ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
Explainer | ಆಳ–ಅಗಲ: ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಕೊಟ್ಟ ಮೈತ್ರಿಯುಗ
Explainer | ಆಳ–ಅಗಲ: ಪ್ರಾದೇಶಿಕ ಪಕ್ಷಗಳಿಗೆ ಮಹತ್ವ ಕೊಟ್ಟ ಮೈತ್ರಿಯುಗ
Published 19 ಜುಲೈ 2023, 0:43 IST
Last Updated 19 ಜುಲೈ 2023, 0:43 IST
ಅಕ್ಷರ ಗಾತ್ರ
ರಾಷ್ಟ್ರಮಟ್ಟದ ಮೈತ್ರಿರಾಜಕಾರಣ ಕಾಲದಲ್ಲಿ ಹಲವು ಬದಲಾವಣೆಗಳಿಗೆ  ಭಾರತವು ಸಾಕ್ಷಿಯಾಗಿದೆ. ರಾಷ್ಟ್ರಮಟ್ಟದಲ್ಲಿ ನಡೆದ ಮೈತ್ರಿಕೂಟಗಳಲ್ಲಿನ ಪ್ರಮುಖ ಪಾಲುದಾರ ಪಕ್ಷಗಳೆಲ್ಲವೂ ರಾಷ್ಟ್ರೀಯ ಪಕ್ಷಗಳೇ ಆಗಿದ್ದವು. ಜನತಾ ಮೋರ್ಚಾ, ಜನತಾ ಪಾರ್ಟಿ, ರಾಷ್ಟ್ರೀಯ ರಂಗ, ಸಂಯುಕ್ತ ರಂಗದಲ್ಲಿ ಮುಂದಾಳು ಪಕ್ಷ ಮತ್ತು ಪ್ರಮುಖ ಮಿತ್ರಪಕ್ಷಗಳೆಲ್ಲವೂ ರಾಷ್ಟ್ರೀಯ ಪಕ್ಷಗಳೇ ಆಗಿದ್ದವು. ಆದರೆ, 90 ದಶಕದಲ್ಲಿ ರೂಪುಗೊಂಡ ಎನ್‌ಡಿಎ ಮತ್ತು 21ನೇ ಶತಮಾನದ ಆರಂಭದಲ್ಲಿ ರೂಪುಗೊಂಡ ಯುಪಿಎಯಲ್ಲಿ ಮೈತ್ರಿಕೂಟದ ಸ್ವರೂಪದ ಬದಲಾಗಿತ್ತು. ಎರಡೂ ಮೈತ್ರಿಕೂಟಗಳನ್ನು ರಾಷ್ಟ್ರೀಯ ಪಕ್ಷಗಳೇ ಮುನ್ನಡೆಸಿದರೂ ಪ್ರಾದೇಶಿಕ ಪಕ್ಷಗಳೇ ಪ್ರಮುಖ ಮಿತ್ರಪಕ್ಷಗಳಾಗಿದ್ದವು. ಎರಡೂ ಸಂದರ್ಭಗಳಲ್ಲಿ ರಾಜ್ಯಮಟ್ಟದ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮಹತ್ವ ನೀಡಲಾಯಿತು. ಇದು ಭಾರತದ ರಾಷ್ಟ್ರರಾಜಕಾರಣದಲ್ಲಿ ಆದ ಪ್ರಮುಖ ಪಲ್ಲಟ ಎಂದು ಗುರುತಿಸಲಾಗಿದೆ

ಎನ್‌ಡಿಎ

ತೃತೀಯ ರಂಗದ ಉಗಮದ ನಂತರ ದೇಶದಲ್ಲಿ ಕಾಂಗ್ರೆಸ್‌ ಬಲ ಕುಗ್ಗತೊಡಗಿತ್ತು. ಭಾರತದ ರಾಜಕಾರಣದ ಲೆಕ್ಕಾಚಾರಗಳೂ ಬದಲಾಗ ತೊಡಗಿದ್ದವು. ರಾಷ್ಟ್ರೀಯ ರಂಗದಲ್ಲಿ ಪ್ರಾದೇಶಿಕ ಪಕ್ಷಗಳು ಇದ್ದವಾದರೂ ಅವುಗಳ ಇರುವಿಕೆ ಸಂಖ್ಯೆಗಷ್ಟೇ ಸೀಮಿತವಾಗಿತ್ತು. ಆದರೆ, ಸಂಯುಕ್ತ ರಂಗ 1996ರಲ್ಲಿ ಅಧಿಕಾರಕ್ಕೆ ಬರುವ ಹೊತ್ತಿಗೆ ಪ್ರಾದೇಶಿಕ ಪಕ್ಷಗಳು ಬಲಗೊಂಡಿದ್ದವು. ಪ್ರಾದೇಶಿಕ ಪಕ್ಷಗಳು ರಾಷ್ಟ್ರ ರಾಜಕಾರಣವನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದವು. ಇದರೊಂದಿಗೆ ಪ್ರಾದೇಶವಾರು ಅಸ್ಮಿತೆ, ಅದರೊಂದಿಗಿನ ರಾಜಕಾರಣಕ್ಕೆ ಸಂಚಲನ ದೊರೆಯಿತು. 1996ರ ಚುನಾವಣೆಯಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳ 137 ಸದಸ್ಯರು ಲೋಕಸಭೆಗೆ ಆಯ್ಕೆಗೊಂಡಿದ್ದರು.

ಇದೇ ಸಂದರ್ಭದಲ್ಲಿ ಬಿಜೆಪಿಯು ದೇಶದ ರಾಜಕಾರಣದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳುವ ಪ್ರಯತ್ನದಲ್ಲಿತ್ತು. ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ ಅವರು ಕೈಗೊಂಡಿದ್ದ ರಥಯಾತ್ರೆಯ ಪ್ರಯತ್ನಕ್ಕೆ ಭಾರಿ ಬೆಂಬಲವೇ ವ್ಯಕ್ತವಾಗಿತ್ತು. ನಂತರ, ಮಂಡಲ ಆಯೋಗದ ವಿರುದ್ಧದ ಹೋರಾಟ ಕೂಡ ಬಿಜೆಪಿ ಕೈಹಿಡಿಯಿತು. ಈ ಎಲ್ಲದರ ಪರಿಣಾಮ, 1984ರಲ್ಲಿ ಎರಡು ಸಂಸದರನ್ನು ಹೊಂದಿದ್ದ ಬಿಜೆಪಿ 1996ರ ಹೊತ್ತಿಗೆ 161 ಸ್ಥಾನಗಳಿಗೆ ತನ್ನ ಸಂಸದರ ಬಲವನ್ನು ಹೆಚ್ಚಿಸಿಕೊಂಡಿತ್ತು.

ಐ.ಕೆ. ಗುಜ್ರಾಲ್‌ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿದ ನಂತರ, ಸಮತಾ ಪಕ್ಷ, ಶಿವಸೇನಾ ಹಾಗೂ ಎಐಎಡಿಎಂಕೆಯೊಂದಿಗೆ ಹೊಂದಾಣಿಕೆಗೆ ಇಳಿದ ಬಿಜೆಪಿಯು 1998ರಲ್ಲಿ ಎನ್‌ಡಿಎ (ನ್ಯಾಷನಲ್‌ ಡೆಮಾಕ್ರಟಿಕ್‌ ಅಲಯನ್ಸ್‌) ರಚಿಸಿಕೊಂಡು 13 ತಿಂಗಳು ಸರ್ಕಾರ ನಡೆಸಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದರು. ಎಐಎಡಿಎಂಕೆ ಬೆಂಬಲ ವಾಪಸು ಪಡೆದ ಕಾರಣ ಸರ್ಕಾರ ಪತನಗೊಂಡಿತು.

1999ರಲ್ಲಿ ನಡೆದ ಲೋಕಸಭಾ ಚುನಾವಣೆಯನ್ನು ಎನ್‌ಡಿಎಯಲ್ಲಿದ್ದ 24 ಪಕ್ಷಗಳು ಒಗ್ಗೂಡಿ ಎದುರಿಸಿದವು; ಎನ್‌ಡಿಎಗೆ ಗೆಲುವೂ ದೊರೆಯಿತು. ವಾಜಪೇಯಿ ಅವರು ಮೂರನೇ ಬಾರಿಗೆ ಪ್ರಧಾನಿಯೂ ಆದರು. ಅಟಲ್ ಬಿಹಾರಿ ವಾಜಪೇಯಿ ಅವರ ವ್ಯಕ್ತಿತ್ವದ ಕಾರಣಕ್ಕಾಗಿಯೇ ಎನ್‌ಡಿಎ ರೂಪುಗೊಂಡಿತು ಎನ್ನುವುದು ಹಲವು ವಿಶ್ಲೇಷಕರ ಅಭಿಪ್ರಾಯ. ಬಿಜೆಪಿ ಮಾತ್ರವಲ್ಲದೇ ಬೇರೆ ಪಕ್ಷಗಳ ನಾಯಕರೂ ವಾಜಪೇಯಿ ಅವರನ್ನು ಗೌರವಿಸುತ್ತಿದ್ದರು. ಇದುವೇ ಎನ್‌ಡಿಎಯ ಗೆಲುವಿಗೆ ಕಾರಣ ಎಂದೂ ಹೇಳುತ್ತಾರೆ.

2014ರಲ್ಲಿ ಬಂದ ಎನ್‌ಡಿಎ ತನ್ನ ಹಳೆಯ ತನವನ್ನು ಕೊಡವಿಗೊಂಡು, ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಗೆ ಮುಂದಾಯಿತು. ಈ ಹೊತ್ತಿಗೆ ಬಿಜೆಪಿ ಮತ್ತು ಸುಮಾರು 54 ಪ್ರಾದೇಶಿಕ ಪಕ್ಷಗಳು ಎನ್‌ಡಿಎಯ ಭಾಗವಾಗಿದ್ದವು. ಆದರೆ, 2014ರ ಚುನಾವಣೆಯ ನಂತರವೇ ಹಲವು ಪಕ್ಷಗಳು ಎನ್‌ಡಿಎ ಅನ್ನು ತೊರೆಯಲು ಪ್ರಾರಂಭಿಸಿದರು. 2014ರಿಂದ 2019ರವರೆಗೆ ಸುಮಾರು 19 ಮಿತ್ರಪಕ್ಷಗಳು ಎನ್‌ಡಿಎ ತೊರೆದಿದ್ದವು.

2019ರ ಚುನಾವಣೆಯ ಹೊತ್ತಿಗೆ ಹೊರ ನಡೆದ ಕೆಲವು ಪಕ್ಷಗಳು ಮತ್ತೊಮ್ಮೆ ಎನ್‌ಡಿಎಯ ಭಾಗವಾದವು. ಹಲವು ಪಕ್ಷಗಳು ಎನ್‌ಡಿಎಯ ಭಾಗವಾಗುವುದು, ಬಿಡುವುದಕ್ಕೆ ಆಯಾ ರಾಜ್ಯಗಳ ಚುನಾವಣಾ ರಾಜಕಾರಣವೂ ಕಾರಣವಾಗಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ಎನ್‌ಡಿಎಯ ಪ್ರಮುಖ ಪಕ್ಷಗಳಾಗಿದ್ದ ಶಿರೋಮಣಿ ಅಕಾಲಿ ದಳ, ಶಿವಸೇನಾ ಮೈತ್ರಿಯಿಂದ ಹೊರಬಂದವು.

ಒಂದೆಡೆ, ಮೋದಿ ಅವರು ‘ಒನ್‌ ಮ್ಯಾನ್‌ ಶೋ’ ಹಾಗೂ ‘ಹಿಂದುತ್ವ’ ರಾಜಕಾರಣದಲ್ಲಿ ಬೇರೆ ಯಾರಿಗೂ ಪಾಲು ಕೊಡದಿರುವುದು, ಹಲವು ಪ್ರಾದೇಶಿಕ ಪಕ್ಷಗಳು ಎನ್‌ಡಿಎಯಿಂದ ಹೊರಬರಲು ಕಾರಣ ಎನ್ನುವುದನ್ನು ಹಲವು ರಾಜಕೀಯ ವಿಶ್ಲೇಷಕರು ಒಪ್ಪುತ್ತಾರೆ. ‘ಬಿಜೆಪಿಯು ನಮ್ಮನ್ನು ಬಳಸಿಕೊಂಡು ಬಿಸಾಡಿತು. ನಮ್ಮ 25 ವರ್ಷಗಳನ್ನು ನಾವು ವ್ಯರ್ಥ ಮಾಡಿಕೊಂಡಿಕೊಂಡೆವು’ ಎಂದು ಉದ್ಧವ್‌ ಠಾಕ್ರೆ ಅವರು ಎನ್‌ಡಿಎಯನ್ನು ತೊರೆದ ಸಂದರ್ಭದಲ್ಲಿ ಹೇಳಿದ್ದರು.

ಸದ್ಯ ಬಿಜೆಪಿಯ ಹಲವು ಮಿತ್ರ ಪಕ್ಷಗಳ ಪೈಕಿ ಈಶಾನ್ಯ ಭಾಗದ ಪಕ್ಷಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಶಿವಸೇನಾ, ಎನ್‌ಸಿಪಿ (ಅಜಿತ್‌ ಬಣ), ಎಐಎಡಿಎಂಕೆ ಪಕ್ಷಗಳೇ ಎನ್‌ಡಿಎಯ ದೊಡ್ಡ ಪಕ್ಷಗಳಾಗಿವೆ. ಅಂದಹಾಗೆ, ಪ್ರಧಾನಿ ಮೋದಿ ಅವರು ತಮ್ಮ ಸರ್ಕಾರದ ಒಂಬತ್ತನೇ ವರ್ಷದ ಆಚರಣೆಯನ್ನು 2023ರ ಮೇ 26ರಂದು ಆಚರಿಸಿದರು. ಇದೇ ವರ್ಷದ ಮೇ 15ಕ್ಕೆ ಎನ್‌ಡಿಎ ಮೈತ್ರಿಕೂಟಕ್ಕೆ 25 ವರ್ಷ ಸಂದಿದೆ.

ಯುಪಿಎ

2004ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಸರಳ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಇನ್ನೊಂದೆಡೆ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದವು. ಆದರೆ, ಯಾರಿಗೂ ಸ್ಪಷ್ಟ ಬಹುಮತ ಇರಲಿಲ್ಲ. ಅಂತಹ ಅತಂತ್ರ ಲೋಕಸಭೆಯ ಸ್ಥಿತಿಯಲ್ಲಿ ರೂಪುಗೊಂಡಿದ್ದೇ ಯುಪಿಎ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮುಂದಾಳುತ್ವದಲ್ಲಿ ಯುಪಿಎಯನ್ನು ರೂಪಿಸಲಾಯಿತು. ಯುಪಿಎಯಲ್ಲಿ ದೇಶದ 13 ಪ್ರಮುಖ ರಾಜ್ಯ ಮಟ್ಟದ ಮತ್ತು ಪ್ರಾದೇಶಿಕ ಪಕ್ಷಗಳಿದ್ದವು. ಹೀಗಿದ್ದೂ, ಸರ್ಕಾರ ರಚಿಸುವಷ್ಟು ಬಹುಮತ ಯುಪಿಎಗೆ ಇರಲಿಲ್ಲ. ಆಗ ಎಡಪಕ್ಷಗಳು ಯುಪಿಎಗೆ ಬಾಹ್ಯ ಬೆಂಬಲ ನೀಡಿದವು. ಇದರಿಂದ ಸರ್ಕಾರ ರಚಿಸಲು ಯುಪಿಎಗೆ ಸಾಧ್ಯವಾಯಿತು.

ಸರ್ಕಾರ ರಚಿಸಲು ಬಹುಮತದ ಅಗತ್ಯವಿದ್ದ ಕಾರಣ ಕಾಂಗ್ರೆಸ್‌ ಪಕ್ಷವು, ಒಬ್ಬ ಸಂಸದನ ಬಲ ಇದ್ದ ಪ್ರಾದೇಶಿಕ ಪಕ್ಷವನ್ನೂ ಯುಪಿಎಗೆ ಸೇರಿಸಿಕೊಂಡಿತು. ಹೀಗಾಗಿ ಯುಪಿಎ ಅಡಿಯಲ್ಲಿ ಇದ್ದ ಮಿತ್ರಪಕ್ಷಗಳು ದೇಶದ ಬಹುತೇಕ ಭಾಗಗಳನ್ನು ಪ್ರತಿನಿಧಿಸುತ್ತಿದ್ದವು. ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದ ಪ್ರಾದೇಶಿಕ ವೈವಿಧ್ಯ ಯುಪಿಎಯಲ್ಲೂ ಇತ್ತು. ಎನ್‌ಡಿಎಯ ಭಾಗವಾಗಿದ್ದ ಕೆಲವು ಪಕ್ಷಗಳು ಯುಪಿಎಯನ್ನು ಬೆಂಬಲಿಸಿದವು. ಇಷ್ಟೆಲ್ಲಾ ಪ್ರಾದೇಶಿಕ ಪಕ್ಷಗಳು ಇದ್ದ ಕಾರಣ, ಯುಪಿಎಯಲ್ಲಿ ಕಾಂಗ್ರೆಸ್‌ನ ಮೇಲುಗಾರಿಕೆ ಸಾಧ್ಯವಾಗಲಿಲ್ಲ. ಬದಲಿಗೆ ಕೇಂದ್ರದ ಆಡಳಿತವು ನಿಜರೂಪದಲ್ಲಿ ವಿಕೇಂದ್ರೀಕರಣವಾಯಿತು. ರಾಜ್ಯಗಳಿಗೆ ಸಂವಿಧಾನಬದ್ಧವಾಗಿ ದತ್ತವಾಗಿದ್ದ ಹಕ್ಕು ಮತ್ತು ಅಧಿಕಾರಗಳನ್ನು ಕೇಂದ್ರ ಸರ್ಕಾರವು ಗೌರವಿಸುವಂತೆ ಹಾಗೂ ಅವುಗಳನ್ನು ಚಲಾಯಿಸಲು ಅನುವು ಮಾಡಿಕೊಡುವಂತಹ ಸ್ಥಿತಿಯನ್ನು ಪ್ರಾದೇಶಿಕ ಪಕ್ಷಗಳು ನಿರ್ಮಿಸಿಕೊಂಡವು ಎಂದು ‘ನ್ಯೂ ಡೈಮೆನ್ಶನ್ಸ್ ಆಫ್‌ ಪಾಲಿಟಿಕ್ಸ್‌ ಇನ್‌ ಇಂಡಿಯಾ’ ಪುಸ್ತಕದಲ್ಲಿ ದಾಖಲಿಸಲಾಗಿದೆ. ಯುಪಿಎ ಅಡಿಯಲ್ಲಿ ಒಟ್ಟಾಗಿ ಸರ್ಕಾರ ರಚಿಸಿದ್ದರೂ, ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ, ಆಕ್ಷೇಪಗಳನ್ನು ದಾಖಲಿಸುವ ಅಧಿಕಾರವನ್ನು ಉಳಿಸಿಕೊಂಡಿದ್ದವು. ಯುಪಿಎಗೆ ಬಾಹ್ಯ ಬೆಂಬಲ ನೀಡಿದ್ದ ಎಡಪಕ್ಷಗಳು ಸರ್ಕಾರದ ಕಟು ವಿಮರ್ಶೆಯನ್ನೂ ಮಾಡುತ್ತಿದ್ದವು. ಜತೆಗೆ ಒಂದು ಹಂತದಲ್ಲಿ ಬೆಂಬಲವನ್ನು ವಾಪಸ್‌ ಪಡೆದವು. 2009ರಲ್ಲಿ ಅಸ್ತಿತ್ವಕ್ಕೆ ಬಂದ ಯುಪಿಎ–2ರಲ್ಲಿ ಮಿತ್ರಪಕ್ಷಗಳ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಎನ್‌ಡಿಎ ಭಾಗವಾಗಿದ್ದ ಟಿಎಂಸಿ, ಯುಪಿಎ–2ಕ್ಕೆ ಬೆಂಬಲ ನೀಡಿದವು. ಕಾಂಗ್ರೆಸ್‌ನ ಎದುರಾಳಿ ಪಕ್ಷಗಳಾಗಿದ್ದ ಮತ್ತು ಪರಸ್ಪರ ಎದುರಾಳಿಗಳಾಗಿದ್ದ ಬಿಎಸ್‌ಪಿ ಮತ್ತು ಎಸ್‌ಪಿ ಸಹ ಯುಪಿಎ–2ಕ್ಕೆ ಬೆಂಬಲ ನೀಡಿದವು. ಹೀಗೆ  ಪ್ರಾದೇಶಿಕ ಪಕ್ಷಗಳು ಕೇಂದ್ರ ಸರ್ಕಾರದಲ್ಲಿ ಪಾಲುದಾರರಾದ ನಂತರ ರಾಷ್ಟ್ರ ರಾಜಕಾರಣದಲ್ಲಿ ಅವುಗಳ ಪ್ರಾಮುಖ್ಯ ಬದಲಾಯಿತು. 

ಕೈಗೂಡದ ತೃತೀಯ ರಂಗ
ರಾಷ್ಟ್ರರಾಜಕಾರಣದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿದ ತೃತೀಯ ರಂಗವನ್ನು ರಚಿಸುವ ಹಲವು ಯತ್ನಗಳು ಈಚಿನ ವರ್ಷಗಳಲ್ಲಿ ನಡೆದಿವೆ. 2019ರ ಲೋಕಸಭಾ ಚುನಾವಣೆಯ ನಂತರ ಇಂತಹ ಪ್ರಯತ್ನಗಳು ಚುರುಕುಪಡೆದಿತ್ತು. ಆರಂಭದಲ್ಲಿ ಟಿಎಂಸಿಯ ಮಮತಾ ಬ್ಯಾನರ್ಜಿ ಅವರು ಅಂತಹ ಯತ್ನಕ್ಕೆ ಕೈಹಾಕಿದ್ದರು. ರಾಷ್ಟ್ರರಾಜಕಾರಣದಲ್ಲಿ ಪಕ್ಷದ ಛಾಪನ್ನು ಹೆಚ್ಚಿಸಲು ಬೇರೆ–ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸ್ಪರ್ಧಿಸಿತು. ಆದರೆ, ಅದು ನಿರೀಕ್ಷಿತ ಫಲ ನೀಡಲಿಲ್ಲ. ಬೇರೆ ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗೆ ಅವರು ಹಲವು ಸುತ್ತಿನ ಮಾತುಕತೆ ನಡೆಸಿದರು. ಅದೂ ಫಲ ನೀಡಲಿಲ್ಲ. ಇಂಥದ್ದೇ ಪ್ರಯತ್ನವನ್ನು ತೆಲಂಗಾಣದ ಬಿಆರ್‌ಎಸ್‌ (ಹಿಂದಿನ ಟಿಆರ್‌ಎಸ್‌) ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ನಡೆಸಿದ್ದರು. ತಮಿಳುನಾಡಿನ ಡಿಎಂಕೆ, ಮಹಾರಾಷ್ಟ್ರದ ಶಿವಸೇನಾ ಮತ್ತು ಎನ್‌ಸಿಪಿ, ಟಿಎಂಸಿ, ಉತ್ತರ ಪ್ರದೇಶದ ಎಸ್‌ಪಿ ಮುಂದಾಳುಗಳ ಜತೆಗೆ ರಾವ್ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ, ಈ ಯತ್ನವೂ ಫಲ ನೀಡಲಿಲ್ಲ.

ಆಧಾರ: ಪ್ರಧಾನಿ ಕಾರ್ಯಾಲಯದ ಆರ್ಕೈವ್‌ಪಿಎಂಒ.ಎನ್‌ಐಸಿ.ಐಎನ್‌, ಲಾರೆನ್ಸ್‌ ಸಯೇಜ್‌ ಮತ್ತು ಗುರ್ಹಾರ್‌ಪಾಲ್‌ ಸಿಂಗ್ ಅವರ ‘ನ್ಯೂ ಡೈಮೆನ್ಶನ್ಸ್ ಆಫ್‌ ಪಾಲಿಟಿಕ್ಸ್ ಇನ್ ಇಂಡಿಯಾ’,ನೀರಾ ಚಂದೋಕೆ ಹಾಗೂ ಪ್ರವೀಣ್‌ ಪ್ರಿಯದರ್ಶಿನಿ ಅವರ ಸಂಪಾದಕತ್ವದ ‘ಕಾನ್ಟೆಂಪರರಿ ಇಂಡಿಯಾ: ಎಕನಾಮಿಕ್ಸ್‌, ಸೊಸೈಟಿ, ಪಾಲಿಟಿಕ್ಸ್‌’ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT