ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ-ಅಗಲ | ‘ಚಾಮುಂಡಿ’ಯ ಆಸ್ತಿಗೆ ಜಟಾಪಟಿ
ಆಳ-ಅಗಲ | ‘ಚಾಮುಂಡಿ’ಯ ಆಸ್ತಿಗೆ ಜಟಾಪಟಿ
ಫಾಲೋ ಮಾಡಿ
Published 19 ಆಗಸ್ಟ್ 2024, 1:02 IST
Last Updated 19 ಆಗಸ್ಟ್ 2024, 1:02 IST
Comments
ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಮಾಲೀಕತ್ವದ ಕುರಿತಾಗಿ ಈ ವಿವಾದ ಉಂಟಾಗಿದೆ. ಚಾಮುಂಡೇಶ್ವರಿ ದೇವಾಲಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದು ರಾಜವಂಶಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಹೈಕೋರ್ಟ್‌ ಮೊರೆ ಹೋಗಿ ಪ್ರಾಧಿಕಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಬೆಳವಣಿಗೆಯು ಮೈಸೂರಿನ ರಾಜವಂಶಸ್ಥರು ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ..

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಷಯದಲ್ಲಿ ಸರ್ಕಾರ ಹಾಗೂ ಮೈಸೂರು ರಾಜವಂಶಸ್ಥರ ನಡುವೆ ಜಟಾಪಟಿ ನಡೆಯುತ್ತಿದ್ದು, ಕಾನೂನು ಸಂಘರ್ಷವೂ ಶುರುವಾಗಿದೆ.

‘ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್‌ ಪ್ರಾಧಿಕಾರಕ್ಕೆ ತಡೆಯಾಜ್ಞೆ ನೀಡಿದೆ. ‘ಪ್ರಾಧಿಕಾರದ ರಚನೆಯು ಅಸಾಂವಿಧಾನಿಕ‌’ ಎಂಬುದು ಪ್ರಮೋದಾದೇವಿ ಒಡೆಯರ್‌ ಪ್ರತಿಪಾದನೆ. ‘ಬೆಟ್ಟ ನಮ್ಮ ಖಾಸಗಿ ಆಸ್ತಿ, ನಿರ್ವಹಣೆಗೆಂದಷ್ಟೇ ಸರ್ಕಾರಕ್ಕೆ ನೀಡಲಾಗಿತ್ತು’ ಎಂದೂ ಅವರು ಹೇಳಿದ್ದಾರೆ. ಈ ಬೆಳವಣಿಗೆಯಿಂದಾಗಿ, ‘ದೇವಾಲಯವು  ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ್ದು’ ಎಂಬ ಭಾವನೆಯಲ್ಲಿದ್ದ ಭಕ್ತರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಮೂಡಿದೆ. ‘ಹಿಂದೂ ದೇವಾಲಯಗಳನ್ನು ಸರ್ಕಾರ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಭಾಗವಾಗಿ ಪ್ರಾಧಿಕಾರ ರಚನೆಗೆ ಮುಂದಾಗಿದೆ’ ಎಂಬ ಆರೋಪವೂ ಕೇಳಿಬರುತ್ತಿದೆ.

ಭಕ್ತರಿಗೆ ಮೂಲಸೌಲಭ್ಯ ಕಲ್ಪಿಸಲು ಮತ್ತು ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ 2023–24ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಘೋಷಿಸಿದಂತೆ, ಪ್ರಾಧಿಕಾರ ರಚಿಸಿ, ಇದೇ ವರ್ಷದ ಮಾರ್ಚ್‌ 7ರಂದು ಅಧಿಸೂಚನೆ ಹೊರಡಿಸಲಾಗಿದೆ. ಈಚೆಗೆ, ಕಾರ್ಯದರ್ಶಿಯನ್ನೂ ನೇಮಿಸಲಾಗಿದೆ.

‘ಬೆಟ್ಟಕ್ಕೆ ಸ್ವಂತ ಆರ್ಥಿಕ ಸಂಪನ್ಮೂಲವಿದ್ದರೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಧಿಕಾರದ ಮೂಲಕ ಸ್ವತಂತ್ರ ಅಸ್ತಿತ್ವ ಕಲ್ಪಿಸ ಬೇಕು’ ಎಂಬ ಒತ್ತಾಯ ಹಿಂದಿನಿಂದಲೂ ಕೇಳಿಬಂದಿತ್ತು.

‘ಬೆಟ್ಟ ಹಾಗೂ ದೇವಸ್ಥಾನವನ್ನು ಏಜೆನ್ಸಿಗಳು ನಿರ್ವಹಿಸುತ್ತಿರುವುದರಿಂದ ಎದ್ದಿರುವ ಸಮನ್ವಯದ ಕೊರತೆಯ ಸಮಸ್ಯೆಯೂ ತಪ್ಪಬೇಕು. ಎಲ್ಲವೂ ಒಂದೇ ಆಡಳಿತದ ವ್ಯಾಪ್ತಿಗೆ ಬರಬೇಕು. ಬೆಟ್ಟದ ಸಮಗ್ರ ನಿರ್ವಹಣೆಗೆ ಪ್ರಾಧಿಕಾರ ಬೇಕು. ಬೆಟ್ಟದಲ್ಲಿ ಕಟ್ಟಡಗಳ ನಿರ್ಮಾಣ ತಡೆಯಬೇಕು’ ಎನ್ನುವುದು ಚಾಮುಂಡಿಬೆಟ್ಟ ಉಳಿಸಿ ಸಮಿತಿಯ ಆಗ್ರಹವಾಗಿತ್ತು. ಪ್ರಾಧಿಕಾರ ರಚಿಸಬೇಕು ಎಂಬ ಒತ್ತಾಯ ಬಿಜೆಪಿ ಸರ್ಕಾರವಿದ್ದಾಗಲೂ ಕೇಳಿ ಬಂದಿತ್ತು. 

ತಾಯಿಗೆ ಮಗನ ಬೆಂಬಲ

‘ಅಭಿವೃದ್ಧಿಯಿಂದಾಗಿ ಕೇರಳದ ವಯನಾಡ್‌, ಕೊಡಗಿನಲ್ಲಿ ಏನಾಗಿದೆ ಎಂಬುದು ಗೊತ್ತಿದೆ. ಬೆಟ್ಟದಲ್ಲಿ ಪ್ರವಾಸಿ ಕೇಂದ್ರಿತ ಅಭಿವೃದ್ಧಿಯಾಗುತ್ತಿದೆ. ದೇಗುಲದ ಪರಂಪರೆ, ಬೆಟ್ಟವನ್ನು ಬೆಟ್ಟದಂತೆಯೇ ಉಳಿಸಿಕೊಳ್ಳಬೇಕು’ ಎಂದು ಪ್ರಮೋದಾದೇವಿ ಒಡೆಯರ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದ್ದಾರೆ.

ತಾಯಿಯ ಮಾತುಗಳನ್ನು ಪುತ್ರ, ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ‌ಅನುಮೋದಿಸಿದ್ದಾರೆ. ‘ಪ್ರಾಧಿಕಾರ ಅಗತ್ಯವಿಲ್ಲ. ಈಗಿನ ವ್ಯವಸ್ಥೆಯೇ ಸಾಕು. ಈಗ ಬರುತ್ತಿರುವ ಹಣದಲ್ಲೇ ಅಭಿವೃದ್ಧಿ ಮಾಡಬಹುದು. ದೇವಾಲಯಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನ ಸರಿಯಲ್ಲ’ ಎಂದು ಹೇಳಿದ್ದಾರೆ.

ಇದೇ ವೇಳೆ, ‘ಪ್ರಾಧಿಕಾರದ ನೆಪದಲ್ಲಿ ಸರ್ಕಾರ ತಮ್ಮ ಖಾಸಗಿ ಆಸ್ತಿಗಳನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಆತಂಕ ರಾಜಮನೆತನದವರದ್ದು’ ಎಂಬ ಚರ್ಚೆ ಶುರುವಾಗಿದೆ. ಜೊತೆಗೆ, ‘ಪರಿಸರ ಸೂಕ್ಷ್ಮ ಪ್ರದೇಶವಾದ ಬೆಟ್ಟವನ್ನು ಧಾರ್ಮಿಕ ಕೇಂದ್ರವನ್ನಾಗಿಯೇ ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟವನ್ನು ಹಾಳು ಮಾಡ ಬಾರದು’ ಎಂಬ ಮಾತುಗಳೂ ಕೇಳಿಬರುತ್ತಿವೆ. 

ಯಾವ್ಯಾವ ಅಭಿವೃದ್ಧಿಗೆ ಯೋಜನೆ?

ಅಭಿವೃದ್ಧಿ ಯೋಜನೆಯ ಸಲುವಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಖರೀದಿಸಲು ಪ್ರಾಧಿಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸಾರ್ವಜನಿಕ ಉದ್ಯಾನಗಳು, ಫಲಪುಷ್ಪ ತೋಟಗಳು ಅಥವಾ ಮೃಗಾಲಯಗಳು, ಕಾರಂಜಿ ಬನಗಳು, ಕೃತಕ ಜಲಪಾತಗಳು, ಕ್ರೀಡಾ ಉದ್ಯಾನಗಳು, ದೋಣಿ ವಿಹಾರ ಅಥವಾ ಇಂಥದ್ದೇ ಆಕರ್ಷಕ ಕೇಂದ್ರಗಳನ್ನು ನಿರ್ಮಿಸುವುದು. ಪ್ರವಾಸಿಗರ ಅವಶ್ಯಕತೆ ಪೂರೈಸಲು ಛತ್ರಗಳು, ಹೋಟೆಲ್‌ಗಳು, ವಸತಿ ಗೃಹಗಳು, ಕಾಟೇಜ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಭೋಜನಾಲಯ ನಿರ್ಮಿಸುವುದು. ಸಾಲು ಅಂಗಡಿಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟುವುದು– ಯೋಜನೆಯ ಭಾಗ.

ಮಾರಾಟದ ಹಕ್ಕೂ ಸರ್ಕಾರದ್ದೇ

ಆಯಕಟ್ಟಿನ ಸ್ಥಳಗಳಲ್ಲಿ ಪ್ರಾರ್ಥನಾ ಮಂದಿರಗಳು ಮತ್ತು ಧ್ಯಾನ ಮಂದಿರಗಳ ನಿರ್ಮಾಣ, ಕಟ್ಟಡಗಳ ನಿರ್ಮಾಣ ಮತ್ತು ಪುನರ್‌ನಿರ್ಮಾಣ, ಯಾವುದೇ ಭೂಮಿಯ ವಿನ್ಯಾಸ ಹಾಗೂ ಮರುವಿನ್ಯಾಸ. ಉತ್ತಮ ನೀರು ಹರಿವಿನ ವ್ಯವಸ್ಥೆಗಾಗಿ ಭೂಮಿಯನ್ನು ಎತ್ತರಿಸುವುದು. ಕಟ್ಟಡಗಳ ನಿರ್ವಹಣೆ, ಸಂರಕ್ಷಣೆ. ಯಾವುದೇ ಸ್ವತ್ತಿನ ಮಾರಾಟ, ಬಾಡಿಗೆಗೆ ಕೊಡುವುದು ಅಥವಾ ವಿನಿಮಯ ಮಾಡಿಕೊಳ್ಳುವುದು. 100 ಮೈಕ್ರಾನ್‌ಗಳಿಗಿಂತ ಕಡಿಮೆಯ ಪ್ಲಾಸ್ಟಿಕ್‌ ಬಳಕೆ ನಿಷೇಧಿಸುವುದು ಸರ್ಕಾರದ ವ್ಯಾಪ್ತಿಯಲ್ಲೇ ಇರುತ್ತದೆ.

ತನ್ನದೇ ಸಂಪನ್ಮೂಲಗಳಿಂದ ಸ್ವಯಂ ನಿರ್ವಹಣೆ ಮಾಡಿಕೊಳ್ಳುವ ಹಂತ ತಲುಪುವವರೆಗೆ, ಪ್ರಾಧಿಕಾರದ ಆಡಳಿತಾತ್ಮಕ ವೆಚ್ಚಗಳಿಗೆ ಸಮನಾದ ಮೊತ್ತವನ್ನು ಅನುದಾನದ ರೂಪದಲ್ಲಿ ಸರ್ಕಾರವೇ ನೀಡಬೇಕೆಂದು ಕಾಯ್ದೆಯಲ್ಲಿ ಹೇಳಲಾಗಿದೆ.

‘ಚಾಮುಂಡೇಶ್ವರಿ ದೇವಾಲಯದಲ್ಲಿ ಮೈಸೂರಿನ ರಾಜಮನೆತನದ ವಿಶೇಷ ಸವಲತ್ತುಗಳು ಮತ್ತು ಧಾರ್ಮಿಕ ಹಕ್ಕುಗಳು ಎಂದಿನಂತೆ ಮುಂದುವರಿಯತಕ್ಕದ್ದು’ ಎಂದು ಹೇಳುವ ಕಾಯ್ದೆಯು, ‘ಪ್ರಾಧಿಕಾರದ ಎಲ್ಲ ಕಾರ್ಯಚಟುವಟಿಕೆಗಳು ಹಾಗೂ ವ್ಯವಹಾರಗಳ ಮೇಲೆ ರಾಜ್ಯ ಸರ್ಕಾರ ಸಾಮಾನ್ಯ ಆಡಳಿತ ನಿಯಂತ್ರಣ ಮತ್ತು ಮೇಲ್ವಿಚಾರಣೆ ಹೊಂದಿರುತ್ತದೆ’ ಎಂದೂ ಹೇಳಿದೆ.    

ರಾಜವಂಶಸ್ಥರು ಮತ್ತು ಸರ್ಕಾರದ ನಡುವೆ ವ್ಯಾಜ್ಯಗಳು ಹಿಂದಿನಿಂದಲೂ ಇವೆ. ಕುರುಬರಹಳ್ಳಿ ಸರ್ವೆ ಸಂಖ್ಯೆ4ರ ಪ್ರಕರಣ, ದೊಡ್ಡಕೆರೆ ಮೈದಾನದ ಪ್ರಕರಣದಲ್ಲಿ ರಾಜವಂಶಸ್ಥರ ಪರ ತೀರ್ಪಾಗಿದೆ. ಚಾಮುಂಡಿಬೆಟ್ಟದ ವಿಷಯದಲ್ಲೂ ಆದೀತೆಂಬ ನಿರೀಕ್ಷೆ ರಾಜಮನೆತನದ್ದು. 

ಪ್ರಮೋದಾದೇವಿ ಒಡೆಯರ್‌ ವಾದವೇನು?

‘ರಾಜಮನೆತನವು ಬೆಟ್ಟವನ್ನು ನಿರ್ವಹಣೆ ಉದ್ದೇಶಕ್ಕೆ ಮಾತ್ರ ಸರ್ಕಾರಕ್ಕೆ ವಹಿಸಿದ್ದೇ ವಿನಾ ಸ್ವಂತ ಆಸ್ತಿ ಮಾಡಿಕೊಳ್ಳುವುದಕ್ಕಲ್ಲ. ಆದರೆ, ಶ್ರೀಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ–2024ರ ಮೂಲಕ ಸರ್ಕಾರ ಬೆಟ್ಟವನ್ನು ಸ್ವಂತದ್ದಾಗಿ ಮಾಡಿಕೊಳ್ಳಲು ಯತ್ನಿಸುತ್ತಿದೆ. ಒಕ್ಕೂಟದಲ್ಲಿ ವಿಲೀನವಾದಾಗ ನಡೆದ ಒಪ್ಪಂದದಲ್ಲಿ ರಚನೆಯಾದ ಮೈಸೂರು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಚಾಮುಂಡಿ ಬೆಟ್ಟವೂ ಸೇರಿದೆ. 1972ರಲ್ಲಿ ಕೇಂದ್ರ ಗೃಹ ಸಚಿವಾಲಯವು ಖಾಸಗಿ ಆಸ್ತಿಗಳು ರಾಜವಂಶಸ್ಥರಿಗೆ ಸೇರಿದ್ದೆಂದು, ಅವುಗಳಿಗೆ ಸಂವಿಧಾನದ 26ನೇ ತಿದ್ದುಪಡಿ ಅನ್ವಯ ಆಗುವುದಿಲ್ಲವೆಂದು ಹೇಳಿದ್ದನ್ನು ಸರ್ಕಾರವೂ ಒಪ್ಪಿಕೊಂಡಿದೆ’.

‘ಚಾಮುಂಡಿ ಬೆಟ್ಟದ ದೇಗುಲ, ಹೊಂದಿಕೊಂಡ ಕಟ್ಟಡಗಳು, ರಾಜೇಂದ್ರ ವಿಲಾಸ, ಉದ್ಯಾನ, ಮಹಾಬಲೇಶ್ವರ, ನಾರಾಯಣಸ್ವಾಮಿ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ದೇವಿ ದೇಗುಲಗಳು, ದೇವಿಕೆರೆ, ಉದ್ಯಾನ, 700ನೇ ಮೆಟ್ಟಿಲಿನಲ್ಲಿರುವ ನಂದಿ, ಲಲಿತಾದ್ರಿ ಕಾಟೇಜ್, ಮೂರು ಪಂಪ್‌ ಹೌಸ್‌ಗಳು ಖಾಸಗಿ ಆಸ್ತಿ ಪಟ್ಟಿಯಲ್ಲಿವೆ. ಬೆಟ್ಟವನ್ನು ಮುಜರಾಯಿ ಇಲಾಖೆಗೆ ವಹಿಸಿದ್ದನ್ನು 2001ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಪ್ರಶ್ನಿಸಿರುವ ವ್ಯಾಜ್ಯವು ಹೈಕೋರ್ಟ್‌ಲ್ಲಿದ್ದು, ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಪ್ರಾಧಿಕಾರ ರಚಿಸಿದ್ದು ಸರಿಯಲ್ಲ. ದಶಕಗಳ ಹಿಂದೆ ಬೆಟ್ಟವನ್ನು ನಿರ್ವಹಣೆ ಮಾಡಲಾಗುವುದಿಲ್ಲವೆಂದು ಸರ್ಕಾರಕ್ಕೆ ಪತ್ರ ಬರೆದಿದ್ದು ನಿಜ. ಅಂದಿನ ಪರಿಸ್ಥಿತಿ, ಕಾರಣಗಳು ಬೇರೆಯೇ ಆಗಿದ್ದವು. ತೀರ್ಪು ನಮ್ಮ ಪರವಾಗಿ ಬಂದರೆ ದೇಗುಲ ನಿರ್ವಹಣೆಗೆ ತಯಾರಿದ್ದೇವೆ’.

ರಾಜಮನೆತನಕ್ಕೂ ಅವಕಾಶ

‘ಮುಖ್ಯಮಂತ್ರಿಯು ‍ಪ್ರಾಧಿಕಾರದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಮೈಸೂರು ಮಹಾರಾಜರ ರಾಜವಂಶದ ಕಾನೂನುಬದ್ಧ ವಂಶಸ್ಥರು ಅಥವಾ ಅವರ ಪ್ರತಿನಿಧಿಯು ಕಾಯಂ ಸದಸ್ಯರಾಗಿರುತ್ತಾರೆ’ ಎಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ಚಾಮುಂಡೇಶ್ವರಿ ಕ್ಷೇತ್ರ’ವೆಂದರೆ, ಅದು ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಚಾಮುಂಡಿಬೆಟ್ಟಕ್ಕೆ ಸೇರಿಕೊಂಡ ಎಲ್ಲ ಅಧೀನ ದೇವಸ್ಥಾನಗಳು, ಚಾಮುಂಡಿಬೆಟ್ಟದ ಇಡೀ ಪ್ರದೇಶ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರವು ಕಾಲಕಾಲಕ್ಕೆ ಅರ್ಜಿಸಬಹುದಾದ ಭೂ ಪ್ರದೇಶ ಹಾಗೂ ರಾಜ್ಯಸರ್ಕಾರವು ಅಧಿಸೂಚನೆಯ ಮೂಲಕ ಘೋಷಿಸಬಹುದಾದಂತಹ ಇತರ ಪ್ರದೇಶಗಳನ್ನು ಒಳಗೊಂಡಿದೆ’ ಎಂದೂ ಅಧಿಸೂಚನೆ ವಿವರಿಸಿದೆ. 

ರಾಜವಂಶಸ್ಥರ ವಿರೋಧವೇಕೆ?
  • ರಾಜಮನೆತನದವರ ಖಾಸಗಿ ಆಸ್ತಿ ಕೈತಪ್ಪಿ ಹೋಗುವ ಆತಂಕ

  • ಪ್ರಾಧಿಕಾರ ರಚನೆಯಿಂದ ಅರಮನೆ ವಾರಸುದಾರರ ಅಧಿಕಾರ ಮೊಟಕು

  • ಬೆಟ್ಟದ ಆಸ್ತಿ ವಿಚಾರ ನ್ಯಾಯಾಲಯದಲ್ಲಿರುವುದರಿಂದ, ತೀರ್ಮಾನ ಆಗುವವರೆಗೆ ಕಾಯಬೇಕು

  • ಪ್ರಾಧಿಕಾರದ ಮೂಲಕ ಎಲ್ಲ ನಿಯಂತ್ರಣವೂ ಸರ್ಕಾರದ್ದೇ ಆಗಿರುತ್ತದೆ

  • ಬೆಟ್ಟದ ಸಂಪೂರ್ಣ ಸೌಕರ್ಯ, ನಿರ್ವಹಣೆ ಮೇಲೆ ಸರ್ಕಾರದ್ದೇ ಹಿಡಿತ

  • ನೌಕರರು, ಅಧಿಕಾರಿಗಳು ಹಾಗೂ ಅರ್ಚಕರು ಸೇರಿ ಎಲ್ಲ ನೇಮಕಾತಿ ಅಧಿಕಾರವೂ ಸರ್ಕಾರದ್ದೇ

  • ನಿಧಿ, ಸೇವಾ ಶುಲ್ಕ, ದೇಣಿಗೆ, ಕಾಣಿಕೆಯ ಬಳಕೆ ವಿಚಾರವೂ ಪ್ರಾಧಿಕಾರದ ಅಂದರೆ ಸರ್ಕಾರದ್ದೇ ಆಗಿರಲಿದೆ

  • ಕಲ್ಪಿಸಬಹುದಾದ ಸೌಕರ್ಯಗಳ ಬಗ್ಗೆ ಸರ್ಕಾರವೇ ತೀರ್ಮಾನಿಸಲಿದೆ

ಶ್ರೀಮಂತ ದೇಗುಲಗಳಲ್ಲೊಂದು

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ನಾಡಿನ ಶ್ರೀಮಂತ ದೇವಾಲಯಗಳಲ್ಲಿ ಪ್ರಮುಖವಾದುದು. ಹುಂಡಿ, ಕಾಣಿಕೆ, ದೇಣಿಗೆ, ಲಡ್ಡು–ತೀರ್ಥ ಪ್ರಸಾದ ಮಾರಾಟ, ಬಾಡಿಗೆ ಈ ದೇಗುಲದ ಆದಾಯದ ಮೂಲಗಳಾಗಿವೆ. ಆಷಾಢದ ಶುಕ್ರವಾರಗಳಂದು ಹಾಗೂ ಚಾಮುಂಡೇಶ್ವರಿ ವರ್ಧಂತಿಯಂದು ಅಪಾರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ

ಪ್ರಾಧಿಕಾರ ರಚಿಸಿದ್ದೇವೆ. ಅದರ ವಿರುದ್ಧ ಪ್ರಮೋದಾದೇವಿ ಒಡೆಯರ್‌ ತಡೆಯಾಜ್ಞೆ ತಂದಿದ್ದಾರೆ. ಮುಂದೇನು ಮಾಡಬೇಕು ಎಂಬುದರ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಸಿದ್ದರಾಮಯ್ಯ,ಮುಖ್ಯಮಂತ್ರಿ
ನಾವು ರಾಜಮನೆತನದ ವಿರೋಧಿಗಳಲ್ಲ. ನಾಲ್ವಡಿ ಕೃಷ್ಣರಾಜ ಒಡೆಯರ್ ಆದರ್ಶಗಳನ್ನು ಪಾಲಿಸುತ್ತಿದ್ದೇವೆ. ಚಾಮುಂಡಿಬೆಟ್ಟ ಜನರ ಸ್ವತ್ತಾಗಿರಲಿ, ಅವರ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಯಾಗಬೇಕೆಂಬುದು ಸರ್ಕಾರದ ನಿಲುವು. ಪ್ರಾಧಿಕಾರದ ರಚನೆಗೆ ಜನರ ಒತ್ತಾಯವೂ ಇತ್ತು.
ಡಾ.ಎಚ್‌.ಸಿ. ಮಹದೇಪವ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ
ಚಾಮುಂಡಿ ಬೆಟ್ಟದ ಮಾಲೀಕತ್ವ ಯಾರದ್ದೇ ಆಗಿರಲಿ. ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಪ್ರಕೃತಿದತ್ತವಾಗಿಯೇ ಉಳಿಸಿಕೊಳ್ಳಬೇಕು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸರಿಯಲ್ಲ.
ಎಸ್.ಜಿ.ಒಂಬತ್ಕೆರೆ, ನಿವೃತ್ತ ಮೇಜರ್‌ ಜನರಲ್‌, ಮೈಸೂರು
ಬೆಟ್ಟ ಖಾಸಗಿ ಆಸ್ತಿ ಎನ್ನುತ್ತಿರುವವರ ವಿರುದ್ಧ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕು. ಒಪ್ಪಂದ ಏನೇ ಆಗಿರಬಹುದು; ನೈತಿಕತೆ ಇದ್ದಿದ್ದರೆ ಬೆಟ್ಟ, ದೇವಸ್ಥಾನ, ದೇವಿಕೆರೆ ನಮ್ಮದು ಎಂದು ಹೇಳುತ್ತಿರಲಿಲ್ಲ.
ಪಿ.ವಿ.ನಂಜರಾಜ ಅರಸು, ಇತಿಹಾಸ ತಜ್ಞ, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT