ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ- ಅಗಲ| ‘ಸಹಕಾರ’ಕ್ಕೆ ನಿಯಂತ್ರಣ

Last Updated 4 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಬ್ಯಾಂಕಿಂಗ್‌ ಕ್ಷೇತ್ರದ ಸುಧಾರಣೆಯ ದಿಕ್ಕಿನಲ್ಲಿ ಕೆಲವು ಕ್ರಮಗಳನ್ನು ಕೈಗೊಂಡಿದ್ದ ಸರ್ಕಾರವು ಈಗ ಸಹಕಾರ ಕ್ಷೇತ್ರದ ಸುಧಾರಣೆಗೆ ಮುಂದಾಗಿದೆ. ‘ಬ್ಯಾಂಕಿಂಗ್‌ ನಿಯಂತ್ರಣ ತಿದ್ದುಪಡಿ ಮಸೂದೆ–2020ನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಸಹಕಾರ ಬ್ಯಾಂಕ್‌ಗಳಲ್ಲಿ ಆರ್‌ಬಿಐಯ ಹಿಡಿತವನ್ನು ಗಟ್ಟಿಗೊಳಿಸುವ ಪ್ರಸ್ತಾಪವೂ ಇದರಲ್ಲಿದೆ

ಕೃಷಿಕರು, ವರ್ತಕರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಜನರ ಆರ್ಥಿಕ ಏಳಿಗೆಗೆ ನಾಲ್ಕಾರು ದಶಕಗಳಿಂದ ನೆರವು ನೀಡುತ್ತಾ ಬಂದಿರುವ ಕೆಲವು ಸಹಕಾರ ಬ್ಯಾಂಕ್‌ಗಳು ಈಗ ಅಪಾಯದ ಸ್ಥಿತಿಯಲ್ಲಿವೆ. ಆಡಳಿತದಲ್ಲಿ ನುಸುಳಿದ ರಾಜಕೀಯ, ವೃತ್ತಿಪರತೆಯ ಕೊರತೆ, ಸ್ವಜನಪಕ್ಷಪಾತ, ಕೊಟ್ಟ ಸಾಲ ಮರಳಿ ಬಾರದಿರುವುದೇ ಮುಂತಾದ ಹತ್ತಾರು ಕಾರಣಗಳಿಂದ ಸಹಕಾರ ಬ್ಯಾಂಕ್‌ಗಳು ಉಸಿರುಗಟ್ಟಿದ ಸ್ಥಿತಿಯಲ್ಲಿವೆ.

ಸಹಕಾರ ಬ್ಯಾಂಕ್‌ಗಳಿಗೆ ಪ್ರತ್ಯೇಕ ಕಠಿಣ ನಿಯಮಾವಳಿಗಳಿದ್ದರೂ ಅದನ್ನು ಅಷ್ಟೇ ನಯವಾಗಿ ಪಕ್ಕಕ್ಕೆ ಸರಿಸಿ ‘ವ್ಯವಹಾರ’ ನಡೆಸಿದ ಉದಾಹರಣೆಗಳು ಸಾಕಷ್ಟಿವೆ. ಪರಿಣಾಮ, ಹಲವು ಬ್ಯಾಂಕ್‌ಗಳು ಮುಚ್ಚಿವೆ. ಇನ್ನೂ ಕೆಲವು ನಷ್ಟದ ಅಂಚಿಗೆ ಬಂದಿವೆ. ಹೆಚ್ಚಿನ ಬಡ್ಡಿಯ ನಿರೀಕ್ಷೆಯಲ್ಲಿ ಇಂಥ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರು ಕೈಸುಟ್ಟುಕೊಂಡಿದ್ದಾರೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿಗಳಿಗೆ ಗರಿಷ್ಠ ₹ 1ಲಕ್ಷ ವಿಮಾ ಖಾತರಿ ಇದೆ (ಈಗ ಅದನ್ನು ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ). ಆದರೆ, ಸಹಕಾರ ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿಗೆ ಇಂಥ ಯಾವುದೇ ಖಾತರಿ ಇಲ್ಲ. ಬ್ಯಾಂಕ್‌ ನಷ್ಟ ಅನುಭವಿಸಿದರೆ ಠೇವಣಿದಾರರಿಗೆ ಒಂದು ರೂಪಾಯಿಯೂ ಮರಳಿ ಬಾರದಂಥ ಸ್ಥಿತಿ ಇದೆ.

ನಗರ ಸಹಕಾರಿ ಬ್ಯಾಂಕ್‌ಗಳ ಸಂಖ್ಯೆ


*ಗ್ರಾಮೀಣ ಸಹಕಾರ ಸಂಖ್ಯೆಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿರುವ ನಗರ ಸಹಕಾರಿ ಬ್ಯಾಂಕ್‌ಗಳು ಆಸ್ತಿ ಮೌಲ್ಯದ ವಿಚಾರದಲ್ಲಿ ಶೇ 35ರಷ್ಟು ಪಾಲು ಹೊಂದಿವೆ

ಸಹಕಾರ ಬ್ಯಾಂಕ್ ಬಿಕ್ಕಟ್ಟುಕೆಲವು ನಿದರ್ಶನಗಳು

- ಸಹಕಾರ ಬ್ಯಾಂಕ್‌ಗಳ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂಬ ಸುಳಿವು ನೀಡಿದ್ದು 2001–02ರಲ್ಲಿ ನಡೆದ ಮಹದೇವಪುರ ಸಹಕಾರ ಬ್ಯಾಂಕ್‌ ಹಗರಣ. ಈ ಪ್ರಕರಣದಿಂದಾಗಿ ನಗರದ ಸಹಕಾರ ಬ್ಯಾಂಕ್‌ಗಳ (ಯುಸಿಬಿ) ಮಾರುಕಟ್ಟೆ ಪಾಲು ಗಣನೀಯವಾಗಿ ಕುಸಿಯುತ್ತಾ ಬಂದಿತು. ಸಹಕಾರ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕುವ ವರದಿಗಳು ಹೆಚ್ಚಾಗುತ್ತಾ ಬಂದವು

- ಕಳೆದ ಸೆಪ್ಟೆಂಬರ್‌ನಲ್ಲಿ ಪಂಜಾಬ್ ಮಹಾರಾಷ್ಟ್ರ ಸಹಕಾರ ಬ್ಯಾಂಕ್ (ಪಿಎಂಸಿ) ಇದಕ್ಕೊಂದು ತಾಜಾ ನಿದರ್ಶನ. ಇಡೀ ಬ್ಯಾಂಕ್‌ನ ಆಸ್ತಿಯ ಪೈಕಿ ಶೇ 73ರಷ್ಟು (₹6,500) ಮೊತ್ತವನ್ನು ರಿಯಲ್ ಎಸ್ಟೇಟ್ ಕಂಪನಿ ಎಚ್‌ಡಿಐಎಲ್‌ಗೆ ನೀಡಲಾಗಿತ್ತು. ಆದರೆ ಕಂಪನಿ ದಿವಾಳಿಯಾಯಿತು. ಇದು ವಸೂಲಾಗದ ಸಾಲದ (ಎನ್‌ಪಿಎ) ಪಟ್ಟಿಗೆ ಸೇರಿತು. ಬ್ಯಾಂಕ್ ಸಂಕಷ್ಟದಲ್ಲಿದೆ ಎಂದರಿತ ಹೂಡಿಕೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡ. ಆಘಾತದಿಂದ ಇಬ್ಬರು ಮೃತಪಟ್ಟರು. ಮತ್ತಿಬ್ಬರಿಗೆ ಹೃದಾಯಾಘಾತವಾಯಿತು

- ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್ ಕೂಡ ಬಿಕ್ಕಟ್ಟಿನ ಸುಳಿಯಲ್ಲಿದೆ. ₹25 ಸಾವಿರ ಕೋಟಿ ಮೊತ್ತದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಎನ್‌ಸಿಪಿ ಮುಖಂಡ ಶರದ್ ಪವಾರ್ ಮತ್ತು ಅವರ ಸೋದರಳಿಯ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ

- ರಾಜ್ಯದಲ್ಲೂ ಕೆಲವು ಸಹಕಾರ ಬ್ಯಾಂಕ್‌ಗಳಲ್ಲಿ ಅವ್ಯವಹಾರದ ವಾಸನೆ ಬಂದಿದೆ. ಕಾಂಗ್ರೆಸ್ ಮುಖಂಡ ರೆಹಮಾನ್‌ ಖಾನ್ ಅವರು ಅಮಾನತ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ (1989–2002) ಸುಮಾರು ₹100 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಅವರ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಯಾವುದೇ ಭದ್ರತೆ ಇಲ್ಲದೆ ಸಾಲ ಮಂಜೂರು ಮಾಡಿ, ಅವ್ಯವಹಾರ ನಡೆಸಿದ್ದಾರೆ ಎಂಬುದು ಅವರ ಮೇಲಿನ ಆರೋಪ

- ಬೆಂಗಳೂರಿನ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಗ್ರಾಹಕರಲ್ಲೂ ಇತ್ತೀಚೆಗೆ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಠೇವಣಿ ಮೊತ್ತದಲ್ಲಿ ₹35 ಸಾವಿರಕ್ಕಿಂತ ಹೆಚ್ಚು ಹಣ ತೆಗೆಯುವಂತಿಲ್ಲ ಎಂಬ ಆರ್‌ಬಿಐ ಸೂಚನೆಯಿಂದ ಠೇವಣಿದಾರರು ದಿಕ್ಕೆಟ್ಟು ಬ್ಯಾಂಕ್ ಎದುರು ಜಮಾಯಿಸಿದ್ದರು. ₹2400 ಕೋಟಿ ವ್ಯವಹಾರ ನಡೆಸುವ ಬ್ಯಾಂಕ್ ಆರು ಶಾಖೆಗಳನ್ನು ಹೊಂದಿದೆ. ಬ್ಯಾಂಕ್ ವ್ಯವಹಾರದಲ್ಲಿ ಕೆಲವು ದೋಷಗಳು ಕಂಡುಬಂದ ಕಾರಣ ಆರ್‌ಬಿಐ ಕೆಲವೊಂದು ನಿರ್ಬಂಧಗಳನ್ನು ವಿಧಿಸಿತ್ತು ಎಂದು ವರದಿಯಾಗಿತ್ತು.

ಸಾಲ ನೀಡಿಕೆಯಲ್ಲಿಯೇ ನ್ಯೂನತೆ

ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಿಗಿಂತ, ಸಹಕಾರ ಬ್ಯಾಂಕ್‌ಗಳು ಹಾಗೂ ಸಹಕಾರ ಸೊಸೈಟಿಗಳು ಠೇವಣಿಗಳಿಗೆ ಹೆಚ್ಚಿನ ದರದ ಬಡ್ಡಿ ನೀಡುತ್ತವೆ. ಈ ಒಂದು ಅಂಶವೇ ಜನ ಸಾಮಾನ್ಯರು, ಅದರಲ್ಲೂ ನಿವೃತ್ತರು ಇಂತಹ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಪ್ರಮುಖ ಕಾರಣ. ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ನ (ಪಿಎಂಸಿಬಿ) ಪ್ರಕರಣದಲ್ಲೂ ಪರಿಸ್ಥಿತಿ ಹೀಗೇ ಇತ್ತು. ಈ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿ ಇರಿಸಿದ್ದವರಲ್ಲಿ ಹಿರಿಯ ನಾಗರಿಕರ ಪ್ರಮಾಣ ಅಧಿಕವಾಗಿತ್ತು.

ಹೆಚ್ಚಿನ ಬಡ್ಡಿ ನೀಡಿ ಸಂಗ್ರಹಿಸಿದ ಠೇವಣಿಯ ಹಣವನ್ನು ಸಾಲದ ರೂಪದಲ್ಲಿ ನೀಡಿದಾಗ ಅದಕ್ಕೂ ಹೆಚ್ಚಿನ ಬಡ್ಡಿ ವಿಧಿಸಬೇಕಾಗುತ್ತದೆ. ಇದಲ್ಲದೆ, ಸಹಕಾರ ಬ್ಯಾಂಕ್‌ಗಳ ಸಾಲ ನೀಡಿಕೆ ಪ್ರಕ್ರಿಯೆಯಲ್ಲಿಯೇ ನ್ಯೂನತೆ ಇದೆ. ಇಂತಹ ಬ್ಯಾಂಕ್‌ಗಳು ನಷ್ಟವಾಗಲು ಇಂಥ ನ್ಯೂನತೆಗಳೇ ಕಾರಣ ಎಂದು
ವಿಶ್ಲೇಷಿಸಲಾಗಿದೆ.

ಸಾರ್ವಜನಿಕ ವಲಯದ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಪ್ರಕ್ರಿಯೆ ಕಠಿಣ. ಆದರೆ, ಸಹಕಾರ ಬ್ಯಾಂಕ್‌ಗಳಲ್ಲಿ ಅತ್ಯಂತ ಸರಳ ಪ್ರಕ್ರಿಯೆ ಮೂಲಕ ಸಾಲ ನೀಡಲಾಗುತ್ತದೆ. ಆಸ್ತಿ ಅಡಮಾನದೊಂದಿಗೆ ಸಾಲ ನೀಡುವುದರ ಜತೆಗೆ, ಸರ್ಕಾರಿ ನೌಕರರ ಶೂರಿಟಿ ಆಧಾರದಲ್ಲೂ ಸಾಲ ನೀಡಲಾಗುತ್ತದೆ. ಒಂದೆರಡು ದಿನಗಳಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ. ಸರಿಯಾದ ದಾಖಲೆ ಪತ್ರಗಳು ಇಲ್ಲದಿದ್ದರೂ, ಸಾಲ ನೀಡಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಸಹಕಾರ ಬ್ಯಾಂಕ್‌ಗಳು ಸಾಲಗಳ ಮೇಲೆ ಅಧಿಕ ದರದ ಬಡ್ಡಿ ವಿಧಿಸುತ್ತದೆ.ಸಾಲ ನೀಡಿಕೆ ಪ್ರಕ್ರಿಯೆಯನ್ನು ನಿಯಂತ್ರಿಸುವ ಅಧಿಕಾರ ಬ್ಯಾಂಕ್‌ನ ಆಡಳಿತ ಮಂಡಳಿಗೆ ಇರುತ್ತದೆ. ಯಾರಿಗೆ ಸಾಲ ನೀಡಬೇಕು ಎಂಬುದನ್ನುಆಡಳಿತ ಮಂಡಳಿಯೇ ನಿರ್ಧರಿಸುತ್ತದೆ. ಆಡಳಿತ ಮಂಡಳಿ ಸದಸ್ಯರ ಹಿತಾಸಕ್ತಿಗೆ ಅನುಗುಣವಾಗಿ ಸಾಲಗಳನ್ನು ನೀಡಲಾಗುತ್ತದೆ.

ದುರ್ಬಲ ಆಧಾರಗಳ ಮೇಲೆ ಸಾಲ ನೀಡುವುದರಿಂದಲೇ, ಅಂತಹ ಸಾಲಗಳು ವಸೂಲಾಗುವ ಪ್ರಮಾಣ ಕಡಿಮೆ ಇರುತ್ತದೆ. ಒಂದೊಮ್ಮೆ ಆ ಸಾಲ ವಸೂಲಾಗದೇ ಇದ್ದಲ್ಲಿ, ಅದನ್ನು ಎನ್‌ಪಿಎ ಎಂದೇ ಪರಿಗಣಿಸಲಾಗುತ್ತದೆ. ಅಂತಿಮವಾಗಿ ಇದು ಠೇವಣಿದಾರರ ಹಣ ನಷ್ಟಕ್ಕೆ ಕಾರಣವಾಗುತ್ತದೆ.

ಠೇವಣಿದಾರರ ಹಿತರಕ್ಷಣೆಯ ಗುರಿ

ಸಹಕಾರ ಬ್ಯಾಂಕ್‌ಗಳಲ್ಲಿ ನಡೆದಿರುವ ಅವ್ಯವಹಾರಗಳ ಪಟ್ಟಿಮಾಡಿದರೆ ತುಂಬಾ ದೀರ್ಘವಾಗಬಹುದು. ಕೈಸುಟ್ಟುಕೊಂಡ ಠೇವಣಿದಾರರ ಸಂಖ್ಯೆಯೂ ಹಲವು ಲಕ್ಷಗಳಾಗಬಹುದು. ಆದರೆ ಇಂಥ ಅವ್ಯವಹಾರ, ಅಕ್ರಮಗಳನ್ನು ತಡೆಯಲು ಕೈಗೊಂಡಿರುವ ನಿಯಂತ್ರಣ ಕ್ರಮಗಳು ತುಂಬಾ ಕಡಿಮೆ.

ಪಂಜಾಬ್‌ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ನಲ್ಲಿಕಳೆದ ವರ್ಷ ಬೆಳಕಿಗೆ ಬಂದ ಬಹುಕೋಟಿ ಹಗರಣವು ಸಹಕಾರ ಬ್ಯಾಂಕಿಂಗ್‌ ಕ್ಷೇತ್ರ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು. ಉದ್ದೇಶಿತ ತಿದ್ದುಪಡಿಗೆ ಈ ಪ್ರಕರಣವೇ ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ. ‘ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ನೆರವು ನೀಡಿ, ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಮಾಡಿ ಸಹಕಾರ ಬ್ಯಾಂಕ್‌ಗಳನ್ನು ಬ್ಯಾಂಕಿಂಗ್‌ ಕ್ಷೇತ್ರದ ಇತರ ಬ್ಯಾಂಕ್‌ಗಳ ಮಟ್ಟಕ್ಕೆ ತರಬೇಕಾಗಿದೆ. ಠೇವಣಿದಾರರ ಹಿತಾಸಕ್ತಿ ಕಾಯಬೇಕಾದರೆ ಇಂಥ ಸುಧಾರಣೆಗಳನ್ನು ಮಾಡುವುದು ಅಗತ್ಯ. ಆರ್‌ಬಿಐಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಇಂಥ ಬ್ಯಾಂಕ್‌ಗಳಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವುದು ಮತ್ತು ಗುಣಮಟ್ಟದ ಸೇವೆಯನ್ನು ಖಾತರಿಪಡಿಸುವುದು ತಿದ್ದುಪಡಿಯ ಉದ್ದೇಶ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಹೇಳಿದ್ದಾರೆ.

ಯಾವುದಕ್ಕೆ ಅನ್ವಯವಿಲ್ಲ?

- ಪ್ರಾಥಮಿಕ ಕೃಷಿ ಸಾಲ ಸಹಕಾರ ಸಂಘಗಳು

- ಕೃಷಿ ಅಭಿವೃದ್ಧಿಗೆ ದೀರ್ಘಾವಧಿ ಸಾಲ ನೀಡುವ ಪ್ರಾಥಮಿಕ ಉದ್ದೇಶ ಹೊಂದಿರುವ ಸಹಕಾರ ಸಂಘಗಳು

ಬದಲಾವಣೆ ಮತ್ತು ನಿರೀಕ್ಷೆ

ಉದ್ದೇಶಿತ ತಿದ್ದುಪಡಿಯ ಪ್ರಕಾರ, ಆರ್‌ಬಿಐ ರೂಪಿಸಿರುವ ಬ್ಯಾಂಕಿಂಗ್‌ನ ಎಲ್ಲಾ ನಿಯಮಾವಳಿಗಳು ಸಹಕಾರ ಬ್ಯಾಂಕ್‌ಗಳಿಗೂ ಅನ್ವಯವಾಗಲಿವೆ. ಹಂತಹಂತವಾಗಿ ಇವುಗಳಿಗೆ ಹೊಂದಿಕೊಳ್ಳಲು ಬೇಕಾದಷ್ಟು ಕಾಲಾವಕಾಶ ಮತ್ತು ತರಬೇತಿಯನ್ನು ಸಿಬ್ಬಂದಿಗೆ ನೀಡಲಾಗುವುದು.

ಸಹಕಾರ ಬ್ಯಾಂಕ್‌ಗಳಲ್ಲಿ ರಾಚನಿಕವಾಗಿ ಕೆಲವು ಬದಲಾವಣೆಗಳನ್ನು ಮಸೂದೆಯಲ್ಲಿ ಸೂಚಿಸಲಾಗಿದೆ. ಪ್ರತಿ ಸಹಕಾರ ಬ್ಯಾಂಕ್‌ಗೆ ಆರ್‌ಬಿಐಯು ಒಬ್ಬ ಕಾರ್ಯನಿರ್ವಹಣಾಧಿಕಾರಿಯನ್ನು (ಸಿಇಒ) ನೇಮಿಸಲಿದೆ.

ಬ್ಯಾಂಕ್‌ಗಳ ಟ್ರಸ್ಟ್‌ ಅಥವಾ ಆಡಳಿತ ಮಂಡಳಿಯು ಮುಂದುವರಿಯುವುದಾದರೂ ಎಲ್ಲಾ ವ್ಯವಹಾರಗಳಿಗೆ ಸಿಇಒ ಅವರ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಲಿದೆ. ಬ್ಯಾಂಕ್‌ನ ಲೆಕ್ಕಪತ್ರ ನಿರ್ವಹಣೆ ಆರ್‌ಬಿಐ ನಿಯಮಾವಳಿಯಂತೆಯೇ ನಡೆಯಬೇಕಾಗುತ್ತದೆ.

ಬ್ಯಾಂಕ್‌ನಲ್ಲಿ ಅವ್ಯವಹಾರ ಕಂಡುಬಂದಲ್ಲಿ ಆಡಳಿತ ಮಂಡಳಿಯನ್ನು ಅಮಾನತುಗೊಳಿಸುವ ಅಧಿಕಾರ ಆರ್‌ಬಿಐಗೆ ಇರುತ್ತದೆ.

ಗ್ರಾಹಕರಿಗೆ ಲಾಭ: ಉದ್ದೇಶಿತ ತಿದ್ದುಪಡಿ ಜಾರಿಯಾದರೆ ಠೇವಣಿದಾರರ ಹಣಕ್ಕೆ ಭದ್ರತೆ ಲಭಿಸಬಹುದು. ಇತರ ಬ್ಯಾಂಕ್‌ಗಳ ಠೇವಣಿಗೆ ಇರುವಂತೆ ವಿಮಾ ಭದ್ರತೆ ಲಭಿಸುವುದು ಒಂದೆಡೆಯಾದರೆ, ಆರ್‌ಬಿಐ ಕಣ್ಗಾವಲು ಇದ್ದರೆ ಅಕ್ರಮಗಳಿಗೆ ಕಡಿವಾಣ ಬಿದ್ದು, ಆ ಮೂಲಕವೂ ಹಣಕ್ಕೆ ಭದ್ರತೆ ಒದಗಬಹುದು ಎಂಬ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT