ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ದೇಶದಲ್ಲಿವೆ 718 ಹಿಮಚಿರತೆಗಳು...
ಆಳ–ಅಗಲ: ದೇಶದಲ್ಲಿವೆ 718 ಹಿಮಚಿರತೆಗಳು...
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಹಿಮಚಿರತೆಗಳ ಸಂಖ್ಯೆ, ಜೀವನ ಕ್ರಮ, ಆಹಾರ ಕ್ರಮ, ಆವಾಸ ಸ್ಥಾನಗಳ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದ ಗಣತಿಯು 2023ರಲ್ಲಿ ನಡೆದಿತ್ತು. ಹಲವು ತಿಂಗಳ ಕ್ಷೇತ್ರ ಅಧ್ಯಯನ, ಇನ್ನಷ್ಟು ತಿಂಗಳಲ್ಲಿ ದತ್ತಾಂಶಗಳ ಸಂಸ್ಕರಣೆ ಮತ್ತು ವಿಶ್ಲೇಷಣೆಯ ನಂತರ ಸಿದ್ಧಪಡಿಸಿದ ಹಿಮಚಿರತೆ ಸ್ಥಿತಿಗತಿ ವರದಿಯು ಮಂಗಳವಾರ ಬಿಡುಗಡೆಯಾಗಿದೆ. ವೈಜ್ಞಾನಿಕ ವಿಧಾನಗಳ ಮೂಲಕ ಅತ್ಯಂತ ಕರಾರುವಕ್ಕಾಗಿ ನಡೆಸಲಾದ ಮೊದಲ ಹಿಮಚರಿತೆ ವರದಿ ಇದು ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ದೇಶದಲ್ಲಿ ಎಲ್ಲೆಲ್ಲಿ ಹಿಮಚಿರತೆಗಳಿವೆ, ಅವುಗಳ ಸ್ಥಿತಿಗತಿ ಕುರಿತ ವಿಸ್ತೃತ ಮಾಹಿತಿಯನ್ನು ಒಳಗೊಂಡ ವರದಿ ಇದು. ಈ ವರದಿಯ ಪ್ರಕಾರ ದೇಶದಲ್ಲಿ ಈಗ 700ಕ್ಕೂ ಹೆಚ್ಚು ಹಿಮಚಿರತೆಗಳಿವೆ.

ಹಿಮ ಚಿರತೆ. ಲಡಾಖ್‌ನ ಜನಪದ ಕಲಾ ಪ್ರಕಾರ ಗಳಲ್ಲಿ ಪ್ರಧಾನ ಸ್ಥಾನ ಪಡೆದ ಒಂದು ಬೇಟೆ ಪ್ರಾಣಿ. ಅದು ದೇವತೆಯೂ ಹೌದು, ಕಾವಲುಗಾರನೂ ಹೌದು. ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಮಹಾ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಇರುವ ಬುಡಕಟ್ಟು ಸಮುದಾಯಗಳ ಕಲಾ ಪ್ರಕಾರಗಳಲ್ಲೂ ಹಿಮಚಿರತೆಗೆ ಇಂಥದ್ದೇ ಸ್ಥಾನವಿದೆ. ಸಾಂಸ್ಕೃತಿಕವಾಗಿ ಮಾತ್ರವಲ್ಲ, ಜೀವ ವೈವಿಧ್ಯದ ದೃಷ್ಟಿಯಿಂದಲೂ ಅತ್ಯಂತ ಮಹತ್ವದ ಪ್ರಭೇದವಿದು. ಭಾರತದಲ್ಲಿ ಎಷ್ಟು ಹಿಮಚಿರತೆಗಳಿವೆ, ಪರಿಸರ ಸಮತೋಲನ ಕಾಯುವಲ್ಲಿ ಅವುಗಳ ಮಹತ್ವವೇನು ಎಂಬುದರ ಬಗ್ಗೆ ವಿಸ್ತೃತವಾದ ಅಧ್ಯಯನಗಳು ನಡೆದಿರಲಿಲ್ಲ. ಜಗತ್ತಿನ ಒಟ್ಟು ಹಿಮಚಿರತೆಗಳ ಸಂಖ್ಯೆಯಲ್ಲಿ ಭಾರತದಲ್ಲಿನ ಹಿಮಚಿರತೆಗಳ ಪಾಲು ಸರಿಸುಮಾರು ಶೇ 10ರಷ್ಟು ಎಂದು 1980ರಲ್ಲಿ ಅಂದಾಜಿಸಲಾಗಿತ್ತು. ಆನಂತರದಲ್ಲಿ ಅವುಗಳ ಸಂಖ್ಯೆಯನ್ನು ಅಂದಾಜಿಸುವ ಹಲವು ಅಧ್ಯಯನಗಳು ನಡೆದಿದ್ದವು. ಆದರೆ ಇದೇ ಮೊದಲ ಬಾರಿಗೆ ವೈಜ್ಞಾನಿಕವಾಗಿ ಹಿಮಚಿರತೆಗಳ ಗಣತಿ ನಡೆಸಲಾಗಿದೆ.

ಭಾರತದ ಮೂರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಷ್ಟೇ ಹಿಮಚಿರತೆಗಳಿವೆ. ಅದೂ ಸಮುದ್ರಮಟ್ಟದಿಂದ 3,000 ಮೀಟರ್‌ನಿಂದ 5,200 ಮೀಟರ್‌ ಎತ್ತರವಿರುವ ಪ್ರದೇಶಗಳಲ್ಲಿ ಇವುಗಳ ಇರುವಿಕೆ ಹೆಚ್ಚು. ಸಮುದ್ರಮಟ್ಟದಿಂದ 2,700 ಮೀಟರ್‌ ಎತ್ತರದಲ್ಲಿ ಇರುವ ಪ್ರದೇಶಗಳಲ್ಲಿ ಕೆಲವು ಹಿಮಚಿರತೆಗಳನ್ನು ಗುರುತಿಸಲು ಆಗಿದ್ದರೂ, ಅವುಗಳ ಪ್ರಾಥಮಿಕ ಆವಾಸಸ್ಥಾನ ಇರುವುದು 3,000 ಮೀಟರ್ ಎತ್ತರವಿರುವ ಪ್ರದೇಶಗಳಲ್ಲೇ. ಇಷ್ಟು ಸೀಮಿತ ಪ್ರದೇಶದಲ್ಲಿ ಇರುವ ಕಾರಣಕ್ಕೇ, ಹಿಮಚಿರತೆಗಳ ಕುರಿತು ಸಣ್ಣ ನಿರ್ಲಕ್ಷ್ಯವಿದೆ. ಅವುಗಳ ಗಣತಿ ನಡೆಯದೇ ಇದ್ದುದಕ್ಕೂ ಇದೇ ಕಾರಣ. ಆದರೆ, ಜೀವವೈವಿಧ್ಯದ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ ಪ್ರಭೇದವಾಗಿದೆ.

ದಕ್ಷಿಣ ಭಾರತ, ಉತ್ತರ ಮತ್ತು ಮಧ್ಯ ಭಾರತದ ಬಯಲು ಪ್ರದೇಶ, ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶದ ಕಾಡುಗಳಲ್ಲಿ ಹುಲಿಯೇ ಪ್ರಧಾನ ಬೇಟೆಗಾರ. ಅಲ್ಲಿನ ಆಹಾರದ ಪಿರಮಿಡ್‌ನಲ್ಲಿ ಅತ್ಯಂತ ತುದಿಯಲ್ಲಿರುವ ಪ್ರಾಣಿ ಹುಲಿ. ಆಹಾರ ಸರಪಳಿ, ಪರಿಸರ ವ್ಯವಸ್ಥೆಯಲ್ಲಿ ಹುಲಿಯೇ ಪ್ರಧಾನ. ಈ ಪರಿಸರಗಳಲ್ಲಿ ಸಮತೋಲನ ಕಾಯ್ದುಕೊಳ್ಳುವಲ್ಲಿ ಹುಲಿಗೆ ಎಷ್ಟು ಮಹತ್ವವಿದೆಯೋ, ಮಹಾ ಹಿಮಾಲಯ
ಪ್ರದೇಶಗಳಲ್ಲಿನ ಪರಿಸರವನ್ನು ಕಾಯ್ದುಕೊಳ್ಳುವಲ್ಲಿ ಹಿಮಚಿರತೆಗೆ ಅಷ್ಟೇ ಮಹತ್ವವಿದೆ.

ಏಕೆಂದರೆ ಮಹಾ ಹಿಮಾಲಯ ಪ್ರದೇಶಗಳಲ್ಲಿ ಹಿಮಚಿರತೆಯೇ ಪ್ರಧಾನ ಬೇಟೆಗಾರ. ಅಲ್ಲಿನ ಆಹಾರ ಪಿರಮಿಡ್‌ನ ತುತ್ತತುದಿಯಲ್ಲಿ ಇರುವುದು ಹಿಮಚಿರತೆಯೇ ಮತ್ತು ಅಲ್ಲಿನ ಪರಿಸರ ಸಮತೋಲನದಲ್ಲಿ ಪ್ರಧಾನ ಪಾತ್ರ ವಹಿಸುವುದೂ ಹಿಮಚಿರತೆಯೇ. ಈ ಪ್ರದೇಶಗಳಲ್ಲಿ ಯಥೇಚ್ಛವಾಗಿ ಇರುವ ನೀಲಿಕುರಿ, ಜಿಂಕೆ ಮತ್ತಿತರ ಬಲಿ ಪ್ರಾಣಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಹಿಮಚಿರತೆಗಳೇ. ಇಲ್ಲದಿದ್ದಲ್ಲಿ ಈ ಪ್ರದೇಶದಲ್ಲಿ ಬಲಿ ಪ್ರಾಣಿಗಳ ಸಂಖ್ಯೆ ಏರಿಕೆಯಾಗಿ, ಹಸಿರು ಕ್ಷೀಣಿಸುತ್ತದೆ. ಮೊದಲೇ ಸಡಿಲವಾಗಿರುವ ಹಿಮಾಲಯದ ಮಣ್ಣನ್ನು ಅದು ಇನ್ನಷ್ಟು ಸಡಿಲ ಮಾಡುತ್ತದೆ. ಪರಿಣಾಮವಾಗಿ ಅದು ಭೂಕುಸಿತಕ್ಕೆ ಕಾರಣವಾಗುವುದಲ್ಲದೇ, ಹಿಮನದಿಗಳ ಪರಿಸರಕ್ಕೂ ಧಕ್ಕೆ ತರುತ್ತದೆ. ಈ ಎಲ್ಲವನ್ನೂ ನಿಯಂತ್ರಣದಲ್ಲಿ ಇಡುವುದು ಹಿಮಚಿರತೆ. ಅದು ಇಲ್ಲಿನ ‘ಕೀಸ್ಟೋನ್‌’ ಪ್ರಭೇದ (ಪರಿಸರ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಭಾವಿಸುವ ಪ್ರಭೇದ). ಹೀಗಾಗಿಯೇ ಅದರ ಸಂರಕ್ಷಣೆ ಅತ್ಯಗತ್ಯವಾದುದು. ಆ ಸಂರಕ್ಷಣೆ ಯಲ್ಲಿನ ಈಗಿನ ವೈಜ್ಞಾನಿಕ ಗಣತಿಯು ಮಹತ್ವದ ಪಾತ್ರ ವಹಿಸಲಿದೆ.

‘ಸಂರಕ್ಷಣಗೆ ಒತ್ತು ನೀಡಿ’: ಈ ಗಣತಿಯ ಪ್ರಕಾರ ಒಟ್ಟು 1.07 ಲಕ್ಷ ಚದರ ಕಿ.ಮೀ. ಪ್ರದೇಶದಲ್ಲಿ ಹಿಮಚಿರತೆಗಳ ಆವಾಸಸ್ಥಾನ ವಿಸ್ತರಿಸಿದೆ. ಆದರೆ ಇವುಗಳಲ್ಲಿ ಸಂರಕ್ಷಿತ ಪ್ರದೇಶ ಎಂದು ಘೋಷಿತವಾಗಿರುವುದು ಶೇ 34ರಷ್ಟು ಪ್ರದೇಶ ಮಾತ್ರ. ಉಳಿದ ಶೇ 66ರಷ್ಟು ಪ್ರದೇಶವು ಮಾನವ ಚಟುವಟಿಕೆ ಇರುವ ಪ್ರದೇಶದ ಬಳಿಯೇ ಇದೆ. ಹಿಮಚಿರತೆ–ಮಾನವ ಸಂಘರ್ಷ ಗಣನೀಯ ಮಟ್ಟದಲ್ಲಿ ಇಲ್ಲವಾದರೂ, ಅವುಗಳ ಆವಾಸ ಸ್ಥಾನದ ಬಳಿ ಮಾನವನ ಚಟುವಟಿಕೆಗಳು ತೀವ್ರವಾದರೆ ಸಂಘರ್ಷ ಹೆಚ್ಚಾಗುವ ಅಪಾಯವಿದೆ. ಅದಕ್ಕೂ ಮುನ್ನವೇ ಸಂರಕ್ಷಣಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಕ್ಯಾಮೆರಾದಲ್ಲಿ 241 ಹಿಮಚಿರತೆಗಳು

ಮಹಾ ಹಿಮಾಲಯದ ಹಿಮಗಾಡಿನಲ್ಲಿ ಅಲೆದು ಹಿಮಚಿರತೆಗಳ ಹೆಜ್ಜೆಗುರುತುಗಳನ್ನು ಕಲೆ
ಹಾಕಲಾಗಿತ್ತು. ಹಿಮಚಿರತೆಗಳ ಹೆಜ್ಜೆಗುರುತುಗಳು, ಮೂತ್ರ ಸಿಂಪಡಿಸಿದ ಮರ/ಬಂಡೆಗಳು, ಮಲವನ್ನು ಗುರುತಿಸಲು ಸಂಶೋಧಕರು ಒಟ್ಟು 13,450 ಕಿ.ಮೀ.ನಷ್ಟು ದೂರವನ್ನು ಕ್ರಮಿಸಿದ್ದರು. ಜತೆಗೆ 1,971 ಸ್ಥಳಗಳಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್‌ ಸಾಧನಗಳನ್ನು ಅಳವಡಿಸಲಾಗಿತ್ತು. ಗಣತಿಯ ಅವಧಿಯಲ್ಲಿ ಈ ಕ್ಯಾಮೆರಾಗಳು ಸೆರೆಹಿಡಿದ ಚಿತ್ರಗಳ ಒಟ್ಟು ಸಂಖ್ಯೆ 20.2 ಲಕ್ಷದಷ್ಟು. ಅವುಗಳಲ್ಲಿ 196 ಪ್ರಭೇದಗಳಿಗೆ ಸೇರಿದ ಹಕ್ಕಿ–ಪಕ್ಷಿಗಳು ಮತ್ತು ಸಸ್ತನಿಗಳ ಚಿತ್ರಗಳಿದ್ದವು. ಅವೆಲ್ಲವನ್ನೂ ಒಂದೊಂದಾಗಿ ಪರಿಶೀಲಿಸಿ, ಹಿಮಚಿರತೆಗಳ ಚಿತ್ರಗಳನ್ನು ಪ್ರತ್ಯೇಕಿಸಲಾಗಿತ್ತು.

ಹಿಮಚಿರತೆಗಳ ಚಿತ್ರಗಳನ್ನೇನೋ ಪ್ರತ್ಯೇಕಿಸ ಲಾಗಿತ್ತು. ಆದರೆ, ಅವುಗಳಲ್ಲಿ ಎಷ್ಟು ಹಿಮಚಿರತೆಗಳ ಚಿತ್ರಗಳಿವೆ ಎಂಬುದನ್ನು ವಿಂಗಡಿಸುವುದು ಹೇಗೆ? ಹುಲಿಗಳನ್ನು ಅವುಗಳ ಪಟ್ಟೆಗಳ ಆಧಾರದಲ್ಲಿ
ಪ್ರತ್ಯೇಕಿಸುವಂತೆ, ಹಿಮಚಿರತೆಗಳನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಹೀಗಾಗಿ ಸಂಶೋಧಕರು ಬೇರೊಂದು ವಿಧಾನವನ್ನು ರೂಪಿಸಿಕೊಂಡಿದ್ದರು. ಅವುಗಳ ಹಣೆ ಮೇಲಿನ ತುಪ್ಪಳದ ವಿನ್ಯಾಸವು, ಪ್ರತಿ ಹಿಮಚಿರತೆಗೂ ವಿಶಿಷ್ಟ ರೀತಿಯಲ್ಲಿ ಇರುವುದನ್ನು ಕಂಡುಕೊಂಡಿದ್ದರು. ಈ ರೂಪದಲ್ಲಿ ಅವುಗಳನ್ನು ಪ್ರತ್ಯೇಕಿಸಲು ಕೃತಕ ಬುದ್ಧಿಮತ್ತೆ ಟೂಲ್‌ಗಳನ್ನು ಬಳಸಿಕೊಂಡರು. ಅಷ್ಟೂ ಚಿತ್ರಗಳನ್ನು ಕಂಪ್ಯೂಟರ್‌ ಮೂಲಕ ಹೀಗೆ ಪ್ರತ್ಯೇಕಿಸಲಾಯಿತು. ಹೀಗೆ ಒಟ್ಟು 241 ಹಿಮಚಿರತೆಗಳು ಈ ಚಿತ್ರಗಳಲ್ಲಿ ಸೆರೆಯಾಗಿವೆ ಎಂಬ ನಿರ್ಧಾರಕ್ಕೆ ಬರಲಾಯಿತು.

ಈ ಅಂಕಿಅಂಶಗಳೇ ಈ ಅಧ್ಯಯನದ ಅಗಾಧತೆಯನ್ನು ವಿವರಿಸುತ್ತವೆ. ಈ ಚಿತ್ರಗಳು, ಹೆಜ್ಜೆಗುರುತುಗಳು ಮತ್ತಿತರ ಗುರುತುಗಳನ್ನು ವಿಶ್ಲೇಷಿಸಿ ಈ ಪ್ರದೇಶದಲ್ಲಿ ಒಟ್ಟು 718 ಹಿಮಚಿರತೆಗಳಿವೆ ಎಂಬ ಅಂದಾಜಿಗೆ ಬರಲಾಗಿದೆ. 1980ರಲ್ಲಿ ಮಾಡಲಾಗಿದ್ದ ಅಂದಾಜಿಗೂ (400–700) ಈಗಿನ ಅಂದಾಜಿಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ ಈಗಿನದ್ದು, ಮೊದಲಿನದಕ್ಕಿಂತ ಹೆಚ್ಚು ಕರಾರುವಕ್ಕಾದ ಅಂದಾಜು.

‘ಸಂರಕ್ಷಣೆಗೆ ಒತ್ತು ನೀಡಿ’

ಈ ಗಣತಿಯ ಪ್ರಕಾರ ಒಟ್ಟು 1.07 ಲಕ್ಷ ಚದರ ಕಿ.ಮೀ. ಪ್ರದೇಶದಲ್ಲಿ ಹಿಮಚಿರತೆಗಳ ಆವಾಸಸ್ಥಾನ ವಿಸ್ತರಿಸಿದೆ. ಆದರೆ ಇವುಗಳಲ್ಲಿ ಸಂರಕ್ಷಿತ ಪ್ರದೇಶ ಎಂದು ಘೋಷಿತವಾಗಿರುವುದು ಶೇ 34ರಷ್ಟು ಪ್ರದೇಶ ಮಾತ್ರ. ಉಳಿದ ಶೇ 66ರಷ್ಟು ಪ್ರದೇಶವು ಮಾನವ ಚಟುವಟಿಕೆ ಇರುವ ಪ್ರದೇಶದ ಬಳಿಯೇ ಇದೆ. ಹಿಮಚಿರತೆ–ಮಾನವ ಸಂಘರ್ಷ ಗಣನೀಯ ಮಟ್ಟದಲ್ಲಿ ಇಲ್ಲವಾದರೂ, ಅವುಗಳ ಆವಾಸ ಸ್ಥಾನದ ಬಳಿ ಮಾನವನ ಚಟುವಟಿಕೆಗಳು ತೀವ್ರವಾದರೆ ಸಂಘರ್ಷ ಹೆಚ್ಚಾಗುವ ಅಪಾಯವಿದೆ. ಅದಕ್ಕೂ ಮುನ್ನವೇ ಸಂರಕ್ಷಣಾ ಕ್ರಮಗಳನ್ನು ಹೆಚ್ಚಿಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಹಿಮಚಿರತೆಗಳ ಸ್ಥಿತಿಗತಿಯ ಬಗ್ಗೆ ಸದಾ ಗಮನ ಇಡಬೇಕು. ಇದಕ್ಕಾಗಿ ನಿಯಮಿತವಾಗಿ ಇಂತಹ ಗಣತಿಯನ್ನು ನಡೆಸಬೇಕು. ಅವುಗಳ ಸಂಖ್ಯೆ, ಆವಾಸ ಸ್ಥಾನ ಮತ್ತು ಬಲಿ ಪ್ರಾಣಿಗಳ ಸಂಖ್ಯೆಯಲ್ಲಿ ಆಗುವ ಬದಲಾವಣೆಗಳನ್ನು ದಾಖಲಿಸಬೇಕು. ಪ್ರತಿಕೂಲ ಬದಲಾವಣೆಗಳಿದ್ದರೆ, ಅವನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

36,380 ಚದರ ಕಿ.ಮೀ.: ಹಿಮಚಿರತೆಗಳ ಆವಾಸ ಸ್ಥಾನದಲ್ಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿನ ವ್ಯಾಪ್ತಿ

71,214 ಚದರ ಕಿ.ಮೀ.: ಹಿಮಚಿರತೆಗಳ ಆವಾಸ ಸ್ಥಾನದಲ್ಲಿ ಸಂರಕ್ಷಿತ ಅರಣ್ಯಗಳಿಂದ ಹೊರಗಿರುವ ಪ್ರದೇಶದ ವ್ಯಾಪ್ತಿ

ಆಧಾರ: ಹಿಮಚಿರತೆಗಳ ಸ್ಥಿತಿಗತಿ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT