ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ನೀರಿಗೆ ಬರ.. ಬದುಕು ದುಸ್ತರ!
ಆಳ–ಅಗಲ: ನೀರಿಗೆ ಬರ.. ಬದುಕು ದುಸ್ತರ!
ಮುಂಗಾರು ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಕೈಕೊಟ್ಟಿದೆ. ಮಳೆಯ ಕೊರತೆಯಿಂದಾಗಿ ನದಿ, ಕೆರೆ, ಕೊಳ್ಳಗಳೆಲ್ಲ ಬತ್ತಿವೆ.
Published 23 ಫೆಬ್ರುವರಿ 2024, 21:10 IST
Last Updated 23 ಫೆಬ್ರುವರಿ 2024, 21:10 IST
ಅಕ್ಷರ ಗಾತ್ರ

ಮುಂಗಾರು ಈ ಬಾರಿ ದೊಡ್ಡ ಪ್ರಮಾಣದಲ್ಲಿಯೇ ಕೈಕೊಟ್ಟಿದೆ. ಮಳೆಯ ಕೊರತೆಯಿಂದಾಗಿ ನದಿ, ಕೆರೆ, ಕೊಳ್ಳಗಳೆಲ್ಲ ಬತ್ತಿವೆ. ಅಂತರ್ಜಲ ಪಾತಾಳ ಸೇರಿದೆ. ರಾಜ್ಯ ಸರ್ಕಾರವು 223 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಿದೆ. ನೀರು, ಮೇವು ಇಲ್ಲದ ಕಾರಣಕ್ಕೆ ರೈತರು ಜಾನುವಾರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ನೀರಿನ ಬರ ಜನರ ಬದುಕನ್ನು ದುಸ್ತರಗೊಳಿಸಿದೆ

ಕೆರೆ ಖಾಲಿ: ನೀರು, ಮೇವಿಗೆ ಬರ

ತುಮಕೂರು ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ಕುಡಿಯುವ ನೀರಿಗೆ ಈಗಾಗಲೇ ಸಮಸ್ಯೆ ಆರಂಭವಾಗಿದೆ. ಹಸುಗಳಿಗೆ ಮೇವಿನ ಕೊರತೆಯಾಗಿದ್ದು, ದನಕರುಗಳನ್ನು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ತುಮಕೂರು ನಗರಕ್ಕೆ ನೀರು ಪೂರೈಸುವ ಬುಗುಡನಹಳ್ಳಿ ಕೆರೆ ಬರಿದಾಗುತ್ತಾ ಬಂದಿದೆ. ಆದರೂ ಜಿಲ್ಲಾ ಆಡಳಿತವು ಪರ್ಯಾಯವಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಜಲಮೂಲಗಳು ಬರಿದಾಗಿದ್ದು, ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದೆ.

ರಾಮನಗರ ಜಿಲ್ಲೆಯ ರಾಮನಗರ, ಹಾರೋಹಳ್ಳಿ ಮತ್ತು ಮಾಗಡಿ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗಿದೆ. ಇಲ್ಲೆಲ್ಲಾ ಕುಡಿಯುವ ನೀರಿಗಾಗಿ ಟ್ಯಾಂಕರ್‌ಗಳ ಮೊರೆ ಹೋಗಲಾಗಿದೆ. ರಾಮನಗರದ ಕೆಲ ವಾರ್ಡ್‌ಗಳಲ್ಲಿ 5–10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಅರ್ಕಾವತಿ ನದಿಯಲ್ಲಿ ನೀರು ಪ್ರಪಾತಕ್ಕೆ ತಲುಪಿದೆ. ಆದ್ದರಿಂದ, ಮಾಗಡಿಯ ಮಂಚನಬೆಲೆಯಿಂದ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ 3–4 ಗ್ರಾಮ ಹೊರತುಪಡಿಸಿ ಉಳಿದೆಡೆ ಕುಡಿಯುವ ನೀರಿಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಮಾರ್ಚ್ ಮತ್ತು ಏಪ್ರಿಲ್ ಅಂತ್ಯದ ವೇಳೆಗೆ ತುಸು ಸಮಸ್ಯೆ ಕಾಣಿಸಬಹುದು.

ಕಾವೇರಿ ನದಿ ತೀರದ ಜನರಿಗೂ ಸಮಸ್ಯೆ

ಮೈಸೂರು ಭಾಗದ ಹಲವು ಜಿಲ್ಲೆಗಳಿಗೆ ಜೀವನದಿಯಾದ ಕಾವೇರಿಯ ಉಗಮ ಸ್ಥಾನವಾದ ಕೊಡಗಿನಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ‘15 ದಿನಗಳಲ್ಲಿ ಮಳೆಯಾಗದಿದ್ದರೆ ಕಾವೇರಿ ನದಿ ತೀರದ ಗ್ರಾಮಗಳಲ್ಲಿ ತೀವ್ರ ಸಮಸ್ಯೆಯಾಗಬಹುದು’ ಎನ್ನುತ್ತಾರೆ ಅಧಿಕಾರಿಗಳು. ಜೊತೆಗೆ, ಇತರೆ ಜಿಲ್ಲೆಗಳಲ್ಲಿ ಏಪ್ರಿಲ್‌–ಮೇ ತಿಂಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದೆ.

‘ಪ್ರಸ್ತುತ ಮೈಸೂರು ನಗರಕ್ಕೆ 2 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು, ಏಪ್ರಿಲ್‌ ಅಂತ್ಯದವರೆಗೆ ತೊಂದರೆ ಇಲ್ಲ. ಮೇ ತಿಂಗಳಿನಲ್ಲಿ ಮಳೆಯಾಗದಿದ್ದರೆ ಸಮಸ್ಯೆ ಹೆಚ್ಚಾಗಲಿದೆ’ ಎನ್ನುತ್ತಾರೆ ಅಧಿಕಾರಿಗಳು. ಚಾಮರಾಜನಗರ ಜಿಲ್ಲೆಯಲ್ಲಿ ಬಿಸಿಲು ಮುಂದುವರಿದರೆ ಮಾರ್ಚ್‌ ಕೊನೆಗೆ ಸಮಸ್ಯೆ ಕಾಡಬಹುದು. ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಸಮಸ್ಯೆ ಇದೆ. ಮಂಡ್ಯ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನೇ ಅವಲಂಬಿಸಲಾಗುತ್ತಿದೆ.

ಹೇಮಾವತಿ ಜಲಾಶಯ ಕಳೆದ ವರ್ಷ ಭರ್ತಿಯಾಗದಿರುವುದು ಸಮಸ್ಯೆಗೆ ಕಾರಣ. ಮಳೆ ಕೊರತೆಯಿಂದ ನದಿಯ ಒಳಹರಿವು ಕಡಿಮೆಯಾಗಿತ್ತು. ಕಾಲುವೆಯ ಮೂಲಕ ಕೆರೆಗಳನ್ನು ತುಂಬಿಸಲು ನೀರು ಹರಿಸಲಾಗಿದ್ದು, ಸದ್ಯಕ್ಕೆ 9.380 ಟಿಎಂಸಿ ಅಡಿ ನೀರು ಮಾತ್ರ ಬಳಕೆಗೆ ಲಭ್ಯವಾಗಿದೆ.

‘ಕಲ್ಯಾಣ’ದಲ್ಲಿ ಕುಡಿಯುವ ನೀರಿಗಾಗಿ ಪರದಾಟ

ಕಲ್ಯಾಣ ಕರ್ನಾಟಕದಲ್ಲಿ ಬೇಸಿಗೆಯ ಆರಂಭದಲ್ಲೇ ಬಿಸಿಲಿನ ತಾಪ ಏರಿದಂತೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿರುವ ಸಂಭವನೀಯ ಗ್ರಾಮಗಳ ಪಟ್ಟಿಯೂ ಉದ್ದವಾಗುತ್ತಿದೆ. ಮಳೆ ಕೈಕೊಟ್ಟ ನಂತರ ಕೃಷ್ಣಾ, ತುಂಗಭದ್ರಾ, ಭೀಮಾ, ಕಾಗಿಣಾ ನದಿಗಳು ಬತ್ತುತ್ತಿವೆ. ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ. ತೆರೆದ ಬಾವಿ, ಕೆರೆಗಳಲ್ಲಿನ ನೀರು ಸಹ ಕ್ಷೀಣಿಸುತ್ತಿದೆ. ಯಾದಗಿರಿಯ 26 ಹಾಗೂ ಕಲಬುರಗಿಯ ನಾಲ್ಕು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ತೀವ್ರವಾಗಿ ಕಾಣಿಸಿಕೊಂಡಿದೆ. ಕುಡಿಯುವ ನೀರಿಗಾಗಿ ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಿಟ್ಟ ನೀರು ಕೆಲವು ವಾರಗಳವರೆಗೆ ಸಾಕಾಗಬಹುದು. ಆನಂತರ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಬಹುತೇಕರು ಕುಡಿಯುವ ನೀರಿಗೆ ತೆರೆದ ಬಾವಿ, ಕೆರೆ ಹಾಗೂ ಬೋರ್‌ವೆಲ್‌ಗಳನ್ನೇ ಆಶ್ರಯಿಸಿದ್ದಾರೆ. ಆದರೆ, ಅಂತರ್ಜಲದ ಮಟ್ಟ ಪಾತಾಳ ಕಂಡಿದೆ. ಯಾದಗಿರಿಯ ಶೆಟ್ಟಿಗೇರಾ ಗ್ರಾಮದಲ್ಲಿನ ನೀರಿನ ಸಮಸ್ಯೆ ಅರಿತು ಗ್ರಾಮ ಪಂಚಾಯಿತಿ ಸದಸ್ಯರೇ ತಮ್ಮ ಜೇಬಿಂದ ಹಣ ಖರ್ಚು ಮಾಡಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ರಾಯಚೂರಿನ ಪಟ್ಟಣ ಪ್ರದೇಶಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಬೀದರ್‌ನಲ್ಲಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ಕುಷ್ಟಗಿ ತಾಲ್ಲೂಕಿನ ಬಹಳಷ್ಟು ಹಳ್ಳಿಗಳಲ್ಲಿನ ಶೇ 80ರಷ್ಟು ಶುದ್ಧ ನೀರಿನ ಘಟಕಗಳು ದುರಸ್ತಿಗಾಗಿ ಕಾದಿವೆ.

ಬರ ಪಟ್ಟಿಗೆ ಸೇರದ ತಾಲ್ಲೂಕಿನಲ್ಲೂ ಹಾಹಾಕಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಯಲು ಸೀಮೆ ಮತ್ತು ಅರೆಮಲೆನಾಡು, ನೀರಿನ ಕೊರತೆಯಿಂದ ತತ್ತರಿಸಿ ಹೋಗಿದೆ‌. ಬರಪಟ್ಟಿಯಲ್ಲಿ ಸೇರದ ಚಿಕ್ಕಮಗಳೂರು ತಾಲ್ಲೂಕಿನಲ್ಲೇ ಹೆಚ್ಚಿನ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ತಾಲ್ಲೂಕಿನಲ್ಲಿಯೇ ಅತೀ ಹೆಚ್ಚು 9 ಹಳ್ಳಿ ಮತ್ತು 10 ಜನವಸತಿ ಪ್ರದೇಶಗಳನ್ನು ಜಿಲ್ಲಾ ಪಂಚಾಯಿತಿ ಗುರುತಿಸಿದೆ. ಐದು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು,  ಐದು ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 319 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲೂ ಈ ಬಾರಿ ಜಲಕ್ಷಾಮದ ಭೀತಿ ಮೂಡಿದೆ. ಕೆಲವು ಗ್ರಾಮಗಳಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಆರಂಭವಾಗಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಶೀಘ್ರದಲ್ಲೇ ನೀರಿನ ಸಮಸ್ಯೆ ತೀವ್ರಗೊಳ್ಳುವ ಸೂಚನೆಗಳಿವೆ. 

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಗ್ರಾಮೀಣ ಭಾಗಗಳಲ್ಲಿ ಹಾಗೂ ಉಳ್ಳಾಲ ನಗರಸಭೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದೆ. ಇಂತಹ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲು ಕ್ರಮವಹಿಸಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪಡುವರಿ ಗ್ರಾಮದಲ್ಲಿ 1,308, ಯಡ್ತರೆ ಗ್ರಾಮದಲ್ಲಿ 1,463, ಬೈಂದೂರು ಹಾಗೂ ತಗ್ಗರ್ಸೆ ಗ್ರಾಮಗಳಲ್ಲಿ 1,070 ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಒಂದು ಮನೆಗೆ 4 ಬಿಂದಿಗೆ ನೀರು

ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆ ಹೊಸ್ತಿಲಲ್ಲೇ ಜಲಕ್ಷಾಮದ ಆತಂಕ ಎದುರಾಗಿದೆ. ಜಿಲ್ಲೆಯ 367 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ಜಿಲ್ಲಾಡಳಿತ ಗುರುತಿಸಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಳಲ್ಕೆರೆ ತಾಲ್ಲೂಕಿನ ಕುಮ್ಮಿನಘಟ್ಟ ಗ್ರಾಮದ ಎರಡು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಒಂದು ಮನೆಗೆ ದಿನಕ್ಕೆ 4 ಬಿಂದಿಗೆ ನೀರು ನೀಡಲಾಗುತ್ತಿದೆ. ನೀರಿಲ್ಲದೆ ಜಾನುವಾರು ಉಳಿಸಿಕೊಳ್ಳುವುದೇ ಸವಾಲಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ತಾಲ್ಲೂಕಿನ ಹಲವೆಡೆ ಕೊಳವೆಬಾವಿಗಳಲ್ಲಿ ಅಂತರ್ಜಲವು ಪಾತಾಳ ತಲುಪಿದೆ.

ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ದಾವಣಗೆರೆ ಜಿಲ್ಲೆಯ ಕೆಲವೆಡೆ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. 19 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ನೀರಿನ ಸಮಸ್ಯೆ ತಲೆದೋರುವಂಥ ಪರಿಸ್ಥಿತಿ ಇರುವ 126 ಗ್ರಾಮಗಳ ಪಟ್ಟಿಯನ್ನು ಜಿಲ್ಲಾಡಳಿತ ಸಿದ್ಧಪಡಿಸಿದೆ. ‘ಭದ್ರಾ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಲು ತಂಡಗಳನ್ನು ರಚಿಸಲಾಗಿದೆ. ಸಮಸ್ಯೆ ಎದುರಾಗುವ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಬವಣೆ

ಏಳು ನದಿಗಳು ಹರಿಯುವ ಬೆಳಗಾವಿ ಜಿಲ್ಲೆಯಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಬವಣೆ ತಲೆದೋರಿದೆ. ಗದಗ ಜಿಲ್ಲೆಯಲ್ಲಿ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ವಿಜಯನಗರ ಜಿಲ್ಲೆಯಲ್ಲಿ 60 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ
10 ದಿನಕ್ಕೊಮ್ಮೆ ನೀರು ಸಿಗುತ್ತಿದೆ. ತೀವ್ರ ಸಮಸ್ಯೆಯಿರುವ ಚಿಕ್ಕೋಡಿ, ಬೆಳಗಾವಿ ಮತ್ತು ಮೂಡಲಗಿ ತಾಲ್ಲೂಕಿನ 6 ಗ್ರಾಮಗಳಿಗೆ ಈಗಾಗಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

‘ಗದಗ ಜಿಲ್ಲೆಯಲ್ಲಿ ಮಾರ್ಚ್‌ 10ರವರೆಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ’ ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ, ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಗದಗ–ಬೆಟಗೇರಿ ಅವಳಿ ನಗರದ ವಿವಿಧೆಡೆ 7 ದಿನ, 12 ದಿನಗಳಿಗೊಮ್ಮೆ ನೀರು ಪೂರೈಕೆ ಆಗುತ್ತಿದೆ. ಇದೇ ಪರಿಸ್ಥಿತಿ ಜಿಲ್ಲೆಯ 7 ತಾಲ್ಲೂಕುಗಳಲ್ಲಿದೆ.

ವಾರಕ್ಕೆರಡು ಎರಡು ಬಾರಿ ಬಾಗಲಕೋಟೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಇಳಕಲ್‌ ತಾಲ್ಲೂಕಿನ ನಂದವಾಡಗಿಯಲ್ಲಿ ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿಲ್ಲದೇ ಇರುವುದರಿಂದ ಜನರು ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ಕೆರೆಯಿಂದ ಕೈಗಾಡಿಗಳಲ್ಲಿ ನೀರು ತರುತ್ತಾರೆ.

‘ಬಳ್ಳಾರಿ ನಗರ ಪ್ರದೇಶದಲ್ಲಿ ಐದು ದಿನಗಳಿಗೊಮ್ಮೆ ನೀರು ಪೂರೈಸುತ್ತಿರುವುದಾಗಿ ಜಿಲ್ಲಾಡಳಿತ ಹೇಳುತ್ತಿದೆ. ಆದರೆ, 10 ದಿನಗಳಿಗೊಮ್ಮೆ ನೀರು ಸಿಗುತ್ತಿದೆ’ ಎಂದು ಜನ ಹೇಳುತ್ತಾರೆ.

ಹಾವೇರಿ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ 48 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. 34.34 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯದಲ್ಲಿ 8.58 ಟಿಎಂಸಿ ಅಡಿಯಷ್ಟೇ ನೀರು ಸಂಗ್ರಹವಿದೆ. ಇದರಿಂದ ಸವದತ್ತಿ, ಬೈಲಹೊಂಗಲ ತಾಲ್ಲೂಕಿನ ಜನರೊಂದಿಗೆ ಅವಳಿ ನಗರ ಹುಬ್ಬಳ್ಳಿ–ಧಾರವಾಡಕ್ಕೂ ಈ ಬೇಸಿಗೆಯಲ್ಲಿ ಜಲಸಂಕಟದ ಬಿಸಿ ತಟ್ಟುವ ಸಾಧ್ಯತೆಯಿದೆ.

* ಫೆ.23ರವರೆಗಿನ ಮಾಹಿತಿ (ಟಿಎಂಸಿ ಅಡಿಗಳಲ್ಲಿ)

ಜಲಾಶಯ;ನೀರು ಸಂಗ್ರಹ ಸಾಮರ್ಥ್ಯ;ಲಭ್ಯವಿರುವ ನೀರು

ಲಿಂಗನಮಕ್ಕಿ;151.75;41.40(69.77)
ಸೂಪಾ;145.33;59.96(76.11)
ವಾರಾಹಿ;31.10;8.25(9.88)
ಹಾರಂಗಿ;8.50;3.39(3.26)
ಹೇಮಾವತಿ;37.10;13.68(21.91)
ಕೆಆರ್‌ಎಸ್‌;49.45;16.32(30.67)
ಕಬಿನಿ;19.52;11.35(11.16)
ಭದ್ರಾ;71.54;27.38(53.11)
ತುಂಗಭದ್ರಾ;105.79;9.03(33.23)
ಘಟಪ್ರಭಾ;51.00;31.39(25.04)
ಮಲಪ್ರಭಾ;37.73;11.94;(16.03)
ಆಲಮಟ್ಟಿ;123.08;49.76(57.30)
ನಾರಾಯಣಪುರ;33.31;19.43(30.16)
ವಾಣಿವಿಲಾಸ ಸಾಗರ;30.42;20.30(29.25)

* ಆವರಣದಲ್ಲಿರುವುದು ಇದೇ ಅವಧಿಯಲ್ಲಿ ಕಳೆದ ವರ್ಷ ಜಲಾಶಯಗಳಲ್ಲಿ ಲಭ್ಯವಿದ್ದ ನೀರಿನ ಮಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT