ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ– ಅಗಲ | ಸಂದೇಶ್‌ಖಾಲಿ: ಜನ–ರಾಜಕೀಯ–ಸಂಘರ್ಷ

Published 4 ಮಾರ್ಚ್ 2024, 0:29 IST
Last Updated 4 ಮಾರ್ಚ್ 2024, 0:29 IST
ಅಕ್ಷರ ಗಾತ್ರ

ಅದೊಂದು  ದೊಡ್ಡಗ್ರಾಮ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಿಂದ ಕೇವಲ 74 ಕಿ.ಮೀ. ದೂರದಲ್ಲಿದೆ. ಆದರೆ ಅಲ್ಲಿಗೆ ತಲುಪಲು ಮೂರು ನದಿಗಳನ್ನು ದಾಟಬೇಕು. ಅದೊಂದು ರೀತಿಯಲ್ಲಿ ದ್ವೀಪವೂ ಹೌದು. ಎರಡು ನದಿಗಳ ನಡುವೆ ವಿಶಾಲವಾಗಿ ಹರಡಿರುವ ದೊಡ್ಡ ದ್ವೀಪ. ಆ ದ್ವೀಪದಿಂದ ಪಶ್ಚಿಮ ದಿಕ್ಕಿಗೆ ಮತ್ತೆರಡು ನದಿಗಳನ್ನು ದಾಟಿದರೆ ಬಾಂಗ್ಲಾದೇಶದ ಗಡಿಯೊಳಗೆ ಇರಬಹುದು. ಮೀನು ಸಾಕಾಣಿಕೆಯೇ ಬಹುಮುಖ್ಯ ಕಸುಬಾಗಿರುವ ಈ ಗ್ರಾಮ ಇದೇ ಮೊದಲ ಬಾರಿಗೆ ದೇಶದಾದ್ಯಂತ ಸುದ್ದಿಯಲ್ಲಿದೆ, ಆದರೆ ಒಳ್ಳೆಯ ಕಾರಣಕ್ಕಾಗಿ ಅಲ್ಲ. ಅದೇ ಸಂದೇಶ್‌ಖಾಲಿ.

ಸಂದೇಶ್‌ಖಾಲಿಗೆ ಸಂಬಂಧಿಸಿದಂತೆ ಅಲ್ಲಿಗೇ ಭೇಟಿ ನೀಡಿ ಸುದ್ದಿಸಂಸ್ಥೆಗಳು ಮಾಡುತ್ತಿರುವ ವರದಿಗಳು ಯಾವುದೇ ಸಿನಿಮಾ ಕತೆಗಿಂತ ಕಡಿಮೆಯೇನಿಲ್ಲ. ಸಂದೇಶ್‌ಖಾಲಿಗೆ ಭೇಟಿ ನೀಡುವಾಗಲೇ ಅಲ್ಲಿನ ಗೂಂಡಾಗಳ ಸೇನೆ ಸುತ್ತವರಿಯುತ್ತದೆ, ಹೆಣ್ಣುಮಕ್ಕಳು ಸುರಕ್ಷಿತವಾಗಿ ಓಡಾಡುವಂತಿಲ್ಲ, ಅಲ್ಲಿ ಕ್ಯಾಮೆರಾ ಬಳಸಿ ಫೋಟೊ ತೆಗೆಯುವಂತಿಲ್ಲ... ಸಂದೇಶ್‌ಖಾಲಿಗೆ ಸಂಬಂಧಿಸಿದಂತೆ ಕೆಲವು ಸುದ್ದಿಸಂಸ್ಥೆಗಳು ಮಾಡಿದ ವಿಶೇಷ ವರದಿಗಳ ಕೆಲವು ಮಾದರಿಗಳು ಇವು. ಈ ವರದಿಗಳಲ್ಲಿ ಇರುವ ಅಂಶಗಳು ಅತಿಶಯೋಕ್ತಿ ಅಲ್ಲ ಎನ್ನುತ್ತದೆ ರಾಷ್ಟ್ರೀಯ ಮಹಿಳಾ ಆಯೋಗ.

ತೀರ ಇತ್ತೀಚಿನವರೆಗೆ ಸುದ್ದಿಯಲ್ಲೇ ಇರದಿದ್ದ ಸಂದೇಶ್‌ಖಾಲಿ ಸದ್ದು ಮಾಡಿದ್ದು ಇದೇ ಜನವರಿಯಲ್ಲಿ. ಅಲ್ಲಿನ ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ನ ಮನೆಯಲ್ಲಿ ಶೋಧಕಾರ್ಯ ನಡೆಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವು ಇದೇ ಜನವರಿಯಲ್ಲಿ ಅಲ್ಲಿಗೆ ಭೇಟಿ ನೀಡಿತ್ತು. ಅಧಿಕಾರಿಗಳ ವಾಹನಗಳನ್ನು ತಡೆದಿದ್ದ ಅಲ್ಲಿನ ಜನರ ಗುಂಪು, ಕಲ್ಲುತೂರಾಟವನ್ನೂ ನಡೆಸಿತ್ತು. ಪಶ್ಚಿಮ ಬಂಗಾಳದಲ್ಲಿ ಗೂಂಡಾ ಆಡಳಿತವಿದೆ. ಅದಕ್ಕೆ ಸಂದೇಶ್‌ಖಾಲಿಯ ಈ ದಾಳಿಯೇ ಜ್ವಲಂತ ಉದಾಹರಣೆ ಎಂದು ಅಲ್ಲಿನ ವಿರೋಧ ಪಕ್ಷ ಬಿಜೆಪಿ ಆರೋಪಿಸಿತ್ತು. ಜಾರಿ ನಿರ್ದೇಶನಾಲಯದ ಕ್ರಮ ರಾಜಕೀಯ ಪ್ರೇರಿತವಾದುದು ಎಂದು ಆಡಳಿತಾರೂಢ ಟಿಎಂಸಿ ಸಹ ಆರೋಪಿಸಿತ್ತು. ಎಲ್ಲಾ ರಾಜಕೀಯ ಆರೋಪ–ಪ್ರತ್ಯಾರೋಪಗಳಂತೆ ಕೆಲವೇ ದಿನಗಳಲ್ಲಿ ಈ ಘಟನೆಯೂ ಮರೆಯಾಗುವುದರಲ್ಲಿ ಇತ್ತು. ಅಷ್ಟರಲ್ಲೇ ಸಂದೇಶ್‌ಖಾಲಿಯಲ್ಲಿ ದಲಿತ ಸಮುದಾಯದ ಮಹಿಳೆ ಮತ್ತು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂತು.

ಆ ಅತ್ಯಾಚಾರದ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರೂ ದಾಖಲಾಯಿತು, ಆದರೆ ಎಫ್‌ಐಆರ್ ದಾಖಲಾಗಲಿಲ್ಲ. ಆಗ ಅಲ್ಲಿನ ಮಹಿಳೆಯರು ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಬೀದಿಗಿಳಿದರು. ಮಹಿಳೆಯರ ಆ ಪ್ರತಿಭಟನೆಯನ್ನು ಪೊಲೀಸರು ನಿಯಂತ್ರಿಸಲು ಯತ್ನಿಸಿದಂತೆಲ್ಲಾ, ಅದು ತೀವ್ರತೆ ಪಡೆಯಿತು. ಆ ಮಹಿಳೆಯರು ದೂರು ನೀಡಿದ್ದು, ಅಲ್ಲಿನ ಟಿಎಂಸಿ ನಾಯಕ ಷಹಜಹಾನ್‌ ಶೇಖ್‌ ವಿರುದ್ಧ. ಷಹಜಹಾನ್‌ ಮತ್ತು ಆತನ ಸಹಚರರಾದ ಶಿವಪ್ರಸಾದ್‌ ಹಜ್ರಾ ಮತ್ತು ಉತ್ತಮ್‌ ಸರ್ದಾರ್‌ ವಿರುದ್ಧ ಆ ಮಹಿಳೆಯರು ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಭೂಕಬಳಿಕೆ, ಕೊಲೆ ಬೆದರಿಕೆಯ ಆರೋಪಗಳನ್ನು ಮಾಡಿದ್ದರು.

ಮೇಲ್ನೋಟಕ್ಕೆ ಇದು ರಾಜಕೀಯ ಚಳವಳಿ ಎನಿಸಿದರೂ, ಅಲ್ಲಿನ ತಳ ಸಮುದಾಯದ ಜನರೇ ಬೀದಿಗಿಳಿದು ಹೋರಾಡುತ್ತಿರುವುದು ಬೇರೆಯದೇ ಕತೆಯನ್ನು ಹೇಳುತ್ತಿದೆ.

ಮೊದಲು ಪಡಿತರ ಹಗರಣದಲ್ಲಿ ಆರೋಪಿಯಾಗಿದ್ದ ಷಹಜಹಾನ್‌ ವಿರುದ್ಧ ಈಗ ಅತ್ಯಾಚಾರದ ಆರೋಪಗಳಳೂ ಇವೆ. ದೂರು ನೀಡುವವರಿಗೆ ಮತ್ತು ಆತನ ವಿರುದ್ಧ ಬೀದಿಗೆ ಇಳಿದವರ ಬೆಂಬಲಕ್ಕೆ ಬಿಜೆಪಿ ಮತ್ತು ಸಿಪಿಎಂ ನಿಂತವು. ಪ್ರತಿಭಟನೆ ತೀವ್ರವಾಯಿತು. ಕೆಲವೇ ದಿನಗಳಲ್ಲಿ ಷಹಜಹಾನ್‌ ಮತ್ತು ಆತನ ಸಹಚರರ ವಿರುದ್ಧ ಇಂತಹ 70 ದೂರುಗಳು ದಾಖಲಾದವು. ಆದರೆ ಆತನ ವಿರುದ್ಧ ಎಫ್‌ಐಆರ್ ಮಾತ್ರ ದಾಖಲಾಗಲಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರು, ಪಶ್ಚಿಮ ಬಂಗಾಳದ ಬಿಜೆಪಿ ನಾಯಕರು, ಬಿಜೆಪಿಯ ಸತ್ಯಶೋಧನಾ ಸಮಿತಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು–ಅಧ್ಯಕ್ಷರು ಸಂದೇಶ್‌ಖಾಲಿಗೆ ಭೇಟಿ ನೀಡಿದರು. ಅವರನ್ನು ಪೊಲೀಸರು ತಡೆದದ್ದು, ಆ ವಿಚಾರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತಾಯಿತು. ಸ್ವಯಂಪ್ರೇರಿತವಾಗಿ ಮಧ್ಯಪ್ರವೇಶಿಸಿದ ಕಲ್ಕತ್ತಾ ಹೈಕೋರ್ಟ್‌, ಏಳು ದಿನಗಳ ಒಳಗೆ ಷಹಜಹಾನ್‌ನನ್ನು ಬಂಧಿಸುವಂತೆ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿತು. ಅದರಂತೆ ಷಹಜಹಾನ್‌ನ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಫೆಬ್ರುವರಿ ಕೊನೆಯ ವಾರದ ವೇಳೆಗೆ ಆತನನ್ನು ಬಂಧಿಸಲಾಯಿತು.

ಆದರೆ ಆತನ ವಿರುದ್ಧದ ಸಿಟ್ಟು ಮಾತ್ರ ಸಂದೇಶ್‌ಖಾಲಿಯ ಜನರಲ್ಲಿ ಕಡಿಮೆಯಾಗಿಲ್ಲ. ಷಹಜಹಾನ್‌ ಮತ್ತು ಆತನ ಸಹಚರರ ಜಮೀನುಗಳು, ಮೀನುಸಾಕಾಣಿಕಾ ಹೊಂಡಗಳು, ಮಾರುಕಟ್ಟೆ ಮಳಿಗೆಗಳಿಗೆ ಜನರು ಬೆಂಕಿ ಹಚ್ಚುತ್ತಿದ್ದಾರೆ. ಈ ಎಲ್ಲಾ ಜಾಗಗಳೂ ನಮ್ಮವೇ, ನಮ್ಮಿಂದ ಅವರು ಅದನ್ನು ಕಸಿದುಕೊಂಡಿದ್ದರು. ಅವೆಲ್ಲವನ್ನೂ ಮರಳಿ ಪಡೆಯುತ್ತೇವೆ ಎಂದು ಘೋಷಿಸುತ್ತಿದ್ದಾರೆ. ಜನರೇ ಗುಂಪುಗೂಡಿ, ಸಂದೇಶ್‌ಖಾಲಿಗೆ ಪೊಲೀಸರು ಭೇಟಿ ನೀಡುವುದನ್ನು ತಡೆಯುತ್ತಿದ್ದಾರೆ. ಶಿವಪ್ರಸಾದ್ ಹಜ್ರಾ, ಉತ್ತಮ್‌ ಸರ್ದಾರ್‌ನ ಹಲವು ಸ್ವತ್ತುಗಳನ್ನು ದ್ವಂಸಗೊಳಿಸಿದ್ದಾರೆ. ಅಲ್ಲಿಗೆ ಭೇಟಿ ನೀಡಲು ಮುಂದಾದ ಟಿಎಂಸಿ ನಾಯಕರ ಮೇಲೆ ಹಲ್ಲೆ ನಡೆಸಿ, ಅವರನ್ನು ಓಡಿಸಿದ್ದಾರೆ. ಈ ಎಲ್ಲಾ ಹೋರಾಟಗಳಲ್ಲೂ ಅಲ್ಲಿನ ಮಹಿಳೆಯರೇ ಮುಂದಿದ್ದಾರೆ.

ಮೊದಲು ಸಿಪಿಎಂ, ನಂತರ ಟಿಎಂಸಿ, ಈಗ ಬಿಜೆಪಿ

ಸಂದೇಶ್‌ಖಾಲಿ ಹಲವು ದಶಕಗಳವರೆಗೆ ಸಿಪಿಎಂನ ಭದ್ರಕೋಟೆಯೇ ಆಗಿತ್ತು. ಈಗ ಅಲ್ಲಿ ಟಿಎಂಸಿಯ ನಾಯಕನಾಗಿರುವ ಷಹಜಹಾನ್‌ ಈ ಹಿಂದೆ, ಅಂದರೆ 2001ಕ್ಕೂ ಮೊದಲು ಸಿಪಿಎಂನ ಕಾರ್ಯಕರ್ತ. ಷಹಜಹಾನ್‌ನ ಸೋದರಮಾವನೇ ಅಲ್ಲಿನ ಸಿಪಿಎಂ ಘಟಕದ ಅಧ್ಯಕ್ಷರಾಗಿದ್ದರು. ಟಿಎಂಸಿ ಸ್ಥಾಪನೆಯಾದ ಆರಂಭದ ವರ್ಷಗಳಲ್ಲೇ ಷಹಜಹಾನ್‌ ಸಿಪಿಎಂ ತೊರೆದು, ಟಿಎಂಸಿ ಪರವಾಗಿ ದುಡಿಯಲಾರಂಭಿಸಿದ್ದ.

ಸಂದೇಶ್‌ಖಾಲಿಯ ಮೀನುಸಾಕಾಣಿಕಾ ಹೊಂಡಗಳ ನಿರ್ವಹಣೆ, ಮೀನು ಖರೀದಿ, ಮೀನು ಮಾರುಕಟ್ಟೆಗಳನ್ನು ನಿಯಂತ್ರಿಸುತ್ತಿದ್ದ ಷಹಜಹಾನ್‌ಗೆ ಟಿಎಂಸಿಯನ್ನು ಅಲ್ಲಿ ಜನಪ್ರಿಯಗೊಳಿಸುವುದು ಕಷ್ಟವಾಗಲಿಲ್ಲ. ಅಲ್ಲಿನ ಜನರು ಯಾವುದೇ ವ್ಯಾಜ್ಯಗಳನ್ನು ಇರಿಸಿಕೊಂಡು ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೆಟ್ಟಿಲೇರಲು ಆತ ಬಿಡುತ್ತಿರಲಿಲ್ಲ. ಬದಲಿಗೆ ತಾನೇ ಮಧ್ಯಸ್ಥಿಕೆ ವಹಿಸಿ ಆ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದ. ಕಷ್ಟ ಎಂದವರಿಗೆ ಹಣಸಹಾಯ ಮಾಡುತ್ತಿದ್ದ. ಅದು ಆತನ ಜನಪ್ರಿಯತೆಯನ್ನು ಹೆಚ್ಚಿಸಿತ್ತು, ಜತೆಗೆ ಟಿಎಂಸಿಯದ್ದು ಕೂಡ. ಕಡೆಗೆ ಆತನ ಸೋದರಮಾವನೂ ಸಿಪಿಎಂ ತೊರೆದು, ಟಿಎಂಸಿ ಸೇರುವ ಅನಿವಾರ್ಯ ಪರಿಸ್ಥಿತಿ ನಿರ್ಮಿಸಿದ್ದ.

ರಾಜಕೀಯದ ಜತೆಗೆ ಮೀನುಗಾರಿಕೆ, ಮೀನುಸಾಕಾಣಿಕೆ ಉದ್ಯಮವು ಅಲ್ಲಿ ದೊಡ್ಡಮಟ್ಟದಲ್ಲಿ
ಬೆಳೆಯಲಾರಂಭಿಸಿತ್ತು. ಟಿಎಂಸಿಗೆ ಅಲ್ಲಿ ವಿರೋಧಿಗಳೇ ಇಲ್ಲದಿರುವಂತೆ ಷಹಜಹಾನ್‌ ನೋಡಿಕೊಂಡಿದ್ದ. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಟಿಎಂಸಿ ಬೆಂಬಲಿತ ಅಭ್ಯರ್ಥಿಗಳ ವಿರುದ್ಧ ಅನ್ಯಪಕ್ಷ ಬೆಂಬಲಿತ ಅಭ್ಯರ್ಥಿಗಳು ನಿಲ್ಲುವಂತೆಯೇ ಇರಲಿಲ್ಲ. ಕೆಲವೇ ವರ್ಷಗಳಲ್ಲಿ ಸಿಪಿಎಂಗೆ ಅಲ್ಲಿ ನೆಲೆಯೇ ಇಲ್ಲದಂತಾಗಿತ್ತು.

20 ವರ್ಷಗಳ ಹಿಂದೆ ಅಲ್ಲಿ ಸಿಪಿಎಂ ಅನ್ನು ಮೂಲೆಗೆ ತಳ್ಳುವಲ್ಲಿ ಯಶಸ್ವಿಯಾಗಿದ್ದ ಟಿಎಂಸಿಗೆ, ಈಗ ಅಂಥದ್ದೇ ಸ್ಥಿತಿ ಎದುರಾಗಿದೆ. ಆಗ ಟಿಎಂಸಿ ಇದ್ದ ಜಾಗದಲ್ಲಿ ಈಗ ಬಿಜೆಪಿ ಇದೆ. ಆದರೆ ಒಂದೇ ವ್ಯತ್ಯಾಸವೆಂದರೆ ಬಿಜೆಪಿಯ ರಾಷ್ಟ್ರಮಟ್ಟದ ನಾಯಕರೂ ಸಂದೇಶ್‌ಖಾಲಿಗೆ ಕಾಲಿಟ್ಟಿದ್ದಾರೆ. ನಾಯಕರೇ ಇಲ್ಲದ, ನೆಲೆಯೇ ಇಲ್ಲದ ಊರಿನಲ್ಲಿ ಬಿಜೆಪಿ ಈಗ ನೆಲೆಕಂಡುಕೊಳ್ಳಲಾರಂಭಿಸಿದೆ. ಷಹಜಹಾನ್‌ ವಿರುದ್ಧ ಅಲ್ಲಿನ ಜನರು ದನಿಎತ್ತಲಾರಂಭಿಸಿದ ತಕ್ಷಣವೇ ಬಿಜೆಪಿ ಅವರ ಬೆಂಬಲಕ್ಕೆ ನಿಂತಿತು. ಊರಿನ ಒಳಗೆ ಜನರು ಪ್ರತಿಭಟನೆ ನಡೆಸಿದರೆ, ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಊರ ಹೊರಗೆ ಮತ್ತು ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದರು. ಈ ಮೂಲಕ ಸಂದೇಶ್‌ಖಾಲಿಯ ಜನರ ವಿಶ್ವಾಸವನ್ನು ಗಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಇದರ ಭಾಗವಾಗಿ ಬಿಜೆಪಿಯ ರಾಷ್ಟ್ರನಾಯಕರ ದಂಡೇ ಸಂದೇಶ್‌ಖಾಲಿಗೆ ಭೇಟಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಕೆಲವೇ ದಿನಗಳಲ್ಲಿ ಸಂದೇಶ್‌ಖಾಲಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಕೃಷಿಯನ್ನು ಮೀನು ಸಾಕಾಣಿಕೆ ಕಬಳಿಸಿದ ಬಗೆ

ಸಂದೇಶ್‌ಖಾಲಿಯ ಜನರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಇರುವ ಮತ್ತೊಂದು ಪ್ರಮುಖ ಆರೋಪ
ಭೂಕಬಳಿಕೆಯದ್ದು. ಷಹಜಹಾನ್‌ ಮತ್ತು ಆತನ ಸಹಚರರು ‘ನಮ್ಮ ಜಮೀನುಗಳಿಗೆ ನೀರು ಹರಿಸಿ, ಅವುಗಳನ್ನು ಕಬಳಿಸಿದ್ದಾರೆ’ ಎಂಬುದು ಜನರ ಆರೋಪ. 

ಸರ್ಕಾರಿ ದಾಖಲೆಗಳ ಪ್ರಕಾರ 2000ಕ್ಕೂ ಮುನ್ನ ಸಂದೇಶ್‌ಖಾಲಿಯ ಪ್ರಧಾನ ಕಸುಬು ಕೃಷಿಯಾಗಿತ್ತು. ನೀರು ಯಥೇಚ್ಛವಾಗಿದ್ದ ಕಾರಣ, ಜನರು ಭತ್ತ ಬೆಳೆಯುತ್ತಿದ್ದರು. ಅಕ್ಕಿಯೇ ಅವರ ಪ್ರಧಾನ ಆಹಾರವೂ ಆಗಿತ್ತು, ಮೀನು ಸಾಕಾಣಿಕೆ ಕೂಡ. ಆದರೆ ಷಹಜಹಾನ್‌ ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವ ಹೊತ್ತಿಗೆ, ರಾಜ್ಯ ಸರ್ಕಾರವು ಮೀನು ಸಾಕಾಣಿಕೆಯನ್ನು ಉತ್ತೇಜಿಸುವ ಯೋಜನೆ ಆರಂಭಿಸಿತ್ತು. 24 ಉತ್ತರ ಪರಗಣ ಜಿಲ್ಲೆಯ ಮೀನುಗಾರಿಕಾ ಮಂಡಳಿಯ ಸದಸ್ಯ–ಅಧ್ಯಕ್ಷನಾಗಿದ್ದ ಷಹಜಹಾನ್‌, ಸಂದೇಶ್‌ಖಾಲಿಯಲ್ಲಿ ಯೋಜನೆಯು ಪರಿಣಾಮಕಾರಿಯಾಗಿ ಅನುಷ್ಠಾನವಾಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ. 

ಅಲ್ಲಿನ ಜನರು ನಿಧಾನವಾಗಿ ಕೃಷಿಬಿಟ್ಟು, ಮೀನು ಸಾಕಾಣಿಕೆಯತ್ತ ಹೊರಳಿದರು. ಲಾಭದಾಯಕ ಉದ್ಯಮವಾಗಿ ಬೆಳೆದ ಮೀನು ಸಾಕಾಣಿಕೆಗೆ ಸಂದೇಶ್‌ಖಾಲಿಯಲ್ಲಿ ಜಾಗ ಸಾಲದೇ ಹೋಯಿತು. ಜನರು ತಾವು ನೀಡಿರುವ ದೂರಿನಲ್ಲಿ, ‘ಷಹಜಹಾನ್‌ನ ಸಹಚರರು ನಮ್ಮ ಹೊಲ–ಗದ್ದೆಗಳಿಗೆ ನದಿಯ ನೀರನ್ನು ಹರಿಸುತ್ತಿದ್ದರು. ಬೆಳೆ ನಷ್ಟವಾಗುತ್ತಿತ್ತು. ಅತ್ಯಂತ ಕಡಿಮೆ ಬೆಲೆಗೆ ಅಂತಹ ಜಮೀನು ಖರೀದಿಸುತ್ತಿದ್ದರು. ಮಾರಾಟ ಮಾಡದಿದ್ದರೆ, ಬೆದರಿಕೆ ಹಾಕಿ ಭೂಮಿ ಕಸಿದುಕೊಳ್ಳುತ್ತಿದ್ದರು. ಒಂದು ಕಾಲದಲ್ಲಿ ನಮ್ಮ ಅಕ್ಕಿಯನ್ನು ನಾವೇ ಬೆಳೆದುಕೊಳ್ಳುತ್ತಿದ್ದೆವು, ಈಗ ಅದನ್ನು ಅಂಗಡಿಯಿಂದ ಖರೀದಿಸುವ ಸ್ಥಿತಿ ಎದುರಾಗಿದೆ’ ಎಂದು ವಿವರಿಸಿದ್ದಾರೆ. 

ಷಹಜಹಾನ್‌ನ 25 ಎಕರೆಯ ತೋಟದ ಮನೆಯ ಸುತ್ತಲೂ ಮೀನು ಸಾಕಾಣಿಕಾ ಹೊಂಡಗಳಿವೆ. ಈಗ ಸಂದೇಶ್‌ಖಾಲಿಯಲ್ಲಿ ಎಲ್ಲಿ ನೋಡಿದರೂ ಮೀನು ಸಾಕಾಣಿಕಾ ಹೊಂಡಗಳೇ ತುಂಬಿವೆ. ಭತ್ತದ ಗದ್ದೆಗಳು ಹುಡುಕಿದರೂ ಸಿಗುವುದಿಲ್ಲ ಎನ್ನುವಂತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT