ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ:ಎಐಎಡಿಎಂಕೆ ಸತತ ಬಿಕ್ಕಟ್ಟಿನ ಅರ್ಧ ಶತಮಾನ

Last Updated 12 ಜುಲೈ 2022, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಈಗಿನ ವಿರೋಧ ಪಕ್ಷ ಎಐಎಡಿಎಂಕೆಯು ಇದೇ ಜೂನ್‌ಗೆ 50 ವರ್ಷಕ್ಕೆ ಕಾಲಿರಿಸಿದೆ. ಪಕ್ಷ ಸಂಸ್ಥಾಪನೆಯ ಚಿನ್ನದ ಹಬ್ಬ ಆಚರಿಸಬೇಕಿದ್ದ ಎಐಎಡಿಎಂಕೆಯ ನಾಯಕರು, ಪಕ್ಷದ ನಾಯಕತ್ವಕ್ಕಾಗಿ ಹಾದಿಜಗಳ–ಬೀದಿಜಗಳ ನಡೆಸುತ್ತಿದ್ದಾರೆ. ಜೆ.ಜಯಲಲಿತಾ ಅವರ ಮರಣದ ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಮಾನತಿನಲ್ಲಿ ಇರಿಸಲಾಗಿತ್ತು. ಪಕ್ಷವು ದ್ವಿನಾಯಕತ್ವ ಮಾದರಿಯನ್ನು ಅಳವಡಿಸಿಕೊಂಡಿತ್ತು. ಆ ಮಾದರಿಯ ಪ್ರಕಾರ ಒ.ಪನ್ನೀರಸೆಲ್ವಂ ಮತ್ತು ಇ.ಪಳನಿಸ್ವಾಮಿ ಪಕ್ಷದ ನಾಯಕರಾಗಿದ್ದರು. ಆದರೆ, ಪಕ್ಷಕ್ಕೆ ಏಕ ನಾಯಕತ್ವವಿರಬೇಕು ಎಂಬ ಬೇಡಿಕೆ ತೀವ್ರವಾಗಿತ್ತು. ಅದರ ಬೆನ್ನಲ್ಲೇ ಪಳನಿಸ್ವಾಮಿ ಅವರನ್ನು ಪಕ್ಷದ ನಾಯಕನಾಗಿ ನೇಮಕ ಮಾಡಲಾಗಿದೆ ಮತ್ತು ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. 50 ವರ್ಷಗಳ ಇತಿಹಾಸದಲ್ಲಿ ಪಕ್ಷವು ಈ ಸ್ವರೂಪದ ಬಿಕ್ಕಟ್ಟನ್ನು, ಬಣರಾಜಕಾರಣವನ್ನು ಮತ್ತು ವಿಭಜನೆಯನ್ನು ಹಲವು ಬಾರಿ ಎದುರಿಸಿದೆ. ಈಗ ಅಂಥದ್ದೇ ಮತ್ತೊಂದು ಬಿಕ್ಕಟ್ಟು ಸೃಷ್ಟಿಯಾಗಿದೆ

***

ವಿಭಜನೆಯಿಂದಲೇ ಸ್ಥಾಪನೆ

ಡಿಎಂಕೆಯಲ್ಲಿ ಪ್ರಮುಖ ನಾಯಕರಾಗಿದ್ದ ಎಂ.ಜಿ.ರಾಮಚಂದ್ರನ್‌ (ಎಂಜಿಆರ್‌) ಮತ್ತು ಎಂ.ಕರುಣಾನಿಧಿ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ಇತ್ತು. ಎಂ.ಕರುಣಾನಿಧಿ ಅವರ ಬಣವು ಪ್ರಬಲವಾಗಿದ್ದ ಕಾರಣ, ಎಂಜಿಆರ್‌ ಪಕ್ಷವನ್ನು ತೊರೆದರು. 1972ರಲ್ಲಿ ಎಐಎಡಿಎಂಕೆಯನ್ನು ಸ್ಥಾಪಿಸಿದರು. ಎಂಜಿಆರ್‌ ಜತೆಗೆ ಅವರ ಅನುಯಾಯಿಗಳು ಮತ್ತು ಬೆಂಬಲಿಗರು ಡಿಎಂಕೆಯನ್ನು ತೊರೆದು ಬಂದಿದ್ದರಿಂದ, ಎಐಎಡಿಎಂಕೆಯು ಆರಂಭದ ದಿನಗಳಿಂದಲೇ ಪ್ರಮುಖ ಪಕ್ಷವಾಗಿ ರೂಪುಗೊಂಡಿತು. 1977ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತು ಮತ್ತು ಎಂಜಿಆರ್‌ ಮುಖ್ಯಮಂತ್ರಿಯಾದರು. 1987ರಲ್ಲಿ ನಿಧನರಾಗುವವರೆಗೂ ಎಂಜಿಆರ್‌ ಅವರೇ ಮುಖ್ಯಮಂತ್ರಿಯಾಗಿದ್ದರು. ಸಿನಿಮಾಗಳಲ್ಲಿ ತಮ್ಮ ಜನಪ್ರಿಯ ಜೋಡಿಯಾಗಿ ನಟಿಸಿದ್ದ ತಾರೆ ಜಯಲಲಿತಾ ಅವರನ್ನೂ ಎಂಜಿಆರ್‌ ರಾಜಕಾರಣದಲ್ಲಿ ಬೆಳೆಸಿದ್ದರು. 1983ರಲ್ಲಿ ಜಯಲಲಿತಾ ಅವರನ್ನು ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಅಲ್ಲಿಯವರೆಗೆ ಎಂಜಿಆರ್‌ ನಂತರದ ಸ್ಥಾನದಲ್ಲಿ ಇದ್ದ ಬೇರೆಲ್ಲಾ ನಾಯಕರನ್ನು ಹಿಂದಿಕ್ಕಿ, ಜಯಲಲಿತಾ ಅವರು ಪಕ್ಷದಲ್ಲಿ ಹಿಡಿತ ಸಾಧಿಸಿದರು. ಎಂಜಿಆರ್‌ ನಿಧನಾನಂತರ, ಇದು ಜಯಲಲಿತಾ ಅವರಿಗೆ ಮುಳುವಾಯಿತು. ಆದರೆ ಅದು ಕೆಲಕಾಲದವರೆಗೆ ಮಾತ್ರ.

ಜಯಲಲಿತಾ–ಜಾನಕಿ ಬಣ

1987ರಲ್ಲಿ ಎಂಜಿಆರ್‌ ನಿಧನದ ನಂತರ, ಅವರ ಪತ್ನಿ ಜಾನಕಿ ಅವರು ಪಕ್ಷದ ನಾಯಕತ್ವ ತಮ್ಮದು ಎಂದು ಪ್ರತಿಪಾದಿಸಿದರು. ಅಲ್ಲಿಯವರೆಗೆ ಪಕ್ಷದ ಪ್ರಮುಖ ಮತ್ತು ಪ್ರಬಲ ನಾಯಕಿಯಾಗಿದ್ದ ಜಯಲಲಿತಾ ಅವರಿಗೆ ಅಗತ್ಯ ಬೆಂಬಲ ಸಿಗದೇ ಹೋಯಿತು. ಎಂಜಿಆರ್‌ ಅವರ ಆಪ್ತವಲಯದಲ್ಲಿ ಇದ್ದಾಗ ಜಯಲಲಿತಾ ಅವರ ರಾಜಕೀಯ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದ ನಾಯಕರೆಲ್ಲರೂ, ಎಂಜಿಆರ್‌ ನಿಧನದ ನಂತರ ಜಾನಕಿ ಅವರನ್ನು ಬೆಂಬಲಿಸಿದರು. ಹೀಗಾಗಿ 1987ರಲ್ಲಿ ಜಾನಕಿ ಅವರು ಎಐಎಡಿಎಂಕೆ ನಾಯಕಿಯಾದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿಯೂ ಆದರು.

ಜಯಲಲಿತಾ ಅವರನ್ನು ಬೆಂಬಲಿಸಿದ್ದ ನಾಯಕರದ್ದೇ ಮತ್ತೊಂದು ಬಣ ರೂಪುಗೊಂಡಿತು. ಆದರೆ 1988ರಲ್ಲಿ ಜಾನಕಿ ರಾಜಕೀಯವನ್ನು ತೊರೆದರು. ಜಾನಕಿ ಬಣದಲ್ಲಿ ಗುರುತಿಸಿಕೊಂಡಿದ್ದ ಎಐಎಡಿಎಂಕೆ ನಾಯಕರು ಮತ್ತು ಶಾಸಕರು ಜಯಲಲಿತಾ ಬಣ ಸೇರಿದರು. ಎರಡೂ ಬಣಗಳು ವಿಲೀನವಾದ ಕಾರಣ, ಪಕ್ಷವು ಮೊದಲಿನಂತೆ ಪ್ರಬಲವಾಯಿತು. 1989ರಲ್ಲಿ ಜಯಲಲಿತಾ ಎಐಎಡಿಎಂಕೆಯಿಂದ ವಿಧಾನಸಭೆಗೆ ಆರಿಸಿಬಂದರು. ವಿರೋಧ ಪಕ್ಷದ ನಾಯಕಿಯಾಗಿ ಕಾರ್ಯನಿರ್ವಹಿಸಿದ ಜಯಲಲಿತಾ ಅವರು 1991ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಮುಖ್ಯಮಂತ್ರಿ ಆದರು.

ಶಶಿಕಲಾ-ದಿನಕರನ್

ತಮಿಳುನಾಡು ರಾಜಕಾರಣದಲ್ಲಿ ಚಿನ್ನಮ್ಮ ಎಂದೇ ಪರಿಚಿತರಾದ ವಿ.ಕೆ.ಶಶಿಕಲಾ ಸಹ ಎಐಎಡಿಎಂಕೆಯ ಬಿಕ್ಕಟ್ಟಿಗೆ ಕಾರಣರಾಗಿದ್ದರು. 1980ರಿಂದ ಜಯಲಲಿತಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಶಶಿಕಲಾ ಅವರು, 1991ರ ನಂತರ ಜಯಲಲಿತಾ ಅವರ ಮನೆಯ ನಿವಾಸಿಯೇ ಆಗಿ ಹೋಗಿದ್ದರು. ಜಯಲಲಿತಾ ಅವರೊಂದಿಗೆ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇರುತ್ತಿದ್ದ ಶಶಿಕಲಾ ಅವರನ್ನು ಪಕ್ಷದ ಕಾರ್ಯಕರ್ತರು, ನಾಯಕರು ಮತ್ತು ಕಾರ್ಯಕರ್ತರು ಚಿನ್ನಮ್ಮ ಎಂದೇ ಕರೆಯುತ್ತಿದ್ದರು. ಘೋಷಿತ ಆದಾಯಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಸಂಪಾದನೆ ಮಾಡಿದ ಪ್ರಕರಣದಲ್ಲಿಜಯಲಲಿತಾ ಅವರು ಜೈಲಿನಲ್ಲಿದ್ದಾಗ ಸರ್ಕಾರವನ್ನು ಒ.ಪನ್ನೀರಸೆಲ್ವಂ ಮುನ್ನಡೆಸಿದ್ದರೂ ಪಕ್ಷವನ್ನು ಶಶಿಕಲಾ ಅವರೇ ನಿಯಂತ್ರಿಸಿದ್ದರು. ಜಯಲಲಿತಾ ಅವರ ನಿಧನಾನಂತರ ಪನ್ನೀರಸೆಲ್ವಂ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಆನಂತರ ಶಶಿಕಲಾ ಅವರೇ ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸಲಿದ್ದಾರೆ, ಮುಖ್ಯಮಂತ್ರಿ ಆಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ, ಶಶಿಕಲಾ ಅವರಿಗೆ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಅವರು ಅಧಿಕಾರದ ಗದ್ದುಗೆ ಏರುವ ಮುನ್ನವೇ, ಘೋಷಿತ ಆದಾಯಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಸಂಪಾದನೆ ಮಾಡಿದ ಪ್ರಕರಣದಲ್ಲಿ ಜೈಲಿಗೆ ಹೋಗಬೇಕಾಯಿತು. ನಂತರದ ರಾಜಕೀಯ ಸಮೀಕರಣಗಳು ಶಶಿಕಲಾ ಅವರಿಗೆ ಪೂರಕವಾಗಿ ಇರಲಿಲ್ಲ. ಶಶಿಕಲಾ ಅವರ ಸೋದರಳಿಯ ಟಿ.ಟಿ.ವಿ ದಿನಕರನ್ ಅವರೂ ಎಐಎಡಿಎಂಕೆ ನಾಯಕರ ವಿರೋಧ ಕಟ್ಟಿಕೊಂಡರು. ತಮ್ಮದೇ ಬೇರೆ ಪಕ್ಷ ಕಟ್ಟಿದರು. ಇದರ ಮಧ್ಯೆ ಎಐಎಡಿಎಂಕೆಯು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತ್ತು. 2019ರ ಲೋಕಸಭಾ ಚುನಾವಣೆ ಮತ್ತು 2021ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ಮಿತ್ರಪಕ್ಷಗಳಾಗಿದ್ದವು. 2021ರ ಚುನಾವಣೆಗೂ ಮುನ್ನ ಶಶಿಕಲಾ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು. ಅವರ ಬರುವಿಕೆಯು ಎಐಎಡಿಎಂಕೆ ಮತ್ತು ತಮಿಳುನಾಡು ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು ಮತ್ತು ರಾಜಕೀಯದಿಂದ ದೂರ ಉಳಿದರು.

ಜಾತಿ ಲೆಕ್ಕಾಚಾರ

ಎಐಎಡಿಎಂಕೆಯಲ್ಲಿ ಪನ್ನೀರಸೆಲ್ವಂ ಹಾಗೂ ಪಳನಿಸ್ವಾಮಿ ನಡುವಣ ತಿಕ್ಕಾಟಕ್ಕೆ ಕಾರಣವಾಗಿರುವ ಹಲವು ಅಂಶಗಳಲ್ಲಿ ಜಾತಿ ಸಮೀಕರಣವೂ ಒಂದು. ಉಭಯ ನಾಯಕರ ನಡುವೆ ಆಗಿದ್ದ ದ್ವಿನಾಯಕತ್ವ ಒಪ್ಪಂದ ಕೊನೆಯಾಗಲಿದೆ ಎಂಬ ಸುಳಿವು ಪನ್ನೀರಸೆಲ್ವಂ ಅವರಿಗೆ ಸಿಕ್ಕಿದ್ದು 2021ರ ತಮಿಳುನಾಡು ವಿಧಾನಸಭಾ ಚುನಾವಣೆಯ ಬಳಿಕ. ತಮಿಳುನಾಡಿನ ತೇವರ್ ಸಮುದಾಯಕ್ಕೆ ಸೇರಿದ ಪನ್ನೀರಸೆಲ್ವಂ ಅವರು ರಾಜ್ಯದ ದಕ್ಷಿಣ ಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಪಳನಿಸ್ವಾಮಿ ಅವರು ಗೌಂಡರ್ ಸಮುದಾಯಕ್ಕೆ ಸೇರಿದ್ದು, ರಾಜ್ಯದ ಪಶ್ಚಿಮ ಭಾಗದಲ್ಲಿ ಪ್ರಭಾವಿ ಎನಿಸಿದ್ದಾರೆ.

ತಮಿಳುನಾಡು ವಿಧಾನಸಭೆಗೆ ಕಳೆದಬಾರಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬೇಕಾದ ಸಂಖ್ಯಾಬಲ ಗಳಿಸಲು ಪಕ್ಷ ವಿಫಲವಾಗಿತ್ತು. ಪಳನಿಸ್ವಾಮಿ ಪ್ರಾಬಲ್ಯವಿರುವ ಪಶ್ಚಿಮ ಭಾಗದ 54 ವಿಧಾನಸಭಾ ಕ್ಷೇತ್ರಗಳಲ್ಲಿ ಎಐಎಡಿಎಂಕೆಯ 33 ಶಾಸಕರು ಆರಿಸಿಬಂದರು. ಆದರೆ ಪನ್ನೀರಸೆಲ್ವಂ ಅವರ ಪ್ರಾಬಲ್ಯವಿದ್ದ ದಕ್ಷಿಣ ಭಾಗದ 60 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ 16 ಕಡೆ ಮಾತ್ರ ಗೆದ್ದಿತು. ದ್ವಿನಾಯಕತ್ವವನ್ನು ನೆಚ್ಚಿಕೊಂಡರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರಿತ ಪಳನಿಸ್ವಾಮಿ ಅವರು ಏಕನಾಯಕತ್ವಕ್ಕೆ ಒಲವು ತೋರಿದರು. ಪನ್ನೀರಸೆಲ್ವಂ ಅವರನ್ನು ಪಕ್ಷದಿಂದ ಕೈಬಿಟ್ಟರೂ, ತೇವರ್ ಸಮುದಾಯದ ಮತಗಳನ್ನು ಸೆಳೆಯುವ ಲೆಕ್ಕಾಚಾರ ಹಾಕಿಕೊಂಡೇ ಕ್ರಮ ತೆಗೆದುಕೊಂಡಿದ್ದಾರೆ. ತೇವರ್ ಸಮುದಾಯಕ್ಕೆ ಸೇರಿದ ನಾಯಕರೊಬ್ಬರಿಗೆ ಪಕ್ಷದಲ್ಲಿ ಮಹತ್ವದ ಸ್ಥಾನಮಾನ ಕಲ್ಪಿಸಿದ್ದಾರೆ.

ಪನ್ನೀರಸೆಲ್ವಂಗೆ ಮತ್ತೆ ಮತ್ತೆ ಹಿನ್ನಡೆ

ಕೆಲವು ದಿನಗಳಿಂದ ಪನ್ನೀರಸೆಲ್ವಂ ಅವರಿಗೆ ಹಿನ್ನಡೆಯಾಗುವ ಹಲವು ವಿದ್ಯಮಾನಗಳು ನಡೆದಿವೆ.ಕೋರ್ಟ್ ಮೆಟ್ಟಿಲೇರಿದರೂ ಅವರ ವಾದಕ್ಕೆ ಬೆಲೆ ಸಿಗಲಿಲ್ಲ. ಸೋಮವಾರ ನಡೆದ ಜನರಲ್ ಕೌನ್ಸಿಲ್ ಸಭೆಯಲ್ಲಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅವರನ್ನು ನೇಮಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಪನ್ನೀರಸೆಲ್ವಂ ಅವರನ್ನು ಉಚ್ಚಾಟನೆ ಮಾಡುವಂತಹ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಶಶಿಕಲಾ ಅವರನ್ನು ಪಕ್ಷದಿಂದ ಶಾಶ್ವತವಾಗಿ ಹೊರಗಿಡಲು ಸಾಧ್ಯವಾಗುವ ನಿರ್ಣಯವೊಂದನ್ನು ತೆಗೆದುಕೊಳ್ಳಲಾಗಿದೆ. 10 ವರ್ಷ ಸತತವಾಗಿ ಪಕ್ಷದ ಸದಸ್ಯತ್ವ ಹೊಂದಿರುವವರು ಮಾತ್ರ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಬಹುದು ಎಂದು ನಿಯಮ ಬದಲಿಸಲಾಗಿದೆ. ಒಟ್ಟು 16 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಇವು ರಾಜಕೀಯವಾಗಿ ಮಹತ್ವದ್ದಾಗಿದ್ದು, ಪಳನಿಸ್ವಾಮಿ ಕೈ ಮೇಲಾಗಿರುವುದು ಸ್ಪಷ್ಟ.

2017ರಲ್ಲಿ ಶಶಿಕಲಾ ವಿರುದ್ಧ ಬಂಡಾಯ ಸಾರಿದ್ದ ಪನ್ನೀರಸೆಲ್ವಂ ಜೊತೆ ಗುರುತಿಸಿಕೊಂಡಿದ್ದವರು 11 ಶಾಸಕರು ಮಾತ್ರ. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಜೆ.ಸಿ.ಡಿ. ಪ್ರಭಾಕರನ್, ಮನೋಜ್ ಪಾಂಡ್ಯನ್‌ ಅವರಂತಹ ಕೆಲವೇ ಹಿರಿಯರು ಅವರ ಜೊತೆಗಿದ್ದಾರೆ.ಮೈತ್ರೇಯನ್ ಮೊದಲಾದವರು ಪನ್ನೀರಸೆಲ್ವಂ ಬಣವನ್ನು ತೊರೆದು ಪಳನಿಸ್ವಾಮಿ ಅವರಿಗೆ ನಿಷ್ಠೆ ತೋರಿದ್ದಾರೆ.

ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಯು ಪಳನಿಸ್ವಾಮಿ ಹಾಗೂ ಪನ್ನೀರಸೆಲ್ವಂ ನಡುವಿನ ಬಿರುಕನ್ನು ಇನ್ನಷ್ಟು ದೊಡ್ಡದಾಗಿಸಿತು. ಎರಡು ಸ್ಥಾನಗಳ ಪೈಕಿ ಒಂದನ್ನು ತಮ್ಮ ಬೆಂಬಲಿಗರಿಗೆ ನೀಡುವಂತೆ ಪನ್ನೀರಸೆಲ್ವಂ ಅವರು ಪಟ್ಟು ಹಿಡಿದಿದ್ದರು. ಇದು ಪಳನಿಸ್ವಾಮಿ ಅವರ ಅತೃಪ್ತಿಗೆ ಕಾರಣವಾಯಿತು.

ನೆಲೆ ಕಂಡುಕೊಳ್ಳಲು ಬಿಜೆಪಿ ಯತ್ನ

ತಮಿಳುನಾಡಿನಲ್ಲಿ ಬಿಜೆಪಿಗೆ ಗಟ್ಟಿ ನೆಲೆಯೇನೂ ಇಲ್ಲ. ಎಐಎಡಿಎಂಕೆಯ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಬಲ ಪ್ರತಿಪಕ್ಷವಾಗಿ ಹೊರಹೊಮ್ಮಲು ಬಿಜೆಪಿ ಯತ್ನಿಸುತ್ತಿರುವುದು ಎಐಎಡಿಎಂಕೆಯಲ್ಲಿ ನಡುಕ ಹುಟ್ಟಿಸಿತ್ತು. ಎರಡು ಶಕ್ತಿ ಕೇಂದ್ರಗಳು ಸೃಷ್ಟಿಯಾಗಿರುವ ದ್ವಿನಾಯಕತ್ವ ಸೂತ್ರವನ್ನು ಇನ್ನಷ್ಟು ದಿನ ಮುಂದುವರಿಸಿದರೆ ಅದು ಪಕ್ಷವನ್ನು ಸಂಕಷ್ಟಕ್ಕೆ ದೂಡಬಹುದು ಎಂಬುದನ್ನು ಪಳನಿಸ್ವಾಮಿ ಬಣ ಅರಿತುಕೊಂಡಿತು. ಹೀಗಾಗಿ ಪಕ್ಷವನ್ನು ಏಕನಾಯಕನ ನಿಯಂತ್ರಣಕ್ಕೆ ತರಲು ಈ ಬಣ ಮುಂದಾಯಿತು ಎನ್ನಲಾಗಿದೆ.

ಸದ್ಯಕ್ಕೆ ತಟಸ್ಥ ನಿಲುವು ತಾಳಿದಂತೆ ಕಂಡರೂ, ಎರಡೂ ಬಣಗಳಿಂದ ಹೊರಬರುವ ಸದಸ್ಯರನ್ನು ಸೆಳೆದುಕೊಂಡು ಪಕ್ಷವನ್ನು ಬಲಗೊಳಿಸಲು ಬಿಜೆಪಿ ಯತ್ನಿಸುವ ಸಾಧ್ಯತೆಯೇ ಹೆಚ್ಚು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಪನ್ನೀರಸೆಲ್ವಂ ಬಣವು ಕೊನೆಗೆ ಬಿಜೆಪಿಯಲ್ಲಿ ಸೇರಿಹೋದರೂ ಅಚ್ಚರಿಯಿಲ್ಲ. ಆಗ, ಪಳನಿಸ್ವಾಮಿ ಬಣ ಮಾತ್ರ ಉಳಿಯಲಿದೆ. ಬಿಜೆಪಿ ಪ್ರಬಲವಾದರೆ, ಪಳನಿಸ್ವಾಮಿ ಬಣದ ಮುಖಂಡರೂ ಬಿಜೆಪಿಗೆ ಸೇರಿಕೊಳ್ಳಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT