ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ತೂಗುಯ್ಯಾಲೆಯಲ್ಲಿ ‘ಸಿಂಧೂ ಜಲ ಒಪ್ಪಂದ’
ಆಳ–ಅಗಲ: ತೂಗುಯ್ಯಾಲೆಯಲ್ಲಿ ‘ಸಿಂಧೂ ಜಲ ಒಪ್ಪಂದ’
ಭಾರತ–ಪಾಕಿಸ್ತಾನದ ನಡುವೆ ಜಲವಿವಾದ ಉಲ್ಬಣ
Published 25 ಏಪ್ರಿಲ್ 2023, 20:35 IST
Last Updated 25 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ಭಾರತ ಹಾಗೂ ಪಾಕಿಸ್ತಾನ ನಡುವಣ ಏಕೈಕ ಯಶಸ್ವಿ ಒಡಂಬಂಡಿಕೆ ಎಂದು ಪರಿಗಣಿಸಲಾಗಿದ್ದ ‘ಸಿಂಧೂ ಜಲ ಒಪ್ಪಂದ’ ಇತ್ತೀಚಿನ ವರ್ಷಗಳಲ್ಲಿ ಪದೇ ಪದೇ ಬಿಕ್ಕಟ್ಟಿಗೆ  ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಕೈಗೊಂಡ ಕಿಶನ್‌ಗಂಗಾ ಹಾಗೂ ರತಲೆ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸುವುದನ್ನು ಮತ್ತೆ  ಮುಂದುವರಿಸಿದೆ. ಜಲ ಒಪ್ಪಂದದ ನಿಯಮಗಳನ್ನು ಜಾರಿಗೆ ತರುವಲ್ಲಿ ಪಾಕಿಸ್ತಾನ ಹಟಮಾರಿ ಧೋರಣೆ ತಳೆದಿದೆ ಎಂಬುದು ಭಾರತದ ಆಕ್ಷೇಪ. ಬಿಕ್ಕಟ್ಟು ನಿವಾರಣೆಗೆ ಕೆಲವು ಮಾರ್ಗಗಳನ್ನು ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಇವುಗಳ ಪೈಕಿ ಯಾವ ಮಾರ್ಗವನ್ನು ಆಯ್ದುಕೊಳ್ಳಬೇಕು ಎಂಬುದೇ ಈಗಿನ ದೊಡ್ಡ ಬಿಕ್ಕಟ್ಟಾಗಿ ಪರಿಣಮಿಸಿದೆ. ಹೀಗಾಗಿ ಒಡಂಬಡಿಕೆ ಈಗ ತೂಗುಯ್ಯಾಲೆಯಲ್ಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ. 

ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಹರಿಯುತ್ತಿರುವ ಸಿಂಧೂ ನದಿ ಹಾಗೂ ಅದರ ಉಪನದಿಗಳ ನೀರಿನ ಹಂಚಿಕೆ ಹಾಗೂ ಬಳಕೆಗೆ ಒಂದು ಸ್ಪಷ್ಟ ರೂಪ ನೀಡಿದ್ದು ಆರು ದಶಕಗಳ ಹಿಂದಿನ ‘ಸಿಂಧೂ ಜಲ ಒಪ್ಪಂದ’. ಜೀವನಾಡಿ ಎಂದು ಪರಿಗಣಿತವಾಗಿರುವ ಸಿಂಧೂ ನದಿ ಹಾಗೂ ಉಪನದಿಗಳು ಪಾಕಿಸ್ತಾನದ ಆರ್ಥಿಕತೆ ಹಾಗೂ ಆಹಾರ ಭದ್ರತೆಗೆ ಅಡಿಪಾಯ ಹಾಕಿವೆ. ಈ ನದಿಗಳಿಂದ ನೀರಾವರಿ ಹಾಗೂ ಜಲವಿದ್ಯುತ್ ಯೋಜನೆ ಕೈಗೊಳ್ಳಲು ಸಾಧ್ಯವಾಗಿದೆ. ಆದರೆ, ದಶಕಕ್ಕೂ ಹಿಂದಿನಿಂದ ಉಭಯ ದೇಶಗಳ ನಡುವೆ ಈ ಒಪ್ಪಂದ ಬಿಕ್ಕಟ್ಟು ಸೃಷ್ಟಿಸಿದೆ. ಭಾರತ ಸರ್ಕಾರವು ಜಮ್ಮು ಕಾಶ್ಮೀರದಲ್ಲಿ ನಿರ್ಮಿಸಿರುವ ಕಿಶನ್‌ಗಂಗಾ ಜಲವಿದ್ಯುತ್ ಯೋಜನೆ ಹಾಗೂ ನಿರ್ಮಾಣ ಹಂತದಲ್ಲಿರುವ ರತಲೆ ಜಲ ವಿದ್ಯುತ್‌ ಯೋಜನೆಗಳು ಪಾಕಿಸ್ತಾನದ ಆಕ್ಷೇಪ ಎದುರಿಸುತ್ತಿವೆ. 

ಆದರೆ, ಜಲವಿದ್ಯುತ್ ಯೋಜನೆ ಹಮ್ಮಿಕೊಳ್ಳಲು ಒಪ್ಪಂದದಲ್ಲೇ ಅವಕಾಶವಿದೆ ಎಂಬುದು ಭಾರತದ ಪ್ರತಿಪಾದನೆ. ಪಾಕಿಸ್ತಾನದ ಆಕ್ಷೇಪದ ನಡುವೆಯೂ 2018ರಲ್ಲಿ, ಝೇಲಂ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಸಿಕೊಂಡು 330 ಮೆಗಾವಾಟ್ ಸಾಮರ್ಥ್ಯದ ಕಿಶನ್‌ಗಂಗಾ ವಿದ್ಯುತ್‌ ಯೋಜನೆಗೆ ಭಾರತ ಚಾಲನೆ ನೀಡಿತ್ತು. ಬಳಿಕ, 850 ಮೆಗಾವಾಟ್ ಸಾಮರ್ಥ್ಯದ ರತಲೆ ಜಲವಿದ್ಯುತ್ ಯೋಜನೆಯ ಕಾಮಗಾರಿ ಶುರುಮಾಡಿತು. ಭಾರತದ ಈ ಎರಡು ಜಲವಿದ್ಯುತ್ ಯೋಜನೆಗಳಿಂದ ತನ್ನ ಪಾಲಿನ ನದಿ ನೀರಿನ ಹರಿವಿನಲ್ಲಿ ಇಳಿಕೆಯಾಗುತ್ತದೆ ಎಂಬುದು ಪಾಕಿಸ್ತಾನದ ವಾದ. ಈ ಜಲವಿದ್ಯುತ್ ಯೋಜನೆಯಿಂದ ತನ್ನ ದೇಶದ ಆಹಾರ ಭದ್ರತೆಗೆ ಅಪಾಯ ಎದುರಾಗುತ್ತದೆ ಎಂದು ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. 

ನೀರು ಹಂಚಿಕೆ ಹಾಗೂ ಬಳಕೆ ಕುರಿತಂತೆ ಉಂಟಾಗುವ ಗೊಂದಲಗಳನ್ನು ಪರಿಹರಿಸಿಕೊಳ್ಳುವ ಸೂತ್ರಗಳನ್ನು ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ. ಒಪ್ಪಂದದ 9ನೇ ನಿಯಮದಲ್ಲಿ ಈ ಮಾಹಿತಿಯಿದ್ದು, ಮೂರು ರೀತಿಯ ಪರಿಹಾರೋಪಾಯಗಳನ್ನು ವಿವರಿಸಲಾಗಿದೆ. ‘ಪ್ರಶ್ನೆಗಳು’, ‘ಭಿನ್ನಾಭಿಪ್ರಾಯಗಳು’ ಮತ್ತು ‘ಬಿಕ್ಕಟ್ಟುಗಳು’ ಎಂಬುದಾಗಿ ಮೂರು ಹಂತಗಳನ್ನು ವಿವರಿಸಲಾಗಿದೆ. ಆದರೆ, ಬಿಕ್ಕಟ್ಟು ಪರಿಹಾರಕ್ಕೆ ಇವುಗಳ ಪೈಕಿ ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದೇ ಈಗ ಹೊಸ ಬಿಕ್ಕಟ್ಟಾಗಿ ಪರಿಣಮಿಸಿದೆ. 

ಮೊದಲ ಹಂತದಲ್ಲಿ, ಒಪ್ಪಂದ ಕುರಿತು ಏಳುವ ಗೊಂದಲಗಳು ಹಾಗೂ ಪ್ರಶ್ನೆಗಳನ್ನು ಕಾಯಂ ಆಯೋಗದ ಸಭೆಯಲ್ಲಿ ಪ್ರಸ್ತಾಪಿಸಬೇಕು. ಉಭಯ ದೇಶಗಳ ತಲಾ ಒಬ್ಬ ಆಯುಕ್ತರನ್ನು ಒಳಗೊಂಡ ‘ಕಾಯಂ ಆಯೋಗ’ವು ಒಪ್ಪಂದ ಜಾರಿಯಾದ ಸಮಯದಿಂದಲೇ ಇದೆ. ಕಾಯಂ ಆಯೋಗವು ಈ ಪ್ರಶ್ನೆಗಳನ್ನು ಪರಿಶೀಲಿಸಿ, ಗೊಂದಲಗಳನ್ನು ಪರಿಹರಿಸುವ ಕೆಲಸ ಮಾಡುತ್ತದೆ. ಎರಡನೇ ಹಂತದಲ್ಲಿ, ‘ಭಿನ್ನಾಭಿಪ್ರಾಯ’ ಸ್ವರೂಪದ ಸಮಸ್ಯೆಗಳು ಉಂಟಾದಲ್ಲಿ ಅದನ್ನು ತಟಸ್ಥ ತಜ್ಞ (neutral expert) ನಿರ್ವಹಿಸಬೇಕು. ಉಭಯ ದೇಶಗಳ ಕೋರಿಕೆಯ ಮೇರೆಗೆ ತಟಸ್ಥ ತಜ್ಞರೊಬ್ಬರನ್ನು ವಿಶ್ವಬ್ಯಾಂಕ್ ನೇಮಿಸುತ್ತದೆ. ಮೂರನೇ ಹಂತದಲ್ಲಿ, ‘ಬಿಕ್ಕಟ್ಟು’ ಸ್ವರೂಪದ ಸಮಸ್ಯೆಗಳು ತಲೆದೋರಿದರೆ, ಹೇಗ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಬೇಕು ಎಂದು ಒಪ್ಪಂದದಲ್ಲಿ ಹೇಳಲಾಗಿದೆ. 

ಕಿಶನ್‌ಗಂಗಾ ಯೋಜನೆಯನ್ನು ಭಾರತ ಆರಂಭಿಸಿದಾಗ ಪಾಕಿಸ್ತಾನವು ಇದನ್ನು ‘ಬಿಕ್ಕಟ್ಟು’ ಎಂದು ಪರಿಗಣಿಸಿ, ವಿಶ್ವಬ್ಯಾಂಕ್ ಸ್ಥಾಪಿಸಿರುವ ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. 2013ರಲ್ಲಿ ಭಾರತದ ಪರವಾಗಿ ತೀರ್ಪು ನೀಡಿದ್ದ ನ್ಯಾಯಾಲಯವು, ಕೆಲವು ಮಾರ್ಪಾಡುಗಳೊಂದಿಗೆ ಯೋಜನೆ ಮುಂದುವರಿಸಲು ಸೂಚಿಸಿತ್ತು. ತೀರ್ಪಿನಿಂದ ಹಿನ್ನಡೆ ಕಂಡಿದ್ದ ಪಾಕಿಸ್ತಾನ, ಯೋಜನೆಯ ವಿನ್ಯಾಸದಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ಆಕ್ಷೇಪಿಸಿತ್ತು. ಇದನ್ನು ಬಗೆಹರಿಸಲು ತಟಸ್ಥ ತಜ್ಞರನ್ನು ನೇಮಿಸುವಂತೆ 2016ರಲ್ಲಿ ಮನವಿ ಮಾಡಿತ್ತು. ಇದಕ್ಕೆ ಭಾರತವೂ ಒಪ್ಪಿತ್ತು. ಆದರೆ, ಭಾರತದ ಒಪ್ಪಿಗೆ ಸೂಚಿಸಿದ್ದರೂ, ತನ್ನ ನಿಲುವು ಬದಲಿಸಿದ್ದ ಪಾಕಿಸ್ತಾನ, ಈ ವಿಚಾರವನ್ನು ಬಗೆಹರಿಸಲು ಮಧ್ಯಸ್ಥಿಕೆ ನ್ಯಾಯಾಲಯದ ಮೊರೆ ಹೋಗಿತ್ತು. 

ಪಾಕಿಸ್ತಾನದ ಈ ಗೊಂದಲದ ನಡೆಯಿಂದಾಗಿ, ಎರಡು ಸ್ವರೂಪದ ಪರಿಹಾರ ಪ್ರಕ್ರಿಯೆಗಳು ಏಕಕಾಲಕ್ಕೆ ಆರಂಭವಾಗುವಂತಾಯಿತು. ಇದು ಹೊಸ ಬಿಕ್ಕಟ್ಟಿಗೆ ಕಾರಣವಾಯಿತು. ಗೊಂದಲ ಉಂಟಾಗಿದ್ದರಿಂದ ಎರಡೂ ಸ್ವರೂಪದ ಪ್ರಕ್ರಿಯೆಗಳನ್ನು ವಿಶ್ವಬ್ಯಾಂಕ್ ಸ್ಥಗಿತಗೊಳಿಸಿತು. ಆದರೆ ಈ ಪ್ರಕ್ರಿಯೆಗಳನ್ನು ದೀರ್ಘಕಾಲದವರೆಗೆ  ಸ್ಥಗಿತಗೊಳಿಸಿದರೆ ಸಿಂಧೂ ಜಲ ಒಪ್ಪಂದದ ಭವಿಷ್ಯವು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ಭಾವಿಸಿದ ವಿಶ್ವಬ್ಯಾಂಕ್, ಕ್ಲಿಷ್ಟ ಎನಿಸಿದರೂ ಎರಡೂ ಪ್ರಕ್ರಿಯೆಗಳಿಗೆ ಮರು ಚಾಲನೆ ನೀಡುವ ನಿರ್ಧಾರ ಪ್ರಕಟಿಸಿತು. ತಟಸ್ಥ ತಜ್ಞರಾಗಿ ಮೈಕಲ್ ಲಿನೊ ಎಂಬವರನ್ನೂ, ಮಧ್ಯಸ್ಥಿಕೆ ನ್ಯಾಯಾಲಯದ ಅಧ್ಯಕ್ಷರನ್ನಾಗಿ ಸೀನ್ ಮರ್ಫಿ ಎಂಬವರನ್ನು ಕಳೆದ ವರ್ಷ ನೇಮಿಸಿತ್ತು. ಆದರೆ ವಿಶ್ವಬ್ಯಾಂಕ್‌ನ ಈ ನಿಲುವನ್ನು ಒಪ್ಪದ ಭಾರತ, ಇದೇ ಜನವರಿ 27ರಿಂದ ಆರಂಭವಾದ ಮಧ್ಯಸ್ಥಿಕೆ ನ್ಯಾಯಾಲಯದ ವಿಚಾರಣೆಯನ್ನು ಬಹಿಷ್ಕರಿಸಿದೆ. 

ಭಾರತ ಹೇಳುವುದೇನು: 

  • ತಟಸ್ಥ ತಜ್ಞರು ಈಗಾಗಲೇ ವಿಚಾರಣೆ ನಡೆಸುತ್ತಿರುವ ವಿಷಯದಲ್ಲಿ ಮಧ್ಯಸ್ಥಿಕೆ ನ್ಯಾಯಾಲಯವು ನ್ಯಾಯತೀರ್ಮಾನ ಮಾಡುವಂತಿಲ್ಲ ಎಂದು ನಿಯಮ 9(6) ಹೇಳುತ್ತದೆ 

  • ಈ ರೀತಿ ಎರಡೂ ಸ್ವರೂಪದ ಪ್ರಕ್ರಿಯೆಗಳನ್ನು ಏಕಕಾಲಕ್ಕೆ ಆರಂಭಿಸುವುದೂ ಸಿಂಧೂ ಜಲ ಒಪ್ಪಂದದ ಸ್ಪಷ್ಟ ಉಲ್ಲಂಘನೆ

  • ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದ ಏರ್ಪಟ್ಟಿದೆ ಎಂದ ಮಾತ್ರಕ್ಕೆ ವಿಶ್ವಬ್ಯಾಂಕ್‌ಗೆ ಪರಮಾಧಿಕಾರವಿಲ್ಲ

  • ಒಪ್ಪಂದವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಲು ವಿಶ್ವಬ್ಯಾಂಕ್‌ಗೆ ಅಧಿಕಾರವಿಲ್ಲ

  • ಒಂದು ವೇಳೆ ಎರಡು ಸ್ವರೂಪದ ವಿಚಾರಣಾ ಪ್ರಕ್ರಿಯೆಗಳಿಂದ ಭಿನ್ನ ತೀರ್ಪು ಹೊರಬಂದಾಗ, ಅದು ಮತ್ತೊಂದು ಬಿಕ್ಕಟ್ಟಿಗೆ ಕಾರಣವಾಗಬಹುದು

ತಿದ್ದುಪಡಿ ಪ್ರಸ್ತಾಪಿಸಿದ ಭಾರತ
ಜಲವಿದ್ಯುತ್ ಯೋಜನೆಗೆ ಒಪ್ಪಂದದಲ್ಲಿ ಅವಕಾಶವಿದ್ದರೂ ಪಾಕಿಸ್ತಾನ ಪದೇ ಪದೇ ಈ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುತ್ತಿರುವುದು ಭಾರತವನ್ನು ಕೆರಳಿಸಿದೆ. ಹೀಗಾಗಿ, ಒಪ್ಪಂದಕ್ಕೆ ತಿದ್ದುಪಡಿ ತರುವ ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದಕ್ಕೆ ಮುಂದಾಗಿದೆ. ಒಪ್ಪಂದ ಏರ್ಪಟ್ಟ 62 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ತಿದ್ದುಪಡಿ ಪ್ರಸ್ತಾವವನ್ನು ಭಾರತ ಮುಂದಿಟ್ಟಿದೆ. ಒಪ್ಪಂದದ ನಿಯಮ 12 (3)ರ ಪ್ರಕಾರ ನೋಟಿಸ್ ನೀಡಲಾಗಿದೆ. ಆರು ದಶಕದಷ್ಟು ಹಳೆಯ ಒಪ್ಪಂದವು ಹವಾಮಾನ ವೈಪರೀತ್ಯ ಹಾಗೂ ಜಾಗತಿಕ ತಾಪಮಾನ ವಿಚಾರಗಳನ್ನು ಒಳಗೊಂಡಿದೆ. ತಿದ್ದುಪಡಿ ಮಾಡುವ ಮೂಲಕ, ಈ ಅಂಶಗಳನ್ನು ಒಪ್ಪಂದಕ್ಕೆ ಹೊಸದಾಗಿ ಸೇರ್ಪಡೆ ಮಾಡಬೇಕು ಎಂಬುದು ಭಾರತದ ಒತ್ತಾಸೆ. 

ಭಾರತ ನೀಡಿದ್ದ ನೋಟಿಸ್‌ಗೆ ಪಾಕಿಸ್ತಾನ ಏಪ್ರಿಲ್ 7ರಂದು ಉತ್ತರ ನೀಡಿದೆ. ಉತ್ತರದಲ್ಲಿ ಏನಿದೆ ಎಂಬುದು ಬಹಿರಂಗವಾಗಿಲ್ಲ. ಪಾಕಿಸ್ತಾನದ ಉತ್ತರವನ್ನು ಪರಿಶೀಲಿಸಲಾಗುತ್ತಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಒಪ್ಪಂದದ ಕುರಿತಂತೆ ಭಾರತ ವ್ಯಕ್ತಪಡಿಸಿರುವ ಆತಂಕಗಳನ್ನು ಕಾಯಂ ಆಯೋಗದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಪಾಕಿಸ್ತಾನ ಹೇಳಿದೆ ಎಂಬುದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಭಾರತದ ಆತಂಕಗಳನ್ನು ಪರಿಶೀಲಿಸಿದ ಬಳಿಕ, ಒಪ್ಪಂದಕ್ಕೆ ತಿದ್ದುಪಡಿ ತರುವ ಮಾತುಕತೆಯ ಬಗ್ಗೆ ಪಾಕಿಸ್ತಾನ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಲ್ಲಿನ ಅಟಾರ್ನಿ ಜನರಲ್ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಪತ್ರಿಕೆಗಳು ವರದಿ ಮಾಡಿವೆ. ಪಾಕಿಸ್ತಾನದ ಉತ್ತರಕ್ಕೆ ಭಾರತ ಯಾವ ರೀತಿ ಪ್ರತ್ಯುತ್ತರ ನೀಡಲಿದೆ ಹಾಗೂ ಅದಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಹೇಗಿರಲಿದೆ ಎಂಬುದರ ಮೇಲೆ ಸಿಂಧೂ ಜಲ ಒಪ್ಪಂದದ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

ಕಠಿಣವಾಗುತ್ತಿದೆ ಭಾರತದ ನಿಲುವು 
ಸಿಂಧೂ ಜಲ ಒಪ್ಪಂದ ಏರ್ಪಟ್ಟ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಮೊದಲಾದ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿಗಳು ಎದುರಾದಾಗಲೂ, ಈ ಒಪ್ಪಂದವನ್ನು ಕೈಬಿಡಲು ಎರಡೂ ದೇಶಗಳು ಮುಂದಾಗಿರಲಿಲ್ಲ. ಆದರೆ ಕೆಲ ವರ್ಷಗಳಿಂದ ನಡೆಯುತ್ತಿರುವ ಭಯೋತ್ಪಾದಕ ದಾಳಿ, ಒಪ್ಪಂದದ ಭವಿಷ್ಯವನ್ನು  ಅಡಕತ್ತರಿಯಲ್ಲಿ ಸಿಲುಕಿಸಿದೆ. ಒಪ್ಪಂದಕ್ಕೆ ತಿಲಾಂಜಲಿ ಹಾಡುವ ಧಾಟಿಯಲ್ಲಿ ಕೆಲವು ನಾಯಕರು ಮಾತನಾಡಿದ್ದಾರೆ.  2001–02ರ ಸಮಯದಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸೇನಾ ಬಿಕ್ಕಟ್ಟು ಉಂಟಾಗಿತ್ತು. ಭಾರತದ ಜಲಸಂಪನ್ಮೂಲ ಸಚಿವಾಲಯದ ಅಂದಿನ ಸಚಿವ ಬಿಜೊಯ್ ಚಕ್ರವರ್ತಿ ಅವರು ಒಪ್ಪಂದವನ್ನು ರದ್ದುಗೊಳಿಸುವ ಕುರಿತು ಮಾತನಾಡಿದ್ದರು. ‘ಒಂದು ವೇಳೆ ನಾವು ಒಪ್ಪಂದದಿಂದ ಹಿಂದೆ ಸರಿದರೆ, ಪಾಕಿಸ್ತಾನದಲ್ಲಿ ಬರ ಉಂಟಾಗಲಿದೆ. ಪ್ರತಿ ಹನಿ ನೀರಿಗಾಗಿ ಪಾಕಿಸ್ತಾನ ಬೇಡುವ ಪರಿಸ್ಥಿತಿ ಉಂಟಾಗುತ್ತದೆ’ ಎಂದು ಅವರು ಅಂದು ಎಚ್ಚರಿಕೆ ನೀಡಿದ್ದರು. ಜಮ್ಮು ಕಾಶ್ಮೀರದ ಉರಿ ಸೇನಾನೆಲೆಯ ಮೇಲೆ 2016ರಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈ ಸಮಯದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ನೀರು ಮತ್ತು ರಕ್ತ ಒಂದೇ ಮಾರ್ಗದಲ್ಲಿ ಹರಿಯಲು ಸಾಧ್ಯವಿಲ್ಲ’ ಎಂದು ಹೇಳಿದ್ದರು.  2019ರಲ್ಲಿ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತದ 40 ಯೋಧರು ಮೃತಪಟ್ಟಿದ್ದರು. ಈ ವೇಳೆ ಮಾತನಾಡಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದರು. ಪಾಕಿಸ್ತಾನಕ್ಕೆ ಹರಿಯುವ ನೀರನ್ನು ಜಲ ಒಪ್ಪಂದಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಡೆಯುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು 2019ರ ಆಗಸ್ಟ್‌ನಲ್ಲಿ ಹೇಳಿದ್ದರು. ಆದರೆ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿಯುವುದರಿಂದ ಭಾರತಕ್ಕೆ ಲಾಭವಾಗುವುದಿಲ್ಲ ಎನ್ನುತ್ತಾರೆ ತಜ್ಞರು. ಒಂದು ವೇಳೆ ಒಪ್ಪಂದವನ್ನು ಭಾರತ ರದ್ದುಗೊಳಿಸಿದರೆ, ಪಾಕಿಸ್ತಾನವು ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿ, ಅನುಕಂಪ ಗಿಟ್ಟಿಸುವ ಸಾಧ್ಯತೆಯಿದೆ. ಇದಕ್ಕಿಂತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳುವುದು ಒಳಿತು ಎಂದು ವಿಶ್ಲೇಷಿಸಲಾಗಿದೆ. 

 ಸಿಂದೂ ನದಿ ಒಪ್ಪಂದ  

ಒಂಬತ್ತು ವರ್ಷಗಳ ಮಾತುಕತೆಯ ಬಳಿಕ, ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ 1960ರ ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಸಿಂಧೂ ನದಿ ಒಪ್ಪಂದ (ಐಡಬ್ಲುಟಿ) ಏರ್ಪಟ್ಟಿತ್ತು. ವಿಶ್ವಬ್ಯಾಂಕ್‌ನ ಅಂದಿನ ಅಧ್ಯಕ್ಷ ಯೂಜೀನ್‌ ಬ್ಯ್ಲಾಕ್  ಅವರ ಸಮ್ಮುಖದಲ್ಲಿ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್‌ ನೆಹರೂ, ಪಾಕಿಸ್ತಾನದ ಅಂದಿನ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದರು. ಸಿಂಧೂ ನದಿ ಹಾಗೂ ಅದರ ಉಪನದಿಗಳಾದ ರಾವಿ, ಬಿಯಾಸ್, ಸಟ್ಲೆಜ್, ಝೇಲಂ ಹಾಗೂ ಚೆನಾಬ್ ನದಿಗಳ ನೀರಿನ ಬಳಕೆ ಹಾಗೂ ಹಂಚಿಕೆಯನ್ನು ಈ ಒಪ್ಪಂದ ವಿವರಿಸುತ್ತದೆ.

ಈ ಒಪ್ಪಂದದ ಪ್ರಕಾರ, ಪೂರ್ವದ ನದಿಗಳಾದ ರಾವಿ, ಬಿಯಾಸ್ ಹಾಗೂ ಸಟ್ಲೆಜ್ ನೀರು ಭಾರತಕ್ಕೆ ಸಂಬಂಧಿಸಿದ್ದರೆ, ಪಶ್ಚಿಮದ ನದಿಗಳಾದ ಚೆನಾಬ್, ಝೇಲಂ ಹಾಗೂ ಸಿಂಧೂ ನದಿಗಳ ನೀರು ಪಾಕಿಸ್ತಾನಕ್ಕೆ ಸೇರಿದೆ. ಆದರೆ ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿರುವ ಸಿಂಧೂ, ಚೆನಾಬ್ ಹಾಗೂ ಝೇಲಂ ನದಿಗಳ ವ್ಯಾಪ್ತಿಯಲ್ಲಿ ಜಲವಿದ್ಯುತ್ ಯೋಜನೆಯಂತಹ ಕಾಮಗಾರಿಗಳನ್ನು ನಡೆಸಲು ಒಪ್ಪಂದದಲ್ಲಿ ನಿರ್ಬಂಧಗಳಿಲ್ಲ. ಹಾಗೆಯೇ ಪಾಕಿಸ್ತಾನಕ್ಕೂ ಇಂತಹ ಅವಕಾಶವಿದೆ. 

ಜಲವಿದ್ಯುತ್ ಸ್ಥಾವರ ನಿರ್ಮಾಣ, ಪ್ರವಾಹ ನಿಯಂತ್ರಣ ಹಾಗೂ 150 ಟಿಎಂಸಿ ಅಡಿಗೂ ಹೆಚ್ಚು ಪ್ರಮಾಣದ ನೀರನ್ನು ಶೇಖರಣೆ ಮಾಡಲು ಭಾರತಕ್ಕೆ ಒಪ್ಪಂದದಲ್ಲಿ ಅವಕಾಶವಿದೆ. ಹೀಗಾಗಿ, ಕಿಶನ್‌ಗಂಗಾ ಹಾಗೂ ರತಲೆ ಜಲವಿದ್ಯುತ್ ಸ್ಥಾವರ ನಿರ್ಮಾಣ ಯೋಜನೆಗಳನ್ನು ಭಾರತ ಜಾರಿಗೊಳಿಸಿದೆ. ಆದರೆ ನೀರು ಶೇಖರಿಸಿಡುವ ಯತ್ನವನ್ನು ಈವರೆಗೆ ಮಾಡಿಲ್ಲ. ಅಲ್ಲದೆ, ತನ್ನ ವ್ಯಾಪ್ತಿಗೆ ಒಳಪಟ್ಟಿರುವ ಪೂರ್ವ ನದಿಗಳಲ್ಲೂ ಯಾವುದೇ ಜಲವಿದ್ಯುತ್ ಸ್ಥಾವರಗಳನ್ನು ಭಾರತ ನಿರ್ಮಿಸಿಲ್ಲ. 

ಆಧಾರ: ಪಿಟಿಐ, ದಿ ಡಿಪ್ಲೊಮ್ಯಾಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT