ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆಚೀಟಿಗಳಲ್ಲಿ ಕ್ರಿಕೆಟ್‌...

Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಿಶ್ವಕಪ್‌ ಕ್ರಿಕೆಟ್‌ಗೆ ಭಾನುವಾರ ತೆರೆ ಬಿದ್ದಿದೆ. ಈ ಕ್ರೀಡೆ ಬ್ರಿಟನ್‌ ವಸಾಹತುಗಳಲ್ಲಿ ಕಂಡುಕೊಂಡ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಾ, ವಾಣಿಜ್ಯ ಜಗತ್ತಿನಲ್ಲೂ ದೊಡ್ಡದಾಗಿಯೇ ಸುದ್ದಿ ಮಾಡಿದೆ. ಅಂಚೆಚೀಟಿ (ಫಿಲಾಟೆಲಿ) ಸಂಗ್ರಹದ ಹವ್ಯಾಸಿಗಳ ಲೋಕದಲ್ಲಿಯೂ ಕ್ರಿಕೆಟ್ ಇದೀಗ ಮಹತ್ತರ ಸ್ಥಾನ ಕಂಡು ಕೊಂಡಿದೆ.

ಮೊದಲ ಮೂರು ವಿಶ್ವಕಪ್‌ ಟೂರ್ನಿಗಳು ಇಂಗ್ಲೆಂಡ್‌ನಲ್ಲಿಯೇ ನಡೆದವು. ಮೊದಲ ಎರಡು ಸಲ ವೆಸ್ಟ್‌ ಇಂಡೀಸ್‌ ಗೆದ್ದರೆ, 1983ರಲ್ಲಿ ನಡೆದ ಮೂರನೇ ವಿಶ್ವಕಪ್‌ನಲ್ಲಿ ನಮ್ಮ ಕಪಿಲ್‌ ಬಳಗ ಟ್ರೋಫಿಯನ್ನು ಎತ್ತಿಕೊಂಡಿತ್ತು. ನಂತರ ಅಂಚೆಚೀಟಿ ವಲಯದಲ್ಲಿಯೂ  ಕ್ರಿಕೆಟ್‌ ತನ್ನ ಆಳವಾದ ಹೆಜ್ಜೆಗುರುತುಗಳನ್ನು ಮೂಡಿಸಿದೆ.

ಒಲಿಂಪಿಕ್ಸ್‌, ವಿಶ್ವಕಪ್‌ ಫುಟ್‌ಬಾಲ್‌ಗಳು ಅಂಚೆಚೀಟಿ ಲೋಕದಲ್ಲಿ ಜನಜನಿತವಾಗಿದ್ದಾಗ, ಕ್ರಿಕೆಟ್‌ ಬಗ್ಗೆ ಕೇಳುವವರೇ ಇರಲಿಲ್ಲ . 1962ರ ಜನವರಿ 18ರಂದು ಜಗತ್ತಿನಲ್ಲಿ ಕ್ರಿಕೆಟ್‌ನ ಮೊದಲ ಅಂಚೆಚೀಟಿ ಬಿಡುಗಡೆ ಗೊಂಡಿತು. ಪೋರ್ಚುಗೀಸರ ಕಾಲೋನಿಯಾಗಿದ್ದ ಕೇಪ್‌ ಮೀರ್‌ಡೆ ಐಲೇಂಡ್ಸ್‌ ಎಂಬಲ್ಲಿ ಈ ಅಂಚೆಚೀಟಿಯನ್ನು ಅನಾವರಣಗೊಳಿಸಲಾಗಿತ್ತು. ಅಂದಿನಿಂದ ಈವರೆಗೆ 30 ದೇಶಗಳು ವಿವಿಧ ಬಗೆಯ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿವೆ. ಇಂತಹ ಅಂಚೆಚೀಟಿಗಳಲ್ಲಿ ಕೆಲವು ಪ್ರಸಿದ್ಧ ಕ್ರೀಡಾಂಗಣಗಳು ಕಾಣಿಸಿಕೊಂಡಿದ್ದರೆ ಮತ್ತು ಹೆಸರಾಂತ ಆಟಗಾರರ ಭಾವಚಿತ್ರಗಳು ಮುದ್ರಣಗೊಂಡಿವೆ.

ವೆಸ್ಟ್‌ ಇಂಡೀಸ್‌ ವ್ಯಾಪ್ತಿಯ ದೇಶಗಳು ಮೊದಲ ಎರಡು ವಿಶ್ವಕಪ್‌ ಟೂರ್ನಿಗಳ ಮೇಲೆಯೇ ಕೇಂದ್ರೀಕರಿಸಿ ಹಲವು ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ್ದೊಂದು ವಿಶೇಷ. ಕ್ರಿಕೆಟ್‌ಗೆ ಸಂಬಂಧಿಸಿದ ಅಂಚೆಚೀಟಿಗಳು ಲಾಭ ಕರ ಎಂಬುದು ಗೊತ್ತಾದ ಮೇಲೆ ಕೆರಿಬಿಯನ್‌ ದೇಶಗಳು ಅದನ್ನೂ ಒಂದು ಉದ್ಯಮವಾಗಿಸಿಕೊಂಡವು.

ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಕ್ರಿಕೆಟ್‌ ತಾರೆಯರೂ ಕೆರಿಬಿಯನ್‌ ದೇಶಗಳ ಅಂಚೆಚೀಟಿ ಗಳಲ್ಲಿ ಕಾಣಿಸಿಕೊಂಡಿದ್ದಾರೆ.  ಐತಿಹಾಸಿಕ ಸಂದರ್ಭಗಳಲ್ಲಿ ಬಿಡುಗಡೆಗೊಳ್ಳುವ ಅಂಚೆಚೀಟಿಗಳಿಗೆ ಬಹು ಬೇಡಿಕೆ ಸಾಮಾನ್ಯ. ವಿಶ್ವಕಪ್‌ ಕೂಡಾ ಇದರಿಂದ ಹೊರತಲ್ಲ. ಈ ಟೂರ್ನಿಗೆ ಆತಿಥ್ಯ ವಹಿಸಿದ ದೇಶಗಳು ಅಂತಹ ಸಂದರ್ಭಗಳಲ್ಲಿ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿವೆ. ಯಾವುದೇ ದೇಶದಲ್ಲಾಗಲಿ ಅಧಿಕೃತ ಅಂಚೆಚೀಟಿ ಬಿಡುಗಡೆಗೆ ಅನೇಕ ಕಟ್ಟುಪಾಡುಗಳಿರುತ್ತವೆ.

ಆದರೆ ಕೆರಿಬಿಯನ್‌ ದೇಶಗಳಲ್ಲಿ ಇಂತಹ ಕಟ್ಟುಪಾಡುಗಳನ್ನೂ ಮೀರಿ ಅಂಚೆಚೀಟಿಗಳು ಮುದ್ರಣಗೊಳ್ಳುತ್ತಿವೆ. ಅಂತಹ ಅಂಚೆಚೀಟಿಗಳನ್ನು ನಿಷೇಧಿಸಿದರೂ ಅವುಗಳನ್ನು ಕದ್ದುಮುಚ್ಚಿ ಮಾರಾಟ ಮಾಡುತ್ತಿರುವ ಪ್ರಕರಣಗಳು  ಬಹಳಷ್ಟಿವೆ. ಇದೀಗ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ ದೇಶಗಳಲ್ಲಿಯೂ ದುಬಾರಿ ಬೆಲೆಯ ಅಂಚೆಚೀಟಿಗಳು ಮುದ್ರಣಗೊಂಡಿವೆ. ವಿಶ್ವಕಪ್‌ ಕ್ರಿಕೆಟ್‌ ಸಂದರ್ಭದಲ್ಲಿ ಅಲ್ಲಿನ ಅಂಚೆ ಇಲಾಖೆಯೂ ಲಾಭ ಮಾಡಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT