ರಾಜ್ಯದ ಕರಾವಳಿ, ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದ್ದರೂ, ಬಯಲು ಸೀಮೆ ಪ್ರದೇಶದ ಹಲವು ಜಿಲ್ಲೆಗಳು ಮಳೆ ಕೊರತೆ ಎದುರಿಸುತ್ತಿವೆ. ದಕ್ಷಿಣ ಮತ್ತು ಉತ್ತರ ಒಳನಾಡಿನ 21 ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಈ ಪೈಕಿ 12 ಜಿಲ್ಲೆಗಳಲ್ಲಿ ಕೊರತೆ ತೀವ್ರವಾಗಿದ್ದು, ಬರದ ಭೀತಿ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯ ಚೆನ್ನಾಗಿ ನಡೆದಿದೆ. ಆದರೆ, ಚಿಗುರೊಡೆದ ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಒಣಗಲು ಆರಂಭಿಸಿವೆ. ಕೆಲವು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಇದರಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ರೈತರು ಹೇಳುವುದೇನು?
ಚದುರಿದಂತೆ ಸೋನೆ ಮಳೆಯಾಗುತ್ತಿರುವ ಕಾರಣ ಭೂಮಿ ನೆನೆಯುತ್ತಿಲ್ಲ. ಈ ಮಳೆಗೆ ಬಿತ್ತನೆ ಮಾಡಲೂ ಸಾಧ್ಯವಿಲ್ಲ. ಇನ್ನೊಂದು ವಾರದಲ್ಲಾದರೂ ಮಳೆ ಸುರಿದರೆ ಬಿತ್ತನೆ ಸಾಧ್ಯವಿದೆ. ಇಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕುತ್ತೇವೆ–ಡಿ.ಎಂ.ಚನ್ನಕೇಶವಮೂರ್ತಿ, ಈಶ್ವರಗೆರೆ, ಚಳ್ಳಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
ಜಿಲ್ಲೆಯಲ್ಲಿ ಮಳೆ ತಿಂಗಳಿಡೀ ಬಂದಿಲ್ಲ. ಆಗೊಮ್ಮೆ ಈಗೊಮ್ಮೆ ಬಂದಿದೆ. ಮಳೆ ಆಗಾಗ್ಗೆ ಸುರಿದರೆ ನೆಲ ಹದವಾಗುತ್ತದೆ. ಒಂದೆರಡು ದಿನ ಜೋರಾಗಿ ಬಂದು ಹೋದರೆ ಪ್ರಯೋಜನವಾಗದು. ಈಗಿನ ಪರಿಸ್ಥಿತಿ ನೋಡಿದರೆ ಈ ಸಲವೂ ಬರಗಾಲದ ಛಾಯೆ ಆವರಿಸುವಂತಿದೆ–ಆದೀಶ್, ಪಾಲಬೋವಿದೊಡ್ಡಿ, ಬೆಂಗಳೂರು ದಕ್ಷಿಣ ಜಿಲ್ಲೆ
ಉತ್ತಮ ಮಳೆ ನಿರೀಕ್ಷೆಯಲ್ಲಿ ಹತ್ತಿ, ತೊಗರಿ ಬಿತ್ತಿದ್ದೆವು. ಆದರೆ, ಬೆಳೆಯುವ ಹಂತದಲ್ಲಿ ಉತ್ತಮ ಮಳೆ ಆಗದೇ ಇದ್ದುದರಿಂದ ಬೆಳೆಗಳು ಒಣಗಿ ಹೋಗುತ್ತಿವೆ–ಸಂತೋಷ ಗಂಜಿ, ಮಾಶಾಳ ಗ್ರಾಮ, ಅಫಜಲಪುರ ತಾಲ್ಲೂಕು, ಕಲಬುರಗಿ ಜಿಲ್ಲೆ
ಅಧಿಕಾರಿಗಳು ಏನಂತಾರೆ?
ಜಿಲ್ಲೆಯಲ್ಲಿ ಜೂನ್‌ನಲ್ಲಿ ಮಳೆ ಕೊರತೆ ಉಂಟಾಗಿದೆ. ನಮ್ಮಲ್ಲಿ ಮುಂಗಾರು ಮಳೆ ಆಗುವುದೇ ಕೊನೆ ಹಂತದಲ್ಲಿ. ಹೀಗಾಗಿ, ಈ ತಿಂಗಳಾಂತ್ಯದಲ್ಲಿ ಮಳೆ ಬರುವ ಭರವಸೆ ಇದೆ. ಬಿತ್ತನೆಗೆ ಇನ್ನೂ ಅವಕಾಶ ಇದೆ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗಿಲ್ಲ-ಎಂ.ಆರ್.ರವಿ, ಕೋಲಾರ ಜಿಲ್ಲಾಧಿಕಾರಿ
ವಾರದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಮಳೆ ಬಾರದಿದ್ದರೆ ಪರಿಸ್ಥಿತಿ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ-ಟಿ.ವೆಂಕಟೇಶ್, ಚಿತ್ರದುರ್ಗ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಮಳೆ ಆಶಾದಾಯಕವಾಗಿದ್ದು, ಇನ್ನೂ ನಾಲ್ಕು ದಿನಗಳವರೆಗೆ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜು ಮಾಡಿದೆ. ಹಾಗಾಗಿ, ರೈತರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಜಾನುವಾರುಗಳಿಗೂ ಮೇವಿನ ಕೊರತೆ ಇಲ್ಲ-ಸಮದ್ ಪಟೇಲ್, ಕಲಬುರಗಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ
ಜಿಲ್ಲೆಯಲ್ಲಿ ನಿರೀಕ್ಷೆಗೆ ತಕ್ಕಂತೆ ಜೂನ್, ಜುಲೈ ತಿಂಗಳಲ್ಲಿ ಮಳೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯ ನಿರೀಕ್ಷೆ ಇದೆ. ರೈತರು ಆತಂಕ ಪಡಬೇಕಿಲ್ಲ-ದೇವಿಕಾ ಆರ್., ಬೀದರ್ ಜಂಟಿ ಕೃಷಿ ನಿರ್ದೇಶಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.