ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ | ಶಾಲಾ ಶೌಚಾಲಯ ನಿರ್ವಹಣೆ: ಅನುದಾನವಿಲ್ಲದೆ ಸಂಕಷ್ಟ
ಆಳ–ಅಗಲ | ಶಾಲಾ ಶೌಚಾಲಯ ನಿರ್ವಹಣೆ: ಅನುದಾನವಿಲ್ಲದೆ ಸಂಕಷ್ಟ
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದಲೇ ಶುಚಿಗೊಳಿಸಿದ ಹಲವು ಪ್ರಕರಣಗಳು ಈಚಿನ ತಿಂಗಳಲ್ಲಿ ವರದಿಯಾಗಿವೆ. ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳಿಂದ ಶೌಚಾಲಯ ಶುಚಿಗೊಳಿಸಿದ್ದು ಪತ್ತೆಯಾದರೆ, ಅಂತಹ ಶಾಲೆಯ ಮುಖ್ಯಶಿಕ್ಷಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಆದರೆ ಶೌಚಾಲಯಗಳನ್ನು ಶುಚಿಗೊಳಿಸಲು ಅಗತ್ಯವಾದ ಅನುದಾನ ಲಭ್ಯವಿಲ್ಲ. ಹೀಗಿದ್ದಾಗ ಶೌಚಾಲಯವನ್ನು ಶುಚಿಗೊಳಿಸುವುದು ಹೇಗೆ ಎಂಬುದು ಶಿಕ್ಷಕರ ಪ್ರಶ್ನೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ (ಪಠ್ಯ ಮತ್ತು ಪಠ್ಯೇತರ) ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳಿಗೆ ಬಳಸಿಕೊಳ್ಳುವಂತಿಲ್ಲ ಎನ್ನುತ್ತದೆ ಶಿಕ್ಷಣ ಇಲಾಖೆಯ ಮಾರ್ಗಸೂಚಿ. ಆದರೆ ಶಾಲಾ ಶೌಚಾಲಯಗಳನ್ನು ಶುಚಿಗೊಳಿಸಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.

‘ಇದೇ ಶನಿವಾರವಷ್ಟೇ (27ನೇ ಜನವರಿ) ನಮ್ಮ ಶಾಲೆಯ ಎರಡು ಶೌಚಾಲಯಗಳನ್ನು ಶುಚಿಗೊಳಿಸಿದೆವು. ಒಂದನ್ನು ವಿದ್ಯಾರ್ಥಿಗಳು ಶುಚಿಗೊಳಿಸಿದರೆ, ಇನ್ನೊಂದನ್ನು ನಾನೇ ಶುಚಿಗೊಳಿಸಿದೆ. ಶಾಲಾ ನಿರ್ವಹಣೆಗೆ–ಶುಚಿತ್ವಕ್ಕೆ ಎಂದು ಇಲಾಖೆ ನೀಡುತ್ತಿರುವ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಮಕ್ಕಳಿಗೆ ಕೈತೊಳೆಯಲು ಬಳಸುವ ಸಾಬೂನನ್ನೂ ಕೆಲವೊಮ್ಮೆ ನಮ್ಮ ಸ್ವಂತ ದುಡ್ಡಿನಿಂದ ತರಬೇಕಾದ ಪರಿಸ್ಥಿತಿ ಇದೆ. ನಮ್ಮ ತಾಲ್ಲೂಕಿನಲ್ಲಿನ ಬಹುತೇಕ ಶಾಲೆಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ’ ಎನ್ನುತ್ತಾರೆ ರಾಮನಗರದ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು.

ರಾಜ್ಯ ಸರ್ಕಾರವು ಪ್ರತಿ ವರ್ಷ ಬಜೆಟ್‌ನಲ್ಲಿ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ (ಲೆಕ್ಕ ಶೀರ್ಷಿಕೆ:4202–01–201–1–07) ಎಂದು ಪ್ರತ್ಯೇಕ ಅನುದಾನವನ್ನು ತೆಗೆದಿರಿಸುತ್ತದೆ. ಜುಲೈನಲ್ಲಿ ಮಂಡಿಸಲಾದ 2023–24ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿ ₹30 ಕೋಟಿಯನ್ನು ತೆಗೆದಿರಿಸಲಾಗಿತ್ತು. ಈ ಅನುದಾನವನ್ನು ಶೌಚಾಲಯಗಳ ನಿರ್ವಹಣೆ ಮತ್ತು ದುರಸ್ತಿಗೆ ಬಳಸಬೇಕು. ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಈ ಅನುದಾನವನ್ನು ಸಮನಾಗಿ ಹಂಚಿಕೆ ಮಾಡಿದರೆ ಪ್ರತಿ ಶಾಲೆಗೆ ಸುಮಾರು ₹6,000 ಬರುತ್ತದೆ.

‘ಶಾಲೆಯಲ್ಲಿ ಇರುವ ಶೌಚಾಲಯ ನಿರ್ವಹಣೆಗೆ ವರ್ಷವೊಂದಕ್ಕೆ ಆರು ಸಾವಿರ ರೂಪಾಯಿ ಎಲ್ಲಿ ಸಾಲುತ್ತದೆ’ ಎಂಬುದು ಸೋಲೂರು ಹೋಬಳಿಯ ಶಾಲೆಯ ಶಿಕ್ಷಕರ ಇನ್ನೊಂದು ಪ್ರಶ್ನೆ.

ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ಮೀಸಲಿರಿಸಿದ ಅನುದಾನವನ್ನೇ ಶೌಚಾಲಯ ಶುಚಿಗೊಳಿಸಲೂ ಬಳಸಬೇಕು ಎಂಬುದು ನಿಯಮ. ಆದರೆ ಶಾಲಾ ಶಿಕ್ಷಣ ಇಲಾಖೆಯ ಬಜೆಟ್‌ನಲ್ಲಿ ಈ ಅನುದಾನವನ್ನು ವಿವಿಧ ಉಪಶೀರ್ಷಿಕೆಗಳ ಅಡಿಯಲ್ಲಿ ಹೊಸ ಶೌಚಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಹೀಗೆ ಈಗಾಗಲೇ ₹20 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನ ಮಾತ್ರವಲ್ಲದೇ, ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು ಪ್ರತ್ಯೇಕ ಅನುದಾನವನ್ನು ನೀಡುತ್ತಿದೆ. ಇದರ ಹೊರತಾಗಿಯೂ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ಮೀಸಲಿರಿಸಿದ ಅನುದಾನವನ್ನು ಹೊಸ ಶೌಚಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ಹೀಗಾಗಿಯೇ ಶೌಚಾಲಯ ನಿರ್ವಹಣೆಗೆ ಅನುದಾನ ಇಲ್ಲದೇ ಹೋಗುತ್ತದೆ.

ಹೇಳಿದ್ದೊಂದು, ನೀಡಿದ್ದೊಂದು

ಹಿಂದಿನ ರಾಜ್ಯ ಸರ್ಕಾರವು ಶೌಚಾಲಯ ನಿರ್ವಹಣೆ ಮತ್ತು ದುರಸ್ತಿಗೆ ಎಂದು ₹50 ಕೋಟಿ ಅನುದಾನವನ್ನು 2022–23ರ ಬಜೆಟ್‌ನಲ್ಲಿ ಮೀಸಲಿರಿಸಿತ್ತು. ಆದರೆ ಆ ಅನುದಾನವು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಿರಲಿಲ್ಲ ಮತ್ತು ಬಿಡುಗಡೆಯಾದ ಅನುದಾನವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿರಲಿಲ್ಲ ಎಂಬುದನ್ನು ರಾಜ್ಯ ಸರ್ಕಾರದ ದಾಖಲೆಗಳೇ ಹೇಳುತ್ತವೆ.

ಕರ್ನಾಟಕ ಆರ್ಥಿಕ ಸಮೀಕ್ಷೆ 2022–23ರ ಪ್ರಕಾರ, ಸಮೀಕ್ಷೆ ಸಿದ್ದಪಡಿಸುವ ವೇಳೆಗೆ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿ ಅನುದಾನದಲ್ಲಿ ಬಿಡುಗಡೆಯಾಗಿದ್ದದ್ದು ₹17.50 ಕೋಟಿ ಮಾತ್ರ. ಆ ವೇಳೆಗೆ ಅದರಲ್ಲಿ ಬಳಕೆಯಾಗಿರುವುದು ₹9.08 ಕೋಟಿಯಷ್ಟು ಅನುದಾನ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

‘ಪರಿಸ್ಥಿತಿ ಸ್ವಲ್ಪ ಬದಲು’

ಮಕ್ಕಳು ಶೌಚಾಲಯಗಳನ್ನು ಶುಚಿಗೊಳಿಸುತ್ತಿದ್ದ ವಿಡಿಯೊ ಮತ್ತು ಚಿತ್ರಗಳು ಬಹಿರಂಗವಾಗಿ, ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವು ಮಕ್ಕಳ ಮೂಲಕ ಶೌಚಾಲಯ ಶುಚಿಗೊಳಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಆನಂತರ ಹಲವು ಶಾಲೆಗಳಲ್ಲಿ ಆ ಸ್ಥಿತಿ ಬದಲಾಗಿದೆ.

‘ನಮ್ಮ ಶಾಲೆಯಲ್ಲೂ ಈವರೆಗೆ ವಿದ್ಯಾರ್ಥಿಗಳೇ ಶೌಚಾಲಯಗಳನ್ನು ಶುಚಿ ಮಾಡುತ್ತಿದ್ದರು. ಅದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದ ನಂತರ ವಿದ್ಯಾರ್ಥಿಗಳಿಂದ ಆ ಕೆಲಸ ಮಾಡಿಸುತ್ತಿಲ್ಲ. ಈಗ ಒಂದು ತಿಂಗಳಿಂದ ಹೊರಗಿನಿಂದ ಪೌರ ಕಾರ್ಮಿಕರೊಬ್ಬರನ್ನು ಕರೆಸಿ ಆ ಕೆಲಸ ಮಾಡಿಸಲಾಗುತ್ತಿದೆ’ ಎನ್ನುತ್ತಾರೆ ಬೆಂಗಳೂರು ನಗರ ಜಿಲ್ಲೆಯ ನಾಗರಬಾವಿ ಸಮೀಪದ ಸರ್ಕಾರಿ ಶಾಲೆಯ ಶಿಕ್ಷಕ.

‘ನಮ್ಮ ಶಾಲೆಯಲ್ಲಿ ಆರು ಶೌಚಾಲಯಗಳಿವೆ. ಈ ಹಿಂದೆ ವಿದ್ಯಾರ್ಥಿಗಳು ಸರದಿಯ ಮೇಲೆ ಅವುಗಳನ್ನು ಶುಚಿ ಮಾಡುತ್ತಿದ್ದರು. ಕೆಲವು ಶಿಕ್ಷಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಏನೂ ಪ್ರಯೋಜನವಾಗಿರಲಿಲ್ಲ. ಶೌಚಾಲಯ ಶುಚಿಮಾಡುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಚಾಕೊಲೇಟ್‌ಗಳನ್ನು ಕೊಡುತ್ತಿದ್ದರು. ವಿದ್ಯಾರ್ಥಿಗಳೂ ಆ ವಿಷಯವನ್ನು ಹೊರಗೆ ಹೇಳುತ್ತಿರಲಿಲ್ಲ. ಆದರೆ ಈಗ ಸರ್ಕಾರ ಆದೇಶ ಹೊರಡಿಸಿದ ನಂತರ, ಪೋಷಕರೂ ಈ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಅವರು ವಿವರಿಸಿದರು.

ಶಾಲಾ ನಿರ್ವಹಣೆಗೆ ನೀಡುವ ಅನುದಾನವೇ ಬೇರೆ

ಶಾಲಾ ನಿರ್ವಹಣೆಗೆ ಎಂದು ಹಿಂದಿನ ಸರ್ಕಾರವು ಪ್ರತಿ ಶಾಲೆಗೆ ಕನಿಷ್ಠ ₹6,500ರಿಂದ ಗರಿಷ್ಠ ₹9,000ರದವರೆಗೆ ವಾರ್ಷಿಕ ಅನುದಾನವನ್ನು ನೀಡುತ್ತಿತ್ತು. ಪ್ರಾಥಮಿಕ ಶಾಲೆಗಳಿಗೆ ಕಡಿಮೆ ಅನುದಾನ ದೊರೆತರೆ, ಪ್ರೌಢಶಾಲೆಗಳಿಗೆ ಗರಿಷ್ಠ ಮೊತ್ತದ ಅನುದಾನ ಹೋಗುತ್ತಿತ್ತು. 2023–24ನೇ ಸಾಲಿಗೆ ಸಂಬಂಧಿಸಿದಂತೆ ಜುಲೈನಲ್ಲಿ ಈಗಿನ ಸರ್ಕಾರವು ಮಂಡಿಸಿದ ಬಜೆಟ್‌ನಲ್ಲಿ ಈ ಅನುದಾನವನ್ನು ಹೆಚ್ಚಿಸಿತ್ತು.

ಶಾಲೆಗಳಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ ₹20,000ದಿಂದ ಗರಿಷ್ಠ ₹45,000ರದವರೆಗೆ ಅನುದಾನವನ್ನು ಹೆಚ್ಚಿಸಲಾಗಿದೆ. ಆದರೆ ಈ ಅನುದಾನವನ್ನು ಶಾಲೆಯ ಎಲ್ಲಾ ಸ್ವರೂಪದ ನಿರ್ವಹಣೆಗೆ ಬಳಸಬೇಕು. ಶಾಲೆಯ ಕೊಠಡಿಗಳು, ಆವರಣವನ್ನು ಶುಚಿಯಾಗಿರಿಸಲು, ಮಧ್ಯಾಹ್ನದ ಬಿಸಿಯೂಟಕ್ಕೂ ಮುನ್ನ ಮಕ್ಕಳು ಕೈತೊಳೆಯಲು ಬಳಸುವ ಸೋಪುಗಳ ಖರೀದಿಗೆ, ಸ್ವಚ್ಛತಾ ಪರಿಕರಗಳ ಖರೀದಿಗೆ ಈ ಅನುದಾನವನ್ನು ಬಳಸಿಕೊಳ್ಳಬೇಕು. ಅದರಲ್ಲೇ ಶೌಚಾಲಯ ಶುಚಿಗೊಳಿಸಲೂ ಸ್ವಲ್ಪ ಅನುದಾನವನ್ನು ಬಳಸಿಕೊಳ್ಳಲು ಅವಕಾಶವಿದೆ.

2023ರ ಡಿಸೆಂಬರ್ 29ರಂದು ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ, ಈ ಅನುದಾನವನ್ನು ಶೌಚಾಲಯ ನಿರ್ವಹಣೆಗೆ ಆದ್ಯತೆಯ ಮೇರೆಗೆ ಬಳಸಿಕೊಳ್ಳುವಂತೆ ಸೂಚಿಸಿದೆ. ಅನುದಾನ ಉಳಿದರೆ, ಅದನ್ನು ಶಾಲೆಯ ಇತರ ನಿರ್ವಹಣೆಗೆ ಬಳಸುವಂತೆ ಸೂಚಿಸಲಾಗಿದೆ. ಆದರೆ ಈ ಅನುದಾನವೂ ಶೌಚಾಲಯ ನಿರ್ವಹಣೆಗೆ ಸಾಲುವುದಿಲ್ಲ ಎಂಬುದು ಶಾಲಾ ಶಿಕ್ಷಕರ ಅಳಲು.

‘ನಮ್ಮ ಶಾಲೆಗೆ ಶೌಚಾಲಯ ಶುಚಿಗೊಳಿಸಲು ಬರುವ ವ್ಯಕ್ತಿ ಒಂದು ಶೌಚಾಲಯಕ್ಕೆ ₹50 ಪಡೆದುಕೊಳ್ಳುತ್ತಾರೆ. ಆರು ಶೌಚಾಲಯಕ್ಕೆ ₹300ರಂತೆ ತಿಂಗಳಲ್ಲಿ ಎಂಟು ಬಾರಿ ಶುಚಿಗೊಳಿಸಲು ₹2,400 ಆಗುತ್ತದೆ. 10 ತಿಂಗಳ ಶಾಲಾ ಅವಧಿಯಲ್ಲಿ ಆ ವ್ಯಕ್ತಿಗೆ ಕೂಡಲೇ ₹24,000 ವೆಚ್ಚವಾಗುತ್ತದೆ. ಇನ್ನು ಅದಕ್ಕೆ ಫಿನಾಯಿಲ್‌, ಪೊರಕೆಗಳ ಖರ್ಚು ಬೇರೆ. ಶಾಲಾ ನಿರ್ವಹಣೆಗೆ ಎಂದು ಸರ್ಕಾರ ನಮ್ಮ ಶಾಲೆಗೆ ₹33,000 ನೀಡಿದೆ. ಅದರಲ್ಲೇ ಡಸ್ಟರ್‌, ಪೊರಕೆಗಳನ್ನು ಖರೀದಿಸಬೇಕು. ಸೋಪು ಮತ್ತಿತರ ಸಾಮಗ್ರಿಗಳನ್ನು ಖರೀದಿಸಬೇಕು. ₹33,000 ಮೊತ್ತದ ವಾರ್ಷಿಕ ಅನುದಾನ ಈ ಎಲ್ಲಾ ಕೆಲಸಗಳಿಗೆ ಎಲ್ಲಿ ಸಾಲುತ್ತದೆ’ ಎಂಬುದು ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದ ಸರ್ಕಾರಿ ಶಾಲೆಯ ಶಿಕ್ಷಕರ ಪ್ರಶ್ನೆ. 

ಶುಚಿತ್ವಕ್ಕೆ ಮಾರ್ಗಸೂಚಿ

ಕೇಂದ್ರ ಸರ್ಕಾರವು ಸ್ವಚ್ಛ ಭಾರತ–ಸ್ವಚ್ಛ ವಿದ್ಯಾಲಯ ಅಭಿಯಾನದ ಅಡಿಯಲ್ಲಿ ಶಾಲೆಗಳಲ್ಲಿ ಶುಚಿತ್ವ ನಿರ್ವಹಣೆಗೆ ಮಾರ್ಗಸೂಚಿಗಳನ್ನು 2014ರಲ್ಲಿ ರೂಪಿಸಿತ್ತು. ಆ ಮಾರ್ಗಸೂಚಿಗಳು ಈಗಲೂ ಜಾರಿಯಲ್ಲಿವೆ. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವ ಕಾರಣ ಕೇಂದ್ರ ಸರ್ಕಾರವು ಯಾವುದೇ ಆದೇಶ ಹೊರಡಿಸಿದರೂ, ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಆದೇಶ ಹೊರಡಿಸಬೇಕಾಗುತ್ತದೆ. ಬಹುತೇಕ ರಾಜ್ಯಗಳು ಅಂತಹ ಆದೇಶವನ್ನು ಹೊರಡಿಸಿಲ್ಲ. ಹೀಗಾಗಿ ಈ ಮಾರ್ಗಸೂಚಿಗಳು ಅನುಷ್ಠಾನಕ್ಕೆ ಬಂದಿಲ್ಲ.

ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಈ ಮಾರ್ಗಸೂಚಿಗಳ ಅನ್ವಯ ಶಾಲಾ ಶೌಚಾಲಯಗಳ ನಿರ್ವಹಣೆಗೆ ಎಂದು ಗರಿಷ್ಠ ಮೊತ್ತದ ಅನುದಾನವನ್ನು ನೀಡಲಾಗುತ್ತಿದೆ. ರಾಜಸ್ಥಾನದಲ್ಲಿ ಪ್ರತಿ ಶಾಲೆಗೆ ವಾರ್ಷಿಕ ₹25,000ರಂತೆ ಅನುದಾನವನ್ನು ಶೌಚಾಲಯವನ್ನು ಶುಚಿಗೊಳಿಸಲೆಂದೇ ನೀಡಲಾಗುತ್ತಿದೆ.

* ಶಾಲಾ ಶೌಚಾಲಯಗಳನ್ನು ಪ್ರತಿದಿನ ಶುಚಿಗೊಳಿಸಬೇಕು. ಅದರ ಮೇಲ್ವಿಚಾರಣೆಗೆ ಶಿಕ್ಷಕರೊಬ್ಬರನ್ನು ನಿಯೋಜಿಸಬೇಕು

* ಯಾವುದೇ ರೀತಿಯ ಶುಚಿ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದು

* ಶಾಲಾ ನಿರ್ವಹಣೆಗೆ ವಾರ್ಷಿಕ ಗುತ್ತಿಗೆ ನೀಡಬೇಕು. ಅದರಲ್ಲಿ ಶೌಚಾಲಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನೂ ಸೇರಿಸಬೇಕು

* ಶೌಚಾಲಯ ನಿರ್ವಹಣೆಗೆ ಅಗತ್ಯವಿರುವ ಬಕೆಟ್‌, ಪೊರಕೆ, ಬ್ರಷ್‌ ಮತ್ತು ಫಿನಾಯಿಲ್‌ನಂತಹ ರಾಸಾಯನಿಕಗಳನ್ನು ವಾರ್ಷಿಕ ಗುತ್ತಿಗೆ ಆಧಾರದಲ್ಲೇ ಖರೀದಿಸಬೇಕು

* ಶೌಚಾಲಯ ನಿರ್ವಹಣೆಗೆ ವ್ಯಕ್ತಿಗಳನ್ನು ನೇಮಿಸಿಕೊಳ್ಳಬೇಕು

* ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ವೇಳೆ ಫ್ಲಶ್‌ಟ್ಯಾಂಕ್‌ಗಳ ಅಳವಡಿಕೆಗೆ ಒತ್ತು ನೀಡಬೇಕು, ಫ್ಲಶ್‌ಟ್ಯಾಂಕ್‌ಗಳು ಇದ್ದರೆ  ಶುಚಿತ್ವ ಕಾಪಾಡಿಕೊಳ್ಳುವುದು ಸುಲಭವಾಗುತ್ತದೆ

ಆಧಾರ: ರಾಜ್ಯ ಬಜೆಟ್‌ 2022–23 ಮತ್ತು 2023–24, ಕರ್ನಾಟಕ ಆರ್ಥಿಕ ಸಮೀಕ್ಷೆ 2022–23, ಶಾಲಾ ಶಿಕ್ಷಣ ಇಲಾಖೆಯ ಆಂತರಿಕ ಬಜೆಟ್‌, ಶಾಲಾ ಶಿಕ್ಷಣ ಇಲಾಖೆಯ ಆದೇಶ ಮತ್ತು ಸುತ್ತೋಲೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT