ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?
ಆಳ-ಅಗಲ | ₹2000ದ ನೋಟಿನ ಚಲಾವಣೆ ರದ್ದು ಏನು, ಎತ್ತ?
Published 23 ಮೇ 2023, 0:10 IST
Last Updated 23 ಮೇ 2023, 0:10 IST
ಅಕ್ಷರ ಗಾತ್ರ
₹2000 ಮುಖಬೆಲೆಯ ಕರೆನ್ಸಿ
ಭಾರತೀಯ ರಿಸರ್ವ್ ಬ್ಯಾಂಕ್‌ ₹2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ವಾಪಸ್‌ ಪಡೆಯಲು ಕ್ರಮ ತೆಗೆದುಕೊಂಡಿದೆ. ಈಗ ಚಲಾವಣೆಯಲ್ಲಿರುವ ₹2000 ಮುಖಬೆಲೆಯ ನೋಟುಗಳನ್ನು ಬೇರೆ ಮುಖಬೆಲೆಯ ನೋಟುಗಳಿಗೆ ಬದಲಿಸಿಕೊಳ್ಳಲು ಕಾಲಾವಕಾಶ ನೀಡಿದೆ. 2016ರ ನವೆಂಬರ್‌ನಲ್ಲಿ ಈ ಹಿಂದೆ ಚಲಾವಣೆಯಲ್ಲಿದ್ದ ₹500 ಮತ್ತು ₹1000 ಮುಖಬೆಲೆಯ ನೋಟುಗಳ ಮಾನ್ಯತೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಅವುಗಳ ಬದಲಿಗೆ ₹2000 ಮತ್ತು ₹500 ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಆದರೆ, ಹೊಸದಾಗಿ ಚಲಾವಣೆಗೆ ತಂದು ಏಳು ವರ್ಷ ಕಳೆಯುವಷ್ಟರಲ್ಲೇ ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರಗಳಿಗೆ ವಿರೋಧ ಪಕ್ಷಗಳಿಂದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರಿಂದ ಆಕ್ಷೇಪ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ

ಮುದ್ರಿಸಿದ ನೋಟುಗಳೆಷ್ಟು...

₹500 ಮತ್ತು ₹1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಮಾಡಿದ ಬೆನ್ನಲ್ಲೇ ₹2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. 2016–17ನೇ ಆರ್ಥಿಕ ವರ್ಷದಿಂದ 2018–19ನೇ ಆರ್ಥಿಕ ವರ್ಷದವರೆಗೆ ಇಂತಹ ಒಟ್ಟು 510 ಕೋಟಿ ನೋಟುಗಳನ್ನು ಮುದ್ರಿಸಲಾಗಿತ್ತು ಎಂದು ಆರ್‌ಬಿಐ ದಾಖಲೆಗಳು ಹೇಳುತ್ತವೆ. 

510 ಕೋಟಿ ನೋಟುಗಳನ್ನೂ ಆರ್‌ಬಿಐ ಒಂದೇ ಬಾರಿಗೆ ಮುದ್ರಿಸಿಲ್ಲ. 2016–17ನೇ ಸಾಲಿನಲ್ಲಿ 354 ಕೋಟಿ ನೋಟುಗಳನ್ನು ಮುದ್ರಿಸಿತ್ತು. ನಂತರದ ಎರಡು ವರ್ಷಗಳಲ್ಲಿ ಮುದ್ರಿಸಲಾದ ₹2000 ಮುಖಬೆಲೆಯ ನೋಟುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು. 2019–20ನೇ ಸಾಲಿನಿಂದಲೇ ಈ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.

ಆರ್ಥಿಕ ವರ್ಷ;ಮುದ್ರಿಸಲಾದ ನೋಟುಗಳ ಸಂಖ್ಯೆ

2016–17;354 ಕೋಟಿ

2017–18;15.1 ಕೋಟಿ

2018–19;5 ಕೋಟಿ

ಒಟ್ಟು;510 ಕೋಟಿ

ಮುದ್ರಣದ ವೆಚ್ಚವೆಷ್ಟು...

₹1,922.7 ಕೋಟಿ ₹2000 ಮುಖಬೆಲೆಯ ಎಲ್ಲಾ ನೋಟುಗಳ ಮುದ್ರಣಕ್ಕೆ ಆದ ಅಂದಾಜು ವೆಚ್ಚ

ಈ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದರ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ, ಒಂದು ನೋಟಿನ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂಬ ಮಾಹಿತಿಯನ್ನು ರಾಜ್ಯಸಭೆಗೆ ಹಣಕಾಸು ಸಚಿವಾಲಯವು ನೀಡಿತ್ತು. 2018ರಲ್ಲಿ ರಾಜ್ಯಸಭೆಗೆ ಮಾಹಿತಿ ನೀಡಿದ್ದ ಹಣಕಾಸು ಸಚಿವಾಲಯವು, ‘₹2000 ಮುಖಬೆಲೆಯ ಪ್ರತಿ ನೋಟಿನ ಮುದ್ರಣಕ್ಕೆ ₹3.55ರಿಂದ ₹3.77ರಷ್ಟು ವೆಚ್ಚವಾಗುತ್ತದೆ’ ಎಂದಷ್ಟೇ ಹೇಳಿತ್ತು.

ಆರ್‌ಬಿಐ ಈವರೆಗೆ ₹2000 ಮುಖಬೆಲೆಯ 510 ಕೋಟಿ ನೋಟುಗಳನ್ನು ಮುದ್ರಿಸಿದೆ. ಪ್ರತಿ ನೋಟಿಗೆ ₹3.77ರಷ್ಟು ವೆಚ್ಚದಂತೆ 510 ಕೋಟಿ ನೋಟುಗಳಿಗೆ ತಗಲುವ ವೆಚ್ಚ ₹1,922.7 ಕೋಟಿಯಷ್ಟಾಗುತ್ತದೆ.

ಈ ಹಿಂದೆ ಬಳಕೆಯಲ್ಲಿದ್ದ ₹500 ಮತ್ತು ₹1000 ಮುಖಬೆಲೆಯ ನೋಟುಗಳ ಗಾತ್ರಕ್ಕಿಂತ, ₹2000 ಮುಖಬೆಲೆಯ ನೋಟುಗಳ ಗಾತ್ರ ಭಿನ್ನವಾಗಿತ್ತು. ಹೀಗಾಗಿ ₹2000 ಮುಖಬೆಲೆಯ ನೋಟುಗಳನ್ನು ಎಟಿಎಂನಲ್ಲಿ ದೊರೆಯುವಂತೆ ಮಾಡಲು, ಎಟಿಎಂ ಯಂತ್ರಗಳನ್ನು ಮಾರ್ಪಡಿಸಬೇಕಿತ್ತು. 2016-17ನೇ ಸಾಲಿನಲ್ಲಿ ದೇಶದಾದ್ಯಂತ 2.2 ಲಕ್ಷ ಎಟಿಎಂ ಯಂತ್ರಗಳಿದ್ದವು. ಅವುಗಳನ್ನು ಹಂತಹಂತವಾಗಿ ಮಾರ್ಪಡಿಸಲಾಗಿತ್ತು. ಈ ಯಂತ್ರಗಳನ್ನು ಹೀಗೆ ಮಾರ್ಪಡಿಸಲು ತಗುಲಿದ ವೆಚ್ಚ ಎಷ್ಟು ಎಂಬುದರ ಮಾಹಿತಿ ಲಭ್ಯವಿಲ್ಲ.

‘ಜನರ ತೆರಿಗೆ ಹಣ ಪೋಲು’

ಆರ್‌ಬಿಐನ ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ. ಸಾರ್ವಜನಿಕರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

* ₹2000 ಮುಖಬೆಲೆಯ ನೋಟುಗಳನ್ನು ಮುದ್ರಿಸಲು ಸಾವಿರಾರು ಕೋಟಿಯನ್ನು ವೆಚ್ಚ ಮಾಡಲಾಗಿದೆ. ಈಗ ಅಷ್ಟೂ ನೋಟುಗಳನ್ನು ವಾಪಸ್‌ ಪಡೆಯಲಾಗುತ್ತಿದೆ. ಈ ನೋಟುಗಳನ್ನು ದೊರೆಯುವಂತೆ ಮಾಡಲು ಎಟಿಎಂ ಯಂತ್ರಗಳನ್ನು ಮಾರ್ಪಡಿಸಲೂ ನೂರಾರು ಕೋಟಿ ವೆಚ್ಚ ಮಾಡಲಾಗಿತ್ತು. ಈಗ ಆ ಎಲ್ಲಾ ವೆಚ್ಚಗಳು ವ್ಯರ್ಥವಾದಂತಾಗುತ್ತದೆ. ಕೇಂದ್ರ ಸರ್ಕಾರವು ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿದೆ ಎಂದು ಕಾಂಗ್ರೆಸ್‌, ಎಎಪಿ ಸೇರಿ ಹಲವು ವಿರೋಧ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ

* ಭ್ರಷ್ಟಾಚಾರ ನಿಯಂತ್ರಿಸಲು ನೋಟು ರದ್ದತಿ ಜಾರಿಗೆ ತರಲಾಗುತ್ತಿದೆ ಮತ್ತು ಹೊಸ ನೋಟುಗಳನ್ನು ಚಲಾವಣೆಗೆ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಹೇಳಿದ್ದರು. ನೋಟು ರದ್ದತಿಯಿಂದ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಧ್ಯವಾಗಿದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ

* ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ನೆರವು ನೀಡುವುದನ್ನು ತಪ್ಪಿಸಲು ನೋಟು ರದ್ದತಿ ಜಾರಿಗೆ ತರಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಹೇಳಿದ್ದರು. ಆದರೆ, ನೋಟು ರದ್ದತಿಯ ನಂತರ ಭಯೋತ್ಪಾದನಾ ಕೃತ್ಯಗಳಲ್ಲಿ ಆದ ಇಳಿಕೆಯೆಷ್ಟು ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಸರ್ಕಾರದ ಈ ಕ್ರಮದಿಂದ ಭಯೋತ್ಪಾದನೆಯನ್ನು ನಿಯಂತ್ರಿಸಲು ನಿಜಕ್ಕೂ ಸಾಧ್ಯವಾಗಿದೆಯೇ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ

ಚಲಾವಣೆಯಲ್ಲಿ ಗಣನೀಯ ಇಳಿಕೆ

2016–17ನೇ ಆರ್ಥಿಕ ವರ್ಷದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯ 328 ಕೋಟಿ ನೋಟುಗಳು ಚಲಾವಣೆಗೆ ಬಂದಿದ್ದವು. 2017–18ರ ಆರ್ಥಿಕ ವರ್ಷದಲ್ಲಿ ಗರಿಷ್ಠ 336 ಕೋಟಿ ನೋಟುಗಳು ಚಲಾವಣೆಯಲ್ಲಿ ಇದ್ದವು. ಆದರೆ ನಾಲ್ಕು ವರ್ಷಗಳಿಂದ ಇವುಗಳ ಮುದ್ರಣವನ್ನು ನಿಲ್ಲಿಸಿದ್ದರಿಂದ, ಚಲಾವಣೆಯಲ್ಲಿ ಇವುಗಳ ಸಂಖ್ಯೆ ಕ್ರಮೇಣ ಕುಸಿಯತೊಡಗಿತು. 2022–23ನೇ ಆರ್ಥಿಕ ವರ್ಷದ ಕೊನೆಯ ವೇಳೆಗೆ ಇಂತಹ 181 ಕೋಟಿ ನೋಟುಗಳು ಮಾತ್ರ ಚಲಾವಣೆಯಲ್ಲಿದ್ದವು. ಆರು ವರ್ಷಗಳ ಅವಧಿಯಲ್ಲಿ ಹತ್ತಿರಹತ್ತಿರ ಅರ್ಧದಷ್ಟು (ಶೇ 44) ನೋಟುಗಳು ಚಲಾವಣೆಯಲ್ಲಿ ಇಲ್ಲ ಎಂದು ಆರ್‌ಬಿಐ ದತ್ತಾಂಶಗಳು ಹೇಳುತ್ತವೆ. ಎಲ್ಲ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆಯಲು ಆರ್‌ಬಿಐ ಈಗ ಮುಂದಾಗಿದೆ. 

2016-17ನೇ ಆರ್ಥಿಕ ವರ್ಷದಲ್ಲಿ ಮೊದಲಿಗೆ ಪರಿಚಯಿಸಲಾದ ₹2,000 ಮುಖಬೆಲೆಯ ₹6.57 ಲಕ್ಷ ಕೋಟಿ ಮೌಲ್ಯದ ನೋಟುಗಳನ್ನು ಚಲಾವಣೆಗೆ ಬಿಡಲಾಗಿತ್ತು. ನಂತರದ ಆರ್ಥಿಕ ವರ್ಷದಲ್ಲಿ ಬೇಡಿಕೆಯೂ ಹೆಚ್ಚಿದ್ದರಿಂದ, ಇವುಗಳ ಮೌಲ್ಯ ₹6.72 ಲಕ್ಷ ಕೋಟಿಯ ಗರಿಷ್ಠ ಮೊತ್ತಕ್ಕೆ ಏರಿಕೆಯಾಗಿತ್ತು. ಮುದ್ರಣ ನಿಲ್ಲಿಸಿದ್ದರಿಂದ ಚಲಾವಣೆಯಲ್ಲಿದ್ದ ನೋಟುಗಳು ಮೌಲ್ಯ ಇಳಿಕೆಯಾಗತೊಡಗಿತು. 2022–23ನೇ ಆರ್ಥಿಕ ವರ್ಷದ ಹೊತ್ತಿಗೆ ಎರಡು ಸಾವಿರ ಮುಖಬೆಲೆಯ ₹3.62 ಲಕ್ಷ ಕೋಟಿ ಮೌಲ್ಯದ ನೋಟುಗಳು ಮಾತ್ರ ಚಲಾವಣೆಯಲ್ಲಿವೆ. ಆರು ವರ್ಷಗಳ ಬಳಿಕ ಶೇ 46ರಷ್ಟು ನೋಟುಗಳು ಮಾತ್ರ ಚಲಾವಣೆಯಲ್ಲಿವೆ ಎಂದು ದತ್ತಾಂಶಗಳು ಹೇಳುತ್ತವೆ. 

ಚಲಾವಣೆಯಲ್ಲಿದ್ದ ₹2000 ಮುಖಬೆಲೆಯ ನೋಟುಗಳ ಸಂಖ್ಯೆ

2016-17;328 ಕೋಟಿ 

2017–18;336 ಕೋಟಿ

2018–19;329 ಕೋಟಿ

2019-20;273 ಕೋಟಿ

2020-21;245 ಕೋಟಿ

2021-22;214 ಕೋಟಿ 

2022–23;181 ಕೋಟಿ 

ಚಲಾವಣೆಯಲ್ಲಿದ್ದ ₹2000 ಮುಖಬೆಲೆಯ ನೋಟುಗಳ ಮೌಲ್ಯ

2016-17;₹6.57 ಲಕ್ಷ ಕೋಟಿ

2017–18;₹6.72 ಲಕ್ಷ ಕೋಟಿ 

2018–19;₹6.58 ಲಕ್ಷ ಕೋಟಿ 

2019-20;₹5.47 ಲಕ್ಷ ಕೋಟಿ 

2020-21;₹4.90 ಲಕ್ಷ ಕೋಟಿ 

2021-22;₹4.28 ಲಕ್ಷ ಕೋಟಿ

2022–23;₹3.62 ಲಕ್ಷ ಕೋಟಿ

--------

ಖೋಟಾನೋಟಿನ ಆಟ

₹2000 ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸುತ್ತಿದ್ದಂತೆಯೇ ನಕಲಿ ನೋಟುಗಳೂ ಹುಟ್ಟಿಕೊಂಡವು. ಅಸಲಿ ನೋಟುಗಳನ್ನೇ ಹೋಲುತ್ತಿದ್ದ ಇವುಗಳ ಅಸಲಿಯತ್ತನ್ನು ಬ್ಯಾಂಕ್ ವ್ಯವಸ್ಥೆ ಪತ್ತೆಹಚ್ಚಿತು. 2016-17ನೇ ಆರ್ಥಿಕ ವರ್ಷದಲ್ಲಿ ಇಂತಹ 638 ಖೋಟಾನೋಟುಗಳನ್ನು ಪತ್ತೆಹಚ್ಚಲಾಗಿತ್ತು. 2018–19ರಲ್ಲಿ ಗರಿಷ್ಠ 21,847 ಖೋಟಾನೋಟುಗಳನ್ನು ಪತ್ತೆಹಚ್ಚಲಾಗಿತ್ತು. 

ಪತ್ತೆಯಾದ ಖೋಟಾನೋಟುಗಳ ಸಂಖ್ಯೆ

2016-17;638

2017–18;17,929

2018–19;21,847

2019-20;17,020

2020-21;8,798

2021-22;13,604

ಆಧಾರ: ಆರ್‌ಬಿಐ ವಾರ್ಷಿಕ ವರದಿಗಳು, ಆರ್‌ಬಿಐ ಪ್ರಕಟಣೆಗಳು, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT