆ. ಸಮುದ್ರಗಳ ಬಗ್ಗೆ ಹೆಚ್ಚು ತಿಳಿಯದೇ ಇರುವ ಕಾರಣಕ್ಕೇ, ಕುತೂಹಲಿ ಮಾನವನನ್ನು ಅವು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಮುದ್ರದಾಳದ ಜೀವಿ ಇರಬಹುದು, ಸಮುದ್ರದ ತಳದಲ್ಲಿರುವ ಖನಿಜ ನಿಕ್ಷೇಪಗಳಿರಬಹುದು ಮತ್ತು ಅವಘಡಗಳ ಕಾರಣಕ್ಕೆ ಮುಳುಗಿ, ಸಮುದ್ರದ ತಳ ಸೇರಿದ ಹಡಗು–ದೋಣಿಗಳ ಅವಶೇಷಗಳಿರಬಹುದು. ಈ ರೀತಿ ಅತ್ಯಂತ ಕುತೂಹಲ ಉಳಿಸಿಕೊಂಡಿರುವ ಅವಶೇಷಗಳಲ್ಲಿ ಅತ್ಯಂತ ಪ್ರಮುಖವಾದುದು ಟೈಟಾನಿಕ್‌.

1997ರಲ್ಲಿ ತೆರೆಗೆ ಬಂದಿದ್ದ ಟೈಟಾನಿಕ್‌ ಸಿನಿಮಾ ಬಹುತೇಕರಿಗೆ ನೆನಪಿರಬಹುದು. ಜಾಕ್‌ ಮತ್ತು ರೋಸ್‌ ನಡುವಣ ಪ್ರೇಮ, ಅತ್ಯಂತ ಅಮೂಲ್ಯವಾದ ವಜ್ರದ ಹಾರ, ಹಿಮಗಡ್ಡೆಗೆ ಬಡಿದು ಹೋಳಾದ ಹಡಗು ಮತ್ತು ಸಾವಿರಾರು ಮಂದಿ ಬಲಿಯಾಗುವ ದೃಶ್ಯಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ. ಈ ಟೈಟಾನಿಕ್‌ ಹಡಗಿನ ದುರಂತವು ನೈಜ ಘಟನೆಯಾಗಿದ್ದ ಕಾರಣ, ಅಂದು ಮುಳುಗಿದ ಹಡಗು ಏನಾಗಿರಬಹುದು ಎಂಬ ಕುತೂಹಲ ಬಹುತೇಕರದ್ದು.

1912ರಲ್ಲಿ ಅತ್ಯಾಧುನಿಕ ಮತ್ತು ಎಂದಿಗೂ ಮುಳುಗದ ನೌಕೆ ಎಂದು ಹೆಸರಾಗಿದ್ದ ‘ಆರ್‌ಎಂಎಸ್‌ ಟೈಟಾನಿಕ್‌’ ಹಡಗು ತಮ್ಮ ಮೊದಲ ಪ್ರಯಾಣದಲ್ಲೇ ಸಮುದ್ರದ ತಳ ಸೇರಿತ್ತು. ಅದರ ಅವಶೇಷಗಳನ್ನು ಪತ್ತೆ ಮಾಡುವ ಸಂಬಂಧ ನಡೆದ ಹಲವು ಶೋಧ ಕಾರ್ಯಾಚರಣೆಗಳು ವಿಫಲವಾಗಿದ್ದವು. ಟೈಟಾನಿಕ್‌ನಲ್ಲಿದ್ದ ಪ್ರಯಾಣಿಕರೊಬ್ಬರ ಬಳಿ ಇತ್ತು ಎನ್ನಲಾದ ‘ಮೆಗ್‌ಲಾಡನ್‌’ ಕಂಠೀಹಾರವನ್ನು (30 ಲಕ್ಷದಿಂದ 3.6 ಕೋಟಿ ವರ್ಷಗಳ ಹಿಂದೆ ಬದುಕಿದ್ದ ಮೆಗ್‌ಲಾಡನ್‌ ಶಾರ್ಕ್‌ನ ಹಲ್ಲಿನಿಂದ ತಯಾರಿಸಲಾದ ಕಂಠೀಹಾರ. ಸಿನಿಮಾದಲ್ಲಿ ಇದನ್ನು ವಜ್ರದ ಹಾರ ಎಂದು ತೋರಿಸಲಾಗಿದೆ) ಪತ್ತೆ ಮಾಡಲು ಪ್ರಯತ್ನಿಸಿ ಹಣ ಕಳೆದುಕೊಂಡ ಸಾವಿರಾರು ಮಂದಿ ಇದ್ದಾರೆ. ಈ ರೀತಿಯ ಸಾವಿರಾರು ಪ್ರಯತ್ನಗಳ ಫಲವಾಗಿ ಕೊನೆಗೊಮ್ಮೆ ಟೈಟಾನಿಕ್‌ನ ಅವಶೇಷಗಳನ್ನು ಪತ್ತೆ ಮಾಡಲಾಯಿತು. ಅದೂ 73 ವರ್ಷಗಳ ನಂತರ ಅಂದರೆ, 1985ರಲ್ಲಿ. ಆನಂತರ ಟೈಟಾನಿಕ್‌ ಬಗೆಗಿನ ಕುತೂಹಲ ಹೆಚ್ಚುತ್ತಲೇ ಹೋಯಿತು.

ಸಮುದ್ರದ ಮೇಲ್ಮೈನಿಂದ 3,800 ಮೀಟರ್‌ ಅಡಿಯಲ್ಲಿ ಟೈಟಾನಿಕ್‌ ಅವಶೇಷವಿತ್ತು. ಅತ್ಯಾಧುನಿಕ ಕ್ಯಾಮೆರಾಗಳನ್ನು ಹೊತ್ತು ಅಲ್ಲಿಗೆ ಹೋಗಿ ಬರಬಲ್ಲ ಹಲವಾರು ಮಾನವರಹಿತ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಅವುಗಳ ಮೂಲಕ ಟೈಟಾನಿಕ್‌ನ ಅವಶೇಷಗಳ ಚಿತ್ರ ಮತ್ತು ವಿಡಿಯೊಗಳನ್ನು ಸೆರೆಹಿಡಿಯಲಾಯಿತು. 1986ರಲ್ಲೇ ಮಾನವರನ್ನು ಹೊತ್ತ ನೌಕೆ ಮೊದಲ ಬಾರಿ ಟೈಟಾನಿಕ್‌ ಅವಶೇಷಕ್ಕೆ ಭೇಟಿ ನೀಡಿಬಂತು. ಆನಂತರ ಪ್ರವಾಸಕ್ಕೆಂದು ಜನರನ್ನೂ ಅಲ್ಲಿಗೆ ಕರೆದೊಯ್ಯುವ ಯತ್ನಗಳು ಹೆಚ್ಚು ನಡೆದವು. ಅಂತಹ ಸಾಹಸಕ್ಕೆ ಕೈಹಾಕಿದ ಕಂಪನಿಗಳಲ್ಲಿ ಓಷನ್‌ಗೇಟ್‌ ಸಹ ಒಂದು. ಆ ಯತ್ನದಲ್ಲಿ ಓಷನ್‌ಗೇಟ್‌ ಯಶಸ್ವಿಯೂ ಆಯಿತು. ಅದಕ್ಕಾಗಿ ಓಷನ್‌ಗೇಟ್‌ ಅಭಿವೃದ್ಧಿಪಡಿಸಿದ ‘ಟೈಟನ್‌’ ಎಂಬ ಸಬ್‌ಮರ್ಸಿಬಲ್‌ ನೌಕೆ 2021ರಲ್ಲಿ ಟೈಟಾನಿಕ್ ಅವಶೇಷಗಳತ್ತ ನಾಲ್ವರು ಸಂಶೋಧಕರನ್ನು ಕರೆದುಕೊಂಡು ಹೋಗಿಬಂತು. 2022ರಲ್ಲಿ ಎರಡನೇ ಕಾರ್ಯಾಚರಣೆ ನಡೆಸಲಾಯಿತು. 2023ರ ಮೂರನೇ ಕಾರ್ಯಾಚರಣೆಗೆ 2022ರಿಂದಲೇ ಸಿದ್ಧತೆ ನಡೆಸಲಾಗಿತ್ತು. ಅದರಂತೆ ಜೂನ್‌ ಮೂರನೇ ವಾರದಲ್ಲಿ ಒಬ್ಬ ಪೈಲಟ್‌ ಮತ್ತು ಬ್ರಿಟನ್‌ನ ನಾಲ್ವರು ಉದ್ಯಮಿಗಳನ್ನು ಹೊತ್ತು ಅಂಟ್ಲಾಂಟಿಕ್ ಒಡಲಿಗೆ ಧುಮುಕಿತ್ತು. ಯಾತ್ರೆ ಆರಂಭಿಸಿದ ಒಂದೂಮುಕ್ಕಾಲು ತಾಸಿನಲ್ಲೇ ‘ಟೈಟನ್‌’ ತನ್ನ ಮಾತೃ ನೌಕೆಯೊಂದಿಗಿನ ಸಂಪರ್ಕ ಕಡಿದುಕೊಂಡಿದೆ.

ಅಮೆರಿಕ, ಕೆನಡಾ, ಫ್ರಾನ್ಸ್‌, ಬ್ರಿಟನ್‌ನ ರಕ್ಷಣಾ ತಂಡಗಳು ‘ಟೈಟನ್‌’ನ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿವೆ. ಈ ವರದಿ ಬರೆಯುವ ಹೊತ್ತಿಗೆ, ಸಮುದ್ರದಾಳದಲ್ಲಿ ಒಂದು ಸದ್ದನ್ನು ಸೋನಾರ್‌ ಯಂತ್ರಗಳು ಗ್ರಹಿಸಿದ್ದವು. ಆ ಸದ್ದು ಬಂದತ್ತ ರಕ್ಷಣಾ ತಂಡಗಳು ಧಾವಿಸಿದ್ದವು. ಕೆಲವೇ ಗಂಟೆಗಳಲ್ಲಿ ಸಮುದ್ರದಾಳದಿಂದ ವಾಪಸ್‌ ಬರಬೇಕಿದ್ದ ಟೈಟನ್‌ ನೌಕೆ, ಮೂರು ದಿನ ಕಳೆದರೂ ಪತ್ತೆಯಾಗಿಲ್ಲ. 

‘ಟೈಟನ್‌’ ರಕ್ಷಣಾ ಕಾರ್ಯಾಚರಣೆ ಹೇಗೆ?

ಟೈಟನ್‌ ನೌಕೆ ಎಲ್ಲಿದೆ ಎಂಬುದರ ಬಗ್ಗೆ ಸ್ವಲ್ಪವೂ ಸುಳಿವಿಲ್ಲ. ತುರ್ತು ಸಂದರ್ಭದಲ್ಲಿ ಸಮುದ್ರದ ಮೇಲ್ಮೈಗೆ ಬರುವ ಸವಲತ್ತು ಟೈಟನ್‌ನಲ್ಲಿ ಇದೆ. ಅದೂ ವಿಫಲವಾಗಿದ್ದರೆ ಕಾರ್ಯಾಚರಣೆ ಕಷ್ಟವಾಗುತ್ತದೆ. ಟೈಟನ್‌ ಸಮುದ್ರದ ತಳ ಸೇರಿದ್ದರೆ ಮತ್ತು ಅದು ಸಮುದ್ರದ ಮೇಲ್ಮೈನಲ್ಲಿದ್ದರೆ ಎಂಬ ಎರಡೂ ದಿಸೆಯಲ್ಲಿ ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಆ ಕಾರ್ಯಾಚರಣೆಗಳ ಸಾಧಕ–ಬಾಧಕಗಳು ಇಂತಿವೆ.

1. ಸಮುದ್ರದ ತಳ ಸೇರಿದ್ದರೆ

ಟೈಟಾನಿಕ್‌ ಅವಶೇಷ ಇರುವ ಪ್ರದೇಶದ ಸರಾಸರಿ ಆಳವು 3,800 ಮೀಟರ್‌ (12,500 ಅಡಿ). ಅಷ್ಟು ಆಳಕ್ಕೆ ಸೂರ್ಯನ ರಶ್ಮಿ ಒಂದಿನಿತೂ ತಲುಪುವುದಿಲ್ಲ. ಅಂತಹ ಪ್ರದೇಶದಲ್ಲಿ ಟೈಟನ್‌ ಸಿಲುಕಿದ್ದರೆ, ಅದನ್ನು ಪತ್ತೆ ಮಾಡುವುದೇ ಕಷ್ಟದ ಕೆಲಸ ಎಂಬುದು ತಜ್ಞರ ಅಭಿಪ್ರಾಯ. ಅಷ್ಟು ಆಳದಲ್ಲಿ ಟೈಟನ್‌ ಸಿಲುಕಿದ್ದರೆ ಅದನ್ನು ಪತ್ತೆ ಮಾಡಬಹುದಷ್ಟೇ, ಮೇಲಕ್ಕೆ ತರುವುದು ಸಾಧ್ಯವೇ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಾಧ್ಯತೆಗಳು

* ಕ್ಯಾಮೆರಾ ಮತ್ತು ಸೋನಾರ್ ಯಂತ್ರಗಳಿರುವ ಮಾನವರಹಿತ ಸಬ್‌ಮರ್ಸಿಬಲ್‌ ನೌಕೆಗಳನ್ನು ಅಲ್ಲಿಗೆ ಕಳುಹಿಸಿ, ಪೈಲಟ್‌ ಮತ್ತು ಯಾತ್ರಿಕರ ಸ್ಥಿತಿಗತಿಯನ್ನು ಪರಿಶೀಲಿಸಬಹುದು

* ಟೈಟನ್ ನೌಕೆಯ ಚಿತ್ರಗಳನ್ನು ಸೆರೆ ಹಿಡಿಯಬಹುದು ಮತ್ತು ವಿಡಿಯೊ ಚಿತ್ರೀಕರಣ ಮಾಡಬಹುದು

ಸವಾಲುಗಳು

* 3,800 ಮೀಟರ್‌ ಆಳದಲ್ಲಿ ಉಷ್ಣಾಂಶವೇ ಇರುವುದಿಲ್ಲ. ಅಂತಹ ಥಂಡಿಯ ಪ್ರದೇಶದಲ್ಲಿ ಇಷ್ಟು ದೀರ್ಘಾವಧಿಯವರೆಗೆ ‘ಟೈಟನ್‌’ ನೌಕೆಯ ಬ್ಯಾಟರಿಗಳು, ಎಲೆಕ್ಟ್ರಾನಿಕ್‌ ಉಪಕರಣಗಳು ಕಾರ್ಯನಿರ್ವಹಿಸುತ್ತವೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ

* ಅಷ್ಟು ಆಳದಲ್ಲಿ ಒಂದು ನೌಕೆ ಇರುವಾಗ, ಅದರ ಮೇಲೆ ಇರುವ ಲಕ್ಷಾಂತರ ಟನ್‌ಗಳಷ್ಟು ನೀರಿನ ಭಾರ ಮತ್ತು ಒತ್ತಡವನ್ನು ಅದು ತಡೆದುಕೊಳ್ಳಬೇಕು. ಹಾಗೆ ತಡೆದುಕೊಳ್ಳುವುದರಲ್ಲಿ ನೌಕೆಯ ಕವಚ ವಿಫಲವಾದರೆ, ಅದು ಕಾಗದದಂತೆ ಮುದುಡಿ ಹೋಗುತ್ತದೆ

* ಅಷ್ಟು ಆಳದಲ್ಲಿ ನೌಕೆ ಸಿಲುಕಿದ್ದರೆ, ಅಷ್ಟು ಆಳಕ್ಕೆ ಹೋಗಿ ಆ ನೌಕೆಯನ್ನು ಮೇಲಕ್ಕೆ ಎಳೆದು ತರಬಲ್ಲ ಸಾಮರ್ಥ್ಯವಿರುವ ಯಾವುದೇ ನೌಕೆ ಜಗತ್ತಿನಲ್ಲಿ ಇಲ್ಲ. ಹೀಗಾಗಿ ಅಂತಹ ನೌಕೆಯನ್ನು ಮೇಲಕ್ಕೆ ಎತ್ತಿ ತರಲು ಸಾಧ್ಯವೇ ಇಲ್ಲ

* ಅಷ್ಟು ಆಳದಲ್ಲಿನ ನೀರಿನ ಒತ್ತಡವನ್ನು ತಡೆದು ಕೊಳ್ಳಬಲ್ಲಂತಹ ‘ಮುಳುಗು ತೊಡುಗೆ’ಗಳನ್ನು ಈವರೆಗೂ ಅಭಿವೃದ್ಧಿಸಿಲ್ಲ. ಹೀಗಾಗಿ ಅಷ್ಟು ಆಳಕ್ಕೆ ಹೋಗಿ ನೌಕೆಯನ್ನು ಒಡೆದು, ಯಾತ್ರಿಕರನ್ನು ಮೇಲಕ್ಕೆ ಕರೆತರುವ ಸಾಧ್ಯತೆ ಇಲ್ಲ

2. ಸಮುದ್ರದ ಮೇಲ್ಮೈಗೆ ಬಂದಿದ್ದರೆ...

ತುರ್ತು ಸಂದರ್ಭದಲ್ಲಿ ದಿಢೀರ್ ಎಂದು ಸಮುದ್ರದ ಮೇಲ್ಮೈಗೆ ಬರುವ ಸವಲತ್ತು ‘ಟೈಟನ್‌’ ನೌಕೆಯಲ್ಲಿದೆ. ಮಾತೃ ನೌಕೆಯೊಂದಿಗೆ ಸಂಪರ್ಕ ಕಡಿದುಕೊಂಡ ತಕ್ಷಣವೇ ಪೈಲಟ್‌ ಆ ಸವಲತ್ತನ್ನು ಬಳಸಿಕೊಂಡಿದ್ದರೆ, ಟೈಟನ್ ನೌಕೆಯು ಸಮುದ್ರದ ಮೇಲ್ಮೈಗೆ ಬಂದು ತೇಲುತ್ತಿರುತ್ತದೆ. ಹೀಗೆ ಆಗಿರುವ ಸಾಧ್ಯತೆಯೇ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಬ್‌ಮರ್ಸಿಬಲ್‌ ಮತ್ತು ಸಬ್‌ಮರೀನ್‌ ತಾಂತ್ರಿಕವಾಗಿ ಇವೆರಡು ಬೇರೆಯದ್ದೇ ಸ್ವರೂಪದ ನೌಕೆಗಳು

ಸಬ್‌ಮರ್ಸಿಬಲ್‌

* ಇದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಸಮುದ್ರದ ಮೇಲ್ಮೈನಲ್ಇ ಇದಕ್ಕೆ ಪ್ಲಾಟ್‌ಫಾರಂ ಅಥವಾ ಮಾತೃನೌಕೆ ಇರಬೇಕು

* ಇವು ದೀರ್ಘಾವಧಿಯವರೆಗೆ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ. ಕೆಲವೇ ಗಂಟೆಗಳಲ್ಲಿ ಇವುಗಳ ಕಾರ್ಯಾಚರಣೆ ಮುಗಿಸಬೇಕು

* ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಇವುಗಳಿಗೆ ಇರುವುದಿಲ್ಲ. ಇವುಗಳ ಗಾತ್ರ ತೀರಾ ಚಿಕ್ಕದು

ಸಬ್‌ಮರೀನ್‌

* ಗಾತ್ರ ದೊಡ್ಡದು. ಒಂದು ಸಣ್ಣ ಹಡಗಿನಷ್ಟು ದೊಡ್ಡದಾಗಿರುತ್ತದೆ

* ನೀರಿನಡಿಯಲ್ಲಿ ತಿಂಗಳುಗಟ್ಟಲೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ

* ನೀರಿನಡಿಯಲ್ಲಿ ಇದ್ದಾಗಲೂ ಅಗತ್ಯವಿರುವಷ್ಟು ಆಮ್ಲಜನಕವನ್ನು ಉತ್ಪಾದಿಸಿಕೊಳ್ಳುವ ಸವಲತ್ತು ಇದೆ

ಸಾಧ್ಯತೆಗಳು

* ಟೈಟನ್‌ ನೌಕೆಯು ಸಮುದ್ರದ ಮೇಲ್ಮೈನಲ್ಲಿ ಇದ್ದರೆ, ವಿಮಾನ, ಹೆಲಿಕಾಪ್ಟರ್‌, ಹಡಗುಗಳ ಮೂಲಕ ಸರ್ವೇಕ್ಷಣೆ ನಡೆಸಿ ಅದನ್ನು ಹುಡುಕಬಹುದು

* ಸಮುದ್ರದ ಮೇಲ್ಮೈನಲ್ಲಿ ಇರುವ ಕಾರಣ ನೌಕೆ ಛಿದ್ರವಾಗುವ ಅಥವಾ ಧ್ವಂಸವಾಗುವ ಸಾಧ್ಯತೆ ತೀರಾ ಕಡಿಮೆ

ಸವಾಲುಗಳು

* ಕೇವಲ 22 ಅಡಿಯಷ್ಟು ಉದ್ದವಿರುವ ಈ ನೌಕೆಯು ಒಂದು ಎಸ್‌ಯುವಿಯ ಗಾತ್ರದಷ್ಟಿದೆ. ಲಕ್ಷಾಂತರ ಚದರ ಕಿ.ಮೀ. ವಿಸ್ತೀರ್ಣದ ಸಮುದ್ರದ ಮೇಲ್ಮೈನಲ್ಲಿ ಅಷ್ಟು ಸಣ್ಣ ಗಾತ್ರದ ನೌಕೆಯನ್ನು ಬರಿಗಣ್ಣಿನಿಂದ ಹುಡುಕುವುದು ಅತ್ಯಂತ ಕಷ್ಟ. ನೌಕೆ ಸಂಪರ್ಕ ಕಡಿದುಕೊಂಡಿದ್ದರೆ, ಅದನ್ನು ಪತ್ತೆ ಮಾಡಲು ಸಾಧ್ಯವೇ ಇಲ್ಲ ಎನ್ನಬಹುದು

* ನೌಕೆಯಲ್ಲಿ 96 ಗಂಟೆಗಳಿಗೆ ಆಗುವಷ್ಟು ಮಾತ್ರ ಆಮ್ಲಜನಕವಿತ್ತು. ನೌಕೆಯ ಬಾಗಿಲನ್ನು ಹೊರಗಿನಿಂದ ನಟ್‌–ಬೋಲ್ಟ್‌ ಹಾಕಿ ಸೀಲ್‌ ಮಾಡಲಾಗಿದೆ. ನೌಕೆ ಸಮುದ್ರದ ಮೇಲ್ಮೈಗೆ ಬಂದಿದ್ದರೂ, ಒಳಗಿರುವ ಯಾತ್ರಿಕರು ಬಾಗಿಲು ತೆರೆದುಕೊಂಡು ಹೊರಗೆ ಬರಲು ಸಾಧ್ಯವೇ ಇಲ್ಲ. ಹೀಗಾಗಿ ಆಮ್ಲಜನಕದ ಸಂಗ್ರಹ ಖಾಲಿಯಾದಾಗ ಯಾತ್ರಿಕರೆಲ್ಲಾ ಮೃತಪಡುವ ಅಪಾಯ ಅತ್ಯಧಿಕವಾಗಿದೆ

* ಪತ್ತೆ ಮಾಡುವುದು ವಿಳಂಬವಾದಷ್ಟೂ, ನೌಕೆ ದೂರಕ್ಕೆ ತೇಲಿ ಹೋಗುವ ಸಾಧ್ಯತೆ ಹೆಚ್ಚು. ಆಗ ಸರ್ವೇಕ್ಷಣಾ ಕಾರ್ಯಾಚರಣೆಯ ವ್ಯಾಪ್ತಿ ಹೆಚ್ಚಾಗುತ್ತದೆ. ಅದರಿಂದ ನೌಕೆ ಪತ್ತೆಯಾಗುವ ಸಾಧ್ಯತೆ ಕ್ಷೀಣಿಸುತ್ತಾ ಹೋಗುತ್ತದೆ.

ಆಮ್ಲಜನಕ ಕೊರತೆ: ಜೀವ ಉಳಿಯುವುದೇ?

ಟೈಟನ್‌ ನೌಕೆಯು ವಿಹಾರಕ್ಕೆ ಹೊರಟಾಗ ಅದರಲ್ಲಿ 96 ತಾಸುಗಳಿಗೆ ಬೇಕಾದಷ್ಟು ಆಮ್ಲಜನಕ ಇತ್ತು. ನೌಕೆಯು ಭಾನುವಾರ ತನ್ನ ಸಂಚಾರ ಆರಂಭಿಸಿದೆ. ಹೀಗಾಗಿ, ಗುರುವಾರದ ಹೊತ್ತಿಗೆ ನೌಕೆಯಲ್ಲಿದ್ದ ಆಮ್ಲಜನಕ ಮುಗಿದು ಹೋಗಬಹುದು ಎಂದು ಲೆಕ್ಕ ಹಾಕಲಾಗಿದೆ. ಆಮ್ಲಜನಕವು ಪೂರ್ತಿ ಖಾಲಿಯಾದರೆ, ಟೈಟನ್‌ನಲ್ಲಿರುವವರು ಬದುಕುಳಿಯುವ ಸಾಧ್ಯತೆ ಎಷ್ಟು? ಆಮ್ಲಜನಕ ಕೊರತೆ ಇದ್ದರೂ ಬದುಕುಳಿಯಲು ಮಾರ್ಗಗಳಿವೆಯೇ ಎನ್ನುವ ಚರ್ಚೆಯನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ. ಏನೇ ಆದರೂ ರಕ್ಷಣಾ ಕಾರ್ಯವನ್ನು ಮುಂದುವರಿಸಲಾಗಿದೆ.

* ನೌಕೆಯು ಸಮುದ್ರದಾಳ ಸೇರಿದ್ದರೆ ಅಲ್ಲಿ ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ಉಷ್ಣಾಂಶ ಇರುತ್ತದೆ. ಆಗ ಆಮ್ಲಜನಕದ ಬಳಕೆ ಹೆಚ್ಚಾಗಬಹುದು. ಅದರಿಂದ ಅವಧಿಗೂ ಮುನ್ನವೇ ಆಮ್ಲಜನಕ ಖಾಲಿಯಾಗಿರುವ ಅಪಾಯವಿದೆ

* ಇಂಗಾಲದ ಡೈಆಕ್ಸೈಡ್‌ ಅನ್ನು ಹೊರಹಾಕುವ ಯಾವುದೇ ವ್ಯವಸ್ಥೆಯು ಟೈಟನ್‌ನಲ್ಲಿ ಇಲ್ಲ. ನೌಕೆಯಲ್ಲಿರುವ ಆಮ್ಲಜನಕ ಖಾಲಿಯಾದರೆ, ಅದರಲ್ಲಿರುವ ಯಾತ್ರಿಕರು ಇಂಗಾಲದ ಡೈ ಆಕ್ಸೈಡ್‌ ಅನ್ನೇ ಉಸಿರಾಡಬೇಕಾಗುತ್ತದೆ. ದೀರ್ಘ ಕಾಲದ ವರೆಗೆ ಇಂಗಾಲದ ಡೈ ಆಕ್ಸೈಡ್‌ ಉಸಿರಾಡಿದರೆ ಬಹುಅಂಗಾಂಗ ವೈಫಲ್ಯ ಆಗುವ ಅಪಾಯವಿರುತ್ತದೆ. ಅಂತಿಮವಾಗಿ ಸಾವೂ ಸಂಭವಿಸಬಹುದು

* ಆಮ್ಲಜನಕದ ಕೊರತೆಯಿಂದ ಟೈಟನ್‌ ಒಳಗಿರುವವರು ನಿದ್ರೆಗೆ ಜಾರಿದರೂ ಅನುಕೂಲವಾಗುತ್ತದೆ. ಆಗ ದಹವು ತನ್ನನ್ನು ಬದುಕಿಸಿಕೊಳ್ಳುವ ಹೋರಾಟ ನಡೆಸುತ್ತದೆ. ಎಲ್ಲರೂ ನಿದ್ರೆಗೆ ಜಾರಿದರೆ, ತಾವು ಬದುಕಿದ್ದೇವೆ ಎಂಬ ಸಂದೇಶವನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ನೀಡಲು ಯಾರೂ ಇಲ್ಲದಂತಾಗುತ್ತದೆ.

ನೌಕೆಯಲ್ಲಿ ಇದ್ದವರು ಯಾರು?

1.ಹಮಿಷ್‌ ಹಾರ್ಡಿಂಗ್‌

ಇವರು ಬ್ರಿಟನ್‌ನ ಸಾಹಸ ಪ್ರೇಮಿ. 58 ವರ್ಷದ ಹಾರ್ಡಿಂಗ್‌ ಅವರ ಹೆಸರಲ್ಲಿ ಮೂರು ಗಿನ್ನಿಸ್‌ ದಾಖಲೆಗಳಿವೆ. ಫೆಸಿಫಿಕ್‌ ಸಾಗರದ ಆಳವಾದ ಭಾಗ ಮಾರಿಯಾನ ಟ್ರೆಂಚ್‌ನಲ್ಲಿ ಅತಿ ಹೆಚ್ಚು ಅವಧಿ ಇದ್ದ ದಾಖಲೆ ಮಾಡಿದ್ದಾರೆ. ದಕ್ಷಿಣ ಧ್ರುವಕ್ಕೂ ಹಲವು ಬಾರಿ ಹೋಗಿಬಂದಿದ್ದಾರೆ. ದುಬೈಯಲ್ಲಿ ಆ್ಯಕ್ಷನ್‌ ಏವಿಯೇಷನ್‌ ಎಂಬ ವಿಮಾನ ಮಾರಾಟ ಕಂಪೆನಿ ನಡೆಸುತ್ತಿದ್ದಾರೆ.

2. ಸ್ಟಾಕ್‌ಟನ್‌ ರಷ್‌

61 ವರ್ಷದ ರಷ್‌ ಅವರು ಓಷನ್‌ಗೇಟ್‌ ಕಂಪೆನಿಯ ಸಂಸ್ಥಾಪಕ. ಟೈಟನ್‌ ನೌಕೆಯ ಪೈಲಟ್‌ ಇವರೇ ಆಗಿದ್ದಾರೆ. ಇವರೊಬ್ಬ ಎಂಜಿನಿಯರ್‌ ಆಗಿದ್ದು, ಹಲವಾರು ಪರೀಕ್ಷಾರ್ಥ ವಿಮಾನಗಳನ್ನು ವಿನ್ಯಾಸಗೊಳಿಸಿದ್ದಾರೆ. ಜೊತೆಗೆ, ಹಲವಾರು ಸಣ್ಣ ಜಲಾಂತರ್ಗಾಮಿ ಹಡಗುಗಳನ್ನೂ ವಿನ್ಯಾಸ ಮಾಡಿದ್ದಾರೆ.

3.ಪಾಲ್‌ ಹೆನ್ರಿ ನಾರ್ಗಿಯೊಲೆಟ್‌

ಪಾಲ್‌ ಅವರಿಗೆ 77 ವರ್ಷ. ಮಿಸ್ಟರ್‌ ಟೈಟಾನಿಕ್‌ ಇವರ ಅಡ್ಡ ಹೆಸರು. ಟೈಟಾನಿಕ್‌ ಹಡಗಿನ ಅವಶೇಷಗಳು ಪತ್ತೆಯಾದ ಒಂದು ವರ್ಷದ ಬಳಿಕ (1986) ಸಮುದ್ರಕ್ಕಿಳಿದ ಮೊದಲ ತಂಡದಲ್ಲಿ ಇವರು ಇದ್ದರು. ಈ ತಂಡದಲ್ಲಿದ್ದ ಬೇರೆ ಎಲ್ಲಾ ಸದಸ್ಯರಿಗಿಂತ ಇವರೇ ಹೆಚ್ಚು ಅವಧಿ ಸಮುದ್ರದಾಳದಲ್ಲಿ ಇದ್ದವರು. ಟೈಟಾನಿಕ್‌ ಅವಶೇಷಗಳ ಮಾಲೀಕತ್ವ ಹೊಂದಿರುವ ಕಂಪೆನಿಯಲ್ಲಿ ಇವರು ಸಮುದ್ರದೊಳಗಿನ ವಿಚಾರಗಳ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ.

4ಮತ್ತು 5. ಸುಲೇಮಾನ ಮತ್ತು ಶಹಝಾದ್‌ ದಾವೂದ್‌

48 ವರ್ಷದ ಶಹಝಾದ್‌ ದಾವೂದ್‌ ಅವರು ಬ್ರಿಟನ್‌ನ ಉದ್ಯಮಿ. 19 ವರ್ಷದ ಸುಲೇಮಾನ್‌ ಅವರು ಶಹಝಾದ್‌ ಅವರ ಮಗ. ಇವರದ್ದು ಪಾಕಿಸ್ತಾನದ ಶ್ರೀಮಂತ ಮನೆತನಗಳಲ್ಲಿ ಒಂದು. ಗೊಬ್ಬರ ಮಾರಾಟದ ಅತಿ ದೊಡ್ಡ ಕಂಪೆನಿಯಾದ ಎನ್‌ಗ್ರೊ ಕಾರ್ಪೋರೇಷನ್‌ನ ಉಪಾಧ್ಯಕ್ಷರಾಗಿದ್ದಾರೆ. ಸುಲೇಮಾನ್‌ ಅವರು ಸ್ಟ್ರಾಟ್‌ಕ್ಲೈಡ್‌ ವಿಶ್ವವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಾರೆ.

ಆಧಾರ: ಓಷನ್‌ಗೇಟ್‌.ಇಂಕ್‌, ರಾಯಿಟರ್ಸ್‌, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT