ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ
ಆಳ–ಅಗಲ: ಬಿಜೆಪಿ– ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ಭರಪೂರ
ಬಿಜೆಪಿಯದ್ದು ‘ಮೋದಿಯವರ ಗ್ಯಾರಂಟಿ’- ಕಾಂಗ್ರೆಸ್‌ನದ್ದು ನ್ಯಾಯದ ಭರವಸೆ
Published 15 ಏಪ್ರಿಲ್ 2024, 23:50 IST
Last Updated 15 ಏಪ್ರಿಲ್ 2024, 23:50 IST
ಅಕ್ಷರ ಗಾತ್ರ

ಈ ಲೋಕಸಭಾ ಚುನಾವಣೆಗೆ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಆಡಳಿತಾರೂಢ ಬಿಜೆಪಿಯು ತಮ್ಮ ನೇತೃತ್ವದ ಸರ್ಕಾರದ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದೆ. ಇನ್ನೊಂದೆಡೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್, ಸರ್ಕಾರದ ನೀತಿಗಳ ವಿರುದ್ಧ ತಾನು ಮಾಡಿದ್ದ ಆರೋಪಗಳಿಗೇ ಪ್ರಣಾಳಿಕೆಯ ರೂಪ ನೀಡಿದೆ. ಆ ನೀತಿಗಳಲ್ಲಿ ಏನೆಲ್ಲಾ ಬದಲಾವಣೆ ತರುತ್ತೇವೆ ಎಂಬುದನ್ನು ವಿವರಿಸಿದೆ..

––––

ಬಿಜೆಪಿಯದ್ದು ‘ಮೋದಿಯವರ ಗ್ಯಾರಂಟಿ’

ಬಿಜೆಪಿ ತನ್ನ ಪ್ರಣಾಳಿಕೆಗೆ ‘ಸಂಕಲ್ಪ ಪತ್ರ’ ಎಂದು ಹೆಸರಿಟ್ಟಿದೆ. ಈ ಸಂಕಲ್ಪ ಪತ್ರದಲ್ಲಿ ನೀಡಿರುವ ಭರವಸೆಗಳನ್ನು ‘ಮೋದಿಯವರ ಗ್ಯಾರಂಟಿಗಳು’ ಎಂದು ಕರೆಯಲಾಗಿದೆ. ಸಂಕಲ್ಪ ಪತ್ರದಲ್ಲಿ ಬಿಜೆಪಿ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಬದಲಿಗೆ ತನ್ನ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳನ್ನೇ ಮುಂದುವರಿಸುವುದಾಗಿ ಭರವಸೆ ನೀಡಿದೆ. ಜತೆಗೆ ಅಂತಹ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಹೇಳಿದೆ.

ದೇಶದ ಬಡಜನರಿಗಾಗಿ ನಾವು ದುಡಿಯುತ್ತೇವೆ ಎಂದು ಹೇಳಿಕೊಂಡಿರುವ ಬಿಜೆಪಿಯು, ಬಡವರಿಗಾಗಿ ಹಲವು ಯೋಜನೆಗಳನ್ನು ಮುಂದುವರಿಸುವುದಾಗಿ ಹೇಳಿದೆ. ಕೈಗೆಟಕುವ ದರದಲ್ಲಿ ಮನೆಗಳನ್ನು ಹೊಂದಲು ಯೋಜನೆ ರೂಪಿಸುತ್ತೇವೆ, ಇದಕ್ಕಾಗಿ ರೇರಾ ಕಾಯ್ದೆಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳುತ್ತೇವೆ. ಜನ ಸಾಮಾನ್ಯರ ಬದಕನ್ನು ಸುಲಭವಾಗಿಸಲು ಉಚಿತ ವಿದ್ಯುತ್ (ಸೋಲಾರ್‌ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೆ) ಒದಗಿಸುತ್ತೇವೆ, ಓಡಾಟಕ್ಕೆ ಅನುಕೂಲವಾಗುವಂತೆ ಮೆಟ್ರೊ, ರೈಲು ಸೇವೆಗಳನ್ನು ವಿಸ್ತರಿಸುತ್ತೇವೆ ಎಂದು ಬಿಜೆಪಿ ತನ್ನ ಸಂಕಲ್ಪ ಪತ್ರದಲ್ಲಿ ಹೇಳಿಕೊಂಡಿದೆ.

ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ಕೌಶಲ ಅಭಿವೃದ್ಧಿ ಕಾರ್ಯಕ್ರಮವನ್ನು ವಿಸ್ತರಿಸುತ್ತೇವೆ. ಕೃಷಿ, ತಯಾರಿಕೆ ಮತ್ತು ಸೇವಾ ವಲಯಗಳಿಗೆ ಅಗತ್ಯವಿರುವ ಕೌಶಲಭರಿತ ಉದ್ಯೋಗಿಗಳನ್ನು ಒದಗಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಭಾರತವನ್ನು ವಿಶ್ವದ ಆಟೊಮೊಬೈಲ್‌ ತಯಾರಿಕಾ ಕೇಂದ್ರ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತೇವೆ. ಭಾರತವನ್ನು ಎಲೆಕ್ಟ್ರಾನಿಕ್‌ ಸಾಧನಗಳ ತಯಾರಿಕಾ ಕೇಂದ್ರವನ್ನಾಗಿ, ಜಾಗತಿಕ ಎಂಜಿನಿಯರಿಂಗ್‌ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುತ್ತೇವೆ. ಈ ಮೂಲಕ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತೇವೆ ಎಂದು ಸಂಕಲ್ಪ ಪತ್ರದಲ್ಲಿ ವಿವರಿಸಲಾಗಿದೆ.

ಬಿಜೆಪಿ ಭರವಸೆಗಳು

ರೈತ ಕಲ್ಯಾಣ

l ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳ

l ರೈತರಿಗೆ ವಾರ್ಷಿಕ ₹6,000 ಕೃಷಿ ಸಮ್ಮಾನ ನಿಧಿ ಯೋಜನೆ ಮುಂದುವರಿಕೆ

l ಬೆಳೆ ವಿಮೆ ಯೋಜನೆ ಬಲವರ್ಧನೆ

l ಕೃಷಿ ಉತ್ಪನ್ನಗಳ ಸಂಗ್ರಹ ಮತ್ತು ಸಾಗಣೆಗೆ ಅನುಕೂಲವಾಗುವಂತೆ ಮೂಲಸೌಕರ್ಯ ಅಭಿವೃದ್ಧಿ

ಆರೋಗ್ಯ ಮತ್ತು ಆಹಾರ

l ₹5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಆಯುಷ್ಮಾನ್‌ ಭಾರತ್ ಯೋಜನೆಯನ್ನು ಮುಂದುವರಿಸುತ್ತೇವೆ. ಹಿರಿಯ ನಾಗರಿಕರಿಗೂ ಈ ಯೋಜನೆ ವಿಸ್ತರಿಸುತ್ತೇವೆ. ಯೋಜನೆ ಅಡಿ ಚಿಕಿತ್ಸೆ ಪಡೆಯಬಹುದಾದ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹೆಚ್ಚಿಸುತ್ತೇವೆ

l 80 ಕೋಟಿ ಜನರಿಗೆ ಉಚಿತವಾಗಿ ಪಡಿತರ ಒದಗಿಸುವ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸುತ್ತೇವೆ

l ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವುದನ್ನು ಈಗ ಹೇಗೆ ತಡೆಗಟ್ಟಿದ್ದೇವೂ, ಮುಂದೆಯೂ ಹಾಗೆಯೇ ತಡೆಗಟ್ಟುತ್ತೇವೆ. ಇದಕ್ಕಾಗಿ ಬೆಲೆ ಏರಿಕೆ ತಡೆ ನಿಧಿಯನ್ನು ಹೆಚ್ಚಿಸುತ್ತೇವೆ.

ಉದ್ಯೋಗವಕಾಶ

l ಮುದ್ರಾ ಯೋಜನೆ ಅಡಿ ತರುಣ ವರ್ಗದ ಉದ್ಯಮಿಗಳು ಈಗಾಗಲೇ ಸಾಲ ಪಡೆದು ಅದನ್ನು ತೀರಿಸಿದ್ದರೆ, ಎರಡನೇ ಸಾಲದ ಮೊತ್ತವನ್ನು ₹20 ಲಕ್ಷದವರೆಗೆ ಹೆಚ್ಚಿಸುತ್ತೇವೆ

l ದೇಶದ ಜನರಲ್ಲಿ ಉದ್ಯೋಗಾವಕಾಶ ಮತ್ತು ಸ್ವಯಂ ಉದ್ಯೋಗಾವಕಾಶದ ಸಾಮರ್ಥ್ಯವನ್ನು ಹೆಚ್ಚಿಸಲು ನಮ್ಮ ಪಕ್ಷವು ಬದ್ಧವಾಗಿರಲಿದೆ

l ಉದ್ಯೋಗಾವಕಾಶ ಹೆಚ್ಚಿಸಲು ಕೌಶಲ ಅಭಿವೃದ್ಧಿಯಂತಹ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುತ್ತೇವೆ

l ಭಾರತವನ್ನು ಜಾಗತಿಕ ತಯಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಿ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತೇವೆ

l ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಮೂಲಕ ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ

l ಕಾಲಕಾಲಕ್ಕೆ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುತ್ತೇವೆ. ರಾಜ್ಯಮಟ್ಟದಲ್ಲೂ ಅಂತಹ ನೇಮಕಾತಿ ನಡೆಸುವಂತೆ ಪ್ರೋತ್ಸಾಹಿಸುತ್ತೇವೆ.

ತೆರಿಗೆ

l ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರನ್ನು ಗೌರವಿಸುತ್ತೇವೆ

l ನಮ್ಮ ಆರ್ಥಿಕತೆಗೆ ಅಗತ್ಯವಾದ ರೀತಿಯಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ನೀತಿಯಲ್ಲಿ ಬದಲಾವಣೆ ತರುತ್ತೇವೆ

****

ಕಾಂಗ್ರೆಸ್‌ನದ್ದು ನ್ಯಾಯದ ಭರವಸೆ

ಇದರ ಹೊರತಾಗಿ ರಾಷ್ಟ್ರೀಯ ಜಲಜೀವನ ಅಭಿಯಾನ, ಉಜ್ವಲ ಯೋಜನೆ, ಹೆದ್ದಾರಿ ನಿರ್ಮಾಣ ಯೋಜನೆಗಳನ್ನು ಮುಂದುವರಿಸುವುದಾಗಿ ಸಂಕಲ್ಪ ಪತ್ರದಲ್ಲಿ ಹೇಳಿದೆ. ‘ಮೈ ಭಾರತ್‌’ ಕಾರ್ಯಕ್ರಮದ ಅಡಿಯಲ್ಲಿ ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ನೀಡಲಾಗುತ್ತದೆ. ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳಾಗುವುದು ಹೇಗೆ ಮತ್ತು ಇತರರನ್ನು ಅವುಗಳಲ್ಲಿ ಒಳಗೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಾಗುತ್ತದೆ. ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆ ಮತ್ತು ತೀರ್ಥಯಾತ್ರೆಗೆ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದು ‘ಮೋದಿಯವರ ಗ್ಯಾರೆಂಟಿ’ಯಲ್ಲಿ ವಿವರಿಸಲಾಗಿದೆ.

ತಿನ್ನುವ ಅನ್ನದಿಂದ ಹಿಡಿದು ತೊಡುವ ತೊಡುಗೆಯವರೆಗೆ ನಡೆದ ಪರ–ವಿರೋಧದ ಚರ್ಚೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಟಾಪಟಿ, ಭಾರತವು ಫೆಡರಲ್‌ ವ್ಯವಸ್ಥೆಯದ್ದು ಅಥವಾ ಯೂನಿಯನ್‌ ವ್ಯವಸ್ಥೆ
ಯದ್ದು ಎನ್ನುವ ಚರ್ಚೆ, ಕೇಂದ್ರ ಸರ್ಕಾರ ಹಾಗೂ ಕೊಲಿಜಿಯಂ ನಡುವಣ ತಿಕ್ಕಾಟ, ಮಾಧ್ಯಮ ಸ್ವಾತಂತ್ರದ ಹರಣವಾಗಿದೆ ಎಂಬುದರ ಚರ್ಚೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗುತ್ತಿದೆ ಎನ್ನುವ ಹೋರಾಟ... ಹೀಗೆ ಕಳೆದ 10 ವರ್ಷಗಳಲ್ಲಿ ಹಲವು ವಿಷಯ–ವಿಚಾರಗಳು ಚರ್ಚಿಸಲ್ಪಟ್ಟಿವೆ. ಕಾಂಗ್ರೆಸ್‌ ತನ್ನ ‘ನ್ಯಾಯ ಪತ್ರ’ದಲ್ಲಿ ಈ ಎಲ್ಲದರ ಕುರಿತು ಚರ್ಚಿಸಿದೆ ಮತ್ತು ಅಧಿಕಾರಕ್ಕೆ ಬಂದರೆ, ಇಂಥ ವಿಷಯಗಳ ಕುರಿತು ತನ್ನ ಐದು ವರ್ಷದ ಯೋಜನೆ ಏನಾಗಿರಲಿದೆ ಎಂಬುದನ್ನು ಹೇಳಿದೆ.

‘ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಗಳನ್ನು ಮರುಸ್ಥಾಪಿಸಲಾಗುವುದು’ ಎಂದು ಕಾಂಗ್ರೆಸ್‌ ಹೇಳಿದೆ. ಜನರ ಖಾಸಗಿತನಕ್ಕೆ ಧಕ್ಕೆ ತರುವ ಎಲ್ಲ ಕಾನೂನುಗಳನ್ನು ಪರಿಶೀಲಿಸಲಾಗುವುದು. ಆಹಾರ, ತೊಡುಗೆ, ಪ್ರಯಾಣ, ಪ್ರೇಮ ಮತ್ತು ವಿವಾಹ... ಹೀಗೆ ಯಾವ ವಿಷಯದಲ್ಲಿಯೂ ಸರ್ಕಾರವು ಮಧ್ಯ ಪ್ರವೇಶಿಸುವುದಿಲ್ಲ ಎಂದು ಭರವಸೆ ನೀಡಿದೆ. 

ಪೊಲೀಸರು, ತನಿಖಾ ಸಂಸ್ಥೆಗಳು, ಗೂಢಚಾರಿ ಸಂಸ್ಥೆಗಳು ಸ್ವಾಯತ್ತವಾಗಿ ಹಾಗೂ ಕಾನೂನಿಗನುಸಾರವಾಗಿ ಕೆಲಸ ಮಾಡುವಂತಾಗುತ್ತವೆ ಎನ್ನುವ ಭರವಸೆ ನೀಡುತ್ತೇವೆ ಎಂದು ಕಾಂಗ್ರೆಸ್‌ ಹೇಳಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಅಸಾಧಾರಣ ಸಂದರ್ಭದಲ್ಲಿ ಮಾತ್ರ ಜೈಲಿಗೆ ಕಳುಹಿಸಲು ಅವಕಾಶ ಇರುವಂತೆ ಕಾನೂನು ರೂಪಿಸಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ರಾಷ್ಟ್ರೀಯ ನ್ಯಾಯಾಂಗ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿಯು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ಆಯ್ಕೆ ಮಾಡುವ ಹಾಗೂ ನೇಮಕ ಮಾಡುವ ಕೆಲಸ ಮಾಡಲಿದೆ. ಸಾಂವಿಧಾನಿಕ ನ್ಯಾಯಾಲಯ ಹಾಗೂ ಮೇಲ್ಮನವಿ ನ್ಯಾಯಾಲಯ ಎಂದು ಸುಪ್ರೀಂ ಕೋರ್ಟ್‌ ಅನ್ನು ಎರಡು ಭಾಗಗಳಾಗಿ ಮಾಡಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ. ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ನಿರಾಕರಿಸುವುದಿಲ್ಲ. ಬಿಜೆಪಿ/ಎನ್‌ಡಿಎ ಸರ್ಕಾರದ ‘ಸೆಸ್‌’ರಾಜ್ ಅನ್ನು ಅಂತ್ಯಗೊಳಿಸಲಾಗುವುದು. ರಾಜ್ಯ ಸರ್ಕಾರಗಳಿಂದ ಶೇ 5ರಷ್ಟು ಮಾತ್ರವೇ ಕೇಂದ್ರ ಸೆಸ್‌ ಹಾಗೂ ಹೆಚ್ಚುವರಿ ಶುಲ್ಕವನ್ನು ಪಡೆದುಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ಹೇಳಿದೆ.

ರೈತರ ಕಲ್ಯಾಣ

l ಸ್ವಾಮಿನಾಥನ್‌ ವರದಿಯ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುತ್ತೇವೆ. ಜೊತೆಗೆ, ಎಂಎಸ್‌ಪಿಗೆ ಕಾನೂನಾತ್ಮಕ ಖಾತರಿಯನ್ನೂ ನೀಡುತ್ತೇವೆ

l ಗ್ರಾಮ ಹಾಗೂ ಪುಟ್ಟ ನಗರಗಳಲ್ಲಿ ರೈತರೇ ತಮ್ಮ ಬೆಳೆಗಳನ್ನು ಮಾರುವಂಥ ಸಣ್ಣ ಮಾರುಕಟ್ಟೆಗಳ ಸ್ಥಾಪನೆ

ಆರೋಗ್ಯ ಮತ್ತು ಆಹಾರ

l ದೇಶದ ಎಲ್ಲರಿಗೂ ₹25 ಲಕ್ಷದವರೆಗೆ ನಗದುರಹಿತ (ಕ್ಯಾಶ್‌ಲೆಸ್‌) ಆರೋಗ್ಯ ವಿಮೆ. ಈ ಯೋಜನೆಯ ವ್ಯಾಪ್ತಿಗೆ ಖಾಸಗಿ ಆಸ್ಪತ್ರೆ, ಎನ್‌ಜಿಒಗಳು ನಡೆಸುವ ಆರೋಗ್ಯ ಕೇಂದ್ರಗಳನ್ನೂ ಒಳಗೊಳ್ಳಲು ಕ್ರಮ ಕೈಗೊಳ್ಳಲಾಗುವುದು

l 12ನೇ ತರಗತಿವರೆಗೂ ಬಿಸಿಯೂಟ ಯೋಜನೆ ವಿಸ್ತರಣೆ

ಉದ್ಯೋಗ

l ನಿರುದ್ಯೋಗದ ಹೊರೆಯನ್ನು ತಗ್ಗಿಸುವ ಮೊದಲ ಹಂತವಾಗಿ, ಎಲ್ಲ ಶೈಕ್ಷಣಿಕ ಸಾಲಗಳ ಮನ್ನಾ
(ಬಾಕಿ ಅಸಲು ಮತ್ತು ಬಡ್ಡಿಗೆ ಮಾತ್ರ)

l ಪದವೀಧರರಿಗೆ ಸರ್ಕಾರಿ ಕಚೇರಿಗಳಲ್ಲಿ ಒಂದು ವರ್ಷದ ವೃತ್ತಿ ತರಬೇತಿ (ಅಪ್ರೆಂಟಿಶಿಪ್‌) ನೀಡಲಾಗುವುದು. ಈ ಅವಧಿಯಲ್ಲಿ ಅವರಿಗೆ
₹1 ಲಕ್ಷ ಅಪ್ರೆಂಟಿಸ್‌ಶಿಪ್‌ ವೇತನ ನೀಡಲಾಗುವುದು

l ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸರ್ಕಾರಿ ಉದ್ಯಮ ಸಂಸ್ಥೆಗಳಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳ ಭರ್ತಿ. ಜೊತೆಗೆ ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುವ ಪಂಚಾಯಿತಿ, ಪುರಸಭೆಗಳಲ್ಲಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ

l ಉದ್ಯೋಗ ಖಾತ್ರಿಯ ದಿನದ ಕೂಲಿಯನ್ನು ₹400ಕ್ಕೆ ಹೆಚ್ಚಿಸಲಾಗುವುದು. ನಗರ ಉದ್ಯೋಗ ಯೋಜನೆಯಡಿಯಲ್ಲಿ ನಗರದಲ್ಲಿ ವಾಸಿಸುವ ಬಡವರಿಗೂ ಕೆಲಸದ ಗ್ಯಾರಂಟಿ ನೀಡಲಾಗುವುದು

l 2,500ಕ್ಕಿಂತ ಹೆಚ್ಚು ಜನಸಂಖ್ಯೆ ಗ್ರಾಮಗಳಲ್ಲಿ ಎರಡನೇ ಆಶಾ ಕಾರ್ಯಕರ್ತೆಯನ್ನು ನೇಮಕ ಮಾಡಲಾಗುವುದು

l ಅಂಗನವಾಡಿ ಕಾರ್ಯಕರ್ತೆಯರ ಸಂಖ್ಯೆಯನ್ನು ದ್ವಿಗುಣ ಮಾಡಲಾಗುವುದು. ಈ ಮೂಲಕ 14 ಲಕ್ಷ ಉದ್ಯೋಗದ ಸೃಷ್ಟಿ

ತೆರಿಗೆ

l ಆದಾಯ ತೆರಿಗೆ ಪಾವತಿದಾರರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಹೊರೆಯಾಗದ ಹಾಗೆ ಆದಾಯ ತೆರಿಗೆ ನೀತಿಯನ್ನು ಮಾರ್ಪಡಿಸಲಾಗುವುದು

l ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹೂಡಿಕೆ ಮತ್ತು ಕಾರ್ಯನಿರ್ವಹಣೆಗೆ ತೊಡಕಾಗಿರುವ ‘ಏಂಜಲ್‌ ಟ್ಯಾಕ್ಸ್‌’ನಂತಹ ಸುಲಿಗೆ ಸ್ವರೂಪದ ತೆರಿಗೆಗಳನ್ನು ತೆಗೆದುಹಾಕಲಾಗುವುದು

l ಜಿಎಸ್‌ಟಿಯನ್ನು ಸಂಪೂರ್ಣವಾಗಿ ಮಾರ್ಪಡಿಸಲಾಗುವುದು. ಅತ್ಯಂತ ಕಡಿಮೆ ದರದ ಜಿಎಸ್‌ಟಿ ವಿಧಿಸಲಾಗುವುದು. ಒಂದು ನಿಗದಿತ ಮೊತ್ತದವರೆಗೆ ಜಿಎಸ್‌ಟಿ ಪಾವತಿದಾರರ ನಿರ್ವಹಣೆಯನ್ನು ರಾಜ್ಯಗಳ ವ್ಯಾಪ್ತಿಗೆ ನೀಡಲಾಗುವುದು. ಜಿಎಸ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಅಧಿಕಾರ ಹಂಚಿಕೆ ಮಾಡಲಾಗುವುದು

–––

ಆಧಾರ: ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆಗಳು

*****

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT