ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯೆ–ಸುದ್ದಿ: ಮಹಿಳೆಯ ಮನೆ ಮಾಲೀಕತ್ವ

Last Updated 29 ಜನವರಿ 2023, 19:30 IST
ಅಕ್ಷರ ಗಾತ್ರ

ಮನೆ ಮತ್ತು ಜಮೀನಿನ ಮಾಲೀಕತ್ವ ಹೊಂದಿರುವ ಮಹಿಳೆಯರ ಪ್ರಮಾಣ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಎನ್ನುತ್ತದೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ–5. ಈ ಮಾಲೀಕತ್ವವು ಪ್ರತ್ಯೇಕ ಮಾಲೀಕತ್ವವೂ ಹೌದು, ಕುಟುಂಬದ ಇತರ ಸದಸ್ಯರೊಂದಿಗಿನ ಜಂಟಿ ಮಾಲೀಕತ್ವವೂ ಹೌದು. ಮಹಿಳೆಯರಿಗೆ ಮನೆ ಮತ್ತು ಜಮೀನಿನ ಮಾಲೀಕತ್ವ ನೀಡುವ ಹಾಗೂ ಮಹಿಳೆಯರೊಂದಿಗೆ ಜಂಟಿ ಮಾಲೀಕತ್ವ ಹಂಚಿಕೊಳ್ಳುವ ಪರಿಪಾಟ ಗ್ರಾಮೀಣ ಪ್ರದೇಶ ಹಾಗೂ ಕೂಡು ಕುಟುಂಬಗಳಲ್ಲಿ ಹೆಚ್ಚು

ನಗರ ಪ್ರದೇಶದಲ್ಲಿ ಕಡಿಮೆ

62.8% ಮನೆ ಮಾಲೀಕತ್ವ ಹೊಂದಿರುವ ನಗರ ಪ್ರದೇಶದ ಮಹಿಳೆಯರ ಪ್ರಮಾಣ

68.5% ಮನೆ ಮಾಲೀಕತ್ವ ಹೊಂದಿರುವ ಗ್ರಾಮೀಣ ಪ್ರದೇಶದ ಮಹಿಳೆಯರ ಪ್ರಮಾಣ

48% ಜಮೀನಿನ ಮಾಲೀಕತ್ವ ಹೊಂದಿರುವ ನಗರ ಪ್ರದೇಶದ ಮಹಿಳೆಯರ ಪ್ರಮಾಣ

57.6% ಜಮೀನಿನ ಮಾಲೀಕತ್ವ ಹೊಂದಿರುವ ಗ್ರಾಮೀಣ ಪ್ರದೇಶದ ಮಹಿಳೆಯರ ಪ್ರಮಾಣ

* ನಗರ ಪ್ರದೇಶದ ಮಹಿಳೆಯರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಮನೆಯ ಮಾಲೀಕತ್ವ ಹೊಂದಿರುವವರ ಪ್ರಮಾಣ 5.7 ಶೇಕಡಾವಾರು ಅಂಶಗಳಷ್ಟು ಹೆಚ್ಚು

* ನಗರದ ಮಹಿಳೆಯರಿಗೆ ಹೋಲಿಸಿದರೆ, ಮನೆ ಹಾಗೂ ಜಮೀನಿನ ಮಾಲೀಕತ್ವ ಹೊಂದಿರುವ ಗ್ರಾಮೀಣ ಪ್ರದೇಶದ ಮಹಿಳೆಯರ ಪ್ರಮಾಣವೇ ಹೆಚ್ಚು

ಕೂಡು ಕುಟುಂಬಗಳಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ

64.1% ಮನೆ ಮಾಲೀಕತ್ವ ಹೊಂದಿರುವ ಸಣ್ಣ ಕುಟುಂಬಗಳ ಮಹಿಳೆಯರ ಪ್ರಮಾಣ

68.1% ಮನೆ ಮಾಲೀಕತ್ವ ಹೊಂದಿರುವ ಕೂಡು ಕುಟುಂಬಗಳ ಮಹಿಳೆಯರ ಪ್ರಮಾಣ

51.4% ಜಮೀನಿನ ಮಾಲೀಕತ್ವ ಹೊಂದಿರುವ ಸಣ್ಣ ಕುಟುಂಬಗಳ ಮಹಿಳೆಯರ ಪ್ರಮಾಣ

55.8% ಜಮೀನಿನ ಮಾಲೀಕತ್ವ ಹೊಂದಿರುವ ಕೂಡು ಕುಟುಂಬಗಳ ಮಹಿಳೆಯರ ಪ್ರಮಾಣ

––––––––––

ಕ್ರೈಸ್ತರಲ್ಲಿ ಹೆಚ್ಚು

ರಾಜ್ಯದ ಒಟ್ಟು ಹಿಂದೂ ಮಹಿಳೆಯರಲ್ಲಿ ಮನೆ ಮಾಲೀಕತ್ವ ಹೊಂದಿರುವವರ ಪ್ರಮಾಣ ಶೇ 67ರಷ್ಟು. ಹಿಂದೂಗಳಿಗೆ ಹೋಲಿಸಿದರೆ, ಮನೆಯ ಮಾಲೀಕತ್ವ ಹೊಂದಿರುವ ಮುಸ್ಲಿಂ ಮಹಿಳೆಯರ ಪ್ರಮಾಣ ಸ್ವಲ್ಪ ಕಡಿಮೆ ಇದೆ. ಆದರೆ ಹಿಂದೂ ಮತ್ತು ಮುಸ್ಲಿಂ ಮಹಿಳೆಯರಿಗೆ ಹೋಲಿಸಿದರೆ, ಮನೆ ಮಾಲೀಕತ್ವ ಹೊಂದಿರುವ ಕ್ರೈಸ್ತ ಧರ್ಮದ ಮಹಿಳೆಯರ ಪ್ರಮಾಣ ಹೆಚ್ಚು

67 %: ಮನೆ ಮಾಲೀಕತ್ವ ಹೊಂದಿರುವ ಹಿಂದೂ ಮಹಿಳೆಯರ ಪ್ರಮಾಣ

61.7%: ಮನೆ ಮಾಲೀಕತ್ವ ಹೊಂದಿರುವ ಮುಸ್ಲಿಂ ಮಹಿಳೆಯರ ಪ್ರಮಾಣ

70.2%: ಮನೆ ಮಾಲೀಕತ್ವ ಹೊಂದಿರುವ ಕ್ರೈಸ್ತ ಮಹಿಳೆಯರ ಪ್ರಮಾಣ

53.7 %: ಜಮೀನಿನ ಮಾಲೀಕತ್ವ ಹೊಂದಿರುವ ಹಿಂದೂ ಮಹಿಳೆಯರ ಪ್ರಮಾಣ

44%: ಜಮೀನಿನ ಮಾಲೀಕತ್ವ ಹೊಂದಿರುವ ಮುಸ್ಲಿಂ ಮಹಿಳೆಯರ ಪ್ರಮಾಣ

56.2%: ಜಮೀನಿನ ಮಾಲೀಕತ್ವ ಹೊಂದಿರುವ ಕ್ರೈಸ್ತ ಮಹಿಳೆಯರ ಪ್ರಮಾಣ

ಮೂರನೇ ಒಂದರಷ್ಟು ಮಂದಿಗೆ ಸ್ವಂತ ಮನೆ ಇಲ್ಲ

ಈ ವರದಿಯ ದತ್ತಾಂಶಗಳ ಪ್ರಕಾರ ರಾಜ್ಯದ ಒಟ್ಟು ಮಹಿಳೆಯರಲ್ಲಿ ಮನೆಯ ಮಾಲೀಕತ್ವ ಇಲ್ಲದೇ ಇರುವ ಮಹಿಳೆಯರ ಪ್ರಮಾಣ ಶೇ 33.8ರಷ್ಟಿದೆ. ಅದೇ ರೀತಿ ಮನೆಯ ಮಾಲೀಕತ್ವ ಇಲ್ಲದ ಪುರುಷರ ಪ್ರಮಾಣವು ಶೇ 32.1ರಷ್ಟಿದೆ. ಒಟ್ಟಾರೆ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮನೆಯ ಮಾಲೀಕತ್ವ ಇಲ್ಲದೇ ಇರುವ ಜನರ ಪ್ರಮಾಣ ಶೇ 33ರಷ್ಟಿದೆ. ಅಂದರೆ ರಾಜ್ಯದ ಮೂರನೇ ಒಂದರಷ್ಟು ಜನರು ಸ್ವಂತ ಮನೆ ಹೊಂದಿಲ್ಲ ಎಂಬುದರ ಮೇಲೆ ಈ ದತ್ತಾಂಶಗಳು ಬೆಳಕು ಚೆಲ್ಲುತ್ತವೆ. ಇಷ್ಟು ದೊಡ್ಡ ಪ್ರಮಾಣದ ಜನರು ಬಾಡಿಗೆ ಮನೆಗಳಲ್ಲಿ ಮತ್ತು ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದರತ್ತ ಈ ದತ್ತಾಂಶವು ಬೊಟ್ಟು ಮಾಡುತ್ತದೆ.

2014–15ನೇ ಸಾಲಿಗೆ ಹೋಲಿಸಿದರೆ, ಮನೆ ಮಾಲೀಕತ್ವದ ವಿಚಾರದಲ್ಲಿ ರಾಜ್ಯವು 2019–21ರ ವೇಳೆಗೆ ಗಮನಾರ್ಹ ಪ್ರಗತಿ ಸಾಧಿಸಿದೆ. 2014–15ರ ಸಾಲಿನಲ್ಲಿ ಮನೆ ಮಾಲೀಕತ್ವ ಇಲ್ಲದ ಜನರ ಪ್ರಮಾಣ ಶೇ 57.5ರಷ್ಟು ಇತ್ತು. 2019–21ರ ವೇಳೆಗೆ ಇದು ಶೇ 33ರಷ್ಟಕ್ಕೆ ಇಳಿಕೆಯಾಗಿದೆ.

ಜಮೀನಿನ ಮಾಲೀಕತ್ವದ ವಿಚಾರದಲ್ಲಿ ಪರಿಸ್ಥಿತಿ ಇನ್ನಷ್ಟು ಶೋಚನೀಯವಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಜಮೀನಿನ ಮಾಲೀಕತ್ವ ಹೊಂದಿರುವವರ ಪ್ರಮಾಣ ಶೇ 52.4ರಷ್ಟಿದೆ. ಉಳಿದ ಶೇ 47.6ರಷ್ಟು ಮಂದಿ ಯಾವುದೇ ರೀತಿಯ ಜಮೀನಿನ ಮಾಲೀಕತ್ವ ಹೊಂದಿಲ್ಲ. 2014–15ರಲ್ಲಿ ಜಮೀನಿನ ಮಾಲೀಕತ್ವ ಇಲ್ಲದ ಜನರ ಪ್ರಮಾಣ ಶೇ 54.15ರಷ್ಟಿತ್ತು. ಈಗ ಈ ಪ್ರಮಾಣವು ಶೇ 47.6ಕ್ಕೆ ಇಳಿಕೆಯಾಗಿದೆ.

ವಿವಿಧ ರಾಜ್ಯಗಳಲ್ಲಿ ಮಹಿಳೆಯರ ಮನೆ–ಜಮೀನು ಮಾಲೀಕತ್ವವನ್ನು ತೋರಿಸುವ ಗ್ರಾಫಿಕ್ಸ್‌
ವಿವಿಧ ರಾಜ್ಯಗಳಲ್ಲಿ ಮಹಿಳೆಯರ ಮನೆ–ಜಮೀನು ಮಾಲೀಕತ್ವವನ್ನು ತೋರಿಸುವ ಗ್ರಾಫಿಕ್ಸ್‌

ಲಡಾಖ್‌, ಅರುಣಾಚಲ ಪ್ರದೇಶ ಮುಂದೆ; ತ್ರಿಪುರಾ ಹಿಂದೆ

ಸ್ವತಂತ್ರವಾಗಿ ಅಥವಾ ಜಂಟಿಯಾಗಿ ಮನೆ ಮತ್ತು ಜಮೀನಿನ ಮಾಲೀಕತ್ವ ಹೊಂದಿರುವ ಮಹಿಳೆಯರ ಪ್ರಮಾಣವು ದೇಶದ ವಿವಿಧ ರಾಜ್ಯಗಳಲ್ಲಿ ಒಂದೇ ತೆರನಾಗಿಲ್ಲ. ಈ ಎರಡೂ ರೀತಿಯ ಸೊತ್ತುಗಳ ಮಾಲೀಕತ್ವ ಹೊಂದಿರುವ ಮಹಿಳೆಯರ ಸರಾಸರಿ ಪ್ರಮಾಣವು ಶೇ 17.2ರಿಂದ ಶೇ 72.2ರ ನಡುವೆ ಹಂಚಿಕೆಯಾಗಿದೆ. ಅರುಣಾಚಲ ಪ್ರದೇಶ ಮತ್ತು ಲಡಾಖ್‌ ಮುಂಚೂಣಿಯಲ್ಲಿದ್ದರೆ, ತ್ರಿಪುರಾ ಕೊನೆಯ ಸ್ಥಾನದಲ್ಲಿದೆ.

ರಾಜ್ಯಗಳ ಪೈಕಿ, ಮನೆ ಹಾಗೂ ಜಮೀನು ಹಕ್ಕುಪತ್ರ ಹೊಂದಿರುವ ಮಹಿಳೆಯರ ಪ್ರಮಾಣ ಅರುಣಾಚಲ ಪ್ರದೇಶದಲ್ಲಿ (ಶೇ 70.2) ಹೆಚ್ಚಿದೆ. ನಂತರದ ಸ್ಥಾನದಲ್ಲಿ ಕರ್ನಾಟಕ, ತೆಲಂಗಾಣ, ಮೇಘಾಲಯ, ಜಾರ್ಖಂಡ್, ಹಾಗೂ ಪಂಜಾಬ್ ರಾಜ್ಯಗಳಿವೆ. ಈ ರಾಜ್ಯಗಳಲ್ಲಿ ಶೇ 60ಕ್ಕಿಂತಲೂ ಹೆಚ್ಚು ಮಹಿಳೆಯರ ಕೈಯಲ್ಲಿ ಆಸ್ತಿಯ ಒಡೆತನವಿದೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಡಾಖ್‌ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಶೇ 72.2ರಷ್ಟು ಮಹಿಳೆಯರು ಆಸ್ತಿಗಳ ಮಾಲೀಕರಾಗಿದ್ದಾರೆ. ಪಕ್ಕದ ಜಮ್ಮು ಕಾಶ್ಮೀರದಲ್ಲಿ ಈ ಪ್ರಮಾಣ ಶೇ 57.3ರಷ್ಟಿದೆ. ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಶೇ 22.7ರಷ್ಟು ಮಹಿಳೆಯರು ಮಾತ್ರ ಆಸ್ತಿ ಒಡೆತನ ಹೊಂದಿದ್ದು, ಕೊನೆಯಲ್ಲಿ ಗುರುತಿಸಿಕೊಂಡಿದೆ.

ಈಶಾನ್ಯ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ, ಮೇಘಾಲಯ ಹಾಗೂ ಸಿಕ್ಕಿಂ ಗಮನಾರ್ಹ ಸ್ಥಿತಿಯಲ್ಲಿದ್ದರೆ, ಉಳಿದ ನಾಲ್ಕು ರಾಜ್ಯಗಳು ಹಿಂದೆ ಬಿದ್ದಿವೆ. ವಿಸ್ತೀರ್ಣದಲ್ಲಿ ದೊಡ್ಡವು ಎಂದು ಗುರುತಿಸಲಾಗಿರುವ ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಶೇ 50ಕ್ಕೂ ಹೆಚ್ಚು ಮಹಿಳೆಯರು ಮಾತ್ರ ಮನೆ, ಜಮೀನಿನ ಒಡೆತನ ಹೊಂದಿದ್ದಾರೆ. ಉಳಿದ ಮೂರು ರಾಜ್ಯಗಳಿಗೆ ಶೇ 40ರ ಸರಾಸರಿಯನ್ನೂ ದಾಟಲು ಸಾಧ್ಯವಾಗಿಲ್ಲ.

ದಕ್ಷಿಣ ಭಾರತದಲ್ಲಿ ಕರ್ನಾಟಕ (ಶೇ 67.6), ತೆಲಂಗಾಣ (ಶೇ 66.6) ಮುಂಚೂಣಿಯಲ್ಲಿವೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಬಹುತೇಕ ಸಮಾನ ಪಾಲು ಹೊಂದಿದ್ದರೂ, ಶೇ 50ರ ಗಡಿಯನ್ನು ಮೀರಲು ಸಾಧ್ಯವಾಗಿಲ್ಲ. ಕೇರಳದ ಶೇ 27ರಷ್ಟು ಮಹಿಳೆಯರು ಮಾತ್ರ ಆಸ್ತಿಯ ಮಾಲೀಕರಾಗಿದ್ದಾರೆ. ಪುಟ್ಟ ರಾಜ್ಯ ಗೋವಾದ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ ಎಂದು ದತ್ತಾಂಶಗಳು ಹೇಳುತ್ತವೆ.

ಧಾರ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿ–4 ಮತ್ತು 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT