ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್) ವಿವಾದಕ್ಕೀಡಾಗಿದೆ. ಚುನಾವಣೆ ಹತ್ತಿರದಲ್ಲಿರುವಾಗ ಪರಿಷ್ಕರಣೆ ನಡೆಸುವ ಅಗತ್ಯವನ್ನು ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನಿಸಿವೆ. ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರನ್ನು ಕೈಬಿಡುವ ದುರುದ್ದೇಶದಿಂದ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಅವು ಆರೋಪಿಸಿವೆ. ತನ್ನ ನಿರ್ಧಾರವನ್ನು ಆಯೋಗ ಸಮರ್ಥಿಸಿಕೊಂಡಿದೆ. ಸ್ಥಳೀಯ ವಲಸಿಗರು, ವಿದೇಶದ ಅಕ್ರಮ ವಲಸಿಗರು ಸೇರಿದಂತೆ ಹಲವು ವಿಚಾರಗಳು ಇದರ ಹಿಂದೆ ತಳಕುಹಾಕಿಕೊಂಡಿವೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಹೊತ್ತಿಗೆ ಮೊದಲ ಹಂತದ ಪರಿಷ್ಕರಣೆ ಬಹುತೇಕ ಮುಗಿದಿದೆ. ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆ ನಡೆದಿತ್ತು. ಈಗ ಮತ್ತೆ ಅಂತಹುದೇ ಚರ್ಚೆಯನ್ನು ಬಿಹಾರದ ವಿಶೇಷ ಸಮಗ್ರ ಪರಿಷ್ಕರಣೆ ಹುಟ್ಟುಹಾಕಿದೆ