ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ-ಅಗಲ | ಏರುಗತಿಯಲ್ಲಿ ಪೌರತ್ವ ತೊರೆಯುವಿಕೆ

Last Updated 20 ಫೆಬ್ರುವರಿ 2023, 23:00 IST
ಅಕ್ಷರ ಗಾತ್ರ

ಹನ್ನೆರಡು ವರ್ಷಗಳಲ್ಲಿ ಒಟ್ಟು 16.63 ಲಕ್ಷ ಭಾರತೀಯರು ಭಾರತದ ಪೌರತ್ವ ತೊರೆದಿದ್ದಾರೆ. 2022ರಲ್ಲೇ 2.25 ಲಕ್ಷ ಭಾರತೀಯರು ದೇಶದ ಪೌರತ್ವ ತೊರೆದು, ಬೇರೆ ದೇಶದ ಪೌರತ್ವ ಪಡೆದಿದ್ದಾರೆ. ಹೀಗೆ ಪ್ರತಿ ವರ್ಷ ಭಾರತದ ಪೌರತ್ವ ತೊರೆಯುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ. ಈ ಹನ್ನೆರಡು ವರ್ಷಗಳಲ್ಲಿ ಪ್ರತಿ ವರ್ಷ 1.2 ಲಕ್ಷದಿಂದ 1.4 ಲಕ್ಷದಷ್ಟು ಜನರು ದೇಶದ ಪೌರತ್ವ ತೊರೆದಿದ್ದರು. ಆದರೆ, 2022ರಲ್ಲಿ ಈ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ

------------

ವಿದೇಶಗಳಲ್ಲಿ ಕೆಲಸಕ್ಕೆ ಹೋದ ಭಾರತೀಯರು, ಅಲ್ಲಿನ ನೌಕರಿ ಗಟ್ಟಿಯಾದ ನಂತರ ಆಯಾ ದೇಶದ ಪೌರತ್ವ ಪಡೆಯುತ್ತಾರೆ. ಅಂತಹವರೊಂದಿಗೆ ಅವರ ಕುಟುಂಬದವರೂ ಬೇರೆ ದೇಶಗಳ ಪೌರತ್ವ ಪಡೆಯುವುದು ವಾಡಿಕೆ. ಹೀಗೆ ಬೇರೆ ದೇಶಗಳ ಪೌರತ್ವ ಪಡೆಯುವವರು ಭಾರತದ ಪೌರತ್ವ ತೊರೆಯಲೇಬೇಕಾಗುತ್ತದೆ. ಏಕೆಂದರೆ ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಭಾರತೀಯರು ಬೇರೆ ದೇಶಗಳ ಪೌರತ್ವ ಪಡೆದ ತಕ್ಷಣ, ಭಾರತದ ಪಾಸ್‌ಪೋರ್ಟ್‌ ಅನ್ನು ಹಿಂದಿರುಗಿಸಬೇಕು. ಹೀಗಾಗಿ ಕೆಲಸ ಮತ್ತು ಉದ್ದಿಮೆಯ ಕಾರಣಕ್ಕೆ ವಿದೇಶಗಳಲ್ಲಿ ನೆಲೆಸಿದ ಭಾರತೀಯರು ಅನಿವಾರ್ಯವಾಗಿ ಭಾರತದ ಪೌರತ್ವ ತೊರೆಯುತ್ತಿದ್ದಾರೆ.

2011ರಲ್ಲಿ ಒಟ್ಟು 1.22 ಲಕ್ಷ ಭಾರತೀಯರು ಭಾರತದ ಪೌರತ್ವ ತೊರೆದಿದ್ದರು. ನಂತರದ ವರ್ಷಗಳಲ್ಲಿ ಈ ಸಂಖ್ಯೆಯಲ್ಲಿ ಸಣ್ಣ ಪ್ರಮಾಣದ ಏರಿಕೆಯಾಗಿದೆ. ಪ್ರತಿ ವರ್ಷ ಏರಿಕೆಯ ಸಂಖ್ಯೆ 8,000ದಿಂದ 12 ಸಾವಿರದಷ್ಟು ಇತ್ತು. 2021ರವರೆಗೂ ಏರಿಕೆ ಪ್ರಮಾಣ ಇದೇ ರೀತಿ ಇತ್ತು. 2021ರಲ್ಲಿ 1.63 ಲಕ್ಷ ಜನರು ಪೌರತ್ವ ತೊರೆದಿದ್ದರು. ಆದರೆ, 2022ರಲ್ಲಿ ಪೌರತ್ವ ತೊರೆದವರ ಸಂಖ್ಯೆ 2.25 ಲಕ್ಷಕ್ಕೆ ಏರಿಕೆಯಾಗಿದೆ. ಈ ಹನ್ನೆರಡು ವರ್ಷಗಳ ಪೈಕಿ 2022ರಲ್ಲೇ ಅತಿಹೆಚ್ಚು ಜನರು ಭಾರತದ ಪೌರತ್ವ ತೊರೆದಿದ್ದಾರೆ.

ಹೀಗೆ ಪೌರತ್ವ ತೊರೆದವರ ಸಂಖ್ಯೆಯಲ್ಲಿ ದಿಢೀರ್ ಆಗಿರುವ ಭಾರಿ ಏರಿಕೆಯ ಕಾರಣ ಏನು ಎಂಬುದನ್ನು ಸರ್ಕಾರ ಹೇಳಿಲ್ಲ. ಈ ಬಗ್ಗೆ ಯಾವುದೇ ಅಧ್ಯಯನ ಸಂಸ್ಥೆಯೂ ಅಧ್ಯಯನ ನಡೆಸಿಲ್ಲ. ಹೀಗಾಗಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಪೌರತ್ವ ತೊರೆದದ್ದು ಏಕೆ ಎಂಬುದರ ಮಾಹಿತಿ ಲಭ್ಯವಿಲ್ಲ. ನೌಕರಿ ಒಂದೇ ಕಾರಣವಲ್ಲದೆ, ಹೂಡಿಕೆ ಕಾರಣಕ್ಕೆ ಸಿರಿವಂತರೂ ದೇಶ ತೊರೆಯುತ್ತಿದ್ದಾರೆ ಎಂದು ದತ್ತಾಂಶಗಳು ಹೇಳುತ್ತವೆ.

ಭಾರತೀಯರು ಹೀಗೆ ಪೌರತ್ವ ತೊರೆಯುವುದು, ಅವರಿಂದ ಭಾರತಕ್ಕೆ ಬರುತ್ತಿರುವ ಆದಾಯ ಖೋತಾ ಆಗುವುದನ್ನು ಸೂಚಿಸುತ್ತದೆ. ಇಂತಹ ವಲಸೆಯು ಆರ್ಥಿಕ ಕಾರಣಗಳಿಗೇ ಆಗುವ ಕಾರಣಕ್ಕೆ ದೇಶದ ಆರ್ಥಿಕ ಸ್ಥಿತಿಯನ್ನು ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ, ಸ್ವಲ್ಪ ಮಟ್ಟಿಗಾದರೂ ಇದು ಬಾಧಿಸುತ್ತದೆ. ಇದು ದೇಶದ ವಿದೇಶಿ ವಿನಿಮಯದ ಮೊತ್ತ ಕುಸಿತಕ್ಕೆ ಕಾರಣವಾಗುತ್ತದೆ. ಭಾರತದಲ್ಲಿನ ಸಂಪತ್ತಿನ ತೆರಿಗೆ ಮತ್ತು ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಿರಿವಂತರು, ಇಲ್ಲಿನ ಪೌರತ್ವ ತೊರೆಯುವುದು ದೇಶದ ತೆರಿಗೆ ಆದಾಯವನ್ನು ನೇರವಾಗಿ ಬಾಧಿಸುತ್ತದೆ. ಈ ಜನರಿಂದ ಬರುತ್ತಿದ್ದ ಸಂಪತ್ತಿನ ತೆರಿಗೆ, ಹೂಡಿಕೆ ಮೇಲಿನ ತೆರಿಗೆ ಮತ್ತು ಆದಾಯ ತೆರಿಗೆ ಖೋತಾ ಆಗುತ್ತದೆ. ಒಟ್ಟಾರೆಯಾಗಿ ದೇಶದ ಆರ್ಥಿಕ ಬೆಳವಣಿಗೆಯನ್ನು ಇದು ತುಸು ನಿಧಾನಗೊಳಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಭಾರತದ ಪೌರತ್ವ ತ್ಯಜಿಸಿದವರು ಯಾವ ದೇಶಗಳ ಪೌರತ್ವ ಪಡೆದರು ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌ –ಪ್ರಜಾವಾಣಿ ಗ್ರಾಫಿಕ್ಸ್‌
ಭಾರತದ ಪೌರತ್ವ ತ್ಯಜಿಸಿದವರು ಯಾವ ದೇಶಗಳ ಪೌರತ್ವ ಪಡೆದರು ಎಂಬುದನ್ನು ವಿವರಿಸುವ ಗ್ರಾಫಿಕ್ಸ್‌ –ಪ್ರಜಾವಾಣಿ ಗ್ರಾಫಿಕ್ಸ್‌

ಸಿರಿವಂತರ ವಲಸೆ

ಭಾರತದ ಪೌರತ್ವ ತೊರೆಯುತ್ತಿರುವವರಲ್ಲಿ ಸಿರಿವಂತರ ಸಂಖ್ಯೆಯೂ ದೊಡ್ಡದಿದೆ ಎನ್ನುತ್ತದೆ ಹೆನ್ಲಿ ಅಂಡ್‌ ಪಾರ್ಟ್‌ನರ್‌ನ ಗ್ಲೋಬಲ್‌ ಇನ್ವೆಸ್ಟ್‌ಮೆಂಟ್‌ ಮೈಗ್ರೇಷನ್‌ ವರದಿ. ಜಾಗತಿಕ ಮಾನದಂಡಗಳ ಪ್ರಕಾರ ಕನಿಷ್ಠ 10 ಲಕ್ಷ ಅಮೆರಿಕ ಡಾಲರ್‌ (ಅಂದಾಜು ₹8.20 ಕೋಟಿ) ಮೌಲ್ಯದ ಆಸ್ತಿ ಹೊಂದಿರುವವರನ್ನು ಸಿರಿವಂತರು ಎಂದು ಕರೆಯಲಾಗುತ್ತದೆ. ಇವರನ್ನು ಹೈವೆಲ್ತ್‌ ಇಂಡಿವಿಜುಯಲ್ಸ್‌ ಎಂದು ಗುರುತಿಸಲಾಗುತ್ತದೆ. ಈ ವರದಿಯ ಪ್ರಕಾರ 2022ರಲ್ಲಿ ಅಂದಾಜು 8,000 ಸಿರಿವಂತರು ಭಾರತದ ಪೌರತ್ವ ತೊರೆದಿದ್ದಾರೆ. ಈ ಸಿರಿವಂತರು ವಿದೇಶಗಳಲ್ಲಿ ಹೂಡಿಕೆ ಮಾಡುವ ಮೂಲಕ ಉದ್ದಿಮೆ ವಿಸ್ತರಿಸಲು ಮತ್ತು ತೆರಿಗೆ ವಿನಾಯಿತಿ ಪಡೆಯಲು ಭಾರತದ ಪೌರತ್ವ ತೊರೆದಿದ್ದಾರೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

2021ರಲ್ಲಿ ಚೀನಾದ ಹತ್ತು ಸಾವಿರಕ್ಕೂ ಹೆಚ್ಚು ಜನರು ಅಲ್ಲಿನ ಪೌರತ್ವ ತೊರೆದು, ವಿದೇಶಗಳ ಪೌರತ್ವ ಪಡೆದಿದ್ದರು. ಆ ವರ್ಷದಲ್ಲಿ ಭಾರತದ ಏಳು ಸಾವಿರಕ್ಕೂ ಹೆಚ್ಚು ಮಂದಿ ಸಿರಿವಂತರು ಭಾರತದ ಪೌರತ್ವ ತೊರೆದಿದ್ದರು. 2021ರಲ್ಲಿ ಅತಿ ಹೆಚ್ಚು ಸಿರಿವಂತರು ಹೊರಹೋದ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿತ್ತು. ರಷ್ಯಾ (5,800) ಮೂರನೇ ಸ್ಥಾನದಲ್ಲಿತ್ತು. ಆದರೆ, ಹೆನ್ಲಿ ಅಂಡ್‌ ಪಾರ್ಟ್‌ನರ್‌ ವರದಿಯ ಪ್ರಕಾರ ಅತಿಹೆಚ್ಚು ಸಿರಿವಂತರು ಹೊರಹೋದ ದೇಶಗಳಲ್ಲಿ ರಷ್ಯಾ (15,000+) ಮೊದಲ ಸ್ಥಾನದಲ್ಲಿದೆ. ಚೀನಾ (10,000+) ಎರಡನೇ ಸ್ಥಾನ ಮತ್ತು ಭಾರತವು (8,000+) ಮೂರನೇ ಸ್ಥಾನಕ್ಕೆ ಬಂದಿವೆ.

ಭಾರತದ ಸಿರಿವಂತರು ಭಾರತದ ಪೌರತ್ವವನ್ನು ಏಕೆ ತೊರೆಯುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ವಿಶ್ಲೇಷಿಸಲಾಗಿದೆ. ವಿಶ್ವದ ಹಲವಾರು ದೇಶಗಳು ವಿದೇಶಿ ವೈಯಕ್ತಿಕ ಹೂಡಿಕೆಗೆ ಅವಕಾಶ ನೀಡುತ್ತಿವೆ. ಚೀನಾ ಮತ್ತು ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ದರ ಇಳಿಕೆಯಾಗಿದೆ. ಹೀಗಾಗಿ ಸಿರಿವಂತರು ಹೂಡಿಕೆ ಮತ್ತು ಗಳಿಕೆಗಾಗಿ ವಿದೇಶಗಳತ್ತ ನೋಡುತ್ತಿದ್ದಾರೆ. ಭಾರತದಲ್ಲಿ ಪ್ರತಿ ವರ್ಷ ಏಳು ಸಾವಿರದಷ್ಟು ಸಿರಿವಂತರು ಪೌರತ್ವ ತೊರೆಯುತ್ತಿದ್ದರೂ, ಭಾರತಕ್ಕೆ ಇದರಿಂದ ದೊಡ್ಡ ನಷ್ಟವೇನೂ ಇಲ್ಲ. ಏಕೆಂದರೆ ಇದಕ್ಕಿಂತಲೂ ದುಪ್ಪಟ್ಟು ಸಂಖ್ಯೆಯ ಸಿರಿವಂತರು ಪ್ರತಿ ವರ್ಷ ಭಾರತದಲ್ಲಿ ಹುಟ್ಟಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ದೇಶದಲ್ಲಿನ ಔದ್ಯಮಿಕ ವಾತಾವರಣ, ಕಾನೂನುಗಳು, ಹೂಡಿಕೆ ನಿಯಮಗಳು, ಪರಿಸರ ಸ್ಥಿತಿಗತಿಯಲ್ಲಿನ ಏರುಪೇರುಗಳು ಸಿರಿವಂತರ ವಲಸೆಯ ಚಾಲಕಶಕ್ತಿಗಳಾಗಿವೆ. ಈ ಹಿಂದಿನ ವರ್ಷಗಳಲ್ಲಿ ಸಿರಿವಂತರು ಹೂಡಿಕೆ ಕಾರಣಕ್ಕೆ ತಮ್ಮ ದೇಶಗಳ ಪೌರತ್ವ ತೊರೆಯುತ್ತಿದ್ದರು. ಆದರೆ, ಈಚಿನ ವರ್ಷಗಳಲ್ಲಿ ಅಂತಹ ಸಿರಿವಂತರು ತಮ್ಮ ಕುಟುಂಬದವರನ್ನೂ ವಿದೇಶಗಳಿಗೆ ಕರೆದೊಯ್ಯುತ್ತಿದ್ದಾರೆ. ವಿಶ್ವದ ಹಲವಾರು ದೇಶಗಳು ಹೂಡಿಕೆಗೆ ಬದಲಾಗಿ ಪೌರತ್ವ ಮತ್ತು ತೆರಿಗೆ ವಿನಾಯಿತಿಯನ್ನು ನೀಡುತ್ತಿವೆ. ತೆರಿಗೆ ವಿನಾಯಿತಿ ದೊರೆಯುವ ಒಂದೇ ಕಾರಣದಿಂದಲೂ ಸಿರಿವಂತರು, ತಮ್ಮ ದೇಶದ ಪೌರತ್ವ ತೊರೆದು ಬೇರೆ ದೇಶಗಳ ಪೌರತ್ವ ಪಡೆಯುತ್ತಿದ್ದಾರೆ. ಭಾರತದಲ್ಲಿ ಸಂಪತ್ತಿನ ಮೇಲಿನ ತೆರಿಗೆ ಮತ್ತು ಆದಾಯ ತೆರಿಗೆ ಹೆಚ್ಚಿನ ಪ್ರಮಾಣದಲ್ಲಿದೆ. ಸಿರಿವಂತರು ವಲಸೆ ಹೋಗುತ್ತಿರುವ ದೇಶಗಳಲ್ಲಿ ಈ ಎರಡೂ ರೀತಿಯ ತೆರಿಗೆ ದರ ಭಾರಿ ಕಡಿಮೆ ಇದೆ. ಹೀಗಾಗಿಯೇ ಸಿರಿವಂತರನ್ನು ಈ ದೇಶಗಳು ಆಕರ್ಷಿಸುತ್ತಿವೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆಯಲ್ಲಿನ ಏರಿಕೆಯನ್ನು ವಿವರಿಸುವ ಗ್ರಾಫಿಕ್ಸ್‌ –ಪ್ರಜಾವಾಣಿ ಗ್ರಾಫಿಕ್ಸ್‌
ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆಯಲ್ಲಿನ ಏರಿಕೆಯನ್ನು ವಿವರಿಸುವ ಗ್ರಾಫಿಕ್ಸ್‌ –ಪ್ರಜಾವಾಣಿ ಗ್ರಾಫಿಕ್ಸ್‌

2021: ಪೌರತ್ವ ತ್ಯಜಿಸಿದವರು ಎಲ್ಲಿಗೆ ಹೋದರು

ಭಾರತದ ಪೌರತ್ವವನ್ನು ತೊರೆದು ವಿದೇಶಗಳಲ್ಲಿ ನೆಲೆಸುವವರ ಸಂಖ್ಯೆ ಹಾಗೂ ಅವರು ವಾಸಿಸಲು ಇಚ್ಛಿಸುವ ದೇಶಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ವಿದೇಶಾಂಗ ಇಲಾಖೆಯ ದತ್ತಾಂಶಗಳು ತಿಳಿಸುತ್ತವೆ. ಕೋವಿಡ್ ಬಾಧಿಸಿದ್ದ 2020ರ ಒಂದು ವರ್ಷದಲ್ಲಿ ಈ ಪ್ರಮಾಣ ಇಳಿಕೆಯಾಗಿದ್ದನ್ನು ಹೊರತುಪಡಿಸಿದರೆ, ಹೆಚ್ಚಳ ಪ್ರವೃತ್ತಿ ಮುಂದುವರಿದಿದೆ.

ಪೌರತ್ವ ತೊರೆದು ಹೋಗುವ ಭಾರತೀಯರ ನೆಚ್ಚಿನ ದೇಶ ಅಮೆರಿಕ. 2021ರಲ್ಲಿ ದಾಖಲೆಯ 55,559 ಭಾರತೀಯರು ಅಮೆರಿಕಕ್ಕೆ ಕಾಯಂ ಆಗಿ ಸ್ಥಳಾಂತರಗೊಂಡಿದ್ದಾರೆ.

ಅಮೆರಿಕ ಹೊರತುಪಡಿಸಿದರೆ, ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳೂ ಭಾರತೀಯರ ನೆಚ್ಚಿನ ತಾಣಗಳಾಗಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. 2021ರಲ್ಲಿ 14,416 ಭಾರತೀಯರು ಪೌರತ್ವವನ್ನು ತ್ಯಜಿಸಿ ಆಸ್ಟ್ರೇಲಿಯಾ ವಾಸಿಗಳಾಗಿದ್ದಾರೆ. 11,869 ಭಾರತೀಯರು ಕೆನಡಾದಲ್ಲಿ ನೆಲೆಯೂರಿದ್ದಾರೆ. ಇನ್ನುಳಿದಂತೆ ಭಾರತೀಯರ ನೆಚ್ಚಿನ ಆಯ್ಕೆ ಐರೋಪ್ಯ ದೇಶಗಳು. ಬ್ರಿಟನ್ ಮತ್ತು ಇಟಲಿಯ ಪೌರತ್ವ ಪಡೆದ ಭಾರತೀಯರ ಸಂಖ್ಯೆ ಕ್ರಮವಾಗಿ 9,299 ಮತ್ತು 4,871.

2021ರವರೆಗೆ 106 ದೇಶಗಳಿಗೆ ಭಾರತೀಯರು ವಲಸೆ ಹೋಗಿದ್ದರು. ಆದರೆ 2021ರಲ್ಲಿ, ಭವಿಷ್ಯದ ಕಾಯಂ ನೆಲೆಯನ್ನಾಗಿ ಆಯ್ಕೆ ಮಾಡಿಕೊಂಡ ದೇಶಗಳ ಸಂಖ್ಯೆ 135ಕ್ಕೆ ವಿಸ್ತರಿಸಿದೆ. ಸಾಂಪ್ರದಾಯಿಕವಾಗಿ ವಲಸೆ ಹೋಗುತ್ತಿದ್ದ ದೇಶಗಳ ಜೊತೆಗೆ ಇನ್ನಷ್ಟು ದೇಶಗಳು ಪ್ರತೀ ವರ್ಷ ಸೇರ್ಪಡೆಯಾಗುತ್ತಿವೆ.

ಈ ಕಾರಣಕ್ಕೆ, ಅಮೆರಿಕ ಒಳಗೊಂಡಂತೆ ವಾಡಿಕೆಯ ಹಲವು ದೇಶಗಳಿಗೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಉದಾಹರಣೆಗೆ, 2017ರಲ್ಲಿ 19,335 ಜನ ಭಾರತದ ಪೌರತ್ವ ತ್ಯಜಿಸಿ ಬ್ರಿಟನ್‌ಗೆ ಹೋಗಿದ್ದರು. ಇವರ ಸಂಖ್ಯೆ 2021ರಲ್ಲಿ 10 ಸಾವಿರದಷ್ಟು ಕಡಿಮೆಯಾಗಿದೆ. ಕೆನಡಾ, ಇಟಲಿ ಮೊದಲಾದ ದೇಶಗಳ ವಿಚಾರದಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ.

ಆಧಾರ: ರಾಜ್ಯಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಉತ್ತರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆಗಳು, ಹೆನ್ಲಿ ಅಂಡ್‌ ಪಾರ್ಟ್‌ನರ್‌ನ ‘ಗ್ಲೋಬಲ್‌ ಇನ್ವೆಸ್ಟ್‌ಮೆಂಟ್‌ ಮೈಗ್ರೇಷನ್‌–2022’ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT