ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಉಳಿದ ಏಕರೂಪ ನಾಗರಿಕ ಸಂಹಿತೆ

Published 25 ಜುಲೈ 2023, 19:37 IST
Last Updated 25 ಜುಲೈ 2023, 19:37 IST
ಅಕ್ಷರ ಗಾತ್ರ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನಿಸಬೇಕು ಎಂದು ಹೇಳಿರುವ 35ನೇ ವಿಧಿಗೆ ಸಂವಿಧಾನ ರಚನಾ ಸಭೆಯಲ್ಲಿ ಯುನೈಟೆಡ್‌ ಪ್ರಾವಿನೆನ್ಸ್‌ನ ಪ್ರತಿನಿಧಿ ಮೊಹಮ್ಮದ್ ಇಸ್ಮಾಯಿಲ್‌ ಖಾನ್‌ ತಿದ್ದುಪಡಿಯನ್ನು ಸೂಚಿಸಿದ್ದರು. ‘ಯಾವುದೋ ಒಂದು ಕಾನೂನಿಗಾಗಿ ಈಗಾಗಲೇ ಇರುವ ತಮ್ಮ ವೈಯಕ್ತಿಕ ಕಾನೂನನ್ನು ಬಿಟ್ಟುಕೊಡುವಂತೆ ಯಾವುದೇ ಗುಂಪು, ವರ್ಗ ಅಥವಾ ಸಮುದಾಯದ ಜನರ ಮೇಲೆ ಹೇರಿಕೆ ಮಾಡಬಾರದು’ ಎಂಬುದು ಆ ತಿದ್ದುಪಡಿಯಾಗಿತ್ತು. ಈ ಪ್ರಸ್ತಾವದ ಮೇಲೆ ಸುದೀರ್ಘ ಚರ್ಚೆ ನಡೆದಿತ್ತು. ಎಲ್ಲಾ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟ ನಂತರ ಬಿ.ಆರ್.ಅಂಬೇಡ್ಕರ್ ಅವರು ಚರ್ಚೆಯನ್ನು ಕೊನೆಗೊಳಿಸಿದ್ದರು. ‘ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು ಎಂದಷ್ಟೇ ಹೇಳಲಾಗಿದೆ. ಇಂಥದೊಂದು ಕಾನೂನು ಇದೆ ಎಂದ ಮಾತ್ರಕ್ಕೆ ಸರ್ಕಾರವು ಅದನ್ನು ಜಾರಿಗೊಳಿಸಲೇಬೇಕು ಎಂದೇನಿಲ್ಲ’ ಎಂದು ಅವರು ಹೇಳಿದ್ದರು. ಆ ಮೂಲಕ 35ನೇ ವಿಧಿಯನ್ನು (ಈಗ 44ನೇ ವಿಧಿ) ಸಂವಿಧಾನದ ನಾಲ್ಕನೇ ಭಾಗದಲ್ಲಿ ಉಳಿಸಿಕೊಳ್ಳಲಾಯಿತು.

‘ಸಂಹಿತೆಗೆ ಒಪ್ಪಿಗೆ ಸ್ವಯಂಪ್ರೇರಿತ ಆಗಿರಬೇಕು’

ಏಕರೂಪ ನಾಗರಿಕ ಸಂಹಿತೆಯ ಕುರಿತು ಹೇಳಲಾಗಿರುವ ತಿದ್ದುಪಡಿಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಬೇಕೆ ಬೇಡವೇ ಎನ್ನುವ ಪ್ರಶ್ನೆಯು ಯೋಗ್ಯವೇ? ಇಲ್ಲವೇ? ಎನ್ನುವುದರ ಕುರಿತು ನಾನು ಈ ವೇಳೆ ಮಾತನಾಡುತ್ತಿಲ್ಲ. ಈ ಬಗ್ಗೆ ಕೆ.ಎಂ. ಮುನ್ಷಿ ಹಾಗೂ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌ ಮಾತನಾಡಿದ್ದಾರೆ. ಕೆಲವು ಮೂಲಭೂತ ಹಕ್ಕುಗಳಿಗೆ ತಿದ್ದುಪಡಿಗಳು ಮಂಡನೆಯಾದಾಗ ಈ ವಿಷಯದಲ್ಲಿ ಪೂರ್ಣ ಹೇಳಿಕೆ ನೀಡುವುದು ನನಗೆ ಸಾಧ್ಯವಾಗಬಹುದು. ಹಾಗಾಗಿ, ಈಗ ಈ ಕುರಿತು ಏನನ್ನೂ ಹೇಳುವುದಿಲ್ಲ.

ಭಾರತದಂಥ ದೊಡ್ಡ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಾಧ್ಯವಿದೆಯೇ ಎಂದು ಹುಸೇನ್‌ ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ನನಗೆ ಆಶ್ಚರ್ಯ ತಂದಿದೆ. ಅಪರಾಧ ಕಾನೂನುಗಳಿವೆ, ಆಸ್ತಿ ವರ್ಗಾವಣೆ ಕಾನೂನಿದೆ, ನೆಗೋಶಿಯಬಲ್‌ ಇನ್ಸ್‌ಟ್ರುಮೆಂಟ್ಸ್‌ ಕಾಯ್ದೆ ಇದೆ. ಹೀಗೆ ಹೇಳುತ್ತಾ ಹೋದರೆ ಇನ್ನೂ ಹಲವು ಕಾಯ್ದೆಗಳನ್ನು ಉಲ್ಲೇಖಿಸಬಹುದು. ಈ ಎಲ್ಲಾ ಕಾಯ್ದೆಗಳು ದೇಶದಾದ್ಯಂತ ಎಲ್ಲರಿಗೂ ಏಕರೂಪವಾಗಿವೆ. ಮದುವೆ ಮತ್ತು ಉತ್ತರಾಧಿಕಾರದ ಕಾನೂನುಗಳಿಗೆ ಮಾತ್ರ ನಮಗೆ ಏಕರೂಪ ಕಾನೂನು ತರಲು ಸಾಧ್ಯವಾಗಿಲ್ಲ. ಇದೇ ಕಾರಣಕ್ಕಾಗಿ ಈಗ 35ನೇ ವಿಧಿಯ ಮೂಲಕ ಮದುವೆ ಹಾಗೂ ಉತ್ತರಾಧಿಕಾರದ ಕಾನೂನನ್ನು ಏಕರೂಪಗೊಳಿಸಲು ಹೊರಟಿರುವುದು; ಬದಲಾವಣೆ ತರಲು ಇಚ್ಛಿಸಿರುವುದು. ಆದ್ದರಿಂದ, ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆ ತರಲು ಸಾಧ್ಯವೇ ಅನ್ನುವ ಪ್ರಶ್ನೆಗೆ ನನ್ನ ಉತ್ತರ, ನಾವು ಈಗಾಗಲೇ ಏಕರೂಪ ಕಾನೂನನ್ನು ಜಾರಿಗೊಳಿಸಿದ್ದೇವೆ.

ದೇಶದಾದ್ಯಂತ ಮುಸ್ಲಿಂ ವೈಯಕ್ತಿಕ ಕಾನೂನು ಏಕರೂಪವಾಗಿದೆ. ಇದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಕೆಲವು ಸದಸ್ಯರು ಹೇಳುತ್ತಿದ್ದಾರೆ. ಈ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. 1935ರವರೆಗೆ ವಾಯವ್ಯ ಪ್ರಾಂತ್ಯದ ಜನರು ಷರಿಯಾ ಕಾನೂನನ್ನು ಅನುಸರಿಸುತ್ತಿರಲಿಲ್ಲ. ಉತ್ತರಾಧಿಕಾರ ಹಾಗೂ ಇತರೆ ವಿಷಯಗಳಲ್ಲಿ ಅವರು ಹಿಂದೂ ಕಾನೂನುಗಳನ್ನೇ ಅನುಸರಿಸುತ್ತಿದ್ದರು. ನಂತರದ ವರ್ಷಗಳಲ್ಲಿ ಹಿಂದೂ ಕಾನೂನುಗಳನ್ನು ರದ್ದುಗೊಳಿಸಿ, ಷರಿಯಾ ಕಾನೂನನ್ನು ಇಲ್ಲಿ ಜಾರಿಗೆ ತರಲಾಯಿತು.

ಇದನ್ನೂ ಓದಿ: ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ: ಸಂವಿಧಾನ ರಚನಾ ಸಭೆಯಲ್ಲಿ ಬೇಕು, ಬೇಡಗಳ ಚರ್ಚೆ

ದೇಶದಾದ್ಯಂತ ಇರುವ ಮುಸ್ಲಿಮರನ್ನು ಷರಿಯಾ ಕಾನೂನಿನ ಅಡಿಯಲ್ಲಿ ತರಲು ಆಡಳಿತವು 1937ರಲ್ಲಿ ಆದೇಶ ನೀಡಿತು. ಅಲ್ಲಿಯವರೆಗೆ ಭಾರತದ ಹಲವು ಪ್ರದೇಶಗಳಲ್ಲಿ ಅಂದರೆ, ಮಧ್ಯ ಪ್ರಾಂತ್ಯ, ಬಾಂಬೆ ಪ್ರಾಂತ್ಯ ಹಾಗೂ ಯುನೈಟೆಡ್‌ ಪ್ರಾಂತ್ಯದಲ್ಲಿ ಮುಸ್ಲಿಮರು ಉತ್ತರಾಧಿಕಾರದ ವಿಷಯದಲ್ಲಿ ಹಿಂದೂ ಕಾನೂನುಗಳನ್ನೇ ಅನುಸರಿಸುತ್ತಿದ್ದರು. 

ಉತ್ತರ ಮಲಬಾರ್‌ನಲ್ಲಿ ಮರುಮಗತ್ತಾಯಂ ಕಾನೂನು ಜಾರಿಯಲ್ಲಿದೆ. ಈ ಕಾನೂನನ್ನು ಅಲ್ಲಿನ ಮುಸ್ಲಿಮರೂ ಸೇರಿ ಎಲ್ಲ ಧರ್ಮದವರೂ ಅನುಸರಿಸುತ್ತಿದ್ದಾರೆ ಎಂದು ಕರುಣಾಕರ ಮೆನನ್‌ ಅವರು ನನ್ನ ಬಳಿ ಹೇಳಿದ್ದರು. ಮರುಮಗತ್ತಾಯಂ ಕಾನೂನು ಮಾತೃಪ್ರಧಾನ ಕಾನೂನಾಗಿದೆ. ಹೀಗಿರುವಾಗ ಮುಸ್ಲಿಮರ ಕಾನೂನುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬ ಹೇಳಿಕೆಯು ಉಪಯೋಗಕ್ಕೆ ಬಾರದ್ದು.

ಏಕರೂಪ ನಾಗರಿಕ ಸಂಹಿತೆ ತರುವ ಉದ್ದೇಶದಿಂದ ಹಿಂದೂ ಕಾನೂನುಗಳಿಂದ ಹಲವು ಅಂಶಗಳನ್ನು ಇಲ್ಲಿ ಪಡೆದುಕೊಳ್ಳಲಾಗಿದೆ. ಹಿಂದೂಗಳ ಕಾನೂನು ಎನ್ನುವ ಕಾರಣಕ್ಕಾಗಿ ಅವುಗಳನ್ನು ಪಡೆದುಕೊಂಡಿಲ್ಲ. ಬದಲಿಗೆ ಅವು ಎಲ್ಲ ಕಡೆಯೂ ಸೂಕ್ತವಾಗುತ್ತವೆ ಎನ್ನುವ ದೃಷ್ಟಿಯಿಂದ ಪಡೆದುಕೊಳ್ಳಲಾಗಿದೆ. ಆದ್ದರಿಂದ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಸಂವಿಧಾನ ರಚನಾ ಸಮಿತಿಯವರು ಧಕ್ಕೆ ತಂದಿದ್ದಾರೆ ಎಂದುಕೊಳ್ಳಬೇಕಾಗಿಲ್ಲ.

ನಾನು ಮುಸ್ಲಿಂ ಸಮುದಾಯದವರಿಗೆ ಭರವಸೆಯನ್ನು ನೀಡಲು ಬಯಸುತ್ತೇನೆ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಅವರು 35ನೇ ವಿಧಿಯನ್ನು ಅತಿಯಾಗಿ ಓದಿಕೊಂಡಿದ್ದಾರೆ. ಏಕರೂಪ ನಾಗರಿಕ ಸಂಹಿತೆಯನ್ನು ತರಲು ಸರ್ಕಾರ ಪ್ರಯತ್ನಿಸಬೇಕು ಎಂದಷ್ಟೇ ಹೇಳಲಾಗಿದೆ. ಇಂಥದೊಂದು ಕಾನೂನು ಇದೆ ಎಂದ ಮಾತ್ರಕ್ಕೆ ಸರ್ಕಾರವು ಅದನ್ನು ಜಾರಿಗೊಳಿಸಬೇಕು ಎಂದೇನಿಲ್ಲ.

ತಾನು ಈ ಏಕರೂಪ ನಾಗರಿಕ ಸಂಹಿತೆಗೆ ಒಳಪಡುತ್ತೇನೆ ಎಂದು ವ್ಯಕ್ತಿಯು ಘೋಷಿಸಿಕೊಂಡರೆ ಅಂಥವರನ್ನು ಈ ಕಾನೂನಿಗೆ ಒಳಪಡಿಸುವ ಕಾರ್ಯವನ್ನು ಭವಿಷ್ಯದ ಸರ್ಕಾರಗಳು ನಡೆಸಬಹುದು. ಇದು ಏಕರೂಪ ನಾಗರಿಕ ಸಂಹಿತೆಯ ಜಾರಿಯ ಮೊದಲ ಹೆಜ್ಜೆಯಾಗಲಿದೆ. ಜೊತೆಗೆ ಅದು ಸಂಪೂರ್ಣ ಸ್ವಯಂಪ್ರೇರಿತ ಆಗಿರಬೇಕು. ಇದನ್ನು ಮಾದರಿ ನಡೆ ಎನ್ನಲಾಗದು, ಆದರೆ ಸಂಸತ್ತು ಈ ವ್ಯವಸ್ಥೆಯನ್ನು ಅನುಸರಿಸಬಹುದು.

ವಾಯವ್ಯ ಪ್ರಾಂತ್ಯದಿಂದ ಆಚೆಗೆ ಬೇರೆ ಪ್ರಾಂತ್ಯಗಳಲ್ಲಿ ಷರಿಯಾ ಕಾನೂನನ್ನು ಜಾರಿ ಮಾಡಲು ಹೊರಟಾಗ ಇದೇ ರೀತಿಯ ವ್ಯವಸ್ಥೆಗೆ ಅನುಕೂಲ ಮಾಡಿಕೊಡಲಾಗಿತ್ತು. ಯಾರೆಲ್ಲಾ ಷರಿಯಾ ಕಾನೂನನ್ನು ಒಪ್ಪಲು ಬಯಸುತ್ತಾರೊ ಅವರೆಲ್ಲರೂ ಅಧಿಕಾರಿಗಳ ಬಳಿ ಹೋಗಿ ತಾವು ಈ ಕಾನೂನನ್ನು ಪಾಲಿಸುವುದಾಗಿ ಘೋಷಿಸಿಕೊಳ್ಳಬೇಕಿತ್ತು. ಹೀಗೆ ಘೋಷಿಸಿಕೊಂಡ ಬಳಿಕ ಆತ ಹಾಗೂ ಆತನ ಉತ್ತರಾಧಿಕಾರಿಯು ಇದನ್ನೇ ಪಾಲಿಸಬೇಕಿತ್ತು.

ಇದೇ ರೀತಿಯ ವ್ಯವಸ್ಥೆಯನ್ನು ರೂಪಿಸಲಿಕ್ಕೆ ಸರ್ಕಾರಕ್ಕೆ ಸಾಧ್ಯವಿದೆ. ಆದ್ದರಿಂದ ಈ ವಿಧಿಯ ಕುರಿತು ನನ್ನ ಸ್ನೇಹಿತರು ವ್ಯಕ್ತಪಡಿಸಿದ ಆತಂಕವು ಅರ್ಥಹೀನವಾದುದು. ಹಾಗಾಗಿ, ಈ ತಿದ್ದುಪಡಿಗಳಲ್ಲಿ ಯಾವುದೇ ವಾದವಿಲ್ಲ. ಆದ್ದರಿಂದ ನಾನು ಇದನ್ನು ವಿರೋಧಿಸುತ್ತೇನೆ.

–ಬಿ. ಆರ್‌. ಅಂಬೇಡ್ಕರ್‌, ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷ

‘ಬುಡಕಟ್ಟುಗಳು ಏನಾಗಬೇಕು?’

ನಮ್ಮ ಹಿಂದುಳಿದ ವರ್ಗಗಳಿಗೆ ನಾವು ಯಾವ ರೀತಿಯಲ್ಲಿ ರಕ್ಷಣೆ ನೀಡಿದ್ದೇವೆ ನೋಡಿ. ಆಸ್ತಿ ವಿಷಯದಲ್ಲಿ ಬೇರೆ ಯಾವ ಸಮುದಾಯಕ್ಕೂ ನೀಡದಂಥ ರಕ್ಷಣೆಯನ್ನು ನಾವು ಹಿಂದುಳಿದ ವರ್ಗಗಳಿಗೆ ನೀಡಿದ್ದೇವೆ. ಜಾರ್ಖಂಡ್‌ ಮತ್ತು ಸಂತಾಲ್‌ ಪರಗಣಾಗಳಲ್ಲಿ ನಾವು ಆದಿವಾಸಿಗಳಿಗೆ ವಿಶೇಷ ರಕ್ಷಣೆ ನೀಡಿದ್ದೇವೆ.

ಅಸ್ಸಾಂ ಬುಡಕಟ್ಟು ಸಮುದಾಯವನ್ನೇ ನೋಡಿ, ಅವರ ಸ್ಥಿತಿ ಹೇಗಿದೆ? ಆಧುನಿಕತೆಗೆ ತೆರೆದುಕೊಂಡ ಬಾಂಬೆ ಜನರಿಗೆ ಅನ್ವಯಿಸುವ ಕಾನೂನನ್ನೇ ಈ ಬುಡಕಟ್ಟು ಜನರಿಗೆ ಅನ್ವಯಿಸಲು ಸಾಧ್ಯವಿದೆಯೇ? ಏಕರೂಪ ನಾಗರಿಕ ಸಂಹಿತೆ ಬರಬೇಕು ಎನ್ನುವುದು ಅಪೇಕ್ಷಣೀಯವೇ ಆಗಿದೆ. ಆದರೆ, ಅದಕ್ಕೆ ಈಗಿನದ್ದು ಸೂಕ್ತ ಕಾಲವಲ್ಲ. ಭಾರತವು ಸಂಪೂರ್ಣವಾಗಿ ಸಾಕ್ಷರತೆ ಹೊಂದಬೇಕು, ಜನರು ಆಧುನಿಕಗೊಳ್ಳಬೇಕು, ಅವರ ಆರ್ಥಿಕ ಸ್ಥಿತಿಗಳು ಸುಧಾರಿಸಬೇಕು.. ದೇಶವು ಇಂಥ ಸ್ಥಿತಿಗೆ ತಲುಪಿದಾಗ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿ.

ಇದನ್ನೂ ಓದಿ: ಆಳ–ಅಗಲ | ಏಕರೂಪ ಎಲ್ಲರಿಗೂ ಅನ್ವಯ: ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಪಾದನೆ

ಅಲ್ಪಸಂಖ್ಯಾತರ ಆತಂಕ ಸರಿಯಾದುದುದೇ ಆಗಿದೆ. ಜಾತ್ಯತೀತ ದೇಶವೆಂದರೆ, ಅದು ಧರ್ಮ ವಿರೋಧಿ ಅಲ್ಲ; ಬದಲಿಗೆ ಧರ್ಮ ನಿರಪೇಕ್ಷವಾದುದು. ಈ ಕಾನೂನಿನ ಕುರಿತು ಸದಸ್ಯರು, ಜನರು ಎತ್ತಿರುವ ಪ್ರಶ್ನೆಗಳ ಬಗ್ಗೆ ಸಂವಿಧಾನ ಕರಡು ರಚನಾ ಸಮಿತಿಯು ಗಮನಹರಿಸಬೇಕು. ಜೊತೆಗೆ, ಈ ಸಮಸ್ಯೆಗೆ ಅಂಬೇಡ್ಕರ್‌ ಅವರಂಥ ಮೇಧಾವಿಯು ಪರಿಹಾರ ಕಂಡುಹಿಡಿಯುತ್ತಾರೆ ಎಂಬ ನಂಬಿಕೆ ಇದೆ.

–ಹುಸೇನ್‌ ಇಮಾಮ್‌, ಸಂವಿಧಾನ ರಚನಾ ಸಭೆಯಲ್ಲಿ ಬಿಹಾರ ಕ್ಷೇತ್ರದ ಪ್ರತಿನಿಧಿ

‘ಷರಿಯಾ ಕಾನೂನನ್ನೇ ಬದಲಾಯಿಸಿದ್ದ ಖಿಲ್ಜಿ’

ವೈಯಕ್ತಿಕ ಕಾನೂನುಗಳು ಧರ್ಮದ ಭಾಗ ಎನ್ನುವುದನ್ನು ಬ್ರಿಟಿಷ್‌ ಆಳ್ವಿಕೆ ಹಾಗೂ ಬ್ರಿಟಿಷ್‌ ನ್ಯಾಯಾಲಯಗಳು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿಸಿವೆ. ಇದರಿಂದ ನಾವು ಹೊರ ಬರಬೇಕಿದೆ.

ಷರಿಯಾ ಕಾನೂನಿನಲ್ಲಿ ಅಲ್ಲಾವುದ್ದೀನ್‌ ಖಿಲ್ಜಿಯು ಹಲವು ಬದಲಾವಣೆಗಳನ್ನು ಮಾಡಿದ. ದೆಹಲಿಯ ಖಾಜಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ‘ನಾನೊಬ್ಬ ಅಜ್ಞಾನಿ ಮನುಷ್ಯ. ನಾನು ದೇಶವನ್ನು ಎಷ್ಟು ಸಾಧ್ಯವೋ ಅಷ್ಟು ಮುತುವರ್ಜಿಯಿಂದ ಆಳುತ್ತಿದ್ದೇನೆ. ನನ್ನ ಅಜ್ಞಾನ ಮತ್ತು ನನ್ನ ಆಡಳಿತಕ್ಕೆ ಇರುವ ಒಳ್ಳೆಯ ಉದ್ದೇಶವನ್ನು ಗಮನಿಸಿ ದೇವರು ನನ್ನನ್ನು ಕ್ಷಮಿಸುತ್ತಾನೆ’ ಎಂದು ಖಿಲ್ಜಿಯು ದೆಹಲಿಯ ಖಾಜಿಗಳಿಗೆ ಉತ್ತರಿಸಿದ್ದನು. ವೈಯಕ್ತಿಕ ಕಾನೂನು ಸೇರಿದಂತೆ ಇತರೆ ಕಾನೂನುಗಳು ಧರ್ಮದ ಭಾಗ ಎಂಬುದನ್ನು ಖಿಲ್ಜಿಯೇ ನಿರಾಕರಿಸಿರುವಾಗ, ಆಧುನಿಕ ಸರ್ಕಾರವಾದ ನಾವು ಯಾಕಾಗಿ ವೈಯಕ್ತಿಕ ಕಾನೂನುಗಳು ಧರ್ಮದ ಭಾಗ ಎಂದು ಪರಿಗಣಿಸಬೇಕು?

–ಕನ್ಹಯ್ಯಾಲಾಲ್‌ ಮಾಣಿಕ್‌ಲಾಲ್‌ ಮುನ್ಷಿ, ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಕ್ಷೇತ್ರದ ಪ್ರತಿನಿಧಿ

‘ಮುಸ್ಲಿಮರಿಗೇಕೆ ನಂಬಿಕೆ ಇಲ್ಲ?’

ವಿವಾಹ, ಉತ್ತರಾಧಿಕಾರ ಸೇರಿದಂತೆ ಕೆಲವು ಕಾನೂನುಗಳ ಕುರಿತು ದೇಶದ ಹಲವು ಜನರಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಎಲ್ಲವನ್ನು ಏಕರೂಪ ಮಾಡಲು ಈ ಕಾನೂನನ್ನು ರೂಪಿಸಲಾಗಿದೆ.

ಈಗ ಹಿಂದೂ ಕಾನೂನನ್ನೇ ನೋಡಿ. ಇದನ್ನು ರೂಪಿಸಿದವರು, ಬೇರೆ ಧರ್ಮದ ಕಾನೂನನ್ನು ಇಲ್ಲಿ ಸೇರಿಸಿಕೊಂಡಿದ್ದಾರೆ. ಇದೇ ರೀತಿ ಉತ್ತರಾಧಿಕಾರದ ಕಾನೂನನ್ನು ರೋಮನ್‌ ಹಾಗೂ ಇಂಗ್ಲಿಷ್‌ ದೇಶಗಳಿಂದ ಪಡೆದುಕೊಳ್ಳಲಾಗಿದೆ. ಅಭಿವೃದ್ಧಿ ಹೊಂದಬೇಕು ಎಂದಾದರೆ ಎಲ್ಲರಿಂದಲೂ ಪಡೆದುಕೊಳ್ಳಬೇಕಾಗುತ್ತದೆ. 

ಈ ದೇಶದ ಬಹುಸಂಖ್ಯಾತರು ಮಾತ್ರವೇ ಬೇರೆ ಧರ್ಮದ ವಿಷಯಗಳನ್ನು ತಮ್ಮೊ‌ಳಗೆ ಸ್ವೀಕರಿಸುವ ಗುಣವನ್ನು ಹೊಂದಿದ್ದಾರೆ. ಅವರು ಅಲ್ಪಸಂಖ್ಯಾತರಿಂದಲೂ ಪಾಠ ಕಲಿಯುತ್ತಾರೆ.

ಏಕರೂಪವಾಗಿಸುವ ಬಗ್ಗೆ ಬ್ರಿಟಿಷರ ನ್ಯಾಯಶಾಸ್ತ್ರ ಬುನಾದಿ ಹಾಕಿಕೊಟ್ಟಿದೆ. ನಾವು ಈ ದಿಸೆಯಲ್ಲಿ ಮುಂದಡಿ ಇಡುತ್ತಿದ್ದೇವೆಯಷ್ಟೇ. ವಿದೇಶಿ ಸರ್ಕಾರಕ್ಕಿಂತ ದೇಶೀಯವಾದ ಸರ್ಕಾರದ ಕುರಿತು ನಿಮಗೆ ಯಾಕಿಷ್ಟು ಅವಿಶ್ವಾಸ? ಎಲ್ಲಾ ಜನರ ನಂಬಿಕೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿರುವ ಪ್ರಜಾಪ್ರಭುತ್ವವಾದಿ ಸರ್ಕಾರದ ಕುರಿತು ಮುಸ್ಲಿಮರಿಗೆ ಯಾಕೆ ನಂಬಿಕೆ ಇಲ್ಲ?

–ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್‌, ಸಂವಿಧಾನ ರಚನಾ ಸಭೆಯಲ್ಲಿ ಮದ್ರಾಸ್‌ ಕ್ಷೇತ್ರದ ಪ್ರತಿನಿಧಿ

ಆಧಾರ: ಲೋಕಸಭೆಯ ಡಿಜಿಟಲ್‌ ಗ್ರಂಥಾಲಯದ ‘ಸಂವಿಧಾನದ ರಚನಾ ಸಭೆಯ ಸಂಸದೀಯ ಚರ್ಚೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT