‘ಭಾರತಕ್ಕೆ ಈಗ ಏಕರೂಪ ನಾಗರಿಕ ಸಂಹಿತೆಯ ಅಗತ್ಯವೂ ಇಲ್ಲ, ಈ ಹಂತದಲ್ಲಿ ಭಾರತವು ಅದಕ್ಕೆ ಸಿದ್ಧವಾಗಿಯೂ ಇಲ್ಲ’ ಎಂದು ಕಾನೂನು ಆಯೋಗವು 2018ರಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿದ್ದ ‘ಕೌಟುಂಬಿಕ ಕಾನೂನುಗಳ ಸುಧಾರಣೆ’ ಸಮಾಲೋಚನಾ ವರದಿಯಲ್ಲಿ ಹೇಳಿತ್ತು. ದೇಶದಲ್ಲಿನ ಸಾಂಸ್ಕೃತಿಕ ವೈವಿಧ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಬೇಕು ಎಂದು ಆಯೋಗವು ಹೇಳಿತ್ತು. ವೈಯಕ್ತಿಕ ಕಾನೂನುಗಳಲ್ಲಿ ಇರುವ ಕೊರತೆಗಳನ್ನು ನೀಗಿಸಬೇಕು ಎಂದೂ ಹೇಳಿತ್ತು
–––––
ವೈಯಕ್ತಿಕ ಕಾನೂನುಗಳ ಬದಲಿಗೆ ಏಕರೂಪ ನಾಗರಿಕ ಸಂಹಿತೆಯನ್ನು ರಚಿಸುವ ಬಗ್ಗೆ ಸಮಾಲೋಚನೆ ನಡೆಸಿ ಎಂದು ಕೇಂದ್ರ ಸರ್ಕಾರವು ಹೇಳಿದೆ. ಇದರ ಸಲುವಾಗಿ ನಾವು ವೈಯಕ್ತಿಕ ಕಾನೂನುಗಳಲ್ಲಿ ಇರುವ ತಾರತಮ್ಯವನ್ನು ಹೋಗಲಾಡಿಸುವ ವಿಚಾರಕ್ಕೆ ಗಮನ ನೀಡುತ್ತೇವೆ. ಆದರೆ ಈ ಕಾರ್ಯ ನಿರ್ವಹಿಸುವಲ್ಲಿ, ಭಾರತದ ಸಂಸ್ಕೃತಿ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ರೂಪಿಸಿರುವ ಬಹುತ್ವ ಮತ್ತು ವೈವಿಧ್ಯವನ್ನು ರಕ್ಷಿಸುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ:–
ಏಕರೂಪ ನಾಗರಿಕ ಸಂಹಿತೆ ರಚನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾನೂನು ಸಚಿವಾಲಯವು ಸಲ್ಲಿಸಿರುವ ಸಮಾಲೋಚನಾ ವರದಿಯ ಪೀಠಿಕೆಯಲ್ಲಿರುವ ಮಾತುಗಳಿವು.
ಸಮಾಲೋಚನಾ ವರದಿ ನೀಡುವಂತೆ 2016ರಲ್ಲಿ ಕೇಂದ್ರ ಸರ್ಕಾರವು ಆದೇಶ ನೀಡಿತ್ತು. ಅದರನ್ವಯ ಆಯೋಗವು ಸಾರ್ವಜನಿಕ ಪ್ರಶ್ನಾವಳಿಯನ್ನು ನೀಡಿತ್ತು, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಗುಂಪುಗಳ ಜತೆಗೆ ಸಮಾಲೋಚನೆ ನಡೆಸಿತ್ತು ಮತ್ತು ಕಾನೂನು ತಜ್ಞರೊಂದಿಗೂ ವಿಸ್ತೃತ ಚರ್ಚೆ ನಡೆಸಿತ್ತು. ಈ ಎಲ್ಲಾ ಸಮಾಲೋಚನೆಯ ಸಂದರ್ಭದಲ್ಲಿ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ನಡೆಯುತ್ತಿರುವ ತಾರತಮ್ಯಗಳನ್ನು ಮತ್ತು ದುಷ್ಟ ಆಚರಣೆಗಳನ್ನು ಹೋಗಲಾಡಿಸಬೇಕು ಎಂಬ ಅಭಿಪ್ರಾಯವೇ ಹೆಚ್ಚು ವ್ಯಕ್ತವಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿದೆ. ವೈಯಕ್ತಿಕ ಕಾನೂನುಗಳಲ್ಲಿ ಇರುವ ವೈವಿಧ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಲೇ, ಸಾಮಾಜಿಕ ಅನ್ಯಾಯಗಳನ್ನು ಹೋಗಲಾಡಿಸಬೇಕು ಎಂದೂ ಆಯೋಗವು ಪ್ರತಿಪಾದಿಸಿತ್ತು.
‘ಭಾರತದ ವೈವಿಧ್ಯವನ್ನು ನಾವು ಸಂಭ್ರಮಿಸಬಹುದು ಮತ್ತು ಸಂಭ್ರಮಿಸಬೇಕು. ಈ ವೈವಿಧ್ಯವನ್ನು ಭಾರತವು ಇತಿಹಾಸದುದ್ದಕ್ಕೂ ಸಂಭ್ರಮಿಸುತ್ತಲೇ ಬಂದಿದೆ. ವಿಶ್ವದ ಬಹುತೇಕ ದೇಶಗಳು ಈಗ ಭಿನ್ನತೆಗಳನ್ನು ಗುರುತಿಸುವ ಮತ್ತು ಭಿನ್ನತೆಗಳಿಗೆ ಮಾನ್ಯತೆ ನೀಡುವುದರತ್ತ ಹೋಗುತ್ತಿವೆ. ಭಿನ್ನತೆಗಳು ಇರುವ ಮಾತ್ರಕ್ಕೇ ಅಲ್ಲಿ ತಾರತಮ್ಯ ಇದೆ ಎಂದಾಗುವುದಿಲ್ಲ. ಬದಲಿಗೆ ಭಿನ್ನತೆಗಳು, ಒಂದು ಪ್ರಬಲ ಪ್ರಜಾಪ್ರಭುತ್ವದ ಪ್ರತೀಕ’ ಎಂದು ಆಯೋಗವು ಹೇಳಿತ್ತು.
ದೇಶದ ಸಂವಿಧಾನವು ದೇಶದ ಜನಕ್ಕೆ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದೆ. ಧಾರ್ಮಿಕ ಸ್ವಾತಂತ್ರ್ಯ ಎಂಬುದು ಧರ್ಮದ ಆಚರಣೆ ಮಾತ್ರವಲ್ಲ. ಬದಲಿಗೆ ಧರ್ಮದ ಪ್ರಚಾರವೂ ಹೌದು. ಇವೆಲ್ಲವನ್ನೂ ಒಳಗೊಂಡ ಧಾರ್ಮಿಕ ಸ್ವಾತಂತ್ರ್ಯವನ್ನು ನಾವು ರಕ್ಷಿಸಬೇಕಿದೆ. ವೈಯಕ್ತಿಕ ಕಾನೂನುಗಳು ಧಾರ್ಮಿಕ ವಿಧಿವಿಧಾನಗಳು, ಕಟ್ಟುಪಾಡುಗಳು, ಸಂಪ್ರದಾಯಗಳನ್ನು ಆಧರಿಸಿವೆ. ಅವುಗಳ ಆಧಾರದಲ್ಲಿ ರೂಪಿತವಾಗಿರುವ ವೈಯಕ್ತಿಕ ಕಾನೂನುಗಳನ್ನು ತೆಗೆದುಹಾಕುವುದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನಿಗೆ ಧಾರ್ಮಿಕ ಅಸ್ಮಿತೆಯೂ ಬಹಳ ಮುಖ್ಯವಾದುದು. ಭಾಷೆ, ಸಂಸ್ಕೃತಿ ಮತ್ತು ವೈಯಕ್ತಿಕ ಕಾನೂನುಗಳು ಈ ಧಾರ್ಮಿಕ ಅಸ್ಮಿತೆಯನ್ನು ರೂಪಿಸುತ್ತವೆ. ಅಂತಹ ಧಾರ್ಮಿಕ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಆದರೆ, ತಾರತಮ್ಯ ಮತ್ತು ಅನ್ಯಾಯವನ್ನು ಹೋಗಲಾಡಿಸಬೇಕು ಎಂದು ಮಹಿಳಾ ಗುಂಪೊಂದು ಸಲಹೆ ನೀಡಿತ್ತು ಎಂದು ಆಯೋಗವು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ವೈಯಕ್ತಿಕ ಕಾನೂನುಗಳ ವಿಚಾರದಲ್ಲಿ ದೇಶದಲ್ಲಿ ಏಕರೂಪತೆ ತರಬೇಕು ಎಂದು ಪಟ್ಟು ಹಿಡಿದರೆ, ಅದು ದೇಶದ ಏಕತೆಗೆ ಧಕ್ಕೆಯಾಗಬಹುದು ಎಂದು ಆಯೋಗವು ಆತಂಕ ವ್ಯಕ್ತಪಡಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವಲ್ಲಿ, ಈಶಾನ್ಯ ಭಾರತದ ರಾಜ್ಯಗಳ ಬುಡಕಟ್ಟು ಸಮುದಾಯಗಳ ವಿಶೇಷ ಹಕ್ಕುಗಳನ್ನು ಏನು ಮಾಡಬೇಕು ಎಂಬುದನ್ನು ಚರ್ಚಿಸುವಾಗ ಆಯೋಗವು ಈ ಮಾತು ಹೇಳಿತ್ತು. ‘ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸಲು ಹೊರಟಾಗ, ದೇಶದ ಸಾಂಸ್ಕೃತಿಕ ವೈವಿಧ್ಯಕ್ಕೆ ಧಕ್ಕೆ ತರಬಾರದು ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಏಕರೂಪತೆಯನ್ನು ತರಲೇಬೇಕು ಎಂದು ಹಟ ಹಿಡಿಯುವುದು, ದೇಶದ ಸಾಂಸ್ಕೃತಿಕ ವೈವಿಧ್ಯವನ್ನು ಹಾಳುಗೆಡಹುವ ಮಟ್ಟಕ್ಕೆ ಹೋಗಬಾರದು. ಹಾಗೆ ಆದರೆ, ಅದು ದೇಶದ ಭೌಗೋಳಿಕ ಏಕತೆಗೆ ಬೆದರಿಕೆಯಾಗಬಹುದು’ ಎಂದು ಕಳವಳ ವ್ಯಕ್ತಪಡಿಸಿತ್ತು.
ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವಾಗ ವೈಯಕ್ತಿಕ ಕಾನೂನುಗಳನ್ನು ಪರಿಗಣಿಸಲೇಬಾರದು ಎಂಬ ಅಭಿಪ್ರಾಯ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ ವ್ಯಕ್ತವಾಗಿತ್ತು. ಹಾಗೆ ಮಾಡಿದ್ದರೆ, ಅದು ಸಂವಿಧಾನವು ದೇಶದ ನಾಗರಿಕರಿಗೆ ಕೊಡಮಾಡಿರುವ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿತ್ತು. ದೇಶದ ನಾಗರಿಕರ ಧಾರ್ಮಿಕ ವಿಚಾರಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿಯೇ ಸರ್ಕಾರವು ಕಡ್ಡಾಯವಾಗಿ ಜಾರಿ ಮಾಡಬೇಕು ಎಂಬ ಒತ್ತಾಯಿಸಲು ಸಾಧ್ಯವಿಲ್ಲದ ರಾಜ್ಯನೀತಿ ನಿರ್ದೇಶಕ ತತ್ವಗಳ ಅಡಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಸೇರಿಸಲಾಗಿದೆ ಎಂದು ಕಾನೂನು ಆಯೋಗವು ತಾನು 2018ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದ ಸಮಾಲೋಚನಾ ವರದಿಯಲ್ಲಿ ಪ್ರತಿಪಾದಿಸಿತ್ತು.
‘ಜಾತ್ಯತೀತ ಎಂಬುದು ಬಹುತ್ವಕ್ಕೆ ವಿರುದ್ಧವಲ್ಲ’
ಜಾತ್ಯತೀತ ಮತ್ತು ಬಹುಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿದೆ. ಜಾತ್ಯತೀತ ಎಂಬುದು ಏಕರೂಪತೆ ಎಂಬುದಲ್ಲ. ಬದಲಿಗೆ ಅದು ಭಿನ್ನದನಿಗಳನ್ನೂ ಒಳಗೊಳ್ಳುತ್ತದೆ. ಸಂವಿಧಾನ ರಚನಾ ಸಭೆಯ ಚರ್ಚೆಯ ಸಂದರ್ಭದಲ್ಲಿ ಇದನ್ನು ಸ್ಪಷ್ಟವಾಗಿ ಪ್ರತಿಪಾದಿಸಲಾಗಿದೆ. ಭಾರತದ ಸಂದರ್ಭದಲ್ಲಿ ಜಾತ್ಯತೀತ ಮತ್ತು ಬಹುಸಂಸ್ಕೃತಿ ಎಂಬುದು ತತ್ವಜ್ಞಾನಿಗಳ, ರಾಜಕೀಯ ನಿಪುಣರ ಮತ್ತು ಇತಿಹಾಸ ತಜ್ಞರಿಗೆ ಸೀಮಿತವಾದ ಪರಿಕಲ್ಪನೆಗಳಲ್ಲ. ಬದಲಿಗೆ ಈ ಪರಿಕಲ್ಪನೆಗಳು ಭಾರತದ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಹೀಗಾಗಿ ಜಾತ್ಯತೀತ ಎಂಬುದನ್ನು ಬಹುದನಿಗಳನ್ನೂ ಒಳಗೊಳ್ಳುವ ಪರಿಕಲ್ಪನೆ ಎಂದೇ ನೋಡಬೇಕು ಎಂದು ಕಾನೂನು ಆಯೋಗವು ಹೇಳಿತ್ತು.
‘ಎಲ್ಲಾ ಸ್ವರೂಪದ ಭಿನ್ನತೆಗಳು ಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶವಿದ್ದಾಗ ಮಾತ್ರ ಜಾತ್ಯತೀತ ಎಂಬುದು ನಿಜವಾದ ಅರ್ಥದಲ್ಲಿ ಇದೆ ಎಂದಾಗುತ್ತದೆ. ಈ ಭಿನ್ನತೆ ಎಂಬುದು ಧಾರ್ಮಿಕವಾದುದು ಮಾತ್ರವಲ್ಲ, ಬದಲಿಗೆ ಪ್ರಾದೇಶಿಕವಾದ ಭಿನ್ನತೆಗಳನ್ನೂ ಒಳಗೊಂಡಿದೆ. ಬಹುಸಂಖ್ಯಾತರ ಅಬ್ಬರದಲ್ಲಿ ಈ ಭಿನ್ನದನಿಗಳು ಅಡಗಿಹೋಗದಂತೆ ಜಾತ್ಯತೀತ ತತ್ವವು ನೋಡಿಕೊಳ್ಳುತ್ತದೆ. ಜಾತ್ಯತೀತ ಎಂಬುದು ಎಂದಿಗೂ ಬಹುತ್ವಕ್ಕೆ ವಿರುದ್ಧವಾದುದಲ್ಲ. ಬದಲಿಗೆ ಸಾಂಸ್ಕೃತಿಕ ಭಿನ್ನತೆಗಳನ್ನು ಶಾಂತಿಯುತವಾಗಿ ಕಾಯ್ದುಕೊಳ್ಳುತ್ತದೆ’ ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿತ್ತು.
ಇಬ್ಬರು ವ್ಯಕ್ತಿಗಳ ವಿವಾಹವನ್ನು ದೇಶದ ಬೇರೆ ವೇರೆ ವೈಯಕ್ತಿಕ ಕಾನೂನುಗಳು ಬೇರೆ ಬೇರೆ ರೀತಿ ವ್ಯಾಖ್ಯಾನಿಸುತ್ತವೆ. ಇವುಗಳನ್ನು ಏಕರೂಪಗೊಳಿಸುವ ಪ್ರಕ್ರಿಯೆಯಲ್ಲಿ ಶ್ರೇಷ್ಠ–ಕನಿಷ್ಠ ಎಂಬ ಶ್ರೇಣಿ ವ್ಯವಸ್ಥೆಗೆ ಆಸ್ಪದ ನೀಡಬಾರದು ಎಂದು ಆಯೋಗವು ಅಭಿಪ್ರಾಯಪಟ್ಟಿತ್ತು. ‘ವಿವಾಹಕ್ಕೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳ ನಿಲುವುಗಳನ್ನು ಪರಸ್ಪರ ಗೌರವಿಸಬೇಕು ಮತ್ತು ಅವುಗಳನ್ನು ಒಂದರ ವಿರುದ್ಧ ಬೇರೊಂದು ಎಂಬಂತೆ ಎತ್ತಿಕಟ್ಟುವ ಕೆಲಸವಾಗಬಾರದು. ಜತೆಗೆ ಇವುಗಳನ್ನು ಶ್ರೇಣಿ ವ್ಯವಸ್ಥೆಗೆ ಒಳಪಡಿಸಿ, ಯಾವುದೋ ಒಂದು ನಿಲುವು ಶ್ರೇಷ್ಠ ಮತ್ತು ಇನ್ನೊಂದು ನಿಲುವು ಕನಿಷ್ಠ ಎಂದು ಮಾಡಬಾರದು’ ಎಂದು ಆಯೋಗವು ಪ್ರತಪಾದಿಸಿತ್ತು.
‘ಅನ್ಯಾಯವನ್ನು ಹೋಗಲಾಡಿಸಬೇಕು’
ವೈಯಕ್ತಿಕ ಕಾನೂನುಗಳನ್ನು ಏಕೆ ತೆಗೆದುಹಾಕಬೇಕು ಎಂದು ಹೇಳುವಾಗಲೆಲ್ಲಾ, ಅವುಗಳಲ್ಲಿ ಇರುವ ಕೆಲವು ಕೆಟ್ಟ/ತಾರತಮ್ಯದಿಂದ ಕೂಡಿದ ಆಚರಣೆಗಳನ್ನು ಮುಂದಿಡಲಾಗುತ್ತದೆ. ಈ ಎಲ್ಲಾ ಕಾನೂನುಗಳಿಂದ ಮಹಿಳೆ ಅನ್ಯಾಯಕ್ಕೆ ಒಳಗಾಗುತ್ತಾಳೆ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ರೀತಿಯ ಪ್ರತಿಪಾದನೆಯನ್ನು ಪದೇ ಪದೇ ಸಾರ್ವಜನಿಕವಾಗಿ ಮಂಡಿಸಲಾಗುತ್ತದೆ ಮತ್ತು ಚರ್ಚಿಸಲಾಗುತ್ತದೆ. ಅವುಗಳಲ್ಲಿ ನ್ಯೂನತೆ ಇದೆ ಎಂದ ಮಾತ್ರಕ್ಕೇ ಇಡೀ ಕಾನೂನುನ್ನು ತೆಗೆದುಹಾಕುವುದು ಸರಿಯಾಗುವುದಿಲ್ಲ. ಬದಲಿಗೆ ಆ ನ್ಯೂನತೆಯನ್ನು ಸರಿಪಡಿಸಬೇಕಾಗುತ್ತದೆ ಮತ್ತು ಆ ಅನ್ಯಾಯವನ್ನು ಹೋಗಲಾಡಿಸಬೇಕು. ಏಕರೂಪ ನಾಗರಿಕ ಸಂಹಿತೆ ಸಂಬಂಧ ಸಾರ್ವಜನಿಕರಿಂದ ಬಂದಿದ್ದ ಸಲಹೆಗಳಲ್ಲೂ ಇದೇ ಅಭಿಪ್ರಾಯ ವ್ಯಕ್ತವಾಗಿತ್ತು ಎಂದು ಆಯೋಗವು ವರದಿಯಲ್ಲಿ ವಿವರಿಸಿತ್ತು.
‘ಅಭಿಪ್ರಾಯ ಸಂಗ್ರಹಕ್ಕೆಂದು ನಾವು ಸಾರ್ವಜನಿಕರಿಗೆ ನೀಡಲಾಗಿದ್ದ ಪ್ರಶ್ನಾವಳಿಗಳಿಗೆ ಸಾವಿರಾರು ಮುಸ್ಲಿಂ ಮಹಿಳೆಯರೂ ಉತ್ತರಿಸಿದ್ದರು. ಮುಸ್ಲಿಮರು ಮಾತ್ರವಲ್ಲದೆ, ಬೇರೆ ಧರ್ಮದವರೂ ತ್ರಿವಳಿ ತಲಾಖ್‌ನಂತಹ ಪದ್ಧತಿಯನ್ನು ತೆಗೆದುಹಾಕಬೇಕು ಎಂದು ಹೇಳಿದ್ದರು. ಈ ದಿಸೆಯಲ್ಲಿ ವೈಯಕ್ತಿಕ ಕಾನೂನುಗಳಲ್ಲಿ ಇರುವ ಅನ್ಯಾಯವನ್ನು ಸರಿಪಡಿಸುವಾಗ ದೇಶದಲ್ಲಿರುವ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳನ್ನೂ ಪರಿಗಣಿಸಬೇಕಾಗುತ್ತದೆ. ಜತೆಗೆ ಎಲ್ಲಾ ಧರ್ಮಗಳ ಸಂಪ್ರದಾಯಗಳು ಮತ್ತು ಆಚರಣೆಗಳನ್ನೂ ಪರಿಗಣಿಸಬೇಕಾಗುತ್ತದೆ ಎಂಬುದನ್ನು ನಾವು ಒತ್ತಿ ಹೇಳುತ್ತೇವೆ’ ಎಂದು ವರದಿಯಲ್ಲಿ ಹೇಳಲಾಗಿತ್ತು.
ವೈಯಕ್ತಿಕ ಕಾನೂನುಗಳಲ್ಲಿ ಇರುವ ಬಹುದೊಡ್ಡ ಸಮಸ್ಯೆ ಅಸಮಾನತೆಯದ್ದು ಎಂಬುದು ಸಾರ್ವಜನಿಕರಿಂದ ವ್ಯಕ್ತವಾಗಿದ್ದ ಅಭಿಪ್ರಾಯ. ಈ ಅಸಮಾನತೆಗೆ ಯಾವಾಗಲೂ ಗುರಿಯಾಗುವುದು ಮಹಿಳೆಯೇ. ಮಹಿಳೆಯನ್ನು ಕೀಳಾಗಿ ನೋಡುವ, ಅವರ ಮೇಲೆ ದೌರ್ಜನ್ಯಕ್ಕೆ ಆಸ್ಪದ ನೀಡುವ ದುಷ್ಟ ಆಚರಣೆಗಳು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ರಕ್ಷಣೆ ಪಡೆಯುತ್ತವೆ. ಸತಿ ಪದ್ಧತಿ, ವೈವಾಹಿಕ ದಾಸ್ಯ, ದೇವದಾಸಿ ಪದ್ಧತಿ, ವರದಕ್ಷಿಣೆ, ತ್ರಿವಳಿ ತಲಾಖ್ (ಈಗ ಅಪರಾಧೀಕರಣಗೊಳಿಸಲಾಗಿದೆ), ಬಾಲ್ಯ ವಿವಾಹದಂತಹ ದುಷ್ಟ ಆಚರಣೆಗಳು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ರಕ್ಷಣೆ ಪಡೆಯುತ್ತವೆ. ಆದರೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಹಿಸಿಕೊಳ್ಳಬೇಕಿಲ್ಲ. ಹೀಗಾಗಿ ಇಂತಹ ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಹೇಳಿತ್ತು.
ಆಧಾರ: ಕಾನೂನು ಆಯೋಗದ ‘ಕೌಟುಂಬಿಕ ಕಾನೂನುಗಳ ಸುಧಾರಣೆ’ ಸಮಾಲೋಚನಾ ವರದಿ–2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.