ಹಮಾಸ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದ ಜರ್ಜರಿತವಾಗಿದ್ದ ಗಾಜಾ ಪಟ್ಟಿಯಲ್ಲಿ ಹೊಸ ಬೆಳಕು ಮೂಡುವ ಸಾಧ್ಯತೆಗಳು ಗೋಚರಿಸುತ್ತಿವೆ. ಅಮೆರಿಕ ಮತ್ತಿತರ ದೇಶಗಳ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಎರಡೂ ಗುಂಪುಗಳು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಗಾಜಾ ಪಟ್ಟಿಯ ಶೇ 80ರಷ್ಟು ಕಟ್ಟಡಗಳು ಹಾನಿಗೊಳಗಾಗಿದ್ದು, ಆಹಾರ, ವೈದ್ಯಕೀಯ ನೆರವು, ಶಾಂತಿಗಾಗಿ ಅಲ್ಲಿನ ಜನರು ಎದುರು ನೋಡುತ್ತಿದ್ದಾರೆ. ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿಯ ಪ್ರಮುಖ ‘ಸ್ಪರ್ಧಿ’ಯಾಗಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತ್ರ ಈ ಒಪ್ಪಂದದಲ್ಲಿ ಪ್ರಮುಖವಾಗಿದೆ