ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ ಅಗಲ| ಷೇರುಪೇಟೆ ಗರಿಷ್ಠ ಮಟ್ಟ ಮುಟ್ಟಿದ್ದು ಹೇಗೆ?
ಆಳ ಅಗಲ| ಷೇರುಪೇಟೆ ಗರಿಷ್ಠ ಮಟ್ಟ ಮುಟ್ಟಿದ್ದು ಹೇಗೆ?
Published 28 ಜೂನ್ 2023, 23:30 IST
Last Updated 28 ಜೂನ್ 2023, 23:30 IST
ಅಕ್ಷರ ಗಾತ್ರ

‘ರಿಸ್ಕ್‌ ಹೈ ತೊ ಇಷ್ಕ್‌ ಹೈ...’ ಎಂಬುದು ಸೋನಿ ಲೈವ್ ಒಟಿಟಿಯಲ್ಲಿ ಬಿಡುಗಡೆ ಆಗಿ, ಅಪಾರ ಜನಪ್ರಿಯತೆಯನ್ನು ಗಳಿಸಿದ ‘ಸ್ಕ್ಯಾಮ್‌ 1992: ದಿ ಹರ್ಷದ್ ಮೆಹ್ತಾ ಸ್ಟೋರಿ’ ವೆಬ್‌ ಸರಣಿಯಲ್ಲಿ ನಟ ಪ್ರತೀಕ್ ಗಾಂಧಿ ಹೇಳುವ ಮಾತು. ಆ ವೆಬ್ ಸರಣಿಯಲ್ಲಿ ಪ್ರತೀಕ್ ಅವರು ಹರ್ಷದ್ ಮೆಹ್ತಾ ಪಾತ್ರವನ್ನು ನಿಭಾಯಿಸಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ವಿಪರೀತದ ರಿಸ್ಕ್‌ ತೆಗೆದುಕೊಳ್ಳಲು ಮುಂದಾಗಿ ಶ್ರೀಮಂತಿಕೆಯನ್ನು ಕಂಡ ಮೆಹ್ತಾ, ನಂತರದ ದಿನಗಳಲ್ಲಿ ಶ್ರೀಮಂತಿಕೆಯ ಸೌಧದಿಂದ ಜಾರಿಬಿದ್ದು ಜೈಲು ಪಾಲಾಗಿದ್ದು ಇತಿಹಾಸ. ಆದರೆ, ದೇಶದ ಷೇರು ಮಾರುಕಟ್ಟೆಗಳಲ್ಲಿ ಸಮಯೋಚಿತವಾದ ರಿಸ್ಕ್‌ ತೆಗೆದುಕೊಂಡ ಹೂಡಿಕೆದಾರರು ಈಗ ಖುಷಿಯ ನಗೆ ಬೀರುತ್ತಿದ್ದಾರೆ. ಷೇರುಪೇಟೆ ಸೂಚ್ಯಂಕಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿವೆ. ಷೇರುಪೇಟೆಯ ಬಂಡವಾಳ ಮೌಲ್ಯವು ಹೊಸ ಎತ್ತರವನ್ನು ತಲುಪುತ್ತಿದೆ. ಹನುಮದ್ವಿಕಾಸಕ್ಕೆ ಎಲ್ಲೆ ಇಲ್ಲ ಎಂಬ ಮಾತಿನಂತೆ, ಷೇರುಪೇಟೆಯ ಜಿಗಿತ ಕೂಡ ಎಲ್ಲೆಗಳನ್ನು ಎಣಿಸದೆ ಸಾಗಿರುವಂತಿದೆ.

ವಾಸ್ತವದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣಗಳು ಏನಿದ್ದಿರಬಹುದು? ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಹಣವು ಎಷ್ಟು ವರ್ಷಗಳಿಗೊಮ್ಮೆ ದುಪ್ಪಟ್ಟಾಗಿದೆ? ಮುಂದಿನ ದಿನಗಳಲ್ಲಿ ಯಾವ ವಲಯದಲ್ಲಿ ಹೆಚ್ಚಿನ ಚಟುವಟಿಕೆಗಳು ಕಾಣಬಹುದು?

‘1991ರಲ್ಲಿ ದೇಶವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ನಂತರದಲ್ಲಿ ಆರ್ಥಿಕ ಬೆಳವಣಿಗೆಗೆ ವೇಗ ದೊರೆಯಿತು. ಇದು ಷೇರುಪೇಟೆಯಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಯಿತು. ಷೇರು ಮಾರುಕಟ್ಟೆಯ ಚಲನೆಯು ದೀರ್ಘಾವಧಿಗೆ ನಿರ್ಧಾರ ಆಗುವಂಥದ್ದು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳುತ್ತಾರೆ.

‘ಮುಂಬೈ ಷೇರುಪೇಟೆಯು (ಬಿಎಸ್‌ಇ) 44 ವರ್ಷಗಳಲ್ಲಿ (1979-2023) ವಾರ್ಷಿಕ ಸರಾಸರಿ (ಸಿಎಜಿಆರ್‌) ಶೇಕಡ 15ರಷ್ಟು ಬೆಳವಣಿಗೆ ಕಂಡಿದೆ. 1979ರಲ್ಲಿ 100 ಅಂಶದಲ್ಲಿ ಇದ್ದ ಸೆನ್ಸೆಕ್ಸ್, ಈಗ 63 ಸಾವಿರ ಅಂಶಗಳನ್ನು ದಾಟಿದೆ. ಅಂದರೆ, 630 ಪಟ್ಟು ಬೆಳೆದಿದೆ. ಈ ದೀರ್ಘ ಅವಧಿಯಲ್ಲಿ, ಕೆಲವು ವರ್ಷಗಳಲ್ಲಿ ಮಾರುಕಟ್ಟೆ ಗಳಿಕೆ ಕಂಡಿದೆ. ಇನ್ನು ಕೆಲವು ವರ್ಷಗಳಲ್ಲಿ ಮಾರುಕಟ್ಟೆ ಸ್ಥಿರವಾಗಿ ಇತ್ತು. 1994ರ ಆರಂಭದಿಂದ 1998ರ ಜೂನ್‌ವರೆಗಿನ ನಾಲ್ಕು ವರ್ಷಗಳಲ್ಲಿ ಸೆನ್ಸೆಕ್ಸ್‌ 3,300 ಅಂಶಗಳ ಆಸುಪಾಸಿನಲ್ಲಿಯೇ ಇತ್ತು. ಹಾಗಾಗಿ ಆ ಅವಧಿಯಲ್ಲಿ ಗಳಿಕೆಯು ಶೂನ್ಯವಾಗಿತ್ತು. ಇದಕ್ಕೆ ತದ್ವಿರುದ್ಧವಾಗಿ, 2003ರ ಮಧ್ಯಭಾಗದಿಂದ 2007ರ ಅಂತ್ಯದವರೆಗೆ ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿತ್ತು. 2003ರ ಮೇನಲ್ಲಿ 3,000 ಅಂಶ ಇದ್ದ ಸೆನ್ಸೆಕ್ಸ್‌ 2007ರ ಡಿಸೆಂಬರ್ ವೇಳೆಗೆ 20 ಸಾವಿರ ಅಂಶಗಳಿಗೆ ಬೆಳೆಯಿತು, ಶೇ 700ರಷ್ಟು ಗಳಿಕೆ ಕಂಡಿತು’ ಎಂದು ಬಿಎಸ್‌ಇಯಲ್ಲಿ ಬಂಡವಾಳವು ವೃದ್ಧಿಯಾದ ಬಗೆಯನ್ನು ವಿಜಯಕುಮಾರ್ ಅವರು ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

ದೇಶದ ಇನ್ನೊಂದು ಪ್ರಮುಖ ಷೇರುಪೇಟೆ ಎನ್‌ಎಸ್‌ಇ. ಅಲ್ಲಿನ ಪ್ರಮುಖ ಸೂಚ್ಯಂಕ ನಿಫ್ಟಿ–50 ವಿಚಾರವಾಗಿ 5ಪೈಸಾ ಬ್ರೋಕರೇಜ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ರುಚಿತ್ ಜೈನ್ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಆಗಾಗ ಇಳಿಕೆಗಳು ದಾಖಲಾಗಿದ್ದರೂ, ನಿಫ್ಟಿ–50 ಗಮನಾರ್ಹ ಬೆಳವಣಿಗೆಯನ್ನು ದಾಖಲಿಸಿದೆ. 1996ರಲ್ಲಿ ಜನ್ಮತಳೆದ ನಂತರದಲ್ಲಿ ನಿಫ್ಟಿ–50 ಕರಡಿ ಕುಣಿತ ಹೆಚ್ಚಿದ್ದ ದಿನಗಳಲ್ಲಿ ಶೇ 51ರವರೆಗೆ ಕುಸಿದಿದ್ದೂ ಇದೆ. ಗೂಳಿಯ ಓಟ ಜೋರಾಗಿದ್ದ ಅವಧಿಯಲ್ಲಿ ಶೇ 70ರಷ್ಟು ಬೆಳವಣಿಗೆ ಕಂಡಿದ್ದೂ ಇದೆ. ಕಳೆದ 15 ವರ್ಷಗಳ ಅವಧಿಯಲ್ಲಿ ಸೂಚ್ಯಂಕವು ವಾರ್ಷಿಕ ಸರಾಸರಿ ಶೇ 13ರಷ್ಟು ಬೆಳವಣಿಗೆ ಕಂಡಿದೆ’ ಎಂದು ಜೈನ್ ಹೇಳುತ್ತಾರೆ.

ಈಗ ಕೆಲವು ತಿಂಗಳುಗಳಿಂದ ಮಾರುಕಟ್ಟೆಯಲ್ಲಿ ಕಂಡುಬಂದಿರುವ ಏರುಗತಿಯ ವಹಿವಾಟಿಗೆ ಕಾರಣಗಳನ್ನು ವಿಜಯಕುಮಾರ್ ಹಾಗೂ ಜೈನ್ ಅವರು ಭಿನ್ನ ನೆಲೆಗಳಲ್ಲಿ ಗುರುತಿಸಿದ್ದಾರೆ. ಹಾಗೆಯೇ ಅವರ ಮಾತುಗಳಲ್ಲಿ, ಗ್ರಹಿಕೆಗಳಲ್ಲಿ ಒಂದಿಷ್ಟು ಸಾಮ್ಯತೆಗಳೂ ಇವೆ. ‘ಜಾಗತಿಕವಾಗಿ ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ. 2022–23ನೇ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ 7.2ರಷ್ಟು ಬೆಳೆದಿದೆ. ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ಬಂದಿದ್ದು, ಅದು ಏಪ್ರಿಲ್‌ನಲ್ಲಿ ಶೇ 4.7ರಷ್ಟಾಗಿದೆ. ಕಾರ್ಪೊರೇಟ್‌ ವಲಯ ಉತ್ತಮ ಸ್ಥಿತಿಯಲ್ಲಿ ಇದೆ, ಬ್ಯಾಂಕಿಂಗ್ ವ್ಯವಸ್ಥೆಯು ಸುಸ್ಥಿತಿಗೆ ಮರಳಿದೆ. ಅಲ್ಪಾವಧಿಗೆ ಮಾರುಕಟ್ಟೆಯಲ್ಲಿ ಅಸ್ಥಿರತೆ ಎದುರಾಗಬಹುದು. ನಿರೀಕ್ಷೆಗಳಿಗೆ ವಿರುದ್ಧವಾಗಿ ಅದು ಚಲಿಸಬಹುದು. ಆದರೆ, ದೀರ್ಘಾವಧಿಯಲ್ಲಿ ಜಿಡಿಪಿ ಮತ್ತು ಕಾರ್ಪೊರೇಟ್‌ ಗಳಿಕೆಯ ಆಧಾರದ ಮೇಲೆ ಷೇರುಪೇಟೆಯ ಚಲನೆ ಇರಲಿದೆ. ಮುಂಬರುವ ವರ್ಷಗಳಲ್ಲಿಯೂ ಭಾರತದ ಆರ್ಥಿಕತೆಯು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣಲಿದೆ ಎಂದು ಐಎಂಎಫ್‌ ಹಾಗೂ ವಿಶ್ವಬ್ಯಾಂಕ್‌ ಅಂದಾಜಿಸಿವೆ. ಇದು ವಿದೇಶಿ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸಲು ನೆರವಾಗುತ್ತಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ಮೌಲ್ಯವು ಗರಿಷ್ಠ ಮಟ್ಟದಲ್ಲಿ ಇದೆ’ ಎಂದು ವಿಜಯಕುಮಾರ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಷೇರು ಮಾರುಕಟ್ಟೆ ಎಂಬುದು ಪರ್ಯಾಯ ಆದಾಯಕ್ಕೊಂದು ಮೂಲ ಎಂಬ ಭಾವನೆ ಮೂಡಿದ ಪರಿಣಾಮವಾಗಿ ಕೋವಿಡ್‌ ಅವಧಿಯಲ್ಲಿ ಡಿ–ಮ್ಯಾಟ್ ಖಾತೆಗಳ ಸಂಖ್ಯೆಯು ಹೆಚ್ಚಾಯಿತು. ದೇಶದ ಆರ್ಥಿಕತೆಯ ಮೂಲಭೂತ ಅಂಶಗಳು ಗಟ್ಟಿಯಾಗಿವೆ. ಇದರಿಂದಾಗಿ ನಮ್ಮ ಷೇರು ಮಾರುಕಟ್ಟೆಗಳು ಇತರ ದೇಶಗಳ ಮಾರುಕಟ್ಟೆಗಳಿಗಿಂತ ಹೆಚ್ಚು ಲಾಭ ತಂದಿವೆ. ಇದು ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಲು ಕಾರಣವಾಗಿದೆ. ಜಾಗತಿಕವಾಗಿ ಕಳವಳಕಾರಿ ವಿದ್ಯಮಾನಗಳು ಹಲವಿದ್ದರೂ, ಭಾರತದ ಬೆಳವಣಿಗೆಯ ಬಗ್ಗೆ ಬಹಳಷ್ಟು ಆಶಾವಾದ ಇರುವ ಕಾರಣ ವಿದೇಶಿ ಹೂಡಿಕೆದಾರರು ಮತ್ತೆ ನಮ್ಮ ಕಡೆ ಮುಖ ಮಾಡಿದ್ದಾರೆ. 2030ರೊಳಗೆ ಭಾರತವು ವಿಶ್ವದ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆಯನ್ನು ಹೊಂದಲಿದೆ. ಇಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳದೆ, ಬಹಳ ಕಾಲ ದೂರ ಉಳಿಯಲು ಅವರು ಬಯಸುವುದಿಲ್ಲ’ ಎಂದು ಜೈನ್ ಹೇಳಿದರು.

ಷೇರುಪೇಟೆಯ ವಿವಿಧ ಸೂಚ್ಯಂಕಗಳ ಪೈಕಿ ಐ.ಟಿ. ವಲಯದ ಗಳಿಕೆಯನ್ನು ಹೇಳುವ ಸೂಚ್ಯಂಕವು 2022ರ ಜನವರಿಯಲ್ಲಿ ಗರಿಷ್ಠ ಮಟ್ಟದಲ್ಲಿ ಇತ್ತು. ಆದರೆ ಅದು ಈಗ ಆ ಮಟ್ಟವನ್ನು ಹೋಲಿಸಿದರೆ ಕುಸಿದಿದೆ. ಇದಕ್ಕೆ ಹಲವು ಕಾರಣಗಳು ಇವೆ ಎಂದು ವಿಜಯಕುಮಾರ್ ಹೇಳುತ್ತಾರೆ. ಆದರೂ, ಮುಂದೆ ಒಳ್ಳೆಯದಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

‘ಐ.ಟಿ. ವಲಯದ ಷೇರುಗಳು ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ತುತ್ತಾಗಿವೆ. ಅಮೆರಿಕವು ಈ ವರ್ಷದ ಅಂತ್ಯದ ವೇಳೆಗೆ ಆರ್ಥಿಕ ಹಿಂಜರಿತ ಅನುಭವಿಸುವ ಸಾಧ್ಯತೆ ಇರುವುದು ಭಾರತದ ಪ್ರಮುಖ ಐ.ಟಿ. ಕಂಪನಿಗಳ ಗಳಿಕೆಗೆ ಪೆಟ್ಟು ಕೊಟ್ಟಿದೆ. ಆದರೆ, ಭಾರತದ ಆರ್ಥಿಕ ಚೇತರಿಕೆಯನ್ನು ಗಮನಿಸಿದರೆ, ಜಾಗತಿಕ ಮಟ್ಟದಲ್ಲಿ ಎದುರಾಗುವ ನಕಾರಾತ್ಮಕ ಪರಿಣಾಮಗಳನ್ನು ಮೀರಿ ಐ.ಟಿ. ಕಂಪನಿಗಳು ಬೆಳವಣಿಗೆ ಸಾಧಿಸುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ವಿಜಯಕುಮಾರ್ ಹೇಳುತ್ತಾರೆ.

ವಿವಿಧ ವಲಯಗಳ ಮುನ್ನೋಟ ಹೇಗಿದೆ?

ಹಣಕಾಸು ವಲಯದಲ್ಲಿ, ನಿರ್ದಿಷ್ಟವಾಗಿ ಬ್ಯಾಂಕಿಂಗ್‌ ವಲಯದ ಸ್ಥಿತಿ ಉತ್ತಮವಾಗಿ ಇರುವುದರಿಂದ ಷೇರುಗಳ ಮೌಲ್ಯ ಹೆಚ್ಚಾಗಲಿದೆ. ಸಾಲ ನೀಡಿಕೆ ಹೆಚ್ಚಾಗುತ್ತಿದ್ದು, ಬಡ್ಡಿದರವು ಗರಿಷ್ಠ ಮಟ್ಟದಲ್ಲಿದೆ. ಆಟೊಮೊಬೈಲ್ ವಲಯವು 5 ವರ್ಷಗಳ ಬಳಿಕ ಚೇತರಿಕೆ ಕಂಡಿವೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗಳಿಕೆ ಕಾಣುವ ನಿರೀಕ್ಷೆ ಇದೆ. 2024ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದಾದರೆ, ಸರ್ಕಾರದಿಂದ ಆಗುವ ವೆಚ್ಚಗಳು ಹೆಚ್ಚಾಗಲಿದೆ. ಇದರಿಂದಾಗಿ ಸಿಮೆಂಟ್‌ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ವಲಯಗಳಿಗೆ ಉತ್ತೇಜನ ಸಿಗಲಿದೆ’

– ವಿ.ಕೆ. ವಿಜಯಕುಮಾರ್

ಬ್ಯಾಂಕ್‌ಗಳ ಲಾಭದ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿರುವ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಹೆಚ್ಚು ಲಾಭ ತಂದುಕೊಡಬಹುದು. ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯ ಮೂಲಕ ವಿಶ್ವದರ್ಜೆಯ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿದೆ. ಹೀಗಾಗಿ ಮೂಲಸೌಕರ್ಯ ಅಭಿವೃದ್ಧಿ ವಲಯದ ಮೇಲೆ ಗಮನ ಇರಿಸಬಹುದು. ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರವು ಯೋಜನೆ ರೂಪಿಸಿದೆ. ಇದರಿಂದಾಗಿ ರಕ್ಷಣಾ ವಲಯದ ಷೇರುಗಳಲ್ಲಿ ಹೆಚ್ಚಿನ ಗಳಿಕೆ ಸಾಧ್ಯವಾಗಬಹುದು

– ರುಚಿತ್ ಜೈನ್

2014ರ ನಂತರದ ಬೆಳವಣಿಗೆಯ ಕುರಿತು...

ನರೇಂದ್ರ ಮೋದಿ ನೇತೃತ್ವದ ಸರ್ಕಾರವು 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಸೆನ್ಸೆಕ್ಸ್ ಸರಿಸುಮಾರು ಮೂರು ಪಟ್ಟು ಬೆಳೆದಿದೆ. ಇದಕ್ಕೆ ಕಾರಣಗಳು ಏನಿರಬಹುದು ಎಂಬ ಪ್ರಶ್ನೆಯನ್ನು ಮುಂದಿರಿಸಿದಾಗ ಜೈನ್ ಅವರು, ‘ಮೋದಿ ನೇತೃತ್ವದ ಸರ್ಕಾರವು ಕೈಗೊಂಡ ಕ್ರಮಗಳಿಂದಾಗಿ ದೇಶದ ಅರ್ಥವ್ಯವಸ್ಥೆಯು ಇತರ ಹಲವು ದೇಶಗಳ ಅರ್ಥ ವ್ಯವಸ್ಥೆಗಳಿಗಿಂತ ಹೆಚ್ಚು ಸದೃಢವಾಗಿದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಬಲಿಷ್ಠವಾಗಿದೆ. ಎಫ್‌ಡಿಐ ಒಳಹರಿವು ಚೆನ್ನಾಗಿದೆ. ಹಣಕಾಸಿನ ಸ್ಥಿತಿಯು ಉತ್ತಮವಾಗುತ್ತಿದೆ. ಡಿಜಿಟಲ್ ಮೂಲಸೌಕರ್ಯದಲ್ಲಿ ದೇಶವು ತ್ವರಿತ ಬೆಳವಣಿಗೆಯನ್ನು ಕಂಡಿದೆ. ಸುಧಾರಣೆಗಳು ವೇಗ ಪಡೆದುಕೊಂಡಿವೆ’ ಎಂದು ವಿವರಿಸಿದರು.

‘2014ರಿಂದ 2023ರವರೆಗಿನ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಅಸಾಧಾರಣ ಎನ್ನುವ ‌ಯಾವುದೇ ಬೆಳವಣಿಗೆ ಆಗಿಲ್ಲ. 2014ರ ಜನವರಿಯಲ್ಲಿ 21 ಸಾವಿರ ಅಂಶಗಳಲ್ಲಿ ಇದ್ದ ಸೆನ್ಸೆಕ್ಸ್‌ 2023ರಲ್ಲಿ 63 ಸಾವಿರಕ್ಕೆ ಏರಿಕೆ ಕಂಡಿದೆ. ಇದು ಸಹಜವಾದ ಬೆಳವಣಿಗೆಯೇ ಹೊರತು ವಿಶೇಷವಾಗಿ ಗುರುತಿಸುವಂಥದ್ದು ಇಲ್ಲಿ ಏನೂ ಇಲ್ಲ’ ಎಂದು ವಿಜಯಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT