ದೇಶದಾದ್ಯಂತ ಚಳಿಗಾಲ ಮುಗಿಯುವ ಮುನ್ನವೇ ಉಷ್ಣಾಂಶದಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ಇತ್ತೀಚೆಗೆ ವರ್ಷದಿಂದ ವರ್ಷಕ್ಕೆ ಉಷ್ಣಾಂಶದಲ್ಲಿ ಏರಿಕೆ ಸಾಮಾನ್ಯ ವಿದ್ಯಮಾನವಾಗಿದೆ. ಈ ವರ್ಷದ ಫೆಬ್ರುವರಿಯಲ್ಲಿ ಉಷ್ಣಾಂಶವು ಸರಾಸರಿಗಿಂತ ಗಣನೀಯವಾಗಿ ಹೆಚ್ಚೇ ಇತ್ತು ಎಂಬುದನ್ನು ಸ್ಕೈಮೆಟ್ ಹವಾಮಾನ ಸಂಸ್ಥೆ ಗುರುತಿಸಿದೆ. 2022ರ ಮಾರ್ಚ್ನಲ್ಲಿ ಇದ್ದ ಉಷ್ಣಾಂಶವು 122 ವರ್ಷಗಳಲ್ಲಿಯೇ ಅತ್ಯಂತ ಹೆಚ್ಚು. ಸರಾಸರಿ ಗರಿಷ್ಠ ಉಷ್ಣಾಂಶವು 30.7 ಡಿಗ್ರಿ ಸೆಲ್ಸಿಯಸ್ನಷ್ಟು ದಾಖಲಾಗಿತ್ತು.

2023ರಲ್ಲಿ ದೀರ್ಘಾವಧಿ ಮುನ್ಸೂಚನೆ ಪ್ರಕಾರ, ಮಾರ್ಚ್ ತಿಂಗಳಲ್ಲಿ ಉಷ್ಣಾಂಶವು ಕಳೆದ ವರ್ಷಕ್ಕಿಂತಲೂ ಹೆಚ್ಚಳವಾಗಬಹುದು. ಹಗಲು ಮತ್ತು ರಾತ್ರಿಯ ಉಷ್ಣಾಂಶವು ವಾಡಿಕೆಗಿಂತ ಹೆಚ್ಚೇ ಇರಲಿದೆ. ಭಾರತದ ವಾಯವ್ಯ, ಮಧ್ಯ ಮತ್ತು ಪೂರ್ವ ಭಾಗಗಳಲ್ಲಿ ಫೆಬ್ರುವರಿ ಕೊನೆಯ ವಾರದಲ್ಲಿ ಉಷ್ಣಾಂಶವು ಗರಿಷ್ಠ ಮಟ್ಟದಲ್ಲಿ ಇತ್ತು. ಐದಾರು ದಿನಗಳ ಕಾಲ ಸಾಮಾನ್ಯ ಉಷ್ಣಾಂಶಕ್ಕಿಂತ ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣತೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಫೆಬ್ರುವರಿ ಕೊನೆಯ ವಾರದಲ್ಲಿ ಮುನ್ಸೂಚನೆ ನೀಡಿತ್ತು.

ದೇಶದ ಬಹುತೇಕ ಎಲ್ಲ ಭಾಗಗಳಲ್ಲಿಯೂ ಫೆಬ್ರುವರಿಯ ಕೊನೆಯ ವಾರದ ಉಷ್ಣಾಂಶವು ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಇರುವ ಉಷ್ಣಾಂಶದ ಮಟ್ಟದಲ್ಲಿತ್ತು. ಮಾರ್ಚ್ ತಿಂಗಳ ಮೊದಲ ಎರಡು ವಾರಗಳಲ್ಲಿ ವಾಯವ್ಯ ಪ್ರದೇಶದಲ್ಲಿ ಉಷ್ಣತೆಯು 40 ಡಿಗ್ರಿ ಸೆಲ್ಸಿಯಸ್ ದಾಟಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷದ ಬೇಸಿಗೆಯು ತೀವ್ರವಾಗಿ ಇರಲಿದೆ ಎಂಬ ಕಳವಳವನ್ನು ಇದು ಮೂಡಿಸಿದೆ.

ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಫೆಬ್ರುವರಿ ತಿಂಗಳ ಕೊನೆಯ ವಾರದ ಕೆಲವು ದಿನಗಳಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ನಿಂದ ಮೂರು ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿತ್ತು. ಮಧ್ಯ ಕರ್ನಾಟಕ ಮತ್ತು ಉತ್ತರ ಒಳನಾಡಿನಲ್ಲಿ ಮೂರರಿಂದ ನಾಲ್ಕು ಡಿಗ್ರಿ ಸೆಲ್ಸಿಯಸ್ ಏರಿಕೆ ಆಗಬಹುದು ಎಂದು ಹವಾಮಾನ ಇಲಾಖೆ ಹೇಳಿತ್ತು.

ಬೆಂಗಳೂರಿನಲ್ಲಿ ಫೆಬ್ರುವರಿ ಕೊನೆಯ ವಾರದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕಲಬುರ್ಗಿಯಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶವು 37.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕೃಷಿ ಇಳುವರಿ ಇಳಿಕೆ ಸಾಧ್ಯತೆ

ಉಷ್ಣಾಂಶ ಏರಿಕೆಯು ಕೃಷಿ ಇಳುವರಿಯ ಮೇಲೆ ಗಣನೀಯವಾದ ಪರಿಣಾಮ ಬೀರಬಹುದು ಎಂಬ ಆತಂಕ ಎದುರಾಗಿದೆ. ಗೋಧಿ ಮತ್ತು ಸಾಸಿವೆ ಬೆಳೆ ಬೆಳೆದು ನಿಂತಿದೆ. ಈ ಹೊತ್ತಿನಲ್ಲಿ ಉಷ್ಣಾಂಶ ಹೆಚ್ಚಾದರೆ ಇಳುವರಿಯ ಪ್ರಮಾಣ ಮತ್ತು ಗುಣಮಟ್ಟ ಎರಡರ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಉಷ್ಣಾಂಶ ಹೆಚ್ಚಳದಿಂದಾಗಿ ಈ ವರ್ಷ ಮಳೆ ಕಡಿಮೆಯಾಗುವ ಅಪಾಯವೂ ಇದೆ. ಹಾಗಾದರೆ, ಮುಂದಿನ ಬೆಳೆ ಋತುವಿನಲ್ಲಿ ಭತ್ತ ಮತ್ತು ಇತರ ಧಾನ್ಯಗಳ ಇಳುವರಿ ಮೇಲೆ ಪರಿಣಾಮವಾಗಲಿದೆ. ಉಷ್ಣಾಂಶ ಹೆಚ್ಚಳವು ಗೋಧಿ ಬೆಳೆಯ ಮೇಲೆ ಯಾವ ಪರಿಣಾಮ ಬೀರಲಿದೆ ಎಂಬುದರ ಮೇಲೆ ನಿಗಾ ಇರಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯವು ಇತ್ತೀಚೆಗೆ ಹೇಳಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಮತ್ತು ಏರುತ್ತಿರುವ ಉಷ್ಣಾಂಶಕ್ಕೆ ಹೊಂದಿಕೊಳ್ಳಬಲ್ಲ ವಿಶೇಷ ಗೋಧಿ ತಳಿಯನ್ನು ಅಭಿವೃದ್ಧಿಪಡಿಸಿರುವುದಾಗಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ ಪ್ರಕಟಿಸಿದೆ.

ಉಷ್ಣತೆ ಏರಿಕೆಯು ಆಹಾರ ಪದಾರ್ಥಗಳ ಸಾಗಾಟದ ಮೇಲೆಯೂ ಪರಿಣಾಮ ಬೀರುತ್ತದೆ. ಭಾರತದಲ್ಲಿ ಶೀಥಲೀಕರಣ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಹಾಗಾಗಿ ತಾಜಾ ಉತ್ಪನ್ನಗಳನ್ನು ಸಂಗ್ರಹಿಸಿ ಇರಿಸಲು ಸಾಧ್ಯವಿಲ್ಲ. ತಕ್ಷಣವೇ ಸಾಗಾಟ ಮಾಡಬೇಕಾಗುತ್ತದೆ. ಬಿಸಿ ಗಾಳಿಯಿಂದಾಗಿ ತಾಜಾ ಆಹಾರ ಪದಾರ್ಥಗಳ ಬಹುಭಾಗ ಹಾಳಾಗುತ್ತದೆ.

ಆಹಾರ ಧಾನ್ಯಗಳ ಕೊರತೆಯು ದರ ಏರಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ಈಗಾಗಲೇ ಏರುಗತಿಯಲ್ಲಿ ಇರುವ ಹಣದುಬ್ಬರವು ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಕಳವಳವನ್ನು ಪರಿಣತರು ವ್ಯಕ್ತಪಡಿಸಿದ್ದಾರೆ.

ಯಾವುದು ಬಿಸಿಗಾಳಿ, ಯಾವುದು ತೀವ್ರ ಬಿಸಿಗಾಳಿ?

ದೇಶದ ಯಾವುದೇ ಒಂದು ಪ್ರದೇಶದ ಉಷ್ಣಾಂಶವು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತಿದ್ದರೆ ಅಥವಾ ಸಾವು ತರಿಸುವಷ್ಟು ತೀವ್ರ ಸ್ವರೂಪದಲ್ಲಿದ್ದರೆ ಅದು ಬಿಸಿಗಾಳಿ ಎನಿಸಿಕೊಳ್ಳುತ್ತದೆ. ಅಂದರೆ, ಒಂದು ಭೌಗೋಳಿಕ ಪ್ರದೇಶದಲ್ಲಿನ ಉಷ್ಣಾಂಶವು ಅಲ್ಲಿನ ಸರಾಸರಿ ಗರಿಷ್ಠ ಉಷ್ಣಾಂಶಕ್ಕಿಂತ ವಿಪರೀತ ಪ್ರಮಾಣದಲ್ಲಿ ಹೆಚ್ಚಾದರೆ ಅದನ್ನೂ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಆಯಾ ಭೌಗೋಳಿಕ ಪ್ರದೇಶದ ವಾತಾವರಣಕ್ಕೆ ಅನುಗುಣವಾಗಿ ಹಾಗೂ ಉಷ್ಣತೆಯ ಗರಿಷ್ಠ ಮಟ್ಟದ ಆಧಾರದಲ್ಲಿ ಬಿಸಿಗಾಳಿಯನ್ನು ವ್ಯಾಖ್ಯಾನಿಸಲಾಗುತ್ತದೆ.

ಬಯಲು ಪ್ರದೇಶ: ಯಾವುದೇ ಬಯಲು ಪ್ರದೇಶದಲ್ಲಿ ದಿನದ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ ಅದನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

ಗುಡ್ಡಗಾಡು ಪ್ರದೇಶ: ಗುಡ್ಡಗಾಡು ಪ್ರದೇಶದಲ್ಲಿ ದಿನವೊಂದರಲ್ಲಿ ಗರಿಷ್ಠ ಉಷ್ಣಾಂಶವು 30 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ ಅದನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

ಗರಿಷ್ಠ ಉಷ್ಣಾಂಶದಲ್ಲಿ ಏರಿಕೆ: ಯಾವುದೇ ಒಂದು ಪ್ರದೇಶದಲ್ಲಿನ ಉಷ್ಣಾಂಶವು, ಸರಾಸರಿ ಗರಿಷ್ಠ ಉಷ್ಣಾಂಶಕ್ಕಿಂತ 4.5ರಿಂದ 6.4 ಡಿಗ್ರಿ ಸೆಲ್ಸಿಯಸ್ನಷ್ಟು ಏರಿಕೆಯಾದರೆ ಆ ಪರಿಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಸರಾಸರಿ ಗರಿಷ್ಠ ಉಷ್ಣಾಂಶಕ್ಕಿಂತ 6.5 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚು ದಾಖಲಾದರೆ ಆ ಪರಿಸ್ಥಿತಿಯನ್ನು ತೀವ್ರ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

45 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು: ದೇಶದ ಯಾವುದೇ ಭಾಗದ ದಿನದ ಗರಿಷ್ಠ ಉಷ್ಣಾಂಶವು 45 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಾದರೆ ಆ ಪರಿಸ್ಥಿತಿಯನ್ನು ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ. ಅದೇ ಪ್ರದೇಶದಲ್ಲಿ ದಿನದ ವೇಳೆ ಗರಿಷ್ಠ ಉಷ್ಣಾಂಶವು 47 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಾದರೆ ಆ ಪರಿಸ್ಥಿತಿಯನ್ನು ತೀವ್ರ ಬಿಸಿಗಾಳಿ ಎಂದು ಪರಿಗಣಿಸಲಾಗುತ್ತದೆ

ಭಾರತದಲ್ಲಿ ಬಿಸಿಗಾಳಿಯ ಸ್ಥಿತಿ

ಬಿಸಿಲಿನ ಅವಧಿ: ಭಾರತದಲ್ಲಿ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ಅವಧಿಯಲ್ಲಿ ಬಿಸಿಗಾಳಿ ಉಂಟಾಗಬಹುದು. ಕೆಲವೊಮ್ಮೆ ಜುಲೈ ತಿಂಗಳಿಗೂ ಅದು ವಿಸ್ತರಿಸುತ್ತದೆ.

ಎಲ್ಲೆಲ್ಲಿ ಬಿಸಿಗಾಳಿ: ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ ಹಾಗೂ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಸಂಭಾವ್ಯತೆ ಹೆಚ್ಚು. ತಮಿಳನಾಡು ಹಾಗೂ ಕೇರಳದಲ್ಲೂ ಕೆಲವೊಮ್ಮೆ ಉಂಟಾಗುತ್ತದೆ.

ಪರಿಗಣನೆ ಹೇಗೆ?

ಭೌಗೋಳಿಕ ಪ್ರದೇಶವೊಂದರಲ್ಲಿ ಸ್ಥಾಪಿಸಲಾಗಿರುವ ಹವಾಮಾನ ಕೇಂದ್ರದಲ್ಲಿ 1981–2010ರವರೆಗಿನ 30 ವರ್ಷಗಳ ಅವಧಿಯಲ್ಲಿ ದಾಖಲಾದ ಸಾಮಾನ್ಯ ಗರಿಷ್ಠ ಉಷ್ಣಾಂಶದ ಆಧಾರದಲ್ಲಿ ಆ ಪ್ರದೇಶದ ಗರಿಷ್ಠ ಉಷ್ಣಾಂಶವನ್ನು ಐಎಂಡಿ (ಭಾರತೀಯ ಹವಾಮಾನ ಇಲಾಖೆ) ನಿರ್ಧರಿಸುತ್ತದೆ. ಇಂತಹ ವಿವಿಧ ಹವಾಮಾನ ಕೇಂದ್ರಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶದ ಆಧಾರದಲ್ಲಿ ಆಯಾ ಪ್ರದೇಶದ ಬಿಸಿಗಾಳಿಯ ಸಾಧ್ಯತೆಯನ್ನು ಐಎಂಡಿ ವಿಶ್ಲೇಷಿಸುತ್ತದೆ.

ಐಎಂಡಿ ಎಚ್ಚರಿಕೆ ವಿಧಾನ

ಯೆಲ್ಲೋ ಅಲರ್ಟ್: ಆಯ್ದ ಪ್ರದೇಶಗಳಲ್ಲಿ ವಾತಾವರಣದ ಉಷ್ಣಾಂಶ ಹೆಚ್ಚಳವು ಎರಡು ದಿನಗಳವರೆಗೆ ಇದ್ದಾಗ ಈ ಎಚ್ಚರಿಕೆ ನೀಡಲಾಗುತ್ತದೆ; ಸಾಮಾನ್ಯ ಜನರಿಗೆ ತೊಂದರೆಯಾಗುವುದಿಲ್ಲ; ಮಕ್ಕಳು, ವಯಸ್ಸಾದವರು, ಅನಾರೋಗ್ಯ ಪೀಡಿತರ ಮೇಲೆ ಪರಿಣಾಮ ಸಾಧ್ಯತೆ

ಆರೆಂಜ್ ಅಲರ್ಟ್: ಇದು ತೀವ್ರ ಉಷ್ಣಾಂಶದ ಎಚ್ಚರಿಕೆ; ತೀವ್ರ ಬಿಸಿಗಾಳಿ ಎರಡು ದಿನ ಕಂಡುಬಂದರೆ ಹಾಗೂ ಬಿಸಿಗಾಳಿ ನಾಲ್ಕು ದಿನಗಳವರೆಗೆ ಮುಂದುವರಿದರೆ ಆರೆಂಜ್ ಅಲರ್ಟ್ ನೀಡಲಾಗುತ್ತದೆ; ಬಿಸಿಗಾಳಿಗೆ ಹೆಚ್ಚು ಸಮಯ ಒಡ್ಡಿಕೊಂಡ ಜನರು ಹಾಗೂ ಹೆಚ್ಚು ಶ್ರಮದಾಯಕ ಕೆಲಸ ಮಾಡುವವರಲ್ಲಿ ಉಷ್ಣಾಂಶಕ್ಕೆ ಸಂಬಂಧಪಟ್ಟ ಸಮಸ್ಯೆ ಕಾಣಿಸಿಕೊಳ್ಳಬಹುದು; ಮಕ್ಕಳು, ವಯಸ್ಸಾದವರು, ಅನಾರೋಗ್ಯ ಪೀಡಿತರ ಮೇಲೆ ಪರಿಣಾಮ ಸಾಧ್ಯತೆ

ರೆಡ್ ಅಲರ್ಟ್: ತೀವ್ರ ಮತ್ತು ಅತ್ಯಂತ ತೀವ್ರ ಉಷ್ಣಾಂಶದ ಎಚ್ಚರಿಕೆ; ತೀವ್ರ ಬಿಸಿಗಾಳಿ ಎರಡು ದಿನ ಮುಂದುವರಿದರೆ ಅಥವಾ ಬಿಸಿಗಾಳಿಯು ಸತತ ಆರು ದಿನಕ್ಕಿಂತ ಹೆಚ್ಚು ಮುಂದುವರಿದರೆ ರೆಡ್ ಅಲರ್ಟ್ ನೀಡಲಾಗುತ್ತದೆ; ಎಲ್ಲ ವಯೋಮಾನದ ಜನರಲ್ಲಿ ಉಷ್ಣಾಂಶಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ‘ಹೀಟ್ ಸ್ಟ್ರೋಕ್’ ಉಂಟಾಗುವ ಸಾಧ್ಯತೆ

ಬಿಸಿಗಾಳಿ ಎಲ್ಲಿ ಹುಟ್ಟುತ್ತದೆ?

ಸಾಮಾನ್ಯವಾಗಿ ದೇಶದ ವಾಯವ್ಯ ದಿಕ್ಕಿನಲ್ಲಿ ಬಿಸಿಗಾಳಿ ಸೃಷ್ಟಿಯಾಗುತ್ತದೆ. ಅದು ಕ್ರಮೇಣ ದೇಶದ ಪೂರ್ವ ದಿಕ್ಕಿಗೆ ಹಾಗೂ ದಕ್ಷಿಣ ದಿಕ್ಕಿಗೆ ಚಲಿಸುತ್ತದೆ. ಆದರೆ ಪಶ್ಚಿಮಕ್ಕೆ ಚಲಿಸುವುದಿಲ್ಲ. ಕೆಲವು ಸಂದರ್ಭಗಳಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆಗಳಿಂದ, ದೇಶದ ಯಾವ ಭಾಗದಲ್ಲಿ ಬೇಕಾದರೂ ಬಿಸಿಗಾಳಿ ಸೃಷ್ಟಿಯಾಗಬಹುದು.

ಬಿಸಿಗಾಳಿಗೆ ಅನುಕೂಲಕರ ಪರಿಸ್ಥಿತಿಗಳು:

l ಪ್ರದೇಶವೊಂದರಲ್ಲಿ ಒಣಹವೆ ಇರುವಿಕೆ ಹಾಗೂ ಅದರ ಸರಾಗ ಸಂಚಾರ

l ವಾತಾವರಣದ ತೇವಾಂಶ ಕಡಿಮೆಯಾಗುವುದು

l ಮೋಡಗಳು ಇಲ್ಲದ ಶುಭ್ರ ಆಕಾಶ

ಆರೋಗ್ಯದ ಮೇಲಿರಲಿ ಎಚ್ಚರ

ತಾಪಮಾನ ಹೆಚ್ಚಳ ಅಥವಾ ಬಿಸಿ ಗಾಳಿಯು ಜನರು ಹಾಗೂ ಜಾನುವಾರುಗಳ ಆರೋಗ್ಯವನ್ನು ಏರುಪೇರು ಮಾಡುತ್ತದೆ. ಮುಖ್ಯವಾಗಿ ನಿರ್ಜಲೀಕರಣ ಕಾಡಬಹುದು. ಬಿಸಿಲಿಗೆ ಒಡ್ಡಿಕೊಂಡ ಜನರಲ್ಲಿ ಊತ, ತಲೆನೋವು, ವಾಕರಿಕೆ, ಸುಸ್ತು, ವಾಂತಿ ಕಾಣಿಸಿಕೊಳ್ಳಬಹುದು. ಇದರ ಜೊತೆ ಜ್ವರ (102 ಡಿಗ್ರಿ ಫ್ಯಾರನ್ಹೀಟ್) ಕಾಣಿಸಿಕೊಳ್ಳಬಹುದು. ತೀವ್ರವಾದ ಜ್ವರ ಅಂದರೆ, 104 ಡಿಗ್ರಿ ಫ್ಯಾರನ್ಹೀಟ್ ದಾಟಿದರೆ, ಪ್ರಜ್ಞೆ ತಪ್ಪುವ ಅಪಾಯವೂ ಇದೆ. ಕೋಮಾಕ್ಕೂ ಹೋಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಿಸಿರುವ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಮುನ್ನೆಚ್ಚರಿಕೆ

l ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ಸಮಯದಲ್ಲಿ ಬಿಸಿಲಿನ ಝಳಕ್ಕೆ ಒಡ್ಡಿ
ಕೊಳ್ಳದಿರುವುದು ಒಳಿತು

l ಹೊರಗೆ ಹೋಗಬೇಕೆಂದಿದ್ದರೆ, ಹಗುರವಾದ ಹಾಗೂ ಸಡಿಲವಾದ ಹತ್ತಿ ಬಟ್ಟೆ ಧರಿಸಬೇಕು

l ಹೊರಗಡೆ ಕೆಲಸ ಮಾಡುವವರು ತಲೆ, ಕುತ್ತಿಗೆ, ಮುಖ ಹಾಗೂ ಕೈಕಾಲು ಮುಚ್ಚುವಂತಹ ಬಟ್ಟೆ ಧರಿಸಬೇಕು

l ನಿಲುಗಡೆ ಮಾಡಿರುವ ವಾಹನಗಳಲ್ಲಿ ಮಕ್ಕಳು ಹಾಗೂ ಸಾಕುಪ್ರಾಣಿಗಳನ್ನು ಬಿಡಬಾರದು

l ಸೂರ್ಯನ ಬಿಸಿಲಿನಿಂದ ರಕ್ಷಣೆ ನೀಡುವ ಕನ್ನಡಕ, ಟೋಪಿ, ಛತ್ರಿ ಬಳಸಬೇಕು

l ಬಾಯಾರಿಕೆ ಇಲ್ಲದಿದ್ದರೂ, ಯಥೇಚ್ಛ ನೀರು ಕುಡಿಯಬೇಕು

l ನಿರ್ಜಲೀಕರಣಕ್ಕೆ ಕಾರಣವಾಗಬಹುದಾದ ಮದ್ಯ, ಕಾಫಿ, ಟೀ, ಕಾರ್ಬೊನೇಟೆಡ್ ಪಾನೀಯಗಳಿಂದ ದೂರವಿರಬೇಕು

l ಹೆಚ್ಚು ಪ್ರೊಟೀನ್ಭರಿತ ಆಹಾರ ಮತ್ತು ಹಳಸಿದ ಆಹಾರ ಸೇವಿಸಬಾರದು

l ಒಆರ್ಎಸ್, ಮನೆಯಲ್ಲಿ ತಯಾರಿಸಿದ ಲಸ್ಸಿ, ಮಜ್ಜಿಗೆ, ನಿಂಬೆ ಶರಬತ್ತು ಕುಡಿಯಬೇಕು

l ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಮನೆಯನ್ನು ತಂಪಾಗಿರಿಸಬೇಕು. ಗಾಳಿಯಾಡುವಂತೆ ರಾತ್ರಿಹೊತ್ತು ಕಿಟಕಿಗಳನ್ನು ತೆರೆದಿಡಬೇಕು

l ಆರೋಗ್ಯದಲ್ಲಿ ಏರುಪೇರು ಉಂಟಾದರೆ ವೈದ್ಯರನ್ನು ಸಂಪರ್ಕಿಸಬೇಕು

ಆಧಾರ: ಭಾರತೀಯ ಹವಾಮಾನ ಇಲಾಖೆ, ಸ್ಕೈಮೆಟ್, ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.