ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ವಿಶ್ಲೇಷಣೆ | ರೈಲ್ವೆಯಲ್ಲಿ ಸುರಕ್ಷತೆ ಕಡೆಗಣನೆ: ಅವಘಡಗಳಿಗೆ ಕಾರಣ ಏನು?
ವಿಶ್ಲೇಷಣೆ | ರೈಲ್ವೆಯಲ್ಲಿ ಸುರಕ್ಷತೆ ಕಡೆಗಣನೆ: ಅವಘಡಗಳಿಗೆ ಕಾರಣ ಏನು?
Published 6 ಜೂನ್ 2023, 1:10 IST
Last Updated 6 ಜೂನ್ 2023, 1:10 IST
ಅಕ್ಷರ ಗಾತ್ರ

ರೈಲುಗಳು ಮತ್ತು ರೈಲು ಹಳಿಗಳ ಸುರಕ್ಷತೆಯನ್ನು ರೈಲ್ವೆ ಇಲಾಖೆ ಕಡೆಗಣಿಸಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಸುರಕ್ಷತಾ ಕ್ರಮಗಳನ್ನು ಕಡೆಗಣಿಸುವುದನ್ನು ಬಿಡಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. 2022ರ ಡಿಸೆಂಬರ್‌ನಲ್ಲಿ ಈ ವರದಿ ಸಲ್ಲಿಕೆಯಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಬಾಲೇಶ್ವರ ರೈಲು ದುರಂತ ನಡೆದಿದೆ. ರೈಲ್ವೆ ಇಲಾಖೆಯು ಸುರಕ್ಷತೆಯನ್ನು ಕಡೆಗಣಿಸುತ್ತಿದೆ ಎಂಬುದರತ್ತ ಈ ಅವಘಡವು ಬೊಟ್ಟುಮಾಡಿ ತೋರಿಸುತ್ತಿದೆ.

ಕೊನೆಯ ಕ್ಷಣದಲ್ಲಿ ಸಿಗ್ನಲ್‌ ಬದಲಾವಣೆ ಆಗಿದ್ದರಿಂದ ಬಾಲೇಶ್ವರ ಅವಘಡ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ರೈಲ್ವೆ ಸಚಿವರು ಸಹ ಇದನ್ನೇ ಹೇಳಿದ್ದಾರೆ. 2017ರಿಂದ 2021ರ ಮಧ್ಯೆ ದೇಶದಲ್ಲಿ ಒಟ್ಟು 1,800 ರೈಲು ಅವಘಡಗಳು ಸಂಭವಿಸಿವೆ. ಅವುಗಳಲ್ಲಿ ಸಿಗ್ನಲ್‌ ಸಮಸ್ಯೆಗೆ ಸಂಬಂಧಿಸಿದ ಅವಘಡಗಳ ಸಂಖ್ಯೆ 211. ಸಿಗ್ನಲ್‌ ವ್ಯವಸ್ಥೆಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶದ ಸಂಪನ್ಮೂಲ, ಜನರ ಜೀವಕ್ಕೆ ಹಾನಿಯಾಗುತ್ತದೆ. ಇದನ್ನು ತಪ್ಪಿಸಬೇಕು ಎಂದು  ಸಿಎಜಿ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. 

ರೈಲು ಪ್ರಯಾಣವನ್ನು ಸುರಕ್ಷಿತವಾಗಿಸಲು ಹಳಿಗಳ ನವೀಕರಣ ಮತ್ತು ಬದಲಾವಣೆ ಅತ್ಯಂತ ಮುಖ್ಯ. ರಾಷ್ಟ್ರೀಯ ರೈಲು ಸುರಕ್ಷಾ ಕೋಶದ (ಆರ್‌ಆರ್‌ಎಸ್‌ಕೆ) ನಿಯಮಗಳ ಪ್ರಕಾರ, ಪ್ರತಿ ಹಳಿಯನ್ನು ನಾಲ್ಕು ವರ್ಷಗಳಿಗೆ ಒಮ್ಮೆ ನವೀಕರಿಸಬೇಕು. ಆದರೆ, ದೇಶದ ಎಲ್ಲಾ ರೈಲು ವಲಯಗಳಲ್ಲಿ ಈ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಕೆಲವು ವಲಯಗಳಲ್ಲಿ ನವೀಕರಣವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಹೇಳಿತ್ತು.

ಆರ್‌ಆರ್‌ಎಸ್‌ಕೆ ನಿಯಮಾವಳಿಗಳಂತೆ ರೈಲುಹಳಿಗಳ ನವೀಕರಣಕ್ಕೆ ₹1.54 ಲಕ್ಷ ಕೋಟಿ ವೆಚ್ಚವಾಗುತ್ತದೆ. ಇದರಲ್ಲಿ ಆರ್‌ಆರ್‌ಎಸ್‌ಕೆ ನಿಧಿಯಿಂದ ₹1.19 ಲಕ್ಷ ಕೋಟಿ ಭರಿಸಬೇಕು. ಆದರೆ, ಕೇಂದ್ರ ಸರ್ಕಾರವು ಸ್ಥಾಪಿಸಿರುವ ಈ ನಿಧಿಯ ಒಟ್ಟು ಮೊತ್ತವೇ ₹1 ಲಕ್ಷ ಕೋಟಿ. ಹೀಗಿರುವಾಗ ಎಲ್ಲಾ ಹಳಿಗಳ ನವೀಕರಣ ಸಾಧ್ಯವೇ ಇಲ್ಲ. ಹಣಕಾಸಿನ ಕೊರತೆಯ ಕಾರಣದಿಂದಲೇ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ರೈಲು ಹಳಿಗಳ ನವೀಕರಣ ನಡೆದಿರಲಿಲ್ಲ. 2018ರ ಅಕ್ಟೋಬರ್‌ನಲ್ಲಿ ಈ ಮಾರ್ಗದ ಹಳಿಗಳ ನವೀಕರಣ ನಡೆಯಬೇಕಿತ್ತು. ಅದೇ ಮಾರ್ಗದಲ್ಲಿ ಚಲಿಸುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್‌ 2019ರ ಫೆಬ್ರುವರಿಯಲ್ಲಿ ಹಳಿ ತಪ್ಪಿತ್ತು. ಆ ಅವಘಡದಲ್ಲಿ ಆರು ಮಂದಿ ಮೃತಪಟ್ಟಿದ್ದರು. ರೈಲು ಹಳಿ ನವೀಕರಣಕ್ಕೆ ಹಣ ಒದಗಿಸದೇ ಇರುವುದರಿಂದಲೇ ಈ ಅಪಘಾತ ಸಂಭವಿಸಿತ್ತು ಎಂಬುದನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದು ರೈಲ್ವೆ ಇಲಾಖೆ ವತಿಯಿಂದ ಆದ ಕರ್ತವ್ಯ ಲೋಪ. ಈ ಲೋ‍ಪವನ್ನು ಕೇಂದ್ರ ಸರ್ಕಾರವು ಸರಿಪಡಿಸಬೇಕು ಎಂದು ಸಿಎಜಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಅನುದಾನದ ಕೊರತೆಯೇ ರೈಲ್ವೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕಡೆಗಣಿಸಲು ಪ್ರಮುಖ ಕಾರಣ ಎಂದು ಸಿಎಜಿ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ಆಧಾರ: ರೈಲ್ವೆ ಇಲಾಖೆಗೆ ಸಂಬಂಧಿಸಿದ ಸಿಎಜಿ ವರದಿಗಳು, ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ಕೈಪಿಡಿ, ಬಾಲೇಶ್ವರ ರೈಲು ದುರಂತಕ್ಕೆ ಸಂಬಂಧಿಸಿದ ರೈಲ್ವೆ ಇಲಾಖೆಯ ಪ್ರಾಥಮಿಕ ವರದಿ, ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT