ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ವಿದ್ಯುದಾಘಾತ...

Last Updated 4 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಗೃಹ ಬಳಕೆ ವಿದ್ಯುತ್‌ನ ದರದಲ್ಲಿ ಏರಿಕೆಯಾಗಿದೆ. ದೇಶದ ಹಲವು ರಾಜ್ಯಗಳಲ್ಲೂ ಏಪ್ರಿಲ್ 1ರಿಂದ ಅನ್ವಯವಾಗುವಂತೆ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ. ಗ್ರಾಹಕ ಬಳಕೆಯ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ವಿದ್ಯುತ್‌ನ ದರದಲ್ಲಿ ಆಗಿರುವ ಏರಿಕೆಯು ಸ್ವಲ್ಪ ಪ್ರಮಾಣದ್ದೇ ಆಗಿದ್ದರೂ, ಅದು ಗ್ರಾಹಕರ ಜೇಬಿಗೆ ಭಾರವೇ ಆಗಿದೆ.

ದೇಶದಲ್ಲಿನ ಎಲ್ಲಾ ರಾಜ್ಯಗಳಲ್ಲಿ ಗೃಹಬಳಕೆ ಗ್ರಾಹಕರು ಪ್ರತಿ ಯೂನಿಟ್‌ ವಿದ್ಯುತ್‌ಗೆ ಪಾವತಿಸಬೇಕಾದ ಶುಲ್ಕದಲ್ಲಿ ಏಕರೂಪತೆ ಇಲ್ಲ. ಪ್ರತಿ ರಾಜ್ಯವೂ ವಿದ್ಯುತ್ ಖರೀದಿಸಲು ಪಾವತಿಸಬೇಕಾದ ವೆಚ್ಚದಲ್ಲೂ ಏಕರೂಪತೆ ಇಲ್ಲ. ಕೆಲವು ರಾಜ್ಯಗಳು ಪ್ರತಿ ಯೂನಿಟ್‌ ವಿದ್ಯುತ್ ಖರೀದಿಸಲು ಭಾರಿ ಶುಲ್ಕವನ್ನು ಪಾವತಿಸುತ್ತಿವೆ. ಕೆಲವು ರಾಜ್ಯಗಳು ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯುತ್ ಖರೀದಿಸುತ್ತಿವೆ. ಹಲವು ರಾಜ್ಯಗಳು ತಾವು ಖರೀದಿಸಿದ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿವೆ. ಕೆಲವು ರಾಜ್ಯಗಳು ತಾವು ಖರೀದಿಸಿದ್ದಕ್ಕಿಂತ ಹೆಚ್ಚಿನ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿವೆ.

ಎಲ್ಲಾ ರಾಜ್ಯಗಳು ತಮಗೆ ಅಗತ್ಯವಿರುವಷ್ಟು ವಿದ್ಯುತ್ ಅನ್ನು ಉತ್ಪಾದಿಸಲು ಸಾಧ್ಯವಿಲ್ಲದೇ ಇರುವುದರಿಂದ, ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸುತ್ತವೆ. ಹೀಗಾಗಿಯೇ ಪ್ರತೀ ರಾಜ್ಯಗಳು ಖರೀದಿಸುವ ವಿದ್ಯುತ್‌ನ ದರದಲ್ಲಿ ಭಾರಿ ವ್ಯತ್ಯಾಸವಿದೆ. ಬೇರೆ ರಾಜ್ಯಗಳಿಂದ ಖರೀದಿಸುವ ವಿದ್ಯುತ್‌ ಶುಲ್ಕ ಮತ್ತು ಅದರ ಸಾಗಾಟದ ವೆಚ್ಚ, ಸಾಗಾಟದಲ್ಲಿನ ಸೋರಿಕೆಯ ನಷ್ಟವನ್ನು ಕೂಡಿ, ಖರೀದಿ ವೆಚ್ಚವನ್ನು ನಿರ್ಧರಿಸಲಾಗುತ್ತದೆ. ಪ್ರತೀ ರಾಜ್ಯದಲ್ಲಿ ಉತ್ಪಾದಿಸಲಾಗುವ ಮತ್ತು ಆ ರಾಜ್ಯವು ಖರೀದಿಸುವ ವಿದ್ಯುತ್‌ನ ಒಟ್ಟು ಮೊತ್ತವನ್ನು ಲೆಕ್ಕಹಾಕಿ, ಪ್ರತಿ ಯೂನಿಟ್‌ಗೆ ತಗಲುವ ವೆಚ್ಚವನ್ನು ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ನಿರ್ಧರಿಸುತ್ತದೆ. ಕೆಲವು ರಾಜ್ಯಗಳಲ್ಲಿ ಖರೀದಿ ವೆಚ್ಚ ಅತ್ಯಧಿಕವಾಗಿದ್ದರೂ, ರಾಜ್ಯ ಸರ್ಕಾರಗಳು ಸಹಾಯಧನದ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತವೆ. ಹಲವು ರಾಜ್ಯಗಳು ವಿದ್ಯುತ್ ಖರೀದಿ ವೆಚ್ಚದ ಮೇಲೆ ಲಾಭಗಳಿಸುವಷ್ಟು ದರದಲ್ಲಿ, ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿವೆ.

lಮಧ್ಯಪ್ರದೇಶವು ಗರಿಷ್ಠ ದರದಲ್ಲಿ ವಿದ್ಯುತ್ ಖರೀದಿಸುತ್ತಿರುವ ರಾಜ್ಯ. ಆದರೆ ಖರೀದಿಸಿದ ದರಕ್ಕಿಂತ ಹಲವುಪಟ್ಟು ಕಡಿಮೆ ದರದಲ್ಲಿ ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿದೆ

lಸಿಕ್ಕಿಂ ರಾಜ್ಯವು ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿರುವ ರಾಜ್ಯ. ರಾಜ್ಯವು ಪ್ರತಿ ಯೂನಿಟ್‌ಗೆ ₹4.06 ದರದಲ್ಲಿ ವಿದ್ಯುತ್ ಖರೀದಿಸುತ್ತಿದೆ. ಆದರೆ, ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ₹1.10 ದರದಲ್ಲಿ ವಿದ್ಯುತ್ ಪೂರೈಸುತ್ತಿದೆ

lಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಮಿಜೋರಾಂ, ಗೋವಾ, ತ್ರಿಪುರಾ, ಹಿಮಾಚಲ ಪ್ರದೇಶ ಸರ್ಕಾರಗಳು ಖರೀದಿ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಗೃಹ ಬಳಕೆ ಗ್ರಾಹಕರಿಗೆ ವಿದ್ಯುತ್ ಪೂರೈಸುತ್ತಿವೆ

ಏರಿಕೆ ಅನಿವಾರ್ಯವಿರಲಿಲ್ಲ

ಕೋವಿಡ್‌ ಕಾರಣದಿಂದ 2 ವರ್ಷ ಶೇ 40ಕ್ಕಿಂತಲೂ ಹೆಚ್ಚಿನ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ವಿದ್ಯುತ್ಛಕ್ತಿ ಬಳಸದಿದ್ದರೂ ಕನಿಷ್ಠ ದರವನ್ನು ಕೈಗಾರಿಕೋದ್ಯಮಿಗಳು ಪಾವತಿಸಿದ್ದರು. ಆ ಮೂಲಕ ವಿದ್ಯುತ್ ಸರಬರಾಜು ಕಂಪನಿ ಉಚಿತವಾಗಿ ಹಣ ಪಡೆದಂತಾಗಿದೆ. ಜೂನ್ 2021ರಲ್ಲಿ 1 ಎಚ್‌ಪಿ ವಿದ್ಯುತ್‌ಗೆ ₹ 15, 1 ಯುನಿಟ್‌ಗೆ 15 ಪೈಸೆಯಂತೆ ಹೆಚ್ಚಿಸಲಾಗಿತ್ತು. ಆದರೆ, ಮತ್ತೆ ದರ ಹೆಚ್ಚಿರುವುದು ಕೈಗಾರಿಕೋದ್ಯಮಿಗಳನ್ನು ಹೈರಾಣಾಗಿಸಿದೆ. ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆ ಬೇಡ ಎಂದು ನಾನು ಆಯೋಗಕ್ಕೆ ಮನವಿ ಮಾಡಿದ್ದೆ. ಆದರೆ ಅದನ್ನು ಆಯೋಗ ಪರಿಗಣಿಸಿಲ್ಲ.ಖಾದ್ಯತೈಲ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಬಸವಳಿದಿರುವ ಜನರ ಮೇಲೆ ಆಯೋಗ ಬರೆ ಎಳೆದಿದೆ.ಹೆಚ್ಚಿನ ಶುಲ್ಕಕ್ಕೆ ವಿದ್ಯುತ್ ಖರೀದಿಸಿ ಕಡಿಮೆ ಬೆಲೆಗೆ ಹೊರರಾಜ್ಯಕ್ಕೆ ಮಾರುತ್ತಿರುವುದರಿಂದ ಉಂಟಾಗುತ್ತಿರುವ ನಷ್ಟವನ್ನು ದರ ಏರಿಕೆಯ ಮೂಲಕ ಸರಿದೂಗಿಸಿಕೊಳ್ಳುತ್ತಿರುವುದು ಎಷ್ಟು ಸರಿ?

ವಿದ್ಯುತ್ ಪೂರೈಕೆಯಲ್ಲಿ ಅನಗತ್ಯ ವೆಚ್ಚಗಳ ಏರಿಕೆ, ವಿದ್ಯುತ್ ಖರೀದಿಯಲ್ಲಿ ರಾಜಕೀಯ ಹಸ್ತಕ್ಷೇಪ, ಸರ್ಕಾರದ ಸಂಸ್ಥೆಗಳಿಂದ ಬರಬೇಕಾದ ₹511.23 ಕೋಟಿ ವಿದ್ಯುತ್ ಶುಲ್ಕ ವಸೂಲಿ ಮಾಡುವಲ್ಲಿ ವಿಫಲವಾಗಿರುವುದು, ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಇಲ್ಲದೆ ವಿದ್ಯುತ್ ಪೂರೈಕೆ, ವಿದ್ಯುತ್ ಸಾಗಾಣಿಕೆ ಮತ್ತು ವಿತರಣೆಯ ನಷ್ಟ – ಈ ಎಲ್ಲವನ್ನೂ ವೈಜ್ಞಾನಿಕ ಕ್ರಮಗಳ ಮೂಲಕ ಸರಿಪಡಿಸಬೇಕಾಗಿತ್ತು. ಅದನ್ನು ಬಿಟ್ಟು ದರ ಹೆಚ್ಚಿಸಿ ನಷ್ಟವನ್ನು ತುಂಬಿಕೊಳ್ಳುತ್ತಿರುವುದು ಜನಸಾಮಾನ್ಯರ ಬದುಕನ್ನು ಹಿಂಡಿದಂತಾಗಿದೆ. 2020 - 21ರಲ್ಲಿ ಗ್ರಾಹಕರ ಅರಿವು ಕಾರ್ಯಕ್ರಮಕ್ಕಾಗಿ ₹23 ಲಕ್ಷ ವೆಚ್ಚವಾಗಿದೆ ಎಂದು ಸೆಸ್ಕ್ ಹೇಳಿದೆ. ಲಾಕ್‌ಡೌನ್‌ನಲ್ಲಿ ಅಷ್ಟೊಂದು ಹಣ ಹೇಗೆ ಖರ್ಚಾಯಿತು? ಕೈಗಾರಿಕೆಗಳು ಹಾಗೂ ಗ್ರಾಹಕರೊಂದಿಗೆ ಸಭೆ ನಡೆಸಿಲ್ಲ. ಆ ಕುರಿತ ಮಾಹಿತಿಯೂ ಇಲ್ಲ. ಇಂಥ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿದ್ದರೆ ದರ ಏರಿಕೆಯ ಅನಿವಾರ್ಯತೆಯೇ ಉಂಟಾಗುತ್ತಿರಲಿಲ್ಲ.

– ವಾಸು,ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ

ನಮಗೆ ದುಬಾರಿ, ಹೊರರಾಜ್ಯಕ್ಕೆ ಅಗ್ಗ!

ರಾಜ್ಯದಲ್ಲಿನ ಕೈಗಾರಿಕೆಗಳು ಹಾಗೂ ಇತರೆ ಗ್ರಾಹಕರಿಗೆ ವಿಧಿಸುವ ವಿದ್ಯುತ್ ಶುಲ್ಕಕ್ಕಿಂತ ತೀರಾ ಅಗ್ಗದ ದರಕ್ಕೆ ಹೊರರಾಜ್ಯದವರಿಗೆ ಮಾರಾಟ ಮಾಡಲಾಗುತ್ತಿದೆ. ಹೊರರಾಜ್ಯಕ್ಕೆ ಪ್ರತಿ ಯೂನಿಟ್‌ಗೆ ಕೇವಲ ₹2.38 ದರ ನಿಗದಿಪಡಿಸಲಾಗಿದೆ. ಈ ತಾರತಮ್ಯ ಸರಿಪಡಿಸಬೇಕು.

ಕೇಂದ್ರ ಸರ್ಕಾರದ ವಿದ್ಯುತ್ ಉತ್ಪಾದನಾ ಘಟಕಗಳಿಂದ ವಿದ್ಯುತ್ ಖರೀದಿಸದಿದ್ದರೂ ನಿರ್ದಿಷ್ಟ ಶುಲ್ಕವನ್ನು ರಾಜ್ಯಗಳು ಪಾವತಿಸಲೇಬೇಕು. ಅದು ಕೂಡ ನಷ್ಟಕ್ಕೆ ಕಾರಣ. ವಿದ್ಯುತ್‌ ಕ್ಷೇತ್ರದಲ್ಲಿ ತಾಂತ್ರಿಕ ನೈಪುಣ್ಯ ಹೊಂದಿರದ ಐಐಎಸ್‌, ಕೆಎಎಸ್‌ ದರ್ಜೆಯ ಅಧಿಕಾರಿಗಳನ್ನೇ ಎಸ್ಕಾಂಗಳಿಗೆ ನೇಮಕ ಮಾಡುವುದರಿಂದ ಹೆಚ್ಚಿನ ಸುಧಾರಣೆ ನಿರೀಕ್ಷಿಸಲು ಸಾಧ್ಯವಿಲ್ಲ.

– ಲಕ್ಷ್ಮಿಕಾಂತ್,ಕೆಪಿಟಿಸಿಎಲ್‌ನ ನಿವೃತ್ತ ಮುಖ್ಯ ಎಂಜಿನಿಯರ್

ವಿದ್ಯುತ್ ಉತ್ಪಾದನೆ

ದೇಶದಲ್ಲಿ ಎಲ್ಲ ವಿದ್ಯುತ್ ಮೂಲಗಳಿಂದ ವರ್ಷದಲ್ಲಿ 3.95 ಲಕ್ಷ ಮೆಗಾವಾಟ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದಿಸುವ ಉಷ್ಣವಿದ್ಯುತ್ ಸ್ಥಾವರಗಳದ್ದು ಸಿಂಹಪಾಲು. ಶೇ 60ರಷ್ಟು ವಿದ್ಯುತ್ ಅನ್ನು ಈ ಸ್ಥಾವರಗಳು ಪೂರೈಸುತ್ತವೆ. ನಂತರದ ಸ್ಥಾನಗಳಲ್ಲಿ ಸೌರ ವಿದ್ಯುತ್, ಜಲವಿದ್ಯುತ್ ಹಾಗೂ ಪವನ ವಿದ್ಯುತ್‌ ಉತ್ಪಾದನಾ ಘಟಕಗಳಿವೆ.

ಆಮದು ಮಾಡಿಕೊಂಡ ಕಲ್ಲಿದ್ದಲು, ಡೀಸೆಲ್, ನೈಸರ್ಗಿಕ ಅನಿಲ ಬಳಸಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆಮದು ವೆಚ್ಚ ಹೆಚ್ಚು ಇರುವ ಕಾರಣ, ವಿದ್ಯುತ್ ಉತ್ಪಾದನೆ ವೆಚ್ಚ ಹೆಚ್ಚಳವಾಗುತ್ತಿದೆ. ಭೂತಾನ್‌ ದೇಶದಿಂದ ವಿದ್ಯುತ್ ಖರೀದಿಗೆ ಸರ್ಕಾರ ಹೆಚ್ಚು ಹಣ ಪಾವತಿಸುತ್ತಿದ್ದು, ಶುಲ್ಕ ಏರಿಕೆಗೆ ಇವೆಲ್ಲವೂ ಕಾರಣಗಳಾಗಿವೆ.

ವಿದ್ಯುತ್ ಮೂಲ

ದೇಶದಲ್ಲಿ ಅತಿಹೆಚ್ಚು ವಿದ್ಯುತ್‌ ಅನ್ನು ಖಾಸಗಿ ವಲಯವೇ ಉತ್ಪಾದಿಸುತ್ತಿದೆ. ಒಟ್ಟು ಉತ್ಪಾದನೆಯ ಶೇ 48.50ರಷ್ಟು ಖಾಸಗಿ ವಿದ್ಯುತ್ ಗ್ರಿಡ್‌ಗಳಿಂದ ಪೂರೈಕೆಯಾಗುತ್ತದೆ. ವಿವಿಧ ರಾಜ್ಯಗಳ ಗ್ರಿಡ್‌ಗಳಿಂದ 1.04 ಲಕ್ಷ ಮೆಗಾವಾಟ್ ಹಾಗೂ ಕೇಂದ್ರದ ಗ್ರಿಡ್‌ನಿಂದ 99 ಸಾವಿರ ಮೆಗಾವಾಟ್ ವಿದ್ಯುತ್ ಪೂರೈಕೆ ಆಗುತ್ತಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ವಿದ್ಯುತ್ ಉತ್ಪಾದನಾ ಘಟಕಗಳಿಗಿಗಿಂತ ಖಾಸಗಿ ವಲಯದ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಿರುವುದೂ ಸಹ ಬೆಲೆ ಏರಿಕೆಗೆ ಕಾರಣವಾಗಿದೆ. ಹೆಚ್ಚಿನ ದರಕ್ಕೆ ಖಾಸಗಿ ಘಟಕಗಳಿಂದ ವಿವಿಧ ರಾಜ್ಯ ಸರ್ಕಾರಗಳು ವಿದ್ಯುತ್ ಖರೀದಿ ಮಾಡುತ್ತವೆ. ಖರೀದಿ ವೆಚ್ಚ ಹೆಚ್ಚಾದ ಕಾರಣ, ಅದು ಗ್ರಾಹಕರ ಮೇಲೆ ಹೊರೆಯಾಗುತ್ತಿದೆ.

(ಆಧಾರ: ಕೇಂದ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಆಯಾ ರಾಜ್ಯಗಳ ವಿದ್ಯುತ್ ದರ ಪಟ್ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT