ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ; ವಾರಸುದಾರಿಕೆ, ಉತ್ತರಾಧಿಕಾರಕ್ಕೆ ಪರ್ಯಾಯವೇನು?

Published 27 ಜುಲೈ 2023, 0:50 IST
Last Updated 27 ಜುಲೈ 2023, 0:50 IST
ಅಕ್ಷರ ಗಾತ್ರ

–ಜಯಸಿಂಹ ಆರ್.

ಭಾರತೀಯ ಉತ್ತರಾಧಿಕಾರ ಕಾಯ್ದೆಯಲ್ಲಿ ಏಕರೂಪ: ಜಾತಿ, ಧರ್ಮ ಮತ್ತು ಲಿಂಗಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರನ್ನು ಏಕಪ್ರಕಾರವಾಗಿ ಕಾಣುವ ಹಲವು ಅಂಶಗಳು ಈ ಕಾಯ್ದೆಯಲ್ಲಿ ಇದೆ ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಈಗ ಜಾರಿಯಲ್ಲಿರುವ ಕೆಲವು ವೈಯಕ್ತಿಕ ಕಾನೂನುಗಳು ಮತ್ತು ಭಾರತೀಯ ಉತ್ತರಾಧಿಕಾರ ಕಾಯ್ದೆ–1925 ನಡುವಣ ಹೋಲಿಕೆ ಇಂತಿದೆ..

ಲಿಂಗಭೇದವಿಲ್ಲದೇ ದೇಶದ ಎಲ್ಲಾ ನಾಗರಿಕರಿಗೆ ಏಕರೂಪದ ಹಕ್ಕು ಮತ್ತು ಅವಕಾಶಗಳನ್ನು ನೀಡುವುದು ಏಕರೂಪ ನಾಗರಿಕ ಸಂಹಿತೆಯ ಉದ್ದೇಶ ಎಂದು ಸಂವಿಧಾನ ರಚನಾಕಾರರು, ಸಂವಿಧಾನ ರಚನಾ ಸಭೆಯಲ್ಲಿ ಹಲವು ಬಾರಿ ಹೇಳಿದ್ದಾರೆ. ಏಕರೂಪದ ಕಾನೂನು ಅಗತ್ಯವಿಲ್ಲ ಎಂದು ಸಂಸತ್ತಿನ ಕೆಲವು ಸದಸ್ಯರು ಒತ್ತಾಯಿಸಿದರೂ, ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಉದ್ದೇಶದಿಂದ ಏಕರೂಪ ನಾಗರಿಕ ಸಂಹಿತೆ ಅತ್ಯಗತ್ಯ ಎಂದು ಕೆ.ಎಂ.ಮುನ್ಷಿ ಅವರು 1948ರ ನವೆಂಬರ್ 23ರಂದು ನಡೆದಿದ್ದ ಚರ್ಚೆಯ ವೇಳೆ ಹೇಳಿದ್ದರು.

ಏಕರೂಪ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತರ ಮೇಲಿನ ದಬ್ಬಾಳಿಕೆ ಎಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಮುಸ್ಲಿಂ ಪ್ರತಿನಿಧಿಗಳು ಪ್ರತಿಪಾದಿಸಿದ್ದರು. ಈ ಪ್ರತಿಪಾದನೆಯನ್ನು ನಿರಾಕರಿಸಿದ್ದ ಮುನ್ಷಿ ಅವರು, ‘ಕೆಲವು ಹಿಂದೂಗಳಿಗೂ ಈ ಏಕರೂಪ ನಾಗರಿಕ ಕಾನೂನು ಇಷ್ಟವಿಲ್ಲ ಎಂದು ನನಗೆ ತಿಳಿದಿದೆ. ಯಾಕೆಂದರೆ, ಅವರು ಸಹ ನಮ್ಮ ಮುಸ್ಲಿಂ ಸದಸ್ಯರಂತೆಯೇ ಯೋಚಿಸುತ್ತಿದ್ದಾರೆ. ವಾರಸುದಾರಿಕೆ, ಉತ್ತರಾಧಿಕಾರದ ಕಾನೂನುಗಳು ಧಾರ್ಮಿಕತೆಯ ಭಾಗ ಎಂದು ಹಿಂದೂಗಳೂ ಅಂದುಕೊಂಡಿದ್ದಾರೆ. ಒಂದು ವೇಳೆ ವಾರಸುದಾರಿಕೆ, ಉತ್ತರಾಧಿಕಾರ ಮೊದಲಾದ ಕಾನೂನುಗಳು ಧರ್ಮದ ಭಾಗವೇ ಆಗಿದೆ ಎಂದಾದರೆ, ನೀವು ಎಂದಿಗೂ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾರಿರಿ’ ಎಂದು ಹೇಳಿದ್ದರು.

ಇದನ್ನೂ ಓದಿ: ಆಳ–ಅಗಲ | ಏಕರೂಪ ನಾಗರಿಕ ಸಂಹಿತೆ: ಸಂವಿಧಾನ ರಚನಾ ಸಭೆಯಲ್ಲಿ ಬೇಕು, ಬೇಡಗಳ ಚರ್ಚೆ

ಏಕರೂಪ ನಾಗರಿಕ ಸಂಹಿತೆ ಅಗತ್ಯ ಎಂದು ಹೇಳುವಾಗ ಮುನ್ಷಿ ಅವರು, ಮಹಿಳೆಯರಿಗೆ ಸಮಾನ ಅವಕಾಶ ದೊರೆಯಬೇಕು ಎಂದೇ ಪ್ರತಿಪಾದಿಸಿದ್ದರು. ಬಿ.ಆರ್.ಅಂಬೇಡ್ಕರ್ ಅವರೂ ಸಹ ಇದೇ ಮಾತನ್ನು ಹೇಳಿದ್ದರು.

ವಾರಸುದಾರಿಕೆ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಈಗ ಜಾರಿಯಲ್ಲಿರುವ ವೈಯಕ್ತಿಕ ಕಾನೂನುಗಳು ಪರಸ್ಪರ ಸಂಪೂರ್ಣ ಭಿನ್ನವಾಗಿವೆ. ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ಹೆಣ್ಣುಮಕ್ಕಳನ್ನು ಉತ್ತರಾಧಿಕಾರಿ ಎಂದು ಪರಿಗಣಿಸುವಲ್ಲಿ ಮತ್ತು ಅವರಿಗೆ ಆಸ್ತಿ ಹಂಚಿಕೆ ಮಾಡುವಲ್ಲಿ ಅನ್ವಯವಾಗುವ ನಿಯಮಗಳು ಬೇರೆ. ಮುಸ್ಲಿಮರಲ್ಲಿ ಉತ್ತರಾಧಿಕಾರದ ಸಂಬಂಧ ಮಹಿಳೆಯರಿಗೆ ಅನ್ವಯವಾಗುವ ನಿಯಮಗಳೇ ಬೇರೆ. ಷಿಯಾ ಮುಸ್ಲಿಮರಿಗೆ ಅನ್ವಯವಾಗುವ ನಿಯಮಗಳಿಗೂ, ಸುನ್ನಿ ಮುಸ್ಲಿಮರಿಗೆ ಅನ್ವಯವಾಗುವ ನಿಯಮಗಳ ಮಧ್ಯೆ ತೀರಾ ವ್ಯತ್ಯಾಸವಿದೆ. ಕ್ರೈಸ್ತ ಮತ್ತು ಪಾರ್ಸಿ ಉತ್ತರಾಧಿಕಾರದ ನಿಯಮಗಳೂ ಮಹಿಳೆಯರ ಹಕ್ಕು ಮತ್ತು ಅಧಿಕಾರಗಳನ್ನು ಭಿನ್ನವಾಗಿಯೇ ನೋಡುತ್ತವೆ. ಈ ಎಲ್ಲಾ ಕಾನೂನುಗಳಲ್ಲಿ ಪುರುಷರಿಗೆ ನೀಡಲಾಗುವಷ್ಟು ಹಕ್ಕು, ಅಧಿಕಾರಗಳು ಮಹಿಳೆಯರಿಗೆ ಲಭ್ಯವಿಲ್ಲ. ಮಹಿಳೆಯರನ್ನು ಸಮಾನರು ಎಂದು ಹೇಳಿದರೂ, ವಿವಾಹಿತ ಮಹಿಳೆಗೆ, ಅವಿವಾಹಿತ ಮಹಿಳೆಗೆ ಮತ್ತು ವಿಧವೆಗೆ ಅನ್ವಯವಾಗುವ ನಿಯಮಗಳಲ್ಲಿ ಬಹಳ ವ್ಯತ್ಯಾಸವಿದೆ.

ಹಿಂದೂಗಳಲ್ಲಿ ದಯಾಭಾಗ್‌ ಮತ್ತು ಮಿತಾಕ್ಷರ ಎಂಬ ಉತ್ತಾರಾಧಿಕಾರ ಪದ್ಧತಿಗಳು ಜಾರಿಯಲ್ಲಿವೆ. ಜತೆಗೆ ಪಿತೃಪ್ರಧಾನ ಮತ್ತು ಮಾತೃಪ್ರಧಾನ ಉತ್ತರಾಧಿಕಾರ ವ್ಯವಸ್ಥೆಗಳೂ ಜಾರಿಯಲ್ಲಿವೆ. ದೇಶದ ಹಲವು ಭಾಗಗಳಲ್ಲಿ ಈಗಲೂ ಈ ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ತಂದೆಯ/ಕುಟುಂಬದ ಮುಖ್ಯಸ್ಥನ ಮರಣಾನಂತರವೇ ವಾರಸುದಾರಿಕೆ ಮತ್ತು ಉತ್ತರಾಧಿಕಾರ ಹಸ್ತಾಂತರವಾಗುವ ದಯಾಭಾಗ್‌ ವ್ಯವಸ್ಥೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಹಲವು ಸಮುದಾಯಗಳಲ್ಲಿ ಜಾರಿಯಲ್ಲಿವೆ. ಮಧ್ಯಭಾರತ ಮತ್ತು ದಕ್ಷಿಣ ಭಾರತದ ಕೆಲವು ಸಮುದಾಯಗಳಲ್ಲೂ ಈ ಪದ್ಧತಿ ಜಾರಿಯಲ್ಲಿದೆ. ಜನನದ ತಕ್ಷಣವೇ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳು ಲಭ್ಯವಾಗುವ ಮಿತಾಕ್ಷರ ಪದ್ಧತಿ ದೇಶದ ಹಲವೆಡೆ ಜಾರಿಯಲ್ಲಿದೆ.

ಈ ಎರಡೂ ಪದ್ಧತಿಗಳಲ್ಲಿ ಹೆಣ್ಣುಮಕ್ಕಳಿಗೆ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಮೇಲೆ ಹಕ್ಕು ಇರಲಿಲ್ಲ. ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ಜಾರಿಗೆ ತಂದಾಗ ಈ ಪದ್ಧತಿಗಳ ಕೆಲವು ಅಂಶಗಳನ್ನು ಉಳಿಸಿಕೊಳ್ಳಲಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಹೆಣ್ಣುಮಕ್ಕಳಿಗೂ ಸಮಾನ ಹಕ್ಕು ಮತ್ತು ಅಧಿಕಾರ ನೀಡುವ ವ್ಯವಸ್ಥೆಗಳನ್ನು 2005ರಲ್ಲಿ ಜಾರಿಗೆ ತರಲಾಗಿತ್ತು. ಹೀಗಿದ್ದೂ, ಮಹಿಳೆಯರನ್ನು ಪುರುಷರಷ್ಟೇ ಸಮಾನವಾಗಿ ಈ ನಿಯಮಗಳು ಪರಿಗಣಿಸುವುದಿಲ್ಲ ಎಂದು ಕಾನೂನು ಆಯೋಗವು ತನ್ನ ಸಮಾಲೋಚನಾ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಆಳ–ಅಗಲ | ಏಕರೂಪ ಎಲ್ಲರಿಗೂ ಅನ್ವಯ: ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಪಾದನೆ

ಭಾರತೀಯ ಉತ್ತರಾಧಿಕಾರ ಕಾಯ್ದೆಯು, ಈ ಎಲ್ಲಾ ವೈಯಕ್ತಿಕ ಕಾನೂನುಗಳಿಗೆ ಪರ್ಯಾಯವಾಗಬಲ್ಲದು ಎಂದು ಕಾನೂನು ಆಯೋಗವು 2018ರಲ್ಲಿ ಸಲ್ಲಿಸಿದ್ದ ಕೌಟುಂಬಿಕ ಕಾನೂನುಗಳ ಸುಧಾರಣೆ ಸಮಾಲೋಚನಾ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ದೇಶದ ಎಲ್ಲಾ ಜನರಿಗೆ ಏಕಪ್ರಕಾರವಾಗಿ ಅನ್ವಯವಾಗುವ ಎಲ್ಲಾ ಲಕ್ಷಣಗಳನ್ನು ಭಾರತೀಯ ಉತ್ತರಾಧಿಕಾರ ಕಾಯ್ದೆ–1925 ಹೊಂದಿದೆ. ಕಾಲಕಾಲಕ್ಕೆ ಹಲವು ತಿದ್ದುಪಡಿಗಳನ್ನು ತರುವ ಮೂಲಕ ಈ ಕಾಯ್ದೆಯಲ್ಲಿದ್ದ ಕೆಲವು ಕೊರತೆಗಳನ್ನು ನೀಗಿಸಲಾಗಿದೆ. ಹೀಗಿದ್ದೂ ಕೆಲವು ಕೊರತೆಗಳು ಇನ್ನೂ ಈ ಕಾಯ್ದೆಯಲ್ಲಿ ಇವೆ. ಅವನ್ನು ತಿದ್ದುಪಡಿಗಳ ಮೂಲಕ ನೀಗಿಸಬಹುದು. ದೇಶದ ಎಲ್ಲಾ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಬೌದ್ಧ, ಜೈನ ಮತ್ತು ಪಾರ್ಸಿ ಧರ್ಮೀಯರಿಗೆ ಏಕಪ್ರಕಾರವಾಗಿ ಅನ್ವಯವಾಗುವಂತೆ ಈ ಕಾಯ್ದೆಯನ್ನು ರೂಪಿಸಬಹುದು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.

ಭಾರತೀಯ ಉತ್ತರಾಧಿಕಾರ ಕಾಯ್ದೆ–1925

* ಭಾರತದಲ್ಲಿದ್ದ ಆಂಗ್ಲೊ–ಇಂಡಿಯನ್‌ ಸಮುದಾಯದವರಿಗೆಂದು 1865ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತಾದರೂ, 1925ರಲ್ಲಿ ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಆ ಮೂಲಕ ಭಾರತೀಯರಿಗೂ ಈ ಕಾಯ್ದೆ ಅನ್ವಯವಾಗುವಂತೆ ಮಾಡಲಾಯಿತು

* ಹಿಂದೂ ಕುಟುಂಬದಲ್ಲಿ ಉಯಿಲುಸಹಿತ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳಿಗೆ ಹಿಂದೂ ಉತ್ತಾರಾಧಿಕಾರ ಕಾಯ್ದೆ ಅನ್ವಯವಾಗುವುದಿಲ್ಲ. ಬದಲಿಗೆ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲೇ ಈ ಹಕ್ಕುಗಳು ದತ್ತವಾಗುತ್ತವೆ

*ಮುಸ್ಲಿಮರು ಮತ್ತು ಹಿಂದೂಗಳಲ್ಲಿ ಉಯಿಲುರಹಿತ ವಾರಸುದಾರಿಕೆ ಹಾಗೂ ಉತ್ತರಾಧಿಕಾರ ಹೊರತುಪಡಿಸಿ ಈ ಕಾಯ್ದೆಯ ಹಲವು ಅಂಶಗಳು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಅನ್ವಯವಾಗುತ್ತವೆ

*ಈ ಕಾಯ್ದೆಯ ಕೆಲವು ಅಂಶಗಳು ಪಾರ್ಸಿಗಳಿಗೆ ಮತ್ತು ಹಿಂದೂಕ್ರೈಸ್ತರಿಗೆ ಅನ್ವಯವಾಗುವುದಿಲ್ಲ. ಈ ತೊಡಕುಗಳನ್ನು ನಿವಾರಿಸಬಹುದು ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ

*ಈ ಕಾಯ್ದೆಯು ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳನ್ನು ಸಮಾನವಾಗಿ ಕಾಣುತ್ತದೆ. ಎಲ್ಲರಿಗೂ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಮೇಲೆ ಸಮಾನ ಹಕ್ಕನ್ನು ನೀಡುತ್ತದೆ

* ಮೃತವ್ಯಕ್ತಿಯ ಪತಿ/ಪತ್ನಿ, ತಾಯಿ/ತಂದೆಗೂ ಸಮಾನವಾದ ಹಕ್ಕನ್ನು ಈ ಕಾಯ್ದೆ ನೀಡುತ್ತದೆ

* ಪಿತೃಪ್ರಧಾನ ಮತ್ತು ಮಾತೃಪ್ರಧಾನ ಕುಟುಂಬಗಳಿಗೂ ಈ ಕಾಯ್ದೆ ಸಮಾನವಾಗಿ ಅನ್ವಯವಾಗುತ್ತದೆ

* ಈ ಕಾಯ್ದೆಯು ಚಿರಾಸ್ತಿ ಮತ್ತು ಚರಾಸ್ತಿಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ಎಲ್ಲಾ ವಾರಸುದಾರರಿಗೆ ಚಿರಾಸ್ತಿ ಮತ್ತು ಸ್ಥಿರಾಸ್ತಿಯ ಮೇಲೆ ಸಮಾನವಾದ ಹಕ್ಕನ್ನು ನೀಡುತ್ತದೆ

ಹಿಂದೂ ಉತ್ತರಾಧಿಕಾರ ಕಾಯ್ದೆ

* ಈ ಕಾಯ್ದೆಯ ಅಡಿಯಲ್ಲಿ ಹೆಣ್ಣು ಮಕ್ಕಳಿಗೂ ವಾರಸುದಾರಿಕೆಯ ಹಕ್ಕನ್ನು ನೀಡಲಾಗಿದೆ. ಮೊದಲು ತಂದೆಯ ಸ್ವಂತ ಆಸ್ತಿಯ ಮೇಲೆ ಮಾತ್ರ ಮಗಳಿಗೆ ಹಕ್ಕು ನೀಡಲಾಗಿತ್ತು. ಕಾಯ್ದೆಗೆ ತಿದ್ದುಪಡಿ ತಂದು ತಂದೆಯ ಕುಟುಂಬದ ಜಂಟಿ ವಾರಸುದಾರಿಕೆಯ ಆಸ್ತಿಯ ಮೇಲೂ ಮಗಳಿಗೆ ಹಕ್ಕು ನೀಡಲಾಗಿದೆ

* ಮೃತ ಪುರುಷನ ಮಗಳು ಮತ್ತು ಮಗ ಇಬ್ಬರಿಗೂ, ಆತನ ಆಸ್ತಿಯಲ್ಲಿ ಸಮಾನ ಹಕ್ಕು ಇದೆ ಎಂದು ಕಾಯ್ದೆ ಹೇಳುತ್ತದೆ. ಆದರೆ, ಮೃತ ಪುರುಷನ ಪತ್ನಿ ಮತ್ತು ತಾಯಿಗೆ ಇದ್ದ ಸಮಾನ ಹಕ್ಕಿಗೆ ಇದು ಧಕ್ಕೆ ತರುತ್ತದೆ. ಒಟ್ಟು ಆಸ್ತಿಯಲ್ಲಿ ಮೃತ ಪುರುಷನ ಪತ್ನಿ ಮತ್ತು ತಾಯಿಯ ಹಕ್ಕನ್ನು ಕಡಿಮೆ ಮಾಡಿ, ಮಗ ಮತ್ತು ಮಗಳಿಗೆ ಸಮಾನ ಆಸ್ತಿಯನ್ನು ಹಂಚಿಕೆ ಮಾಡುವಂತೆ ಈ ಕಾಯ್ದೆ ಹೇಳುತ್ತದೆ. ಹೀಗಾಗಿ ಮೃತ ವ್ಯಕ್ತಿಯ ಕುಟುಂಬದ ಎಲ್ಲಾ ಸದಸ್ಯರನ್ನು ಈ ಕಾಯ್ದೆ ಸಮಾನವಾಗಿ ಕಾಣುವುದಿಲ್ಲ ಎಂದು ಕಾನೂನು ಆಯೋಗವು ಅಭಿಪ್ರಾಯಪಟ್ಟಿದೆ

* ಎಲ್ಲಾ ಹಿಂದೂ ಕುಟುಂಬದ ಉಯಿಲುರಹಿತ ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಹಕ್ಕುಗಳಿಗೆ ಈ ಕಾಯ್ದೆಯೇ ಅನ್ವಯವಾಗುತ್ತದೆ

* ಚಿರಾಸ್ತಿ ಮತ್ತು ಚರಾಸ್ತಿಗಳ ಮೇಲಿನ ಹಕ್ಕು ಏಕಪ್ರಕಾರವಾಗಿ ಇಲ್ಲ

* ಹಿಂದೂ, ಬೌದ್ಧ, ಜೈನ ಮತ್ತು ಪಾರ್ಸಿ ಧರ್ಮದವರಿಗೆ ಈ ಕಾಯ್ದೆ ಅನ್ವಯವಾಗುತ್ತದೆ

* ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಹಿಂದೂಗಳು, ಇನ್ನೂ ಹಿಂದೂ ಪದ್ಧತಿಗಳನ್ನು ಅನುಸರಿಸುತ್ತಿದ್ದರೆ (ಹಿಂದೂಕ್ರೈಸ್ತ) ಅವರಿಗೂ ಈ ಕಾಯ್ದೆ ಅನ್ವಯವಾಗುತ್ತದೆ.

ಇದನ್ನೂ ಓದಿ: ಆಳ–ಅಗಲ | ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಉಳಿದ ಏಕರೂಪ ನಾಗರಿಕ ಸಂಹಿತೆ

ಮುಸ್ಲಿಂ ವಾರಸುದಾರಿಕೆ ಮತ್ತು ಉತ್ತರಾಧಿಕಾರ ಕಾನೂನು

* ಮುಸ್ಲಿಂ ಕುಟುಂಬವೊಂದರಲ್ಲಿ ಮುಖ್ಯಸ್ಥ ಇರುವಾಗ, ಕುಟುಂಬದ ಇತರ ಸದಸ್ಯರು ವಾರಸುದಾರಿಕೆ ಮತ್ತು ಉತ್ತರಾಧಿಕಾರದ ಮೇಲೆ ಹಕ್ಕು ಸಾಧಿಸಲಾಗದು. ಕುಟುಂಬದ ಮುಖ್ಯಸ್ಥನ ಮರಣಾನಂತರವಷ್ಟೇ ಹಕ್ಕುದಾರರಿಗೆ ವಾರಸುದಾರಿಕೆ ಮತ್ತು ಉತ್ತರಾಧಿಕಾರ ದತ್ತವಾಗುತ್ತದೆ

* ವಾರಸುದಾರಿಕೆ ಮತ್ತು ಉತ್ತರಾಧಿಕಾರದ ವಿಚಾರದಲ್ಲಿ ಚರಾಸ್ತಿ ಮತ್ತು ಸ್ಥಿರಾಸ್ತಿ ಎಂಬ ವರ್ಗೀಕರಣ ಇಲ್ಲ

* ಕುಟುಂಬದ ಮುಖ್ಯಸ್ಥನ ಸ್ವಯಾರ್ಜಿತ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿ ಎಂಬ ವರ್ಗೀಕರಣವೂ ಇಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT