ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ದಟ್ಟಣೆ ಹೆಚ್ಚಿಸಿದ ಶಕ್ತಿ ಯೋಜನೆ-ಪ್ರಯಾಣಿಕರಿದ್ದಾರೆ, ಬಸ್ಸುಗಳೇ ಇಲ್ಲ!
ಆಳ–ಅಗಲ: ದಟ್ಟಣೆ ಹೆಚ್ಚಿಸಿದ ಶಕ್ತಿ ಯೋಜನೆ-ಪ್ರಯಾಣಿಕರಿದ್ದಾರೆ, ಬಸ್ಸುಗಳೇ ಇಲ್ಲ!
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ದುರಾವಸ್ಥೆ
ಮನೋಜಕುಮಾರ್‌ ಗುದ್ದಿ, ಶ್ರೀಕಾಂತ ಕಲ್ಲಮ್ಮನವರ, ಬಾಲಕೃಷ್ಣ ಪಿ.ಎಚ್‌.
Published 17 ನವೆಂಬರ್ 2023, 0:05 IST
Last Updated 17 ನವೆಂಬರ್ 2023, 0:05 IST
ಅಕ್ಷರ ಗಾತ್ರ

ಮಹಿಳೆಯರಿಗೆ ಬಸ್‌ ಪ್ರಯಾಣ ದರವನ್ನು ಉಚಿತ ಮಾಡಿದ ‘ಶಕ್ತಿ’ ಯೋಜನೆ ಜಾರಿಯಾಗಿದ್ದು ಜುಲೈ 11ರಂದು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷವು ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಇದೂ ಒಂದಾಗಿತ್ತು. ಅತ್ಯಂತ ಮಹತ್ವಾಕಾಂಕ್ಷೆಯಿಂದ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿದೆ. ಮಹಿಳೆಯರಿಗಾಗಿಯೇ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಈ ಯೋಜನೆಯಿಂದಾಗಿ ಬಸ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ಕಳೆದ ಐದು ತಿಂಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಮಾತ್ರವೇ ಏರಿಕೆಯಾಗಿಲ್ಲ. ಬಸ್ಸಿನಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ದೊಡ್ಡ ಮೊತ್ತದ ಲಾಭವನ್ನೂ ಸರ್ಕಾರ ಗಳಿಸಿದೆ. ಹಾಗಿದ್ದರೂ ಬಸ್‌ ಪ್ರಮಾಣದಲ್ಲಿ ಮಾತ್ರ ಏರಿಕೆಯಾಗಿಲ್ಲ. ಇದು ಯೋಜನೆಯ ಶಕ್ತಿಯನ್ನೇ ಕುಂದಿಸುತ್ತಿದೆ. 

ಯೋಜನೆ ಜಾರಿಗೂ ಮೊದಲು, ಸುಮಾರು 84.5 ಲಕ್ಷ ಜನ ಸಾರಿಗೆ ಬಸ್‌ಗಳಲ್ಲಿ ನಿತ್ಯ ರಾಜ್ಯದಾದ್ಯಂತ ಪ್ರಯಾಣಿಸುತ್ತಿದ್ದರು. ಯೋಜನೆ ಜಾರಿ ಬಳಿಕ ಈಗ ದಿನವೊಂದರಲ್ಲಿ ಸುಮಾರು 1.06 ಕೋಟಿಯಷ್ಟು ಜನರು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ, ಶೇ 55ರಷ್ಟು ಮಹಿಳೆಯರು ಇದ್ದರೆ, ಶೇ 45ರಷ್ಟು ಪುರುಷರು ಸೇರಿದ್ದಾರೆ. ಪುರಷರೇ ಆಗಿರಲಿ, ಮಹಿಳೆಯೇ ಆಗಿರಲಿ, ವಿದ್ಯಾರ್ಥಿಗಳೇ ಆಗಿರಲಿ ಒಟ್ಟಿನಲ್ಲಿ ಬಸ್‌ ಅನ್ನು ಬಳಸುತ್ತಿರುವ ಜನರ ಸಂಖ್ಯೆ ಏರಿಕೆಯಾಗಿದೆ. ಇದಕ್ಕೆ ಹಲವು ಕಾರಣಗಳನ್ನು ನೀಡಬಹುದು:

* ದೇವಸ್ಥಾನ ಸೇರಿದಂತೆ ಧಾರ್ಮಿಕ ಕೇಂದ್ರಗಳಿಗೆ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕನಸಿಗೆ ‘ಶಕ್ತಿ’ ಬಂದಿದೆ. ಕುಟುಂಬ ಸಮೇತ ಜನರು ಪ್ರಯಾಣ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಪುರುಷರ ಬಸ್‌ ಪ್ರಯಾಣ ಪ್ರಮಾಣವೂ ಏರಿಕೆಯಾಗಿದೆ. ಜೊತೆಗೆ, ಮದುವೆ–ಮುಂಜಿ ಸೇರಿದಂತೆ ಕೌಟುಂಬಿಕ ಕಾರ್ಯಕ್ರಮಗಳಿಗೆ ಜನರು ಬಸ್‌ ಮೂಲಕವೇ ಪ್ರಯಾಣ ಮಾಡುತ್ತಿದ್ದಾರೆ

* ಒಂದೆರಡು ಕಿಲೋಮೀಟರ್‌ ದೂರಕ್ಕೆ ನಡೆದುಕೊಂಡೇ ಸಾಗುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿ ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಗಾರ್ಮೆಂಟ್‌ ಸಹಿತ ವಿವಿಧೆಡೆ ಕೆಲಸ ಮಾಡುವ ಮಹಿಳೆಯರು ದ್ವಿಚಕ್ರ ವಾಹನಗಳನ್ನು ಬಿಟ್ಟು ಬಸ್‌ಗಳಲ್ಲಿ ಸಂಚರಿಸುವ ಮೂಲಕ ಇಂಧನಕ್ಕೆ ಆಗುತ್ತಿದ್ದ ಖರ್ಚನ್ನು ಕಡಿಮೆ ಮಾಡಿಕೊಂಡಿದ್ದಾರೆ

ಬಸ್‌ಗಳ ಕೊರತೆ

ಬಸ್‌ನಲ್ಲಿ ಪ್ರಯಾಣ ಮಾಡುವ ಒಟ್ಟು ಪ್ರಯಾಣಿಕರ ಪ್ರಮಾಣ ಶೇ 30ರಷ್ಟು ಹೆಚ್ಚಳವಾಗಿದೆ ನಿಜ. ಆದರೆ, ಈ ಹೆಚ್ಚಳಕ್ಕೆ ಅನುಗುಣವಾಗಿ ಬಸ್‌ ಲಭ್ಯತೆ ಇಲ್ಲ. ಈ ಏರಿಕೆಗೆ ಅನುಗುಣವಾಗಿ ಸುಮಾರು 3,000 ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (ಕೆಕೆಆರ್‌ಟಿಸಿ) 24,352 ಬಸ್‌ಗಳಿದ್ದರೂ 22,017 ಬಸ್‌ಗಳಷ್ಟೇ ಸಂಚರಿಸುತ್ತಿವೆ.

ಹೆಚ್ಚಿದ ಪ್ರಯಾಣಿಕರ ಸಂಖ್ಯೆಗೆ ತಕ್ಕಷ್ಟು ಬಸ್‌ಗಳನ್ನು ಓಡಿಸದೇ ಇರುವುದರಿಂದ ನಿತ್ಯ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಂದ ಗ್ರಾಮಗಳಿಗೆ ತೆರಳುವ ಸರ್ಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸೀಟು ಸಿಗದೇ ಸಂಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಾಸಿಕ ಬಸ್ ಪಾಸ್ ಹೊಂದಿದವರಿಗೂ ಸೀಟುಗಳು ಸಿಗುತ್ತಿಲ್ಲ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು 620 ಹೊಸ ಬಸ್‌ಗಳನ್ನು ಸೇವೆಗೆ ನಿಯೋಜಿಸಿದರೂ ದಟ್ಟಣೆ ಕಡಿಮೆಯಾಗಿಲ್ಲ. ಕಿತ್ತೂರು ಕರ್ನಾಟಕ ಭಾಗದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಹುತೇಕ ಎಲ್ಲ 4,500 ಬಸ್‌ಗಳು ಪ್ರತಿ ದಿನ ಭರ್ತಿಯಾಗಿ ಸಂಚರಿಸುತ್ತಿವೆ.

ಸಮಸ್ಯೆಗಳ ಸರಮಾಲೆ

ಪ್ರಯಾಣಿಕರು ಹೆಚ್ಚಿದಂತೆಲ್ಲಾ ಬಸ್‌ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚುತ್ತದೆ. ದಟ್ಟಣೆ ಹೆಚ್ಚಿದಂತೆ ಅಲ್ಲಿನ ಮೂಲಸೌರ್ಕಯದ ಕೊರತೆಯೂ ಹೆಚ್ಚುತ್ತದೆ. ಆದ್ದರಿಂದ, ಬಸ್‌ ನಿಲ್ದಾಣಗಳಲ್ಲಿ ಸಮಸ್ಯೆಗಳ ಸರಮಾಲೆಯೇ ನಿರ್ಮಾಣವಾಗಿದೆ. ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಸನ ವ್ಯವಸ್ಥೆ ಎಲ್ಲವೂ ಅಸ್ತವ್ಯವಸ್ತವಾಗಿದೆ. ಬಸ್‌ ಹತ್ತುವಾಗ ಉಂಟಾಗುವ ಜನದಟ್ಟಣೆಯ ಲಾಭ ಪಡೆಯುವ ಕೆಲವರು ಕಿಸೆಗಳ್ಳತನ ಮಾಡುತ್ತಿದ್ದಾರೆ. ಚಿನ್ನಾಭರಣ ಕಳ್ಳತನವೂ ನಡೆಯುತ್ತಿದೆ. ಎಷ್ಟೋ ಸಂದರ್ಭಗಳಲ್ಲಿ ಹಣ, ಸರ ಕಳೆದುಕೊಂಡರೂ ಪ್ರಯಾಣಿಕರು ಪೊಲೀಸರಿಗೆ ದೂರು ನೀಡುವ ಗೋಜಿಗೂ ಹೋಗುವುದಿಲ್ಲ. ‘ಊರು ಮುಟ್ಟಿದರೆ ಸಾಕು’ ಎನ್ನುವ ಸ್ಥಿತಿ ಅವರದ್ದು.

"ನಗುವ ಗಂಡಸರು"

ನಾನು ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಗುರುವಾರ ಬೆಳಿಗ್ಗೆ 9ಕ್ಕೆ ಹೊರಟಿದ್ದೆ. ವಿದ್ಯಾರ್ಥಿನಿಯರ ಸಂಖ್ಯೆಯೂ ಅಧಿಕವಿತ್ತು. ಬಸ್‌ ಹತ್ತುವುದೇ ದೊಡ್ಡ ಸಾಹಸವಾಯಿತು. ಟಿಕೆಟ್‌ ನೀಡಲು ನಿರ್ವಾಹಕರು ಅತ್ತಿತ್ತ ಚಲಿಸುವುದೂ ಸಾಧ್ಯವಿಲ್ಲದಷ್ಟು ಜನರಿದ್ದರು. ಈ ನಡುವೆ ಮಹಿಳೆಯರಿಗೆ ಟಿಕೆಟ್‌ ನೀಡಲು ನಿರ್ವಾಹಕರು ಮುಂದೆ ಬರಲು ಪ್ರಯತ್ನಿಸುತ್ತಿದ್ದಾಗ ‘ಅವೆಲ್ಲ ಆಧಾರ್‌ ಕಾರ್ಡ್‌ಗಳು ಟಿಕೆಟ್‌ ಕೊಡದಿದ್ದರೂ ನಡೆಯುತ್ತೆ’ ಎಂದು ಪ್ರಯಾಣಿಕರೊಬ್ಬರು ಮಹಿಳೆಯರನ್ನು ಕೇವಲವಾಗಿ ಕಾಣುವ ಮಾತುಗಳನ್ನಾಡಿದರು. ಸುತ್ತಲಿದ್ದ ಗಂಡಸರು ಅದಕ್ಕೆ ಧ್ವನಿಗೂಡಿಸಿ ನಕ್ಕರು. ಒಂದು ಕಡೆಯಿಂದ ನಿಲ್ಲಲೂ ಸಾಧ್ಯವಿಲ್ಲದಷ್ಟು ನೂಕುನುಗ್ಗಲು ಇನ್ನೊಂದು ಕಡೆ ಇಂಥ ಗೇಲಿ ಮಾತುಗಳು. ಎಲ್ಲವನ್ನೂ ಸಹಿಸಿಕೊಳ್ಳಬೇಕು

-ಭಾರತಿ ಕೆ. ಪ್ರಯಾಣಿಕರು

ರಾಜ್ಯ ಸರ್ಕಾರ ’ಶಕ್ತಿ‘ ಯೋಜನೆ ಮೂಲಕ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ನಿರ್ವಾಹಕರೊಬ್ಬರು ದಾಖಲೆ ಪರಿಶೀಲಿಸಿ ಟಿಕೆಟ್‌ ಕೊಡಲು ಹರಸಾಹಸ ಮಾಡುತ್ತಿರುವ ದೃಶ್ಯ ಕಲಬುರಗಿಯ ನಗರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಕಂಡುಬಂತು

ರಾಜ್ಯ ಸರ್ಕಾರ ’ಶಕ್ತಿ‘ ಯೋಜನೆ ಮೂಲಕ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿರುವ ಹಿನ್ನೆಲೆಯಲ್ಲಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ನಿರ್ವಾಹಕರೊಬ್ಬರು ದಾಖಲೆ ಪರಿಶೀಲಿಸಿ ಟಿಕೆಟ್‌ ಕೊಡಲು ಹರಸಾಹಸ ಮಾಡುತ್ತಿರುವ ದೃಶ್ಯ ಕಲಬುರಗಿಯ ನಗರ ಬಸ್‌ ನಿಲ್ದಾಣದಲ್ಲಿ ಮಂಗಳವಾರ ಕಂಡುಬಂತು

–ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಬಸ್ಸಿಲ್ಲದ ಗೋಳು!

ಪ್ರಯಾಣಿಕರ ಪರದಾಟ ‘ನರಗುಂದಕ್ಕೆ ಹೋಗಲು ನಾಲ್ಕು ಗಂಟೆಯಿಂದ ಬಸ್‌ಗಾಗಿ ಕಾಯ್ತಾ ಇದ್ದೀನಿ. 3ರಿಂದ 4 ಬಸ್‌ಗಳು ಬಂದುಹೋದವು. ಆದರೆ ಎಲ್ಲವೂ ಭರ್ತಿಯಾಗಿ ಹೋಗುತ್ತಿವೆ. ಒಂದರಲ್ಲೂ ಸೀಟ್‌ ಇಲ್ಲ. ಬಸ್‌ ಹತ್ತಲು ನೂಕುನುಗ್ಗಲು ಬೇರೆ. 10 ವರ್ಷದ ಮಗನನ್ನು ಕರೆದುಕೊಂಡು ಹೇಗೆ ಹತ್ತಲಿ...’ –

ಇದು ನರಗುಂದದ ಸತೀಶ ಕಟಗೇರಿ ಅವರ ಮಾತು. 5ನೇ ತರಗತಿಯ ಶಾಲೆಗೆ ಹೋಗುವ ಮಗನನ್ನು ಕರೆದೊಯ್ಯಲು ಹುಬ್ಬಳ್ಳಿಗೆ ಬಂದಿದ್ದರು.  ‘ನಾನು ನಿತ್ಯ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬೀದರ್‌ನಿಂದ ಹೋಗುತ್ತೇನೆ. ರೈಲಿನ ವ್ಯವಸ್ಥೆಯಿದ್ದರೂ ನನ್ನ ಕಾಲೇಜು ಸಮಯಕ್ಕೆ ಸರಿಯಾಗಿ ಹೋಗಲು ಆಗುವುದಿಲ್ಲ. ಹೀಗಾಗಿ ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ನೆಚ್ಚಿಕೊಂಡಿದ್ದೇನೆ. ಈ ಹಿಂದೆ ಬಸ್‌ನಲ್ಲಿ ಒಂದಾದರೂ ಸೀಟು ಸಿಗುತ್ತಿತ್ತು. ಒಂದೆರಡು ಸ್ಟಾಪ್‌ಗಳು ಬಂದ ನಂತರವಾದರೂ ಸೀಟುಗಳು ಖಾಲಿ ಆಗುತ್ತಿದ್ದವು. ಈಗ ಇಡೀ ಬಸ್‌ ಭರ್ತಿಯಾಗಿ ಬರುತ್ತಿದೆ. ಇಳಿಯುವವರಿಗಿಂತ ಬಸ್‌ ಹತ್ತುವವರ ಸಂಖ್ಯೆಯೇ ಹೆಚ್ಚಾಗಿದೆ. 120 ಕಿ.ಮೀ ನಿಂತುಕೊಂಡು ಪ್ರಯಾಣ ಮಾಡುವುದು ಬಹಳ ಪ್ರಯಾಸದಾಯಕ ಕೆಲಸ. ಹಾಗಾಗಿ ಸರ್ಕಾರ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು. ನಿತ್ಯ ಕೆಲಸಕ್ಕೆ ಹೋಗಿ ಬರುವವರಿಗೆ ಕೆಲವು ಸೀಟುಗಳನ್ನಾದರೂ ಮೀಸಲಿಡಬೇಕು’ ಎಂದು ನಾಗರತ್ನ ಅಭಿಪ್ರಾಯಪಟ್ಟರು.

‘ರಾಯಚೂರು ಜಿಲ್ಲೆಯಲ್ಲಿ ನಿಲ್ದಾಣಗಳಲ್ಲೇ ಬಸ್ ಭರ್ತಿಯಾಗಿ ಬರುವುದರಿಂದ ಕೋರಿಕೆಯ ನಿಲ್ದಾಣಗಳಲ್ಲಿ ಬಸ್ ಚಾಲಕರು ಬಸ್ ನಿಲ್ಲಿಸುತ್ತಿಲ್ಲ ಎಂದು ರಾಯಚೂರು ನಗರ ಹಾಗೂ ಜಿಲ್ಲೆಯ ಹಲವೆಡೆ ವಿದ್ಯಾರ್ಥಿಗಳಿಂದ ದೂರು ಬರುತ್ತಿದೆ ಎನ್ನುತ್ತಾರೆ’ ಎಂದು ಎಐಆರ್‌ಎಸ್ಒ ಸಂಘಟನೆಯ ಮುಖಂಡ ಅಜೀಜ್ ಜಾಗೀರ್ದಾರ್. ‘ವಿಶೇಷವಾಗಿ ಶಾಲೆ– ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು– ವಿದ್ಯಾರ್ಥಿನಿಯರು ಅಂಗವಿಕಲರು ವೃದ್ಧ– ವೃದ್ಧೆಯರು ತೊಂದರೆ ಅನುಭವಿಸುತ್ತಿದ್ದಾರೆ.

ಬಸ್‌ಗಾಗಿ ಕಾದು ಸಮಯ ವ್ಯರ್ಥ ಮಾಡುವುದಕ್ಕಿಂತ ಹಣ ಕೊಟ್ಟು ಹೋಗಲು ಸಿದ್ಧವೆಂದರೂ ಬೇರೆ ಬಸ್‌ಗಳ (ಎಸಿ ಸ್ಲೀಪರ್‌ ಕ್ಲಾಸ್‌ ಇತ್ಯಾದಿ) ವ್ಯವಸ್ಥೆ ಇಲ್ಲ. ಇದಲ್ಲದೇ ಖಾಸಗಿ ಬಸ್‌ ಹತ್ತೋಣವೆಂದರೆ ಅವು ಗ್ರಾಮೀಣ ಪ್ರದೇಶಗಳಿಗೆ ಹೋಗಲ್ಲ’ ಎನ್ನುವುದು ಪ್ರಯಾಣಿಕರ ದೂರು. ‘ಬೆಂಗಳೂರಿನ ಶ್ರೀನಗರಿಂದ ಕೋರಮಂಗಲ ಕಡೆಗೆ ರೂಟ್‌ ನಂಬರ್‌ ‘201’ ಬಿಎಂಟಿಸಿ ಬಸ್‌ ಇದೆ. ಅದರಲ್ಲಿ ಯಾವಾಗಲೂ ನೂಕುನುಗ್ಗಲು. ಈ ಮಾರ್ಗದಲ್ಲಿ ಕನಿಷ್ಠ ಅರ್ಧಗಂಟೆಗೆ ಒಂದು ಬಸ್‌ ಇದ್ದರೂ ನೂಕುನುಗ್ಗಲು ಕಡಿಮೆಯಾಗುತ್ತಿತ್ತು. ಅದೇ ರೀತಿ ಸುಬ್ರಹ್ಮಣ್ಯನಗರ–ಮಲ್ಲೇಶ್ವರ ಮಾರ್ಗದಲ್ಲಿಯೂ ಬಸ್‌ಗಳ ಸಂಖ್ಯೆ ಬಹಳ ಕಡಿಮೆ ಇದೆ. ‘ಶಕ್ತಿ’ ಯೋಜನೆ ಜಾರಿಯಾಗಿದ್ದರಿಂದ ಕೂಲಿಕಾರ್ಮಿಕರಿಗೆ ಗಾರ್ಮೆಂಟ್‌ ಸಹಿತ ವಿವಿಧೆಡೆ ಕೆಲಸ ಮಾಡುವ ಕಾರ್ಮಿಕರಿಗೆ ಬಹಳ ಅನುಕೂಲವಾಗಿದ್ದರೂ ಸರಿಯಾದ ಸಮಯಕ್ಕೆ ಬಸ್‌ಗಳಿಲ್ಲದೇ ಸಮಸ್ಯೆಯಾಗಿದೆ’ ಎನ್ನುವುದು ಐಟಿಐ ಬಡಾವಣೆಯ ಬಿ.ಎಸ್. ಭಾಗ್ಯಲಕ್ಷ್ಮೀ ಅಭಿಪ್ರಾಯ.

ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಲ್ಲ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದು ಬಸ್‌ ರಸ್ತೆಗಿಳಿಯಲು ನಾಲ್ಕೈದು ತಿಂಗಳು ಬೇಕು. ಮುಂದಿನ ವರ್ಷ ಬಸ್‌ಗಳ ಕೊರತೆ ಇರುವುದಿಲ್ಲ. ಹೊಸ ಕಾಲೇಜು ಹೊಸ ಕೋರ್ಸ್‌ಗಳು ಆರಂಭವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಡೆಗಳಲ್ಲಿ ಹೆಚ್ಚು ಸಮಸ್ಯೆ ಉಂಟಾಗಿರುವುದು ನಿಜ. ಬೊಲೆರೊ ವಾಹನಗಳಲ್ಲಿ ನಮ್ಮ ಅಧಿಕಾರಿಗಳು ಹೋಗಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ. ಅಗತ್ಯ ಇರುವಲ್ಲಿ ಬಸ್‌ ಟ್ರಿಪ್‌ಗಳನ್ನು ಜಾಸ್ತಿ ಮಾಡಿದ್ದೇವೆ
ವಿ. ಅನ್ಬುಕುಮಾರ್‌ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ
250 ಬಸ್‌ ಖರೀದಿಗೆ ಟೆಂಡರ್ 620 ಬಸ್‌ಗಳನ್ನು ಈಗಾಗಲೇ ಸೇವೆಗೆ ನಿಯೋಜಿಸಿದ್ದು ಮತ್ತೆ ಹೊಸದಾಗಿ 250 ಬಸ್‌ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಿದ್ದೇವೆ. ಬೇಡಿಕೆ ಬಂದ ರೂಟ್‌ಗಳಲ್ಲಿ ಹೆಚ್ಚಿನ ಶೆಡ್ಯೂಲ್‌ಗಳಲ್ಲಿ ಬಸ್‌ಗಳನ್ನು ಓಡಿಸುತ್ತಿದ್ದೇವೆ. ಈಗೀಗ ಬಹುತೇಕ ಬಸ್‌ಗಳಲ್ಲಿ ಆಸನಗಳು ಸಿಗುತ್ತಿವೆ
ಎಂ. ರಾಚಪ್ಪ ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್‌ಟಿಸಿ
2 ಸಾವಿರ ಡ್ರೈವರ್‌/ ಕಂಡಕ್ಟರ್‌ ಹುದ್ದೆಗಳ ಭರ್ತಿ ಗ್ರಾಮಾಂತರ ಪ್ರದೇಶಗಳ ಬಸ್‌ ಕೊರತೆ ನೀಗಿಸಲು 375 ಬಸ್‌ಗಳ ಖರೀದಿಗೆ ಸರ್ಕಾರದಿಂದ ಈಗಾಗಲೇ ಅನುಮತಿ ಸಿಕ್ಕಿದೆ. ಖರೀದಿ ಪ್ರಕ್ರಿಯೆ ಟೆಂಡರ್‌ ಹಂತದಲ್ಲಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಬಿ.ಆರ್‌.ಟಿ ಸೇವೆಗೆ ₹45 ಕೋಟಿ ವೆಚ್ಚದಲ್ಲಿ 100 ಹೊಸ ಬಸ್‌ ಮತ್ತು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ₹16.20 ಕೋಟಿ ವೆಚ್ಚದಲ್ಲಿ ಎ.ಸಿ/ ನಾನ್‌ ಎ.ಸಿ 24 ಹೊಸ ಬಸ್‌ ಖರೀದಿಸಲು  ಅನುಮೋದನೆ ನೀಡಿದೆ. ಸದ್ಯದಲ್ಲೇ ಒಟ್ಟು 499 ಬಸ್‌ ಸೇರ್ಪಡೆಯಾಗಲಿವೆ. ಇದರ ಜೊತೆಗೆ 2 ಸಾವಿರ ಡ್ರೈವರ್‌/ ಕಂಡಕ್ಟರ್‌ ಹುದ್ದೆಗಳ ಭರ್ತಿಗೂ ಸರ್ಕಾರ ಹಸಿರು ನಿಶಾನೆ ತೋರಿದೆ. ಇದು ತಕ್ಕಮಟ್ಟಿಗೆ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಸಹಕಾರಿಯಾಗಲಿದೆ’
ಭರತ್‌ ಎಸ್‌. ವ್ಯವಸ್ಥಾಪಕ ನಿರ್ದೇಶಕ ಎನ್‌ಡಬ್ಲ್ಯುಕೆಆರ್‌ಟಿಸಿ
ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರು ಹೆಚ್ಚಾಗಿರುವುದರಿಂದ ದಾವಣಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಫುಟ್‌ಬೋರ್ಡ್‌ ಮೇಲೆ ಅಪಾಯಕಾರಿಯಾಗಿ ಜೋತುಬಿದ್ದು ಸಾಗುತ್ತಿರುವ ಪ್ರಯಾಣಿಕರು ಕಂಡು ಬಂದಿದ್ದು ಹೀಗೆ

ಶಕ್ತಿ ಯೋಜನೆ ಜಾರಿಯಾದ ನಂತರ ಪ್ರಯಾಣಿಕರು ಹೆಚ್ಚಾಗಿರುವುದರಿಂದ ದಾವಣಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನ ಫುಟ್‌ಬೋರ್ಡ್‌ ಮೇಲೆ ಅಪಾಯಕಾರಿಯಾಗಿ ಜೋತುಬಿದ್ದು ಸಾಗುತ್ತಿರುವ ಪ್ರಯಾಣಿಕರು ಕಂಡು ಬಂದಿದ್ದು ಹೀಗೆ

–ಪ್ರಜಾವಾಣಿ ಚಿತ್ರ/ಸತೀಶ್ ಬಡಿಗೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT