ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka | ಸಮಗ್ರ ಗ್ರಾಮೀಣಾಭಿವೃದ್ಧಿಯ ಪ್ರಗತಿ ಪಥದತ್ತ ನಮ್ಮ ಚಿತ್ತ: ಕೃಪಾ

ಕರ್ನಾಟಕ 50 | 25 ವರ್ಷಗಳ ಮುನ್ನೋಟ
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಸಮಗ್ರ ಗ್ರಾಮೀಣಾಭಿವೃಧ್ಧಿ ಸಾಧನೆಗೆ ದೃಢಸಂಕಲ್ಪ, ಒಳಗೊಳ್ಳುವಿಕೆಯ ಪ್ರಜಾಪ್ರಭುತ್ವದ ಆಚರಣೆಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ, ಜನತೆ ಸಿನಿಕತನ ತೊರೆದು ಮುನ್ನಡೆದರೆ, ಗ್ರಾಮ ಸ್ವರಾಜ್ಯದ ಸ್ಥಾಪನೆ ಕಷ್ಟವೇನಲ್ಲ

ಸ್ಥಳೀಯ ಸರ್ಕಾರಗಳ ಸ್ವಾಯತ್ತೆ ಮಹದಾಶಯದೊಂದಿಗೆ ಜಾರಿಯಾದ ಸಂವಿಧಾನದ 73ನೇ ತಿದ್ದುಪಡಿಗೆ 30ರ ಹರೆಯದೊಂದಿಗೆ ಕರ್ನಾಟಕ ರಾಜ್ಯಕ್ಕೆ ಸುವರ್ಣ ಸಂಭ್ರಮ. ಭಾರತದ ನಿಜವಾದ ಪ್ರಗತಿ ಎಂದರೆ ಕೇವಲ ಕೈಗಾರಿಕಾ ನಗರ ಕೇಂದ್ರಗಳ ಬೆಳವಣಿಗೆ ಮತ್ತು ವಿಸ್ತರಣೆ ಮಾತ್ರವಲ್ಲ, ಮುಖ್ಯವಾಗಿ ಹಳ್ಳಿಗಳ ಅಭಿವೃದ್ಧಿ ಎಂದು ಗಾಂಧೀಜಿಯವರು ಹೇಳಿದ್ದರು. ನಮ್ಮದು ಹಳ್ಳಿಗಳ ದೇಶ. ಇಂದಿಗೂ, ಭಾರತದ ಜನಸಂಖ್ಯೆಯ 70%ರಷ್ಟು ಜನರು ಗ್ರಾಮವಾಸಿಗಳಾಗಿದ್ದಾರೆ. ಭಾರತವು ವೇಗವಾಗಿ ನಗರೀಕರಣಗೊಳ್ಳುತ್ತಿದೆ ಎಂಬ ದೃಷ್ಟಿಕೋನದ ಹೊರತಾಗಿಯೂ, 2050ರ ಹೊತ್ತಿಗೆ ದೇಶದ ಜನಸಂಖ್ಯೆಯ ಅರ್ಧದಷ್ಟು ಮಾತ್ರ ನಗರಗಳಲ್ಲಿ ಇರುತ್ತದೆ ಎಂಬುದು ಅಕ್ಷರಶಃ ಸತ್ಯ.

ವಿಕೇಂದ್ರೀಕೃತ ಪ್ರಜಾತಂತ್ರವೇ ಜೀವಾಳವಾಗಿರುವ ಭಾರತದ ಅಭಿವೃದ್ಧಿಯ ನೆಲೆಯಿರುವುದೇ ಗ್ರಾಮಸಭೆಗಳಲ್ಲಿ; ಗ್ರಾಮಸರ್ಕಾರಗಳ ಸ್ವಯಮಾಡಳಿತದ ವೈಖರಿಯಲ್ಲಿ. ಅಭಿವೃದ್ಧಿ ಎಂದೊಡನೆ ಹೆಚ್ಚಿನ ಆದ್ಯತೆಯನ್ನು ಮೂಲಭೂತ ಸೌಕರ್ಯಗಳಾದ ವಸತಿ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಆಹಾರ ಭದ್ರತೆ, ಉದ್ಯೋಗಾವಕಾಶ ಹೆಚ್ಚಳ ಹಾಗೂ ತಂತ್ರಜ್ಞಾನ ಆಧಾರಿತ ಸಂವಹನಕ್ಕೆ ನೀಡಲಾಗುತ್ತದೆ. ಪಂಚಾಯಿತಿಯಲ್ಲಿ ನಡೆಯುವ ಮಕ್ಕಳ ಗ್ರಾಮ ಸಭೆಯೂ ಸೇರಿದಂತೆ ಎಲ್ಲ ಯೋಜನಾ ಪ್ರಕ್ರಿಯೆಗಳಲ್ಲೂ ಹೆಚ್ಚಾಗಿ ಪ್ರಸ್ತಾಪವಾಗುವುದು ರಸ್ತೆ, ಚರಂಡಿ, ದಾರಿದೀಪ, ಕೆರೆಯ ಹೂಳೆತ್ತುವುದು, ಮನೆ, ನೀರಿನ ವ್ಯವಸ್ಥೆ, ಶಾಲೆಗೆ ಆವರಣ ಗೋಡೆ, ಪೀಠೋಪಕರಣ ಹೀಗೆ…ಪಟ್ಟಿ ಬೆಳೆಯುತ್ತದೆ. ಕೇವಲ ಭೌತಿಕ, ಆರ್ಥಿಕ ಸುಧಾರಣೆಯಷ್ಟೇ ಅಭಿವೃದ್ಧಿಯಲ್ಲ; ಮಾನವ, ಪರಿಸರ ಹಾಗೂ ಸಾಮಾಜಿಕ ಅಭಿವೃದ್ಧಿಯೂ ಅಷ್ಟೇ ಮಹತ್ವದ್ದು.

ರಾಜ್ಯದಲ್ಲಿ 2020ರಿಂದೀಚೆಗೆ ಕೋವಿಡ್‌ ಪರಿಸ್ಥಿತಿಯ ನಡುವೆಯೂ ಆಶಾಕಿರಣವಾಗಿರುವ ಸಮಗ್ರ ಪ್ರಗತಿಪೂರಕವಾದ ಕಾರ್ಯಕ್ರಮವೆಂದರೆ ಗ್ರಾಮೀಣ ಗ್ರಂಥಾಲಯಗಳು ಸುರಕ್ಷಿತ, ಸೃಜನಾತ್ಮಕ ತಾಣಗಳಾಗಿ ರೂಪುಗೊಳ್ಳುತ್ತಿರುವುದು. ಭೌತಿಕ, ಆರ್ಥಿಕ ಅಭಿವೃದ್ಧಿಯೇ ಮೂಲಮಂತ್ರವಾಗಿರುವವರಿಗೆ ಇದು ಅಭಿವೃದ್ಧಿಯ ಹೊಸ ಆಯಾಮವನ್ನು ಪರಿಚಯಿಸಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ, ಮಕ್ಕಳಿಗೆ, ಯುವಜನರಿಗೆ, ಮಹಿಳೆಯರಿಗೆ ತಮ್ಮ ವಿಷಯಗಳ ಮುಕ್ತಚರ್ಚೆಗೆ ಸುರಕ್ಷಿತ ವಾತಾವರಣ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರಕವ್ಯವಸ್ಥೆ, ಗ್ರಾಮಸ್ಥರಿಗೆ ಅಗತ್ಯ ಮಾಹಿತಿಗಳನ್ನು ಕ್ಷಿಪ್ರವಾಗಿ ನೀಡುವಂತಹ ಕೇಂದ್ರವಾಗಿ ರೂಪಿತವಾಗುವ ಮಹಾತ್ವಾಕಾಂಕ್ಷಿ ಯೋಜನೆ ಇದಾಗಿದೆ. ಇದರ ಸಾಕಾರಕ್ಕೆ ಗ್ರಾಮಾಡಳಿತದ ಚುಕ್ಕಾಣಿ ಹಿಡಿದವರು, ಸಹವರ್ತಿಗಳು ಹಾಗೂ ಗ್ರಾಮೀಣ ಸಮುದಾಯ ಜಂಟಿಯಾಗಿ ಹೆಜ್ಜೆಹಾಕಿದರೆ, ಗ್ರಂಥಾಲಯವೊಂದೇ ಅಲ್ಲ; ಕರ್ನಾಟಕದ ಎಲ್ಲ ಗ್ರಾಮಗಳು ಸೃಜನಾತ್ಮಕ, ಸುರಕ್ಷಿತ, ಜ್ಞಾನಕೇಂದ್ರಗಳಾಗಿ ಪ್ರಗತಿಪಥದ ಮೆಟ್ಟಿಲುಗಳಾಗಲು ಯುಗಗಳು ಬೇಕಿಲ್ಲ.

ಮಕ್ಕಳಿಂದಲೇ ಪ್ರಾರಂಭವಾಗಿ, 2016ರಲ್ಲಿ ಕಾಯ್ದೆಯ ಮೂಲಕ ಶಾಸನಬದ್ಧ ಮನ್ನಣೆ ಪಡೆದ ಮಕ್ಕಳ ಗ್ರಾಮಸಭೆಯನ್ನು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ಅವರಿಗೆ ಸ್ಪಂದಿಸುವ ಗ್ರಾಮಪಂಚಾಯಿತಿಗಳ ಸ್ಥಾಪನೆಗಾಗಿ ಅಭಿಯಾನ ಮಾದರಿಯಲ್ಲಿ ನಡೆಸುವಂತೆ ಇಲಾಖೆಯು ಪ್ರತಿವರ್ಷ ನಿರ್ದೇಶಿಸುತ್ತಿದೆ. ತನ್ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಂಚಾಯಿತಿಮಟ್ಟದಲ್ಲಿ ಆಗಬೇಕಾದ ಪ್ರಗತಿ-ಪ್ರಕ್ರಿಯೆ, ಅದರಲ್ಲಿ ಮಕ್ಕಳ ಸಕ್ರೀಯ ಭಾಗವಹಿಸುವಿಕೆಯನ್ನು ಎತ್ತಿಹಿಡಿಯಲಾಗಿದೆ. ಅಲ್ಲದೇ ಮಕ್ಕಳ ಧ್ವನಿಗೆ ಬೆನ್ನೆಲುಬಾಗುವ ಬಾಲಮಿತ್ರ, ಎಲ್ಲ ಮಕ್ಕಳಿಗೆ ಕಿವಿಯಾಗಲು ಧ್ವನಿಪೆಟ್ಟಿಗೆ ವ್ಯವಸ್ಥೆಗಳನ್ನೂ ಉಲ್ಲೇಖಿಸಿದೆ. ಪಂಚಾಯಿತಿಗಳು ತನ್ನ ಮೇಲಿರುವ ಹೆಚ್ಚಿನ ಹೊರೆ ಇದೆಂದು ಭಾವಿಸದೇ, ಕಾಯ್ದೆ-ಸುತ್ತೋಲೆಯ ಆಶಯದಂತೆ ಕಾರ್ಯನಿರ್ವಹಿಸಿದರೆ, ಮುಂಬರುವ ವರ್ಷಗಳಲ್ಲಿ ಮಕ್ಕಳಿಗೆ ಸ್ಪಂದಿಸುವ ಸ್ಥಳೀಯ ಸರ್ಕಾರಗಳಾಗಿ ಮಕ್ಕಳ ಸ್ನೇಹಿ ಹಾಗೂ ಸುರಕ್ಷಿತ ಗ್ರಾಮಗಳಾಗಿ ರೂಪಿತವಾಗಬಲ್ಲವು.

ಗ್ರಾಮೀಣ ಮಹಿಳೆಯರ ಸಶಕ್ತತೆ, ಅವರ ಆರ್ಥಿಕಮಟ್ಟ ಸುಧಾರಣೆ ಮತ್ತು ಕೌಶಲ ಅಭಿವೃದ್ಧಿಗಾಗಿ ಸಂಜೀವಿನಿ ಯೋಜನೆ ಜಾರಿಯಾಗಿದೆ. ಗ್ರಾಮಸ್ವರಾಜ್‌ ಅಧಿನಿಯಮದಂತೆ ಗ್ರಾಮಾಭಿವೃದ್ಧಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ಮಹಿಳಾ ಗ್ರಾಮಸಭೆಗಳು ಇವೆ. ಗ್ರಾಮದ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಪ್ರತಿನಿಧಿಸುವ ಮಹಿಳೆಯರು ಗ್ರಾಮದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಗ್ರಾಮದ ಸ್ವರೂಪವನ್ನೇ ಬದಲಾಯಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತದೆ. ಸರ್ಕಾರಗಳು ಇವುಗಳ ಘೋಷಣೆಯ ಸಮಯದಲ್ಲಿ ತೋರಿದಂತಹ ಚುರುಕುತನ, ಆಸಕ್ತಿಯನ್ನು ಅನುಷ್ಠಾನದಲ್ಲಿಯೂ ತೋರಿದರೆ ಮಹಿಳಾ ಸಬಲೀಕರಣ, ಸ್ವಾವಲಂಬನೆ, ಸಾಮುದಾಯಿಕ ಅಭಿವೃದ್ಧಿಯಲ್ಲಿ ಅವರ ಕೊಡುಗೆಗಳು ಮೇಳೈಸಿ ಗ್ರಾಮಗಳ ಚಿತ್ರಣವೇ ಬದಲಾಗುವುದರಲ್ಲಿ ಅನುಮಾನವಿಲ್ಲ.

ಗ್ರಾಮೀಣ ಅಕುಶಲ ಕಾರ್ಮಿಕರ ಜೀವನೋಪಾಯಕ್ಕೆ ಉದ್ಯೋಗದ ಭರವಸೆಯೊಂದಿಗೆ, ಸಮಗ್ರ ಗ್ರಾಮೀಣಾಭಿವೃದ್ಧಿಗೆ ಆಸ್ತಿ ಸೃಜಿಸುವ ಮಹತ್ತರ ಉದ್ದೇಶದಿಂದ ನರೆಗಾ ಕಾಯ್ದೆ ಮತ್ತು ಯೋಜನೆ ಜಾರಿಯಾಗಿದೆ. ಇದರಿಂದ ಜನರ ಜೀವನಮಟ್ಟ ಸುಧಾರಣೆಯೊಂದಿಗೆ, ವಲಸೆ ತಡೆಗಟ್ಟಲು ತಕ್ಕಮಟ್ಟಿಗೆ ಸಹಕಾರಿಯಾಗಿದೆ. ಲಕ್ಷಾಂತರ ನರೆಗಾ ಕಾರ್ಮಿಕರು ಸುಡು ಬಿಸಿಲು, ಮಳೆ, ಕೊಳಚೆ ಎಂಬುದನ್ನೂ ಲೆಕ್ಕಿಸದೇ ಗ್ರಾಮೀಣಾಭಿವೃದ್ಧಿಯಲ್ಲಿ ಸರ್ಕಾರದೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರ ಪರಿಶ್ರಮವನ್ನು ಗೌರವಿಸುತ್ತಾ, ಕೆರೆಯ ನೀರನ್ನು ಕೆರೆಗೇ ಚೆಲ್ಲು ಎನ್ನುವಂತಹ ಯೋಜನೆಗಳನ್ನು ಮಾಡದೇ, ಆಸ್ತಿಸೃಜನೆಯ ವೈಶಾಲ್ಯತೆಗೆ ಅನುಗುಣವಾಗಿ ಕೃಷಿ, ಶಿಕ್ಷಣ, ಆರೋಗ್ಯ, ಜೀವನೋಪಾಯ, ಜಲಪೂರಣ, ಆಹಾರ, ವಸತಿ, ನೈರ್ಮಲ್ಯೀಕರಣ, ಮಾನವ ಹಾಗೂ ಪರಿಸರ ಅಭಿವೃದ್ಧಿ – ಹೀಗೆ ವಿವಿಧ ಆಯಾಮಗಳನ್ನು ಪರಿಗಣಿಸಿ, ಸಮುದಾಯದ ಪಾಲ್ಗೊಳ್ಳುವಿಕೆಯಲ್ಲಿ ತಯಾರಿಸಿದ ಯೋಜನೆಯ ಅನುಷ್ಠಾನಕ್ಕೆ ಎಲ್ಲ ಸರ್ಕಾರಗಳು ಕೈಜೋಡಿಸಿದರೆ ಸಮಗ್ರ ಗ್ರಾಮೀಣಾಭಿವೃದ್ಧಿಗೆ ರಾಜ್ಯ ಮಾದರಿಯಾಗಬಲ್ಲದು.

ಆರೋಗ್ಯಕ್ಷೇತ್ರದ ಸುಧಾರಣೆಯು ಅಭಿವೃದ್ಧಿಯಲ್ಲಿ ಗಣನೀಯ ಪಾತ್ರವಹಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಆರೋಗ್ಯಕ್ಷೇತ್ರಕ್ಕೆ ಪೂರಕವಾಗಿ 1:1000 ವೈದ್ಯರ-ರೋಗಿಗಳ ಅನುಪಾತವನ್ನು ಸೂಚಿಸಿದೆ, ಆದರೆ ಭಾರತದಲ್ಲಿ ಈ ಅನುಪಾತವು ಸುಮಾರು 1:2000 ಆಗಿದೆ. ಇತ್ತೀಚೆಗೆ ತಂತ್ರಜ್ಞಾನ ಮತ್ತು ಸುಧಾರಿತ ಮೂಲಸೌಕರ್ಯಗಳನ್ನು ಒಳಗೊಂಡಂತಹ ಪ್ರಾಥಮಿಕ ಆರೋಗ್ಯ ಕೇಂದ್ರ/ಉಪಕೇಂದ್ರಗಳು ರೂಪುಗೊಳ್ಳುತ್ತಿವೆ. ಗ್ರಾಮಸ್ಥರ ಆರೋಗ್ಯ ಸೇವೆಗೆ ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕವಾಗಿದೆ. ಈ ಎಲ್ಲವೂ ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲಾರಂಭಿಸಿದರೆ, ಹೆಚ್ಚಿನ ಗ್ರಾಮೀಣ ಜನತೆ ಕಡಿಮೆ-ಆದಾಯದ ಹೊರತಾಗಿಯೂ ಮೂಲಭೂತ ಸೇವೆಯಾದ ಆರೋಗ್ಯಕ್ಕೇ ಹೆಚ್ಚಿನ ವೆಚ್ಚವನ್ನು ಪಾವತಿಸುತ್ತಿರುವ ಸ್ಥಿತಿ ಬದಲಾಗಿ, ಮುಂದಿನ ದಿನಗಳಲ್ಲಿ ಗ್ರಾಮೀಣ ಆರೋಗ್ಯಕ್ಷೇತ್ರದಲ್ಲಿ ಮಹಾಕ್ರಾಂತಿಯೇ ಆಗಬಹುದು.

ನಿಜ, ಈ ಎಲ್ಲವೂ ಅಂದುಕೊಂಡಷ್ಟು ಸುಲಭವಲ್ಲ. ತಿಂಗಳು-ವರ್ಷದಲ್ಲಿ, ಕಣ್ಮುಚ್ಚಿ ತೆಗೆಯುವುದರೊಳಗೆ ಸಾಧಿಸುವಂತಹುದಲ್ಲ. ಹೀಗೆಂದೇ ಗ್ರಾಮಸ್ವರಾಜ್‌ ಕಾಯ್ದೆಯೂ ಸಹ ಮುನ್ನೋಟ ಯೋಜನೆಗೆ ಅವಕಾಶ ನೀಡಿರುವುದು. ಸಮಗ್ರ ಗ್ರಾಮೀಣಾಭಿವೃಧ್ಧಿ ಸಾಧನೆಗೆ ದೃಢಸಂಕಲ್ಪ, ಒಳಗೊಳ್ಳುವಿಕೆಯ ಪ್ರಜಾಪ್ರಭುತ್ವದ ಆಚರಣೆಗೆ ರಾಜಕೀಯ ಇಚ್ಛಾಶಕ್ತಿ ಇದ್ದರೆ, ಜನತೆ ಸಿನಿಕತನ ತೊರೆದು ಮುನ್ನಡೆದರೆ, ಗ್ರಾಮ ಸ್ವರಾಜ್ಯದ ಸ್ಥಾಪನೆ ಕಷ್ಟವೇನಲ್ಲ. ಅನುಷ್ಠಾನದ ಹಾದಿಯಲ್ಲಿ ಕಲ್ಲು-ಮುಳ್ಳುಗಳಿರುವುದು, ಎಡವಿ ಬೀಳುವುದು ಸಹಜ. ಆದರೆ ಗ್ರಾಮಪಂಚಾಯಿತಿಗಳು ಸ್ಥಳೀಯ ಸ್ವಯಂ ಆಡಳಿತ ಸಂಸ್ಥೆಗಳಾಗಿ ಮೈಕೊಡವಿ ನಿಂತರೆ, ಮುಂದಿನ ರಜತ ವರ್ಷಾಚರಣೆಯೊಳಗೆ ನಗರ ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಹುಸಿಯಾಗಿಸಿ, ಸಮಗ್ರ ಗ್ರಾಮೀಣಾಭಿವೃದ್ಧಿಯನ್ನು ಸಾಧಿಸುವತ್ತ ದಾಂಗುಡಿಯಿಡಬಹುದು.

ಲೇಖಕಿ: ಗ್ರಾಮ ಪಂಚಾಯತ್‌ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯದ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT