ಟ್ರೋಫಿ ಉಡುಗೊರೆ ನೀಡುವುದು ಅಪರಾಧ
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ವನ್ಯಜೀವಿಗಳ ಮಾರಾಟ ಮತ್ತು ಟ್ರೋಫಿಗಳ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಪ್ರಾಣಿಗಳ ಚರ್ಮ ಉಗುರು ಸೇರಿದಂತೆ ಇತರೆ ಅವಯವಗಳನ್ನು (ಟ್ರೋಫಿ) ಸಂಸ್ಕರಿಸಿ ಮನೆಯಲ್ಲಿ ಸಂಗ್ರಹಿಸಿಡುವುದು ಕೂಡ ಅಪರಾಧ. ಆದರೆ ಕೆಲವರು ವನ್ಯಜೀವಿ ಟ್ರೋಫಿಗಳು ನಮ್ಮ ಪೂರ್ವಿಕರಿಂದ ಬಂದಿರುವ ಬಳುವಳಿ ಎಂದು ಸಮರ್ಥಿಸಿಕೊಳ್ಳುತ್ತಾರೆ. ದೇಶದಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ವರ್ಷದಲ್ಲಿ 30 ದಿನ ವನ್ಯಜೀವಿ ಟ್ರೋಫಿಗಳ ಪ್ರಮಾಣೀಕರಣಕ್ಕೆ ಮೊದಲ ಬಾರಿಗೆ ಅವಕಾಶ ನೀಡಲಾಗಿತ್ತು. ಇದಾದ ಬಳಿಕ 1992ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ವೇಳೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿತ್ತು. 2003ರಲ್ಲಿ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಾಗ ಆರು ತಿಂಗಳ ಅವಕಾಶ ನೀಡಲಾಗಿತ್ತು. ರಾಜ್ಯ ಮುಖ್ಯ ವನ್ಯಜೀವಿ ಪರಿಪಾಲಕರ ಮುಂದೆ ಟ್ರೋಫಿಗಳನ್ನು ಹಾಜರುಪಡಿಸಿದವರಿಗೆ ‘ಮಾಲೀಕತ್ವದ ಪ್ರಮಾಣ ಪತ್ರ’ ನೀಡಲಾಗಿದೆ. ಆದರೆ ಅನುಮತಿ ಪಡೆದ ಟ್ರೋಫಿಗಳನ್ನು ಮನೆಯ ಆವರಣದಲ್ಲಷ್ಟೇ ಪ್ರದರ್ಶಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಬಾರದು. ಅಲ್ಲದೇ ಬೇರೆಯವರಿಗೆ ಹಸ್ತಾಂತರಿಸುವುದು ಉಡುಗೊರೆ ರೂಪದಲ್ಲಿ ನೀಡುವುದು ಅಥವಾ ಮಾರಾಟ ಮಾಡುವುದು ಕಾಯ್ದೆಯಡಿ ಅಪರಾಧವಾಗಲಿದೆ ಎನ್ನುತ್ತಾರೆ ವನ್ಯಜೀವಿ ತಜ್ಞರು.