ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಆಳ –ಅಗಲ | ಕೊರೊನಾ ಉಪತಳಿ ಜೆಎನ್‌.1, ದಿಗಿಲು ಬೇಕಿಲ್ಲ
ಆಳ –ಅಗಲ | ಕೊರೊನಾ ಉಪತಳಿ ಜೆಎನ್‌.1, ದಿಗಿಲು ಬೇಕಿಲ್ಲ
Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕೆಲಕಾಲದ ವಿರಾಮದ ಬಳಿಕ, ಕೊರೊನಾ ವೈರಾಣುವಿನ ಹೊಸ ಉಪತಳಿ ಜೆಎನ್‌.1 ಕುರಿತು ಜಗತ್ತಿನಾದ್ಯಂತ ಚರ್ಚೆ ಆರಂಭವಾಗಿದೆ. ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡ ಈ ಉಪತಳಿ ಈಗ ಇತರ ಕೆಲವು ದೇಶಗಳಿಗೂ ಹಬ್ಬಿದೆ. ಭಾರತದಲ್ಲಿಯೂ ಕೆಲವು ಪ್ರಕರಣಗಳು ವರದಿಯಾಗಿವೆ. ಬಹುತೇಕ ದೇಶಗಳಲ್ಲಿ ಹೆಚ್ಚಿನ ಜನ ಕೋವಿಡ್‌ ತಡೆ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿದ್ದಾರೆ. ಜೊತೆಗೆ ಜನರಲ್ಲಿ ಕೊರೊನಾ ಸೋಂಕು ನಿರೋಧಕ ಶಕ್ತಿಯೂ ಬೆಳೆದಿದೆ. ಹಾಗಾಗಿ, ಹೊಸ ಉಪತಳಿಯು ಹೆಚ್ಚು ಅಪಾಯ ಉಂಟುಮಾಡದು ಎಂದು ಪರಿಣತರು ಅಂದಾಜಿಸಿದ್ದಾರೆ. ದಿಗಿಲಾಗುವ ಅಗತ್ಯ ಇಲ್ಲ, ಆದರೆ ಎಚ್ಚರ ಇರಲಿ ಎಂಬುದೇ ಪರಿಣತರು ಜನರಿಗೆ ನೀಡುವ ಸಲಹೆ. ಹೊಸ ಉಪತಳಿ ಕುರಿತ ಕೆಲವು ವಿವರಗಳು ಇಲ್ಲಿವೆ

*****

ಮತ್ತೊಮ್ಮೆ ಚಳಿಗಾಲ ಬಂದಿದೆ. ಕ್ರಿಸ್‌ಮಸ್‌, ಹೊಸ ವರ್ಷಾಚರಣೆ ಕೂಡ ಮುಂದಿದೆ. ಇಂಥ ಹೊತ್ತಿನಲ್ಲಿ ಕೊರೊನಾ ವೈರಸ್‌ನ ಹೊಸದೊಂದು ರೂಪ ಜೆಎನ್‌.1 ಕಾಣಿಸಿಕೊಂಡಿದೆ. ಈ ಕಾರಣದಿಂದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಮಾರ್ಗಸೂಚಿಯನ್ನು ನೀಡಿದೆ. ಜೊತೆಗೆ, ಕರ್ನಾಟಕವೂ ತನ್ನದೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹಾಗಿದ್ದರೆ, ಏನಿದು ಜೆಎನ್‌.1 ಮತ್ತು ಇದು ಎಷ್ಟರಮಟ್ಟಿಗೆ ಸಂಕಷ್ಟ ತಂದೊಡ್ಡಲಿದೆ?

ಮೊದಲಿಗೆ ಕಾಣಿಸಿಕೊಂಡಾಗಿನಿಂದ ಈವರೆಗೆ ಕೊರೊನಾ ವೈರಸ್‌ ರೂಪಾಂತರಗೊಳ್ಳುತ್ತಲೇ ಸಾಗಿದೆ. ಈ ರೂಪಾಂತರ ಪ್ರಕ್ರಿಯೆ ಈಗ ಇನ್ನಷ್ಟು ವೇಗ ಪಡೆದುಕೊಂಡಿದೆ. ಡೆಲ್ಟಾ, ಒಮೈಕ್ರಾನ್‌ ಕೊರೊನಾ ವೈರಸ್‌ನ ರೂಪಾಂತರಗೊಂಡ ತಳಿಗಳು. ಇವುಗಳಲ್ಲಿ ಮತ್ತೆ ಹತ್ತು ಹಲವು ಉಪತಳಿಗಳು ರೂಪು ಪಡೆದುಕೊಂಡಿವೆ. ಬಿಎ.2.86 ಒಮೈಕ್ರಾನ್‌ನ ಒಂದು ಉಪತಳಿಯಾಗಿದೆ. ಇದರ ಉಪತಳಿಯೇ ಜೆಎನ್‌.1 ಆಗಿದೆ. ಬಿಎ.2.86 ಹಾಗೂ ಜೆಎನ್‌.1 ಉಪತಳಿಗಳ ನಡುವೆ ಹೆಚ್ಚೇನು ಅಂತರವಿಲ್ಲ. ಸೋಂಕಿನ ಮುಳ್ಳು ಚಾಚಿಕೆಗಳಲ್ಲಿ ಸಣ್ಣದೊಂದು ಬದಲಾವಣೆ ಇದೆಯಷ್ಟೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ (ಸಿಡಿಸಿ) ಹೇಳಿದೆ.

ಜೆಎನ್‌.1 ಉಪತಳಿಯು ಮೊದಲು ಕಾಣಿಸಿಕೊಂಡಿದ್ದು ಅಮೆರಿಕದಲ್ಲಿ. ಸೆಪ್ಟೆಂಬರ್‌ ಹೊತ್ತಿಗೆ ಈ ಉಪತಳಿಯು ಅಮೆರಿಕದಲ್ಲಿ ನಿಧಾನಗತಿಯಲ್ಲಿ ಕಾಣಿಸಿಕೊಳ್ಳತೊಡಗಿತು. ಡಿಸೆಂಬರ್‌ನ ಮೊದಲೆರಡು ವಾರಗಳಲ್ಲಿ ಸೋಂಕಿಗೆ ಒಳಗಾಗುವವರಲ್ಲಿ ಶೇ 15–20ರಷ್ಟು ಜನರು ಜೆಎನ್‌.1 ಉಪತಳಿಯ ಸೋಂಕು ಹೊಂದಿದ್ದರು. ಚೀನಾದಲ್ಲಿಯೂ ಈ ಉಪತಳಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಸಿಂಗಪುರದಲ್ಲಿಯೂ ತೀವ್ರಗತಿಯಲ್ಲಿ ಸೋಂಕು ಕಾಣಿಸಿಕೊಳ್ಳತೊಡಗಿದೆ. ಇದೇ ಕಾರಣಕ್ಕೆ ಅಲ್ಲಿಯೂ ಆರೋಗ್ಯ ಸಚಿವಾಲಯವು ಹೆಚ್ಚು ಎಚ್ಚರದಿಂದ ಇರುವಂತೆ ತಾಕೀತು ಮಾಡಿದೆ. ಬಳಿಕ, ಈ ಉಪತಳಿಯು ಭಾರತಕ್ಕೆ ಕಾಲಿಟ್ಟಿದೆ. ಡಿ.6ರಂದು ಕೇರಳದಲ್ಲಿ 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ಪತ್ತೆಯಾಯಿತು. ನಂತರ, ಈಗ ಕರ್ನಾಟಕದಲ್ಲಿ ಜೆಎನ್‌.1 ಉಪತಳಿಯ ಸೋಂಕು ಕೆಲವರಲ್ಲಿ ಪತ್ತೆಯಾಗಿದೆ. ಆದರೆ ಭಾರತದಲ್ಲಿ ಈ ಉಪತಳಿಗೆ ಸಂಬಂಧಿಸಿ ಅಪಾಯಕಾರಿ ಪರಿಸ್ಥಿತಿ ಇಲ್ಲ. ಸೋಂಕು ತಡೆಯುವುದಕ್ಕೆ ಸಂಬಂಧಿಸಿ ಜನರಲ್ಲಿ ಅರಿವು ಮತ್ತು ಜಾಗೃತಿ ಈಗಾಗಲೇ ಇರುವುದರಿಂದ ಈ ಉಪತಳಿಯ ಸೋಂಕು ಹರಡುವಿಕೆಯನ್ನೂ ತಡೆಯುವುದಕ್ಕೆ ಸಾಧ್ಯವಿದೆ.

ಹರಡುವ ಪ್ರಕ್ರಿಯೆ, ನಡೆಯುತ್ತಿದೆ ಅಧ್ಯಯನ: ಮೊದಲೇ ಹೇಳಿದ ಹಾಗೆ, ಕೊರೊನಾ ವೈರಾಣು ಕಾಲ ಕಾಲಕ್ಕೆ ತೀವ್ರವಾಗಿ ರೂಪಾಂತರಗೊಳ್ಳುತ್ತಿದೆ. ಆದ್ದರಿಂದ, ರೂಪಾಂತರಗೊಂಡು ಸೃಷ್ಟಿಯಾಗುವ ಉಪತಳಿಗಳ ಕುರಿತ ಅಧ್ಯಯನವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚು ಹೆಚ್ಚು ಅಧ್ಯಯನ ನಡೆಯದ ಹೊರತು ಉಪತಳಿಯ ಗುಣಲಕ್ಷಣಗಳು ಮತ್ತು ಪ್ರಭಾವವನ್ನು ಅಂದಾಜಿಸಲು ಸಾಧ್ಯವಿಲ್ಲ. ಜೆಎನ್‌.1 ಉಪತಳಿಯ ಅಧ್ಯಯನವು ಈಗ ಮೊದಲ ಹಂತದಲ್ಲಿದೆ.

ಒಂದು ಕಡೆ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನೊಂದು ಕಡೆ ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರವು ಈ ಬಗ್ಗೆ ಅಧ್ಯಯನ ನಡೆಸುತ್ತಿದೆ. ಈ ಉಪತಳಿಯ ಲಕ್ಷಣಗಳ ಕುರಿತು ಈವರೆಗೂ ಯಾವುದೇ ಸ್ಪಷ್ಟ ಚಿತ್ರಣ ದೊರೆತಿಲ್ಲ. ಇದೇ ಕಾರಣಕ್ಕೆ ಇದನ್ನು ತಡೆಯುವ ಲಸಿಕೆ ಕುರಿತೂ ಸ್ಪಷ್ಟ ಮಾಹಿತಿ ಇಲ್ಲ. ಹೊಸದಾಗಿ ರೂಪುಗೊಳ್ಳುವ ಉಪತಳಿಗಳು ಈ ಹಿಂದೆ ಇದ್ದ ಉಪತಳಿಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ ಎನ್ನುತ್ತದೆ ಸಿಡಿಸಿ. ‘ಜೆಎನ್‌.1ನ ಲಕ್ಷಣಗಳನ್ನು ಗಮನಿಸಿದರೆ, ಇದು ವೇಗವಾಗಿ ಹರಡುತ್ತದೆ ಎನ್ನಿಸುತ್ತದೆ’ ಎಂದು ಸಿಡಿಸಿ ಅಭಿಪ್ರಾಯಪಟ್ಟಿದೆ. ‘ಯಾವ ಉಪತಳಿಯು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಎಂಥ ಪರಿಣಾಮ ಬೀರಬಲ್ಲದು ಎಂಬುದು ತಿಳಿದಿಲ್ಲ. ಕೊರೊನಾ ವೈರಾಣುವಿನ ಹೊಸ ಹೊಸ ಉಪತಳಿಗಳು ತೀವ್ರ ಪರಿಣಾಮ ಬೀರಬಹುದು ಮತ್ತು ಲಸಿಕೆಯ ಪ್ರಭಾವವನ್ನೂ ಮೀರಬಲ್ಲ ಶಕ್ತಿ ಹೊಂದಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಗಳಲ್ಲಿ ತಿಳಿಸಿದೆ. ಸೋಂಕು ಉಂಟು ಮಾಡುವ ಲಕ್ಷಣಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸಿಡಿಸಿ ನಡುವೆ ಸಹಮತ ಇಲ್ಲ. ಹಾಗಿದ್ದರೂ, ಜೆಎನ್‌.1 ಉಪತಳಿಯ ಪ್ರಭಾವ ಮತ್ತು ಪರಿಣಾಮ ಯಾವ ರೀತಿ ಇರಬಹುದು ಎಂಬುದು ಅಧ್ಯಯನದಿಂದಷ್ಟೇ ತಿಳಿಯಬೇಕಿದೆ.

ಹೇಗಿದೆ ಲಸಿಕೆ ಪ್ರಭಾವ: ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್‌ ಲಸಿಕೆ ಅಭಿಯಾನಗಳು ನಡೆಯುತ್ತಲೇ ಇವೆ. ಭಾರತದಲ್ಲಂತೂ ಮೊದಲ ಡೋಸ್‌, ಎರಡನೇ ಡೋಸ್‌ ನೀಡಿದ ಜೊತೆಯಲ್ಲಿ ಮೂರನೆಯ ಬೂಸ್ಟರ್‌ ಡೋಸ್‌ ಅನ್ನು ಕೂಡ ನೀಡಲಾಗುತ್ತಿದೆ. ಈ ಲಸಿಕೆಗಳು ಕೋವಿಡ್‌ನ ಉಪತಳಿಗಳ ಮೇಲೂ ಪ್ರಭಾವ ಬೀರಬಲ್ಲುದೇ ಎಂಬುದರ ಕುರಿತು ಅಧ್ಯಯನಗಳು ನಡೆಯುತ್ತಿವೆ. ಹಲವು ಉಪತಳಿಗಳಿಗೆ ಕೂಡ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ‘ಕೋವಿಡ್‌ ತಡೆ ಲಸಿಕೆಗಳೇ ಕೆಲವು ಉಪತಳಿಗಳನ್ನು ತಡೆಯಬಲ್ಲದು ಮತ್ತು ಅದು ಜೆಎನ್‌.1 ಉಪತಳಿಯನ್ನೂ ತಡೆಯಬಲ್ಲುದು’ ಎನ್ನುತ್ತದೆ ಸಿಡಿಸಿ. ವಿಶ್ವ ಆರೋಗ್ಯ ಸಂಸ್ಥೆಯೂ ಇದನ್ನೇ ಹೇಳುತ್ತಿದೆ. ‘ಕೋವಿಡ್‌ ಹಾಗೂ ಅದರ ಉಪತಳಿಗಳಿಗೆ ಸದ್ಯ ನೀಡಲಾಗುತ್ತಿರುವ ‘ಮೊನೊವಲೆಂಟ್‌ ಎಕ್ಸ್‌ಬಿಬಿ.1.5’ ಲಸಿಕೆಯು ಮನುಷ್ಯನ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಹೆಚ್ಚು ಶಕ್ತವಾಗಿದೆ. ಆದ್ದರಿಂದ,  ಜೆಎನ್‌.1ಗೂ ಈ ಲಸಿಕೆಯನ್ನೇ ನೀಡಬಹುದು ಹಾಗೂ ಈಗ ನೀಡುತ್ತಿರುವ ಲಸಿಕೆಯನ್ನೇ ಎಲ್ಲ ದೇಶಗಳೂ ಮುಂದುವರಿಸಿ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ರೋಗ ಲಕ್ಷಣಗಳು ಯಾವುವು?

ಈ ಉಪತಳಿಯಿಂದಾಗುವ ರೋಗದ ಲಕ್ಷಣಗಳ ಕುರಿತು ನಿಖರ ಮಾಹಿತಿ ಲಭ್ಯವಿಲ್ಲ. ಕೊರೊನಾ ಸೋಂಕು ಉಂಟಾದಾಗ ಕಾಣಿಸಿಕೊಳ್ಳುವ ಲಕ್ಷಣಗಳೇ ಸಾಮಾನ್ಯವಾಗಿ ಈ ಉಪತಳಿಯ ಸೋಂಕಿನಲ್ಲಿಯೂ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ತಜ್ಞರು. ಆದರೆ, ಈ ರೋಗಲಕ್ಷಣಗಳ ತೀವ್ರತೆಯಲ್ಲಿ ಪ್ರತಿ ಉಪತಳಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ. ಆದ್ದರಿಂದ, ಪ್ರಸ್ತುತ ಜೆಎನ್‌.1 ಉಪತಳಿಯ ಲಕ್ಷಣಗಳು ಎಷ್ಟು ತೀವ್ರವಾಗಿವೆ ಎಂದು ಇನ್ನಷ್ಟೇ ತಿಳಿಯಬೇಕು. ಭಾರತ ಸರ್ಕಾರವು ರೋಗ ಲಕ್ಷಣಗಳ ಕುರಿತು ಮಾರ್ಗಸೂಚಿ ಹೊರಡಿಸಿದ್ದು, ತೀವ್ರ ಜ್ವರ ಹಾಗೂ ಕೆಮ್ಮು (Influenza Like Illness) ಇರುವ ರೋಗಗಳ ಕುರಿತು ಜಿಲ್ಲಾವಾರು ವರದಿ ನೀಡುವಂತೆ ಹೇಳಿದೆ. ಜೊತೆಗೆ, ಸೋಂಕಿನ ಪತ್ತೆಯನ್ನು ಮತ್ತಷ್ಟು ಹೆಚ್ಚಿಸಲೂ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ತನ್ನ ಸದಸ್ಯ ದೇಶಗಳಿಗೆ ಈ ಸೂಚನೆಯನ್ನೇ ನೀಡಿದೆ.

ಆಧಾರ: ರಾಯಿಟರ್ಸ್‌, ಪಿಟಿಐ, ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳು, ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆ ಕೇಂದ್ರ (ಸಿಡಿಸಿ) ವರದಿಗಳು, ಕೇಂದ್ರ ಸರ್ಕಾರದ ಕೋವಿಡ್‌ ಟ್ರ್ಯಾಕರ್‌ ವೆಬ್‌ಸೈಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT