ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ-ಅಗಲ: 370ನೇ ವಿಧಿ, ಜಮ್ಮು–ಕಾಶ್ಮೀರ ಪ್ರತ್ಯೇಕ ಸಂವಿಧಾನ
ಆಳ-ಅಗಲ: 370ನೇ ವಿಧಿ, ಜಮ್ಮು–ಕಾಶ್ಮೀರ ಪ್ರತ್ಯೇಕ ಸಂವಿಧಾನ
Published 4 ಆಗಸ್ಟ್ 2023, 0:29 IST
Last Updated 4 ಆಗಸ್ಟ್ 2023, 0:29 IST
ಅಕ್ಷರ ಗಾತ್ರ

ಜಯಸಿಂಹ ಆರ್./ಸುಕೃತ ಎಸ್‌.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ. 370ನೇ ವಿಧಿಯ ಅಡಿಯಲ್ಲಿ ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರವು 2019ರ ಆಗಸ್ಟ್‌ 6ರಂದು ಎರಡು ‘ಸಂವಿಧಾನ ಆದೇಶ’ಗಳನ್ನು ಹೊರಡಿಸುವ ಮೂಲಕ ವಾಪಸ್‌ ಪಡೆದಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು, ನಾಲ್ಕು ವರ್ಷಗಳ ನಂತರ ವಿಚಾರಣೆಗೆ ಎತ್ತಿಕೊಳ್ಳಲಾಗಿದೆ. 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಕೇಂದ್ರ ಸರ್ಕಾರ ಹೇಗೆ ವಾಪಸ್‌ ಪಡೆಯಿತು ಎಂಬುದರ ಚರ್ಚೆಯನ್ನು ಹುಟ್ಟುಹಾಕಿದೆ.

ಅರ್ಜಿದಾರರ ಪರ ವಕಾಲತ್ತು ವಹಿಸಿಕೊಂಡಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ‘ಜಮ್ಮು–ಕಾಶ್ಮೀರದ ಸಂವಿಧಾನ ರಚನಾ ಸಮಿತಿಯ ಶಿಫಾರಸಿನ ಆಧಾರದಲ್ಲಿಯೇ ರಾಷ್ಟ್ರಪತಿಯು 370ನೇ ವಿಧಿಯ ಅಡಿಯಲ್ಲಿ ನೀಡಿದ ಸ್ಥಾನಮಾನವನ್ನು ನಿಷ್ಕ್ರಿಯ ಮಾಡಬಹುದು ಎಂದು ಸಂವಿಧಾನವು ಹೇಳುತ್ತದೆ. ಈಗ ಜಮ್ಮು–ಕಾಶ್ಮೀರದ ಸಂವಿಧಾನ ರಚನಾ ಸಮಿತಿಯೇ ಇಲ್ಲದಿದ್ದ ಮೇಲೆ, ಯಾವ ಆಧಾರದಲ್ಲಿ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ? ಈ ಕ್ರಮ ಸಂಪೂರ್ಣ ಅಸಾಂವಿಧಾನಿಕ’ ಎಂದು ಸಿಬಲ್‌ ಸುಪ್ರೀಂ ಕೋರ್ಟ್‌ನ ಸಂವಿಧಾನದ ಪೀಠದ ಎದುರು ಪ್ರತಿಪಾದಿಸಿದ್ದಾರೆ.

ಸಂವಿಧಾನದ 370ನೇ ವಿಧಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತದೆ ಎಂದಷ್ಟೇ ಹೇಳಿದರೆ, ಆ ವಿಶೇಷ ಸ್ಥಾನದ ವ್ಯಾಪ್ತಿ ಅರ್ಥವಾಗುವುದಿಲ್ಲ. ಜಮ್ಮು–ಕಾಶ್ಮೀರವು ತನ್ನದೇ ಪ್ರತ್ಯೇಕ ಸಂವಿಧಾನ ರಚಿಸಿಕೊಳ್ಳುವ, ತನ್ನದೇ ಪ್ರತ್ಯೇಕ ಕಾಯ್ದೆ–ಕಾನೂನುಗಳನ್ನು ರೂಪಿಸಿಕೊಳ್ಳುವ ಅಧಿಕಾರವನ್ನು ಈ ವಿಧಿ ಆ ರಾಜ್ಯಕ್ಕೆ ನೀಡಿತ್ತು. ಆ ಪ್ರಕಾರ ಜಮ್ಮು–ಕಾಶ್ಮೀರ ತನ್ನದೇ ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಂಡಿತ್ತು. ಜಮ್ಮು–ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಚಿಸಿಕೊಳ್ಳುವ ಅಧಿಕಾರ ನೀಡುವ ಬಗ್ಗೆ ಸಂವಿಧಾನ ರಚನಾ ಸಭೆಯಲ್ಲಿ (1949ರ ಅಕ್ಟೋಬರ್ 17) ಆಕ್ಷೇಪ ವ್ಯಕ್ತವಾಗಿತ್ತು. ಆ ಅಧಿಕಾರವನ್ನು ಏಕೆ ನೀಡಲಾಗಿದೆ ಎಂಬುದನ್ನು ಸಂವಿಧಾನ ಕರಡು ರಚನಾ ಸಭೆಯ ಸದಸ್ಯರು ವಿವರಿಸಿದ ನಂತರ, ಆಕ್ಷೇಪವನ್ನು ಬದಿಗೊತ್ತಲಾಯಿತು ಮತ್ತು ಸಂವಿಧಾನಕ್ಕೆ 370ನೇ ವಿಧಿಯನ್ನು ಸೇರಿಸಿಕೊಳ್ಳಲಾಗಿತ್ತು.

ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಕೂಡಲೇ ದೇಶದ ಎಲ್ಲಾ 500 ಸಂಸ್ಥಾನಗಳು ಭಾರತ ಒಕ್ಕೂಟವನ್ನು ಸೇರಿರಲಿಲ್ಲ. ಹಾಗೆ ಹೊರಗೆ ಉಳಿದಿದ್ದ ಸಂಸ್ಥಾನಗಳಲ್ಲಿ ಜಮ್ಮು–ಕಾಶ್ಮೀರ ಸಹ ಒಂದು. ಆದರೆ ಪಾಕಿಸ್ತಾನದ ಅತಿಕ್ರಮಣದ ನಂತರ 1948ರ ಮಾರ್ಚ್‌ನಲ್ಲಿ ಜಮ್ಮು–ಕಾಶ್ಮೀರವನ್ನು ಭಾರತದೊಂದಿಗೆ ವಿಲೀನ ಮಾಡಲು ಅಲ್ಲಿನ ರಾಜ ಹರಿಸಿಂಗ್ ಒಪ್ಪಿಕೊಂಡು ಸಹಿ ಮಾಡಿದ್ದರು. ಜಮ್ಮು–ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನ ನೀಡುವ, ವಿಶೇಷ ಅಧಿಕಾರ ನೀಡುವ, ಹಲವಾರು ವಿಷಯಗಳಲ್ಲಿ ಪ್ರತ್ಯೇಕ ಕಾನೂನು ರಚಿಸಿಕೊಳ್ಳುವ ಅಧಿಕಾರವನ್ನು ನೀಡಬೇಕು ಎಂಬ ಷರತ್ತುಗಳಿದ್ದ ಒಪ್ಪಂದಕ್ಕೆ ಭಾರತ ಸರ್ಕಾರವೂ ಸಹಿ ಮಾಡಿತ್ತು. ಈ ಷರತ್ತುಗಳನ್ನೇ ಸಂವಿಧಾನದ 370ನೇ ವಿಧಿಯಲ್ಲಿ ಸೇರಿಸಲಾಗಿತ್ತು.

ಭಾರತವು ಸಂವಿಧಾನವನ್ನು ಅಂಗೀಕರಿಸಿಕೊಂಡ ನಂತರ, ಪ್ರತ್ಯೇಕ ಸಂವಿಧಾನವನ್ನು ರಚಿಸಿಕೊಳ್ಳುವ ಅಧಿಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ದತ್ತವಾಯಿತು. ಈ ಪ್ರಕಾರ ಚುನಾವಣೆ ನಡೆದು, ಆಯ್ಕೆಯಾದ 75 ಸದಸ್ಯರ ಜಮ್ಮು–ಕಾಶ್ಮೀರ ಸಂವಿಧಾನ ರಚನಾ ಸಭೆಯು 1951ರ ಸೆಪ್ಟೆಂಬರ್‌ನಲ್ಲಿ ರಚನೆಯಾಯಿತು. ಐದು ವರ್ಷಗಳ ಅವಧಿಯಲ್ಲಿ ಒಟ್ಟು 56 ಕಲಾಪಗಳನ್ನು ಸಂವಿಧಾನ ರಚನಾ ಸಭೆ ನಡೆಸಿತ್ತು. ಆನಂತರ 1956ರ ನವೆಂಬರ್ 17ರಂದು ಜಮ್ಮು ಮತ್ತು ಕಾಶ್ಮೀರದ ಸಂವಿಧಾನವನ್ನು ಅಂಗೀಕರಿಸಲಾಗಿತ್ತು. ‘ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತ ಒಕ್ಕೂಟದ ಅವಿಭಾಜ್ಯ ಅಂಗ’ ಎಂದು ಆ ಸಂವಿಧಾನದಲ್ಲಿ ಘೋಷಿಸಲಾಗಿತ್ತು. ಸಂವಿಧಾನ ರಚನೆಯ ಕಾರ್ಯ ಮುಗಿದ ಕಾರಣ, ಜಮ್ಮು–ಕಾಶ್ಮೀರ ಸಂವಿಧಾನ ರಚನಾ ಸಭೆಯನ್ನು 1957ರಲ್ಲಿ ಬರ್ಖಾಸ್ತು ಮಾಡಲಾಗಿತ್ತು.

ಸಂವಿಧಾನ ಸಭೆಗಷ್ಟೇ ಶಿಫಾರಸು ಅಧಿಕಾರ

‘ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ವಿಶೇಷ ಸ್ಥಾನವು ತಾತ್ಕಾಲಿಕವಾದುದು’ ಎಂದು 370ನೇ ವಿಧಿಯಲ್ಲಿ ಹೇಳಲಾಗಿದೆ. ಆದರೆ, ಅದನ್ನು ತೆಗೆದುಹಾಕಬೇಕು ಎಂದು ಹೇಳುವ ಅಧಿಕಾರ ಜಮ್ಮು–ಕಾಶ್ಮೀರ ಸಂವಿಧಾನ ರಚನಾ ಸಮಿತಿಗಷ್ಟೇ ಇದೆ ಎಂದು ಈ ವಿಧಿ ಹೇಳುತ್ತದೆ. 

370ನೇ ವಿಧಿ ಮತ್ತು ಅದರ ಅಡಿಯಲ್ಲಿ ಕೊಡಲಾಗಿರುವ ಅಧಿಕಾರಗಳನ್ನು ಸಂಪೂರ್ಣವಾಗಿ ಅಥವಾ ಭಾಗಶಃ ನಿಷ್ಕ್ರಿಯ ಗೊಳಿಸುವ ಅಧಿಕಾರವನ್ನು ರಾಷ್ಟ್ರಪತಿಗೆ 370(3)ನೇ ವಿಧಿ ನೀಡುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನಾ ಸಮಿತಿಯ ಶಿಫಾರಸಿನ ನಂತರವಷ್ಟೇ 370ನೇ ವಿಧಿಯನ್ನು ರಾಷ್ಟ್ರಪತಿಯು ನಿಷ್ಕ್ರಿಯಗೊಳಿಸಬಹುದು ಎಂದು ಅದೇ ವಿಧಿಯಲ್ಲಿ ವಿವರಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು 1957ರ ಸೆಪ್ಟೆಂಬರ್‌ನಲ್ಲಿಯೇ ಬರ್ಖಾಸ್ತು ಆಗಿದೆ. ವಿಶೇಷ ಸ್ಥಾನವನ್ನು ತೆಗೆದುಹಾಕಿ ಎಂದು ಶಿಫಾರಸು ಮಾಡಲು ಸಂವಿಧಾನ ರಚನಾ ಸಮಿತಿಯೇ ಇಲ್ಲದ ಕಾರಣ, ತಾತ್ಕಾಲಿಕ ಸ್ವರೂಪದ ವಿಶೇಷ ಸ್ಥಾನವು ಶಾಶ್ವತ ಕಾನೂನಾಗಿದೆ. ಇದನ್ನು ಭಾರತದ ಸಂಸತ್ತು ತೆಗೆದುಹಾಕಲು ಬರುವುದಿಲ್ಲ ಎಂಬುದು ಅರ್ಜಿದಾರರ ವಾದ.

ಬೇರೆ ರಾಜ್ಯಗಳಿಗೂ ಇದೆ ವಿಶೇಷ ಸ್ಥಾನ

ಸಂವಿಧಾನದ 371ನೇ ವಿಧಿ ಮತ್ತು ಉಪವಿಧಿಗಳಲ್ಲಿ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡಾ, ಗುಜರಾತ್‌ನ ಕಛ್ ಮತ್ತು ಸೌರಾಷ್ಟ್ರ (371), ನಾಗಾಲ್ಯಾಂಡ್‌ (371ಎ), ಅಸ್ಸಾಂ (371ಬಿ), ಮಣಿಪುರ (371ಸಿ), ಆಂಧ್ರ ಪ್ರದೇಶ ಅಥವಾ ತೆಲಂಗಾಣ (371ಡಿ), //ಧ್ರ ಪ್ರದೇಶದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ (371ಇ)// ಸಿಕ್ಕಿಂ (371ಎಫ್‌), ಮಿಜೋರಾಂ (371ಜಿ), ಅರುಣಾಚಲ ಪ್ರದೇಶ (371ಎಚ್‌), ಗೋವಾ (371ಐ), ಕರ್ನಾಟಕದ ಹೈದರಾಬಾದ್‌–ಕರ್ನಾಟಕ ಪ್ರದೇಶ (371ಜೆ) – ಈ ಎಲ್ಲಾ ಪ್ರದೇಶಗಳಿಗೆ ಈ ಎಲ್ಲಾ ವಿಧಿ–ಉಪವಿಧಿಗಳ ಅನ್ವಯ ಆಯಾ ರಾಜ್ಯಗಳ ಹುಟ್ಟು, ಅವಶ್ಯಕತೆಗೆ ಅನುಗುಣವಾಗಿ ವಿಶೇಷ ಅವಕಾಶ, ಸ್ಥಾನಮಾನಗಳನ್ನು ನೀಡಲಾಗಿದೆ.

ಭಾರತದ ಈಶಾನ್ಯ ದಿಕ್ಕಿನಲ್ಲಿರುವ ರಾಜ್ಯಗಳಾದ ಅಸ್ಸಾಂ, ಮಣಿಪುರ, ಮಿಜೋರಾಂಗಳ ಆಯ್ದ ಪ್ರದೇಶಗಳಿಗೆ ಈ ವಿಧಿಗಳ ಮೂಲಕ ಸ್ವಾಯತ್ತೆ ನೀಡಲಾಗಿದೆ. ಈ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಿರುವ ಕಾರಣ ಈ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಈ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳು ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಚುನಾಯಿತರು ಹಾಗೂ ಕೆಲವು ಸದಸ್ಯರನ್ನು ಒಳಗೊಂಡ ಮಂಡಳಿಗಳನ್ನು ರಚಿಸಿಕೊಳ್ಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಈ ಮಂಡಳಿಗಳು, ಈ ಪ್ರದೇಶಗಳ ಆಡಳಿತವು ನೇರವಾಗಿ ಆಯಾ ರಾಜ್ಯಗಳ ರಾಜ್ಯಪಾಲರಿಗೆ ಸಂಬಂಧಿಸಿದವಾಗಿರುತ್ತವೆ. ಈ ರಾಜ್ಯಗಳ ಸಂಬಂಧ ಅಲ್ಲಿನ ಸರ್ಕಾರ ಯಾವುದೇ ಕಾನೂನು ಅಥವಾ ತೀರ್ಮಾನ ತೆಗೆದುಕೊಳ್ಳಬೇಕಿದ್ದರೂ ಈ ಮಂಡಳಿಗಳೊಂದಿಗೆ ಚರ್ಚಿಸಿ, ಒಪ್ಪಿಗೆ ಪಡೆದುಕೊಂಡ ನಂತರವಷ್ಟೇ ಜಾರಿ ಮಾಡಬೇಕಾಗುತ್ತವೆ.

ನಾಗಾಲ್ಯಾಂಡ್‌ ಹಾಗೂ ಮಿಜೋರಾಂಗಳಲ್ಲಿರುವ ಬುಡಕಟ್ಟು ಸಮುದಾಯಗಳ ಧಾರ್ಮಿಕ ಸಾಮಾಜಿಕ, ಅಲ್ಲಿನ ಸಾಂಪ್ರದಾಯಿಕ ಕಾನೂನುಗಳಿಗೆ ದೇಶದ ಇತರೆ ಕಡೆಗಳಲ್ಲಿ ಇರುವ ಕಾನೂನುಗಳು ಅನ್ವಯವಾಗುವುದಿಲ್ಲ. ಇಂಥ ವಿಷಯಗಳಲ್ಲಿ ಕೇಂದ್ರ ಸರ್ಕಾರವು ಯಾವುದೇ ಬದಲಾವಣೆಗಳನ್ನು ಮಾಡಬೇಕೆಂದಿದ್ದರೆ, ಅಲ್ಲಿನ ಶಾಸನಸಭೆಯು ಒಪ್ಪಿಗೆ ನೀಡಬೇಕಿದೆ.

ಸಂವಿಧಾನ ರಚನಾ ಸಭೆಯಲ್ಲೂ ಚರ್ಚೆ

1949 ಅಕ್ಟೋಬರ್‌ 17ರಂದು ಸಂವಿಧಾನ ಕರಡು ರಚನಾ ಸಭೆಯಲ್ಲಿ 306ಎ (ಈಗ 370ನೇ ವಿಧಿ) ವಿಧಿಯ ಕುರಿತು ಚರ್ಚೆ ನಡೆದಿತ್ತು. ಎನ್‌.ಗೋಪಾಲಸ್ವಾಮಿ ಅಯ್ಯಂಗಾರ್‌ ಅವರು ಸಭೆಯಲ್ಲಿ ಈ ವಿಧಿಯನ್ನು ಮಂಡಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಮೌಲಾನಾ ಹಝ್ರತ್‌ ಮೋಹನಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಯಾಕಾಗಿ ಇಂಥ ತಾರತಮ್ಯ ಮಾಡಲಾಗುತ್ತಿದೆ’ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಗೋಪಾಲಸ್ವಾಮಿ ಅಯ್ಯಂಗಾರ್‌ ಅವರು ವಿಸ್ತೃತವಾಗಿಯೇ ಉತ್ತರ ನೀಡಿದ್ದರು. ಆ ಉತ್ತರದ ಸಂಕ್ಷಿಪ್ತ ರೂಪವನ್ನು ಇಲ್ಲಿ ನೀಡಲಾಗಿದೆ.

‘ಕಾಶ್ಮೀರದ ಸ್ಥಿತಿಗೂ ಭಾರತದ ಇತರೆ ರಾಜ್ಯಗಳ ಸ್ಥಿತಿಗೂ ಬಹಳ ಅಂತರವಿದೆ. ಭಾರತದೊಂದಿಗೆ ಸೇರಿಕೊಳ್ಳುವುದಕ್ಕೆ ಕಾಶ್ಮೀರ ಇನ್ನೂ ಸಿದ್ಧವಾಗಿಲ್ಲ. ಆದ್ದರಿಂದ ಕಾಶ್ಮೀರದ ವಿಚಾರಗಳಿಗೆ ಸಂಬಂಧಿಸಿದಂತೆ ವಿಶೇಷವಾದ ಮುತುವರ್ಜಿ ವಹಿಸುವ ಅಗತ್ಯವಿದೆ. ಯಾಕಾಗಿ ವಿಶೇಷ ಮುತುವರ್ಜಿ ವಹಿಸಬೇಕು ಎನ್ನುವುದಕ್ಕೆ ಹಲವು ಕಾರಣಗಳಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ಇದೇ ವರ್ಷದ ಶುರುವಿನಲ್ಲಿ ಕದನ ವಿರಾಮ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅದು ಜಾರಿಯಲ್ಲಿಯೂ ಇದೆ. ಆದರೂ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿ ನಿರ್ಮಾಣವಾಗಿಲ್ಲ. ರಾಜ್ಯದ ಕೆಲವು ಭಾಗಗಳು ಇನ್ನೂವರೆಗೂ ಕೆಲವು ಬಂಡುಕೋರರ ಹಾಗೂ ಶತ್ರುಗಳ ಕೈಯಲ್ಲಿವೆ. ರಾಜ್ಯದ ಸಮಸ್ಯೆಗಳ ಪರಿಹಾರಕ್ಕಾಗಿ ವಿಶ್ವ ಸಂಸ್ಥೆಯ ಮೆಟ್ಟಿಲೇರಿಯಾಗಿದೆ. ಅದಿನ್ನೂ ಇತ್ಯರ್ಥವಾಗಿಲ್ಲ.

ಈ ಎಲ್ಲದರೊಂದಿಗೆ ಭಾರತ ಸರ್ಕಾರವು ಕಾಶ್ಮೀರದ ಜನರೊಂದಿಗೆ ಕೆಲವು ಒಪ್ಪಂದಗಳನ್ನು ಮಾಡಿಕೊಂಡಿದೆ. ಭಾರತದೊಂದಿಗೆ ಸೇರಬೇಕೇ ಬೇಡವೇ ಎಂದು ನಿರ್ಧರಿಸುವ ಹಕ್ಕನ್ನು ಕಾಶ್ಮೀರದ ಜನರಿಗೇ ನೀಡಲಾಗಿದೆ. ಜನಮತಗಣನೆಯಲ್ಲಿ ಜನರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರಬೇಕು. ಜನರ ಇಚ್ಛೆಯ ಅನುಸಾರವೇ ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ರಚನೆ ಆಗಲಿದೆ. ಜೊತೆಗೆ, ಈ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಎಷ್ಟರಮಟ್ಟಿಗೆ ಅಧಿಕಾರವಿದೆ ಎನ್ನುವುದು ಕೂಡ ಇಲ್ಲಿನ ಜನರ ಇಚ್ಛೆಯಂತಲೇ ನಡೆಯುತ್ತದೆ ಎಂಬಂಥ ಒಪ್ಪಂದನ್ನು ನಾವು ಕಾಶ್ಮೀರದ ಜನರೊಂದಿಗೆ ಮಾಡಿಕೊಂಡಿದ್ದೇವೆ. ಮತ್ತು ನಾವು ಆ ಒಪ್ಪಂದಕ್ಕೆ ಬದ್ಧರಾಗಿರಬೇಕು’ ಎಂದು ಅವರು ಉತ್ತರಿಸಿದ್ದರು

ಕೇಂದ್ರ ಸರ್ಕಾರ ಮಾಡಿದ್ದೇನು...

ಈ ವಿಧಿಯನ್ನು ನಿಷ್ಕ್ರಿಯಗೊಳಿಸಲು ಕೇಂದ್ರ ಸರ್ಕಾರವು ಕೆಲವು ‘ಸಾಂವಿಧಾನಿಕ ಆದೇಶ’ಗಳ ಮೊರೆ ಹೋಗಿದೆ. ‘370ನೇ ವಿಧಿಯಲ್ಲಿ ಇರುವ ‘ಸಂವಿಧಾನ ರಚನಾ ಸಮಿತಿ’ ಎಂಬ ಪದಗಳನ್ನು ‘ಶಾಸನ ಸಭೆ’ ಎಂದು ಓದಿಕೊಳ್ಳಬೇಕು’ ಎಂದು 2019ರ ಆಗಸ್ಟ್ 5ರಂದು ಸಾಂವಿಧಾನಿಕ ಆದೇಶವನ್ನು (ಸಂಖ್ಯೆ 272) ಹೊರಡಿಸಿದೆ.

ಆದರೆ, 2019ರ ಆಗಸ್ಟ್‌ನಲ್ಲಿ ಜಮ್ಮು–ಕಾಶ್ಮೀರದಲ್ಲಿ ವಿಧಾನಸಭೆಯೇ ಇರಲಿಲ್ಲ. ವರ್ಷದ ಹಿಂದೆಯೇ
ವಿಧಾನಸಭೆಯನ್ನು ವಿಸರ್ಜಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಹೀಗಾಗಿ ವಿಶೇಷ ಸ್ಥಾನವನ್ನು ತೆಗೆದುಹಾಕಿ ಎಂದು ಶಿಫಾರಸು ಮಾಡಲು ಶಾಸನಸಭೆಯೂ ಅಸ್ತಿತ್ವ ದಲ್ಲಿ ಇರಲಿಲ್ಲ. ಈ ತೊಡಕನ್ನು ನಿವಾರಿಸಿಕೊಳ್ಳಲು ಕೇಂದ್ರ ಸರ್ಕಾರವು ಇನ್ನೊಂದು ಸಾಂವಿಧಾನಿಕ ಆದೇಶವನ್ನು ಹೊರಡಿಸಿತು.

2019ರ ಆಗಸ್ಟ್‌ 5ರಂದೇ ಹೊರಡಿಸಿದ್ದ ಈ ಆದೇಶದಲ್ಲಿ, ‘370ನೇ ವಿಧಿಯ ಅಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಅಧಿಕಾರವನ್ನು ಸಂಸತ್ತಿನ ಶಿಫಾರಸಿನ ಆಧಾರದ ಮೇಲೆ ರಾಷ್ಟ್ರಪತಿಯು ನಿಷ್ಕ್ರಿಯಗೊಳಿಸಿದ್ದಾರೆ’ ಎಂದು ಘೋಷಿಸಿತು. 

ಈ ಮೂಲಕ ವಿಸೇಷ ಸ್ಥಾನವನ್ನು ವಾಪಸ್‌ ಪಡೆಯಿತು. ಜಮ್ಮು–ಕಾಶ್ಮೀರದ ಪ್ರತ್ಯೇಕ ಸಂವಿಧಾನ ಅನ್ವಯವಾಗುವುದಿಲ್ಲ ಎಂದು ಘೋಷಿಸಿತು. ಆದರೆ, 370ನೇ ವಿಧಿಯನ್ನು ಭಾರತ ಸಂವಿಧಾನದಲ್ಲಿ ಉಳಿಸಿಕೊಳ್ಳಲಾಯಿತು.

ಆಧಾರ: ಭಾರತ ಸಂವಿಧಾನದ 370ನೇ ವಿಧಿ, ಸಂವಿಧಾನ ಆದೇಶ 272 ಮತ್ತು 273, ಜಮ್ಮು–ಕಾಶ್ಮೀರ ಸಂವಿಧಾನ, ಸಂವಿಧಾನ ರಚನಾ ಸಭೆಯ ಚರ್ಚೆಗಳು, ಪಿಐಬಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT