ಮಂಗಳವಾರ, ಅಕ್ಟೋಬರ್ 27, 2020
24 °C

ಆಳ-ಅಗಲ: ಮಾಧ್ಯಮ ಸ್ವಾತಂತ್ರ್ಯದ ಎಲ್ಲೆ ನಿರ್ಧಾರವಾಗುವುದೆ?

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲೆಗಳ ವಿಚಾರವು ಮತ್ತೆ ಚರ್ಚೆಗೆ ಬಂದಿದೆ. ‘ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮ ಪ್ರಸಾರವಾಗುವುದನ್ನು ತಡೆದರೆ ಅದು ಮಾಧ್ಯಮ ಸ್ವಾತಂತ್ರ್ಯದ ಹರಣವಾಗುತ್ತದೆ. ತನಿಖಾ ಪತ್ರಿಕೋದ್ಯಮಕ್ಕೆ ಧಕ್ಕೆಯಾಗುತ್ತದೆ’ ಎಂದು ಸುದರ್ಶನ ಟಿ.ವಿ. ಪ್ರತಿಪಾದಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಒಂದು ಧಾರ್ಮಿಕ ಸಮುದಾಯವನ್ನು ಗುರಿ ಮಾಡಲಾಗುತ್ತಿದೆ ಎಂಬುದು ಅರ್ಜಿದಾರರ ವಾದ. ದ್ವೇಷ ಭಾಷಣಕ್ಕೆ ಸರಳ ವ್ಯಾಖ್ಯಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಅಕ್ಟೋಬರ್ 5ರಂದು ನಡೆಸಲಿದೆ.

---

ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆಯು ಮತ್ತೆ ಮುನ್ನೆಲೆಗೆ ಬಂದಿದೆ. ‘ಸುದರ್ಶನ ಟಿ.ವಿ.ಯು ಪ್ರಸಾರ ಮಾಡಿದ್ದ ‘ಯುಪಿಎಸ್‌ಸಿ ಜಿಹಾದ್’ ಕಾರ್ಯಕ್ರಮವು ಧಾರ್ಮಿಕ ದ್ವೇಷವನ್ನು ಬಿತ್ತುತ್ತದೆ. ಈ ಕಾರ್ಯಕ್ರಮವನ್ನು ನಿಷೇಧಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನಲ್ಲಿ 7 ನಿವೃತ್ತ ಐಎಎಸ್‌ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯು ಈ ಚರ್ಚೆ ಮುನ್ನೆಲೆಗೆ ಬರಲು ಕಾರಣ. 

‘ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮವು ಸತ್ಯಗಳನ್ನು ಆಧರಿಸಿದ್ದು, ಇದರಲ್ಲಿ ಧಾರ್ಮಿಕ ದ್ವೇಷವನ್ನು ಬಿತ್ತುತ್ತಿಲ್ಲ’ ಎಂದು ಸುದರ್ಶನ ಟಿ.ವಿ. ಪ್ರತಿಪಾದಿಸುತ್ತಿದೆ. ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಪ್ರಸಾರ ಮಾಡುವ ಕಾರ್ಯಕ್ರಮವನ್ನು ನಿಷೇಧ ಮಾಡುವ ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆ–1995ರ ‘ಪ್ರೋಗ್ರಾಂ ಕೋಡ್‌’ ಅನ್ನು ಸುದರ್ಶನ ಟಿ.ವಿ. ಉಲ್ಲಂಘಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ.
ಆದರೆ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಮೇಲೆ ಇನ್ನಷ್ಟು ನಿಯಂತ್ರಣಗಳನ್ನು ಹೇರುವ ಅವಶ್ಯಕತೆ ಇಲ್ಲ ಎಂದೂ ಸಚಿವಾಲಯವು ಹೇಳಿದೆ.

ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಸುದರ್ಶನ ಟಿ.ವಿ.ಗೆ ಸಚಿವಾಲಯವು ನೋಟಿಸ್ ನೀಡಿತ್ತು. ಈ ನೋಟಿಸ್‌ಗೆ ಸುದರ್ಶನ ಟಿ.ವಿ.ಯು 790 ಪುಟಗಳ ವಿವರಣೆಯನ್ನು ನೀಡಿದೆ. 790 ಪುಟಗಳಲ್ಲಿ ಏನಿದೆ ಎಂಬುದನ್ನು ಸುದರ್ಶನ ಟಿ.ವಿ.ಯೂ ಬಹಿರಂಗಪಡಿಸಿಲ್ಲ, ಸಚಿವಾಲಯವೂ ಬಹಿರಂಗಪಡಿಸಿಲ್ಲ. ಆದರೆ ಈ ವಿವರಣೆ ಜತೆಗೆ ಸಲ್ಲಿಸಲಾಗಿದ್ದ ಐದು ಪುಟಗಳ ಪತ್ರವನ್ನು ಸುದ್ದಿವಾಹಿನಿ ಪ್ರಧಾನ ಸಂಪಾದಕ ಸುರೇಶ್ ಚವ್ಹಾಣ್ಕೆ ಅವರು ತಮ್ಮ ಟ್ವೀಟ್‌ನಲ್ಲಿ‌ ಬಹಿರಂಗಪಡಿಸಿದ್ದಾರೆ.

‘ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮವನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸುವ ಮೂಲಕ ತನಿಖಾ ಪತ್ರಿಕೋದ್ಯಮವನ್ನು ಹತ್ತಿಕ್ಕಲಾಗುತ್ತಿದೆ. ಸುದ್ದಿವಾಹಿನಿಗಳನ್ನು, ಪತ್ರಕರ್ತರನ್ನು ವಿವಿಧ ಪ್ರಕರಣಗಳಲ್ಲಿ
ಸಿಲುಕಿಸಲಾಗುತ್ತಿದೆ. ಇದು ಮಾಧ್ಯಮ ಸ್ವಾತಂತ್ರ್ಯದ ಹರಣ’ ಎಂದು ಸುರೇಶ್ ಅವರು ಪ್ರತಿಪಾದಿಸಿದ್ದಾರೆ.‌

‘ನಿರೂಪಣೆ ವೇಳೆ ತಿಲಕ ಧರಿಸುವುದು ಹೇಗೆ ಮುಸ್ಲಿಂ ವಿರೋಧಿಯಾಗುತ್ತದೆ? ನಾವು ವಿದೇಶಿ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿರುವ ದೇಶಿ ಉಗ್ರರನ್ನು ಪತ್ತೆ ಮಾಡಿದ್ದೇವೆ. ಈ ಎಲ್ಲಾ ಉಗ್ರರೂ ಮುಸ್ಲಿಮರೇ ಆಗಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಈ ಸತ್ಯವನ್ನು ಹೇಳುವುದು ಮುಸ್ಲಿಂ ವಿರೋಧಿ ಹೇಗಾಗುತ್ತದೆ? ನಮಗೆ ನೀಡಿರುವ ನೋಟಿಸ್‌ ಅನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಸುರೇಶ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಸುದರ್ಶನ ಟಿ.ವಿ.ಯ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮವು ‘ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆ–1995’ರ ಪ್ರೋಗ್ರಾಂ ಕೋಡ್‌ ಅನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೂ, ಸುದ್ದಿವಾಹಿನಿಗಳ ಮೇಲೆ ಹೊಸದಾಗಿ ಮತ್ತಷ್ಟು ನಿಯಂತ್ರಣ ಹೇರುವ ಅವಶ್ಯಕತೆ ಇಲ್ಲ ಎಂದೂ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ‘ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಯಾವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲ ಎಂಬುದನ್ನು ನ್ಯಾಯಾಲಯದ ವಿವಿಧ ತೀರ್ಪುಗಳ ಆಧಾರದ ಮೇಲೆ ಸ್ಪಷ್ಟಪಡಿಸಬಹುದು. ಆದರೆ ‘ದ್ವೇಷ ಭಾಷಣ’ವನ್ನು ಹಾಗೆ ಸರಳವಾಗಿ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ಪ್ರತಿ ಪ್ರಕರಣವನ್ನೂ ಕೂಲಂಕಷವಾಗಿ ಪರಿಶೀಲಿಸಿ ಅದನ್ನು ವ್ಯಾಖ್ಯಾನಿಸಬೇಕಾಗುತ್ತದೆ’ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ತನ್ನ ಪ್ರಮಾಣಪತ್ರದಲ್ಲಿ ಹೇಳಿತ್ತು. 

‘ಯುಪಿಎಸ್‌ಸಿ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಸಿದ್ಧವಾಗಿಸಲು ವಿದೇಶಿ ದೇಣಿಗೆ ಬಳಕೆಯಾಗುತ್ತಿದೆ ಎಂದು ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮದಲ್ಲಿ ಹೇಳಲಾಗಿದೆ. ಇದು ನಿಜವೇ ಆಗಿದ್ದರೆ, ಅದು ಅತ್ಯಂತ ಗಂಭೀರವಾದ ವಿಚಾರ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಆದರೆ ಈ ವಿಚಾರದಲ್ಲಿ ಒಂದು ಸಮುದಾಯವನ್ನು ಗುರಿ ಮಾಡಲು ಟಿ.ವಿ. ಮಾಧ್ಯಮಕ್ಕೆ ಅವಕಾಶ ನೀಡಬೇಕೆ’ ಎಂದು ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಕಟುವಾಗಿ ಪ್ರಶ್ನಿಸಿತ್ತು. ಆದರ ಜತೆಯಲ್ಲಿ, ಸಾಂವಿಧಾನಿಕ ಮೌಲ್ಯಗಳು ಮತ್ತು ವ್ಯಕ್ತಿ ಗೌರವವನ್ನು ರಕ್ಷಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಸಚಿವಾಲಯವು ನೀಡಿರುವ ನೋಟಿಸ್‌ಗೆ ಸುದರ್ಶನ ಟಿ.ವಿ. ಏನು ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಪರಿಶೀಲಿಸಿ, ವಿಚಾರಣೆಯನ್ನು ಮುಂದುವರಿಸುವುದಾಗಿ ಪೀಠ ಹೇಳಿತ್ತು.

ಮುಂದಿನ ವಿಚಾರಣೆ ಅಕ್ಟೋಬರ್ 5ರಂದು ನಡೆಯಲಿದೆ.

ನಿಷೇಧಕ್ಕೆ ಕಾಯ್ದೆಯಲ್ಲೇ ಅವಕಾಶ

‘ಧರ್ಮ, ಜನಾಂಗ, ಭಾಷೆ, ಜಾತಿ, ಸಮುದಾಯದ ಆಧಾರದಲ್ಲಿ ಎರಡು ಧರ್ಮಗಳ ನಡುವೆ, ಎರಡು ಭಾಷಿಕ ಸಮುದಾಯಗಳ ನಡುವೆ, ಜಾತಿಗಳ ನಡುವೆ ಅಸಹಿಷ್ಣುತೆ ಮತ್ತು ದ್ವೇಷವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವ ಸಾಧ್ಯತೆ ಇದೆ ಎಂದು ಭಾಸವಾಗುವ ಕಾರ್ಯಕ್ರಮಗಳನ್ನು ಕೇಬಲ್ ಆಪರೇಟರ್‌ಗಳು ಪ್ರಸಾರ ಮತ್ತು ಮರುಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಆದೇಶ ನೀಡುವ ಅಧಿಕಾರ ಸರ್ಕಾರಕ್ಕೆ ಇದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಸರ್ಕಾರದ ಸಂಬಂಧಿತ ಅಧಿಕಾರಿಯು ಇಂತಹ ಆದೇಶವನ್ನು ಹೊರಡಿಸಬಹುದು’ ಎಂದು ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆ–1995ರ 19ನೇ ಸೆಕ್ಷನ್‌ ಹೇಳುತ್ತದೆ.

‘ದೇಶದ ಸಾರ್ವಭೌಮತೆ, ಏಕತೆ, ಭಾರತದ ಭದ್ರತೆ, ಭಾರತದೊಂದಿಗೆ ಸ್ನೇಹಸಂಬಂಧ ಹೊಂದಿರುವ ದೇಶಗಳು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಸಂಬಂಧಿಸಿದ ವಿಚಾರದಲ್ಲಿ ಅಗತ್ಯ ಎಂದು ಮನವರಿಕೆಯಾದರೆ, ಅಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಕೇಬಲ್ ಟೆಲಿವಿಷನ್ ಜಾಲವನ್ನು ನಿಷೇಧ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ’ ಎಂದು ಕಾಯ್ದೆಯ 20ನೇ ಸೆಕ್ಷನ್‌ ಹೇಳುತ್ತದೆ.

ಡಿಜಿಟಲ್ ಮಾಧ್ಯಮಗಳಿಗೆ ಬೇಕು ಮೂಗುದಾರ: ಕೇಂದ್ರ

‘ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ಸಾಮಾನ್ಯವಾಗಿ ಕಾನೂನನ್ನು ಮೀರುವುದಿಲ್ಲ. ಆದರೆ ಡಿಜಿಟಲ್ ಮಾಧ್ಯಮಗಳು ಅಂದರೆ, ಆನ್‌ಲೈನ್‌ ನಿಯತಕಾಲಿಕೆಗಳು, ಆನ್‌ಲೈನ್ ಪತ್ರಿಕೆಗಳು, ಆನ್‌ಲೈನ್ ಸುದ್ದಿವಾಹಿನಿಗಳ ಮೇಲೆ ಯಾವುದೇ ನಿಯಂತ್ರಣ ಇಲ್ಲ. ನ್ಯಾಯಾಲಯವು ಯಾವುದೇ ರೀತಿಯ ಮಾರ್ಗಸೂಚಿಗಳನ್ನು ಹೊರಡಿಸುವುದಿದ್ದರೆ, ಅದನ್ನು ಡಿಜಿಟಲ್ ಮಾಧ್ಯಮಗಳಿಂದಲೇ ಆರಂಭಿಸಬೇಕು’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿತ್ತು.

ಸುದರ್ಶನ ಟಿ.ವಿ.ಯಲ್ಲಿ ಬಿಂದಾಸ್‌ ಬೋಲ್‌ ಕಾರ್ಯಕ್ರಮದ ಅಡಿ ಪ್ರಸಾರವಾಗಬೇಕಿದ್ದ ‘ಯುಪಿಎಸ್‌ಸಿ ಜಿಹಾದ್’ ಅನ್ನು ನಿಷೇಧಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಚಿವಾಲಯವು ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಈ ಅಂಶವಿದೆ.

‘ಸ್ಮಾರ್ಟ್‌ಫೋನ್‌ ಇದ್ದರೆ, ಡಿಜಿಟಲ್ ಮಾಧ್ಯಮ ಲಭ್ಯವಾದಂತೆ. ಇದು ಡಿಜಿಟಲ್ ಮಾಧ್ಯಮದ ಪ್ರಸರಣದ ವ್ಯಾಪ್ತಿಯನ್ನು ತೋರಿಸುತ್ತದೆ. ಪತ್ರಿಕೆಗಳು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮಿತಿ ಡಿಟಿಟಲ್ ಮಾಧ್ಯಮಕ್ಕೆ ಇಲ್ಲ. ಡಿಜಿಟಲ್ ಮಾಧ್ಯಮಕ್ಕೆ ಗಡಿಯ ಮಿತಿ ಇಲ್ಲ. ಜಗತ್ತಿನ ಯಾವುದೇ ಮೂಲೆಯಿಂದಲೂ ಡಿಜಿಟಲ್ ಮಾಧ್ಯಮವನ್ನು ಪಡೆದುಕೊಳ್ಳಬಹುದು. ಆದರೆ ಡಿಜಿಟಲ್ ಮಾಧ್ಯಮದಲ್ಲಿ ಏನು ಪ್ರಸಾರವಾಗುತ್ತದೆ, ಏನನ್ನು ಹಂಚಿಕೊಳ್ಳಲಾಗುತ್ತದೆ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಇಲ್ಲ. ನಿಯಂತ್ರಣವೂ ಇಲ್ಲ. ಹೀಗಾಗಿ ದ್ವೇಷಪೂರಿತ ವರದಿಗಳು, ಸುಳ್ಳು ಸುದ್ದಿಗಳನ್ನು ಹರಡಲು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

‘ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಮೇಲೆ ಮತ್ತಷ್ಟು ನಿಯಂತ್ರಣ ಹೇರಲು ಆರಂಭಿಸಿದರೆ, ಅವು ಡಿಜಿಟಲ್ ಮಾಧ್ಯಮದ ಮೊರೆ ಹೋಗುವ ಅಪಾಯವಿದೆ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂತಹ ವರದಿಗಳನ್ನು ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರ ಮಾಡುವ, ಪ್ರಕಟಿಸುವ ಅಪಾಯವಿದೆ. ಹೀಗಾಗಿ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಮೇಲೆ ಮತ್ತಷ್ಟು ನಿಯಂತ್ರಣಗಳನ್ನು ಹೇರುವ ಅವಶ್ಯಕತೆ ಇಲ್ಲ. ನಿಯಂತ್ರಣ ಹೇರಬೇಕಿರುವುದು ಡಿಜಿಟಲ್ ಮಾಧ್ಯಮಗಳ ಮೇಲೆ’ ಎಂದು ಸರ್ಕಾರವು ತನ್ನ ಪ್ರಮಾಣ ಪತ್ರದಲ್ಲಿ ಪ್ರತಿಪಾದಿಸಿತ್ತು.

(ಆಧಾರ: ಪಿಟಿಐ, ಸುರೇಶ್ ಚವ್ಹಾಣ್ಕೆ ಅವರ ಟ್ವೀಟ್‌ಗಳು, ಕೇಬಲ್ ಟಿ.ವಿ. ನಿಯಂತ್ರಣ ಕಾಯ್ದೆ–1995)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು