ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ– ಅಗಲ | ಹವಾಮಾನ ವೈಪರೀತ್ಯ: ಒಂದೆಡೆ ಬಿಸಿಗಾಳಿ, ಇನ್ನೊಂದೆಡೆ ಬಿರುಮಳೆ

Published 3 ಮೇ 2024, 1:04 IST
Last Updated 3 ಮೇ 2024, 1:04 IST
ಅಕ್ಷರ ಗಾತ್ರ
ಹವಾಮಾನ ವೈಪರೀತ್ಯದ ಪರಿಣಾಮವು ಜಗತ್ತಿನ ಹಲವೆಡೆ ತಲೆದೋರಿದೆ. ಇದು ಆರಂಭದ ಹಂತದ ಪರಿಣಾಮಗಳಷ್ಟೆ. ಮುಂದಿನ ವರ್ಷಗಳಲ್ಲಿ ಈ ಪರಿಣಾಮದ ತೀವ್ರತೆ ಇನ್ನಷ್ಟು ಹೆಚ್ಚಲಿದೆ ಎಂದು ವಿಶ್ವ ಹವಾಮಾನ ಸಂಘಟನೆ ಹೇಳಿದೆ. ಭೂಮಧ್ಯೆ ರೇಖೆಗಿಂತ ಕೆಳಗೆ ಇರುವ ದೇಶಗಳಲ್ಲಿ ಈಗ ಬಿರುಬೇಸಿಗೆ. ಅಂದರೆ, ಇತ್ತೀಚಿನ ದಶಕಗಳಲ್ಲೇ ಕಂಡರಿಯದಷ್ಟು ಬಿಸಿಲಿಗೆ ಈ ದೇಶಗಳು ಮೈಯೊಡ್ಡಿವೆ. ಈ ದೇಶಗಳ ಪಕ್ಕದಲ್ಲೇ ಇರುವ ಯುಎಇ, ಈಜಿಪ್ಟ್‌, ಕೆನ್ಯಾ, ಸೊಮಲಿಯಾಗಳಲ್ಲಿ ಪ್ರವಾಹ ಸ್ಥಿತಿ ತಲೆದೋರುವಷ್ಟು ಮಳೆ ಹೊಯ್ಯುತ್ತಿದೆ. ಭಾರತವೂ ಒಳಗೊಂಡಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ದೇಶಗಳಲ್ಲಿ ಒಂದು ವಾರದಿಂದ ಬಿಸಿಗಾಳಿಯ ಪರಿಸ್ಥಿತಿ ಇತ್ತು. ಆಗ್ನೇಯ ಏಷ್ಯಾದಲ್ಲಿ ಈಗ ಮಳೆಯಾಗುತ್ತಿದೆ. ಭಾರತದ ಕೆಲವೆಡೆ ಮಳೆ ಇದ್ದರೆ, ಕೆಲವೆಡೆ ಮಳೆಯಾಗುತ್ತಿದೆ. ದಕ್ಷಿಣ ಅಮೆರಿಕದ ದೇಶಗಳಲ್ಲೂ ಇಂಥದ್ದೇ ಸ್ಥಿತಿ ಇದೆ

ಹವಾಮಾನ ವೈಪರೀತ್ಯವೂ ಮಾನವ ಹಕ್ಕೂ

ಇದೊಂದು ಸಾಹಸಮಯ ಕತೆ. ತಾವೂ ಗೆದ್ದು, ಜಗತ್ತನ್ನೂ ಗೆಲ್ಲಿಸಿದ ವಿಶಿಷ್ಟ ಕತೆ. ಸ್ವಿಟ್ಜರ್‌ಲೆಂಡ್‌ 64 ವರ್ಷ ಮೇಲ್ಪಟ್ಟ 2,500 ವೃದ್ಧೆಯರು, ಅಲ್ಲ, ಪರಿಸರ ಹೋರಾಟಗಾರರು, ‘ಇಂಥ ಬಿಸಿಗಾಳಿಯಲ್ಲಿ ನಮ್ಮನ್ನು ಸಾಯಲು ಬಿಟ್ಟಿದ್ದೀರಾ? ನಿಮ್ಮ ನಿಷ್ಕ್ರಿಯತೆಯಿಂದ ನಮ್ಮನ್ನು ಅಪಾಯಕ್ಕೆ ದೂಡಿದ್ದೀರಿ’ ಎನ್ನುತ್ತಾ ತಮ್ಮ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ 2016ರಲ್ಲಿ ಹೋರಾಟ ಆರಂಭಿಸಿದರು. ‘ಸೀನಿಯರ್‌ ವಿಮೆನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌’ ಎನ್ನುವ ಸಂಸ್ಥೆಯೊಂದನ್ನು ಕಟ್ಟಿಕೊಂಡು ಒಂದು ಕ್ರಾಂತಿಯನ್ನೇ ಮಾಡಿದ್ದಾರೆ. 

ಬಿಸಿಗಾಳಿಯಿಂದ, ಹವಾಮಾನ ವೈಪರೀತ್ಯದಿಂದ ವೃದ್ಧರಿಗೆ ಅದರಲ್ಲೂ ವೃದ್ಧೆಯರಿಗೇ ಹೆಚ್ಚಿನ ಅಪಾಯವಿದೆ. ಅತಿಯಾದ ಕೈಗಾರಿಕೀಕರಣದಿಂದ ಸ್ವಿಟ್ಜರ್‌ಲೆಂಡ್‌ ಅನ್ನು ಹಾಳು ಮಾಡಿದ್ದೀರಿ. 2015ರ ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಿದ್ದೀರಿ. ಆದರೆ, ಅದನ್ನು ಪಾಲಿಸಿಲ್ಲ. ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವುದು ನಿಮ್ಮ ಜವಾಬ್ದಾರಿ. ತಾಪಮಾನ ಏರಿಕೆಯಾಗದಂತೆ ನೀವೇ (ಸ್ವಿಟ್ಜರ್‌ಲೆಂಡ್‌ ಸರ್ಕಾರ) ಕೆಲವು ಯೋಜನೆಗಳು ಘೋಷಿಸಿದ್ದೀರಿ. ಅದನ್ನೂ ಜಾರಿ ಮಾಡುತ್ತಿಲ್ಲ. ನಮ್ಮ ಬದುಕುವ ಹಕ್ಕನ್ನು ಕಾಯುವುದು ನಿಮ್ಮ ಹೊಣೆಗಾರಿಕೆ’ ಎನ್ನುವುದು ಈ ವೃದ್ಧೆಯರ ವಾದ. ಇವರ ಈ ವಾದವನ್ನು ಸ್ವಿಟ್ಜರ್‌ಲೆಂಡ್‌ನ ಯಾವ ನ್ಯಾಯಾಲಯವೂ ಆಲಿಸಲಿಲ್ಲ. ಅವರ ಅರ್ಜಿಗಳನ್ನು ಎಲ್ಲ ಹಂತದ ನ್ಯಾಯಾಲಯಗಳೂ ವಜಾ ಮಾಡಿಬಿಟ್ಟವು. ಇಲ್ಲಿಂದ ಈ ಹೋರಾಟಕ್ಕೊಂದು ತಿರುವು ದೊರಕಿತು.

ಇಲ್ಲೆಲ್ಲ ಸೋಲುಂಡ ಬಳಿಕ ಅವರು ಹತ್ತಿದ್ದು, ‘ಯುರೋಪಿಯನ್‌ ಕೋರ್ಟ್‌ ಆಫ್‌ ಹ್ಯೂಮನ್‌ ರೈಟ್ಸ್‌’ ಮೆಟ್ಟಿಲನ್ನು. ಹೋರಾಟಗಾರರ ಈ ಹೆಜ್ಜೆಯು ಯೂರೋಪಿನ ಎಲ್ಲ ದೇಶಗಳ ಸರ್ಕಾರಕ್ಕೂ ತಪರಾಕಿ ಹಾಕಿದಂತಾಯಿತು. ‘ಹಸಿರುಮನೆ ಅನಿಲ ಹೊರಸೂಸುವಿಕೆ ತಡೆಗಟ್ಟಲು ಸ್ವಿಟ್ಜರ್‌ಲೆಂಟ್‌ ಸರ್ಕಾರವು ತಾನಾಗೇ ಹಾಕಿಕೊಂಡ ಗುರಿಗಳನ್ನು ತಲುಪಲು ವಿಫಲವಾಗಿದೆ. ಯುರೋಪಿಯನ್‌ ಕನ್‌ವೆನ್ಶನ್‌ ಆನ್‌ ಹ್ಯೂಮನ್‌ ರೈಟ್ಸ್‌ನ 8ನೇ ವಿಧಿಯ ಅನ್ವಯ ಖಾಸಗಿತನ ಹಾಗೂ ಕುಟುಂಬದೊಂದಿಗೆ ಜೀವನ ನಡೆಸುವ ಹಕ್ಕನ್ನು ಈ ಸರ್ಕಾರವು ಕಿತ್ತುಕೊಂಡಿದೆ. ಇಂದಿನ ನಮ್ಮ ವೈಫಲ್ಯದ ಪರಿಣಾಮಗಳನ್ನು ನಮ್ಮ ಮುಂಬರುವ ಪೀಳಿಗೆಗಳು ಅನುಭವಿಸಬೇಕಾಗುತ್ತದೆ’ ಎಂದು ನ್ಯಾಯಾಲಯವು ತೀರ್ಪು ನೀಡಿತು.

‘ಈ ಸಂಸ್ಥೆಯ ಎಲ್ಲ ವೃದ್ಧೆಯರು ಸರ್ಕಾರದ ನಿಷ್ಕ್ರಿಯತೆಯ ಸಂತ್ರಸ್ತರು’ ಎಂದೂ ತನ್ನ ತೀರ್ಪಿನಲ್ಲಿ ಹೇಳಿತು. ಯುರೋಪಿಯನ್‌ ಕೋರ್ಟ್‌ ಆಫ್‌ ಹ್ಯೂಮನ್‌ ರೈಟ್ಸ್‌ ಅನ್ನು ಒಪ್ಪಿಕೊಂಡ ಯುರೋಪಿನ ಎಲ್ಲ 46 ದೇಶಗಳೂ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಯೋಜನೆಗಳನ್ನು ರೂಪಿಸುವಂತೆ ಮಾಡಿದೆ. ಈ ಮೂಲಕ ಜಗತ್ತಿನ ಬೇರೆಲ್ಲಾ ದೇಶಗಳ ನಾಗರಿಕರು, ಸಂಘ–ಸಂಸ್ಥೆಯವರೂ ತಮ್ಮ ಸರ್ಕಾರದ ವಿರುದ್ಧ ದಾವೆ ಹೂಡುವಂಥ ಚಿಂತನೆ ನಡೆಸಲು ಪ್ರೇರಣೆ ನೀಡಿದೆ. ಹೀಗೆ, ವೃದ್ಧೆಯರು ತಾವೂ ಗೆದ್ದು, ಜಗತ್ತನ್ನೂ ಗೆಲ್ಲಿಸಿದರು.

ಇಲ್ಲೊಂದು ಸ್ವಾರಸ್ಯಕರ ಸಂಗತಿಯೊಂದಿದೆ. ಹವಾಮಾನ ವೈಪರೀತ್ಯವು ಪರಿಸರಕ್ಕೆ ಸಂಬಂಧಿಸಿದ್ದು, ಒಂದು ವೇಳೆ ಹವಾಮಾನ ವೈಪರೀತ್ಯವನ್ನು ನಿಯಂತ್ರಿಸಲು ಸರ್ಕಾರವೊಂದು ವಿಫಲವಾದರೆ, ಅಂಥ ಸರ್ಕಾರವನ್ನು ಉತ್ತರದಾಯಿಯನ್ನಾಗಿ ಮಾಡಬಹುದು ಎಂಬುದನ್ನು ಈ ತೀರ್ಪು ನಿರೂಪಿಸಿತು. ಇದರ ಜೊತೆಯಲ್ಲಿ, ಹವಾಮಾನ ವೈಪರೀತ್ಯವನ್ನು ಸರ್ಕಾರವೊಂದು ನಿಯಂತ್ರಿಸಲಿಲ್ಲ ಎಂದಾದರೆ, ಅದು ನಾಗರಿಕರ ಬದುಕುವ ಹಕ್ಕನ್ನು ಕಸಿದುಕೊಂಡಂತೆ ಎಂಬುದನ್ನೂ ಈ ತೀರ್ಪು ಸಾರಿದೆ.

ಈ ತೀರ್ಪು ನಮ್ಮ ಜಯವೊಂದೇ ಅಲ್ಲ. ಇದು ಎಲ್ಲ ಪೀಳಿಗೆಗಳ ಜಯ. ಹಲವು ವರ್ಷಗಳ ವಿಚಾರಣೆಯ ಉದ್ದಕ್ಕೂ ಹಾಜರಿದ್ದ ಯುವಕರು, ತಮ್ಮ ಭವಿಷ್ಯದ ಮಾನವ ಹಕ್ಕುಗಳ ರಕ್ಷಣೆಯನ್ನು ಎತ್ತಿತೋರಿಸಿದ್ದರು. ಅದು ನ್ಯಾಯಾಲಯವನ್ನು ಪ್ರಭಾವಿಸಿತು
ರೋಸ್‌ಮೆರಿ ವೇಡ್ಲೇರ್‌ವಾಲ್ಟಿ, ಸಹ ಅಧ್ಯಕ್ಷೆ, ಸೀನಿಯರ್‌ ವಿಮೆನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌
ಬದುಕಲು ಯೋಗ್ಯವಾದ ವಾತಾವರಣವು ಎಲ್ಲರಿಗೂ ಬೇಕು. ಈ ಕಾರಣಕ್ಕಾಗಿಯೇ ಇದೊಂದು ಐತಿಹಾಸಿಕ ತೀರ್ಪಾಗಿದೆ. ಇದು ನಮಗೆ ತೃಪ್ತಿಯನ್ನೂ ಕೊಟ್ಟಿದೆ. ಗ್ರೀನ್‌ಪೀಸ್‌ನ ಸಹಕಾರದೊಂದಿಗೆ ಕಳೆದ 9 ವರ್ಷಗಳಿಂದ ಈ ಹೋರಾಟ ನಡೆಸುತ್ತಿದ್ದೇವೆ. ಸ್ವಿಟ್ಜರ್‌ಲೆಂಡ್‌ ನ್ಯಾಯಾಲಯಗಳು ನಮ್ಮ ವಾದವನ್ನು ಆಲಿಸಲು ನಿರಾಕರಿಸಿದವು. ಪರಿಸರ ಸಂರಕ್ಷಣೆ ಎನ್ನುವುದು ಮಾನವ ಹಕ್ಕು ಎಂಬುದನ್ನು ಹ್ಯೂಮನ್‌ ರೈಟ್ಸ್‌ ನ್ಯಾಯಾಲಯವು ಸಾಬೀತುಪಡಿಸಿದೆ
ಅನ್ನಾ ಮಾರೇರ್‌, ಸಹ ಅಧ್ಯಕ್ಷೆ, ಸೀನಿಯರ್‌ ವಿಮೆನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌

ಆಧಾರ: ರಾಯಿಟರ್ಸ್‌, ಎಎಫ್‌ಪಿ, ಸೀನಿಯರ್‌ ವಿಮೆನ್‌ ಫಾರ್‌ ಕ್ಲೈಮೇಟ್‌ ಪ್ರೊಟೆಕ್ಷನ್‌ನ ಪ್ರತಿಕಾ ಪ್ರಕಟಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT