ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ
ಆಳ–ಅಗಲ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವೇ ಗೊತ್ತಿಲ್ಲ
Published 1 ಜೂನ್ 2023, 21:02 IST
Last Updated 1 ಜೂನ್ 2023, 21:02 IST
ಅಕ್ಷರ ಗಾತ್ರ
ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಈವರ್ಷದ ಮೊದಲ ಮೂರು ತಿಂಗಳಲ್ಲೇ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳೇನು ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜಾತಿಗಳ ವಿದ್ಯಾರ್ಥಿಗಳ ಆತ್ಮಹತ್ಯೆಗೂ ಕಾರಣ ಏನು ಎಂಬುದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ.

‘ನನ್ನ ಜಾತಿಯ ಬಗ್ಗೆ ಗೊತ್ತಾದ ನಂತರ ಸಹಪಾಠಿಗಳು ನನ್ನೊಂದಿಗೆ ವರ್ತಿಸುವ ರೀತಿ ಬದಲಾಯಿತು’ ಎಂದು  ಮಗ ತಮ್ಮ ಬಳಿ ಹೇಳಿಕೊಂಡಿದ್ದ ಎಂದು ಆತನ ತಾಯಿ ಹೇಳಿದ್ದಾರೆ’.

ಐಐಟಿ ಬಾಂಬೆಯ ಮೊದಲ ವರ್ಷ ಬಿ.ಟೆಕ್‌ ಪದವಿ ವಿದ್ಯಾರ್ಥಿಯಾಗಿದ್ದ ದರ್ಶನ್ ಸೋಲಂಕಿ ಇದೇ ಫೆಬ್ರುವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಇರುವ ಮಾಹಿತಿ ಇದು. ದರ್ಶನ್‌ ಸೋಲಂಕಿಯ ಸೋದರಿ ಮತ್ತು ಸಂಬಂಧಿಕರೂ ಪೊಲೀಸರಿಗೆ ಇದೇ ರೀತಿಯ ಮಾಹಿತಿ ಕೊಟ್ಟಿದ್ದಾರೆ. ಆರೋಪಪಟ್ಟಿಯಲ್ಲಿ ಅದನ್ನೂ ಉಲ್ಲೇಖಿಸಲಾಗಿದೆ.

ದರ್ಶನ್‌ ಸೋಲಂಕಿ ಆತ್ಮಹತ್ಯೆ ಮಾಡಿಕೊಂಡಾಗ ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಸಂಬಂಧ ದೂರು ದಾಖಲಾಗಿತ್ತು. ಜಾತಿ ಆಧಾರಿತ ತಾರತಮ್ಯದ ಕಾರಣದಿಂದಲೇ ದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಈ ಸಂಬಂಧ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಲಾಗಿತ್ತು ಮತ್ತು ಆತ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ದರ್ಶನ್‌ ಪ್ರಕರಣದ ಕಾರಣಕ್ಕೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಚರ್ಚೆಯ ಮುನ್ನೆಲೆಗೆ ಬಂದಿದ್ದವು. ಹೀಗಾಗಿ ಕೆಲವು ಸಂಸದರು ಈ ಬಗ್ಗೆ ಸರ್ಕಾರವನ್ನು ಸಂಸತ್ತಿನಲ್ಲಿ ಪ್ರಶ್ನಿಸಿದ್ದರು.

ಕನ್ನಡಿಗ, ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಅವರು ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಆಗ ಶಿಕ್ಷಣ ಸಚಿವಾಲಯದ ರಾಜ್ಯಖಾತೆ ಸಚಿವ ಸುಭಾಷ್ ಸರ್ಕಾರ್‌ ಮಾಹಿತಿ ನೀಡಿದ್ದರು. ಅವರು ನೀಡಿದ ಮಾಹಿತಿಯಲ್ಲಿ, 2018ರಿಂದ 2023ರ ಮಾರ್ಚ್‌ವರೆಗೆ ಎಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿವರವಷ್ಟೇ ಇತ್ತು. ಹೀಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬುದರ ಮಾಹಿತಿ ಇರಲಿಲ್ಲ. 

ಲೋಕಸಭೆಯಲ್ಲೂ ಈ ಬಗ್ಗೆ ಒಡಿಶಾ ಸಂಸದ ಬೆನ್ನಿ ಬೆಹ್ನಾನ್‌ ಪ್ರಶ್ನಿಸಿದ್ದರು. ಬೆಹ್ನಾನ್‌ ತಮ್ಮ ಪ್ರಶ್ನೆಯಲ್ಲಿ, ‘ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆಯೇ’ ಎಂದು ಕೇಳಿದ್ದರು. ಇದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಲಿಖಿತ ಉತ್ತರ ನೀಡಿದ್ದರು. 2018ರಿಂದ 2023ರ ಮಾರ್ಚ್‌ ಅಂತ್ಯದವರೆಗೆ ಎಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಉತ್ತರವನ್ನಷ್ಟೇ ನೀಡಿದ್ದರು. ಆದರೆ, ವಿದ್ಯಾರ್ಥಿಗಳ ಆತ್ಮಹತ್ಯೆಗೆ ನಿಖರ ಕಾರಣಗಳೇನು ಎಂಬುದರ ಬಗ್ಗೆ ಆ ಉತ್ತರದಲ್ಲಿ ಮಾಹಿತಿ ಇಲ್ಲ. ಜತೆಗೆ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬುದರ ಮಾಹಿತಿಯೂ ಆ ಉತ್ತರದಲ್ಲಿ ಇರಲಿಲ್ಲ (2021ರಲ್ಲಿ ಧರ್ಮೇಂದ್ರ ಪ್ರಧಾನ್ ಅವರೇ ನೀಡಿದ್ದ ಉತ್ತರದಲ್ಲಿ ಈ ಮಾಹಿತಿ ಇತ್ತು).

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಸಿದ್ಧಪಡಿಸುವ ‘ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು’ ವರದಿಯಲ್ಲೂ ಈ ಬಗೆಯ ವರ್ಗೀಕರಣ ಇಲ್ಲ. ದರ್ಶನ್‌ ಸೋಲಂಕಿ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದ ವಿದ್ಯಾರ್ಥಿಯ ಮೇಲೆ ಆರಂಭದಲ್ಲಿ, ‘ಆತ್ಮಹತ್ಯೆಗೆ ಪ್ರಚೋದನೆ’ ನೀಡಿದ ಸೆಕ್ಷನ್‌ನ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿರಲಿಲ್ಲ. ಈಗಷ್ಟೇ ಆರೋಪ ಪಟ್ಟಿಯಲ್ಲಿ ಜಾತಿ ತಾರತಮ್ಯದ ಬಗ್ಗೆ ಉಲ್ಲೇಖಿಸಲಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಬಂಧ ಚರ್ಚೆ ಆರಂಭವಾದದ್ದು ರೋಹಿತ್ ವೇಮುಲ ಪ್ರಕರಣದ ನಂತರ. ಹೈದರಾಬಾದ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ದಲಿತ ಸಮುದಾಯದ ರೋಹಿತ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ, ‘ನನ್ನ ಹುಟ್ಟೇ ನನ್ನ ಸಾವಿಗೆ ಕಾರಣ’ ಎಂದು ಹೇಳಿಕೊಂಡಿದ್ದರು.

ಅಂಬೇಡ್ಕರ್ ಅವರ ಹೆಸರಿನ ಸಂಘಟನೆ ಅಡಿಯಲ್ಲಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ರೋಹಿತ್ ಸೇರಿ ಐವರು ದಲಿತ ವಿದ್ಯಾರ್ಥಿಗಳ ವಿರುದ್ಧ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ದೂರು ನೀಡಿತ್ತು. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆಯಾಗಿದ್ದ ಸ್ಮೃತಿ ಇರಾನಿ ಅವರವರೆಗೂ ಈ ದೂರು ಹೋಗಿತ್ತು. ಸಚಿವರ ಸೂಚನೆಯನ್ವಯ ಐವರ ವಿದ್ಯಾರ್ಥಿವೇತನವನ್ನೂ ತಡೆ ಹಿಡಿಯಲಾಗಿತ್ತು. ಆನಂತರವೇ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದು. ಭಾರಿ ಪ್ರತಿಭಟನೆಯ ಹೊರತಾಗಿಯೂ ಒತ್ತಡದ ಕಾರಣಗಳಿಗೆ ನಡೆದ ಆತ್ಮಹತ್ಯೆ ಎಂದು ದಾಖಲೆಗಳಲ್ಲಿ ನಮೂದಿಸಲಾಯಿತು. 

ಈ ಎಲ್ಲಾ ಪ್ರಕರಣಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ಅಥವಾ ತಾರತಮ್ಯದ ಉಲ್ಲೇಖ ಇಲ್ಲ. ಒಟ್ಟಾರೆ ಈ ಪ್ರಕರಣಗಳನ್ನು ಸಾಮಾನ್ಯ ಪ್ರಕರಣಗಳು ಎಂದಷ್ಟೇ ಪರಿಗಣಿಸಲಾಗಿದೆ ಎಂಬುದನ್ನು ಸರ್ಕಾರದ ದಾಖಲೆಗಳು ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT