ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್ ಎಂಬ ಉದ್ಯಮ

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಈಗ ಒಲಿಂಪಿಕ್ಸ್ ಸಂಘಟಿಸುವುದರ ಹಿಂದೆ ಹತ್ತು ಹಲವು ಉದ್ದೇಶಗಳಿವೆ. ಇದರಲ್ಲಿ ವ್ಯವಹಾರಿಕ ಲಾಭ ನಷ್ಟಗಳ ಕಾರಣವೇ ಬಲು ದೊಡ್ಡದು. ಒಲಿಂಪಿಕ್ಸ್ ಈಗ ಉದ್ದಿಮೆಯ ಸ್ವರೂಪ ಪಡೆದಕೊಂಡಿದೆ.  ಒಲಿಂಪಿಕ್ಸ್‌ನಲ್ಲಿ ಬಂಡವಾಳ ಹೂಡುವುದು, ಅದರಿಂದ ಲಾಭ ಪಡೆಯುವುದು ಅಥವಾ ನಷ್ಟ ಅನುಭವಿಸುವುದು ಈಗ ಸಾಮಾನ್ಯ ಸಂಗತಿ. 

ಎರಡನೇ ಮಹಾಯುದ್ಧದ ನಂತರ ಒಲಿಂಪಿಕ್ಸ್ ಕ್ರೀಡೆಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗಿದ್ದಕ್ಕೆ ಬಹುಮುಖ್ಯವಾದ ಕಾರಣ ಟೆಲಿವಿಷನ್. ಪ್ರಪಂಚದ ಮೂಲೆ ಮೂಲೆಗಳಿಗೂ ಟೆಲಿವಿಷನ್ ಮೂಲಕ ಇದೀಗ ಒಲಿಂಪಿಕ್ಸ್ ತಲುಪಿದೆ. ಇದೇ ಟೆಲಿವಿಷನ್ ಜಾಲದಿಂದ ಒಲಿಂಪಿಕ್ಸ್ ಕೈಗಾರಿಕೆಯಾಗಿ ಬೆಳೆಯಲು ಕೂಡ ಕಾರಣವಾಗಿದೆ. 

ರಾಜ ಮಹಾರಾಜರ ಆಶ್ರಯದಲ್ಲಿ ಸಂಘಟನೆಯಾಗುತ್ತಿದ್ದ ಒಲಿಂಪಿಕ್ಸ್ ಕ್ರೀಡಾಕೂಟ ಈಗ ಬಹು ರಾಷ್ಟ್ರೀಯ ಕಂಪೆನಿಗಳ ಮಾರುಕಟ್ಟೆ ವ್ಯವಸ್ಥೆಯೊಳಗೆ ಹೊಂದಿಕೊಂಡಿದೆ. ಅದರಿಂದ ಒಲಿಂಪಿಕ್ಸ್‌ಗೆ ಒಳಿತು ಆಗಿದೆ, ಕೆಡಕು ಉಂಟಾಗಿದೆ. 

ಒಲಿಂಪಿಕ್ಸ್ ವ್ಯವಸ್ಥೆ ಮಾಡಲು ಈಗ ದೇಶಗಳ ಮಧ್ಯೆ ಬಿರುಸಾದ ಪೈಪೋಟಿಗಳು ನಡೆಯುತ್ತವೆ.  ಹಾಗೆಯೇ ಕೂಟವನ್ನು ನಡೆಸಲು ಹೂಡುವ ಬಂಡವಾಳ ಜೊತೆಗೆ ಪ್ರಯೋಜಕತ್ವ ನೀಡಲು ದೊಡ್ಡ ದೊಡ್ಡ ಸಂಸ್ಥೆಗಳು ನಾ ಮುಂದು ತಾ ಮುಂದು ಎಂದು ಪೈಪೋಟಿ ನಡೆಸುವುದೂ ಸಾಮಾನ್ಯ.  

ಟೆಲಿವಿಷನ್ ಪ್ರಸಾರದ ಹಕ್ಕುಗಳಿಗಾಗಿ  ಬರುವ ಆದಾಯವೇ ಒಲಿಂಪಿಕ್ಸ್ ಕೂಟಗಳಿಗೆ ಬಲು ದೊಡ್ಡ ಮೊತ್ತ.  ಒಲಿಂಪಿಕ್ಸ್ ಟೂರ್ನಿಗಳಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರುಕಟ್ಟೆ  ವಿಸ್ತರಿಸುವ ಕಂಪೆನಿಗಳ ಪ್ರಯತ್ನಗಳೂ ಬಹಳಷ್ಟಿವೆ.
 
ಇತ್ತೀಚೆಗೆ ಒಲಿಂಪಿಕ್ಸ್ ಏರ್ಪಡಿಸುವುದು ಬಹು ಪ್ರತಿಷ್ಠೆಯ ವಿಷಯದ ಜೊತೆಗೆ ಲಾಭದ ದೂರದೃಷ್ಟಿಯೂ ಆಯಾ ದೇಶಗಳಿಗಿದೆ.  ಒಲಿಂಪಿಕ್ಸ್ ಕೂಟ ನಡೆಯುವ ನಗರಗಳು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೂಡುವ ಬಂಡವಾಳವೂ ವರ್ಷ ಕಳೆದಂತೆ ಹೆಚ್ಚುತ್ತಿವೆ.

ಒಲಿಂಪಿಕ್ಸ್ ಏರ್ಪಡಿಸಿದರೆ ಲಾಭ ಖಚಿತ ಅನ್ನುವ ಹಾಗೂ ಇಲ್ಲ. ಉದಾಹರಣೆಗೆ 1972ರ ಮ್ಯೂನಿಕ್ ಹಾಗೂ 1976ರ ಮಾಂಟ್ರಿಯಲ್ ಒಲಿಂಪಿಕ್ಸ್ ಆರ್ಥಿಕವಾಗಿ  ನಷ್ಟ ಕಂಡವು.  ಆದರೆ 1984ರ ಲಾಸ್ ಏಂಜಲೀಸ್ ಪಂದ್ಯಗಳ ನಂತರ ಬಹುತೇಕ ಎಲ್ಲಾ ಒಲಿಂಪಿಕ್ಸ್ ಕೂಟಗಳು ಲಾಭವನ್ನು ಗಳಿಸುತ್ತಿವೆ.

ಒಲಿಂಪಿಕ್ಸ್ ಸಂಘಟಿಸುವ ನಗರಗಳ ಮೂಲ ಸೌಕರ್ಯಗಳನ್ನು ಉತ್ತಮ ಪಡಿಸುವ ದೂರದರ್ಶಿತ್ವದ ಯೋಜನೆಗಳು ಕಳೆದ ಎರಡು ದಶಕಗಳಿಂದ ನಡೆದಿರುವ ಎಲ್ಲಾ ಕೂಟಗಳ ನಗರಗಳಲ್ಲಿ ಕಂಡುಬಂದಿದೆ.  ಸಂಪರ್ಕ ವ್ಯವಸ್ಥೆ, ವಸತಿ ಗೃಹಗಳ ನಿರ್ಮಾಣ, ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ, ಗುಣಮಟ್ಟದ ಕ್ರೀಡಾ ಸೌಲಭ್ಯದ ವ್ಯವಸ್ಥೆಯ ಅಭಿವೃದ್ಧಿ  ಒಲಿಂಪಿಕ್ಸ್ ಕೂಟಗಳ ಜೊತೆ ಜೊತೆಗೆ ನಡೆಯುತ್ತಿದೆ. 

ಲಂಡನ್ ಒಲಿಂಪಿಕ್ಸ್ ಕೂಟಕ್ಕಾಗಿ ನಗರದ ಮೂಲ ಸೌಕರ್ಯಗಳನ್ನು ವ್ಯವಸ್ಥೆ ಮಾಡಲು 8.5 ಬಿಲಿಯನ್ ಪೌಂಡ್‌ಗಳಷ್ಟು ಬಂಡವಾಳ ಹೂಡಲಾಗಿದೆ ಎಂದರೆ ಅದರ ಅಗಾಧತೆ ಅರಿವಾದೀತು. 

ಕೂಟದಿಂದ ಹಲವಾರು ಬಾಬತ್ತುಗಳಿಗೆ ಹಣ ಹರಿದು ಬರುತ್ತಿದೆ.  ಪ್ರವೇಶ ದರ, ಸ್ಮರಣಿಕೆಗಳು, ಅಂಚೆ ಚೀಟಿ ಮಾರಾಟ ಇವುಗಳಿಂದ ಆದಾಯ ಬರುತ್ತದೆ.  ಆದರೆ ಅತೀ ಹೆಚ್ಚು ಆದಾಯ ಒಲಿಂಪಿಕ್ಸ್‌ಗೆ ಸಿಗುವುದು ಟೆಲಿವಿಷನ್ ಪ್ರಸಾರದ ಹಕ್ಕು ಹಾಗೂ ಪ್ರಾಯೋಜಕತ್ವ ಕಂಪೆನಿಗಳಿಂದ. 

ಲಂಡನ್ ಒಲಿಂಪಿಕ್ಸ್ ಬಗ್ಗೆ ಹೇಳುವುದಾದರೆ, ಒಟ್ಟಾರೆ 13 ಬಿಲಿಯನ್ ಪೌಂಡ್‌ಗಳಷ್ಟು ಆದಾಯದ ನಿರೀಕ್ಷೆಯಿದೆ.  ಇದರಿಂದ ಬ್ರಿಟಿಷ್ ಅರ್ಥವ್ಯವಸ್ಥೆಗೆ  ಉಳಿಯುವ ಲಾಭ 4 ಬಿಲಿಯನ್ ಪೌಂಡ್‌ಗಳು. ಬ್ರಿಟನ್‌ನ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮೂಲಗಳ ಪ್ರಕಾರ ಒಲಿಂಪಿಕ್ಸ್‌ಗೆ ಹೂಡಲಾಗಿರುವ ಬಂಡವಾಳ ಸುಮಾರು 9 ಬಿಲಿಯನ್ ಪೌಂಡ್‌ಗಳು. 

ಜಗತ್ತಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ಪೈಪೋಟಿಯ ಸ್ಥಳವಾದ ಒಲಿಂಪಿಕ್ಸ್,  ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಮಾರುಕಟ್ಟೆ ಜಾಲವನ್ನು ವಿಸ್ತರಿಸಲು ಆಯ್ಕೆ ಮಾಡಿಕೊಂಡ ಸ್ಥಳವೂ ಆಗಿದೆ.  ಅತಿಥೇಯ ನಗರಗಳು ಮೂಲ ಸೌಕರ್ಯಗಳ ಜೊತೆಗೆ ಆದಾಯದ ಮಾರ್ಗವನ್ನು ಕಂಡುಕೊಳ್ಳುವ ಒಲಿಂಪಿಕ್ಸ್ ಈಗ ಬೃಹತ್ ಉದ್ಯಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT