ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ-ಸುದ್ದಿ | ಅಡುಗೆ ಎಣ್ಣೆ ಬಳಕೆ ಕುಸಿಯುತ್ತಿದೆಯೇ?

Published 15 ಫೆಬ್ರುವರಿ 2024, 0:30 IST
Last Updated 15 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಭಾರತದ ಅಡುಗೆ ಎಣ್ಣೆಯ ಆಮದು ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೇಶದಲ್ಲಿನ ಅಡುಗೆ ಎಣ್ಣೆಯ ಸಂಗ್ರಹದ ಮಟ್ಟವೂ ಭಾರಿ ಕುಸಿದಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಭಾರತೀಯ ತೈಲ ಗಿರಣಿಗಳ ಸಂಘವು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಲಭ್ಯತೆ ಕಡಿಮೆಯಾಗುತ್ತಿದೆ ಎಂದು ಉತ್ತರಿಸಿದೆ. ಆದರೆ ಇದೇ ಪ್ರಶ್ನೆಗೆ ಕೇಂದ್ರ ಸರ್ಕಾರವು ಉತ್ತರ ನೀಡುವ ಗೋಜಿಗೇ ಹೋಗಿಲ್ಲ. ಆಮದು ಮತ್ತು ಸಂಗ್ರಹದಲ್ಲಿ ಇಳಿಕೆಯು ಅಡುಗೆ ಎಣ್ಣೆಯ ಬಳಕೆ ಕುಸಿದಿದೆ ಎಂಬುದನ್ನು ಸೂಚಿಸುತ್ತಿದೆಯೇ? ಭಾರತದಲ್ಲಿ ಅಡುಗೆ ಎಣ್ಣೆಯ ಬಳಕೆಯ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರವು ಉತ್ತರವನ್ನೇ ನೀಡಿಲ್ಲ. ಸರ್ಕಾರವು ಆ ದತ್ತಾಂಶವನ್ನು ಬಿಡುಗಡೆ ಮಾಡಿದರೆ ನೈಜ ಸ್ಥಿತಿಯ ಚಿತ್ರಣ ದೊರೆಯಲಿದೆ

–––––––

ಭಾರತವು ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆಯ ಪ್ರಮಾಣವು ಕಳೆದ ಒಂದು ವರ್ಷದಲ್ಲಿ ಇಳಿಕೆಯ ಹಾದಿಯಲ್ಲಿಯೇ ಇದೆ ಎಂಬುದನ್ನು ಅಧಿಕೃತ ದತ್ತಾಂಶಗಳು ಹೇಳುತ್ತವೆ. 2023 ಡಿಸೆಂಬರ್‌ನಲ್ಲಿ ನಡೆದಿದ್ದ ಸಂಸತ್ತಿನಲ್ಲಿ ಕೇಂದ್ರ ವಾಣಿಜ್ಯ ಸಚಿವಾಲಯಕ್ಕೆ ಈ ಬಗ್ಗೆ ಪ್ರಶ್ನೆಯನ್ನು ಕೇಳಲಾಗಿತ್ತು. ‘ದೇಶದಲ್ಲಿ ಎಣ್ಣೆಕಾಳುಗಳ ಉತ್ಪಾದನೆ ಮತ್ತು ಅಡುಗೆ ಎಣ್ಣೆಯ ಬಳಕೆಯ ಬಗ್ಗೆ ವಿವರ ನೀಡಿ’ ಎಂದು ಸಂಸದ ಜಿ.ಸಿ. ಚಂದ್ರಶೇಖರ್ ಅವರು ವಾಣಿಜ್ಯ ಸಚಿವಾಲಯವನ್ನು ಕೋರಿದ್ದರು. ಅದಕ್ಕೆ ಲಿಖಿತ ಉತ್ತರ ನೀಡಿದ್ದ ಸಚಿವಾಲಯವು, ‘ಎಣ್ಣೆಕಾಳುಗಳ ಉತ್ಪಾದನೆಯ ಅಂದಾಜು ವಿವರ’ವನ್ನು ಸಂಸತ್ತಿನ ಮುಂದೆ ಇರಿಸಿತ್ತು.

ಅದರ ಜತೆಗೆ, ‘ದೇಶದಲ್ಲಿ ಅಡುಗೆ ಎಣ್ಣೆಯ ಬಳಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದು ಭಾರತೀಯ ಕುಟುಂಬಗಳ ಆದಾಯದಲ್ಲಿ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. ದೇಶೀಯ ಉತ್ಪಾದನೆಯು ದೇಶದ ಅಡುಗೆ ಎಣ್ಣೆಯ ಬೇಡಿಕೆಯನ್ನು ಪೂರೈಸುವುದಿಲ್ಲ. ಹೀಗಾಗಿ ನಮ್ಮ ಅಡುಗೆ ಎಣ್ಣೆ ಆಮದು ಸಹ ಸತತ ಏರಿಕೆಯ ಹಾದಿಯಲ್ಲಿದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು.

ಆದರೆ ದೇಶದಲ್ಲಿ ಅಡುಗೆ ಎಣ್ಣೆಯ ವಾರ್ಷಿಕ ಬಳಕೆ ಪ್ರಮಾಣ ಮತ್ತು ತಿಂಗಳ ಬಳಕೆ ಪ್ರಮಾಣದ ನಿಖರ ಮಾಹಿತಿಯನ್ನು ಅವರು ಲೋಕಸಭೆಗೆ ಒದಗಿಸಿರಲಿಲ್ಲ. 2018ರಿಂದ 2023ರವರೆಗಿನ ಬಳಕೆಯ ಪ್ರಮಾಣದ ವಿವರವನ್ನು ಒದಗಿಸಿ ಎಂದು ಕೋರಿದ್ದರೂ ಆ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ವಿವರ ಒದಗಿಸಿರಲಿಲ್ಲ. ಅಧಿಕೃತ ದತ್ತಾಂಶದ ಪ್ರಕಾರ ಹಿಂದಿನ ಏಳು–ಎಂಟು ತಿಂಗಳಿನಲ್ಲಿ ದೇಶದಲ್ಲಿನ ಎಣ್ಣೆಯ ಸಂಗ್ರಹದ ಪ್ರಮಾಣ ಕುಸಿತದ ಹಾದಿಯಲ್ಲಿಯೇ ಇದೆ. ಹಿಂದಿನ ಮೂರು ತಿಂಗಳ ಆಮದು ಸಹ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದರೆ ಮತ್ತು ದೇಶೀಯ ಉತ್ಪಾದನೆ ಕಡಿಮೆ ಇದ್ದರೆ ಆಮದು ಏರಿಕೆಯಾಗಬೇಕಿತ್ತಲ್ಲವೇ. ಈ ಅಂಶವನ್ನು ಸರ್ಕಾರವು ಸ್ಪಷ್ಟಪಡಿಸಿಲ್ಲ. 

ಅಡುಗೆ ಎಣ್ಣೆ ಸಂಗ್ರಹ ಭಾರಿ ಕುಸಿತ

ಪ್ರತಿ ತಿಂಗಳ ಮೊದಲ ದಿನಕ್ಕೆ ಅನ್ವಯವಾಗುವಂತೆ ದೇಶದ ಬಂದರುಗಳು ಮತ್ತು ಸಾಗಣೆಯಲ್ಲಿರುವ ಅಡುಗೆ ಎಣ್ಣೆಯ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತದೆ. ಫೆಬ್ರುವರಿ 1ರ ಅಂತ್ಯಕ್ಕೆ ನಡೆಸಲಾದ ಲೆಕ್ಕಾಚಾರದಂತೆ ದೇಶದಲ್ಲಿ 26.49 ಲಕ್ಷ ಟನ್‌ಗಳಷ್ಟು ಅಡುಗೆ ಎಣ್ಣೆ ಸಂಗ್ರಹವಿತ್ತು. ಇದು ಈ ಹಿಂದಿನ 13 ತಿಂಗಳಲ್ಲೇ ಅತ್ಯಂತ ಕನಿಷ್ಠ ಸಂಗ್ರಹ.

ಇದು ಅಡುಗೆ ಎಣ್ಣೆಗೆ ಬೇಡಿಕೆ ಕುಸಿದಿರುವುದರ ಸೂಚನೆಯೇ? ಭಾರತೀಯರು ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಎತ್ತುತ್ತದೆ. ಈ ಪ್ರಶ್ನೆಗಳನ್ನೇ ಲೋಕಸಭೆಯಲ್ಲಿ ಕೇಳಲಾಗಿತ್ತು. ಆದರೆ ಬಳಕೆಯಲ್ಲಿನ ಏರಿಳಿತದ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ಮಾಹಿತಿ ನೀಡಿಲ್ಲ.

ವಿವಿಧ ಋತುಗಳಲ್ಲಿ ಅಡುಗೆ ಎಣ್ಣೆಯ ಬಳಕೆ ಇಳಿಕೆಯಾಗುತ್ತದೆ ಮತ್ತು ಏರಿಕೆಯಾಗುತ್ತದೆ. ದೇಶದಲ್ಲಿನ ಅಡುಗೆ ಎಣ್ಣೆಯ ಸಂಗ್ರಹವೂ ಪರೋಕ್ಷವಾಗಿ ಬಳಕೆಯಲ್ಲಿನ ಏರಿಳಿತವನ್ನು ಸೂಚಿಸುತ್ತದೆ. ಯಾವೊದೋ ಒಂದು ವರ್ಷದ ತಿಂಗಳೊಂದರಲ್ಲಿ ಇದ್ದ ಸಂಗ್ರಹ ಪ್ರಮಾಣವು, ಅದರ ಮುಂದಿನ ವರ್ಷದ ಅದೇ ತಿಂಗಳಿನಲ್ಲಿ ಸರಿಸುಮಾರು ಅಷ್ಟೇ ಇರುತ್ತದೆ. ಆದರೆ 2023ರ ಫೆಬ್ರುವರಿಯಲ್ಲಿ ದೇಶದ ವಿವಿಧ ಬಂದರುಗಳು ಮತ್ತು ಸಾಗಣೆಯಲ್ಲಿ ಇದ್ದ ಅಡುಗೆ ಎಣ್ಣೆಯ ಪ್ರಮಾಣಕ್ಕೆ ಹೋಲಿಸಿದರೆ, 2024ರ ಫೆಬ್ರುವರಿಯಲ್ಲಿ ಭಾರಿ ಪ್ರಮಾಣದ ಕುಸಿತ ಉಂಟಾಗಿದೆ. ಎರಡೂ ತಿಂಗಳಲ್ಲಿನ ಸಂಗ್ರಹದ ನಡುವಣ ವ್ಯತ್ಯಾಸ ಶೇ 22.5ರಷ್ಟಿದೆ. ಅಡುಗೆ ಎಣ್ಣೆಯ ಆಮದಿನಲ್ಲಿನ ಇಳಿಕೆಯೂ ಸರಿಸುಮಾರು ಇಷ್ಟೇ ಇದೆ. ಒಟ್ಟಾರೆ ಇದು ಬಳಕೆ ಪ್ರಮಾಣ ಕುಸಿದಿರುವುದನ್ನು ಸೂಚಿಸುತ್ತದೆ.

ಸಸ್ಯಜನ್ಯ ತೈಲ ಆಮದು ಭಾರಿ ಇಳಿಕೆ

ಭಾರತವು ಆಮದು ಮಾಡಿಕೊಳ್ಳುವ ಸಸ್ಯಜನ್ಯ ತೈಲದ ಪ್ರಮಾಣವು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ಅಡುಗೆ ಎಣ್ಣೆ ಮತ್ತು ಕೈಗಾರಿಕೆಗಳಲ್ಲಿ ಬಳಸುವ ಸಸ್ಯಜನ್ಯ ಎಣ್ಣೆಯನ್ನೂ ಒಳಗೊಂಡಿದೆ. 2022–23ನೇ ಸಾಲಿನ ನವೆಂಬರ್, ಡಿಸೆಂಬರ್‌ ಮತ್ತು ಜನವರಿಯಲ್ಲಿ ದೇಶವು ಆಮದು ಮಾಡಿಕೊಂಡಿದ್ದ ಎಣ್ಣೆಯ ಪ್ರಮಾಣಕ್ಕೆ ಹೋಲಿಸಿದರೆ 2023–24ನೇ ಸಾಲಿನ ಇದೇ ಅವಧಿಯಲ್ಲಿ ಮಾಡಿಕೊಳ್ಳಲಾದ ಆಮದು ಭಾರಿ ಇಳಿಕೆಯಾಗಿದೆ. 

ವಿಶ್ವದ ವಿವಿಧೆಡೆ ನಡೆಯುತ್ತಿರುವ ಯುದ್ಧ ಮತ್ತು ಸರಕು ಸಾಗಣೆ ಹಡಗುಗಳ ಮೇಲಿನ ದಾಳಿಗಳ ಕಾರಣದಿಂದ ಪೂರೈಕೆ ವಿಳಂಬವಾಗುತ್ತಿದೆ. ಹೀಗಾಗಿ ಆಮದು ಪ್ರಮಾಣವೂ ಕಡಿಮೆ ಆಗಿದೆ ಎಂದು ವಾಣಿಜ್ಯ ಸಚಿವಾಲಯವು ಹೇಳಿದೆ. ಆದರೆ ಭಾರತವು ಆಗ್ನೇಯ ಏಷ್ಯಾ ದೇಶಗಳಿಂದ ಈ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ. ಆ ದೇಶಗಳಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಸಮುದ್ರ ಮಾರ್ಗದಲ್ಲಿ ಈ ಅವಧಿಯಲ್ಲಿ ಯಾವುದೇ ತೊಡಕುಗಳು ಇರಲಿಲ್ಲ. ಭಾರತದಿಂದ ಖರೀದಿಯೇ ಕಡಿಮೆಯಾಗಿದೆಯೇ ಎಂಬ ಪ್ರಶ್ನೆಯನ್ನು ಈ ಅಂಶಗಳು ಎತ್ತುತ್ತವೆ.

ಆಧಾರ: ಲೋಕಸಭೆಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ನೀಡಿದ ಲಿಖಿತ ಉತ್ತರಗಳು, ಭಾರತೀಯ ತೈಲ ಗಿರಣಿಗಳ ಸಂಘದ ಮಾಸಿಕ ಪ್ರಕಟಣೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT