ಹದಿಹರೆಯದ ಮಕ್ಕಳಲ್ಲಿರುವ ಶಕ್ತಿ, ಹುಮ್ಮಸ್ಸು, ಕುತೂಹಲ, ಕಲಿಯುವ ಗುಣವನ್ನು ಗುರಿಯಾಗಿಸಿಕೊಂಡು ಕೇರಳ ಸರ್ಕಾರ 2018ರಲ್ಲಿ ಯೋಜನೆಯೊಂದನ್ನು ಪ್ರಾರಂಭಿಸಿತು. ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮರುಜೀವ ನೀಡುವುದು ಅದರ ಉದ್ದೇಶವಾಗಿತ್ತು. ಆ ಯೋಜನೆಯ ಹೆಸರು ‘ಲಿಟ್ಲ್ ಕೈಟ್ ಎಜುಟೆಕ್ ಯೋಜನೆ’ (Little KITE EdTec). ಅದು ಜಾಗತಿಕ ಹಾಗೂ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ನಾಲ್ಕನೇ ಗುರಿಗೆ ಪೂರಕವಾಗಿತ್ತು. ಕೇರಳ ಶೈಕ್ಷಣಿಕ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಸಂಸ್ಥೆಯು (ಕೈಟ್) ಕಾರ್ಯರೂಪಕ್ಕಿಳಿಸಿರುವ ಈ ಯೋಜನೆಯ ಉದ್ದೇಶ, ಶಾಲಾ ಬಾಲಕ/ಬಾಲಕಿಯರನ್ನು ಡಿಜಿಟಲ್ ಸಾಕ್ಷರರನ್ನಾಗಿಸುವುದು.
ಹೀಗೆ, ಕೇರಳದ 2,174 ಪ್ರೌಢಶಾಲೆಗಳಲ್ಲಿ ಆರಂಭವಾದ ಕೌಶಲ್ಯಾಭಿವೃದ್ಧಿ ಯೋಜನೆಯಿಂದ ವಿದ್ಯಾರ್ಥಿಗಳು ಸಾಧಿಸಿದ ಪ್ರಗತಿ ಬೆರಗು ಮೂಡಿಸುವಂತಿತ್ತು. ಬಾಲಕ/ಬಾಲಕಿಯರು ಸಾಫ್ಟ್‌ವೇರ್‌ಗಳನ್ನು ಬಳಸುವುದು ಮಾತ್ರವಲ್ಲದೇ, ರೊಬೊಟಿಕ್ಸ್ ಹಾಗೂ ಕೃತಕ ಬುದ್ಧಿಮತ್ತೆಯನ್ನು (ಎಐ) ಕೂಡ ಯಶಸ್ವಿಯಾಗಿ ಬಳಸತೊಡಗಿದ್ದಾರೆ ಎಂದು ಈ ಯೋಜನೆ ಕುರಿತ ಯುನಿಸೆಫ್ ಇಂಡಿಯಾ ವರದಿ ತಿಳಿಸಿದೆ.
‘ಲಿಟ್ಲ್ ಕೈಟ್’ ಭಾರತದ ವಿದ್ಯಾರ್ಥಿಗಳ ಅತಿ ದೊಡ್ಡ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ಐಸಿಟಿ) ಜಾಲವಾಗಿದೆ. ಸರ್ಕಾರವು ಯುನಿಸೆಫ್‌ನ ಮಾರ್ಗಸೂಚಿಗೆ ಪೂರಕವಾಗಿ ಎಜುಟೆಕ್ (EdTec) ಕಾರ್ಯಕ್ರಮ ರೂಪಿಸಿ, 8ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಡಿಜಿಟಲ್ ಸಾಧನಗಳು, ಅಂತರ್ಜಾಲ ಸಂಪರ್ಕ ಒದಗಿಸಿತು. ಯೋಜನೆಯಲ್ಲಿ ಉಚಿತ ಮತ್ತು ಓಪನ್ ಸೋರ್ಸ್ ಸಾಫ್ಟ್‌ವೇರ್ (ಎಫ್‌ಒಎಸ್‌ಎಸ್) ಬಳಸಲಾಗಿತ್ತು. 2008ರಿಂದ ಶಿಕ್ಷಣ ಇಲಾಖೆಯಲ್ಲಿ ಎಫ್‌ಒಎಸ್‌ಎಸ್ ಬಳಸಲಾಗುತ್ತಿದ್ದು, ಅದರಿಂದ ರಾಜ್ಯಕ್ಕೆ ವಾರ್ಷಿಕ ₹3,000 ಕೋಟಿ ಉಳಿತಾಯವಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ.
ಈ ಯೋಜನೆಯ ಭಾಗವಾಗಿ ವಿದ್ಯಾರ್ಥಿಗಳು ಸಾಫ್ಟ್‌ವೇರ್‌ಗಳನ್ನು ಬಳಸುವುದಷ್ಟೇ ಅಲ್ಲ, ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಲೂ ಸೂಚಿಸಿ, ಅವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ತಿಳಿಸಲಾಗಿತ್ತು. ಜತೆಗೆ, ವಿದ್ಯಾರ್ಥಿಗೆ ಅಗತ್ಯವಾದ ಜೀವನ ಕೌಶಲಗಳು, ಸಾಮಾಜಿಕ ಕೌಶಲಗಳು ಹಾಗೂ 21ನೇ ಶತಮಾನದ ಕೌಶಲಗಳನ್ನು ಕಲಿಸಲಾಯಿತು. ಕೋವಿಡ್ ವೇಳೆಯಲ್ಲಂತೂ ಇದು ವಿದ್ಯಾರ್ಥಿಗಳಿಗೆ ದೊಡ್ಡ ಮಟ್ಟದಲ್ಲಿ ನೆರವಾಯಿತು. ರಾಜ್ಯದ 46 ಲಕ್ಷ ವಿದ್ಯಾರ್ಥಿಗಳಿಗೆ ಇ–ಪಠ್ಯಕ್ರಮದ ಮೂಲಕ ಶಿಕ್ಷಣ ನೀಡಲಾಗಿತ್ತು. ವೆಬ್ ಮತ್ತು ಯುಟ್ಯೂಬ್ ಅನ್ನೂ ಬಳಸಿಕೊಳ್ಳಲಾಗಿತ್ತು. ಇದೆಲ್ಲದರ ಫಲವಾಗಿ, ರಾಜ್ಯದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಡಿಜಿಟಲ್ ತಂತ್ರಜ್ಞಾನದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದರು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಹೆಣ್ಣುಮಕ್ಕಳು ಕೂಡ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆಯಲು ಯೋಜನೆ ಪ್ರೇರೇಪಿಸಿತು. ಲಿಟ್ಲ್ ಕೈಟ್‌ಗೆ ‘2022ರ ರಾಜ್ಯದ ಅತ್ಯುತ್ತಮ ನಾವೀನ್ಯದ (ಇನೊವೇಶನ್) ಯೋಜನೆ’ ಎನ್ನುವ ಮನ್ನಣೆಯೂ ಸಿಕ್ಕಿತು.
ಭಾರತದಲ್ಲಿರುವ 25.3 ಕೋಟಿ ಹದಿಹರೆಯದವರನ್ನು ಡಿಜಿಟಲ್ ಸಾಕ್ಷರನ್ನಾಗಿಸುವ ಮೂಲಕ ಭವಿಷ್ಯದ ಸವಾಲುಗಳಿಗೆ ಸಜ್ಜುಮಾಡುವ ದೃಷ್ಟಿಯಿಂದ ಕೇರಳದ ಮಾದರಿ ಅನುಕರಣೀಯ; ಇದು ಮಧ್ಯಮ ಆದಾಯದ ದೇಶಗಳು ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳಿಗೂ ಉತ್ತಮ ಮಾದರಿ ಎಂದು ಯುನಿಸೆಫ್ ಶ್ಲಾಘಿಸಿದೆ. 11 ಮತ್ತು 12ನೇ ತರತಿಯ ಮಕ್ಕಳಿಗೂ ಕಾರ್ಯಕ್ರಮ ವಿಸ್ತರಿಸಿ ಎಂದು ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.