ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ಇಟಿಎಫ್ ಜನಪ್ರಿಯತೆಯ ನಾಗಾಲೋಟ

Last Updated 8 ಡಿಸೆಂಬರ್ 2021, 15:42 IST
ಅಕ್ಷರ ಗಾತ್ರ

ವರ್ಷದ ಆರಂಭದಲ್ಲಿ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನದಲ್ಲಿ ಪೇಟಿಎಂ ಮನಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವರುಣ್ ಶ್ರೀಧರ್ ಅವರು ವಿನಿಮಯ ವಹಿವಾಟು ನಿಧಿಗಳ (ಇಟಿಎ‌ಫ್) ಬಗ್ಗೆ ಒಂದೆರಡು ಮಾತುಗಳನ್ನು ಆಡಿದ್ದರು. ‘ಭಾರತದಲ್ಲಿ ಇಂದು ಇಟಿಎಫ್‌ ಮಾರುಕಟ್ಟೆ ಬಹಳ ಚಿಕ್ಕದಿದೆ. ಆದರೆ, ಅಮೆರಿಕದಲ್ಲಿ ಸಣ್ಣ ಹೂಡಿಕೆದಾರರಲ್ಲಿ ಬಹುತೇಕರು ಇಟಿಎಫ್‌ಗಳ ಮೂಲಕ ಹೂಡಿಕೆ ಮಾಡುತ್ತಾರೆ’ ಎಂದು ಅವರು ಹೇಳಿದ್ದರು. ಇಟಿಎಫ್‌ಗಳು ಅತ್ಯಂತ ಕಡಿಮೆ ಶುಲ್ಕ ಪಡೆಯುವ ಹೂಡಿಕೆ ಉತ್ಪನ್ನಗಳಾಗಿರುವ ಕಾರಣ, ಮುಂದಿನ ವರ್ಷಗಳಲ್ಲಿ ಭಾರತದ ಹಣಕಾಸು ಉತ್ಪನ್ನಗಳ ಮಾರುಕಟ್ಟೆಯಲ್ಲಿ ಇವು ದೊಡ್ಡ ಪಾಲು ಪಡೆಯಬಹುದು ಎಂಬ ಮಾತನ್ನೂ ಅವರು ಹೇಳಿದ್ದರು.

ಶ್ರೀಧರ್ ಅವರ ಮಾತಿಗೆ ಇಂಬುಕೊಡುವಂತೆ ಇವೆ ಇಟಿಎಫ್‌ಗೆ ಸಂಬಂಧಿಸಿದ ಅಂಕಿ–ಅಂಶಗಳು. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದಲ್ಲಿ ಚಾಲ್ತಿಯಲ್ಲಿ ಇರುವ ಇಟಿಎಫ್‌ ಹೂಡಿಕೆ ಖಾತೆಗಳ ಸಂಖ್ಯೆಯು69.05 ಲಕ್ಷ. ಈ ಅವಧಿಯಲ್ಲಿ ಚಿನ್ನದ ಇಟಿಎಫ್ ಖಾತೆಗಳ ಸಂಖ್ಯೆ24.59 ಲಕ್ಷ. ಒಂದು ವರ್ಷದ ಹಿಂದೆ, ಅಂದರೆ 2020ರ ಸೆಪ್ಟೆಂಬರ್‌ ತ್ರೈಮಾಸಿಕದ ಕೊನೆಯಲ್ಲಿ ದೇಶದಲ್ಲಿನ ಇಟಿಎಫ್‌ ಖಾತೆಗಳ ಸಂಖ್ಯೆ28.67 ಲಕ್ಷ ಮಾತ್ರ. ಚಿನ್ನದ ಇಟಿಎಫ್‌ ಖಾತೆಗಳ ಸಂಖ್ಯೆಯು7.59 ಲಕ್ಷ ಆಗಿತ್ತು. ಮಾಮೂಲಿ ಇಟಿಎಫ್‌ ಖಾತೆಗಳ ಪ್ರಮಾಣವು ಒಂದು ವರ್ಷದಲ್ಲಿ ಶೇಕಡ 140.84ರಷ್ಟು ಹೆಚ್ಚಳ ಆಗಿದೆ. ಚಿನ್ನದ ಇಟಿಎಫ್‌ ಖಾತೆಗಳ ಪ್ರಮಾಣವು ಶೇಕಡ 223.97ರಷ್ಟು ಏರಿಕೆ ದಾಖಲಿಸಿದೆ! ಈ ಏರಿಕೆಯ ಪ್ರಮಾಣವು ದೇಶದಲ್ಲಿ ಇಟಿಎಫ್‌ಗಳು ಪಡೆದುಕೊಳ್ಳುತ್ತಿರುವ ಜನಪ್ರಿಯತೆಯನ್ನು ಹೇಳುತ್ತಿವೆ.

ಈ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ ಆರು ಇಟಿಎಫ್‌ಗಳು ಹೊಸದಾಗಿ ಶುರುವಾಗಿವೆ. ದೇಶದ ಹಣಕಾಸು ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ಇಟಿಎಫ್‌ ಯೋಜನೆಗಳ ಸಂಖ್ಯೆಯು 103 (11 ಚಿನ್ನದ ಇಟಿಎಫ್‌ ಯೋಜನೆಗಳನ್ನು ಹೊರತುಪಡಿಸಿ). ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಇಟಿಎಫ್‌ ಯೋಜನೆಗಳ ಸಂಖ್ಯೆಯು83 (11 ಚಿನ್ನದ ಇಟಿಎಫ್‌ ಯೋಜನೆಗಳನ್ನು ಹೊರತುಪಡಿಸಿ) ಮಾತ್ರ ಆಗಿತ್ತು.

ಮ್ಯೂಚುವಲ್‌ ಫಂಡ್‌ಗಳ ಮೂಲಕ ಮಾಡುವ ಹೂಡಿಕೆಗಳಿಗೂ ಇಟಿಎಫ್‌ಗಳ ಮೂಲಕ ಮಾಡುವ ಹೂಡಿಕೆಗಳಿಗೂ ಒಂದಿಷ್ಟು ವ್ಯತ್ಯಾಸ ಇದೆ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯ ಹಣವನ್ನು ವೃತ್ತಿಪರ ಫಂಡ್ ನಿರ್ವಾಹಕರು ನಿಭಾಯಿಸುತ್ತಾರೆ. ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಬೇಕು, ಯಾವ ಕಂಪನಿಯ ಷೇರುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕು, ಷೇರುಗಳಿಂದ ಹಣವನ್ನು ಯಾವಾಗ ಹಿಂದಕ್ಕೆ ಪಡೆಯಬೇಕು, ಮತ್ತೆ ಯಾವಾಗ ಹೂಡಿಕೆ ಮಾಡಬೇಕು ಎಂಬುದನ್ನೆಲ್ಲ ನಿರ್ವಾಹಕರು ಸಕ್ರಿಯವಾಗಿ ತೀರ್ಮಾನಿಸುತ್ತ ಇರುತ್ತಾರೆ. ಇದಕ್ಕಾಗಿಯೇ ಅವರು ಹೂಡಿಕೆದಾರರಿಂದ ಶುಲ್ಕವನ್ನು ಪಡೆಯುತ್ತಾರೆ. ಮ್ಯೂಚುವಲ್‌ ಫಂಡ್ ನಿರ್ವಹಣೆಗೆ ನೀಡುವ ಶುಲ್ಕವನ್ನು ವೆಚ್ಚ ಅನುಪಾತ (expense ratio) ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ. ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಗೆ ನೀಡಬೇಕಿರುವ ಶುಲ್ಕವು ಇಟಿಎಫ್‌ ಹೂಡಿಕೆಗೆ ಕೊಡಬೇಕಿರುವ ಶುಲ್ಕಕ್ಕಿಂತ ತುಸು ಹೆಚ್ಚು ಇರುತ್ತದೆ.

ಇಟಿಎಫ್‌ ಹೂಡಿಕೆಗಳು ನಿರ್ದಿಷ್ಟ ಸೂಚ್ಯಂಕಗಳಲ್ಲಿನ ಕಂಪನಿಗಳ ಅಥವಾ ನಿರ್ದಿಷ್ಟ ವಲಯದ ಕಂಪನಿಗಳ ಷೇರುಗಳಲ್ಲಿ ವಿನಿಯೋಗ ಆಗಿರುತ್ತವೆ. ಉದಾಹರಣೆಗೆ, ಬಿಎಸ್‌ಇ ಸೆನ್ಸೆಕ್ಸ್‌ ಇಟಿಎಫ್‌ನಲ್ಲಿನ ಹೂಡಿಕೆಗಳು ಸೆನ್ಸೆಕ್ಸ್‌ನ ಭಾಗವಾಗಿರುವ ಮೂವತ್ತು ಕಂಪನಿಗಳ ಷೇರುಗಳಲ್ಲಿ ವಿನಿಯೋಗ ಆಗಿರುತ್ತವೆ. ಬೇರೆ ಬೇರೆ ಆಸ್ತಿ ನಿರ್ವಹಣಾ ಕಂಪನಿಗಳು ಸೆನ್ಸೆಕ್ಸ್‌ ಇಟಿಎಫ್‌ ಹೂಡಿಕೆ ಆಯ್ಕೆಯನ್ನು ಒದಗಿಸುತ್ತಿವೆ. ಇಲ್ಲಿ ಫಂಡ್‌ ನಿರ್ವಾಹಕರ ಪಾತ್ರ ತೀರಾ ಕಡಿಮೆ. ಹಾಗಾಗಿ ಇಟಿಎಫ್‌ಗಳಲ್ಲಿನ ಶುಲ್ಕ ಕೂಡ ಕಡಿಮೆ. ಸೆನ್ಸೆಕ್ಸ್‌ ಇಟಿಎಫ್‌, ಸೆನ್ಸೆಕ್ಸ್‌ಗಿಂತ ಹೆಚ್ಚಿನ ಲಾಭಾಂಶ ತಂದುಕೊಡುವ ಯತ್ನ ನಡೆಸುವುದಿಲ್ಲ. ಬದಲಿಗೆ, ಸೆನ್ಸೆಕ್ಸ್‌ ಎಷ್ಟು ಪ್ರಮಾಣದ ಲಾಭ ತಂದುಕೊಡುವುದೋ, ಅಷ್ಟೇ ಲಾಭವನ್ನು ತಾನೂ ತಂದುಕೊಡುವ ಕೆಲಸ ಮಾಡುತ್ತದೆ.

ಇಟಿಎಫ್‌ ಹೂಡಿಕೆಗಳಿಂದ ಪ್ರಯೋಜನ ಏನು?

ಇಟಿಎಫ್‌ಗಳಲ್ಲಿನ ಹೂಡಿಕೆಗಳನ್ನು ಫಂಡ್ ನಿರ್ವಹಣೆ ಮಾಡುವವರು ಸಕ್ರಿಯವಾಗಿ ಗಮನಿಸುತ್ತ ಇರುವುದಿಲ್ಲ. ಬದಲಿಗೆ, ಇಟಿಎಫ್‌ಗಳು ನಿರ್ದಿಷ್ಟ ಸೂಚ್ಯಂಕವೊಂದರ ಏರಿಕೆಗೆ ಅನುಗುಣವಾಗಿ ಹೂಡಿಕೆದಾರರಿಗೆ ಲಾಭ ತಂದುಕೊಡುತ್ತವೆ. ಕಳೆದ ಕೆಲವು ವರ್ಷಗಳಿಂದ ಹೂಡಿಕೆದಾರರ ಗಮನವು ಇಟಿಎಫ್‌ಗಳ ಕಡೆ ಹರಿದಿದೆ. ಇದಕ್ಕೆ ಕೆಲವು ಮುಖ್ಯ ಕಾರಣಗಳು ಇವೆ.

- ವೆಚ್ಚ ಕಡಿಮೆ: ಇಟಿಎಫ್‌ಗಳು ನಿರ್ದಿಷ್ಟ ಸೂಚ್ಯಂಕವೊಂದರಲ್ಲಿನ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಹಾಗಾಗಿ, ಇಲ್ಲಿ ಹೂಡಿಕೆಗೆ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ತೀರಾ ಆಳವಾದ, ದುಬಾರಿಯಾದ ಸಂಶೋಧನೆಗಳ ಅಗತ್ಯ ಇಲ್ಲ. ಸಾಮಾನ್ಯ ಸಂದರ್ಭಗಳಲ್ಲಿ ಇಟಿಎಫ್‌ಗಳಲ್ಲಿನ ಹೂಡಿಕೆಗೆ‍ಪಾವತಿ ಮಾಡಬೇಕಿರುವ ಶುಲ್ಕದ ಪ್ರಮಾಣವು ಶೇಕಡ 0.05ರಿಂದ ಶೇ 0.50ರವರೆಗೆ ಇರುತ್ತದೆ.

- ತಕ್ಷಣಕ್ಕೆ ನಗದಾಗಿ ಪರಿವರ್ತಿಸಿಕೊಳ್ಳಬಹುದು: ಇಟಿಎಫ್‌ ಯೂನಿಟ್‌ಗಳನ್ನು ಷೇರು ಮಾರುಕಟ್ಟೆಗಳಲ್ಲಿ ಷೇರಿನ ಮಾದರಿಯಲ್ಲಿ ಮಾರಾಟ ಮಾಡಬಹುದು, ಖರೀದಿ ಮಾಡಬಹುದು. ಅಂದರೆ, ಇಟಿಎಫ್‌ ಯೂನಿಟ್‌ಗಳನ್ನು ಹೂಡಿಕೆದಾರರು ಕ್ಷಣಾರ್ಧದಲ್ಲಿ ಮಾರಾಟ ಮಾಡಬಹುದು ಹಾಗೂ ಖರೀದಿ ಮಾಡಬಹುದು. ಇಲ್ಲಿ ಹೂಡಿಕೆ ಹಣದ ನಗದೀಕರಣ ಸುಲಭ.

- ಲಾಭಾಂಶ ಕಡಿಮೆಯಾಗುವ ಭಯ ಬೇಡ: ಹೂಡಿಕೆ ಮಾಡಿರುವ ಇಟಿಎಫ್‌ಗಳು, ನಿರ್ದಿಷ್ಟ ಸೂಚ್ಯಂಕಕ್ಕಿಂತ ಕಡಿಮೆ ಪ್ರಮಾಣದ ಲಾಭಾಂಶ ನೀಡುತ್ತವೆ ಎಂಬ ಆತಂಕ ಅನಗತ್ಯ. ಸೂಚ್ಯಂಕ ಯಾವ ಪ್ರಮಾಣದಲ್ಲಿ ಏರಿಕೆ ಕಾಣುವುದೋ, ಇಟಿಎಫ್‌ನಲ್ಲಿನ ಹೂಡಿಕೆ ಕೂಡ ಅದೇ ಪ್ರಮಾಣದಲ್ಲಿ ಲಾಭಾಂಶ ತಂದುಕೊಡುತ್ತದೆ.

- ಸರಳ: ಫಂಡ್‌ ನಿರ್ವಾಹಕರು ಸಕ್ರಿಯವಾಗಿ ನಿಭಾಯಿಸುವ ಮ್ಯೂಚುವಲ್‌ ಫಂಡ್‌ಗಳಿಗಿಂತ ಇಟಿಎಫ್‌ಗಳು ಭಿನ್ನ. ಇಲ್ಲಿನ ಹೂಡಿಕೆಗಳು ಹೇಗೆ ವಿನಿಯೋಗ ಆಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಸುಲಭ. ವರ್ಷಗಳು ಕಳೆದಂತೆಲ್ಲ ಫಂಡ್‌ ನಿರ್ವಾಹಕರು ಹಣವನ್ನು ತೊಡಗಿಸುವ ಶೈಲಿಯಲ್ಲಿ ಬದಲಾವಣೆ ಆದರೆ ಏನು ಮಾಡುವುದು ಎಂಬ ಆತಂಕ ಇಲ್ಲಿ ಇಲ್ಲ. ತಾವು ಹೂಡಿಕೆ ಮಾಡುತ್ತಿರುವ ಸೂಚ್ಯಂಕವು ವರ್ಷಗಳಿಂದ ಹೇಗೆ ವರ್ತಿಸಿದೆ ಎಂಬುದು ತಿಳಿದಿದ್ದರೆ, ಹೂಡಿಕೆದಾರರಿಗೆ ತಮ್ಮ ಹೂಡಿಕೆಯ ವಿಚಾರವಾಗಿ ಇರುವ ರಿಸ್ಕ್‌ಗಳು ಏನು, ಸಿಗಬಹುದಾದ ಲಾಭದ ಪ್ರಮಾಣ ಎಷ್ಟು ಎಂಬುದು ಕೂಡ ಗೊತ್ತಾಗುತ್ತದೆ.

(ಮಾಹಿತಿ: ಮೋತಿಲಾಲ್ ಓಸ್ವಾಲ್ ಆಸ್ತಿ ನಿರ್ವಹಣಾ ಕಂಪನಿ)

ಆಕರ್ಷಣೆ ಹೆಚ್ಚಳ ಏಕೆ?

ಇಟಿಎಫ್‌ಗಳು ಸಣ್ಣ ಹೂಡಿಕೆದಾರರ ಆಕರ್ಷಣೆಗೆ ಕಾರಣ ಆಗುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಮೋತಿಲಾಲ್ ಓಸ್ವಾಲ್‌ ಆಸ್ತಿ ನಿರ್ವಹಣಾ ಕಂಪನಿ ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದೆ. ‘ಹೂಡಿಕೆದಾರರು ಇಟಿಎಫ್‌ಗಳ ಮೂಲಕ ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ಪರಿಣಾಮ ಕಾರಿಯಾಗಿ ಹೂಡಿಕೆ ಮಾಡಬಹುದು. ಇಟಿಎಫ್‌ಗಳು ಭಾರತದ ಹಣಕಾಸು ಉತ್ಪನ್ನಗಳ ಮಾರುಕಟ್ಟೆಯನ್ನು ಪ್ರವೇಶಿಸಿ ಎರಡು ದಶಕಗಳು ಕಳೆದಿವೆ. ಆದರೆ ಇವು ಜನಪ್ರಿಯತೆ ಪಡೆದುಕೊಳ್ಳುತ್ತಿರುವುದು ಐದು ವರ್ಷಗಳಿಂದ ಈಚೆಗೆ. ಈಚಿನ ವರ್ಷಗಳಲ್ಲಿ ಸಣ್ಣ ಹೂಡಿಕೆದಾರರು ಇಟಿಎಫ್‌ಗಳಲ್ಲಿ ಹಣ ಹೂಡಿಕೆ ಮಾಡುವುದು ಹೆಚ್ಚುತ್ತಿದೆ. ಇದರ ಜೊತೆಯಲ್ಲೇ, ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಕೂಡ ಇಲ್ಲಿ ಹೂಡಿಕೆ ಮಾಡುತ್ತಿದೆ’ ಎಂದು ಮೋತಿಲಾಲ್ ಓಸ್ವಾಲ್ ಆಸ್ತಿ ನಿರ್ವಹಣಾ ಕಂಪನಿಯ ಪ್ಯಾಸಿವ್ ಫಂಡ್‌ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಮಹಾವೀರ್ ಕಸ್ವಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾಗತಿಕ ಮಟ್ಟದಲ್ಲಿ ಈಗಿನ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಜನ ಹೂಡಿಕೆದಾರರು ಇಟಿಎಫ್‌ ಗಳಲ್ಲಿ (ಹಾಗೂ ಇಂಡೆಕ್ಸ್ ಫಂಡ್‌ಗಳಲ್ಲಿ) ದೊಡ್ಡ ಮೊತ್ತದ ಹೂಡಿಕೆ ಆರಂಭಿಸಿದ್ದಾರೆ. ಅವರು ತಮ್ಮ ಹೂಡಿಕೆಯ ಪ್ರಧಾನ ಭಾಗವನ್ನು ಇಟಿಎಫ್‌ಗಳಲ್ಲಿ ತೊಡಗಿಸುತ್ತಿದ್ದಾರೆ. ನಿರ್ವಾಹಕರು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಫಂಡ್‌ಗಳಿಗಿಂತಲೂ (ಉದಾಹರಣೆಗೆ, ಮ್ಯೂಚುವಲ್‌ ಫಂಡ್‌ಗಳು) ಹೆಚ್ಚಾಗಿ ಅಲ್ಲಿ ಹೂಡಿಕೆದಾರರು ಫಂಡ್‌ ನಿರ್ವಾಹಕರ ಸಕ್ರಿಯ ಪಾತ್ರದ ಅಗತ್ಯ ಇಲ್ಲದ ಇಟಿಎಫ್‌ನಂತಹ ಉತ್ಪನ್ನಗಳಲ್ಲಿ ಪ್ರಧಾನವಾಗಿ ಹೂಡಿಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಕೂಡ ಹೂಡಿಕೆದಾರರು ತಮ್ಮ ಹೂಡಿಕೆ ಹಣವನ್ನು ಪ್ರಧಾನವಾಗಿ ಇಟಿಎಫ್‌ ಅಥವಾ ಇಂಡೆಕ್ಸ್ ಫಂಡ್‌ಗಳಲ್ಲಿ ತೊಡಗಿಸಬಹುದು ಎಂದು ಅವರು ಹೇಳಿದರು.

ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದ ಫಂಡ್‌ ನಿರ್ವಹಣಾ ಶುಲ್ಕವನ್ನು ಪಾವತಿ ಮಾಡುವ ಅಗತ್ಯ ಇಲ್ಲ. ಬೇರೆ ಬೇರೆ ಹೂಡಿಕೆ ಆಯ್ಕೆಗಳಿಗೆ ಹೋಲಿಸಿ ನೋಡಿದರೆ, ಇಟಿಎಫ್‌ಗಳಲ್ಲಿನ ಹೂಡಿಕೆಗೆ ತೆರಿಗೆ ಕಡಿಮೆ ಇರುವುದು ಗೊತ್ತಾಗುತ್ತದೆ. ಷೇರುಗಳಲ್ಲಿ ಹೂಡಿಕೆ ಮಾಡಿದಾಗ ಸಿಗುವ ಷೇರು ಪ್ರಮಾಣಪತ್ರದ ಮಾದರಿಯಲ್ಲಿಯೇ ಇಟಿಎಫ್‌ ಹೂಡಿಕೆಗಳಿಗೂ ಪ್ರಮಾಣಪತ್ರ ಸಿಗುತ್ತದೆ. ಸರಿಯಾದ ಮಾಹಿತಿಯೊಂದಿಗೆ, ಸೂಕ್ತವಾದ ಇಟಿಎಫ್‌ನಲ್ಲಿ ಹೂಡಿಕೆ ಮಾಡುವ ಬಗ್ಗೆ ಸಣ್ಣ ಹೂಡಿಕೆದಾರರು ಗಮನ ಹರಿಸಬಹುದು ಎಂದು ಹೂಡಿಕೆ ಸಂಪನ್ಮೂಲ ವ್ಯಕ್ತಿ ಎಂ.ಎಸ್. ಶರತ್ ‘ಪ್ರಜಾವಾಣಿ’ ಜೊತೆ ಅನಿಸಿಕೆ ಹಂಚಿಕೊಂಡರು.

ಉತ್ತಮ ಲಾಭ ನೀಡಿರುವ ಕೆಲವು ಇಟಿಎಫ್‌ಗಳು

ಎಸ್‌ಬಿಐ ಇಟಿಎಫ್‌ ಐ.ಟಿ., ನಿಪ್ಪಾನ್ ಇಂಡಿಯಾ ಇಟಿಎಫ್ ನಿಫ್ಟಿ ಐ.ಟಿ., ಐಸಿಐಸಿಐ ಪ್ರುಡೆನ್ಷಿಯಲ್ ಐ.ಟಿ. ಇಟಿಎಫ್, ಕೋಟಕ್ ಪಿಎಸ್‌ಯು ಬ್ಯಾಂಕ್‌ ಇಟಿಎಫ್, ಮೋತಿಲಾಲ್ ಓಸ್ವಾಲ್ ಮಿಡ್‌ಕ್ಯಾಪ್‌ 100 ಇಟಿಎಫ್

(ಮಾಹಿತಿ: ಮ್ಯೂಚುವಲ್‌ಫಂಡ್‌ಇಂಡಿಯಾ.ಕಾಂ) (ಇಲ್ಲಿ ಉಲ್ಲೇಖಿಸಿರುವ ಇಟಿಎಫ್‌ ಹೆಸರುಗಳು ಮಾಹಿತಿಗಾಗಿ ಮಾತ್ರ. ಇವು ಹೂಡಿಕೆ ಶಿಫಾರಸು ಅಲ್ಲ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT