ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಏಕರೂಪ ಎಲ್ಲರಿಗೂ ಅನ್ವಯ: ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಪಾದನೆ

Published 24 ಜುಲೈ 2023, 19:54 IST
Last Updated 24 ಜುಲೈ 2023, 19:54 IST
ಅಕ್ಷರ ಗಾತ್ರ

ಏಕರೂಪ ನಾಗರಿಕ ಸಂಹಿತೆಯು ಯಾರನ್ನು ಹೆಚ್ಚು ಬಾಧಿಸುತ್ತದೆ ಎಂಬುದರ ಬಗ್ಗೆಯೂ ಸಂವಿಧಾನ ರಚನಾ ಸಭೆಯಲ್ಲಿ ದೀರ್ಘವಾದ ಚರ್ಚೆ ನಡೆದಿದೆ. ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರನ್ನು ಮಾತ್ರ ಇವು ಬಾಧಿಸುವುದಲ್ಲ. ಹಿಂದೂಗಳನ್ನೂ ಇದು ಬಾಧಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯ ಕಾರಣಕ್ಕೆ ಹಿಂದೂಗಳು ಅನುಸರಿಸುತ್ತಿರುವ ವೈಯಕ್ತಿಕ ಕಾನೂನುಗಳನ್ನೂ ರದ್ದುಪಡಿಸಬೇಕಾಗುತ್ತದೆ ಎಂಬ ಅಭಿಪ್ರಾಯ 1948ರ ನವೆಂಬರ್ 23ರಂದು ನಡೆದ ಚರ್ಚೆಯಲ್ಲಿ ವ್ಯಕ್ತವಾಗಿದೆ. ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸುವವರು ಮತ್ತು ಆ ಸಂಹಿತೆ ಬೇಕು ಎನ್ನುವವರೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜತೆಗೆ ಬಹುತ್ವವನ್ನು ಉಳಿಸಿಕೊಳ್ಳಬೇಕು ಎಂದೂ ಹಲವು ಸದಸ್ಯರು ಒತ್ತಾಯಿಸಿದ್ದರು

‘ಬಹುತ್ವ: ಜಾತ್ಯತೀತ ದೇಶದ ಲಕ್ಷಣ’

‘ನಾಗರಿಕ ಸಂಹಿತೆ’ ಎನ್ನುವ ಪರಿಕಲ್ಪನೆಯಲ್ಲಿ ವೈಯಕ್ತಿಕ ಕಾನೂನುಗಳೂ ಸೇರುತ್ತವೆ ಎಂದುಕೊಂಡವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ. ವೈಯಕ್ತಿಕ ಕಾನೂನುಗಳು ಒಂದು ಸಮುದಾಯಕ್ಕೆ ಭಾವನಾತ್ಮಕವಾಗಿ ಬಹಳ ಹತ್ತಿರವಾಗಿರುತ್ತವೆ. ಮುಸ್ಲಿಂ ಸಮುದಾಯದ ಕುರಿತು ಮಾತನಾಡುವುದಾದರೆ, ಉತ್ತರಾಧಿಕಾರ ಹಾಗೂ ವಾರಸುದಾರಿಕೆಯ ಕಾನೂನು, ಮದುವೆ, ವಿಚ್ಛೇದನ ಕುರಿತ ಕಾನೂನುಗಳಿಗೆ ಅವರು ಸಂಪೂರ್ಣವಾಗಿ ಧರ್ಮವನ್ನೇ ಅವಲಂಬಿಸಿದ್ದಾರೆ.

ಹಿಂದೂಗಳಿಗೆ ಮದುವೆ ಎನ್ನುವುದು ಸಂಸ್ಕಾರ. ಯುರೋಪಿನವರಿಗೆ ಅದು ಸ್ಥಾನಮಾನದ ವಿಷಯ. ಮುಸ್ಲಿಮರಿಗೆ ಇದು ಕುರಾನ್‌ಗೆ ಸಂಬಂಧಿಸಿದ್ದು. ಕುರಾನ್‌ ಅನುಸಾರವಾಗಿ ಮದುವೆ ನಡೆದಿಲ್ಲವಾದರೆ, ಅದು ಮದುವೆಯೇ ಅಲ್ಲ. ಈ ನಂಬಿಕೆಯನ್ನು ಮುಸ್ಲಿಮರು ಸುಮಾರು 1,350 ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದಾರೆ. ಇಂಥ ಸಂದರ್ಭದಲ್ಲಿ, ಮದುವೆಯ ಸಿಂಧುತ್ವವನ್ನು ಏಕರೂಪವಾಗಿ ಪರಿಗಣಿಸಬೇಕು ಎಂದು ಹೇಳಿದರೆ, ಅದನ್ನು ಒಪ್ಪಲಾಗದು. ಮುಸ್ಲಿಮರಲ್ಲಿ ಮಾತ್ರವಲ್ಲ, ಮುಸ್ಲಿಮರಲ್ಲದ ಇತರೆ ಸಮುದಾಯಗಳಲ್ಲೂ ಇರುವ ವೈಯಕ್ತಿಕ ಕಾನೂನುಗಳು ಸಹ ಅವರವರ ಧರ್ಮದ ಮೇಲೆ ಆಧಾರಿತವಾಗಿವೆ.

ಇದನ್ನೂ ಓದಿ: ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ: ಸಂವಿಧಾನ ರಚನಾ ಸಭೆಯಲ್ಲಿ ಬೇಕು, ಬೇಡಗಳ ಚರ್ಚೆ

ಯಾವುದೇ ಒಂದು ಸಮುದಾಯವು ಯಾವುದೇ ಒಂದು ರೀತಿಯಲ್ಲಿ ಧರ್ಮವನ್ನು ಆಚರಿಸುತ್ತಿದ್ದರೆ,
ಬೇರೆ ಧರ್ಮದವರೂ ಅದೇ ರೀತಿಯಲ್ಲಿ ಧರ್ಮವನ್ನು ಆಚರಿಸಬೇಕು ಎನ್ನುವುದು ಸರಿಯಲ್ಲ. ಎಲ್ಲ ನಾಗರಿಕರೂ ಒಂದೇ ರೀತಿಯ ಕಾನೂನನ್ನು ಪಾಲಿಸಬೇಕು ಎನ್ನುವುದು ಜಾತ್ಯತೀತ ಪ್ರಭುತ್ವದ ಲಕ್ಷಣ ಎಂದು ಕೆಲವರು ಅಂದುಕೊಂಡಿದ್ದಾರೆ. ಜಾತ್ಯತೀತ ದೇಶವೊಂದು ಜನರ ದೈನಂದಿನ ಜೀವನ, ಅವರ ಭಾಷೆ, ಅವರ ಸಂಸ್ಕೃತಿ, ಅವರ ವೈಯಕ್ತಿಕ ಕಾನೂನುಗಳನ್ನು ಏಕರೂಪ ಮಾಡಬೇಕು ಎಂದುಕೊಂಡಿದ್ದಾರೆ. ಆದರೆ, ಇದು ತಪ್ಪು ಗ್ರಹಿಕೆ. ಎಲ್ಲಾ ಸಮುದಾಯದ ನಾಗರಿಕರಿಗೂ ಅವರದ್ದೇ ಧರ್ಮವನ್ನು ಪಾಲಿಸುವ, ಅವರದ್ದೇ ಜೀವನ ಶೈಲಿ ರೂಢಿಸಿಕೊಳ್ಳುವ, ಅವರದ್ದೇ ವೈಯಕ್ತಿಕ ಕಾನೂನನ್ನು ಪಾಲಿಸುವ ಸ್ವಾತಂತ್ರ್ಯ ಇರಬೇಕು. ಹಾಗಿದ್ದಾಗ ಮಾತ್ರ ಅದು ಜಾತ್ಯತೀತ ದೇಶ ಎನಿಸಿಕೊಳ್ಳುತ್ತದೆ.

–ಮೆಹಬೂಬ್‌ ಅಲಿ ಬೇಗ್‌‌, ಸಂವಿಧಾನ ರಚನಾ ಸಭೆಯ ಮದ್ರಾಸ್‌ ಕ್ಷೇತ್ರದ ಪ್ರತಿನಿಧಿ

‘ಬಹುಸಂಖ್ಯಾತರೂ ವಿರೋಧಿಸುತ್ತಿದ್ದಾರೆ’

ಮುಸ್ಲಿಮರಿಗಾಗಿ ಮಾತ್ರವೇ ಈ ತಿದ್ದುಪಡಿಗಳನ್ನು ಹೇಳಲಾಗುತ್ತಿದೆ ಎನ್ನುವುದು ಸರಿಯಲ್ಲ. ದೇಶದ ಹಲವು ಸಮುದಾಯಗಳ ದೃಷ್ಟಿಕೋನದಿಂದಲೂ ಇದನ್ನು ಗಮನಿಸಬೇಕಿದೆ. ದೇಶದ ಎಲ್ಲಾ ಧರ್ಮ ಮತ್ತು ಸಮುದಾಯಗಳ ಜನರು ವಾರಸುದಾರಿಕೆ, ಉತ್ತರಾಧಿಕಾರ, ಮದುವೆ, ವಿಚ್ಛೇದನ ಸೇರಿದಂತೆ ಹಲವು ವಿಷಯಗಳಿಗೆ ವೈಯಕ್ತಿಕ ಕಾನೂನನ್ನು ಅನುಸರಿಸುತ್ತಿದ್ದಾರೆ.

ಏಕರೂಪ ನಾಗರಿಕ ಸಂಹಿತೆಯ ವಿರುದ್ಧ ಮುಸ್ಲಿಮೇತರ ಸಮುದಾಯಗಳ ಸಂಘ–ಸಂಸ್ಥೆಗಳಿಂದಲೂ ನನಗೆ ಹಲವು ಪತ್ರಗಳು ಬಂದಿವೆ. ಈ ಕಾನೂನು ದಬ್ಬಾಳಿಕೆಯ ಗುಣವನ್ನು ಹೊಂದಿದೆ ಎಂದೂ ಅದರಲ್ಲಿ ಅಭಿಪ್ರಾಯಪಡಲಾಗಿದೆ. ‘ನಮ್ಮ ಧಾರ್ಮಿಕ ಆಚರಣೆಗಳನ್ನು ಅಡ್ಡಿಪಡಿಸುವ ಇವರು ಯಾರು’ ಎಂದು ಅವರು ಸಂಸದರನ್ನು ಪ್ರಶ್ನಿಸುತ್ತಿದ್ದಾರೆ.

ವಾರಸುದಾರಿಕೆ ಕಾನೂನುಗಳು ಒಂದೊಂದು ಸಮುದಾಯದಲ್ಲಿ ಒಂದೊಂದು ರೀತಿಯಲ್ಲಿವೆ. ಈ ಎಲ್ಲಾ ವಿಧವಾದ ಕಾನೂನುಗಳನ್ನು ಅಳಿಸಿ, ಏಕರೂಪ ಮಾಡಲು ಬಯಸುತ್ತಿರುವಿರಾ? ಹಾಗಾದರೆ, ಯಾವ ಸಮುಯದಾಯದ ವಾರಸುದಾರಿಕೆ ಕಾನೂನನ್ನು ಮಾದರಿಯನ್ನಾಗಿ ಇಟ್ಟುಕೊಳ್ಳುತ್ತೀರಿ? ಮಿತಾಕ್ಷರ ಹಾಗೂ ದಾಯಭಾಗ್‌ ಎಂಬ ಪದ್ಧತಿಗಳಿವೆ. ಇವುಗಳನ್ನು ಹಲವು ಸಮುದಾಯಗಳು ಪಾಲಿಸಿಕೊಂಡು ಬರುತ್ತಿವೆ. ಹಾಗಾದರೆ, ನೀವು ರೂಪಿಸಿರುವ ಕಾನೂನಿಗೆ ಮಾದರಿ ಯಾವುದು? ಇಂಥ ಕಾನೂನು ರೂಪಿಸಿ ದೇಶದಲ್ಲಿ ಕ್ರಾಂತಿ ಮಾಡಲು ಬಯಸಿದ್ದೀರಿ. ಆದರೆ, ಇಂಥ ಕ್ರಮದ ಅಗತ್ಯ ಖಂಡಿತ ಇಲ್ಲ.

ಲೇಖನಿಯ ಒಂದು ರೇಖೆಯಿಂದ, ಬೇರೆ ಬೇರೆ ಸಮುದಾಯದವರ ವಿಭಿನ್ನ ಆಚರಣೆಗಳನ್ನು ಏಕರೂಪ ಮಾಡಲು ಹೊರಟಿದ್ದೀರಿ. ಇದರಿಂದಾಗುವ ಲಾಭವಾದರೂ ಏನು? ಜನರ ನಂಬುಗೆಗಳನ್ನು ಕೊಲ್ಲುವುದು ಬಿಟ್ಟರೆ, ಬೇರೆ ಯಾವ ಉದ್ದೇಶ ಈ ಕಾನೂನಿನಿಂದ ಪೂರ್ಣಗೊಳ್ಳಲಿದೆ? ಇಂಥ ದಬ್ಬಾಳಿಕೆಯ ಕಾನೂನುಗಳಿಗೆ ನಮ್ಮ ಸಂವಿಧಾನದಲ್ಲಿ ಜಾಗ ಇರಬಾರದು.

ದೇಶದ ಬಹುಸಂಖ್ಯಾತರು ಈ ಕಾನೂನನ್ನು ಒಪ್ಪಿಕೊಂಡಿದ್ದಾರೆ ಎಂದು ಯಾರಾದರು ಹೇಳಿದರೆ, ನಾನು ಅವರಿಗೆ ಸವಾಲೊಡ್ಡುತ್ತೇನೆ. ದೇಶದ ಬಹುಸಂಖ್ಯಾತರು ಕೂಡ ಈ ಕಾನೂನಿನ ವಿರುದ್ಧವಿದ್ದಾರೆ. ಒಂದು ವೇಳೆ ದೇಶದ ಬಹುಸಂಖ್ಯಾತರು ಈ ಕಾನೂನಿನ ಪರ ಇದ್ದಾರೆ ಎಂದು ಊಹಿಸಿಕೊಂಡರೂ ಅದನ್ನು ನಾವು ಖಂಡಿಸಬೇಕಿದೆ. ಯಾಕೆಂದರೆ, ಪ್ರಜಾಪ್ರಭುತ್ವದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡುವುದು ಬಹುಸಂಖ್ಯಾತರ ಕರ್ತವ್ಯವಾಗಿದೆ. ಹೀಗಾಗದಿದ್ದರೆ ದೇಶವನ್ನು ಪ್ರಜಾಪ್ರಭುತ್ವ ಎಂದು ಹೇಗೆ ಕರೆಯುವುದು? ಇದು ದಬ್ಬಾಳಿಕೆ ಮಾತ್ರ.

–ಬಿ.ಪೋಕರ್‌, ಸಂವಿಧಾನ ರಚನಾ ಸಭೆಯ ಮದ್ರಾಸ್‌ ಕ್ಷೇತ್ರದ ಪ್ರತಿನಿಧಿ

‘ಬಹುಸಂಖ್ಯಾತರ ಮೇಲೆಯೇ ಹೆಚ್ಚು ದಬ್ಬಾಳಿಕೆ’

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇಲ್ಲವಾದರೆ, ಆಗುವ ದುಷ್ಪರಿಣಾಮಗಳ ಬಗ್ಗೆ ಚರ್ಚಿಸೋಣ. ಹಿಂದೂಗಳ ಉದಾಹರಣೆಯನ್ನೇ ನೋಡೋಣ. ಮಯೂಖಾ ಕಾನೂನು ದೇಶದ ಕೆಲವೆಡೆ ಜಾರಿಯಲ್ಲಿದೆ. ಇನ್ನು ಕೆಲವೆಡೆ ಮಿತಾಕ್ಷರ ಕಾನೂನು ಇದೆ. ಜೊತೆಗೆ ಬಂಗಾಳದಲ್ಲಿ ದಾಯಭಾಗ್‌ ಕಾನೂನನ್ನು ಪಾಲಿಸಲಾಗುತ್ತಿದೆ. ಹೀಗೆ ಹಿಂದೂಗಳಲ್ಲೇ ಬೇರೆ ಬೇರೆ ಕಾನೂನುಗಳಿವೆ. ನಮ್ಮ ಕೆಲವು ರಾಜ್ಯಗಳು ಹಾಗೂ ಪ್ರಾಂತ್ಯಗಳು ತಮ್ಮದೇ ಆದ ಹಿಂದೂ ಕಾನೂನನ್ನು ರೂಪಿಸಿಕೊಳ್ಳಲು ಪ್ರಾರಂಭಿಸಿವೆ. ದೇಶದ ವೈಯಕ್ತಿಕ ಕಾನೂನುಗಳಿಗೆ ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ, ಈ ರೀತಿಯ ಹೊಸ ಪ್ರತ್ಯೇಕ ಕಾನೂನುಗಳಿಗೆ ಅನುಮತಿ ನೀಡಲು ಸಾಧ್ಯವೆ? ಆದ್ದರಿಂದ ಈ ಕಾನೂನು ಅಲ್ಪಸಂಖ್ಯಾತರನ್ನು ಮಾತ್ರವಲ್ಲ ಬಹುಸಂಖ್ಯಾತರನ್ನೂ ಪ್ರಭಾವಿಸುತ್ತದೆ.

ಕೆಲವು ಹಿಂದೂಗಳಿಗೂ ಈ ಏಕರೂಪ ನಾಗರಿಕ ಕಾನೂನು ಇಷ್ಟವಿಲ್ಲ ಎಂದು ನನಗೆ ತಿಳಿದಿದೆ. ಯಾಕೆಂದರೆ, ಅವರು ಸಹ ನಮ್ಮ ಮುಸ್ಲಿಂ ಸದಸ್ಯರಂತೆಯೇ ಯೋಚಿಸುತ್ತಿದ್ದಾರೆ. ವಾರಸುದಾರಿಕೆ, ಉತ್ತರಾಧಿಕಾರದ ಕಾನೂನುಗಳು ಧಾರ್ಮಿಕತೆಯ ಭಾಗ ಎಂದು ಹಿಂದೂಗಳೂ ಅಂದುಕೊಂಡಿದ್ದಾರೆ. ಒಂದು ವೇಳೆ ವಾರಸುದಾರಿಕೆ, ಉತ್ತರಾಧಿಕಾರ ಮೊದಲಾದ ಕಾನೂನುಗಳು ಧರ್ಮದ ಭಾಗವೇ ಆಗಿದೆ ಎಂದಾದರೆ, ನೀವು ಎಂದಿಗೂ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾರಿರಿ.

ಹಿಂದೂ ಕಾನೂನುಗಳನ್ನೇ ನೋಡಿ, ಮಹಿಳೆಯರ ಕುರಿತಾದ ತಾರತಮ್ಯ ಹೇರಳವಾಗಿ ಸಿಗುತ್ತವೆ. ಹೀಗೆ ತಾರತಮ್ಯ ಎಸಗುವುದು ಹಿಂದೂ ಧರ್ಮದ ಭಾಗ ಹಾಗೂ ಹಿಂದೂ ಧರ್ಮದ ಆಚರಣೆ ಎನ್ನುವುದಾದರೆ, ಎಂದಿಗೂ ನಾವು ಮಹಿಳೆಯರಿಗೆ ಸಮಾನತೆಯನ್ನು ನೀಡುವ ಕಾನೂನು ರೂಪಿಸಲು ಸಾಧ್ಯವೇ ಇಲ್ಲ.

ಒಂದು ಮುಖ್ಯವಾದ ವಿಷಯವನ್ನು ನಾವೆಲ್ಲರೂ ನಮ್ಮ ಮನಸ್ಸಿನಾಳಕ್ಕೆ ಇಳಿಸಿಕೊಳ್ಳಬೇಕು. ಮುಸ್ಲಿಂ ಸಮುದಾಯದವರೂ ಈ ಬಗ್ಗೆ ಅರಿತುಕೊಳ್ಳಬೇಕು. ಅದೇನೆಂದರೆ, ನಾವು ಸಮಾಜದಿಂದ ಪ್ರತ್ಯೇಕವಾಗಿ ಬದುಕುವ ಬಯಕೆಯನ್ನು, ಪ್ರವೃತ್ತಿಯನ್ನು ಬಿಡಬೇಕು. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.

ಧಾರ್ಮಿಕ ಆಚರಣೆಗಳು ಧರ್ಮಕ್ಕೆ ಸೀಮಿತವಾಗಿರಬೇಕು. ನಮ್ಮ ಜೀವನಕ್ರಮ, ಆಚರಣೆಗಳು ಎಲ್ಲಾ ಸಮುದಾಯಕ್ಕೂ ಒಂದೇ ಆಗಬೇಕು, ಒಗ್ಗೂಡಬೇಕು. ಹೀಗೆ ಒಂದಾಗುವ ಮೂಲಕ ಸಶಕ್ತ ದೇಶವನ್ನು ಕಟ್ಟಬೇಕಿದೆ. ದೇಶದಲ್ಲಿ ಏಕತೆಯನ್ನು ಮೂಡಿಸುವುದು ನಮ್ಮ ಆದ್ಯತೆ ಮತ್ತು ಅತ್ಯಂತ ತುರ್ತಿನ ಕೆಲಸವಾಗಿದೆ. ವೈಯಕ್ತಿಕ ಕಾನೂನುಗಳು ನಮ್ಮ ಐಕ್ಯತೆಗೆ ಒದಗಿದ ಅಪಾಯಗಳಾಗಿವೆ. ಏಕರೂಪ ನಾಗರಿಕ ಸಂಹಿತೆಯನ್ನು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಎಂದು ನಮ್ಮ ಮುಸ್ಲಿಂ ಸ್ನೇಹಿತರು ಭಾವಿಸಬಾರದು. ನಿಜದಲ್ಲಿ ಇದು ಬಹುಸಂಖ್ಯಾತರ ಮೇಲೆಯೇ ಹೆಚ್ಚು ದಬ್ಬಾಳಿಕೆ ಮಾಡುವಂಥ ಕಾನೂನಾಗಿದೆ.

–ಕನ್ಹಯ್ಯಾಲಾಲ್ ಮಾಣೆಕ್‌ಲಾಲ್‌ ಮುನ್ಷಿ, ಸಂವಿಧಾನ ರಚನಾ ಸಭೆಯಲ್ಲಿ ಬಾಂಬೆ ಕ್ಷೇತ್ರದ ಪ್ರತಿನಿಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT